ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 12ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 12: ಕರ್ಣನ ಅಗಲಿಕೆಯ ಸಂಕಟ ***

 ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ದುರ್ಯೋಧನ ವಿಲಾಪಮ್’ ಎಂಬ ಹೆಸರಿನ 5 ನೆಯ ಅದ್ಯಾಯದ 27ನೆಯ ಪದ್ಯದಿಂದ 49ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ:
ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
ಕರ್ಣ: ಸೂರ್‍ಯನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ದುರ್ಯೋಧನನ ಒಲುಮೆಯ ಗೆಳೆಯ. ಅಂಗ ರಾಜ್ಯದ ಒಡೆಯ.

*** ಪ್ರಸಂಗ-12: ಕರ್ಣನ ಅಗಲಿಕೆಯ ಸಂಕಟ ***

ಕರಿ ತುರಗ ನರ ಕಳೇಬರ ಕರಾಳ ರಣರಂಗದಲ್ಲಿ ಬರೆವರೆ… ನರ ಕರ ವಿಮುಕ್ತ ಶರ ಜರ್ಜರಿತಾಂಗನನ್ ಅಂಗರಾಜನನ್ ಕುರುರಾಜನ್ ಕಂಡನ್… ಆಗಳ್ ಅದನ್ ಸಂಜಯನ್ ಕಂಡು…

ಸಂಜಯ: (ತನ್ನ ಮನದಲ್ಲಿ)

 ನಿಜಪ್ರಿಯತನೂಜಾನುಜರ ಶೋಕದಿಮ್ ವಿಹ್ವಳೀಕೃತನಪ್ಪ ಭೂಳೇಶ್ವರಂಗೆ ‘ಗಂಡಸ್ಯೋಪರಿ ಸ್ಫೋಟಕಮ್’ ಎಂಬಂತೆ ನಿಜಪ್ರಿಯಸಖನಪ್ಪ ಕರ್ಣನ ದರ್ಶನದಿಮ್ ದುಃಖಮ್ ಮರುಕೊಳಿಸುಗುಮ್.

 (ಎಂದು ಮನದೊಳೆ ಬಗೆದಿರೆ… ವಸುಧೆ ನುಂಗಿದುದಮ್ ವರೂಥಮಮ್ ನೆಗಪಿ… ಸಮಪಾದಶೋಭೆಯುಮ್ ಬಗೆಗೊಳೆ… ತನ್ನ ಮುನ್ ತೆಗೆದ ದಕ್ಷಿಣಮುಷ್ಟಿಯೆ ಕರ್ಣಮೂಲದೊಳ್ ಸೊಗಯಿಸೆ… ಪಾಳಿಯಮ್ ನೆರಪದೆ ಆಳ್ದನ ಕಜ್ಜಮನ್ ಒಕ್ಕು ಸತ್ತರಮ್ ನಗುವವೊಲ್… ಅಂಗಪತಿ ನಿಜೋನ್ನತ ಕೇತುದಂಡಮಮ್ ನೆಮ್ಮಿ ಇರ್ದನ್… ಅಂತಿರ್ದ ದಿನಕರತನೂಜನನ್ ರಾಜರಾಜನ್ ನೋಡಿ… ಬಾಷ್ಪವಾರಿ ಧಾರಾಪೂರಿತ ಲೋಚನನುಮ್… ಮನ್ಯೂದ್ಗತ ಕಂಠನುಮ್… ಅಸಹ್ಯ ಶೋಕಾನಲ ದಹ್ಯಮಾನ ಅಂತಃಕರಣನುಮಾಗಿ… .)

ದುರ್ಯೋಧನ: ಆನುಮ್ ದುಶ್ಶಾಸನನುಮ್ ನೀನುಮ್ ಮೂವರೆ ದಲ್… ಆತನುಮ್ ಕಳಿದ ಬಳಿಕ್ಕೆ… ಆನುಮ್ ನೀನೆ ದಲ್… ಈಗಳ್ ನೀನುಮ್ ಅಗಲ್ದು ಎತ್ತವೋದೆ ಅಂಗಾಧಿಪತಿ… ನಿನ್ನ ಮಗನ್ ವೃಷಸೇನನ್… ತನ್ನ ಮಗನ್ ಲಕ್ಷಣನುಮ್ ಅಣ್ಮಿ ಸತ್ತನ್… ನೀನ್ ಎನ್ನನ್ ಸಂತೈಸುವುದು…

ಆನ್ ನಿನ್ನನ್ ಸಂತೈಸೆ ಬಂದೆನ್ ಅಂಗಾಧಿಪತಿ… ನಿನ್ನ ಇಂದಿನ ತೆರನಮ್ ಇದನ್ ಅರಿಯೆನ್… ರವಿಸುತ, ನೀನ್ ಎನಗೆ ಅದೇಕೆ ಮುಳಿದಿರ್ಪೆಯೊ… ಮೇಣ್… ಮರುವಾತು ಕುಡದೆ ಮರಸುಂದು ಇರ್ದೆಪೆಯೊ… ಮೇಣ್… ಬಳಲ್ದು ಇರ್ದಪೆಯೋ… ..ನಿನ್ನ ಈ ಕೆಳೆಯ ಸುಯೋಧನನ್ ನೋಡದೆ… ನುಡಿಯದೆ… ಅಪ್ಪಿಕೊಳ್ಳದೆ… ಬೆಸನ್ ಏನ್ ಎನ್ನದೆ… ಜೀಯ ಎನ್ನದೆ… ದೇವ ಎನ್ನದೆ… ಏಕೆ ಉಸಿರದಿರ್ಪೆ ಅಂಗಾಧಿಪತಿ… ಅನೃತಮ್ ಲೋಭಮ್ ಭಯಮ್ ಎಂಬ ಇನಿತುಮ್ ನೀನ್ ಇರ್ದ ನಾಡೊಳ್ ಇರ್ಕುಮೆ…

ರವಿನಂದನ, ನನ್ನಿ ಚಾಗಮ್ ಅಣ್ಮು ಎಂಬ ಇನಿತರ್ಕಮ್ ನೀನೆ ಮೊತ್ತ ಮೊದಲಿಗನಾದಯ್… ನೀನ್ ಆರ್ಗೆ ಎಂದು ಆನ್ ಅರಿವೆನ್… ಪೃಥೆ ಅರಿವಳ್… ದಾನವ ರಿಪು ಅರಿವನ್… ಅರ್ಕನ್ ಅರಿವನ್… ದಿವ್ಯಜ್ಞಾನಿ ಸಹದೇವನ್ ಅರಿವನ್… ಆರುಮ್ ಅರಿಯರ್ ಅಂಗಾಧಿಪತಿ… ..ಒಡವುಟ್ಟಿದನ್ ಎಂದು ಅರಿದೊಡೆ… ಧರ್ಮತನಯನ್ ರಾಜ್ಯಮನೆ ನಿನಗೆ ಕುಡುಗುಮ್… ರಾಜ್ಯಕ್ಕೆ ಒಡೆಯನನ್ ಅರಿಯುತ್ತುಮ್ ಇರ್ದೆನ್ ಆನ್ ಕುಡಲಾರ್ತೆನಿಲ್ಲ…

ಅಂಗಾಧಿಪತಿ… ..ನೀನ್ ಉಳ್ಳೊಡೆ ಉಂಟು ರಾಜ್ಯಮ್… ನೀನ್ ಉಳ್ಳೊಡೆ ಪಟ್ಟಮುಂಟು… ಬೆಳ್ಗೊಡೆ ಉಂಟಯ್… ನೀನ್ ಉಳ್ಳೊಡೆ ಉಂಟು ಪೀಳಿಗೆ… ನೀನಿಲ್ಲದೆ ಇವೆಲ್ಲಮ್ ಒಳವೆ ಅಂಗಾಧಿಪತೀ… .ಹರಿ ಬೇಡೆ ಕವಚಮನ್ ನೀನ್ ಅರಿದಿತ್ತಯ್… ಕೊಂತಿ ಬೇಡೆ ಬೆಚ್ಚದೆ ಪುರಿಗಣೆಯನ್ ಕೊಟ್ಟಯ್… ನಿನಗೆ ಎಣೆ ಕಸವರಗಲಿ ಮೆಯ್ಗಲಿಯುಮ್ ಆವನ್ ಅಂಗಾಧಿಪತಿ… .ನಯನದೊಳಮ್ ಎರ್ದೆಯೊಳಮ್ ನಿನ್ನಯ ರೂಪು ಇರ್ದಪುದು… ನಿನ್ನ ಮಾತು ಎನ್ನಯ ಕಿವಿಯೊಳಗೆ ಇರ್ದಪುದು… ಇನನಂದನ, ವಿಯೋಗಮ್ ಎಂತು ಆದುದು ಅರಿಯೆನ್… ಅಂಗಾಧಿಪತಿ, ನಿನ್ನನ್ ಕೊಂದ ಕಿರೀಟಿಯುಮ್ … ಎನ್ನ ಅನುಜನನ್ ಇಕ್ಕಿ ಕೊಂದ ಭೀಮನುಮ್ ಒಳನ್… ಆನ್ ಇನ್ನುಮ್ ಒಳೆನ್… ನಿನ್ನಯ ಕೂರ್ಮೆಗಮ್ ಅದೆನ್ನ ಸೌಧರ್ಮಿಕೆಗಮ್ ಗಡ ಸಾಲದೆ… ಇಂದು ಆನ್ ಆದೆನ್… ಮೇಣ್… ಪಾಂಡುತನಯರಾದರ್… ಇನನಂದನ ಕೇಳ್, ನಿನ್ನನ್ ಕೊಂದುಮ್ ದುಶ್ಶಾಸನನನ್ ಕೊಂದುಮ್ ಬರ್ದುಕುವರೆ… ಬರ್ದುಕರ್ ಅಂಗಾಧಿಪತೀ…

 (ಎಂದು ವಿಪ್ರಲಾಪಮ್ ಗೆಯ್ದು…)

ದುರ್ಯೋಧನ: ಇನಸುತನ ಇರವಮ್ ದುಶ್ಶಾಸನನ ಇರವಮ್ ಕಂಡುಮ್ ಇನ್ನುಮ್ ಎನ್ನ ಅಸುವಿದು ನೆಟ್ಟನೆ ಪೋದುದಿಲ್ಲ… ಕಲ್ಲೆರ್ದೆತನದಿಂದೆ ಎನ್ನಂತು ಬರ್ದನ್ ಆವನುಮ್ ಒಳನೇ…

(ಎಂದು ತನ್ನನ್ ತಾನೆ ನಿಂದಿಸಿಕೊಂಡು…)

ದುರ್ಯೋಧನ: ವಿಧಾತ್ರ, ಸೂನುಗಳ ಅಳಿವಮ್… ಪ್ರಿಯಮಿತ್ರ ಅನುಜರ ಅಳಿವಮ್… ನೀನ್ ಕಾಣಿಸಿ ಮುಂದೆ ಏನನ್ ಕಾಣಿಸಲಿರ್ದಪೆ… ನೀನ್ ಎನ್ನನ್ ಪಾಪಕರ್ಮನನ್ ನಿರ್ಗುಣನನ್…

 (ಎಂದು ವಿಧಾತ್ರಂಗೆ ಪಲುಂಬಿ… ರಾಧಾನಂದನನ ಮೊಗಮಮ್ ನೋಡಿ ಸಂಜಯನನ್ ಇಂತು ಎಂದನ್… )

ದುರ್ಯೋಧನ: ಆರೊಡನೆ ನುಡಿವೆನ್… ಅಳ್ತಿಯೊಳ್ ಆರೊಡನೆ ಓಲಗದೊಳ್ ಇರ್ಪೆನ್… ಆರೊಡನೆ ಸಮಂತು ಆರೋಗಿಪೆನ್… ಎನ್ನ ಅಣುಗರಿಲ್ಲದೆ ಇಭ ವಾಜಿಗಳಮ್ ಆನ್ ಆರೊಡನೆ ಏರುವೆನ್ … .ಕೆಳಯಂಗೆ ಅಸುಮೋಕ್ಷಮ್ ಆಯ್ತು… ಎನಗಮ್ ಬಾಷ್ಪಾಂಬುಮೋಕ್ಷಮ್ ಆಗದು… ಧರಾತಳಮನ್ ಇವನ್ ಕೊಟ್ಟನ್… ನಾನ್ ಜಳಾಂಜಳಿಯುಮಮ್ ಕೊಟ್ಟೆನಿಲ್ಲ… ಇವನ್ ಪ್ರತಾಪಶಿಖಿಯಿಂದೆ ಅನ್ಯಮಂಡಳಮಮ್ ಸುಟ್ಟನ್ … ಆನ್ ಈತನನ್ ಸತ್ಕ್ರಿಯಾನಳನಿಮ್ ಸುಟ್ಟೆನುಮಿಲ್ಲ… ಮತ್ ಪ್ರಿಯತಮನ್ ಕರ್ಣಂಗೆ ಇದೇನ್ ಕೂರ್ತೆನೋ..

 (ಎಂಬುದುಮ್… ಸಂಜಯನ್ ಇಂತು ಎಂದನ್.)

ಸಂಜಯ: ದೇವಾ, ನೀಮ್ ಇಂತೇಕೆ ಪಳಯಿಸುವಿರ್… ಕುರುಕುಲದರ್ಪಣ, ಜಲದಾನಕ್ರಿಯೆಯಮ್ ದೃಗ್ ಜಲದಿಮ್… ದಹನಕ್ರಿಯೆಯಮ್ ಕೋಪಾಗ್ನಿಯಿಂದೆ ಕೆಳೆಯಂಗೆ ಮಾಡಿದಯ್… ಇನ್ ಅಹರ್ಪತಿ ಸುತನನ್ ಮರೆವುದು … .ಪೆಂಡಿರ್ ಪಳಿಯಿಸುವ ಅಂದದೆ ಗಂಡರ್ ಪಳಯಿಸಿದೊಡೆ… ಆಯಮಮ್ ಛಲಮಮ್ ಕಯ್ ಕೊಂಡು ಎಸಪರಾರೊ… ಕುರುಕುಲಮಂಡನ, ನೀನ್ ಎತ್ತಿಕೊಂಡ ಛಲಮನೆ ಮೆರೆಯಾ…

(ಎಂದು ಸಂಜಯ ನುಡಿದ ನುಡಿಯನ್ ಅವಧಾರಿಸಿ… .)

ದುರ್ಯೋಧನ: ದರಹಾಸಪೇಶಲಮ್ ದಿಕ್ಕರಿಗಮನಮ್ ಕನಕಪರ್ವತಪ್ರಾಂಶು ದಿನೇಶ್ವರಸುತನ ರೂಪು ಎನ್ನಾ ಚಿತ್ತಭಿತ್ತಿಯೊಳ್ ಚಿತ್ರಮ್ ಬರೆದಂತೆ ಇರ್ದಪುದು… ದೀಕ್ಷಾವಿಧಿಗಳ್ಗೆ ಗುರು… ಹಿತಕಾರ್ಯ ಆಳೋಚನಕ್ಕೆ ಮಂತ್ರಿ… ಉರ್ವರೆಯಮ್ ಕಾವ ಗುಣಕ್ಕೆ ಆಳ್ದನ್ … ಕ್ರೀಡಾರಸಕ್ಕೆ ನರ್ಮ ಸಚಿವನ್… ಗುರುಭಾರಕ್ಕೆ ಆನೆಯಾಳ್ … ರಣಕ್ಕೆ ಇರಿವಾಳ್… ಕಟ್ಟಾಯದೊಳ್ ತುಳಿಲಾಳ್… ಪರಿಹಾಸಕ್ಕೆ ಮೇಳದಾಳ್ ಎನಿಸಿರ್ದನ್… ದುರ್ಯೋಧನನ್ ಕರ್ಣನನ್ ಎಂತು ಮರೆವನ್.

(ಎಂದು ಶೋಕಾಂಧನ್ ಕರ್ಣವಿರಹಿತನ್ ಅಪ್ಪುದರಿಮ್ ಸಂಕ್ರಂದನನಂದನಂಗೆ ಮುಳಿದು…)

ದುರ್ಯೋಧನ: ತರಣಿತನಯ ಆನನೇಂದು ಸ್ಮರಣದೆ ಕಯ್ಗಣ್ಮುವ ಎನ್ನ ಶೋಕಮಹಾಸಾಗರಮಮ್ ಭೀಕರ ಮತ್ ಕೋಪಾಗ್ನಿ ಬಾಡಬಾಗ್ನಿಯ ತೆರದಿಮ್… ತವೆ ಪೀರ್ದುದು…

(ಎಂದು ಶೋಕರಸಮಮ್ ಕೋಪರಸದ ಮೇಲಿಕ್ಕಿ ಮಾರ್ಪಡೆ ಎಯ್ತರ್ಪುದಮ್ ನೋಡಿ ನಡೆವ ದಂದಶೂಕಪತಾಕನ ಮುಳಿಸಿನಂದಮನ್ ಅರಿದು ಸಂಜಯನ್ ಎಂದನ್… )

ಸಂಜಯ: ಎಲೆ ದೇವಾ, ಭೀಷ್ಮರ್ ಇತ್ತಲ್ ಇರ್ದಪರ್ ಇತ್ತ ಬಿಜಯಂಗೆಯ್ಯಿಮ್ . ಎಂತುಮ್ ನಿಜ ಗುರುಜನ ಪ್ರಾರ್ಥನಾಭಂಗಮ್ ಮಾಡಲಾಗದು. ಇನ್ ನೀನ್ ನೆಗಳ್ವ ಕಜ್ಜಮ್ ಆವುದುಮಮ್… ನಿಮ್ಮಜ್ಜನೊಳ್ ಆಳೋಚಿಸಿ ನೆಗಳ್ವುದು.

(ಎಂದು ಪೇಳ್ವುದುಮ್… ಸಂಜಯನ ಮಾತನ್ ಮೀರದೆ… ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದವಂದನಮ್ ಗೆಯ್ಯಲೆಂದು ಗಾಂಧಾರಿಯ ನಂದನನ್ ಎಯ್ದೆವಂದು… ಗಂಗಾನದೀ ನಂದನನನ್ ಕಂಡು…)

ಪದ ವಿಂಗಡಣೆ ಮತ್ತು ತಿರುಳು: ಕರ್‍ಣನ ಅಗಲಿಕೆಯ ಸಂಕಟ

ಕರಿ=ಆನೆ; ತುರಗ=ಕುದುರೆ; ಕರಾಳ=ಬಯಂಕರವಾದ;

ಕರಿ ತುರಗ ನರ ಕಳೇಬರ ಕರಾಳ ರಣರಂಗದಲ್ಲಿ ಬರೆವರೆ=ಆನೆ ಕುದುರೆ ಮತ್ತು ಮಾನವರ ಹೆಣಗಳು ಗುಂಪುಗುಂಪಾಗಿ ಕೆಡೆದು ಬಿದ್ದಿದ್ದ ಬಯಂಕರವಾದ ಕುರುಕ್ಶೇತ್ರ ರಣರಂಗದಲ್ಲಿ ದುರ್‍ಯೋದನನು ಸಂಜಯನ ಜತೆಗೂಡಿ ರಣ ಬೂಮಿಯಲ್ಲಿ ಶರಮಂಚದ ಮೇಲೆ ಮಲಗಿರುವ ಬೀಶ್ಮರನ್ನು ನೋಡಲೆಂದು ಬರುತ್ತಿರಲು;

ನರ=ಅರ್‍ಜುನ; ಕರ=ಹಸ್ತ/ಕಯ್; ವಿಮುಕ್ತ=ಬಿಟ್ಟ/ಪ್ರಯೋಗಿಸಿದ; ಜರ್ಜರಿತ+ಅಂಗನನ್; ಅಂಗ=ದೇಹ/ಶರೀರ;

ನರ ಕರ ವಿಮುಕ್ತ ಶರ ಜರ್ಜರಿತಾಂಗನನ್ ಅಂಗರಾಜನನ್ ಕುರುರಾಜನ್ ಕಂಡನ್=ಅರ್‍ಜುನನು ಬಿಟ್ಟ ಬಾಣಗಳ ಪೆಟ್ಟಿನಿಂದ ಚಿದ್ರಚಿದ್ರಗೊಂಡ ದೇಹದ ಕರ್‍ಣನನ್ನು ದುರ್‍ಯೋದನನು ನೋಡಿದನು;

ಆಗಳ್ ಅದನ್ ಸಂಜಯನ್ ಕಂಡು=ಆಗ ಅದನ್ನು ಸಂಜಯನು ನೋಡಿ; ಗಂಡಸ್ಯೋಪರಿ ಸ್ಫೋಟಕ=ಕುರುವಿನ ಮೇಲೆ ಬೊಕ್ಕೆ/ಗಾಯದ ಮೇಲೆ ಹುಣ್ಣು;

ನಿಜ=ತನ್ನ; ಪ್ರಿಯ+ತನುಜ+ಅನುಜರ; ತನುಜ=ಮಗ; ಅನುಜ=ತಮ್ಮ; ವಿಹ್ವಳೀಕೃತನ್+ಅಪ್ಪ; ವಿಹ್ವಳ=ಸಂಕಟಕ್ಕೆ ಒಳಗಾದ;

ನಿಜಪ್ರಿಯ ತನೂಜಾನುಜರ ಶೋಕದಿಮ್ ವಿಹ್ವಳೀಕೃತನಪ್ಪ ಭೂತಳೇಶ್ವರಂಗೆ=ತನ್ನ ಪ್ರೀತಿಪಾತ್ರರಾದ ಮಕ್ಕಳನ್ನು ಮತ್ತು ತಮ್ಮಂದಿರನ್ನು ಕಳೆದುಕೊಂಡು ಶೋಕದಿಂದ ತತ್ತರಿಸುತ್ತಿರುವ ದುರ್‍ಯೋದನನಿಗೆ;

‘ಗಂಡಸ್ಯೋಪರಿ ಸ್ಫೋಟಕಮ್’ ಎಂಬಂತೆ ನಿಜಪ್ರಿಯಸಖನಪ್ಪ ಕರ್ಣನ ದರ್ಶನದಿಮ್ ದುಃಖ ಮರುಕೊಳಿಸುಗುಮ್ ಎಂದು ಮನದೊಳೆ ಬಗೆದಿರೆ= “ಗಾಯದ ಮೇಲೆ ಹುಣ್ಣು” ಆದಂತೆ ತನ್ನ ಒಲುಮೆಯ ಗೆಳೆಯನಾದ ಕರ್‍ಣನ ಕಳೇಬರನ್ನು ಕಂಡಿದ್ದರಿಂದ ಸಂಕಟವು ಇಮ್ಮಡಿಗೊಳ್ಳುತ್ತದೆ ಎಂದು ಸಂಜಯನು ತನ್ನ ಮನದಲ್ಲಿಯೇ ಅಂದುಕೊಳ್ಳುತ್ತಿರಲು;

ಅಂಗಪತಿ=ಅಂಗರಾಜ್ಯದ ರಾಜನಾದ ಕರ್‍ಣ; ವಸುಧೆ=ಬೂಮಿ; ವರೂಥ=ತೇರು; ನೆಗಪಿ=ಮೇಲಕ್ಕೆತ್ತಿ;

ಅಂಗಪತಿ ವಸುಧೆ ನುಂಗಿದುದಮ್ ವರೂಥಮಮ್ ನೆಗಪಿ=ಕರ್‍ಣನು ರಣರಂಗದ ನೆತ್ತರಿನ ಕೆಸರಿನಲ್ಲಿ ಸಿಲುಕಿದ್ದ ತೇರಿನ ಚಕ್ರವನ್ನು ಮೇಲಕ್ಕೆತ್ತಿ ಸಮತಟ್ಟಾದ ಗಟ್ಟಿನೆಲೆಯಲ್ಲಿ ನಿಲ್ಲಿಸಿ;

ಸಮಪಾದಶೋಭೆಯುಮ್ ಬಗೆಗೊಳೆ=ಪಾದಗಳೆರಡನ್ನು ಸಮಾನವಾಗಿ ಊರಿ ಮನೋಹರವಾದ ಬಂಗಿಯಲ್ಲಿ ನಿಂತುಕೊಂಡು;

ದಕ್ಷಿಣ=ಬಲಗಡೆ;

ತನ್ನ ಮುನ್ ತೆಗೆದ ದಕ್ಷಿಣಮುಷ್ಟಿಯೆ ಕರ್ಣಮೂಲದೊಳ್ ಸೊಗಯಿಸೆ=ಹಗೆಯಾದ ಅರ್‍ಜುನನನ್ನು ಕೊಲ್ಲಲೆಂದು ಬಿಲ್ಲಿನ ಹೆದೆಗೆ ಬಾಣವನ್ನು ಹೂಡಿ ಎಳೆದ ಬಲಗಡೆಯ ಮುಷ್ಟಿಯು ಕಿವಿಯ ತುದಿಯವರೆಗೂ ಬಂದಿರಲು;

ಪಾಳಿಯಮ್ ನೆರಪದೆ ಆಳ್ದನ ಕಜ್ಜಮನ್ ಒಕ್ಕು ಸತ್ತರಮ್ ನಗುವವೊಲ್=ಸ್ವಾಮಿಕಾರ್‍ಯವನ್ನು ಮಾಡದೆ, ಒಡೆಯನ ಕೆಲಸವನ್ನು ಕಡೆಗಣಿಸಿ ಸಾವನ್ನಪ್ಪಿದವರನ್ನು ಅಣಕಿಸುವಂತೆ;

ಕೇತು=ಬಾವುಟ;

ನಿಜೋನ್ನತ ಕೇತುದಂಡಮಮ್ ನೆಮ್ಮಿ ಇರ್ದನ್=ಕರ್‍ಣನು ತನ್ನ ಉನ್ನತವಾದ ಬಾವುಟದ ಕೋಲನ್ನು ಒರಗಿಕೊಂಡಿದ್ದನು;

ದಿನಕರತನೂಜ=ಸೂರ್‍ಯನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು, ಕರ್‍ಣ;

ಅಂತಿರ್ದ ದಿನಕರತನೂಜನನ್ ರಾಜರಾಜನ್ ನೋಡಿ=ಆ ರೀತಿ ಹೋರಾಟದ ಬಂಗಿಯಲ್ಲಿಯೇ ನಿಂತಿದ್ದ ಕರ್‍ಣನ ಕಳೇಬರವನ್ನು ದುರ್‍ಯೋದನನು ನೋಡಿ;

ಬಾಷ್ಪವಾರಿ ಧಾರಾಪೂರಿತ ಲೋಚನನುಮ್= ಕಣ್ಣುಗಳಲ್ಲಿ ಒಂದೇ ಸಮನೆ ಕಂಬನಿಯು ಹರಿಯುತ್ತಿರಲು;

ಮನ್ಯೂದ್ಗತಕಂಠನುಮ್=ಉಕ್ಕಿಬಂದ ಸಂಕಟದಿಂದ ಕೊರಳು ಕಟ್ಟಿದಂತಾಗಿರಲು;

ಅಸಹ್ಯಶೋಕಾನಲ ದಹ್ಯಮಾನ ಅಂತಃಕರಣನುಮಾಗಿ=ತಡೆಯಲಾರದ ಸಂಕಟದ ಬೇಗೆಯಲ್ಲಿ ಬೇಯುತ್ತ, ಮನದಲ್ಲಿ ತೀವ್ರವಾದ ನೋವುಳ್ಳವನಾಗಿ;

ದಲ್=ನಿಜವಾಗಿ/ನಿಸ್ಸಂದೇಹವಾಗಿ;

ಆನುಮ್ ದುಶ್ಶಾಸನನುಮ್ ನೀನುಮ್ ಮೂವರೆ ದಲ್=ನಾನು, ದುಶ್ಶಾಸನ ಮತ್ತು ನೀನು-ಮೂವರೆ ನಿಜವಾಗಿಯೂ ಈ ಜಗತ್ತಿನಲ್ಲಿ ಆತ್ಮೀಯರಾಗಿದ್ದವರು;

ಆತನುಮ್ ಕಳಿದ ಬಳಿಕ್ಕೆ=ಆತನು ಸಾವನ್ನಪ್ಪಿದ ಬಳಿಕ;

ಆನುಮ್ ನೀನೆ ದಲ್=ಕಂಡೆಯಾ… ನಾನು ನೀನು ಇಬ್ಬರು ಉಳಿದುಕೊಂಡೆವು;

ಅಂಗ+ಅಧಿಪತಿ; ಅಂಗಾಧಿಪತಿ=ಅಂಗ ಎಂಬ ದೇಶದ ಒಡೆಯನಾದ ಕರ್‍ಣ;

ಈಗಳ್ ನೀನುಮ್ ಅಗಲ್ದು ಎತ್ತವೋದೆ ಅಂಗಾಧಿಪತಿ=ಈಗ ನೀನು ನನ್ನನ್ನು ತೊರೆದು ಎತ್ತ ಹೋದೆ ಕರ್‍ಣಾ;

ಅಣ್ಮು=ಪರಾಕ್ರಮವನ್ನು ತೋರಿಸು;

ನಿನ್ನ ಮಗನ್ ವೃಷಸೇನನ್ ತನ್ನ ಮಗನ್ ಲಕ್ಷಣನುಮ್ ಅಣ್ಮಿ ಸತ್ತನ್=ನಿನ್ನ ಮಗ ವ್ರುಶಸೇನ ಮತ್ತು ನನ್ನ ಮಗ ಲಕ್ಶಣನು-ಇಬ್ಬರೂ ಕುರುಕ್ಶೇತ್ರ ರಣರಂಗದಲ್ಲಿ ಪರಾಕ್ರಮದಿಂದ ಹೋರಾಡುತ್ತ ಸಾವನ್ನಪ್ಪಿದರು;

ಅಂಗಾಧಿಪತಿ, ನೀನ್ ಎನ್ನನ್ ಸಂತೈಸುವುದು… ಆನ್ ನಿನ್ನನ್ ಸಂತೈಸೆ ಬಂದೆನ್=ಕರ್‍ಣನೇ, ನೀನು ನನ್ನನ್ನು ಸಮಾದಾನಪಡಿಸಬೇಕು… ನಾನು ನಿನ್ನನ್ನು ಸಮಾದಾನಪಡಿಸಲೆಂದು ನಿನ್ನ ಬಳಿಗೆ ಬಂದೆನು;

ರವಿಸುತ, ನಿನ್ನ ಇಂದಿನ ತೆರನಮ್ ಇದನ್ ಅರಿಯೆನ್=ಕರ್‍ಣನೇ, ನನ್ನನ್ನು ಕಂಡರೂ ಕಾಣದಂತಿರುವ ನಿನ್ನ ಇಂದಿನ ರೀತಿಯು ನನಗೆ ತಿಳಿಯುತ್ತಿಲ್ಲ;

ಮುಳಿ=ಕೆರಳು/ಕೋಪಗೊಳ್ಳು; ಮೇಣ್=ಇಲ್ಲವೇ; ಮರು+ಮಾತು; ಮರುವಾತು=ಪ್ರತಿಯಾಗಿ ಮಾತನಾಡುವುದು; ಮರಸುಂದು=ಮಯ್ ಮರೆತು ಮಲಗು;

ನೀನ್ ಎನಗೆ ಅದೇಕೆ ಮುಳಿದಿರ್ಪೆಯೊ ಮೇಣ್ ಮರುವಾತು ಕುಡದೆ ಮರಸುಂದು ಇರ್ದೆಪೆಯೊ ಮೇಣ್… ಬಳಲ್ದು ಇರ್ದಪೆಯೋ=ನೀನು ನನ್ನ ಬಗ್ಗೆ ಅದೇಕೆಕೋಪಿಸಿಕೊಂಡಿರುವೆಯೋ… ಇಲ್ಲವೇ… ನನ್ನ ಮಾತುಗಳಿಗೆ ಪ್ರತಿಯಾಗಿ ಮರುಮಾತನಾಡದೆ ಮಯ್ ಮರೆತಿರುವೆಯೋ ಇಲ್ಲವೇ ಬಳಲಿಕೆಯಿಂದ ನಿತ್ರಾಣಗೊಂಡಿರುವೆಯೋ;

ಬೆಸನ=ಕೆಲಸ;

ಅಂಗಾಧಿಪತಿ, ನಿನ್ನ ಈ ಕೆಳೆಯ ಸುಯೋಧನನ್ ನೋಡದೆ… ನುಡಿಯದೆ… ಅಪ್ಪಿಕೊಳ್ಳದೆ… ಬೆಸನ್ ಏನ್ ಎನ್ನದೆ… ಜೀಯ ಎನ್ನದೆ… ದೇವ ಎನ್ನದೆ… ಏಕೆ ಉಸಿರದಿರ್ಪೆ=ಕರ್‍ಣಾ, ನಿನ್ನ ಜೀವದ ಗೆಳೆಯನಾದ ಈ ದುರ್‍ಯೋದನನನ್ನು ನೋಡದೆ… ಮಾತನಾಡಿಸದೆ… ತಬ್ಬಿಕೊಳ್ಳದೆ… ಬಂದ ಕೆಲಸವೇನು ಎಂದು ವಿಚಾರಿಸದೆ… ಒಡೆಯ ಎನ್ನದೆ… ದೇವ ಎನ್ನದೆ… ಏಕೆ ಏನನ್ನೂ ಮಾತನಾಡದಿರುವೆ;

ಅನೃತ=ಸುಳ್ಳು; ಲೋಭ=ಜಿಪುಣತನ; ರವಿನಂದನ

ಅನೃತಮ್ ಲೋಭಮ್ ಭಯಮ್ ಎಂಬ ಇನಿತುಮ್ ನೀನ್ ಇರ್ದ ನಾಡೊಳ್ ಇರ್ಕುಮೆ=ರವಿನಂದನ… ಸುಳ್ಳು-ಜಿಪುಣತನ-ಅಂಜಿಕೆ ಎಂಬ ಸಣ್ಣತನದ ನಡೆನುಡಿಗಳು ನೀನಿರುವ ನಾಡಿನಲ್ಲಿ ಇರುತ್ತವೆಯೇ; ಅಂದರೆ ಸೂರ್‍ಯನು ಬೆಳಗುವ ಎಡೆಯಲ್ಲಿ ಕತ್ತಲು ಹೇಗೆ ಇರುವುದಿಲ್ಲವೋ ಅಂತೆಯೇ ನೀನಿರುವ ಎಡೆಯಲ್ಲಿ ಇಂತಹ ನೀಚಗುಣಗಳಿಗೆ ಎಡೆಯಿಲ್ಲ;

ನನ್ನಿ=ಸತ್ಯ/ನಿಜ; ಚಾಗ=ತ್ಯಾಗ; ಅಣ್ಮು=ಪರಾಕ್ರಮ;

ನನ್ನಿ ಚಾಗಮ್ ಅಣ್ಮು ಎಂಬ ಇನಿತರ್ಕಮ್ ನೀನೆ ಮೊತ್ತಮೊದಲಿಗನಾದಯ್=ಸತ್ಯ-ತ್ಯಾಗ-ಪರಾಕ್ರಮ ಎಂಬ ಒಳ್ಳೆಯ ಗುಣಗಳ ಆಚರಣೆಯಲ್ಲಿ ನೀನೆ ಮೊತ್ತ ಮೊದಲಿಗನಾಗಿರುವೆ;

ನೀನ್ ಆರ್ಗೆ ಎಂದು ಆನ್ ಅರಿವೆನ್=ನಿನ್ನ ತಾಯಿ ತಂದೆ ಯಾರೆಂಬುದನ್ನು ನಾನು ತಿಳಿದಿದ್ದೇನೆ;

ಪೃಥೆ ಅರಿವಳ್=ಕುಂತಿಗೆ ಗೊತ್ತಿದೆ;

ದಾನವ+ರಿಪು; ದಾನವ=ರಕ್ಕಸ; ರಿಪು=ಶತ್ರು; ದಾನವರಿಪು=ರಕ್ಕಸರ ಶತ್ರುವಾದ ಕ್ರಿಶ್ಣ;

ದಾನವರಿಪು ಅರಿವನ್=ಕ್ರಿಶ್ಣನಿಗೆ ಗೊತ್ತಿದೆ;

ಅರ್ಕನ್ ಅರಿವನ್=ಸೂರ್‍ಯದೇವನಿಗೆ ಗೊತ್ತಿದೆ;

ದಿವ್ಯಜ್ಞಾನಿ ಸಹದೇವನ್ ಅರಿವನ್=ಉತ್ತಮ ತಿಳುವಳಿಕೆಯುಳ್ಳ ಸಹದೇವನಿಗೆ ಗೊತ್ತಿದೆ;

ಆರುಮ್ ಅರಿಯರ್=ಈ ಅಯ್ದು ಮಂದಿಯನ್ನು ಬಿಟ್ಟರೆ, ಇನ್ನು ಯಾರಿಗೂ ನಿನ್ನ ನಿಜವಾದ ತಾಯಿತಂದೆ ಯಾರೆಂಬುದು ಗೊತ್ತಿಲ್ಲ;

ಅಂಗಾಧಿಪತಿ ಒಡವುಟ್ಟಿದನ್ ಎಂದು ಅರಿದೊಡೆ… ಧರ್ಮತನಯನ್ ರಾಜ್ಯಮನೆ ನಿನಗೆ ಕುಡುಗುಮ್=ಅಂಗರಾಜ್ಯದ ಒಡೆಯನಾದ ಕರ್‍ಣನು ನನ್ನ ಒಡಹುಟ್ಟಿದವನು ಎಂಬ ಸಂಗತಿಯು ಗೊತ್ತಾದರೆ ದರ್‍ಮರಾಯನು ತನ್ನ ಪಾಲಿನ ರಾಜ್ಯವನ್ನೇ ನಿನಗೆ ಕೊಡುತ್ತಾನೆ;

ರಾಜ್ಯಕ್ಕೆ ಒಡೆಯನನ್ ಅರಿಯುತ್ತುಮ್ ಇರ್ದೆನ್… ಆನ್ ಕುಡಲಾರ್ತೆನಿಲ್ಲ=ಹಸ್ತಿನಾವತಿಯ ರಾಜಕುಮಾರರಾದ ಕೌರವರು ಮತ್ತು ಪಾಂಡವರಲ್ಲಿ ಎಲ್ಲರಿಗಿಂತಲೂ ಹಿರಿಯವನಾದ ನೀನೇ ಸಿಂಹಾಸನದ ಪಟ್ಟಕ್ಕೆ ಹಕ್ಕುಳ್ಳ ಒಡೆಯನೆಂದು ನನಗೆ ತಿಳಿದಿದ್ದರೂ ನಿನಗೆ ನಾನು ರಾಜ ಪದವಿಯನ್ನು ಬಿಟ್ಟುಕೊಡಲಿಲ್ಲ;

ಅಂಗಾಧಿಪತಿ… ನೀನ್ ಉಳ್ಳೊಡೆ ಉಂಟು ರಾಜ್ಯಮ್… ನೀನ್ ಉಳ್ಳೊಡೆ ಪಟ್ಟಮುಂಟು… ಬೆಳ್ಗೊಡೆ ಉಂಟಯ್… ನೀನ್ ಉಳ್ಳೊಡೆ ಉಂಟು ಪೀಳಿಗೆ… ನೀನಿಲ್ಲದೆ ಇವೆಲ್ಲಮ್ ಒಳವೆ=ಅಂಗರಾಜ್ಯದ ಒಡೆಯನೇ… ನೀನು ಇದ್ದರೆ ನನ್ನ ಪಾಲಿಗೆ ಈ ರಾಜ್ಯ… ಈ ಪಟ್ಟ… ಈ ಬೆಳ್ಗೊಡೆ… ಈ ರಾಜವಂಶವೆಂಬುದೆಲ್ಲವೂ ಇರುತ್ತವೆ.ನೀನೇ ಇಲ್ಲದೆ ಇವೆಲ್ಲವೂ ಇರುವುವೇ. ಅಂದರೆ ನೀನಿಲ್ಲದ ಈ ಜಗತ್ತಿನಲ್ಲಿ ಈಗ ನನ್ನ ಪಾಲಿಗೆ ಇವು ಇದ್ದು ಇಲ್ಲದಂತಾಗಿವೆ;

ಹರಿ ಬೇಡೆ ಕವಚಮನ್ ನೀನ್ ಅರಿದಿತ್ತಯ್=ಕ್ರಿಶ್ಣನು ಬ್ರಾಹ್ಮಣ ವಟುವಿನ ವೇಶದಲ್ಲಿ ಬಂದು ತನ್ನ ಮಗನ ಉಪನಯನಕ್ಕೆಂದು ನೆರವನ್ನು ಕೋರಿದಾಗ, ಹುಟ್ಟಿನಿಂದಲೇ ನಿನ್ನ ದೇಹದ ಜತೆಯಲ್ಲಿದ್ದ ಕವಚವನ್ನು ಹರಿದು ಕೊಟ್ಟೆ;

ಪುರಿಗಣೆ=ಕರ್‍ಣನ ಬಳಿಯಿರುವ ಅತಿಹೆಚ್ಚಿನ ಶಕ್ತಿಯುಳ್ಳ ಒಂದು ಬಾಣದ ಹೆಸರು;

ಕೊಂತಿ ಬೇಡೆ ಬೆಚ್ಚದೆ ಪುರಿಗಣೆಯನ್ ಕೊಟ್ಟಯ್=ಹೆತ್ತತಾಯಿ ಕುಂತಿಯು ಕೇಳಿಕೊಳ್ಳಲು ಹಿಂಜರಿಯದೆ ಪುರಿಗಣೆಯನ್ನು ತೊಡುವುದಿಲ್ಲವೆಂಬ ವಾಗ್ದಾನವನ್ನು ನೀಡಿದೆ. “ಕುರುಕ್ಶೇತ್ರ ಯುದ್ದದ ಸಮಯದಲ್ಲಿ ಅರ್‍ಜುನನನ್ನು ಒಳಗೊಂಡಂತೆ ಪಾಂಡು ಕುಮಾರರ ಮೇಲೆ ಪುರಿಗಣೆಯನ್ನು ತೊಡುವುದಿಲ್ಲ” ಎಂಬ ಬಾಶೆಯನ್ನು ಕರ್‍ಣನು ಕುಂತಿಗೆ ನೀಡುತ್ತಾನೆ;

ಕಸವರ+ಕಲಿ; ಕಸವರ=ಚಿನ್ನ/ಹೊನ್ನು; ಕಲಿ=ಶೂರ; ಕಸವರಗಲಿ=ಚಿನ್ನವನ್ನು ಅಂದರೆ ಸಂಪತ್ತನ್ನು ದಾನವಾಗಿ ಕೊಡುವುದರಲ್ಲಿ ದೊಡ್ಡವನು/ದಾನಶೂರ;

ಅಂಗಾಧಿಪತಿ, ನಿನಗೆ ಎಣೆ ಕಸವರಗಲಿ ಮೆಯ್ಗಲಿಯುಮ್ ಆವನ್=ಕರ್‍ಣ, ಈ ಜಗತ್ತಿನಲ್ಲಿ ನಿನಗೆ ಸಮಾನನಾದ ದಾನಶೂರನೂ ಪರಾಕ್ರಮಶಾಲಿಯೂ ಮತ್ತಾವನಿದ್ದಾನೆ;

ನಯನ=ಕಣ್ಣು; ಎರ್ದೆ=ಮನಸ್ಸು/ಹ್ರುದಯ;

ನಯನದೊಳಮ್ ಎರ್ದೆಯೊಳಮ್ ನಿನ್ನಯ ರೂಪು ಇರ್ದಪುದು=ನನ್ನ ಕಣ್ಣುಗಳೊಳಗೆ ನನ್ನ ಎದೆಯೊಳಗೆ ನಿನ್ನ ರೂಪು ಚಿತ್ರಣಗೊಂಡಿದೆ;

 ನಿನ್ನ ಮಾತು ಎನ್ನಯ ಕಿವಿಯೊಳಗೆ ಇರ್ದಪುದು=ನಿನ್ನ ಮಾತುಗಳು ನನ್ನ ಕಿವಿಯೊಳಗೆ ಮೊರೆಯುತ್ತಿವೆ; ಇನ=ಸೂರ್‍ಯ; ಇನನಂದನ=ಕರ್‍ಣ;

ಇನನಂದನ, ವಿಯೋಗಮ್ ಎಂತು ಆದುದು ಅರಿಯೆನ್=ಕರ್‍ಣ, ಅಗಲಿಕೆಯು ಹೇಗೆ ಉಂಟಾಯಿತು ಎಂಬುದನ್ನು ತಿಳಿಯೆನು; ಕಿರೀಟಿ=ಅರ್‍ಜುನ;

ಅಂಗಾಧಿಪತಿ, ನಿನ್ನನ್ ಕೊಂದ ಕಿರೀಟಿಯುಮ್ … ಎನ್ನ ಅನುಜನನ್ ಇಕ್ಕಿ ಕೊಂದ ಭೀಮನುಮ್ ಒಳನ್=ಕರ್‍ಣ, ನಿನ್ನನ್ನು ಕೊಂದ ಅರ್‍ಜುನನು ಮತ್ತು ನನ್ನ ತಮ್ಮ ದುಶ್ಶಾಸನನನ್ನು ಹೊಡೆದು ಕೊಂದ ಬೀಮ-ಇಬ್ಬರೂ ಇನ್ನೂ ಜೀವಂತವಾಗಿದ್ದಾರೆ;

ಆನ್ ಇನ್ನುಮ್ ಒಳೆನ್=ನಾನೂ ಇನ್ನೂ ಜೀವಂತವಾಗಿದ್ದೇನೆ;

ಕೂರ್ಮೆ=ಒಲುಮೆ/ನಲುಮೆ/ಪ್ರೀತಿ; ಅದು+ಎನ್ನ; ಸೌಧರ್ಮಿಕೆ=ಒಳ್ಳೆಯತನ; ಗಡ=ನೋಡಿದೆಯಾ/ಕಂಡೆಯಾ;

ನಿನ್ನಯ ಕೂರ್ಮೆಗಮ್ ಅದೆನ್ನ ಸೌಧರ್ಮಿಕೆಗಮ್… ಗಡ ಸಾಲದೆ=ನೀನು ನನ್ನಲ್ಲಿಟ್ಟಿದ್ದ ಪ್ರೀತಿಗೂ… ಅದಕ್ಕೆ ಪ್ರತಿಯಾಗಿ ನಾನು ನಿನ್ನಲ್ಲಿಟ್ಟಿರುವ ಪ್ರೀತಿಗೂ ಇರುವ ಅಂತರ ಎಶ್ಟು ಎಂಬುದನ್ನು ಕಂಡೆಯಾ. ಅಂದರೆ ನೀನು ನನಗಾಗಿ ಪ್ರಾಣವನ್ನು ಬಲಿಗೊಟ್ಟೆ. ಆದರೆ ನಾನಾದರೋ ನಿನಗಾಗಿ ಏನನ್ನೂ ಮಾಡಲಿಲ್ಲ;

ಇನನಂದನ ಕೇಳ್=ಕರ್‍ಣನೇ ಕೇಳು. ಈಗ ನಾನು ನಿನ್ನ ಮುಂದೆ ಒಂದು ಪಣವನ್ನು ತೊಡುತ್ತಿದ್ದೇನೆ;

ಇಂದು ಆನ್ ಆದೆನ್… ಮೇಣ್… ಪಾಂಡುತನಯರಾದರ್=ಇಂದಿನಿಂದ ನಾನು ಜೀವಂತವಾಗಿರಬೇಕು ಇಲ್ಲವೇ ಪಾಂಡುತನಯರು ಜೀವಂತವಾಗಿರಬೇಕು;

ನಿನ್ನನ್ ಕೊಂದುಮ್ ದುಶ್ಶಾಸನನನ್ ಕೊಂದುಮ್ ಬರ್ದುಕುವರೆ=ನಿನ್ನನ್ನು ಕೊಂದು ಮತ್ತು ದುಶ್ಶಾಸನನನ್ನು ಕೊಂದು ಆ ಪಾಂಡವರು ಜೀವಂತವಾಗಿರಲು ಸಾಧ್ಯವೇ ಇಲ್ಲ;

ಅಂಗಾಧಿಪತೀ, ಬರ್ದುಕರ್ ಎಂದು ವಿಪ್ರಲಾಪಮ್ ಗೆಯ್ದು=ಕರ್‍ಣ… ಅವರನ್ನು ಜೀವಂತವಾಗಿರಲು ನಾನು ಬಿಡುವುದಿಲ್ಲ ಎಂದು ಮತ್ತೆ ಮತ್ತೆ ಹೇಳುತ್ತ… ಅತಿಯಾಗಿ ಗೋಳಾಡುತ್ತ; ಇರವು=ಇರುವ ಸ್ತಿತಿ; ಅಸು=ಪ್ರಾಣ/ಜೀವ;

ಇನಸುತನ ಇರವಮ್ ದುಶ್ಶಾಸನನ ಇರವಮ್ ಕಂಡುಮ್ ಇನ್ನುಮ್ ಎನ್ನ ಅಸುವಿದು ನೆಟ್ಟನೆ ಪೋದುದಿಲ್ಲ=ರಣರಂಗದ ನೆಲದಲ್ಲಿ ನೆತ್ತರಿನ ಕೆಸರಿನಲ್ಲಿ ಹೆಣಗಳ ಬಣಬೆಯ ನಡುವೆ ಹೆಣವಾಗಿ ಬಿದ್ದಿರುವ ಕರ್‍ಣ ಮತ್ತು ದುಶ್ಶಾಸನನ್ನು ನೋಡಿಯೂ ಇನ್ನು ನನ್ನ ಜೀವ ಹಾರಿಹೋಗಲಿಲ್ಲ

ಕಲ್+ಎರ್ದೆತನ; ಕಲ್ಲೆರ್ದೆತನ=ಪ್ರೀತಿ, ಕರುಣೆ ಮತ್ತು ಜವಾಬ್ದಾರಿಯಿಲ್ಲದ ನಡೆನುಡಿ; ಬರ್ದನ್=ಬಾಳುತ್ತಿರುವವನು/ಜೀವಂತವಾಗಿರುವವನು;

ಕಲ್ಲೆರ್ದೆತನದಿಂದೆ ಎನ್ನಂತು ಬರ್ದನ್ ಆವನುಮ್ ಒಳನೇ ಎಂದು ತನ್ನನ್ ತಾನೆ ನಿಂದಿಸಿಕೊಂಡು=ಕಲ್ಲುಮನಸ್ಸಿನಿಂದ ಕೂಡಿ ಅಂದರೆ ಒಲಿದವರ ಬಗ್ಗೆ ಪ್ರೀತಿಯಾಗಲಿ… ಜವಾಬ್ದಾರಿಯಾಗಲಿ ಇಲ್ಲದೆ ನನ್ನಂತೆ ಬದುಕುತ್ತಿರುವವನು ಈ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ತನ್ನನ್ನು ತಾನೆ ನಿಂದಿಸಿಕೊಂಡು;

ವಿಧಾತ್ರ=ಬ್ರಹ್ಮ; ಸೂನು=ಮಗ; ಅಳಿವು=ಸಾವು/ಮರಣ;

ವಿಧಾತ್ರ… ಸೂನುಗಳ ಅಳಿವಮ್… ಪ್ರಿಯಮಿತ್ರ ಅನುಜರ ಅಳಿವಮ್… ನೀನ್ ಕಾಣಿಸಿ ಮುಂದೆ ಏನನ್ ಕಾಣಿಸಲಿರ್ದಪೆ=ಬ್ರಹ್ಮನೇ, ಮಕ್ಕಳ ಸಾವನ್ನು… ಪ್ರೀತಿಯ ಗೆಳೆಯ ಮತ್ತು ತಮ್ಮಂದಿರ ಸಾವನ್ನು ನಾನು ನೋಡುವಂತೆ ಮಾಡಿರುವ ನೀನು ಇನ್ನು ಮುಂದೆ ಇನ್ನು ಯಾವ ಯಾವ ದುರಂತವನ್ನು ನೋಡುವಂತೆ ಮಾಡುವೆ;

ನೀನ್ ಎನ್ನನ್ ಪಾಪಕರ್ಮನನ್ ನಿರ್ಗುಣನನ್ ಎಂದು ವಿಧಾತ್ರಂಗೆ ಪಲುಂಬಿ=ಬ್ರಹ್ಮನೇ, ಪಾಪದ ಕೆಲಸದಲ್ಲಿಯೇ ಮಗ್ನನಾಗಿರುವ… ಒಳ್ಳೆಯ ಗುಣವಿಲ್ಲದ ನನ್ನನ್ನು ಇನ್ನು ಮುಂದೆ ಯಾವ ಯಾವ ಬಗೆಯಲ್ಲಿ ದುರಂತಕ್ಕೆ ದೂಡುವೆಯೋ ಎಂದು ಪ್ರಲಾಪಿಸುತ್ತಿದ್ದು;

ರಾಧಾನಂದನನ ಮೊಗಮಮ್ ನೋಡಿ ಸಂಜಯನನ್ ಇಂತು ಎಂದನ್=ಕರ್‍ಣನ ಮೊಗವನ್ನು ನೋಡುತ್ತ… ಸಂಜಯನನ್ನು ಈ ರೀತಿ ಕೇಳತೊಡಗಿದನು;

ಆರೊಡನೆ ನುಡಿವೆನ್=ಇನ್ನು ಮುಂದೆ ನಾನು ಯಾರೊಡನೆ ಮಾತನಾಡಲಿ;

ಅಳ್ತಿ=ಪ್ರೀತಿ:

ಅಳ್ತಿಯೊಳ್ ಆರೊಡನೆ ಓಲಗದೊಳ್ ಇರ್ಪೆನ್=ಒಲವು ನಲಿವು ನೆಮ್ಮದಿಯಿಂದ ಯಾರೊಡನೆ ರಾಜಸಬೆಯಲ್ಲಿ ರಾಜತನವನ್ನು ಮೆರೆಯಲಿ;

ಸಮಂತು=ಚೆನ್ನಾಗಿ/ಸೊಗಸಾಗಿ/ಹಿಗ್ಗು/ಆನಂದ ; ಆರೋಗಿಸು=ಊಟ ಮಾಡು;

ಆರೊಡನೆ ಸಮಂತು ಆರೋಗಿಪೆನ್=ಯಾರೊಡನೆ ಆನಂದದಿಂದ ಊಟವನ್ನು ಮಾಡಲಿ;

ಅಣುಗರ್+ಇಲ್ಲದೆ; ಅಣುಗ=ಪ್ರೀತಿ ಪಾತ್ರನಾದವನು ; ಇಭ=ಆನೆ ; ವಾಜಿ=ಕುದುರೆ ;

ಎನ್ನ ಅಣುಗರಿಲ್ಲದೆ ಇಭ ವಾಜಿಗಳಮ್ ಆನ್ ಆರೊಡನೆ ಏರುವೆನ್=ನನ್ನ ಪ್ರೀತಿಪಾತ್ರರಾದ ತಮ್ಮಂದಿರು, ಮಕ್ಕಳು ಮತ್ತು ಪರಿವಾರದವರಿಲ್ಲದೆ ಆನೆ ಕುದುರೆಗಳನ್ನು ಏರಿ ರಾಜತನದ ಸಿರಿವಂತಿಕೆಯನ್ನು ಮೆರೆಯಲಿ;

ಕೆಳಯಂಗೆ ಅಸುಮೋಕ್ಷಮ್ ಆಯ್ತು=ಗೆಳೆಯನಾದ ಕರ್‍ಣನಿಗೆ ಜೀವದಿಂದ ಬಿಡುಗಡೆಯಾಯ್ತು;

ಎನಗಮ್ ಬಾಷ್ಪಾಂಬುಮೋಕ್ಷಮ್ ಆಗದು=ನನಗೆ ಕಣ್ಣೀರಿನಿಂದ ಬಿಡುಗಡೆಯಾಗದು.ಅಂದರೆ ನನ್ನ ಪಾಲಿಗೆ ಸಂಕಟವು ನಿರಂತರವಾಗಿದೆ;

ಧರಾತಳಮನ್ ಇವನ್ ಕೊಟ್ಟನ್=ಬೂಮಂಡಲವನ್ನು ಆಳಲು ಕರ್‍ಣನು ನೆರವಾದನು;

ಜಳ+ಅಂಜಳಿಯುಮ್+ಅಮ್; ಅಂಜಲಿ/ಳಿ=ಬೊಗಸೆ; ಜಳಾಂಜಳಿ=ದೇವರ ಹೆಸರು ಇಲ್ಲವೇ ಮಂತ್ರವನ್ನು ಉಚ್ಚರಿಸುತ್ತ ಬೊಗಸೆಗಯ್ಯಿಂದ ನೀರನ್ನು ಎರೆಯುವುದು;

ನಾನ್ ಜಳಾಂಜಳಿಯುಮಮ್ ಕೊಟ್ಟೆನಿಲ್ಲ=ನಾನು ಅವನಿಗೆ ಸಾವಿನ ನಂತರದ ತರ್‍ಪಣವನ್ನು ಬಿಡಲಿಲ್ಲ;

