ಕವಿತೆ: ಬಯಕೆ

– ಶ್ಯಾಮಲಶ್ರೀ.ಕೆ.ಎಸ್.

ಕನಸು night dreams

ಬದುಕಿನ ಜಂಜಾಟಗಳ ನಡುವೆ
ನೆಮ್ಮದಿಯ ಹುಡುಕುವ ಬಯಕೆ

ಬಾಲ್ಯದ ಮುಗ್ದತೆಯ ನೆರಳಿನಲಿ
ಲೋಕದ ಸುಕವನು ಹಿತವಾಗಿಸೋ ಬಯಕೆ

ಅಮ್ಮನ ಮಡಿಲಿನ ತೊಟ್ಟಿಲಲ್ಲಿ
ಮತ್ತೆ ಮುದ್ದು ಮಗುವಾಗುವ ಬಯಕೆ

ನಸುಕಿನ ಸೂರ‍್ಯನ ಎಳೆ ಬೆಳಕಿನ
ಕಿರಣಗಳನು ಬೊಗಸೆ ತುಂಬಾ ಹಿಡಿವ ಬಯಕೆ

ಚಿಲಿಪಿಲಿ ಹಕ್ಕಿಯ ಗಾನದ ಮೋಡಿಗೆ
ಕಿವಿಯನು ಇಂಪಾಗಿಸುವ ಬಯಕೆ

ಮುಗಿಲಲಿ ಕುಳಿತಿರೋ ಬಿಳಿ ಮೋಡಗಳನು
ಎಗರಿ ಎಗರಿ ಬಾಚಿ ತಬ್ಬುವ ಬಯಕೆ

ಇರುಳಲಿ ಚೆಲ್ಲಿದ ಚಂದಿರನ ಬೆಳದಿಂಗಳಲಿ
ತಂಗಾಳಿಯ ತಂಪನು ಸವಿಯುವ ಬಯಕೆ

ಪ್ರಕ್ರುತಿ ಸಿರಿಯಲಿ ಜಗವನು ಮರೆತು
ಸದ್ಬಾವದಲಿ ವಿರಮಿಸುವ ಬಯಕೆ

ಕರುಣೆಯಿಲ್ಲದ ಮತ್ಸರದ ದಿಟ್ಟಿಗೆ ಬೀಳದೇ
ಪ್ರೀತಿಯ ಕಂಗಳನು ಕಾಣುವ ಬಯಕೆ

ಮಾನವತೆಯ ಸಾಂಗತ್ಯದಲಿ ಬೆರೆತು
ಬಾಳಿಗೆ ಅರ‍್ತವನು ಅರಸುವ ಬಯಕೆ

(ಚಿತ್ರ ಸೆಲೆ: maxpixel)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *