ಇಂಟರ್ ಸ್ಟೆಲ್ಲಾರ್ ಗೆ 10 ವರುಶ

– ಕಿಶೋರ್ ಕುಮಾರ್.

ನಾವೆಲ್ಲರೂ ಹೊರಬಾನಿನ (space) ಬಗ್ಗೆ ಮೂಡಿಬಂದಿರುವ ಹಲವಾರು ಸಿನೆಮಾಗಳನ್ನು ನೋಡಿದ್ದೇವೆ, ಕನ್ನಡದಲ್ಲೂ ಸಹ ಒಂದು ಸಣ್ಣ ತಿರುಳು ಹೊಂದಿದ್ದ ಸೂಪರ್ ನೋವಾ 459 ಎನ್ನುವ ಮಕ್ಕಳ ಸಿನೆಮಾ ಕೂಡ ಬಂದಿತ್ತು. ಆದರೆ ಹಾಲಿವುಡ್ ಸಿನೆಮಾಗಳು ಹಲವು ವರುಶಗಳಿಂದಲೇ ಹೊರಬಾನಿನ ಬಗ್ಗೆ ಬಾಯಿ ಮೇಲೆ ಬೆರಳಿಡುವಂತ ಸಿನೆಮಾಗಳನ್ನು ಮಂದಿಯ ಮುಂದಿಟ್ಟಿವೆ. ಅದರಲ್ಲಿ ಹೆಚ್ಚು ಜನಮನ್ನಣೆ ಪಡೆದ ಸಿನೆಮಾಗಳೆಂದರೆ 2001: ಎ ಸ್ಪೇಸ್ ಒಡಿಸ್ಸಿ (1968), ಅಪೋಲೊ 13 (1995), ಗ್ರಾವಿಟಿ (2013), ಇಂಟರ್ ಸ್ಟೆಲ್ಲಾರ್ (2014) ಹಾಗೂ ದ ಮಾರ‍್ಟಿನ್ (2015) . ಇವುಗಳಲ್ಲಿ 2014 ರಲ್ಲಿ ತೆರೆಕಂಡ ಕ್ರಿಸ್ಟೋಪರ್ ನೋಲನ್ ನಿರ‍್ದೇಶನದ ಇಂಟರ್ ಸ್ಟೆಲ್ಲಾರ್ ಸಿನೆಮಾ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು ಎಂದರೆ ತಪ್ಪಾಗಲಾರದು.

2014 ರಲ್ಲಿ ತೆರೆಕಂಡು ಜನರ ಮನಸೂರೆಗೊಂಡಿದ್ದ ಈ ಸಿನೆಮಾ ಈಗ 10 ವರುಶಗಳ ನಂತರ ಮರು ಬಿಡುಗಡೆಯಾಗಿ ಜನರನ್ನು ರಂಜಿಸುತ್ತಿದೆ. ಅಂತದ್ದೇನಿದೆ ಈ ಸಿನೆಮಾದಲ್ಲಿ ಎಂದು ಈ ಸಿನೆಮಾ ನೋಡಿರದ ಹಲವರಲ್ಲಿ ಅನುಮಾನ ಮೂಡಬಹುದು, ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಇದರ ನಿರ‍್ದೇಶಕಕ್ರಿಸ್ಟೋಪರ್ ನೋಲನ್ ಅವರ ನಿರ‍್ದೇಶನದ ಶೈಲಿ. ಇವರ ಹೆಚ್ಚಿನ ಸಿನೆಮಾಗಳ ಕತೆ ಮೆಟಾಪಿಜಿಕ್ಸ್ (Metaphysics) ನ ಸುತ್ತ ಇರುತ್ತವೆ. ಚುಟುಕಾಗಿ ಹೇಳಬೇಕೆಂದರೆ ಇವರ ಕತೆಗಳ ತಿರುಳು (concept) “ಸಮಯ, ರಿಯಾಲಿಟಿ ಹಾಗೂ ತನ್ನ ಗುರುತು” ಇವುಗಳ ಮೇಲೆ ನಿಂತಿರುತ್ತದೆ. ಈ ಕಟ್ಟೆಣಿಕೆಗಳು (concept) ಬರೀ ಯುವ ಸಮೂಹ ಮಾತ್ರವಲ್ಲದೆ ಎಲ್ಲಾ ವಯಸ್ಸಿನವರನ್ನೂ ಸಹ ಒಮ್ಮೆ ಅಚ್ಚರಿಗೊಳಿಸುತ್ತವೆ. ಇವರ ಹಲವಾರು ಸಿನೆಮಾಗಳು ಇದೇ ಕಟ್ಟೆಣಿಕೆಯ (concept) ಮೇಲೆ ನಿಂತಿವೆ, ಅವುಗಳೆಂದರೆ ದ ಪ್ರೆಸ್ಟೀಜ್ (2006), ಇನ್ಸೆಪ್ಶನ್ (2010), ಇಂಟರ್ ಸ್ಟೆಲ್ಲಾರ್ (2014), ಟೆನೆಟ್ (2020) ಹಾಗೂ ಓಪನ್ ಹೈಮರ್ (2023).

ಎರಡನೆಯ ಕಾರಣ ಸಿನೆಮಾದ ಮೇಕಿಂಗ್. ಹಾಲಿವುಡ್ ಸಿನೆಮಾಗಳ ಮೇಕಿಂಗ್ ಬಗ್ಗೆ ಹೇಳುವುದೇ ಬೇಡ. ಹಾಲಿವುಡ್ ಸಿನೆಮಾಗಳಿಗೆ ಹೆಚ್ಚಿನ ಹಣ ಹೂಡಿಕೆಯಾಗುತ್ತದೆ, ಅದಕ್ಕೆ ಕಾರಣ ನೋಡುಗರ ಎಣಿಕೆ ಕೂಡ ಹೆಚ್ಚಿರುವುದು. ಈ ಸಿನಿಮಾದ ಮೇಕಿಂಗ್ ಕೂಡ ಹಾಗೆ ಒಂದು ಅದ್ಬುತ ಕಲಾಕುಸುರಿಯಂತೆ ಮೂಡಿ ಬಂದಿದೆ. ನೋಡುಗರಿಗೆ ಇದೇನು ನಾವು ಹೊರಬಾನಿನಲ್ಲೇ (space) ಇದ್ದೇವೆಯೋ ಎನಿಸುತ್ತದೆ. ಇದಕ್ಕೆ ಕಾರಣ ಈ ಸಿನಿಮಾದ ಹಲವಾರು ದ್ರುಶ್ಯಗಳನ್ನು ಐಮ್ಯಾಕ್ಸ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವುದು. ಇದಲ್ಲದೆ ಹಿನ್ನೆಲೆ ಸಂಗೀತ ಕೂಡ ಸಿನೆಮಾದ ತೂಕವನ್ನು ಹೆಚ್ಚಿಸಿದೆ.

ಬೂಮಿಯ ಮೇಲಿನ ವಾತಾವರಣ ಬದಲಾವಣೆಯಿಂದ, ಉಸಿರಾಡುವ ಗಾಳಿ ಹಾಗೂ ಊಟಕ್ಕೆ ಅಬಾವ ಉಂಟಾಗುವ ದಿನಗಳು ದೂರವಿಲ್ಲ ಎಂದು ಮನಗಂಡ ನಾಸಾ ಬಾನರಿಗರು (Astro Scientists) ಮನುಜರಿಗೆ ಬದುಕಲು ಇನ್ನೊಂದು ನೆಲೆಯನ್ನು ಹುಡುಕಲು ಒಂದು ಹಮ್ಮುಗೆಗೆ (mission) ಅಣಿಯಾಗುತ್ತಾರೆ. ನಾಸಾದ ಮುಕ್ಯ ವಿಜ್ನಾನಿ ಪ್ರೊಪೆಸರ್ ಜಾನ್ ಬ್ರಾಂಡ್ ಇದಕ್ಕೆ ರೂವಾರಿ. ಶನಿಗ್ರಹದ ಹತ್ತಿರ ಇರುವ ಒಂದು wormhole (ಕುಳಿ) ಮೂಲಕ ಇನ್ನೊಂದು ಅರಿಲ್ವಳಿ (galaxy) ಯನ್ನು ತಲುಪಿ, ಅಲ್ಲಿ ಒಂದು ಕಪ್ಪು ಕುಳಿಯ (black hole) ಪಕ್ಕದಲ್ಲಿರುವ ಬದುಕಲು ಅನುಕೂಲಕರ ವಾತವರಣವಿರುವ 12 ಗ್ರಹಗಳನ್ನು ಹುಡುಕುವುದು ಈ ಹಮ್ಮುಗೆಯ (mission) ಉದ್ದೇಶ. ಇದಕ್ಕಾಗಿ ಹಿಂದೊಮ್ಮೆ ನಾಸಾದಲ್ಲಿ ಬಾನಬಂಡಿ (spaceship) ಪೈಲೆಟ್ ಆಗಿ ಕೆಲಸ ಮಾಡಿದ ಜೋಸೆಪ್ ಕೂಪರ್, ನಾಸಾ ವಿಜ್ನಾನಿ ಡಾ. ಅಮೇಲಿಯಾ ಬ್ರಾಂಡ್ (ಪ್ರೊಪೆಸರ್ ಜಾನ್ ಬ್ರಾಂಡ್ ಅವರ ಮಗಳು), ನಾಸಾ ಸದಸ್ಯ ಡೊಯ್ಲಿ ಹಾಗೂ ಪ್ರೊಪೆಸರ್ ರೊಮಿಲಿ ಈ ಹಮ್ಮುಗೆಗಾಗಿ (mission) ಬೂಮಿಯಿಂದ ಹೊರಡುತ್ತಾರೆ. ನಂತರ ಏನಾಗುತ್ತದೆ ಎಂಬುದೇ ಚಿತ್ರಕತೆ.

ತಾರಾಗಣದಲ್ಲಿ ಜಾನ್ ಕೂಪರ್ ಆಗಿ ಮ್ಯಾತೀವ್ ಮೆಕ್ ಕನಾಗಿ, ಡಾ. ಅಮೇಲಾ ಬ್ರಾಂಡ್ ಆಗಿ (2012 ರ ಡಾರ‍್ಕ್ ನೈಟ್ ರೈಸಸ್ ನಲ್ಲಿ ಕ್ಯಾಟ್ ಉಮನ್ ಆಗಿ ನಟಿಸಿದ್ದ) ಆನೆ ಹಾತ್ವೆ, ಮರ‍್ಪಿ (ಕೂಪರ್ ನ ಮಗಳು) ಆಗಿ ಜೆಸ್ಸಿಕ ಕಾಸ್ಟನ್, ಪ್ರೊಪೆಸರ್ ಜಾನ್ ಬ್ರಾಂಡ್ ಆಗಿ ಹೆಸರಾಂತ ನಟ ಮೈಕೆಲ್ ಕೇನ್ ಹಾಗೂ ಇತರರು ನಟಿಸಿದ್ದಾರೆ.

ಕ್ರಿಸ್ಟೋಪರ್ ನೋಲನ್ ಅವರ ನಿರ‍್ದೇಶನವಿರುವ ಈ ಚಿತ್ರಕ್ಕೆ, ಜೋನಾತನ್ ನೋಲನ್ ಅವರ ಚಿತ್ರಕತೆ, ಹೊಯ್ಟ್ ವಾನ್ ಹೊಯ್ಟಮಾ ಅವರ ಸಿನೆಮಾಟೋಗ್ರಪಿ, ಲೀ ಸ್ಮಿತ್ ಅವರ ಎಡಿಟಿಂಗ್ ಹಾಗೂ ಹನ್ಸ್ ಜಿಮ್ಮರ್ ಅವರ ಸಂಗೀತವಿದ್ದು. ಸಿನೆಮಾದ ಹೆಚ್ಚು ಪಾಲು ಚಿತ್ರೀಕರಣ ಜಾರ‍್ಜಿಯಾದ ಪೈನ್ ವುಡ್ ಅಟ್ಲಾಂಟ ಸ್ಟುಡಿಯೋದಲ್ಲಿ ನಡೆದಿದೆ. ಪ್ಯಾರಾಮೌಂಟ್, ವಾರ‍್ನರ್ ಬ್ರದರ್‍ಸ್, ಲೆಜೆಂಡರಿ ಪಿಕ್ಚರ‍್ಸ್, ಸಿಂಕಾಪಿ ಇಂಕ್ ಹಾಗೂ ಲಿಂಡಾ ಆಬ್ಸ್ಟ್ ಪ್ರೊಡಕ್ಶನ್ಸ್ ರವರು ಈ ಚಿತ್ರದ ನಿರ‍್ಮಾಣ ಮಾಡಿದ್ದು, ನವೆಂಬರ್ 7, 2014 ರಂದು ಈ ಚಿತ್ರ ಬಿಡುಗಡೆಯಾಗಿತ್ತು. 1,400 ಕೋಟಿ ವೆಚ್ಚದಲ್ಲಿ ನಿರ್‍ಮಿಸಲಾಗಿದ್ದ ಈ ಸಿನೆಮಾ, 6,000 ಕೋಟಿ ಗಳಿಸಿ ಆ ವರುಶದ ಅತಿಹೆಚ್ಚು ಗಳಿಕೆ ಕಂಡ ಸಿನೆಮಾಗಳ ಪಟ್ಟಿಯಲ್ಲಿ 10 ನೇ ಸ್ತಾನವನ್ನು ಪಡೆದಿತ್ತು.

ಇಡೀ ಸಿನೆಮಾ ನೋಡುಗನನ್ನು ಒಂದು ಹೊಸ ಮಾಯಾಲೋಕಕ್ಕೆ ಕರೆದೊಯ್ದು, ನೋಡುಗರೆಲ್ಲರೂ ಅಲ್ಲೇ ಕಳೆದು ಹೋಗಿದ್ದೇವೆಯೋ ಎನ್ನುವ ಬ್ರಾಂತಿಯನ್ನು ಮೂಡಿಸಿ, ಕೊನೆಗೆ ಬರುವ ಹಿನ್ನೆಲೆ ಸಂಗೀತ ನೋಡುಗರನ್ನು ಅಲ್ಲೇ ಮಗ್ನರನ್ನಾಗಿಸುತ್ತದೆ. ಈ ಅನುಬವಕ್ಕಾಗಿ ಐಮ್ಯಾಕ್ಸ್ ತಿಯೇಟರ್ ನಲ್ಲೇ ನೋಡುವುದು ಮುಕ್ಯ. 10 ವರುಶಗಳ ನಂತರ ಮಾರ‍್ಚ್ 14, 2025 ರಂದು ಇಂಟರ್ ಸ್ಟೆಲ್ಲಾರ್ ಮರು ಬಿಡುಗಡೆಯಾಗಿ ಬರ‍್ಜರಿ ಪ್ರದರ‍್ಶನ ಕಂಡಿದೆ.

(ಚಿತ್ರಸೆಲೆ: imdb.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *