ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 18ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 18: ಕ್ರಿಶ್ಣನ ಒಡಗೂಡಿ ವೈಶಂಪಾಯನ ಸರೋವರದ ಬಳಿಗೆ ಬಂದ ಪಾಂಡವರು ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾದ 18 ನೆಯ ಗದ್ಯದಿಂದ 23 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಕೃಷ್ಣ: ಯದುವಂಶದ ವಸುದೇವ ಮತ್ತು ದೇವಕಿ ದಂಪತಿಯ ಮಗ. ಪಾಂಡವರ ಹಿತಚಿಂತಕ.
ಧರ್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
*** ಪ್ರಸಂಗ-18: ಕೃಷ್ಣನ ಒಡಗೂಡಿ ವೈಶಂಪಾಯನ ಸರೋವರದ ಬಳಿಗೆ ಬಂದ ಪಾಂಡವರು ***
ಪವನತನಯನ್ ಅವನನ್ ಒಡಗೊಂಡು ಬಂದು, ಧರ್ಮತನಯಾದಿಗಳ್ಗೆ ತತ್ ವೃತ್ತಾಂತಮನ್ ಎಲ್ಲಮನ್ ಅರಿಪೆ, ಯುಕ್ತಿಯುಕ್ತಮಪ್ಪ ದೂತನ ಮಾತನ್ ಸಕಲ ಜಗತ್ ಉತ್ಪತ್ತಿ ಸ್ಥಿತಿ ಪ್ರಳಯಭಾವನನ್ ಎನಿಸಿದ ವಿಷ್ಣು ಕೇಳ್ದು, ಮನದೊಳ್ ನಿಶ್ಚಯಿಸಿ…
ಕೃಷ್ಣ: ದ್ಯುನದೀಜನ್ ಕುಡೆ… ತೋಯಮಂತ್ರಬಲದಿಮ್ ಕಾಲವಂಚನೆಗೆಯ್ಯಲ್ ಕೊಳನಮ್ ಪೊಕ್ಕಿರ್ದಪನ್. ಹಲಾಯುಧ ಕೃಪ ಅಶ್ವತ್ಥಾಮರುಮ್ ನಾಳೆಯೆ ನಾಗಕೇತನನೊಳ್ ಕೂಡಿ ಬರ್ಪರ್. ಅವರ್ ಇನ್ನುಮ್ ಬಾರದನ್ನಮ್… ಸುಯೋಧನನನ್ ಮುನ್ನಮೆ ಕಯ್ಗೆ ಮಾಳ್ಪುದು. ಬಳಿಕ್ಕೆ ಆರ್ಗಮ್ ಗೆಲಲ್ ಬರ್ಕುಮೇ… ಅದರಿಂದೆ ಈಗಳೇ ಪೋಗಿ ಪೂಗೊಳನನಮ್ ಮುತ್ತಿ ದುರ್ಯೋಧನನನ್ ಪೊರಮಡಿಸಿ ಪಗೆಯಮ್ ಪರಿವಡಿಪುದು.
(ಎಂದು ಅರವಿಂದನಾಭನ್ ಧರ್ಮನಂದನಾದಿಗಳನ್ ಒಡಗೊಂಡು ಬಂದು ಕಿರಾತದೂತ ಸಂಸೂಚಿತಮಪ್ಪ ಅಡಿವಜ್ಜೆಯಮ್ ಕಂಡು ಸುಯೋಧನನ ಅಡಿವಜ್ಜೆಯಪ್ಪುದಮ್ ತಪ್ಪಿಲ್ಲದೆ ಅರಿದು… ನಿಸ್ಸಂದೇಹಚಿತ್ತರಾಗಿ)
ಧರ್ಮರಾಯ: ಭರತಜರೊಳ್ ಮುನ್ನ ಇಲ್ಲದ ಪರಿಭಾಷೆಯನುಂಟುಮಾಡಿ ಕುರುರಾಜನ್ ಪೆರಗೆ ಅಡಿಯಿಟ್ಟನ್.
(ಎಂದು ಧರ್ಮಸುತನ್ ಲಜ್ಜಾಭರದಿಂದಮ್ ತಲೆಯನ್ ಎರಗಿದನ್. ದುರ್ಯೋಧನನ ಮನದ ಧೈರ್ಯಕ್ಷತಿಗೆ… ಮನಃಕ್ಷತನಾಗಿ ಸಿಗ್ಗಾಗಿ ತಲೆಯಮ್ ಬಾಗಿ ಧರ್ಮನಂದನನಿರೆ… ಪಂಕಜಾಕರಮ್ ವಿರುವತ್ ಸಾರಸ ರಾಜಹಂಸ ರವದಿಂದೆ “ಏನ್ ಬಂದಿರೀ… ಬನ್ನಿಮ್… ಇಂತು ಇರಿಮ್” ಎಂದು ಆದರಿಪಂತುಂಟಾಯ್ತು; ಪವನ ಉದ್ಧೂತ ಉತ್ತರಂಗ ಅಂಬುವಿಮ್ ತರದಿಮ್ ಕಾಲ್ಗೆ ಎರಪಂತುಂಟಾಯ್ತು; ವಿಕಸತ್ ಪಂಕೇಜದಿಮ್ ಅನಿಲಜಂಗೆ ಅಭ್ಯಾಗತ ಪ್ರೀತಿಯಿಮ್ ಅರ್ಘ್ಯಮ್ ಕುಡುವಂತುಟಾಯ್ತು… ಮೀಂಗುಲಿಗವಕ್ಕಿ ಕೊಳನೊಳ್ ಮೀಂಗೆ ಎರಗುವ ತೆರದಿಮ್ ಎರಗಿ “ಪಿಂಗಾಕ್ಷನ್ ಇಲ್ಲಿರ್ದನ್ ನೋಡು” ಎಂದು ಪವನಸುತಂಗೆ ಅರಿಪುವ ತೆರದಿನ್ ಅದೇನ್ ಸೊಗಯಿಸಿತೋ… )
ಭೀಮ: ಪಗೆವನ್ ಒಳಗಾದನ್ ಸರೋವರದೊಳಿರ್ದು … ಇನ್ನೆತ್ತ ಪೋಪನ್… ಮುನ್ ಸರೋಜಳಮಮ್ ತವೆ ಪೀರ್ದು… ಅಸುಹೃತ್ ರಕ್ತಾಂಬುವಮ್ ಪೀರ್ವೆನ್… ಎನ್ನ ಅಳವಮ್ ಮತ್ ಪತಿಗೆ ತೋರ್ಪೆನ್.
(ಎಂದು ಚಾಳುಕ್ಯಕಂಠೀರವನ್ ಸಂತಸದೆ ಬಾಹಾಸ್ಫಾಲನಮ್ ಗೆಯ್ದು ದಿಗ್ವಳಯಮ್ ಮಾರ್ದನಿಯಿಟ್ಟವೊಲ್ ಗಜರಿದನ್… )
ಪದ ವಿಂಗಡಣೆ ಮತ್ತು ತಿರುಳು: ಕ್ರಿಶ್ಣನ ಒಡಗೂಡಿ ವೈಶಂಪಾಯನ ಸರೋವರದ ಬಳಿಗೆ ಬಂದ ಪಾಂಡವರು
ಪವನ=ವಾಯುದೇವ; ತನಯ=ಮಗ; ಪವನತನಯ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ಮಗ/ಬೀಮಸೇನ;
ಪವನತನಯನ್ ಅವನನ್ ಒಡಗೊಂಡು ಬಂದು=ಬೀಮನು ವಿಂದ್ಯಕನೆಂಬ ಆ ಬೇಡವರನ ಜತೆಯಲ್ಲಿಯೇ ಪಾಂಡವರ ಸೇನಾ ಶಿಬಿರಕ್ಕೆ ಬಂದು;
ಧರ್ಮತನಯ+ಆದಿಗಳ್ಗೆ; ಧರ್ಮತನಯ=ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದ ಮಗ/ದರ್ಮರಾಯ; ಆದಗಳ್ಗೆ=ಮೊದಲಾದವರಿಗೆ:
ಧರ್ಮತನಯಾದಿಗಳ್ಗೆ ತತ್ ವೃತ್ತಾಂತಮನ್ ಎಲ್ಲಮನ್ ಅರಿಪೆ=ದರ್ಮರಾಯನನ್ನು ಒಳಗೊಂಡಂತೆ ಇತರರೆಲ್ಲರಿಗೂ ಬೇಡರವನು ಹೇಳಿದ ವೈಶಂಪಾಯನ ಸರೋವರದಿಂದ ಹೊರಕ್ಕೆ ಬಂದಿರುವ ವ್ಯಕ್ತಿಯೊಬ್ಬನ ಹೆಜ್ಜೆಗುರುತುಗಳ ಸುದ್ದಿಯನ್ನು ತಿಳಿಸಲು;
ಯುಕ್ತಿ=ಕುಶಲತೆ/ನಿಪುಣತೆ; ಯುಕ್ತಮ್+ಅಪ್ಪ; ಯುಕ್ತ=ಯೋಗ್ಯವಾದುದು; ಅಪ್ಪ=ಆಗಿರುವ;
ಯುಕ್ತಿಯುಕ್ತಮಪ್ಪ ದೂತನ ಮಾತನ್ ಸಕಲ ಜಗತ್ ಉತ್ಪತ್ತಿ ಸ್ಥಿತಿ ಪ್ರಳಯಭಾವನನ್ ಎನಿಸಿದ ವಿಷ್ಣು ಕೇಳ್ದು=ಕುಶಲ ಬುದ್ದಿಯಿಂದ ಗ್ರಹಿಸಿಕೊಂಡಿರುವ ದೂತನ ಮಾತನ್ನು ಸಕಲ ಜಗತ್ತಿನ ಹುಟ್ಟು ಇರುವಿಕೆ ಮತ್ತು ನಾಶಕ್ಕೆ ಕಾರಣನು ಎನಿಸಿದ ಕ್ರಿಶ್ಣನು ಕೇಳಿ;
ಮನದೊಳ್ ನಿಶ್ಚಯಿಸಿ=ಈಗ ಏನನ್ನು ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಪಾಂಡವರಿಗೆ ಈ ರೀತಿ ಸೂಚನೆಯನ್ನು ನೀಡುತ್ತಾನೆ;
ದ್ಯುನದಿ=ದೇವಗಂಗೆ; ದ್ಯುನದೀಜ=ದೇವಗಂಗಾ ನದಿಯ ಮಗ/ಬೀಶ್ಮ; ಶಂತನು ರಾಜ ಮತ್ತು ಗಂಗಾದೇವಿಯ ಮಗನಾದ ಬೀಶ್ಮ; ಕುಡೆ=ಕೊಡಲು/ಉಪದೇಶಿಸಲು; ತೋಯ=ನೀರು; ತೋಯಮಂತ್ರ=ನೀರೊಳಗೆ ಅಡಗಿಕೊಂಡಿರುವಾಗ ಜೀವಕ್ಕೆ ಅಪಾಯ ಒದಗದಂತೆ ಜಪಿಸುವ ಮಂತ್ರ;
ದ್ಯುನದೀಜನ್ ಕುಡೆ… ತೋಯಮಂತ್ರ ಬಲದಿಮ್ ಕಾಲವಂಚನೆ ಗೆಯ್ಯಲ್ ಕೊಳನಮ್ ಪೊಕ್ಕಿರ್ದಪನ್=ಬೀಶ್ಮನು ಉಪದೇಶಿಸಿದ ಜಲಮಂತ್ರದ ಬಲದಿಂದ ದುರ್ಯೋದನನು ನಾಳೆಯ ಯುದ್ದಕ್ಕೆ ಮುನ್ನ, ಇಂದಿನ ದಿನ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳದೆ ಕಾಲವನ್ನು ಕಳೆಯಲೆಂದು ಕೊಳವನ್ನು ಹೊಕ್ಕಿದ್ದಾನೆ;
ಹಲಾಯುಧ=ಬಲರಾಮ; ಕ್ರಿಶ್ಣನ ಅಣ್ಣ. ಯದುಕುಲದ ಅರಸ; ಕೃಪ=ಕೌರವ ಪಾಂಡವರ ವಿದ್ಯಾಗುರು; ಅಶ್ವತ್ಥಾಮ=ದ್ರೋಣಾಚಾರ್ಯರ ಮಗ; ನಾಗಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ದುರ್ಯೋದನ;
ಹಲಾಯುಧ ಕೃಪ ಅಶ್ವತ್ಥಾಮರುಮ್ ನಾಳೆಯೆ ನಾಗಕೇತನನೊಳ್ ಕೂಡಿ ಬರ್ಪರ್=ಬಲರಾಮ. ಕ್ರುಪ, ಅಶ್ವತ್ತಾಮರು ನಾಳೆಯೇ ದುರ್ಯೋದನನ ಜತೆಗೂಡಲು ಬರುತ್ತಾರೆ;
ಕಯ್ಗೆ ಮಾಳ್ಪುದು=ವಶಪಡಿಸಿಕೊಳ್ಳಬೇಕು/ಸೆರೆಹಿಡಿಯಬೇಕು;
ಅವರ್ ಇನ್ನುಮ್ ಬಾರದನ್ನಮ್ ಸುಯೋಧನನನ್ ಮುನ್ನಮೆ ಕಯ್ಗೆ ಮಾಳ್ಪುದು=ಅವರೆಲ್ಲರೂ ಬಂದು ಸೇರಿಕೊಳ್ಳುವುದಕ್ಕೆ ಮೊದಲು ದುರ್ಯೋದನನನ್ನು ವಶಪಡಿಸಿಕೊಳ್ಳಬೇಕು;
ಬಳಿಕ್ಕೆ ಆರ್ಗಮ್ ಗೆಲಲ್ ಬರ್ಕುಮೇ=ಈಗ ವಶಕ್ಕೆ ತೆಗೆದುಕೊಳ್ಳದಿದ್ದರೆ, ಅನಂತರ ಅವರೆಲ್ಲರ ಜತೆಗೂಡುವ ದುರ್ಯೋದನನನ್ನು ಯಾರಿಂದಲೂ ಗೆಲ್ಲುವುದಕ್ಕೆ ಆಗುವುದಿಲ್ಲ;
ಪೂ+ಕೊಳನನ್+ಅಮ್ ; ಪೂಗೊಳ=ಹೂವಿನಿಂದ ಕೂಡಿರುವ ಕೊಳ; ಪರಿವಡಿ=ಕೊನೆಗಾಣು/ಮುಗಿ/ತೀರು;
ಅದರಿಂದೆ ಈಗಳೇ ಪೋಗಿ ಪೂಗೊಳನನಮ್ ಮುತ್ತಿ ದುರ್ಯೋಧನನನ್ ಪೊರಮಡಿಸಿ ಪಗೆಯಮ್ ಪರಿವಡಿಪುದು ಎಂದು=ಆದ್ದರಿಂದ ಈಗಲೇ ಹೋಗಿ, ವೈಶಂಪಾಯನ ಸರೋವರವನ್ನು ಸುತ್ತುವರಿದು, ದುರ್ಯೋದನನನ್ನು ಹೊರಕ್ಕೆ ಬರುವಂತೆ ಮಾಡಿ, ಹಗೆಯನ್ನು ಕೊನೆಗಾಣಿಸಬೇಕು ಎಂದು ನುಡಿದು;
ಅರವಿಂದನಾಭ=ಕ್ರಿಶ್ಣ;
ಅರವಿಂದನಾಭನ್ ಧರ್ಮನಂದನಾದಿಗಳನ್ ಒಡಗೊಂಡು ಬಂದು=ಕ್ರಿಶ್ಣನು ದರ್ಮರಾಯ ಮತ್ತು ಇತರರ ಜತೆಗೂಡಿ ವೈಶಂಪಾಯನ ಸರೋವರದ ಬಳಿಗೆ ಬಂದು;
ಸಂಸೂಚಿತ=ನೋಡಿ ಗುರುತಿಸಿದ;
ಕಿರಾತ ದೂತ ಸಂಸೂಚಿತಮಪ್ಪ ಅಡಿವಜ್ಜೆಯಮ್ ಕಂಡು=ಬೇಡರವನು ನೋಡಿ ಗುರುತಿಸಿದ್ದ ಅಡಿವಜ್ಜೆಗಳನ್ನು ಕಂಡು;
ಸುಯೋಧನನ ಅಡಿವಜ್ಜೆಯಪ್ಪುದಮ್ ತಪ್ಪಿಲ್ಲದೆ ಅರಿದು=ಅವು ದುರ್ಯೋದನನ ಪಾದದ ಹೆಜ್ಜೆಗುರುತುಗಳೇ ಆಗಿರುವುದನ್ನು ಸರಿಯಾಗಿ ತಿಳಿದುಕೊಂಡು;
ನಿಸ್ಸಂದೇಹಚಿತ್ತರಾಗಿ=ವೈಶಂಪಾಯನ ಸರೋವರದಲ್ಲಿ ದುರ್ಯೋದನನು ಅಡಗಿದ್ದಾನೆ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲದವರಾಗಿ;
ಈಗ ಪಾಂಡವರಲ್ಲಿ ಒಬ್ಬೊಬ್ಬರು ಒಂದೊಂದು ಬಗೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ತೊಡಗುತ್ತಾರೆ;
ಭರತಜರ್+ಒಳ್; ಭರತಜರ್=ಬರತ ವಂಶದಲ್ಲಿ ಹುಟ್ಟಿದ ರಾಜರು; ಪರಿಭಾಷೆಯನ್+ಉಂಟುಮಾಡಿ; ಪರಿಭಾಷೆ=ಅಪವಾದ/ನಿಂದೆ/ತೆಗಳಿಕೆ; ಲಜ್ಜಾಭರ=ತೀವ್ರವಾದ ನಾಚಿಕೆ; ಎರಗು=ತಗ್ಗಿಸು;
ಭರತಜರೊಳ್ ಮುನ್ನ ಇಲ್ಲದ ಪರಿಭಾಷೆಯನುಂಟುಮಾಡಿ… ಕುರುರಾಜನ್ ಪೆರಗೆ ಅಡಿಯಿಟ್ಟನ್ ಎಂದು ಧರ್ಮಸುತನ್ ಲಜ್ಜಾಭರದಿಂದಮ್ ತಲೆಯನ್ ಎರಗಿದನ್=ಬರತ ವಂಶದ ರಾಜರಲ್ಲಿ ಈ ಮೊದಲು ಯಾರು ಮಾಡಿರದ ತಪ್ಪನ್ನು ಮಾಡಿ… ಮನೆತನಕ್ಕೆ ಕೆಟ್ಟ ಹೆಸರನ್ನು ತರುವಂತೆ ಕುರುರಾಜನಾದ ದುರ್ಯೋದನನು ಹಿಮ್ಮುಕನಾಗಿ ಅಡಿಯಿಟ್ಟು ಸರೋವರವನ್ನು ಹೊಕ್ಕಿದ್ದಾನೆ ಎಂದು ನುಡಿಯುತ್ತ ದರ್ಮರಾಯನು ತೀವ್ರವಾದ ನಾಚಿಕೆಯಿಂದ ತಲೆತಗ್ಗಿಸಿದನು;
ಕ್ಷತಿ=ನಾಶ/ನೋವು; ಸಿಗ್ಗು=ನಾಚಿಕೆ;
ದುರ್ಯೋಧನನ ಮನದ ಧೈರ್ಯಕ್ಷತಿಗೆ… ಮನಃಕ್ಷತನಾಗಿ ಸಿಗ್ಗಾಗಿ ತಲೆಯಮ್ ಬಾಗಿ ಧರ್ಮನಂದನನಿರೆ=ದುರ್ಯೋದನನ ಮನದ ಕೆಚ್ಚು ನಾಶಗೊಂಡಿದ್ದಕ್ಕಾಗಿ, ದರ್ಮರಾಯನು ಮನಸ್ಸಿನಲ್ಲಿ ಗಾಸಿಗೊಂಡು ನಾಚಿಕೆಯಿಂದ ತಲೆಬಗ್ಗಿಸಿ ನಿಂತುಕೊಂಡಿರಲು;
ವಿರುವತ್=ಕೂಗುತ್ತಿರುವ; ಸಾರಸ=ನೀರು ಹಕ್ಕಿ; ರವ=ದನಿ/ಕೂಗು; ಪಂಕಜ+ಆಕರಮ್; ಪಂಕಜ=ತಾವರೆ; ಆಕರ=ಹುಟ್ಟುವ ಜಾಗ; ಪಂಕಜಾಕರ=ಸರೋವರ; ಆದರಿಪ+ಅಂತುಟು+ಆಯ್ತು; ಆದರ=ಉಪಚಾರ/ಸತ್ಕಾರ;
ವಿರುವತ್ ಸಾರಸ ರಾಜಹಂಸ ರವದಿಂದೆ “ಏನ್ ಬಂದಿರೀ… ಬನ್ನಿಮ್… ಇಂತು ಇರಿಮ್” ಎಂದು ಪಂಕಜಾಕರಮ್ ಆದರಿಪಂತುಂಟಾಯ್ತು=ಕೂಗುತ್ತಿರುವ ಸಾರಸ ರಾಜಹಂಸ ಪಕ್ಶಿಗಳ ಕಲಕಲ ದನಿಯಿಂದ “ಏನು ಬಂದಿರಿ… ಬನ್ನಿರಿ… ಈ ರೀತಿ ಇರಿ” ಎಂದು ಸರೋವರವು ಉಪಚರಿಸುತ್ತ ಕರೆಯುತ್ತಿರುವಂತೆ ಕಂಡುಬಂದಿತು;
ಪವನ=ಗಾಳಿ/ವಾಯು; ಉದ್ಧೂತ=ಮೇಲಕ್ಕೆ ತೂರಲ್ಪಟ್ಟ; ಉತ್ತರಂಗ=ಎತ್ತರವಾದ ಅಲೆ; ಅಂಬು=ನೀರು; ತರದಿಮ್=ರೀತಿಯಿಂದ; ಎರಪ+ಅಂತುಟು+ಆಯ್ತು; ಎರಪ=ನಮಸ್ಕರಿಸು;
ಪವನ ಉದ್ಧೂತ ಉತ್ತರಂಗ ಅಂಬುವಿಮ್ ತರದಿಮ್ ಕಾಲ್ಗೆ ಎರಪಂತುಂಟಾಯ್ತು=ಗಾಳಿಯ ಬಡಿತದಿಂದ ಮೇಲೆದ್ದ ಎತ್ತರವಾದ ಅಲೆಗಳ ನೀರು ದಡಕ್ಕೆ ನಿರಂತರವಾಗಿ ಅಪ್ಪಳಿಸುತ್ತಿರುವ ರೀತಿಯು ಸರೋವರದ ಬಳಿಗೆ ಬಂದ ಪಾಂಡವರ ಕಾಲಿಗೆ ನಮಸ್ಕರಿಸಿದಂತಾಯಿತು;
ವಿಕಸತ್=ಅರಳುವ; ಅನಿಲಜ=ಬೀಮ; ಅಭ್ಯಾಗತ=ನೆಂಟ; ಅರ್ಘ್ಯ=ಮನೆಗೆ ಬಂದ ನೆಂಟರಿಗೆ ಕಯ್ ಕಾಲುಗಳನ್ನು ತೊಳೆಯಲೆಂದು ಕೊಡುವ ನೀರು;
ಅನಿಲಜಂಗೆ ಅಭ್ಯಾಗತ ಪ್ರೀತಿಯಿಮ್ ವಿಕಸತ್ ಪಂಕೇಜದಿಮ್ ಅರ್ಘ್ಯಮ್ ಕುಡುವಂತುಟಾಯ್ತು=ಬೀಮನಿಗೆ ನೆಂಟನನ್ನು ಪ್ರೀತಿಯಿಂದ ಸ್ವಾಗತಿಸುವ ರೀತಿಯಲ್ಲಿ ಅರಳಿದ ತಾವರೆಯ ಹೂಗಳಿಂದ ಕೂಡಿದ ಅರ್ಗ್ಯವನ್ನು ಕೊಡುವಂತಾಯಿತು;
ಮೀಂಗುಲಿಗ+ಪಕ್ಕಿ; ಮೀಂಗುಲಿಗ=ಮೀಂಚುಳ್ಳಿ/ಮೀನನ್ನು ಕೊಲ್ಲುವ ನೀರ ಹಕ್ಕಿ; ಮೀಂಗೆ=ಮೀನಿಗೆ; ಎರಗು=ಮೇಲೆ ಬೀಳು; ಪಿಂಗಾಕ್ಷನ್=ದುರ್ಯೋದನ; ಪವನಸುತ=ಬೀಮ; ಅರಿಪು=ತಿಳಿಸು/ಹೇಳು;
ಮೀಂಗುಲಿಗವಕ್ಕಿ ಕೊಳನೊಳ್ ಮೀಂಗೆ ಎರಗುವ ತೆರದಿನ್ ಎರಗಿ “ಪಿಂಗಾಕ್ಷನ್ ಇಲ್ಲಿರ್ದನ್ ನೋಡು” ಎಂದು ಪವನಸುತಂಗೆ ಅರಿಪುವ ತೆರದಿನ್ ಅದೇನ್ ಸೊಗಯಿಸಿತೋ= ಮೀಂಚುಳ್ಳಿಯೊಂದು ಕೊಳದಲ್ಲಿ ಮೀನಿಗೆ ಎರಗುವ ರೀತಿಯಲ್ಲಿ ಸರೋವರದ ಒಂದೆಡೆಯ ನೀರಿನಲ್ಲಿ ಮುಳುಗುಹಾಕುತ್ತ “ದುರ್ಯೋದನನು ಇಲ್ಲಿದ್ದಾನೆ ನೋಡು” ಎಂದು ಬೀಮನಿಗೆ ಹೇಳುವ ರೀತಿಯಲ್ಲಿ ಮುಳುಗಿ ಮೇಲೆದ್ದುದು… ಸೊಗಸಾಗಿ ಕಂಡುಬಂದಿತು; ಸರೋವರದ ದಡದಲ್ಲಿ ನಿಂತಿರುವ ಬೀಮನು ಈಗ ಆನಂದದಿಂದ ಅಬ್ಬರಿಸತೊಡಗುತ್ತಾನೆ;
ಪಗೆವನ್ ಒಳಗಾದನ್= ಹಗೆಯಾದ ದುರ್ಯೋದನನು ಸರೋವರದಲ್ಲಿ ಅಡಗಿದ್ದಾನೆ;
ಸರೋವರದೊಳಿರ್ದು ಇನ್ನೆತ್ತ ಪೋಪನ್=ಸರೋವರದಲ್ಲಿ ಅಡಗಿಕೊಂಡಿರುವ ಅವನು ಇನ್ನು ಯಾವ ಕಡೆ ಹೋಗುತ್ತಾನೆ;
ಸರೋಜಳ=ಸರೋವರದ ನೀರು; ತವೆ=ಸಂಪೂರ್ಣವಾಗಿ;
ಮುನ್ ಸರೋಜಳಮಮ್ ತವೆ ಪೀರ್ದು=ಮೊದಲು ಸರೋವರದ ನೀರೆಲ್ಲವನ್ನೂ ಒಂದು ಹನಿಯನ್ನು ಬಿಡದಂತೆ ಸಂಪೂರ್ಣವಾಗಿ ಕುಡಿದು;
ಅಸುಹೃತ್=ಹಗೆ/ಶತ್ರು; ರಕ್ತ+ಅಂಬುವಮ್;
ಅಸುಹೃತ್ ರಕ್ತಾಂಬುವಮ್ ಪೀರ್ವೆನ್=ಹಗೆಯಾದ ದುರ್ಯೋದನನ ರಕ್ತವೆಲ್ಲವನ್ನೂ ಹೀರುವೆನು;
ಅಳವು=ಶಕ್ತಿ; ಮತ್=ನನ್ನ; ಪತಿ=ಒಡೆಯ; ಮತ್ ಪತಿ=ನನ್ನ ಒಡೆಯ/ದರ್ಮರಾಯ; ಕಂಠೀರವ=ಸಿಂಹ; ಚಾಳುಕ್ಯಕಂಠೀರವನ್=ಚಾಳುಕ್ಯವಂಶದ ರಾಜರಲ್ಲಿ ಸಿಂಹದಂತಿರುವವನು/ಇದು ಚಾಳುಕ್ಯ ವಂಶದ ಸತ್ಯಾಶ್ರಯ ಚಕ್ರವರ್ತಿಗಿದ್ದ ಬಿರುದು. ರನ್ನ ಕವಿಯು ತಾನು ರಚಿಸಿದ ‘ಗದಾಯುದ್ಧ’ ಕಾವ್ಯದಲ್ಲಿ ಬೀಮನ ಪಾತ್ರವನ್ನು ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯನ ಹೆಸರಿನೊಂದಿಗೆ ಸಮೀಕರಿಸಿರುವುದರಿಂದ, ಚಕ್ರವರ್ತಿಗಿದ್ದ ಬಿರುದು ಬೀಮನಿಗೂ ಸಲ್ಲುತ್ತಿದೆ; ಸಂತಸ=ಆನಂದ; ಬಾಹು+ಆಸ್ಫಾಲನ; ಬಾಹು=ತೋಳು; ಆಸ್ಫಾಲನ=ತಟ್ಟುವುದು; ದಿಕ್+ವಲಯಮ್; ದಿಗ್ವಲಯಮ್=ಎಲ್ಲ ದಿಕ್ಕಿನ ಪ್ರದೇಶಗಳು; ಗಜರು=ಗರ್ಜಿಸು/ಅಬ್ಬರಿಸು;
ಎನ್ನ ಅಳವಮ್ ಮತ್ ಪತಿಗೆ ತೋರ್ಪೆನ್ ಎಂದು ಚಾಳುಕ್ಯಕಂಠೀರವನ್ ಸಂತಸದೆ ಬಾಹಾಸ್ಫಾಲನಮ್ ಗೆಯ್ದು… ದಿಗ್ವಳಯಮ್ ಮಾರ್ದನಿಯಿಟ್ಟವೊಲ್ ಗಜರಿದನ್=ನನ್ನ ಶಕ್ತಿಯನ್ನು ದರ್ಮರಾಯನಿಗೆ ತೋರಿಸುತ್ತೇನೆ ಎಂದು ಬೀಮನು ಆನಂದದಿಂದ ತನ್ನ ತೋಳುಗಳೆರಡನ್ನು ತಟ್ಟಿಕೊಳ್ಳುತ್ತ, ಎಂಟು ದಿಕ್ಕುಗಳಲ್ಲಿಯೂ ಪ್ರತಿದ್ವನಿಯು ಹೊರಹೊಮ್ಮುವಂತೆ ಅಬ್ಬರಿಸಿದನು;
(ಚಿತ್ರ ಸೆಲೆ: jainheritagecentres.com)


 
																			 
																			
ಇತ್ತೀಚಿನ ಅನಿಸಿಕೆಗಳು