ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 24ನೆಯ ಕಂತು: ಚಂದ್ರಮತಿಯ ಮೇಲೆ ಕೊಲೆಯ ಆರೋಪ
– ಸಿ.ಪಿ.ನಾಗರಾಜ.
*** ಪ್ರಸಂಗ-24: ಚಂದ್ರಮತಿಯ ಮೇಲೆ ಕೊಲೆಯ ಆರೋಪ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ ’ ಎಂಬ ಎಂಟನೆಯ ಅಧ್ಯಾಯದ 45ರಿಂದ 56ನೆಯ ಪದ್ಯದ ವರೆಗಿನ ಹನ್ನೆರಡು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ.ಈಗ ಕಾಶಿ ನಗರದಲ್ಲಿರುವ ಬ್ರಾಹ್ಮಣನ ಮನೆಯೊಂದರಲ್ಲಿ ದಾಸಿಯಾಗಿದ್ದಾಳೆ.
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿ ಕಾಶಿ ನಗರದ ಸುಡುಗಾಡಿನ ಕಾವಲುಗಾರನಾಗಿದ್ದಾನೆ.
*** ಚಂದ್ರಮತಿಯ ಮೇಲೆ ಕೊಲೆಯ ಆರೋಪ ***
ಇತ್ತಲ್ ಪುರಕೆ ಬರುತಿಪ್ಪ ಮಡದಿಗೆ ಎಡೆವಟ್ಟೆಯೊಳು ಬಂದ ಸಂಕಟವನ್ ಇನ್ನಾವ ಜೀವರು ಕೇಳ್ವರು. ಮುಂದೆ ಭೂಪನ ಸತಿಗೆ ಉಪದ್ರವಮ್ ಮಾಡಬೇಕೆಂದು ಕೌಶಿಕ ಮುನೀಂದ್ರನ್ ನೆನೆದು ಚಿಂತಿಸುತ್ತ, ಒಂದು ಉಪಾಯಮ್ ಕಂಡು, ಚೋರರಮ್ ಕೆಲಬರಮ್ ನಿರ್ಮಿಸುತ ಅವರ್ಗೆ ಎಂದನು.
ವಿಶ್ವಾಮಿತ್ರ: ಇಂದು ನೀವ್ ಈ ಪುರವನ್ ಆಳ್ವ ಅರಸನ ಅಣುಗನನ್ ಕೊಂದು, ಆಕೆ ಬಪ್ಪ ಬಟ್ಟೆಯೊಳಿರಿಸಿ ಬನ್ನಿ… ಹೋಗಿ.
(ಎಂದು ಬೆಸಸಲು, ಯತಿಪನ ಆಜ್ಞೆಯಿಂದ ಅವದಿರ್ ಎಯ್ತಂದು ಪೊಳಲಮ್ ಸಾರ್ದರು. ಚೋರರ್ ಒಳಪೊಕ್ಕು ಮಿಕ್ಕು ಆ ಪುರದ ಭೂಪನ ಕುಮಾರನನ್ ಕಂಡು ಓಡಿಬಂದು, ಗೊಂದಿಯೊಳ್ ಅಲಂಕಾರಮಮ್ ಕೊಂಬ ಭರದಿನ್ ಕೊರಳನ್ ಅರಿಯಲ್… ಆ ಶಿಶು ಒರಲಲ್… ಆ ದನಿಯನು ದೂರದಿಮ್ ಕೇಳ್ದು… )
ಚಂದ್ರಮತಿ: ಎನ್ನ ಮಗನಾಗದಿರನ್… ಆರೋ ನಿರೋಧಿಸುವರ್.
(ಎಂದು ಓಜೆ ಹುಟ್ಟದ ಅವಿಚಾರದಿಮ್ ಹರಿದಳ್ ಎಂಬಾಗಳ್, ಜಗವರಿಯಲು ಅತಿದುಃಖಿಗೆ ಉಂಟೇ ಬುದ್ಧಿ. ಸಾರೆ ಬರೆ, ಬಿಟ್ಟೋಡಿ ಹೋದ ಚೋರರ ಖಡ್ಗ ಧಾರೆಯಿಮ್ ಬಸವಳಿದ ಹಸುಳೆಯನ್ ತನ್ನಯ ಕುಮಾರನೆಂದೇ ಬಗೆದು, ಕರೆಕರೆದು ತಲೆದಡವಿ ತಡವರಿಸಿ ಮೆಯ್ ಕುರುಹನು ಹಾರುತಿರೆ, ಬಾರಿಸುವ ಬೊಂಬುಳಿಯ ಕೊಂಬುಗಳ ಭೇರಿಗಳ ಬೊಬ್ಬೆಗಳ ಕಳಕಳದೊಳ್ ಅರಸಿ ಬಂದು, ಆರುತ್ತ ಹರಿತಂದ ಹಿರಿಯ ಹುಯ್ಯಲ ಭಟರು ಸತಿಯನು ಕಂಡು ಪಿಡಿದರು.)
ರಾಜಭಟರು: ಎಲೆಲೆ… ಇವಳು ರಕ್ಕಸಿಯಾಗದಿರಳ್. ನಾವ್ ಇಲ್ಲಿ ಕೊಲಬೇಡವು. ಈ ಅಂಗವೆರಸಿ ಕೊಂಡೊಯ್ದು ಭೂತಲಪತಿಗೆ ಕೊಡುವೆವು.
(ಎಂದು ಅಸುವಳಿದ ಹಸುಳೆಯಮ್ ಹೊರಿಸಲಾಗ, ತಲೆಯಿಂದ ಒಸರ್ವ ರಕುತ ಸುರಿದು, ಉಟ್ಟ ಸೀರೆ ತೊಪ್ಪನೆ ತೋಯೆ, ಲಲನೆಯನ್ ಹೆಡಗೈಯ ಬಲಿದ ನೇಣಮ್ ಪಿಡಿದು, ರಾಜಬೀದಿಯೊಳಗೆ ಕಿತ್ತ ಅಲಗುಗಳ ನಡುವೆ ಜಡಿಜಡಿದು ನಡಸಿ ತಂದರು.)
ಚಂದ್ರಮತಿ: ಎನ್ನನ್ ಇವರ್ ಆಡಿಸದಡೆ ಏನನ್ ಆಡುವೆನ್.
(ಎಂದು ತನ್ನ ಮನದೊಳು ತಾನೆ ತಿಳಿದು ನಿಶ್ಚಯಿಸಿದಳು.)
ಮುನ್ನ ಏಗಳ್ ಆವಾವ ದುಃಖವುಂಟು ಅವನ್ ಎಯ್ದೆ ಕಂಡೆನ್ ಉಂಡೆನು ತಣಿದೆನು. ಇನ್ನೇನ ಕಾಣಲಿರ್ದಪೆನ್. ಅರಸ, ಕೇಳಿದಡೆ ನಿನ್ನ ಮಗನನ್ ಕೊಂದ ಪಾಪಿ ಆನ್ ಎಂದಾಡಿ ಅನ್ಯಾಯದಿಮ್ ಸಾವೆನ್.
(ಎನುತ ಬರಲ್, ಓಲಗದ ಗಜಬಜವನ್ ಏನ್ ಪೊಗಳ್ವೆನು.)
ರಾಜಭಟರು: ಅಲ್ಲಿ ನೋಡು… ಇಲ್ಲಿ ನೋಡು… ಅತ್ತ ಹರಿ… ಇತ್ತ ಹರಿ… ತುರಗಮಮ್ ಹಲ್ಲಣಿಸು… ಕೈದುಗೊಳ್ಳು… ಊರಮನೆ ಎಲ್ಲವಮ್ ಸೋದಿಸುವುದು… ಊರ ದಾರಿಗಳಲ್ಲಿ ಕಂಡಿರಾದಡೆ ಕಳ್ಳರ ಕೊಲ್ಲು… ತಿದಿಯನ್ ಉಗಿ.
(ಎಂಬ ಕಳಕಳರವದ ಘಲ್ಲಣೆಯ ಭಟರ ತಿಂತಿಣಿಯೊಳ್ ಓಲಗಮ್ ಕೊಟ್ಟು, ಉಪ್ಪರಿಗೆ ಜಡಿದು ಅಲ್ಲಾಡುವಂತೆ ಕೋಪಾಗ್ನಿ ರೂಪಾದ ಭೂಪನಿರಲು.)
ರಾಜಭಟರು: ಅವಧರಿಸು, ಹಸುಳೆಯನ್ ಕದ್ದು ಕೊಂಡೊಯ್ದು ನೋಯಿಸಿದ ರಕ್ಕಸಿಯ ಹಿಡಿತಂದೆವು.
(ಎನಲು ಕಂಡು ಶಂಕಿಸುತ )
ಕಾಶಿ ರಾಜ: ನೀನಾರ್… ಎತ್ತಣವಳ್… ಸುಕುಮಾರಕನನ್ ಏಕೆ ಕೊಂದೆ.
(ಎಂದು ಅರಸನ್ ಬೆಸಗೊಳಲು… )
ಚಂದ್ರಮತಿ: ಆನ್ ದನುಜೆಯಲ್ಲ. ಆನ್ ಮನುಜೆ. ಅರ್ಥ ವಿಷಯದ ಅಪೇಕ್ಷೆಯಿಮ್ ಈ ಸಿಸುವ ಕೊಂಡೊಯ್ದು ಕೊಂದೆನ್. ಎನ್ನನ್ ನೀನ್ ಒಲಿದಂತೆ ಮಾಡು.
(ಎಂದಳ್ ಆ ರಾಣಿ ವಸುಧಾಧಿಪತಿಗೆ… )
ಕಾಶಿ ರಾಜ : ಹೆದರದಿರು… ತೆಕ್ಕದಿರು… ಅಂಜದಿರು. ಹೇಳು, ಲೋಗರ್ ಇಟ್ಟುದೊ… ನಿನ್ನ ಕೃತಕವೋ. ಧರ್ಮಾಧಿಕರಣದವರಮ್ ಕರಸುವೆನ್… ನುಡಿಸುವೆನ್… ಕಾವೆನ್.
(ಎಂದು ಅವನಿಪನ್ ಬೆಸಗೊಂಡಡೆ… )
ಚಂದ್ರಮತಿ: ಇದಕೆ ಇನ್ನು ಧರ್ಮಾಧಿಕರಣ ಏಗುವುದು. ಕೊಂದುದು ದಿಟಮ್. ಸತ್ತ ಶಿಶು ಕೈಯಲಿದೆ. ಇದಕೆ ತಕ್ಕುದನ್ ಈಗ ಕಾಂಬುದು.
(ಎಂದು ಜೀವದಾಸೆಯನ್ ಏನುವಮ್ ಹಾರದೆ ಆಡಿದಳು.)
ಪ್ರಜೆ-1: ಕೊಂದೆ… ಕೊಂದೆನ್… ಕೊಂದೆನ್ ಎಂದು ತನ್ನಿಂದ ತಾನೆ ಎಂದಡೆ… ಇನ್ನೇಕೆ ಲೋಕದ ಮಾತು.
ಪ್ರಜೆ-2: ಕೊಂದರಮ್ ಕೊಂದು ಕಳೆವುದೆ ಧರ್ಮ.
ಪ್ರಜೆ-3: ಜಗವರ್ತಿಯಮ್ ಹೊತ್ತಿಸು.
ಪ್ರಜೆ-4: ಎಳೆಹೂಟೆಯಮ್ ಹೂಡಿಸು.
ಪ್ರಜೆ-5: ಸಂದುಸಂದಮ್ ಕಡಿಸು.
ಪ್ರಜೆ-6: ಕಿವಿಮೂಗನ್ ಅರಿ.
ಪ್ರಜೆ-7: ಬಹಳದಿಂದ ತಿವಿ.
(ಎಂದು ಒಬ್ಬರ್ ಒಂದೊಂದನ್ ಎಂದುದು ಆ ಮಂದಿ ತನತನಗೆ ನುಡಿಯುತ್ತಿರಲ್ ಅರಸನು ವೀರಬಾಹುಕನ ಕರಸಿದನ್.)
ಕಾಶಿರಾಜ: ಭೂನುತ ಕುಮಾರನನ್ ದಹಿಸಿ, ದೂವೆಯ ಕೆಲದೊಳ್ ಈ ನರಕಿ ವನಿತೆಯನ್ ಅನಾಮಿಕನ ಕಯ್ಯೊಳ್ ಅನುಮಾನವಿಲ್ಲದೆ ಕೊಲಿಸು… ಹೋಗು.
(ಎಂದು ವೀರಬಾಹುಕನ ಕೈಯಲಿ ಕಳುಹಲು, ವೀರಬಾಹುಕನು ರಾಜನ ಆಜ್ಞೆಯನ್ನು ಪಾಲಿಸಲು ಚಂದ್ರಮತಿಯನ್ನು ಕರೆದೊಯ್ಯುತ್ತಾ..)
ವೀರಬಾಹುಕ: ಏನ್ ಎಂದುದಮ್ ಮಾಳ್ಪೆನ್ ಎಂದು ಸುಡುಗಾಡನ್ ಅತ್ಯಾನಂದದಿಮ್ ಕಾವ ಚಂದುಗನ ಕೈಯೊಳ್ ಈ ಹೀನವನಿತೆಯ ಕೊಲಿಸುವೆನ್… ಬೇಗ ಕರೆ.