ಇವನ್ ಪ್ರತಾಪಶಿಖಿಯಿಂದೆ ಅನ್ಯಮಂಡಳಮಮ್ ಸುಟ್ಟನ್=ಕರ್‍ಣನು ತನ್ನ ಪರಾಕ್ರಮವೆಂಬ ಬೆಂಕಿಯಿಂದ ಶತ್ರುರಾಜ್ಯಗಳನ್ನು ಸುಟ್ಟನು;

ಸತ್+ಕ್ರಿಯಾ+ಅನಳನ್+ಇಮ್; ಸತ್=ಒಳ್ಳೆಯ; ಅನಲ/ಳ=ಬೆಂಕಿ; ಸತ್ಕ್ರಿಯಾನಳ=ಹೆಣವನ್ನು ಬೆಂಕಿಯಲ್ಲಿ ಸುಡುವ ಆಚರಣೆ;

ಆನ್ ಈತನನ್ ಸತ್ಕ್ರಿಯಾನಳನಿಮ್ ಸುಟ್ಟೆನುಮಿಲ್ಲ=ನಾನು ಈತನ ಹೆಣವನ್ನು ಚಿತೆಯ ಮೇಲಿಟ್ಟು ಬೆಂಕಿಯನ್ನೊಡ್ಡಿ ಸಂಸ್ಕಾರವನ್ನು ಮಾಡಲಿಲ್ಲ;

ಮತ್=ನನ್ನ; ಕೂರ್=ಪ್ರೀತಿ/ಒಲುಮೆ;

ಮತ್ ಪ್ರಿಯತಮನ್ ಕರ್ಣಂಗೆ ಇದೇನ್ ಕೂರ್ತೆನೋ ಎಂಬುದುಮ್=ನನ್ನ ಪ್ರಿಯತಮನಾದ ಕರ್‍ಣನಿಗೆ ಯಾವ ಪ್ರೀತಿಯನ್ನು ತಾನೇ ನಾನು ತೋರಿಸಿದೆ ಎಂದು ದುರ್‍ಯೋದನನು ತನ್ನನ್ನು ತಾನು ನಿಂದಿಸಿಕೊಳ್ಳಲು;

ಸಂಜಯನ್ ಇಂತು ಎಂದನ್=ಸಂಜಯನು ಈ ರೀತಿ ಹೇಳಿದನು; ಪಳಯಿಸು=ಅಳು/ರೋದಿಸು/ಗೋಳಾಡು

ದೇವಾ, ನೀಮ್ ಇಂತೇಕೆ ಪಳಯಿಸುವಿರ್=ದೇವಾ, ನೀವು ಈ ರೀತಿ ಏಕೆ ಪ್ರಲಾಪಿಸುತ್ತಿರುವಿರಿ;

ದರ್ಪಣ=ಕನ್ನಡಿ; ಕುರುಕುಲದರ್ಪಣ=ಕುರುಕುಲಕ್ಕೆ ಕನ್ನಡಿಯಂತೆ ಇರುವವನು/ದುರ್‍ಯೋದನ;

ದೃಗ್ ಜಲ=ಕಣ್ಣೀರು; ದಹನಕ್ರಿಯೆ=ಸುಡುವ ಕ್ರಿಯೆ/ಹೆಣವನ್ನು ಬೆಂಕಿಯಿಂದ ಸುಡುವ ಆಚರಣೆ;

ಕುರುಕುಲದರ್ಪಣ, ಕೆಳೆಯಂಗೆ ಜಲದಾನಕ್ರಿಯೆಯಮ್ ದೃಗ್ ಜಲದಿಮ್… ದಹನಕ್ರಿಯೆಯಮ್ ಕೋಪಾಗ್ನಿಯಿಂದೆ ಮಾಡಿದಯ್=ಕುರುಕುಲದರ್‍ಪಣ, ಗೆಳೆಯನಾದ ಕರ್‍ಣನಿಗೆ ನೀರಿನ ತರ್‍ಪಣವನ್ನು ನಿನ್ನ ಕಣ್ಣೀರಿನಿಂದ… ಅಗ್ನಿಸಂಸ್ಕಾರವನ್ನು ನಿನ್ನ ಕೋಪವೆಂಬ ಬೆಂಕಿಯಿಂದ ಮಾಡಿದ್ದೀಯೆ;

ಅಹರ್ಪತಿ=ಸೂರ್‍ಯ;

ಇನ್ ಅಹರ್ಪತಿ ಸುತನನ್ ಮರೆವುದು=ಇನ್ನು ಕರ್‍ಣನನ್ನು ಮರೆತುಬಿಡು;

ಪೆಂಡಿರ್ ಪಳಯಿಸುವ ಅಂದದೆ ಗಂಡರ್ ಪಳಯಿಸಿದೊಡೆ= ಹೆಂಗಸರು ಪ್ರಲಾಪಿಸುವ ರೀತಿಯಲ್ಲಿ ಗಂಡಸರು ಅಳತೊಡಗಿದರೆ;

ಆಯ=ಉದ್ದೇಶ/ಪರಾಕ್ರಮ;

ಆಯಮಮ್ ಛಲಮಮ್ ಕಯ್ ಕೊಂಡು ಎಸಪರಾರೊ=ಉದ್ದೇಶಿದ ಕಾರ್‍ಯವನ್ನು ಚಲದಿಂದ ಕಯ್ಗೊಂಡು ಮಾಡುವವರು ಯಾರೊ;

ಕುರುಕುಲಮಂಡನ ನೀನ್ ಎತ್ತಿಕೊಂಡ ಛಲಮನೆ ಮೆರೆಯಾ ಎಂದು ಸಂಜಯ ನುಡಿದ ನುಡಿಯನ್ ಅವಧಾರಿಸಿ=ಕುರುಕುಲಮಂಡನ, ನೀನು ಹಿಡಿದಿರುವ ಚಲವನ್ನೇ ಮೆರೆಯುವಂತಹವನಾಗು ಎಂದ ಸಂಜಯನ ನುಡಿಗಳನ್ನು ಮನನ ಮಾಡಿಕೊಂಡು;

ದರಹಾಸ=ಮುಗುಳುನಗೆ; ಪೇಶಲ=ಮನೋಹರವಾದ/ಕೋಮಲವಾದ;

ದರಹಾಸಪೇಶಲಮ್… ದಿಕ್ಕರಿಗಮನಮ್… ಕನಕಪರ್ವತಪ್ರಾಂಶು ದಿನೇಶ್ವರಸುತನ ರೂಪು ಎನ್ನಾ ಚಿತ್ತಭಿತ್ತಿಯೊಳ್ ಚಿತ್ರಮ್ ಬರೆದಂತೆ ಇರ್ದಪುದು=ಮುಗುಳುನಗೆಯ ಮನೋಹರವಾದ ಮೊಗದ… ದಿಗ್ಗಜದಂತಹ ನಡೆಯುಳ್ಳ… ಚಿನ್ನದ ಪರ್‍ವತದಂತೆ ಎತ್ತರವುಳ್ಳ ಕರ್‍ಣನ ರೂಪವು ನನ್ನ ಮನಸ್ಸಿನ ಗೋಡೆಯ ಮೇಲೆ ಚಿತ್ರ ಬರೆದಂತೆ ಇರುವುದು;

ದೀಕ್ಷಾವಿಧಿ=ಯಜ್ನಯಾಗಾದಿಗಳಲ್ಲಿ ಆಚರಿಸಬೇಕಾದ ನಿಯಮ/ಕ್ರಮ;

ದೀಕ್ಷಾವಿಧಿಗಳ್ಗೆ ಗುರು=ಯಾಗದ ಆಚರಣೆಗಳನ್ನು ನೆರವೇರಿಸುವಾಗ ಗುರು;

ಹಿತಕಾರ್ಯ ಆಳೋಚನಕ್ಕೆ ಮಂತ್ರಿ=ಒಳಿತನ್ನುಂಟುಮಾಡುವ ಕಾರ್‍ಯಗಳ ಆಲೋಚನೆಗೆ ಮಂತ್ರಿ;

ಉರ್ವರೆ=ಬೂಮಂಡಲ;

ಉರ್ವರೆಯಮ್ ಕಾವ ಗುಣಕ್ಕೆ ಆಳ್ದನ್=ಬೂಮಂಡಲವನ್ನು ಕಾಪಾಡುವ ಗುಣಕ್ಕೆ ಸಾಹಸದ ಮತ್ತು ಪರಾಕ್ರಮದ ಒಡೆಯ; ಕ್ರೀಡಾರಸ=ಆಟದಿಂದ ಉಂಟಾಗುವ ಆನಂದ; ನರ್ಮಸಚಿವ=ರಾಜನ ಶ್ರುಂಗಾರ ಮತ್ತು ವಿನೋದ ಕ್ರೀಡೆಗಳಲ್ಲಿ ಜತೆಯಲ್ಲಿರುವವನು/ಅಂತರಂಗದ ಸೇವಕ;

ಕ್ರೀಡಾರಸಕ್ಕೆ ನರ್ಮ ಸಚಿವನ್=ಬಹುಬಗೆಯ ವಿನೋದದ ಆಟಗಳಲ್ಲಿ ಜತೆಗಾರ;

ಗುರುಭಾರಕ್ಕೆ ಆನೆಯಾಳ್=ಮಹತ್ತರವಾದ ಕಾರ್‍ಯಗಳ ಹೊರೆಯನ್ನು ಹೊರುವುದಕ್ಕೆ ಆನೆಯಂತಹ ಆಳು. ಎಂತಹ ಜವಾಬ್ದಾರಿಯನ್ನು ಹೊರಬಲ್ಲವನು;

ರಣಕ್ಕೆ ಇರಿವಾಳ್=ಹೋರಾಟದಲ್ಲಿ ಹಗೆಗಳನ್ನು ಕೊಲ್ಲುವ ವೀರ;

ಕಟ್ಟಾಯ=ಆಪತ್ತಿನ ಸಮಯ/ಬಿಕ್ಕಟ್ಟಿನ ಸಮಯ; ತುಳಿಳಾಳ್=ವೀರ/ಶೂರ;

ಕಟ್ಟಾಯದೊಳ್ ತುಳಿಲಾಳ್=ಆಪತ್ತಿನ ಸಮಯದಲ್ಲಿ ಹೋರಾಡಿ ಗೆಲುವನ್ನು ತಂದುಕೊಡುವ ಶೂರ; ಪರಿಹಾಸ=ವಿನೋದ/ಸರಸ/ಹಾಸ್ಯ ; ಮೇಳದಾಳ್=ಸಂಗೀತ/ವಾದ್ಯ/ಕುಣಿತ ಮುಂತಾದ ಕಲೆಗಳಲ್ಲಿ ಪರಿಣತ;

ಪರಿಹಾಸಕ್ಕೆ ಮೇಳದಾಳ್ ಎನಿಸಿರ್ದನ್=ವಿನೋದದ ಕೇಳಿಗಳಲ್ಲಿ ಪರಿಣತ ಕಲಾವಿದನಾದ ಒಡನಾಡಿ;

ದುರ್ಯೋಧನನ್ ಕರ್ಣನನ್ ಎಂತು ಮರೆವನ್ ಎಂದು

 ಶೋಕಾಂಧನ್ ಕರ್ಣವಿರಹಿತನ್ ಅಪ್ಪುದರಿಮ್ ಸಂಕ್ರಂದನನಂದನಂಗೆ ಮುಳಿದು=ದುರ್‍ಯೋದನನು ಇಂತಹ ಮೇರುಗುಣಗಳಿಂದ ಕೂಡಿದ ಕರ್‍ಣನನ್ನು ಹೇಗೆ ತಾನೆ ಮರೆಯುವನು ಎಂದು ನುಡಿಯುತ್ತ, ಸಂಕಟದಿಂದ ಕುರುಡನಂತಾಗಿರುವ ಮತ್ತು ಕರ್‍ಣನಿಲ್ಲದೆ ಕಂಗಾಲಾಗಿರುವ ದುರ್‍ಯೋದನನು, ತನ್ನ ಜೀವದ ಗೆಳೆಯನಾದ ಕರ್‍ಣನ ಸಾವಿಗೆ ಕಾರಣನಾಗಿದ್ದ ಅರ್‍ಜುನನ ಬಗ್ಗೆ ಕೋಪಗೊಂಡು; ತರಣಿ=ಸೂರ್‍ಯ: ಆನನ+ಇಂದು; ಆನನ=ಮೊಗ; ಇಂದು=ಚಂದ್ರ;

 ತರಣಿತನಯ ಆನನೇಂದು ಸ್ಮರಣದೆ ಕಯ್ಗಣ್ಮುವ ಎನ್ನ ಶೋಕಮಹಾಸಾಗರಮಮ್=ಕರ್‍ಣನ ಮುಕಚಂದ್ರದ ನೆನಪಿನಿಂದ ಉಕ್ಕೇರುವ ನನ್ನ ಶೋಕಮಹಾಸಾಗರವನ್ನು;

ಬಾಡಬಾಗ್ನಿ=ಕಡಲಿನಲ್ಲಿ ಕಾಣಿಸಿಕೊಳ್ಳುವ ಬೆಂಕಿ;

ಭೀಕರ ಮತ್ ಕೋಪಾಗ್ನಿ ಬಾಡಬಾಗ್ನಿಯ ತೆರದಿಮ್=ಬಯಂಕರವಾದ ನನ್ನ ಕೋಪವೆಂಬ ಬೆಂಕಿಯು ಬಾಡಬಾಗ್ನಿಯ ರೀತಿಯಲ್ಲಿ;

ತವೆ ಪೀರ್ದುದು ಎಂದು=ಕಡಲಿನ ನೀರೆಲ್ಲವನ್ನೂ ಸಂಪೂರ್‍ಣವಾಗಿ ಹೀರಿಕೊಂಡಿತು ಎಂದು;

ಶೋಕರಸಮಮ್ ಕೋಪರಸದ ಮೇಲಿಕ್ಕಿ ಮಾರ್ಪಡೆ ಎಯ್ತರ್ಪುದಮ್ ನೋಡಿ=ಶೋಕರಸವನ್ನು ಕೋಪರಸದ ಮೇಲಿಟ್ಟು ಬದಲಾಗಿ ಬರುತ್ತಿರುವದನ್ನು ನೋಡಿ… ಇದುವರೆವಿಗೂ ಸಂಕಟದಿಂದ ಪರಿತಪಿಸುತ್ತಿದ್ದ ದುರ್‍ಯೋದನನು ಈಗ ಕೋಪೋದ್ರೇಕದಿಂದ ಆವೇಶಗೊಂಡು ಬದಲಾಗಿರುವುದನ್ನು ಸಂಜಯನು ನೋಡಿ;

ದಂದಶೂಕ=ಹಾವು; ಪತಾಕೆ=ಬಾವುಟ; ದಂದಶೂಕಪತಾಕನ್=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜ ಲಾಂಚನವಾಗುಳ್ಳ ದುರ್‍ಯೋದನ; ಮುಳಿಸಿನ+ಅಂದಮನ್; ಅಂದ=ರೀತಿ;

ನಡೆವ ದಂದಶೂಕ ಪತಾಕನ ಮುಳಿಸಿನಂದಮನ್ ಅರಿದು=ನಡೆದು ಬರುತ್ತಿರುವ ದುರ್‍ಯೋದನನ ಕೋಪದ ರೀತಿಯನ್ನು ಗಮನಿಸಿ;

ಸಂಜಯನ್ ಎಂದನ್=ಸಂಜಯನು ನುಡಿದನು;

ಎಲೆ ದೇವಾ, ಭೀಷ್ಮರ್ ಇತ್ತಲ್ ಇರ್ದಪರ್ ಇತ್ತ ಬಿಜಯಂಗೆಯ್ಯಿಮ್=ಎಲೆ ದೇವಾ, ಬೀಶ್ಮರು ಈ ಕಡೆ ಇದ್ದಾರೆ. ಈ ಕಡೆಗೆ ನೀವು ಬನ್ನಿರಿ;

ಎಂತುಮ್ ನಿಜ ಗುರುಜನ ಪ್ರಾರ್ಥನಾ ಭಂಗಮ್ ಮಾಡಲಾಗದು=ಯಾವುದೇ ಕಾರಣದಿಂದಲೂ ನಿಮ್ಮ ಗುರುಹಿರಿಯರ ಮತ್ತು ತಾಯಿತಂದೆಯ ಕೋರಿಕೆಗೆ ಹಾನಿಯನ್ನುಂಟುಮಾಡಲಾಗದು. ಅವರೆಲ್ಲರೂ ಯುದ್ದಕ್ಕೆ ಹೋಗುವ ಮುನ್ನ ಬೀಶ್ಮರ ಬಳಿಗೆ ಹೋಗಿ, ಅವರ ಸಲಹೆಯಂತೆ ನಡೆದುಕೊಳ್ಳಲು ನಿನಗೆ ಹೇಳಿದ್ದಾರೆ;

ನೆಗಳ್=ಮಾಡು; ಕಜ್ಜ=ಕೆಲಸ;

ಇನ್ ನೀನ್ ನೆಗಳ್ವ ಕಜ್ಜಮ್ ಆವುದುಮಮ್ ನಿಮ್ಮಜ್ಜನೊಳ್ ಆಳೋಚಿಸಿ ನೆಗಳ್ವುದು ಎಂದು ಪೇಳ್ವುದುಮ್=ಇನ್ನು ನೀನು ಮಾಡಬೇಕಾದ ಕಾರ್‍ಯ ಯಾವುದಿದ್ದರೂ ನಿಮ್ಮ ಅಜ್ಜನಾದ ಬೀಶ್ಮನೊಡನೆ ಆಲೋಚಿಸಿ ಮಾಡುವುದು ಎಂದು ಸಂಜಯನು ಹೇಳಲು;

ಸಂಜಯನ ಮಾತನ್ ಮೀರದೆ=ಸಂಜಯನ ಮಾತನ್ನು ತೆಗೆದುಹಾಕದೆ;

ಶರ+ಶಯನ+ಗತನ್+ಆಗಿ+ಇರ್ಪ; ಶರ=ಬಾಣ; ಶಯನ=ಹಾಸುಗೆ; ಗತ=ಒಳಗಿರುವ; ನದೀನಂದನ=ಗಂಗಾದೇವಿಯ ಮಗ ಬೀಶ್ಮ; ಚರಣ+ಅರವಿಂದ; ಚರಣ=ಪಾದ; ಅರವಿಂದ=ತಾವರೆ;

ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದ ವಂದನಮ್ ಗೆಯ್ಯಲೆಂದು=ಬಾಣಗಳ ಮಂಚದ ಮೇಲೆ ಮಲಗಿದ್ದ ಬೀಶ್ಮನ ಪಾದಕಮಲಗಳಿಗೆ ನಮಸ್ಕಾರವನ್ನು ಮಾಡಲೆಂದು;

ಗಾಂಧಾರಿಯ ನಂದನನ್ ಎಯ್ದೆವಂದು=ದುರ್‍ಯೋದನನು ಮುಂದೆ ನಡೆದು… ಹತ್ತಿರಕ್ಕೆ ಬಂದು;

ಗಂಗಾನದೀ ನಂದನನನ್ ಕಂಡು=ಬೀಶ್ಮನನ್ನು ಕಂಡು;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *