ಸು ಪ್ರಮ್ ಸೋ
ಕನ್ನಡದಲ್ಲಿ ಕೆಲವು ಸಿನೆಮಾಗಳು ಬಾಯ್ಮಾತಿನಲ್ಲಿ ಪ್ರಚಾರಗೊಂಡು, ಹುಬ್ಬೇರಿಸುವಂತೆ ಗೆಲುವು ಕಂಡಿವೆ. ಎತ್ತುಗೆಗೆ: ಕಿರಿಕ್ ಪಾರ್‍ಟಿ, ರಂಗಿತರಂಗ, ಲವ್ ಮಾಕ್ಟೇಲ್ ಹೀಗೆ. ಈ ಸಿನೆಮಾಗಳ ಪಟ್ಟಿಗೆ ಇತ್ತೀಚೆಗೆ ಸೆರಿದ ಮತ್ತೊಂದು ಸಿನೆಮಾ ಎಂದರೆ ಅದು ಸು ಪ್ರಮ್ ಸೋ (ಸುಲೋಚನ ಪ್ರಮ್ ಸೋಮೇಶ್ವರ). ಈ ಸಿನೆಮಾದ ವಿಶೇಶತೆ ಎಂದರೆ ಬಿಡುಗಡೆಯಾದ ಎರಡನೇ ದಿನದಿಂದಲೇ ಎಲ್ಲೆಡೆ ತುಂಬಿದ ಪ್ರದರ್‍ಶನ ಕಂಡಿದ್ದು.
ಒಂದು ಹಳ್ಳಿ, ಆ ಹಳ್ಳಿಯಲ್ಲಿ ತನ್ನ ಪ್ರೇಯಸಿಯನ್ನು ಕದ್ದು ನೋಡಲು ಹೊರಟ ಪ್ರಿಯಕರ, ಒಂದು ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಆತನಿಗೇ ಮುಳುವಾಗುವುದೇ ಚಿತ್ರದ ಕತೆ. ಈ ಪುಟ್ಟ ಎಳೆಯನ್ನು ಇಟ್ಟುಕೊಂಡು, ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವಂತೆ ಕತೆಯನ್ನು ಹೆಣೆಯಲಾಗಿದೆ. ಸಿನೆಮಾದಲ್ಲಿ ನಗುವಿದೆ ಎನ್ನುವುದಕ್ಕಿಂತ, ನಗುವಿನಲ್ಲಿ ಈ ಸಿನೆಮಾ ಇದೆ ಎಂದರೆ ತಪ್ಪಾಗಲಾರದು.
ಪಾತ್ರವರ್‍ಗಕ್ಕೆ ಬಂದರೆ ರವಿ ಅಣ್ಣನ ಪಾತ್ರದಲ್ಲಿ ಶನೀಲ್ ಗೌತಮ್, ಅಶೋಕನ ಪಾತ್ರದಲ್ಲಿ ಜೆ.ಪಿ. ತುಮಿನಾಡ್, ಸ್ವಾಮಿ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ, ಸತೀಶನ ಪಾತ್ರದಲ್ಲಿ ದೀಪಕ್ ರೈ ಪಾಣಾಜಿ, ಬಾವ ನ ಪಾತ್ರದಲ್ಲಿ ಪುಶ್ಪರಾಜ್ ಬೋಲರ್, ಬಾನು ಪಾತ್ರದಲ್ಲಿ ಸಂದ್ಯಾ ಅರಕೆರೆ ಹಾಗೂ ಇತರರು ನಟಿಸಿದ್ದಾರೆ. ಇಲ್ಲಿ ಮುಕ್ಯ ಪಾತ್ರದಾರಿ ಎನ್ನುವುದಕ್ಕಿಂತ, ಸಿನೆಮಾದ ನೊಗವನ್ನು ಎಲ್ಲಾ ಪಾತ್ರಗಳು ಸಮನಾಗಿ ಹೊತ್ತಿವೆ ಎಂದರೆ ತಪ್ಪಾಗಲಾರದು. ಸರ್‍ಕಾರಿ ಹಿರಿಯ ಪ್ರಾತಮಿಕ ಶಾಲೆ, ಕಾಸರಗೋಡು ಸಿನೆಮಾದಲ್ಲಿ ನಟಿಸಿದ್ದ ಹಲವು ನಟರು ಇಲ್ಲಿ ನಟಿಸಿರುವುದು ಮತ್ತೊಂದು ವಿಶೇಶ.
ಅಶೋಕನ ಪಾತ್ರದಲ್ಲಿ ನಟಿಸಿರುವ ಜೆ.ಪಿ. ತುಮಿನಾಡ್ ಅವರೇ ಚಿತ್ರಕತೆ ಹಾಗೂ ನಿರ್‍ದೇಶನ ಮಾಡಿರುವ ಈ ಸಿನೆಮಾದ ನಿರ್‍ದೇಶನ ಹಾಗೂ ಚಿತ್ರಕತೆ ನಿಜಕ್ಕೂ ಮೆಚ್ಚುವಂತದ್ದು. ಮನೆಮಂದಿಯೆಲ್ಲಾ ಕೂತು, ನಕ್ಕು ನಲಿಯುವಂತಹ ಸಿನೆಮಾವನ್ನು ಕಟ್ಟುಕೊಟ್ಟಿದ್ದಾರೆ ನಿರ್‍ದೇಶಕ ಜೆ.ಪಿ. ತುಮಿನಾಡ್. ನಿತಿನ್ ಶೆಟ್ಟಿ ಅವರ ಎಡಿಟಿಂಗ್, ಚಂದ್ರಸೇಕರನ್ ಅವರ ಸಿನೆಮಾಟೋಗ್ರಪಿ, ಸುಮೇದ್ ಕೆ. ಹಾಗೂ ಸಂದೀಪ್ ತುಳಸಿದಾಸ್ ಅವರ ಸಂಗೀತವಿದೆ. ಇದರಲ್ಲಿ “ಬಂದರೂ ಬಂದರೂ ಬಾವ ಬಂದರೂ” ಹಾಡಂತೂ ನೋಡುಗರನ್ನು ಮತ್ತೆ ಮತ್ತೆ ನಗಿಸುತ್ತದೆ. ಲೈಟರ್ ಬುದ್ದ ಪಿಲಮ್ಸ್ ಅವರು ಸಿನೆಮಾವನ್ನು ನಿರ್‍ಮಿಸಿದ್ದು. ಒಟ್ಟಾರೆ ಇಡೀ ಸಿನೆಮಾ ತಂಡ ನೋಡುಗರಿಗೆ ನಗುವಿನ ಔತಣಕೂಟವನ್ನು ನೀಡಿದೆ.
ಈ ಸಿನೆಮಾ 25 ಜುಲೈ 2025 ರಂದು ಬಿಡುಗಡೆಯಾಗಿ ಇನ್ನೂ ಸಹ ಹಲವೆಡೆ ತುಂಬಿದ ಪ್ರದರ್‍ಶನ ಕಾಣುತ್ತಿದ್ದು, 9 ಸೆಪ್ಟೆಂಬರ್ 2025 ರಂದು ಜಿಯೋ ಹಾಟ್ ಸ್ಟಾರ್ ನಲ್ಲೂ ಸಹ ಬಿಡುಗಡೆಯಾಗಿದೆ. ಮನೆಮಂದಿಯೆಲ್ಲಾ ಕೂತು, ನಕ್ಕು ನಲಿಯಬಹುದಾದ ಸಿನೆಮಾ ಇದಾಗಿದ್ದು, ಹಲವು ಪರನುಡಿ ಸಿನೆಮಾಗಳಿಗೆ ಸೆಡ್ಡು ಹೊಡೆದು, ಈ ವರುಶದ ಒಂದು ಅತ್ತ್ಯುತ್ತಮ ಸಿನೆಮಾವಾಗಿ ಹೊರಹೊಮ್ಮಿದೆ ಸು ಪ್ರಮ್ ಸೋ.
(ಚಿತ್ರಸೆಲೆ: imdb.com )
ಇತ್ತೀಚಿನ ಅನಿಸಿಕೆಗಳು