(ಎನಲ್ಕೆ… ಅರರೆ ಭೂಪನ್ ಬಂದನು.)
ವೀರಬಾಹುಕ: ವಸುಧಾಧಿಪತಿಯ ನೇಹದ ಮಗನ ಕೊಂದ ರಕ್ಕಸಿ ಇವಳನ್… ಆ ರುದ್ರಭೂಮಿಯೊಳಗೆ ಎಯ್ದೆ ತಪ್ಪಿಸದೆ ಕೊರಳಮ್ ಕೊರೆದು ಬಿಸುಡು.
(ಎಂದು ಬೆಸನ ಕೊಡಲ್, ಮುಂದಲೆಯ ಅಡಸಿ ಪಿಡಿದು… ಕುಸುಕಿ… ಕೆಡೆಮೆಟ್ಟಿ… ಕೈಗಳ ಸೇದಿ ಬೆಂಗೆ ಬಾಗಿಸಿ ಬಿಗಿದು… ಹೆಡಗಯ್ಯ ನೇಣಿಂದ ಹೊಡೆದು ದಟ್ಟಿಸಿ… )
ಹರಿಶ್ಚಂದ್ರ: ಪಾಪಿ ಹೊಲತಿ ನಡೆನಡೆ.
(ಎಂದು ತನ್ನ ತವಗದ ಎಡೆಗೆ ನಡಸಿ ತಂದನ್.)
ತಿರುಳು: ಚಂದ್ರಮತಿಯ ಮೇಲೆ ಕೊಲೆಯ ಆರೋಪ
ಇತ್ತಲ್ ಪುರಕೆ ಬರುತಿಪ್ಪ ಮಡದಿಗೆ ಎಡೆವಟ್ಟೆಯೊಳು ಬಂದ ಸಂಕಟವನ್ ಇನ್ನಾವ ಜೀವರು ಕೇಳ್ವರು=ಈ ಕಡೆ… ಸುಡುಗಾಡಿನಲ್ಲಿ ಕೊಡಬೇಕಾದ ತೆರಿಗೆಯ ಹಣವನ್ನು ಸಾಲವಾಗಿ ಪಡೆದು ಬರಲೆಂದು ಕಾಶಿ ನಗರದತ್ತ ಬರುತ್ತಿರುವ ಚಂದ್ರಮತಿಗೆ ದಾರಿಯ ನಡುವೆ ಉಂಟಾದ ಸಂಕಟವನ್ನು ಯಾವ ಜೀವರು ತಾನೆ ಕೇಳುವುದಕ್ಕೆ ಆಗುತ್ತದೆ. ಅಂದರೆ ಅವಳಿಗೆ ಬಂದೊದಗಲಿರುವ ಸಂಕಟವು ಬಹು ದೊಡ್ಡದೆಂದು ಕವಿಯು ಉದ್ಗರಿಸುತ್ತಿದ್ದಾನೆ; ಮುಂದೆ ಭೂಪನ ಸತಿಗೆ ಉಪದ್ರವಮ್ ಮಾಡಬೇಕೆಂದು ಕೌಶಿಕ ಮುನೀಂದ್ರನ್ ನೆನೆದು ಚಿಂತಿಸುತ್ತ ಒಂದು ಉಪಾಯಮ್ ಕಂಡು=ಕಾಶಿನಗರದತ್ತ ಬರುತ್ತಿರುವ ಚಂದ್ರಮತಿಗೆ ಕಾಟವನ್ನು ಕೊಟ್ಟು ಅಡ್ಡಿಯನ್ನುಂಟುಮಾಡಬೇಕೆಂದು ವಿಶ್ವಾಮಿತ್ರ ಮುನಿಯು ಮತ್ತೊಂದು ಸಂಚನ್ನು ನೆನೆದು ಆಲೋಚಿಸುತ್ತ; ಚೋರರಮ್ ಕೆಲಬರಮ್ ನಿರ್ಮಿಸುತ ಅವರ್ಗೆ ಎಂದನು=ತನ್ನ ಮಾಯಾಶಕ್ತಿಯಿಂದ ಕೆಲವು ಕಳ್ಳರನ್ನು ಹೊಸದಾಗಿ ರೂಪಿಸಿ, ಅವರಿಗೆ ಈ ರೀತಿ ಆದೇಶವನ್ನು ನೀಡಿದನು;
ಇಂದು ನೀವ್ ಈ ಪುರವನ್ ಆಳ್ವ ಅರಸನ ಅಣುಗನನ್ ಕೊಂದು, ಆಕೆ ಬಪ್ಪ ಬಟ್ಟೆಯೊಳಿರಿಸಿ ಬನ್ನಿ ಹೋಗಿ ಎಂದು ಬೆಸಸಲು=ಈಗ ನೀವು ಈ ಪುರವನ್ನು ಆಳುತ್ತಿರುವ ಅರಸನ ಮಗನನ್ನು ಕೊಂದು, ಚಂದ್ರಮತಿಯು ಬರುತ್ತಿರುವ ದಾರಿಯಲ್ಲಿ ಹೆಣವನ್ನು ಇಟ್ಟು ಬನ್ನಿ ಎಂದು ಅಪ್ಪಣೆ ಮಾಡಲು; ಯತಿಪನ ಆಜ್ಞೆಯಿಂದ ಅವದಿರ್ ಎಯ್ತಂದು ಪೊಳಲಮ್ ಸಾರ್ದರು=ಮುನಿಯ ಆಜ್ನೆಯಂತೆ ಆ ಕೊಲೆಗಡುಕರು ಬಂದು ಕಾಶಿನಗರದ ಒಳಹೊಕ್ಕರು; ಚೋರರ್ ಒಳಪೊಕ್ಕು ಮಿಕ್ಕು ಆ ಪುರದ ಭೂಪನ ಕುಮಾರನನ್ ಕಂಡು ಓಡಿಬಂದು=ಕೊಲೆಗಡುಕರು ಅರಮನೆಯ ಒಳನುಗ್ಗಿ ಮುನ್ನಡೆದು , ಕಾಶಿ ನಗರದ ರಾಜನ ಮಗನನ್ನು ಕಂಡು, ರಾಜಕುಮಾರನನ್ನು ಅಪಹರಿಸಿಕೊಂಡು ಅರಮನೆಯಿಂದ ಹೊರಕ್ಕೆ ಓಡಿಬಂದು; ಗೊಂದಿಯೊಳ್ ಅಲಂಕಾರಮಮ್ ಕೊಂಬ ಭರದಿನ್ ಕೊರಳನ್ ಅರಿಯಲ್=ನಗರದ ಸಂದಿಯಲ್ಲಿ ಜನರ ಕೊರಳಿನಿಂದ ಬೆಲೆಬಾಳುವ ಒಡವೆಯನ್ನು ರಬಸದಿಂದ ಕಿತ್ತುಕೊಳ್ಳುವ ಹಾಗೆ ಕಾಶಿನಗರದ ಬೀದಿಯಲ್ಲಿ ಅರಸನ ಮಗನ ಕೊರಳನ್ನು ಒಂದೇ ಏಟಿಗೆ ಕತ್ತರಿಸಲು;
ಆ ಶಿಶು ಒರಲಲ್=ಆ ಮಗುವು ನೋವಿನಿಂದ ಕೂಗಿಕೊಳ್ಳಲು; ಆ ದನಿಯನು ದೂರದಿಮ್ ಕೇಳ್ದು=ಮಗುವಿನ ಆಕ್ರಂದನ ದನಿಯನ್ನು ದೂರದಿಂದಲೇ ಕೇಳಿದ ಚಂದ್ರಮತಿಯು; ಓಜೆ ಹುಟ್ಟದ ಅವಿಚಾರ=ವಿವೇಕವನ್ನು ಕಳೆದುಕೊಂಡ ವಿಚಾರ/ಚಿಂತನೆ; ಎನ್ನ ಮಗನಾಗದಿರನ್=ಕಿರುಚುತ್ತಿರುವ ಕಂದ ನನ್ನ ಮಗನಾಗದೇ ಇರಲಾರ. ಅಂದರೆ ಆತ ನನ್ನ ಮಗನೇ; ಆರೋ ನಿರೋಧಿಸುವರ್ ಎಂದು ಓಜೆ ಹುಟ್ಟದ ಅವಿಚಾರದಿಮ್ ಹರಿದಳ್ ಎಂಬಾಗಳ್=ಯಾರೋ ತಡೆದು ತೊಂದರೆಕೊಡುತ್ತಿದ್ದಾರೆ ಎಂದು ವಿವೇಕವಿಲ್ಲದೆ ತಪ್ಪಾಗಿ ಬಾವಿಸಿಕೊಂಡು, ಗೋಳಿನ ದನಿ ಕೇಳಿಬಂದ ಕಡೆಗೆ ನುಗ್ಗಿದಳು ಎನ್ನುವಾಗ; ಈ ರೀತಿ ಚಂದ್ರಮತಿಯು ಗೋಳಿನ ದನಿಯ ಕಡೆಗೆ ಹೋಗುವಾಗ, ಸುಡುಗಾಡಿನಲ್ಲಿ ತನ್ನ ಮಗ ಲೋಹಿತಾಶ್ವನು ಹೆಣವಾಗಿ ಬಿದ್ದಿರುವುದನ್ನು ಮರೆತಿದ್ದಾಳೆ; ಜಗವರಿಯಲು ಅತಿದುಃಖಿಗೆ ಉಂಟೇ ಬುದ್ಧಿ=ಅತಿಸಂಕಟದಲ್ಲಿರುವವರಿಗೆ ಸರಿಯಾದ ಆಲೋಚನಾ ಶಕ್ತಿಯಾಗಲಿ ಇಲ್ಲವೇ ಸರಿಯಾದ ತೀರ್‍ಮಾನವನ್ನು ತೆಗೆದುಕೊಳ್ಳುವ ವಿವೇಕವಾಗಲಿ ಇರುವುದಿಲ್ಲ ಎಂಬುದು ಜಗತ್ತಿನಲ್ಲಿ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ ಎಂದು ಕವಿಯು ಉದ್ಗಾರವೆಳೆದಿದ್ದಾನೆ;
ಸಾರೆ ಬರೆ=ಚಂದ್ರಮತಿಯು ಕೊಲೆಗಡುಕರ ಬಳಿಗೆ ಓಡೋಡಿ ಬರುತ್ತಿದ್ದಂತೆಯೇ; ಬಿಟ್ಟೋಡಿ ಹೋದ ಚೋರರ ಖಡ್ಗ ಧಾರೆಯಿಮ್ ಬಸವಳಿದ ಹಸುಳೆಯನ್ ತನ್ನಯ ಕುಮಾರನೆಂದೇ ಬಗೆದು=ಬಿಟ್ಟು ಓಡಿಹೋದ ಕೊಲೆಗಡುಕರ ಕತ್ತಿಯ ಪೆಟ್ಟಿನಿಂದ ಗಾಸಿಗೊಂಡಿದ್ದ ರಾಜಕುಮಾರನನ್ನು ತನ್ನ ಮಗನೆಂದೇ ಚಂದ್ರಮತಿಯು ನಂಬಿಕೊಂಡು; ಕರೆಕರೆದು ತಲೆದಡವಿ ತಡವರಿಸಿ ಮೆಯ್ ಕುರುಹನು ಹಾರುತಿರೆ=ಲೋಹಿತಾಶ್ವ..ಲೋಹಿತಾಶ್ವ… ಎಂದು ಮತ್ತೆ ಮತ್ತೆ ಕರೆಯುತ್ತ, ಅರಸನ ಮಗನ ತಲೆಯನ್ನು ಮುಟ್ಟಿ ನೇವರಿಸುತ್ತ, ತನ್ನ ಮಗನ ಮಯ್ಯ ಗುರುತನ್ನು ಅವನಲ್ಲಿ ಕಾಣಲು ತಡಕಾಡುತ್ತಿರಲು; ಬೊಂಬುಳಿ=ಒಂದು ಬಗೆಯ ಚರ್‍ಮವಾದ್ಯ; ಕೊಂಬು=ಕಹಳೆ; ಭೇರಿ=ನಗಾರಿ; ಬಾರಿಸುವ ಬೊಂಬುಳಿಯ ಕೊಂಬುಗಳ ಭೇರಿಗಳ ಬೊಬ್ಬೆಗಳ ಕಳಕಳದೊಳ್ ಅರಸಿ ಬಂದು… ಆರುತ್ತ ಹರಿತಂದ ಹಿರಿಯ ಹುಯ್ಯಲ ಭಟರು ಸತಿಯನು ಕಂಡು ಪಿಡಿದರು= ಅರಮನೆಯಿಂದ ಅಪಹರಣಗೊಂಡ ರಾಜಪುತ್ರನನ್ನು ಹುಡುಕಲೆಂದು ಕಾಶಿನಗರದ ಬೀದಿಬೀದಿಗಳಲ್ಲಿ ಬೊಂಬುಳಿಯ ಕಹಳೆಗಳ ನಗಾರಿಗಳ ಬಾರಿಸುತ್ತ, ಅಬ್ಬರದ ದನಿಯಲ್ಲಿ ಜೋರಾಗಿ ಕೂಗುತ್ತ ಬರುತ್ತಿರುವ ರಾಜಬಟರು ಚಂದ್ರಮತಿಯನ್ನು ನೋಡಿ, ಆಕೆಯನ್ನೇ ಕೊಲೆಗಡುಕಿಯೆಂದು ತಿಳಿದು ಹಿಡಿದುಕೊಂಡರು;
ಎಲೆಲೆ… ಇವಳು ರಕ್ಕಸಿಯಾಗದಿರಳ್=ಎಲೆಲೆ… ಇವಳು ರಕ್ಕಸಿಯಲ್ಲದೆ ಮಾನವಳಲ್ಲ; ನಾವ್ ಇಲ್ಲಿ ಕೊಲಬೇಡವು=ನಾವು ಇಲ್ಲಿ ಇವಳನ್ನು ಕೊಲ್ಲುವುದು ಬೇಡ; ಈ ಅಂಗವೆರಸಿ ಕೊಂಡೊಯ್ದು ಭೂತಲಪತಿಗೆ ಕೊಡುವೆವು ಎಂದು=ಈ ಮಗುವಿನ ಹೆಣದೊಡನೆ ಇವಳನ್ನು ಸೆರೆಹಿಡಿದು ರಾಜನಿಗೆ ಕೊಡುತ್ತೇವೆ ಎಂದು ರಾಜಬಟರು ತಮ್ಮಲ್ಲಿಯೇ ತೀರ್‍ಮಾನಿಸಿಕೊಂಡು; ಅಸುವಳಿದ ಹಸುಳೆಯಮ್ ಹೊರಿಸಲಾಗ=ಜೀವವಿಲ್ಲದ ಮಗುವನ್ನು ಅವಳ ಮೇಲೆ ಹೊರಿಸಿದಾಗ; ತಲೆಯಿಂದ ಒಸರ್ವ ರಕುತ ಸುರಿದು ಉಟ್ಟ ಸೀರೆ ತೊಪ್ಪನೆ ತೋಯೆ=ಮಗುವಿನ ತಲೆಯಿಂದ ತೊಟ್ಟಿಕ್ಕುತ್ತಿರುವ ರಕುತ ಸುರಿದು, ಚಂದ್ರಮತಿಯು ಉಟ್ಟಿದ್ದ ಸೀರೆಯೆಲ್ಲವೂ ರಕ್ತದಿಂದ ಒದ್ದೆಯಾಗಲು; ಲಲನೆಯನ್ ಹೆಡಗೈಯ ಬಲಿದ ನೇಣಮ್ ಪಿಡಿದು, ಕಿತ್ತ ಅಲಗುಗಳ ನಡುವೆ ರಾಜಬೀದಿಯೊಳಗೆ ಜಡಿಜಡಿದು ನಡಸಿ ತಂದರು=ಚಂದ್ರಮತಿಯ ಒಂದು ಕಯ್ಯನ್ನು ಹಿಂದಕ್ಕೆ ನುಲಿದು ಹಗ್ಗವನ್ನು ಬಿಗಿದು ಕಟ್ಟಿ, ಬಿಚ್ಚುಗತ್ತಿಗಳ ಪಹರೆಯಲ್ಲಿ ರಾಜಬೀದಿಗಳಲ್ಲಿ ನಿಂದಿಸುತ್ತ ರಾಜನ ಬಳಿಗೆ ಕರೆತಂದರು;
ಎನ್ನನ್ ಇವರ್ ಆಡಿಸದಡೆ ಏನನ್ ಆಡುವೆನ್ ಎಂದು ತನ್ನ ಮನದೊಳು ತಾನೆ ತಿಳಿದು ನಿಶ್ಚಯಿಸಿದಳು=ನನ್ನನ್ನು ಇವರು ಕೇಳಿದರೆ ಏನನ್ನು ಹೇಳಲಿ ಎಂದು ಚಂದ್ರಮತಿಯು ತನ್ನ ಮನದಲ್ಲಿ ತಾನೇ ಚಿಂತಿಸಿ, ಒಂದು ನಿಲುವನ್ನು ತಳೆದಳು; ಮುನ್ನ ಏಗಳ್ ಆವಾವ ದುಃಖವುಂಟು ಅವನ್ ಎಯ್ದೆ ಕಂಡೆನ್ ಉಂಡೆನು ತಣಿದೆನು. ಇನ್ನೇನ ಕಾಣಲಿರ್ದಪೆನ್. ಅರಸ, ಕೇಳಿದಡೆ ನಿನ್ನ ಮಗನನ್ ಕೊಂದ ಪಾಪಿ ಆನ್ ಎಂದಾಡಿ ಅನ್ಯಾಯದಿಮ್ ಸಾವೆನ್ ಎನುತ ಬರಲ್=ಈ ಮೊದಲು ನನ್ನ ಜೀವನದಲ್ಲಿ ಈಗಾಗಲೇ ಮಾನವನ ಬದುಕಿನಲ್ಲಿ ಯಾವ ಯಾವ ಸಂಕಟಗಳುಂಟೋ, ಅವೆಲ್ಲವನ್ನೂ ಚೆನ್ನಾಗಿ ಕಂಡಿದ್ದೇನೆ; ಉಂಡಿದ್ದೇನೆ; ಸೋತು ಸುಣ್ಣವಾಗಿದ್ದೇನೆ. ಇದಕ್ಕಿಂತಲೂ ಕೆಟ್ಟದ್ದನ್ನು ಇನ್ನು ಏನನ್ನು ತಾನೆ ಕಾಣಲಿರುವೆನು. ಅರಸ, ಕೇಳಿದರೆ ನಿನ್ನ ಮಗನನ್ನು ಕೊಂದ ಪಾಪಿ ನಾನೇ ಎಂದು ಹೇಳಿ, ಅನ್ಯಾಯವಾಗಿಯೇ ಸಾವನ್ನು ಅಪ್ಪುತ್ತೇನೆ ಎಂದು ತೀರ್‍ಮಾನಿಸಿಕೊಂಡು ಬರುತ್ತಿರಲು;
ಓಲಗದ ಗಜಬಜವನ್ ಏನ್ ಪೊಗಳ್ವೆನು=ರಾಜನು ಕರೆದಿದ್ದ ಓಲಗದಲ್ಲಿ ಕೇಳಿಬರುತ್ತಿರುವ ಗದ್ದಲವನ್ನು ಏನೆಂದು ವಿವರಿಸಲಿ ಎಂದು ಕವಿಯು ಉದ್ಗರಿಸಿದ್ದಾನೆ; ರಾಜನಿಗಾಗಲಿ ಇಲ್ಲವೇ ರಾಜನ ಒಡ್ಡೋಲಗದಲ್ಲಿದ್ದ ಸೇನಾಪಡೆಯವರಿಗಾಗಲಿ ಚಂದ್ರಮತಿಯನ್ನು ರಾಜಬಟರು ಹಿಡಿದುಕೊಂಡು ಬರುತ್ತಿರುವುದು ಇನ್ನೂ ತಿಳಿದಿಲ್ಲ. ಆದ್ದರಿಂದ ರಾಜನ ಒಡ್ಡೋಲಗದಲ್ಲಿದ್ದವರೆಲ್ಲರೂ ಆತಂಕ, ಆಕ್ರೋಶ ಮತ್ತು ಸಂಕಟವನ್ನು ವ್ಯಕ್ತಪಡಿಸುತ್ತಿದ್ದಾರೆ; ಅಲ್ಲಿ ನೋಡು… ಇಲ್ಲಿ ನೋಡು; ಅತ್ತ ಹರಿ… ಇತ್ತ ಹರಿ; ತುರಗಮಮ್ ಹಲ್ಲಣಿಸು; ಕೈದುಗೊಳ್ಳು; ಊರಮನೆ ಎಲ್ಲವಮ್ ಸೋದಿಸುವುದು; ಊರ ದಾರಿಗಳಲ್ಲಿ ಕಂಡಿರಾದಡೆ ಕಳ್ಳರ ಕೊಲ್ಲು; ತಿದಿಯನ್ ಉಗಿ ಎಂಬ ಕಳಕಳರವದ ಘಲ್ಲಣೆಯ ಭಟರ ತಿಂತಿಣಿಯೊಳ್ ಓಲಗಮ್ ಕೊಟ್ಟು=ಅಲ್ಲಿ ನೋಡು… ಇಲ್ಲಿ ಹುಡುಕು. ಅತ್ತ ಹೋಗು… ಇತ್ತ ಬಾ. ಕುದುರೆಗೆ ಜೀನನ್ನು ಹಾಕಿ ಸಿದ್ದಪಡಿಸು. ಆಯುದವನ್ನು ಹಿಡಿದುಕೊಳ್ಳಿರಿ. ಊರಿನ ಮನೆಗಳೆಲ್ಲವನ್ನು ಹೊಕ್ಕು ರಾಜಪುತ್ರನನ್ನು ಹುಡುಕಿರಿ. ಊರ ದಾರಿಗಳಲ್ಲಿ ಅಪಹರಣಕಾರರು ನೋಡಿದರೆ ಕೂಡಲೇ ಕೊಲ್ಲಿರಿ. ಅಪಹರಣಕಾರರ ಚರ್‍ಮವನ್ನು ಸುಲಿಯಿರಿ ಎಂದು ಬಯಂಕರವಾಗಿ ಕೂಗುತ್ತಿರುವ ರಾಜಬಟರ ಗುಂಪಿನಲ್ಲಿ ರಾಜನು ಪ್ರಜಾ ನೇತಾರರ ಸಬೆಯನ್ನು ಕರೆದು;
ಉಪ್ಪರಿಗೆ ಜಡಿದು ಅಲ್ಲಾಡುವಂತೆ ಕೋಪಾಗ್ನಿ ರೂಪಾದ ಭೂಪನಿರಲು=ಮಹಡಿಯ ಅಂತಸ್ತುಗಳಿಂದ ಕೂಡಿದ ಅರಮನೆಯೇ ಅಲ್ಲಾಡುವಂತೆ ಕೋಪೋದ್ರೇಕದಿಂದ ರಾಜನು ಇರಲು; “ಉಪ್ಪರಿಗೆ ಜಡಿದು ಅಲ್ಲಾಡುವಂತೆ” ಎಂಬ ನುಡಿಗಳು ರಾಜನ ಕೋಪದ ತೀವ್ರತೆಯನ್ನು ಸೂಚಿಸುವ ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ; ಅವಧರಿಸು, ಹಸುಳೆಯನ್ ಕದ್ದು ಕೊಂಡೊಯ್ದು ನೋಯಿಸಿದ ರಕ್ಕಸಿಯ ಹಿಡಿತಂದೆವು ಎನಲು=ಅರಸರೇ ಕೇಳಿರಿ… ಮಗುವನ್ನು ಕದ್ದು ತೆಗೆದುಕೊಂಡು ಹೋಗಿ ಜೀವವನ್ನು ತೆಗೆದ ರಕ್ಕಸಿಯನ್ನು ಹಿಡಿದುತಂದಿದ್ದೇವೆ ಎಂದು ರಾಜಬಟರು ಅರಿಕೆ ಮಾಡಿಕೊಂಡರು; ಕಂಡು ಶಂಕಿಸುತ ನೀನಾರ್… ಎತ್ತಣವಳ್… ಸುಕುಮಾರಕನನ್ ಏಕೆ ಕೊಂದೆ ಎಂದು ಅರಸನ್ ಬೆಸಗೊಳಲು=ರಾಜಬಟರ ಮಾತನ್ನು ಕೇಳಿ, ಚಂದ್ರಮತಿಯತ್ತ ನೋಡಿದ ರಾಜನು ರಾಜಬಟರು ಮಾಡುತ್ತಿರುವ ಆಪಾದನೆಯ ಮಾತನ್ನು ನಂಬದೆ “ ನೀನು ಯಾರು… ಯಾವ ಊರಿನವಳು… ನನ್ನ ಮಗನನ್ನು ಏಕೆ ಕೊಂದೆ ” ಎಂದು ಕೇಳಲು;
ಆನ್ ದನುಜೆಯಲ್ಲ. ಆನ್ ಮನುಜೆ. ಅರ್ಥ ವಿಷಯದ ಅಪೇಕ್ಷೆಯಿಮ್ ಈ ಸಿಸುವ ಕೊಂಡೊಯ್ದು ಕೊಂದೆನ್. ಎನ್ನನ್ ನೀನ್ ಒಲಿದಂತೆ ಮಾಡು ಎಂದಳ್ ಆ ರಾಣಿ ವಸುಧಾಧಿಪತಿಗೆ=ಆಗ ಚಂದ್ರಮತಿಯು ತಾನು ಮೊದಲೇ ತೀರ್ಮಾನಿಸಿಕೊಂಡಿರುವಂತೆ ಕೊಲೆಯ ಆಪಾದನೆಯನ್ನು ತನ್ನ ಮಯ್ ಮೇಲೆ ಹಾಕಿಕೊಳ್ಳುತ್ತ “ನಾನು ರಕ್ಕಸಿಯಲ್ಲ. ನಾನು ಮಾನವಳು. ಸಂಪತ್ತನ್ನು ದೋಚಬೇಕೆಂಬ ದುರುದ್ದೇಶದಿಂದ ಈ ಮಗುವನ್ನು ಕೊಂಡೊಯ್ದು ಕೊಂದೆನು” ಎಂದು ರಾಜನ ಮಾತಿಗೆ ಉತ್ತರಿಸಿದಳು; ಹೆದರದಿರು… ತೆಕ್ಕದಿರು… ಅಂಜದಿರು. ಹೇಳು, ಲೋಗರ್ ಇಟ್ಟುದೊ… ನಿನ್ನ ಕೃತಕವೋ. ಧರ್ಮಾಧಿಕರಣದವರಮ್ ಕರಸುವೆನ್. ನುಡಿಸುವೆನ್. ಕಾವೆನ್ ಎಂದು ಅವನಿಪನ್ ಬೆಸಗೊಂಡಡೆ=ಹೆದರಿಕೊಳ್ಳಬೇಡ… ನಿಜವಾಗಿ ನಡೆದುದು ಏನೆಂಬುದನ್ನು ಹೇಳಲು ಹಿಂಜರಿಯಬೇಡ… ನಡುಗಬೇಡ. ಹೇಳು, ಬೇರೆ ಯಾರಾದರೂ ಕೊಲೆಯನ್ನು ಮಾಡಿ ನಿನ್ನ ಮೇಲೆ ಈ ರೀತಿ ಆಪಾದನೆಯನ್ನು ಹೊರಿಸುತ್ತಿದ್ದಾರೆಯೋ… ನೀನೇ ಕೊಲೆಮಾಡಿದೆಯೋ… ನ್ಯಾಯಾದಿಪತಿಗಳನ್ನು ಕರೆಸುತ್ತೇನೆ. ಅವರಿಂದ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತೇನೆ. ನೀನು ಕೊಲೆಯನ್ನು ಮಾಡದಿದ್ದರೆ ನಿನ್ನನ್ನು ಕಾಪಾಡುತ್ತೇನೆ ಎಂದು ರಾಜನು ವಿವರವಾಗಿ ಹೇಳಲು;
ಇದಕೆ ಇನ್ನು ಧರ್ಮಾಧಿಕರಣ ಏಗುವುದು. ಕೊಂದುದು ದಿಟಮ್. ಸತ್ತ ಶಿಶು ಕೈಯಲಿದೆ. ಇದಕೆ ತಕ್ಕುದನ್ ಈಗ ಕಾಂಬುದು ಎಂದು ಜೀವದಾಸೆಯನ್ ಏನುವಮ್ ಹಾರದೆ ಆಡಿದಳು=ಕೊಲೆಪಾತಕಿಯಾದ ನಾನೇ ಒಪ್ಪಿಕೊಳ್ಳುತ್ತಿರುವಾಗ ಇದರಲ್ಲಿ ನ್ಯಾಯಾಸ್ತಾನ ಏನು ತಾನೆ ಮಾಡುವುದು. ಕೊಂದುದು ನಿಜ. ಸತ್ತ ಮಗು ನನ್ನ ಕಯ್ಯಲ್ಲಿದೆ. ಇದಕ್ಕೆ ತಕ್ಕ ದಂಡನೆಯನ್ನು ವಿದಿಸುವುದು ಎಂದು ಜೀವದ ಆಸೆಯನ್ನು ತುಸುವಾದರೂ ಬಯಸದೆ ಚಂದ್ರಮತಿಯು ನುಡಿದಳು; ರಾಜನ ಒಡ್ಡೋಲಗದಲ್ಲಿದ್ದ ಸಬಿಕರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ರಾಜನ ತಾಳ್ಮೆಯಿಂದ ಕೂಡಿದ ಉದಾರಗುಣವನ್ನು ಒಪ್ಪದೆ, ಚಂದ್ರಮತಿಗೆ ದಂಡನೆಯನ್ನು ಕೊಡುವಂತೆ ಒತ್ತಾಯ ಮಾಡತೊಡಗುತ್ತಾರೆ;
ಕೊಂದೆ… ಕೊಂದೆನ್… ಕೊಂದೆನ್ ಎಂದು ತನ್ನಿಂದ ತಾನೆ ಎಂದಡೆ, ಇನ್ನೇಕೆ ಲೋಕದ ಮಾತು= ಕೊಂದೆ… ಕೊಂದೆನು… ಕೊಂದೆನು ಎಂದು ಆಕೆಯೇ ಹೇಳುತ್ತಿರುವಾಗ, ಇನ್ನೇಕೆ ನ್ಯಾಯ ಪಂಚಾಯ್ತಿಯ ಮಾತು; ಕೊಂದರಮ್ ಕೊಂದು ಕಳೆವುದೆ ಧರ್ಮ=ಕೊಲೆ ಮಾಡಿದವರನ್ನು ಕೊಂದು ನಾಶಮಾಡುವುದೇ ದರ್‍ಮ; ಜಗವರ್ತಿಯಮ್ ಹೊತ್ತಿಸು=ದೊಡ್ಡ ಉರಿಯನ್ನು ಹಾಕಿಸಿ, ಇವಳನ್ನು ಬೆಂಕಿಗೆ ಹಾಕಿಸು; ಎಳೆಹೂಟೆಯಮ್ ಹೂಡಿಸು=ಹಲಬೆಯ ನೊಗಕ್ಕೆ ಇವಳನ್ನು ಬಿಗಿದು ಕಟ್ಟಿ, ದನದಂತೆ ಇವಳಿಂದ ಹಲಬೆಯನ್ನು ಎಳೆಸು; ಸಂದುಸಂದಮ್ ಕಡಿಸು=ಇವಳ ಇಡೀ ದೇಹವನ್ನು ಗಿಣ್ಣುಗಿಣ್ಣುಗೂ ಕತ್ತರಿಸು; ಕಿವಿಮೂಗನ್ ಅರಿ=ಕಿವಿ ಮೂಗನ್ನು ಕತ್ತರಿಸು; ಬಹಳದಿಂದ ತಿವಿ=ಈಟಿ ಬರ್ಜಿಗಳಿಂದ ಜೋರಾಗಿ ತಿವಿಸು; ಎಂದು ಒಬ್ಬರ್ ಒಂದೊಂದನ್ ಎಂದುದು ಆ ಮಂದಿ ತನತನಗೆ ನುಡಿಯುತ್ತಿರಲು=ಒಡ್ಡೋಲಗದಲ್ಲಿ ಪ್ರಜೆಗಳು ಒಬ್ಬರು ಒಂದೊಂದು ಬಗೆಯ ದಂಡನೆಯನ್ನು ಕೊಡುವಂತೆ ರಾಜನಲ್ಲಿ ಕೇಳಿಕೊಳ್ಳುವುದಲ್ಲದೆ, ತಮ್ಮ ತಮ್ಮಲ್ಲಿಯೇ ದಂಡನೆಯ ರೀತಿಯನ್ನು ಕುರಿತು ಮಾತನಾಡಿಕೊಳ್ಳುತ್ತಿರಲು;
ಅರಸನು ವೀರಬಾಹುಕನ ಕರಸಿದನ್=ಪ್ರಜೆಗಳ ಮಾತಿಗೆ ಮನ್ನಣೆಯನ್ನು ನೀಡುವಂತೆ ಅರಸನು ವೀರಬಾಹುಕನನ್ನು ಒಡ್ಡೋಲಗಕ್ಕೆ ಕರೆಸಿದನು; ಭೂನುತ ಕುಮಾರನನ್ ದಹಿಸಿ, ದೂವೆಯ ಕೆಲದೊಳ್ ಈ ನರಕಿ ವನಿತೆಯನ್ ಅನಾಮಿಕನ ಕಯ್ಯೊಳ್ ಅನುಮಾನವಿಲ್ಲದೆ ಕೊಲಿಸು ಹೋಗು ಎಂದು ವೀರಬಾಹುಕನ ಕೈಯಲಿ ಕಳುಹಲು=ಜಗತ್ತಿನಲ್ಲಿಯೇ ಹೊಗಳಿಸಿಕೊಂಡಿದ್ದ ನನ್ನ ಮಗನನ್ನು ಸುಡುಗಾಡಿನಲ್ಲಿ ಸುಟ್ಟು, ಅವನ ಚಿತೆಯ ಬೂದಿಯ ಪಕ್ಕದಲ್ಲಿಯೇ ಈ ಕೆಟ್ಟ ಹೆಂಗಸನ್ನು ಚಂಡಾಲನ ಕಯ್ಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕೊಲ್ಲಿಸು..ಹೋಗು ಎಂದು ಅರಸನು ಆಜ್ನಾಪಿಸಿ, ಚಂದ್ರಮತಿಯನ್ನು ವೀರಬಾಹುಕನ ವಶಕ್ಕೆ ಒಪ್ಪಿಸಿ, ಕಳುಹಿಸಿದನು;
ಏನ್ ಎಂದುದಮ್ ಮಾಳ್ಪೆನ್ ಎಂದು ಸುಡುಗಾಡನ್ ಅತ್ಯಾನಂದದಿಮ್ ಕಾವ ಚಂದುಗನ ಕೈಯೊಳ್ ಈ ಹೀನವನಿತೆಯ ಕೊಲಿಸುವೆನ್ ಬೇಗ ಕರೆ ಎನಲ್ಕೆ=ವೀರಬಾಹುಕನು ರಾಜನ ಆಜ್ನೆಯನ್ನು ಪಾಲಿಸಲು ಚಂದ್ರಮತಿಯನ್ನು ಸುಡುಗಾಡಿಗೆ ಕರೆದುಕೊಂಡು ಬಂದು ತನ್ನ ಹತ್ತಿರದಲ್ಲಿದ್ದ ದಾಸನೊಬ್ಬನಿಗೆ ಈ ರೀತಿ ಹೇಳುತ್ತಾನೆ. ”ಒಡೆಯನಾದ ತಾನು ಏನು ಹೇಳಿದರೂ ಮಾಡುತ್ತೇನೆ ಎಂದು ನುಡಿದು ಸುಡುಗಾಡನ್ನು ಅತಿ ಆನಂದದಿಂದ ಕಾಯುತ್ತಿರುವ ಹರಿಶ್ಚಂದ್ರನ ಕಯ್ಯಲ್ಲಿ ಈ ಕೆಟ್ಟ ಹೆಂಗಸನ್ನು ಕೊಲ್ಲಿಸುತ್ತೇನೆ. ಅವನನ್ನು ಬೇಗ ಇಲ್ಲಿಗೆ ಬರುವಂತೆ ಕರೆ“ ಎಂದು ಹೇಳಲು;
ಅರರೆ ಭೂಪನ್ ಬಂದನು=ಅಬ್ಬಬ್ಬಾ… ಕೂಡಲೇ ಹರಿಶ್ಚಂದ್ರನು ವೀರಬಾಹುಕನು ಇದ್ದ ಎಡೆಗೆ ಬಂದನು; ವಸುಧಾಧಿಪತಿಯ ನೇಹದ ಮಗನ ಕೊಂದ ರಕ್ಕಸಿ ಇವಳನ್… ಆ ರುದ್ರಭೂಮಿಯೊಳಗೆ ಎಯ್ದೆ ತಪ್ಪಿಸದೆ ಕೊರಳಮ್ ಕೊರೆದು ಬಿಸುಡು ಎಂದು ಬೆಸನ ಕೊಡಲ್= “ಕಾಶಿರಾಜನ ಒಲವಿನ ಮಗನನ್ನು ಕೊಂದ ರಕ್ಕಸಿ ಇವಳನ್ನು, ಸುಡುಗಾಡಿನ ಆ ಎಡೆಯಲ್ಲಿ ಕಿಂಚಿತ್ತು ಕರುಣೆ ತೋರಿಸದೆ ಕೊರಳನ್ನು ಕತ್ತರಿಸಿ ಬಿಸಾಡು” ಎಂದು ಆಜ್ನಾಪಿಸಲು;
ಮುಂದಲೆಯ ಅಡಸಿ ಪಿಡಿದು ಕುಸುಕಿ… ಕೆಡೆಮೆಟ್ಟಿ ಕೈಗಳ ಸೇದಿ ಬೆಂಗೆ ಬಾಗಿಸಿ ಬಿಗಿದು… ಹೆಡಗಯ್ಯ ನೇಣಿಂದ ಹೊಡೆದು ದಟ್ಟಿಸಿ=ಚಂದ್ರಮತಿಯ ಮುಂದಲೆಯನ್ನು ಬಿಗಿಯಾಗಿ ಒತ್ತಿ ಹಿಡಿದು, ಮುಡಿಯನ್ನು ಕೆಳಕ್ಕೆ ಅದುಮಿ, ಕೆಳಕ್ಕೆ ಬೀಳುವಂತೆ ತುಳಿದು, ಎರಡು ಕಯ್ಗಳನ್ನು ಎಳೆದು, ಬೆನ್ನಿನ ಹಿಂದಕ್ಕೆ ಕಟ್ಟಿ ಬಿಗಿದು, ಬಿಗಿದು ಕಟ್ಟಿದ ಆ ಹೆಡಗಯ್ಯ ಮೇಲೆ ಹಗ್ಗದಿಂದ ಹೊಡೆದು ಹೀಗಳೆಯುತ್ತ; ಪಾಪಿ ಹೊಲತಿ ನಡೆನಡೆ ಎಂದು ತನ್ನ ತವಗದ ಎಡೆಗೆ ನಡಸಿ ತಂದನ್=ಪಾಪಿ ಹೊಲತಿಯೇ… ನಡೆ ನಡೆ ಎಂದು ಅಬ್ಬರಿಸುತ್ತ, ಸುಡುಗಾಡಿನಲ್ಲಿದ್ದ ಬಲಿಕೊಡುವ ಕಟ್ಟೆಯ ಕಡೆಗೆ ಚಂದ್ರಮತಿಯನ್ನು ಕರೆತಂದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು