ಜೀವನಕೆ ಜಬಾಬುದಾರ ಯಾರು?
ಬದುಕು ಬರವಸೆಗಳ ಸಾಗರ ಅನಂತ ಸುಕ-ದುಕ್ಕಗಳನ್ನು ಹೊತ್ತು ಸಾಗುವ ಬ್ರುಹದಾಕಾರದ ಹಡಗು. ಈ ಹಡಗು ಸಾಗರದ ಆಳ, ವಿಶಾಲತೆಯನ್ನು ಅರಿತಿದ್ದರೂ ಕೂಡ; ತನಗೆ ಎದುರಾಗುವ ಬಂಡೆಯಂತಹ ಅಲೆಗಳಿಗೆ ಸವಾಲೊಡ್ಡಿ ಪ್ರಯಾಣ ಮಾಡುತ್ತದೆ. ಪ್ರಕ್ರುತಿಯ ಆರ್ಬಟ ತೋರುವ ಸಮಯ-ಸಂದರ್ಬ ಅರಿತವರಾರು ? ಹಾಗೇ ನಮ್ಮ ಬದುಕಿನಲ್ಲಿ ಬರುವ ಬಂಡೆಯಂತಹ ಕಶ್ಟ ಕಾರ್ಪಣ್ಯಗಳು ನಮ್ಮನ್ನು ಕುಗ್ಗಿಸಲು ತಾ ಮುಂದು ನಾ ಮುಂದು ಎಂದು ಹಪಹಪಿಸುತ್ತವೆ. ನಮ್ಮ ಕಶ್ಟಗಳ ಆಳ-ಅಗಲ ಅರಿತಿರುವ ನಾವುಗಳು, ಅವುಗಳನ್ನು ತೂಕಬದ್ದವಾಗಿ ಅಳೆದು ತೂಗಿ ನಮ್ಮ ಸುಕಕರ ಪ್ರಯಾಣವನ್ನು ಮುಂದುವರೆಸುತ್ತಿರಬೇಕು. ಬದುಕು ಬಂಗಾರವಾಗಲು ಅದಕ್ಕೆ ಒಬ್ಬ ಜಬಾಬುದಾರ ಬೇಕು, ಆಗ ಅದು ಹಿಡಿತದ ಬದುಕು, ಪಕ್ವತೆಯ ಬದುಕಾಗುವುದು.
ಈ ಲೇಕನದ ಮುಕ್ಯ ಅಂಶವೇ “ಜಬಾಬುದಾರ”. ಇದು ಒಬ್ಬ ವ್ಯಕ್ತಿಯು ತನ್ನ ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಹೇಗೆ ಜವಾಬ್ದಾರನಾಗಬೇಕಾಗಿರುವುದು ಅತವಾ ಹೊಣೆಗಾರನಾಗಬೇಕಾಗಿರುವುದು ಎಂಬುದನ್ನು ಸೂಚಿಸುತ್ತದೆ. ಜವಾಬ್ದಾರಿಯ ಆಳಕ್ಕಿಳಿದಾಗ ನಾಗರಿಕ ಜವಾಬ್ದಾರಿ, ವ್ರುತ್ತಿಪರ ಜವಾಬ್ದಾರಿ, ಕುಟುಂಬದ ಜವಾಬ್ದಾರಿ, ಸಾಮಾಜಿಕ ಜವಾಬ್ದಾರಿ ಹಾಗೂ ಕಾನೂನು ಜವಾಬ್ದಾರಿ ಹೀಗೆ ಒಟ್ಟಾರೆಯಾಗಿ ಜವಾಬ್ದಾರಿ ಎಂಬುದು ವ್ಯಕ್ತಿಗಳು ಸಮಾಜ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿಬಾಯಿಸಲು ಸಹಾಯ ಮಾಡುವ ಒಂದು ಮುಕ್ಯವಾದ ಪರಿಕಲ್ಪನೆಯಾಗಿದೆ.
ನಮ್ಮ ಜೀವನ ಕೇವಲ ತುಸು ದಿನದ ಪ್ರಯಾಣವಾಗಿದ್ದು, ಅದನ್ನು ಸಾರ್ತಕವಾಗಿ ಬದುಕಬೇಕು. ಇದಲ್ಲದೆ, ಬೇರೆಯವರಿಗೆ ಮಾದರಿಯಾಗುವುದರ ಜೊತೆಗೆ ನಂಬಿಕೆ, ಪ್ರೀತಿ ಮತ್ತು ವಿಶ್ವಾಸವನ್ನು ಹೊತ್ತು ಬದುಕಿನ ಸಾರ್ತಕತೆಯ ದಡ ಸೇರಬೇಕು. ನಮ್ಮ ಬದುಕಿಗೆ ‘ಜಬಾಬುದಾರ’ರಾಗಿ ನಾವೇ ನಮ್ಮನ್ನು ವಹಿಸಿಕೊಂಡಾಗ ಮಾತ್ರ ಅದು ಸಪಲತೆಯ ಬದುಕಾದೀತು.
ಒಬ್ಬ ವ್ಯಕ್ತಿ ಬೇರೆಯವರ ರೀತಿ ನೀತಿಗಳನ್ನು ದ್ರುಶ್ಟಿಸಿ, ಅವರಂತೆ ನಾನು ಬದುಕಬೇಕೆಂದಾಗ ಜೀವನ ಚೊಟ್ಟಾಗಿ ಬಿಡುತ್ತದೆ. ಕಶ್ಟಕ್ಕೆ ಪ್ರತಿಕಶ್ಟಗಳನ್ನು ಮೈಮೇಲೆ ಹೊತ್ತುಕೊಂಡಾಗ ಬದುಕ ಪಯಣದಲಿ ಸಾಗಲು ಸಾದ್ಯವೇ? ನಾವು ನಮ್ಮನ್ನು ದ್ರುಶ್ಟಿಸಿಕೊಂಡು ‘ಹಾಸಿಗೆ ಇದ್ದಶ್ಟು ಕಾಲು ಚಾಚು’ ಎಂಬ ದೊಡ್ಡವರ ಮಾತಿನಂತೆ ಕೆಟ್ಟದನ್ನು ಕಿತ್ತೊಗೆದು ನಮ್ಮ ಇತಿ-ಮಿತಿಯೊಳಗೆ ‘ರುಚಿಗೆ ತಕ್ಕಶ್ಟು ಉಪ್ಪು’ ಎನ್ನುವ ಹಾಗೆ ಬದುಕಿಗೆ ಬೇಕಾದ ಸುಕ ಸಂತೋಶ, ವಿನಮ್ರತೆ ಸದಾ ನಮ್ಮಲ್ಲಿಟ್ಟುಕೊಂಡು ಸಾಗಿದಾಗ ಸಾಗರದಶ್ಟು ಸುಕವ ಕಾಣಲು ಸಾದ್ಯ.
ಮುಂದುವರೆದು, ಮುಗಿಲೆತ್ತರಕೆ ಏರಿಸಿ ಬಣ್ಣಿಸಿದರೂ ಅದು ತುಸುವೆನಿಸುವಂತೆ ಕಾಣುವ “ನಿಸರ್ಗದ” ಸೊಬಗಿನ ನಡುವೆ ಬದುಕುವ ನಮಗೆ ಮತ್ತು ಅದರ ಬಾಗವಾಗಿರುವ ನಮ್ಮ ಪೀಳಿಗೆಗೆ ಅದನ್ನು ಸಂರಕ್ಶಿಸುವುದು, ನಮ್ಮ ಆದ್ಯ ಕರ್ತವ್ಯವಾಗಿದೆ. ಎಶ್ಟೋ ಆಶೊತ್ತರಗಳನ್ನು ಹೊತ್ತು ಸಾಗುತ್ತಿರುವ ನಾವು ಸ್ವಾರ್ತಿಯಾಗುತ್ತಿದ್ದೇವೆ. ತಾತ್ಪರ್ಯವೇನೆಂದರೆ, ಈ ಜಗದಲ್ಲಿ ಒಂದಿಶ್ಟು ದಿನಗಳನ್ನು ಕಳೆದು ಹೋಗುವ ನಾವು, ಈ ಸುಂದರ ಬುವಿಯಲ್ಲಿ ಬದುಕಲು ಕಲಿಯುವ ಅನಿವಾರ್ಯ ಬಂದೊದಗಿದೆ. ಒಂಚೂರು ದಾರಿಯಲ್ಲಿ ನಡೆಯುವಾಗ ಕಸ-ಕಡ್ಡಿ ಕಂಡಾಗ, ಕಂಡೂ ಕಾಣದಂತೆ ಚಲಿಸುತ್ತೇವೆ. ಅದೇ ಮುಳ್ಳು ಬಂದಾಗ ಜಾಗ್ರುತರಾಗುತ್ತೇವೆ. ಅಂದರೆ, ಕಶ್ಟಗಳು, ಕೆಟ್ಟ ಸಂದರ್ಬಗಳು ನಮ್ಮ ಸ್ನೇಹಿತರಿದ್ದಂತೆ ಸದಾ ಜೊತೆಗಿರುತ್ತವೆ. ಅವುಗಳನ್ನು ಜಾಗೂರುಕತೆಯಿಂದ ನಿಬಾಯಿಸಿ ಬದುಕಿನ ಕಲಿಕೆಯ ಪಿ.ಹೆಚ್.ಡಿ ಪಡೆಯಬೇಕು.
ಶಿಕ್ಶಣವು ಬದುಕು ಸಾಗಿಸಲು ಬೇಕಾಗಿರುವ ದಾರಿಯಾಗಬಹುದಶ್ಟೆ. ನಾವುಗಳು ಅದರ ಜೊತೆಗೆ ಒಂದಿಶ್ಟು ಸಂಸ್ಕಾರ, ನಡೆ-ನುಡಿ ಮತ್ತು ಬದುಕುವ ಕಲೆಯನ್ನು ಕಲಿಯಬೇಕು. ತದನಂತರ ಜವಾಬ್ದಾರಿ ಅನ್ನುವುದು ಮುಕ್ಯವಾಗಿ ನಮ್ಮ ಯೋಗ್ಯತೆ ಮತ್ತು ಕಸುವುಗಳನ್ನು ಸೂಚಿಸುತ್ತದೆ. ಅದನ್ನು ಹೊರೆಯಾಗಿ ಬಾವಿಸದೆ ತುಸು ತಂಪಾದ ಪಾನಿಯದಂತೆ ಸೇವಿಸಿ, ಬದುಕಲಿ ಮುನ್ನಡೆಯಬೇಕು. ಬದುಕಲ್ಲಿ ಬಂದೊದುಗುವ ಸಂದರ್ಬವನ್ನು ನಿಬಾಯಿಸುವ ವಿವೇಚನಾ ಶಕ್ತಿ ನಮ್ಮ ತಲೆಯಲ್ಲಿ ಶೇಕಡ ನೂರರಶ್ಟಿರಬೇಕು. ಆಗ ಸರಾಗವಾಗಿ ಬಾಳ ಬಂಡಿ ಮುನ್ನಡೆಯುತ್ತದೆ. ಇನ್ನು, ಬೇರೆಯವರ ಮೇಲೆ ಅವಲಂಬಿತರಾಗದೆ ನಮ್ಮ ಜೀವನಕ್ಕೆ ಜವಾಬ್ದಾರರು ನಾವೇ, ಬದುಕಿಗೆ ಬರವಸೆ ಎಂಬ ಶಕ್ತಿಯೂ ನಾವೇ ಎಂಬುದನರಿತು ದಿನಕಳೆದರೆ, ಬದುಕು ಸಾರ್ತಕವಾದೀತು. ಜೀವನ ಎಂಬ ಮೂರಕ್ಶರದ ಶಬ್ದವನ್ನಶ್ಟೇ ಅರಿಯದೆ ಅದರ ಹುರುಳನ್ನು ಅರ್ತೈಸಿಕೊಂಡು ಬಾಳಬೇಕು. ನಮ್ತನವನ್ನು ಬದಿಗಿಟ್ಟು ಬೇತರೆಯವರನು ಬಣ್ಣಿಸುತ ದೂರ್ತನರಾಗದೆ ಸರ್ವಸಮ್ಮತದ ಮಾನವರಾಗಬೇಕಲ್ಲವೇ? ನಮ್ಮ ಜಬಾಬು ತಿಳಿಯದೆ ಕಾಲಹರಣದಿಂದ ಕಾಲ ಸವೆಯುತಿದೆ; ಇದಕ್ಕೆ ಉತ್ತರವಿಶ್ಟೆ, ಜೀವನದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವದು. ಅಂದರೆ ತನ್ನನ್ನು ತಾನು ಅರ್ತೈಸಿಕೊಂಡು, ತಾನು ಮಾಡಬೇಕಿರುವ ಸಾಮಾಜಿಕ, ನೈತಿಕ ಅತವಾ ಕಾನೂನುಬದ್ದ ಜವಾಬ್ದಾರಿಗಳ ಸಮ್ಮಿಶ್ರವನ್ನು ಪೋಣಿಸಿ ಸತ್ಕರ್ಮವೇ ಶ್ರೇಶ್ಟವೆಂದು, ಸಾಮರಸ್ಯದ ಬದುಕು ಸಾತ್ವಿಕತೆಯಿಂದ ಸಾನಂದವಾದಾಗ ಬದುಕು ಸಾಕಾರವಾಗುತ್ತದೆ. ಆಗ ಅದುವೇ ‘ಸಗ್ಗ’. ಅದುವೇ ಜಬಾಬುದಾರ ಸೂಕ್ತಿ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು