ಸಿದ್ದರಾಮೇಶ್ವರನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ಸಿದ್ದರಾಮೇಶ್ವರ, Siddarameshwara

ಓದುವುದು ಸದ್ಗುಣಕ್ಕಲ್ಲದೆ
ಕಿವಿಯನೂದುವುದಕ್ಕೇನೋ ಅಯ್ಯಾ. (1594/706)

ಓದು=ಅಕ್ಕರದ ರೂಪದಲ್ಲಿರುವ ಸಂಗತಿಗಳನ್ನು ಮತ್ತು ವಿಚಾರಗಳನ್ನು ಓದಿ ತಿಳಿವಳಿಕೆಯನ್ನು ಪಡೆಯುವುದು; ಸದ್ಗುಣಕ್ಕೆ+ಅಲ್ಲದೆ; ಸದ್ಗುಣ=ಒಳ್ಳೆಯ ನಡೆನುಡಿ; ಅಲ್ಲದೆ=ಹೊರತು; ಕಿವಿ+ಅನ್+ಊದುವುದಕ್ಕೆ+ಏನೋ; ಊದು=ಬಾಯಿಂದ ಗಾಳಿಯನ್ನು ಹೊರಡಿಸುವುದು;

ಕಿವಿಯನ್ನು ಊದು/ಕಿವಿಯೂದು=ಇದೊಂದು ನುಡಿಗಟ್ಟು. ಚಾಡಿ ಹೇಳುವುದು / ಸುಳ್ಳು ಸುದ್ದಿಗಳನ್ನು ಹರಡುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಅಯ್ಯಾ=ಗಂಡಸರೊಡನೆ ನಯ ವಿನಯದಿಂದ ಮಾತನಾಡುವಾಗ ಬಳಸುವ ಪದ; ಏನೋ ಅಯ್ಯಾ=ನೀನು ಮಾಡುತ್ತಿರುವ ಕೆಲಸ ಸರಿಯಾಗಿದೆಯೆ ಇಲ್ಲವೇ ತಪ್ಪಾಗಿದೆಯೆ ಎಂಬುದನ್ನು ನೀನೇ ತಿಳಿದು ನೋಡು;

ವ್ಯಕ್ತಿಯು ಓದು ಬರಹದಿಂದ ಪಡೆದ ಅರಿವಿನಿಂದ ಒಳ್ಳೆಯ ನಡೆನುಡಿಗಳನ್ನು ಕಲಿತುಕೊಂಡು, ತನ್ನ ಮತ್ತು ತನ್ನ ಕುಟುಂಬದ ಒಳಿತಿಗಾಗಿ ಬಾಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿಯೂ ಬಾಳಬೇಕು. ಹಾಗಲ್ಲದೆ ಚಾಡಿ ಮಾತುಗಳಿಂದ, ಸುಳ್ಳು ನುಡಿಗಳಿಂದ ಇಲ್ಲಸಲ್ಲದ ಕೆಟ್ಟ ಸುದ್ದಿಗಳನ್ನು ಹಬ್ಬಿಸಿ, ವ್ಯಕ್ತಿಗಳ ನಡುವೆ ಪರಸ್ಪರ ಅಸಹನೆ, ಅಪನಂಬಿಕೆ ಮತ್ತು ಹಗೆತನವನ್ನುಂಟುಮಾಡಿ, ವ್ಯಕ್ತಿಗಳ ನೆಮ್ಮದಿಯ ಬದುಕನ್ನು ಹಾಳುಮಾಡಬಾರದು.

ಹೇಳುವಡೆ ಬಹು ಸುಲಭ
ಆಳುವಡೆ ಅದು ಬಹಳ ದುರ್ಘಟ ನೋಡಯ್ಯಾ. (1320/684)

ಹೇಳುವಡೆ=ಹೇಳುವುದಾದರೆ/ಬರಿ ಮಾತನ್ನಾಡುವುದಾದರೆ; ಬಹು=ಬಹಳ ; ಸುಲಭ=ಸಲೀಸು/ಸರಾಗ/ಯಾವುದೇ ಅಡ್ಡಿ ಆತಂಕವಿಲ್ಲದಿರುವುದು; ಆಳುವುದು=ಆಡಳಿತವನ್ನು ನಡೆಸುವುದು/ಒಳ್ಳೆಯ ಕೆಲಸವನ್ನು ಮಾಡುವುದು; ಆಳುವಡೆ=ಆಳುವುದಾದರೆ;

ದುರ್ಘಟ=ತೊಡಕಾದುದು/ಜಟಿಲವಾದುದು/ಅಡ್ಡಿ ಅಡಚಣೆಯಿಂದ ಕೂಡಿರುವುದು; ನೋಡು+ಅಯ್ಯಾ; ನೋಡು=ದಿನನಿತ್ಯದ ಆಗುಹೋಗುಗಳನ್ನು ಒರೆಹಚ್ಚಿ ವಾಸ್ತವವನ್ನು ತಿಳಿಯುವುದು;

ಕುಟುಂಬ, ದುಡಿಮೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ವ್ಯಕ್ತಿಯು ಜನರ ಮುಂದೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತ, ಅಪಾರವಾದ ಆಸೆಗಳನ್ನು ಜನ ಮನದಲ್ಲಿ ಮೂಡಿಸಿ, ತನ್ನನ್ನು ನಂಬುವಂತೆ ಮಾಡಬಹುದು. ಅನಂತರ ಅದೇ ವ್ಯಕ್ತಿಯು ಮುಂದೊಮ್ಮೆ ಜವಾಬ್ದಾರಿಯುತವಾದ ಗದ್ದುಗೆಯನ್ನು ಏರಿ ಕುಳಿತಾಗ, ಆಡಳಿತದ ಸೂತ್ರವನ್ನು ಹಿಡಿದು ಎಲ್ಲರನ್ನು ಸಮಾನವಾಗಿ ಕಾಣುತ್ತ, ಕೆಟ್ಟದ್ದನ್ನು ನಿಯಂತ್ರಿಸಿ ಒಳ್ಳೆಯದನ್ನು ಉತ್ತೇಜಿಸಿ, ಎಲ್ಲರಿಗೂ ಒಳಿತಾಗುವಂತೆ ಆಳ್ವಿಕೆಯನ್ನು ನಡೆಸುವುದು ತುಂಬಾ ಜಟಿಲವಾದ ಕೆಲಸವಾಗಿರುತ್ತದೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sharanamma Desai says:

    ವಚನದ ಅರ್ಥ ಮತ್ತು ಲಕ್ಷಣ ಸಹಿತ ಚೆನ್ನಾಗಿ ಅರ್ಥಹಿಸಿದ್ದಿರಿ.?

ಅನಿಸಿಕೆ ಬರೆಯಿರಿ:

%d bloggers like this: