ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 20ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 20: ನೀರೊಳಗಿರ‍್ದುಮ್ ಬೆಮರ‍್ತನ್ ಉರಗಪತಾಕನ್ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ ಭೀಮಸೇನಾಡಂಬರಮ್ ’ ಎಂಬ ಹೆಸರಿನ 7 ನೆಯ ಅದ್ಯಾಯದ 29 ನೆಯ ಗದ್ಯದಿಂದ 41 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ಭೀಮಸೇನ: ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ಅಯ್ದು ಮಂದಿ ಪಾಂಡವರಲ್ಲಿ ಒಬ್ಬ.
ದುರ್ಯೋಧನ: ಗಾಂಧಾರಿ ಮತ್ತು ಧೃತರಾಷ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.

*** ಪ್ರಸಂಗ – 20: ನೀರೊಳಗಿರ್ದುಮ್ ಬೆಮರ್ತನ್ ಉರಗಪತಾಕನ್ ***

 ಆ ನುಡಿಗೆ ಸೈರಿಸದೆ…

ಭೀಮ: ಈ ಬೂತು ಎನ್ನ ಸರಮ್ ಕೇಳ್ದೊಡಲ್ಲದೆ ಪೊರಮಡುವನಲ್ಲನ್… ಇವಂಗೆ ಆನೆ ಬಲ್ಲೆನ್.

(ಎಂದು ಭೀಮಸೇನನ್ ಉದ್ದಾಮ ಕೋಪಾಟೋಪ ವಿರಚಿತ ಬದ್ಧಭ್ರುಕುಟಿಯಾಗಿ..)

ಭೀಮ: ಭವತ್ ಅನುಜನ ಅರುಣಜಲಮನ್ ಸವಿನೋಡಿದೆನ್… ಆನೆ ನಿನ್ನ ಬಲಜಲನಿಧಿಯಮ್  ಸವಿನೋಡಿದೆನ್… ಈ ಕೊಳನಮ್ ತವೆ ಪೀರ್ದು… ಬಳಿಕ್ಕೆ, ನಿನ್ನ ಸವಿಯಮ್ ನೋಳ್ಪೆನ್… ಎಲವೊ ಮರುಳೆ, ಎನ್ನ ಸ್ವರಮಮ್ ಕೇಳಲ್ಕೆ… ಉಗ್ರರೂಪಮನ್ ನಿಂದು ನೋಡಲ್ ಅಣ್ಮದೆ… ಸಮರಾಕರಮಮ್ ಬಿಸುಟ್ಟು, ಕಮಲಾಕರಮಮ್ ಪೊಕ್ಕು… ಬರ್ದುಕಲ್  ಬಗೆವಾ… ಜಲದೊಳ್ ಮೀನ್ ಇರ್ಪವೊಲ್ ನೀನ್ ಕೊಳದೊಳೆ ಮುಳಿಗಿರ್ದು… ಅಕ್ಕಟಾ… ಕೋಡ ಸೇಡಿಂಗೆ ಒಳಗಾದಯ್… ಇದು ನಿನ್ನ ದುರ್ಯೋಧನ ಪೆಸರ್ಗೆ ಲಜ್ಜಾಕರಮ್…
ನಿನ್ನ ಅಳವಮ್ ತೋರಿದಯ್… ಚಿಃ… ಸತ್ತರ್ ಏನ್ ಪುಟ್ಟರೆ … 
ಈಗಳ್ ಕೌರವೇಂದ್ರಾಚಳವಜ್ರನ್ ಕುರುಕುಲಮಥನ ಉದ್ಭೀಕರನ್ ಭೀಮಸೇನನ್  ಬಂದನ್…
ನೀನ್ ಪೊರಮಡು… ಕಯ್ದುಗೊಳ್… ಹರಿ ಸಂಧಾನಕ್ಕೆ ವಂದಂದು
 ಅವಗಡಿಸಿದ ಅಹಂಕಾರಮ್ ಎಲ್ಲಿತ್ತೊ… ಕೃಷ್ಣಾಂಬರ ಕೇಶಾಕೃಷ್ಟಿಯಮ್ ಮಾಡಿಸಿದ ಮದಮ್ ಅದೆಲ್ಲಿತ್ತೊ… ಕೌಂತೇಯರಮ್ ಮಚ್ಚರದಿಮ್ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕು ಈಗಳ್ ಏನಾದುದು…

 (ಎಂದು ಆ ಕುರುವಂಶಾಧೀಶನನ್ ಅದಟನ್ ಉದ್ದಾಮಭೀಮನ್ ಭೀಮನ್ ಮೂದಲಿಸಿದನ್… .ಮತ್ತಮ್ ಇರದೆ… ಅಜಾಂಡಮ್ ಒಡೆಯಲ್… ಕುಲಗಿರಿ ಕೆಡೆಯಲ್… ಧಾತ್ರಿ ಪಿಳಿಯಲ್ಕೆ… ದಿವಿಜರ್ ನಡುಗಲ್ಕೆ ಒಡರಿಸುವಿನಮ್… ಜಟಾಸುರ ಹಿಡಿಂಬ ಬಕವೈರಿ ಸಿಂಹನಾದಮ್ ಗೆಯ್ದನ್… .ಅನಿಲತನೂಜನ ಸಿಂಹಧ್ವನಿಯಮ್  ಕೇಳ್ದು… ಅಳ್ಕಿ… ತತ್ ಸರೋವರದ ಎರ್ದೆ ಪವ್ವನೆ ಪಾರುವಂತೆ ಕೊಳದೊಳಿರ್ದ ತತ್ ವಿಹಗಕುಳಮ್ ಅನಾಕುಲಮ್ ಪಾರಿದುವು… ಭೀಮಕೋಪಾನಳನ್ ಅಳುರ್ದು ಕೊಳೆ… ಎಯ್ದೆ ಎಸರ್ಗಾಯ್ದಿಟ್ಟ ತೆರದೆ ಆಗಳ್ ಕೊಳನ ಜಲಮ್ ಮರುಗಿದುದು… ಕಾಯ್ದ ಎಸರೊಳೆ ಕೂಳ್ ಕುದಿವಂತೆ ಅನಿಮಿಷ ತತಿಗಳ್ ಕುದಿದುವು… ಅಂತು ಜಲಚರ ಜೀವರಾಶಿಗಳೆಲ್ಲಮ್ ಅಸುಂಗೊಳೆ… ಗೋಳುಂಡೆಗೊಳೆ… ಕೂಳ್ಗುದಿಗೊಳೆ… ಮಹೋತ್ತುಂಗ ಸಿಂಹಕೇತನನ್ ಸಿಂಹನಾದಮ್ ಗೆಯ್ಯೆ… ಕೋಪಾರುಣ ನೇತ್ರನ್ ಉರಗಪತಾಕನ್ ಆ ರವಮನ್… ನಿರ್ಜಿತ ಕಂಠೀರವ ರವಮನ್… ನಿರಸ್ತ ಘನರವಮನ್ ಕೇಳ್ದು… ಆ ನೀರೊಳಗಿರ್ದುಮ್ ಬೆಮರ್ತನ್… ಅಂತು ಬೆಮರ್ತು ಉಮ್ಮಳಿಸಿ ಸೈರಿಸಲಾರದೆ… ಜಲಮಂತ್ರಮನ್ ಏನುಮನ್ ಬಗೆಯದೆ… ಕೋಪೋದ್ರೇಕಮನೆ ಬಗೆದು… )

ದುರ್ಯೋಧನ: (ತನ್ನ ಮನದಲ್ಲಿ)

 ಕೂರದರ್ ಎನ್ನನ್… ಸಲಿಲಸ್ತಂಭನ ವಿದ್ಯಾಬಲಮನ್ ಅಪೇಕ್ಷಿಸಿದನ್ ಎನ್ನದೆ…  ಉರಗಪತಾಕನ್ ಬಲಹಾನಿಯಾಗೆ ಕೊಳದೊಳಗೆ ಉಳಿದಿರ್ದಪನ್ ಎಂದು ನಗರೆ  … ಕುಲದ ಛಲದ ಚಾಗಮನ್ ಆಂತುಮ್ ಪುರುಷರ ಗಣನೆಗೆ ವಂದ ಎನ್ನನ್…  ತೃಣವತ್ ಲಘುಜೀವಿತ ರಕ್ಷಣಾರ್ಥದಿಮ್ ಗುಣಹಾನಿಯಾಗಿ ಆನೆ ಲಘು  ಮಾಡುವೆನೇ… .ಮುನಿವನ್ ಮೂದಲಿಸಿಯುಮ್ ಇನ್ ಎನಿತುಮ್ ಪೊಕ್ಕಿರ್ಪೆನ್ .

 (ಎಂದು ಚಿತ್ತಕ್ಷೋಭಮ್ ತನಗಾಗೆ… ಜಲಚರಕ್ಷೋಭ ನಿನಾದಮ್ ಪೊಕ್ಕು ಪೊಣ್ಮೆ  ವಿಭುವಿಕ್ಷೋಭನ್… ಆಗಳ್ ಆ ಜಲಸ್ತಂಭಮಂತ್ರಮೆಲ್ಲಮ್  ಪರಿಣಾಮ ರಮಣೀಯಮಾಗದೆ ಕಿಡೆಯುಮ್… ಅಹಂಕಾರಮ್ ಕಿಡದೆ…  ನಿಜ ಮಕುಟ ಸ್ಫುರತ್ ಮಣಿಗಣಚ್ಛವಿಯಿಮ್ ಪಂಕಜವನದೊಳ್ ಸುರಚಾಪಲೀಲೆ  ಮನಂಗೊಳಿಸೆ… ತನ್ನಯ ಮೇಗೆ ಒಗೆದಿರ್ದ ನೀಲನೀರಜವನದಿಮ್ ಕರಂಗಿ ಆ  ಭುಜಯುಗ ತೋರಣಾಯಿತ ಗದಾಪರಿಘನ್ ಫಣಿರಾಜಕೇತನನ್  ಕಮಲಾಕರದಿಮ್ ಆಗಳ್ ಪೊರಮಟ್ಟನ್.)

ಪದ ವಿಂಗಡಣೆ ಮತ್ತು ತಿರುಳು: ನೀರೊಳಗಿರ‍್ದುಮ್ ಬೆಮರ‍್ತನ್ ಉರಗಪತಾಕನ್

ನೀರೊಳಗೆ+ಇರ್ದುಮ್=ವೈಶಂಪಾಯನ ಸರೋವರದ ನೀರಿನಲ್ಲಿ ಅಡಗಿಕೊಂಡಿದ್ದರು; ಬೆಮರ್ತನ್=ಬೆವರಿದನು; ಉರಗಪತಾಕನ್=ದುರ್ಯೋಧನ/ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗಿ ಹೊಂದಿದ್ದವನು;

ಆ ನುಡಿಗೆ ಸೈರಿಸದೆ=ದರ‍್ಮರಾಯನು ದುರ‍್ಯೋದನನಿಗೆ ಸಂದಿಯನ್ನು ಮಾಡಿಕೊಳ್ಳುವಂತೆ ಹೇಳುತ್ತಿರುವ ನುಡಿಗಳನ್ನು ಕೇಳುತ್ತಿದ್ದಂತೆಯೇ ಬೀಮನು ತಾಳ್ಮೆಯನ್ನು ಕಳೆದುಕೊಂಡು, ದುರ್‍ಯೋದನನನ್ನು ಕೊಲ್ಲುವ ತನ್ನ ಪ್ರತಿಜ್ನೆಯನ್ನು ಈಡೇರಿಸಿಕೊಳ್ಳಲೆಂದು;

ಬೂತು=ದೆವ್ವ; ಸರ=ದನಿ;

ಈ ಬೂತು… ಎನ್ನ ಸರಮ್ ಕೇಳ್ದೊಡಲ್ಲದೆ ಪೊರಮಡುವನಲ್ಲನ್=ಈ ದೆವ್ವ… ನನ್ನ ದನಿಯನ್ನು ಕೇಳದಿದ್ದರೆ ಹೊರಕ್ಕೆ ಬರುವುದಿಲ್ಲ;

ಇವಂಗೆ ಆನೆ ಬಲ್ಲೆನ್ ಎಂದು=ಇವನು ಸರೋವರದಿಂದ ಹೊರಕ್ಕೆ ಬರುವಂತೆ ಮಾಡಲು… ಏನು ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು;

ಉದ್ದಾಮ=ಹೆಚ್ಚಾದ/ಅತಿಶಯವಾದ ; ಕೋಪ+ಆಟೋಪ; ಆಟೋಪ=ಅಬ್ಬರ; ವಿರಚಿತ=ನಿರ್‍ಮಿಸು; ಬದ್ಧಭ್ರುಕುಟಿ=ಹುಬ್ಬುಗಂಟು;

ಭೀಮಸೇನನ್ ಉದ್ದಾಮ ಕೋಪಾಟೋಪ ವಿರಚಿತ ಬದ್ಧಭ್ರುಕುಟಿಯಾಗಿ=ಬೀಮಸೇನನು ಹೆಚ್ಚಾದ ಕೋಪದಿಂದ ಅಬ್ಬರಿಸುತ್ತ… ಆವೇಶ, ಆಕ್ರೋಶ ಮತ್ತು ಅಸಹ್ಯಬಾವದಿಂದ ಹುಬ್ಬುಗಂಟಿಕ್ಕಿಕೊಂಡು, ದೊಡ್ಡ ದನಿಯಲ್ಲಿ ದುರ್‍ಯೋದನನನ್ನು ಕುರಿತು ಈ ರೀತಿ ನುಡಿಯತೊಡಗುತ್ತಾನೆ;

ಭವತ್=ನಿನ್ನ; ಅನುಜ=ತಮ್ಮ; ಅರುಣಜಲ=ನೆತ್ತರು/ರಕ್ತ;

ಭವತ್ ಅನುಜನ ಅರುಣಜಲಮನ್ ಸವಿನೋಡಿದೆನ್=ನಿನ್ನ ತಮ್ಮನಾದ ದುಶ್ಶಾಸನನ ನೆತ್ತರಿನ ರುಚಿಯನ್ನು ನೋಡಿದೆನು;

ಆನೆ=ನಾನೇ; ಬಲ=ಸೇನೆ; ಜಲನಿಧಿ=ಸಮುದ್ರ/ಕಡಲು; ಬಲಜಲನಿಧಿ=ದೊಡ್ಡ ಸೇನೆ/ಹನ್ನೊಂದು ಅಕ್ಶೋಹಿಣಿ ಸೇನಾಬಲ;

ಆನೆ ನಿನ್ನ ಬಲಜಲನಿಧಿಯಮ್ ಸವಿನೋಡಿದೆನ್=ನಾನೇ ನಿನ್ನ ಕುರುಸೇನಾಬಲವೆಲ್ಲವನ್ನು ಸದೆಬಡಿದೆನು;

ತವೆ=ಸಂಪೂರ್‍ಣವಾಗಿ; ಪೀರ್ದು=ಕುಡಿದು;

ಈ ಕೊಳನಮ್ ತವೆ ಪೀರ್ದು… ಬಳಿಕ್ಕೆ, ನಿನ್ನ ಸವಿಯಮ್ ನೋಳ್ಪೆನ್=ಈ ಕೊಳದ ನೀರೆಲ್ಲವನ್ನೂ ಸಂಪೂರ್‍ಣವಾಗಿ ಕುಡಿದು… ಬಳಿಕ ನಿನ್ನನ್ನು ಸದೆಬಡಿದು ಕೊಂದು, ನಿನ್ನ ನೆತ್ತರಿನ ರುಚಿಯನ್ನು ಸವಿಯುತ್ತೇನೆ;

ಮರುಳು=ಹುಚ್ಚ/ತಿಳಿಗೇಡಿ; ಸ್ವರ=ದನಿ; ಅಣ್ಮು=ಶಕ್ತನಾಗು; ಸಮರ+ಆಕರ; ಸಮರ=ಯುದ್ದ/ಕಾಳೆಗ; ಆಕರ=ನೆಲೆ; ಸಮರಾಕರ=ರಣರಂಗ/ಯುದ್ದಬೂಮಿ; ಕಮಲ+ಆಕರ; ಕಮಲಾಕರ=ಸರೋವರ;

ಎಲವೊ ಮರುಳೆ, ಎನ್ನ ಸ್ವರಮಮ್ ಕೇಳಲ್ಕೆ… ಉಗ್ರರೂಪಮನ್ ನಿಂದು ನೋಡಲ್ ಅಣ್ಮದೆ… ಸಮರಾಕರಮಮ್ ಬಿಸುಟ್ಟು, ಕಮಲಾಕರಮಮ್ ಪೊಕ್ಕು… ಬರ್ದುಕಲ್ ಬಗೆವಾ=ಎಲವೋ ತಿಳಿಗೇಡಿ, ನನ್ನ ದನಿಯನ್ನು ಕೇಳುವುದಕ್ಕೆ… ನನ್ನ ಉಗ್ರರೂಪವನ್ನು ನಿಂತು ನೋಡುವುದಕ್ಕೆ ಶಕ್ತನಾಗದೆ… ರಣರಂಗವನ್ನು ತ್ಯಜಿಸಿ ಸರೋವರವನ್ನು ಹೊಕ್ಕು… ಜೀವವನ್ನು ಉಳಿಸಿಕೊಳ್ಳಬೇಕೆಂದು ಹೊಂಚುಹಾಕಿರುವೆಯಾ:

ಅಕ್ಕಟಾ=ಅಯ್ಯೋ; ಅಚ್ಚರಿ/ಆತಂಕ/ಸಂಕಟ ಉಂಟಾದಾಗ ಉಚ್ಚರಿಸುವ ಉದ್ಗಾರ ಸೂಚಕ ಪದ; ಕೋಡು; ಕೋಡು=ಚಳಿಯಿಂದ ನಡುಗು/ತಣ್ಣಗಾಗು; ಸೇಡು=ಮುದುರಿಕೊಳ್ಳುವುದು/ಮುದುಡುವಿಕೆ;

ಜಲದೊಳ್ ಮೀನ್ ಇರ್ಪವೊಲ್ ನೀನ್ ಕೊಳದೊಳೆ ಮುಳಿಗಿರ್ದು… ಅಕ್ಕಟಾ… ಕೋಡ ಸೇಡಿಂಗೆ ಒಳಗಾದಯ್=ನೀರಿನಲ್ಲಿ ಮೀನು ಇರುವಂತೆ ಕೊಳದಲ್ಲಿ ಅಡಗಿಕೊಂಡಿದ್ದು… ಅಯ್ಯೋ… ಚಳಿಯಿಂದ ಗಡಗಡನೆ ನಡುಗುತ್ತ ಮುದುಡಿಕೊಂಡು ಕುಗ್ಗಿಹೋಗಿರುವೆ;

ಇದು ನಿನ್ನ ದುರ್ಯೋಧನ ಪೆಸರ್ಗೆ ಲಜ್ಜಾಕರಮ್=ಚಕ್ರವರ‍್ತಿಯಾಗಿರುವ ನಿನಗೆ ಇಂತಹ ಸ್ತಿತಿಯು ಬಂದೊದಗಿರುವುದು “ಯಾರಿಂದಲೂ ಗೆಲ್ಲಲು ಅಸಾದ್ಯನಾದವನೇ ದುರ್‍ಯೋದನ” ಎಂಬ ಹೆಸರಿಗೆ ನಾಚಿಕೆಗೇಡಲ್ಲವೇ;

ಅಳವು=ಶಕ್ತಿ;

ನಿನ್ನ ಅಳವಮ್ ತೋರಿದಯ್=ನಿನ್ನ ಶಕ್ತಿಯ ಮಿತಿ ಏನೆಂಬುದನ್ನು ತೋರಿಸಿದೆ. ನೀನು ನಿಜಕ್ಕೂ ನಿನ್ನ ಹೆಸರಿಗೆ ತಕ್ಕಂತೆ ದುರ್‍ಯೋದನನಲ್ಲ;

ಚಿಃ… ಸತ್ತರ್ ಏನ್ ಪುಟ್ಟರೆ=ಚಿಃ… ಸತ್ತವರು ಮತ್ತೆ ಹುಟ್ಟಿಬರುವುದಿಲ್ಲವೇನು; ಜಗತ್ತಿನ ಕೆಲವು ಜನಸಮುದಾಯದಲ್ಲಿ ಮಾನವ ಜೀವಿಯು ಸಾವನ್ನಪ್ಪಿದ ನಂತರ, ಈ ಜನ್ಮದಲ್ಲಿ ಮಾಡಿರುವ ಪಾಪಪುಣ್ಯದ ಕೆಲಸಗಳಿಗೆ ತಕ್ಕಂತೆ ಮರುಹುಟ್ಟು ಪಡೆಯುತ್ತಾರೆ ಎಂಬ ನಂಬಿಕೆಯಿದೆ;

ಕೌರವೇಂದ್ರ+ಅಚಳ+ವಜ್ರನ್; ಅಚಲ=ಪರ್‍ವತ; ವಜ್ರನ್=ವಜ್ರಾಯುದವಾಗಿರುವವನು; ಮಥನ=ಕಡೆಯುವುದು; ಉದ್ಭೀಕರನ್=ಬಯಂಕರನಾದವನು;

ಈಗಳ್ ಕೌರವೇಂದ್ರಾಚಳವಜ್ರನ್ ಕುರುಕುಲಮಥನ ಉದ್ಭೀಕರನ್ ಭೀಮಸೇನನ್ ಬಂದನ್=ಈಗ ಕುರುಪತಿಯೆಂಬ ಪರ್‍ವತವನ್ನು ಸೀಳುವ ವಜ್ರಾಯುದನೂ… ಕುರುಕುಲವನ್ನು ಕಡೆದು ನಾಶಮಾಡುವ ಬಯಂಕರನೂ ಆದ ಬೀಮಸೇನನು ಬಂದಿದ್ದಾನೆ;

ಕಯ್ದು+ಕೊಳ್; ಕಯ್ದು=ಆಯುದ;

ಪೊರಮಡು ನೀನ್ ಕಯ್ದುಗೊಳ್=ವೈಶಂಪಾಯನ ಸರೋವರದಿಂದ ಈ ಕೂಡಲೇ ಹೊರಕ್ಕೆ ಬಾ. ನೀನು ಆಯುದವನ್ನು ಹಿಡಿದುಕೊ;

ಹರಿ=ಕ್ರಿಶ್ಣ; ಅವಗಡಿಸು=ಕಡೆಗಣಿಸು/ಅಡ್ಡಗಟ್ಟು;

ಹರಿ ಸಂಧಾನಕ್ಕೆ ವಂದಂದು ಅವಗಡಿಸಿದ ಅಹಂಕಾರಮ್ ಎಲ್ಲಿತ್ತೊ=ಕುರುಕ್ಶೇತ್ರ ಯುದ್ದಕ್ಕೆ ಮೊದಲು ಕ್ರಿಶ್ಣನು ಸಂದಿಯನ್ನು ಮಾಡಿಸಲೆಂದು ನಿನ್ನ ರಾಜಸಬೆಗೆ ಬಂದು ಪಾಂಡವರಿಗೆ ಅರ್‍ದ ರಾಜ್ಯವನ್ನು ನೀಡಲಾಗದಿದ್ದರೆ, ಅಯ್ದು ಊರುಗಳನ್ನಾದರೂ ಕೊಡು ಎಂದು ಕೇಳಿಕೊಂಡಾಗ, ಅವನ ಮಾತನ್ನು ಕಡೆಗಣಿಸಿದ್ದಲ್ಲದೇ, ಸಂದಾನಕಾರನಾಗಿ ಬಂದಿದ್ದ ಕ್ರಿಶ್ಣನನ್ನು ಸೆರೆಹಿಡಿದು ಕಂಬಕ್ಕೆ ಕಟ್ಟಿಹಾಕಲು ಯೋಜಿಸಿದ್ದೆಯಲ್ಲ… ಆಗ ತೋರಿಸಿದ್ದ ಆ ನಿನ್ನ ಅಹಂಕಾರ… ಈಗ ಎಲ್ಲಿ ಹೋಯಿತು;

ಕೃಷ್ಣಾ+ಅಂಬರ; ಕೃಷ್ಣಾ=ದ್ರೌಪದಿ; ಅಂಬರ=ಬಟ್ಟೆ/ಸೀರೆ; ಕೇಶ+ಆಕೃಷ್ಟಿ+ಅಮ್; ಕೇಶ=ತಲೆಗೂದಲು; ಆಕೃಷ್ಟಿ=ಹಿಡಿದೆಳೆಯುವುದು; ಮದ=ಸೊಕ್ಕು;

ಕೃಷ್ಣಾಂಬರ ಕೇಶಾಕೃಷ್ಟಿಯಮ್ ಮಾಡಿಸಿದ ಮದಮ್ ಅದೆಲ್ಲಿತ್ತೊ=ನಮ್ಮ ಅಣ್ಣ ದರ್‍ಮರಾಯನೊಡನೆ ಆಡಿದ ಜೂಜಿನಲ್ಲಿ ದ್ರೌಪದಿಯನ್ನು ಗೆದ್ದ ನೀನು, ನಿನ್ನ ತಮ್ಮ ದುಶ್ಶಾಸನನು ರಾಣಿವಾಸಕ್ಕೆ ಕಳುಹಿಸಿ ದ್ರೌಪದಿಯನ್ನು ಮುಡಿ ಎಳೆದು ರಾಜಸಬೆಗೆ ಕರೆತಂದು, ಆಕೆಯ ಸೀರೆಯನ್ನು ಸುಲಿಸಿದಾಗ ತೋರಿಸಿದ ಆ ನಿನ್ನ ಸೊಕ್ಕು… ಈಗ ಏನಾಯಿತೊ;

ಕೌಂತೇಯರು=ಕುಂತಿಯ ಮಕ್ಕಳು; ಮಚ್ಚರ=ಹೊಟ್ಟೆಕಿಚ್ಚು; ಕಾಂತಾರ=ಕಾಡು/ಅಡವಿ; ತಿರ್ರನೆ ತಿರಿಪು=ಒಂದೇ ಸಮನೆ ಅಲೆಯುವಂತೆ ಮಾಡು/ಒಂದು ಕಡೆ ನೆಲೆಯೂರದಂತೆ ಅಲೆಸುವುದು;

ಕೌಂತೇಯರಮ್ ಮಚ್ಚರದಿಮ್ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕು ಈಗಳ್ ಏನಾದುದು ಎಂದು=ಇಂದ್ರಪ್ರಸ್ತ ನಗರದಲ್ಲಿ ರಾಜ್ಯಬಾರ ಮಾಡುತ್ತಿದ್ದ ಪಾಂಡವರ ಸಿರಿಸಂಪದವನ್ನು ಕಂಡು ಹೊಟ್ಟೆಕಿಚ್ಚಿನಿಂದ ಅವರನ್ನು ಕಪಟತನದ ಜೂಜಿನಿಂದ ಸೋಲಿಸಿ, ಹನ್ನೆರಡು ವರುಶಗಳ ಕಾಲ ಅಡವಿಯಲ್ಲಿ ತಿರ್ರನೆ ತಿರುಗುವಂತೆ ಮಾಡಿದ ಆ ನಿನ್ನ ಸೊಕ್ಕು… ಈಗ ಏನಾಯಿತೊ ಎಂದು;

ಕುರುವಂಶ+ಅಧೀಶನನ್; ಅಧೀಶ=ಒಡೆಯ; ಕುರುವಂಶಾಧೀಶನ್=ದುರ್‍ಯೋದನ; ಅದಟನ್=ಪರಾಕ್ರಮಿ/ವೀರ; ಉದ್ದಾಮ=ಉತ್ತಮವಾದ;

ಆ ಕುರುವಂಶಾಧೀಶನನ್ ಅದಟನ್ ಭೀಮನ್ ಉದ್ದಾಮಭೀಮನ್ ಮೂದಲಿಸಿದನ್=ಆ ಕುರುವಂಶದ ಒಡೆಯನಾದ ದುರ್‍ಯೋದನನನ್ನು ಪರಾಕ್ರಮಿಯಾದ ಬೀಮ… ಉನ್ನತನಾದ ಬೀಮನು ಮೂದಲಿಸಿದನು;

ಎಂದು ಮತ್ತಮ್ ಇರದೆ=ಈ ರೀತಿ ಅನೇಕ ಮಾತುಗಳ ಮೂಲಕ ಬೀಮನು ದುರ್‍ಯೋದನನನ್ನು ಟೀಕಿಸಿ,ಹಂಗಿಸಿ, ವ್ಯಂಗ್ಯದ ನುಡಿಗಳ ಮೂಲಕ ಚುಚ್ಚಿ ಚುಚ್ಚಿ ಮಾನಸಿಕವಾಗಿ ಗಾಸಿಗೊಳಿಸಿದರೂ ಸುಮ್ಮನಾಗದೆ, ಮತ್ತೆ ಮತ್ತೆ ದೊಡ್ಡ ದನಿಯಲ್ಲಿ ಅಬ್ಬರಿಸಿತೊಡಗಿದನು;

ಅಜಾಂಡ=ಬ್ರಹ್ಮಾಂಡ;

ಅಜಾಂಡಮ್ ಒಡೆಯಲ್=ಬ್ರಹ್ಮಾಂಡ ಒಡೆಯುವಂತೆ;

ಕುಲಗಿರಿ ಕೆಡೆಯಲ್=ದೊಡ್ಡ ಬೆಟ್ಟಗಳು ಕೆಡೆದು ದರೆಯ ಮೇಲೆ ಉರುಳಿ ಬೀಳುವಂತೆ;

ಧಾತ್ರಿ=ಬೂಮಂಡಲ; ಪಿಳಿ=ಬಿರಿ/ಸೀಳು;

ಧಾತ್ರಿ ಪಿಳಿಯಲ್ಕೆ=ಬೂಮಿ ಬಿರಿಯುವಂತೆ;

ದಿವಿಜ=ದೇವತೆ; ಒಡರಿಸು=ಉಂಟಾಗು/ತೊಡಗು;

ದಿವಿಜರ್ ನಡುಗಲ್ಕೆ ಒಡರಿಸುವಿನಮ್=ದೇವತೆಗಳು ನಡುಕ ಉಂಟಾಗುವಂತೆ;

ವೈರಿ=ಶತ್ರು/ಹಗೆ;

ಜಟಾಸುರ ಹಿಡಿಂಬ ಬಕವೈರಿ ಸಿಂಹನಾದಮ್ ಗೆಯ್ದನ್=ಜಟಾಸುರ, ಹಿಡಿಂಬ ಮತ್ತು ಬಕನೆಂಬ ಮೂರುಮಂದಿ ರಕ್ಕಸರಿಗೆ ಹಗೆಯಾದ ಬೀಮನು ಸಿಂಹಗರ‍್ಜನೆಯನ್ನು ಮಾಡಿದನು;

ನಿಲತನೂಜ=ವಾಯುಪುತ್ರ ಬೀಮ; ಅಳ್ಕಿ=ಹೆದರಿಕೆಯಿಂದ ಬೆಚ್ಚಿಬಿದ್ದು; ಪವ್ವನೆ ಪಾರು=ಇದ್ದಕ್ಕಿದ್ದಂತೆಯೇ ಮೇಲಕ್ಕೆ ಹಾರುವುದು;

ತತ್=ಆ; ವಿಹಗ=ಹಕ್ಕಿ;ಕುಳ=ಗುಂಪು/ಸಮೂಹ;

ಅನಿಲತನೂಜನ ಸಿಂಹಧ್ವನಿಯಮ್ ಕೇಳ್ದು… ಅಳ್ಕಿ… ತತ್ ಸರೋವರದ ಎರ್ದೆ ಪವ್ವನೆ ಪಾರುವಂತೆ ಕೊಳದೊಳಿರ್ದ ತತ್ ವಿಹಗಕುಳಮ್ ಅನಾಕುಲಮ್ ಪಾರಿದುವು=ಬೀಮನ ಸಿಂಹಗರ‍್ಜನೆಯನ್ನು ಕೇಳಿ, ಹೆದರಿಕೆಯಿಂದ ಸರೋವರದ ಎದೆಯೊಡೆದು ಇದ್ದಕ್ಕಿದ್ದಂತೆಯೇ ಮೇಲಕ್ಕೆ ಚಿಮ್ಮುವಂತೆ ಕೊಳದೊಳಗೆ ಇದ್ದ ಹಕ್ಕಿಗಳೆಲ್ಲವೂ ಬೆಚ್ಚಿಬಿದ್ದು ಒಮ್ಮೆಲೆಯೇ ಮೇಲಕ್ಕೆ ಹಾರಿದುವು;

ಭೀಮ+ಕೋಪ+ಅನಳನ್; ಅನಳ=ಬೆಂಕಿ; ಅಳುರ್=ಹರಡಿ/ವ್ಯಾಪಿಸಿ; ಕೊಳೆ=ಆವರಿಸು/ತಾಗು;

ಭೀಮಕೋಪಾನಳನ್ ಅಳುರ್ದು ಕೊಳೆ=ಬೀಮನ ಕೋಪದ ಬೆಂಕಿಯು ಎಲ್ಲೆಡೆಯಲ್ಲಿಯೂ ಆವರಿಸಿಕೊಳ್ಳುತ್ತಿರಲು;

ಎಯ್ದೆ=ಚೆನ್ನಾಗಿ; ಎಸರ್+ಕಾಯ್ದಿಟ್ಟ; ಎಸರ್=ಅಡುಗೆಯನ್ನು ಮಾಡುವಾಗ ಕಾಯಿಪಲ್ಲೆ ಇಲ್ಲವೇ ಅಕ್ಕಿಯನ್ನು ಬೇಯಿಸಲು ಇಲ್ಲವೇ ಸಾರನ್ನು ಮಾಡುವಾಗ ಬಳಸುವ ನೀರು; ಮರುಗು=ಚೆನ್ನಾಗಿ ಕುದಿ/ಬಹಳ ಬಿಸಿಯಾಗುವುದು;

ಎಯ್ದೆ ಎಸರ್ಗಾಯ್ದಿಟ್ಟ ತೆರದೆ ಆಗಳ್ ಕೊಳನ ಜಲಮ್ ಮರುಗಿದುದು=ಅಡುಗೆಗೆಂದು ಒಲೆಯ ಮೇಲಿಟ್ಟು ಕಾಯಿಸುತ್ತಿರುವ ನೀರು ಕೊತಕೊತ ಕುದಿಯುವಂತೆ ಆಗ ಕೊಳದಲ್ಲಿ ನೀರು ಕುದಿಯತೊಡಗಿತು;

ಕೂಳ್=ಅನ್ನ/ಆಹಾರ; ಅನಿಮಿಷ=ಮೀನು; ತತಿ=ಸಮೂಹ/ಗುಂಪು;

ಕಾಯ್ದ ಎಸರೊಳೆ ಕೂಳ್ ಕುದಿವಂತೆ ಅನಿಮಿಷ ತತಿಗಳ್ ಕುದಿದುವು=ಕೊತಕೊತನೆ ಕುದಿಯುತ್ತಿರುವ ನೀರಿನೊಳಗೆ ಅನ್ನ ಬೇಯುವಂತೆ ಕೊಳದೊಳಗಿನ ಮೀನುಗಳು ಬೆಯ್ಯತೊಡಗಿದವು;

ಅಸು=ಜೀವ; ಅಸುಂಗೊಳೆ=ಸಾವನ್ನಪ್ಪಲು; ಗೋಳುಂಡೆ=ಅತಿಯಾದ ಸಂಕಟ; ಕೂಳ್+ಕುದಿ=ಅನ್ನವನ್ನು ಮಾಡುವಾಗ ಕುದಿಯುವ ನೀರು;

ಅಂತು ಜಲಚರ ಜೀವರಾಶಿಗಳೆಲ್ಲಮ್ ಅಸುಂಗೊಳೆ… ಗೋಳುಂಡೆಗೊಳೆ… ಕೂಳ್ಗುದಿಗೊಳೆ=ಆ ರೀತಿಯಲ್ಲಿ ಸರೋವರದ ನೀರಿನಲ್ಲಿದ್ದ ಜೀವರಾಶಿಗಳೆಲ್ಲವೂ ಸಾವಿಗೀಡಾಗಲು… ಅತಿಯಾದ ಸಂಕಟದಿಂದ ನರಳಲು… ಅನ್ನಕ್ಕಿಟ್ಟ ನೀರು ಕುದಿಯುವಂತೆ ತೀವ್ರವಾದ ತಳಮಳಕ್ಕೆ ಬಲಿಯಾಗಲು;

ಮಹಾ+ಉತ್ತುಂಗ; ಉತ್ತುಂಗ=ಉನ್ನತವಾದ/ಎತ್ತರವಾದ; ಸಿಂಹಕೇತನ=ಸಿಂಹದ ಚಿತ್ರವನ್ನು ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ಬೀಮ;

ಮಹೋತ್ತುಂಗ ಸಿಂಹಕೇತನನ್ ಸಿಂಹನಾದಮ್ ಗೆಯ್ಯೆ=ಮಹಾಬಲನಾದ ಬೀಮನು ಸಿಂಹದಂತೆ ಗರ‍್ಜನೆಯನ್ನು ಮಾಡಲು;

ಕೋಪ+ಅರುಣ; ನೇತ್ರ=ಕಣ್ಣು; ಉರಗಪತಾಕನ್=ದುರ್‍ಯೋದನ;

ಕೋಪಾರುಣ ನೇತ್ರನ್ ಉರಗಪತಾಕನ್=ಕೋಪದಿಂದ ಕೆಂಪಾಗದ ಕಣ್ಣುಗಳುಳ್ಳ ದುರ್‍ಯೋದನನು;

ರವ=ಶಬ್ದ/ದನಿ; ನಿರ್ಜಿತ=ಯಾರಿಂದಲೂ ಜಯಿಸಲಾಗದ; ಕಂಠೀರವ=ಸಿಂಹ; ನಿರಸ್ತ=ಹೊರಹೊಮ್ಮಿದ; ಘನ=ಮೋಡ; ಘನರವ=ಸಿಡಿಲು;

ಆ ರವಮನ್… ನಿರ್ಜಿತ ಕಂಠೀರವ ರವಮನ್… ನಿರಸ್ತ ಘನರವಮನ್ ಕೇಳ್ದು=ಬೀಮನಾದವನ್ನು… ಯಾರಿಂದಲೂ ಜಯಿಸಲಾಗದ ಸಿಂಹದ ಗರ‍್ಜನೆಯನ್ನು… ಮೋಡಗಳ ಡಿಕ್ಕಿಯಿಂದ ಹೊರಹೊಮ್ಮುವ ಸಿಡಲಿನಬ್ಬರದ ದನಿಯನ್ನು ದುರ್‍ಯೋದನನು ಕೇಳಿ;

ಆ ನೀರೊಳಗಿರ್ದುಮ್ ಬೆಮರ್ತನ್=ವೈಶಂಪಾಯನ ಸರೋವರದ ನೀರಿನೊಳಗಿದ್ದರೂ ದುರ್‍ಯೋದನನು ಬೆವರಿದನು; ತಣ್ಣನೆಯ ನೀರಿನಲ್ಲಿದ್ದರೂ ಬೀಮನ ಅಬ್ಬರದ ದನಿಯನ್ನು ಕೇಳಿ ದುರ್‍ಯೋದನನ ಮಯ್ ಮನಸ್ಸು ಆವೇಶ, ಆಕ್ರೋಶ ಮತ್ತು ಕೋಪತಾಪಗಳಿಂದ ಕೆರಳಿತು. ತಡೆಯಲಾಗದ ಬಾವೋದ್ರೇಕದಿಂದ ದುರ್‍ಯೋದನನ ಮಯ್ ಬೆವರತೊಡಗಿತು;

ಉಮ್ಮಳ=ಸೆಕೆ/ಬಿಸಿ/ತಾಪ;

ಅಂತು ಬೆಮರ್ತು ಉಮ್ಮಳಿಸಿ ಸೈರಿಸಲಾರದೆ=ಆ ರೀತಿಯಲ್ಲಿ ಬೆವರುತ್ತ , ಮಯ್ ಮನದಲ್ಲಿ ಉಂಟಾದ ತೀವ್ರತರವಾದ ಕೋಪೋದ್ರೇಕವನ್ನು ತಡೆದುಕೊಳ್ಳಲಾಗದೆ;

ಜಲಮಂತ್ರಮನ್ ಏನುಮನ್ ಬಗೆಯದೆ=ಜಲಮಂತ್ರವನ್ನು ಬಿಡದೆ ಮಾಡುತ್ತಿರಬೇಕು ಎಂಬ ಎಚ್ಚರದ ಕಡೆಗೆ ಗಮನಕೊಡದೆ; ಬೀಶ್ಮರ ಹಿತನುಡಿಯಂತೆ ಕುರುಕ್ಶೇತ್ರ ರಣರಂಗದಲ್ಲಿ ಚದುರಿಹೋಗಿರುವ ಕ್ರುಪ, ಕ್ರುತವರ‍್ಮ, ಅಶ್ವತ್ತಾಮ ಮತ್ತು ತೀರ‍್ತಯಾತ್ರೆಯಿಂದ ನಾಳೆ ಬರಲಿರುವ ಬಲರಾಮನನ್ನು ಜತೆಗೂಡಿ ಪಾಂಡವರೊಡನೆ ನಾಳೆ ಯುದ್ದವನ್ನು ಮುಂದುವರಿಸಬೇಕೆಂದು, ಕಾಲಹರಣಕ್ಕಾಗಿ ಹದಿನೆಂಟನೆಯ ದಿನದ ಈ ನಡುಹಗಲಿನಲ್ಲಿ ಸರೋವರವನ್ನು ಹೊಕ್ಕು ಜಲಮಂತ್ರವನ್ನು ಉಚ್ಚರಿಸುತ್ತಿದ್ದ ದುರ್‍ಯೋದನನು ಈಗ ಬೀಮನ ನುಡಿಗಳಿಂದ ಕೋಪೋದ್ರೇಕಗೊಂಡು ಜಲಮಂತ್ರವನ್ನು ಉಚ್ಚರಿಸುವುದನ್ನೇ ಕಡೆಗಣಿಸಿದ್ದಾನೆ;

ಕೋಪೋದ್ರೇಕಮನೆ ಬಗೆದು=ಕೋಪೋದ್ರೇಕದಿಂದ ಕೆರಳಿ, ಎದುರಾಳಿಯಾದ ಬೀಮನೊಡನೆ ಹೋರಾಡುವುದೇ ಮುಕ್ಯವೆಂದು ಬಾವಿಸಿ, ತನ್ನ ಮನದಲ್ಲಿ ಈ ರೀತಿ ಹೇಳಿಕೊಳ್ಳುತ್ತಾನೆ;

ಕೂರದರ್=ಹಗೆಗಳು; ಸಲಿಲ=ನೀರು; ಸ್ತಂಭನ=ನಿಲ್ಲಿಸುವಿಕೆ; ಅಪೇಕ್ಷಿಸು=ಬಯಸು;

ಕೂರದರ್ ಎನ್ನನ್ ಸಲಿಲಸ್ತಂಭನ ವಿದ್ಯಾಬಲಮನ್ ಅಪೇಕ್ಷಿಸಿದನ್ ಎನ್ನದೆ=ಹಗೆಗಳು ನನ್ನನ್ನು ಜಲಮಂತ್ರವಿದ್ಯೆಯಿಂದ ಕುರುಕ್ಶೇತ್ರ ರಣರಂಗದಲ್ಲಿ ಹೋರಾಡಲು ಮತ್ತಶ್ಟು ಬಲವನ್ನು ಒಗ್ಗೂಡಿಸುತ್ತಿದ್ದಾನೆ ಎಂದು ಬಾವಿಸದೆ;

ಉರಗಪತಾಕನ್ ಬಲಹಾನಿಯಾಗೆ ಕೊಳದೊಳಗೆ ಉಳಿದಿರ್ದಪನ್ ಎಂದು ನಗರೆ=ದುರ್‍ಯೋದನನು ತನ್ನ ಸೇನಾಬಲವನ್ನು ಕಳೆದುಕೊಂಡಿದ್ದರಿಂದ, ಜೀವವನ್ನು ಉಳಿಸಿಕೊಳ್ಳಲೆಂದು ಕೊಳದೊಳಗೆ ಅಡಗಿಕೊಂಡಿದ್ದಾನೆ ಎಂದು ಹೇಳಿಕೊಂಡು ನಗದೇ ಇರುತ್ತಾರೆಯೇ;

ಕುಲದ ಛಲದ ಚಾಗಮನ್ ಆಂತುಮ್ ಪುರುಷರ ಗಣನೆಗೆ ವಂದ ಎನ್ನನ್=ಕುಲದ… ಚಲದ… ತ್ಯಾಗದ ನಡೆನುಡಿಯನ್ನು ಹೊಂದಿ, ಜಗತ್ತಿನಲ್ಲಿ ಶೂರರ ಮನ್ನಣೆಗೆ ಪಾತ್ರನಾಗಿರುವ ನನ್ನನ್ನು;

ತೃಣ=ಹುಲ್ಲು; ಲಘು=ಹಗುರವಾದ;

 ತೃಣವತ್ ಲಘುಜೀವಿತ ರಕ್ಷಣಾರ್ಥದಿಮ್ ಗುಣಹಾನಿಯಾಗಿ ಆನೆ ಲಘು ಮಾಡುವೆನೇ=ಹುಲ್ಲುಕಡ್ಡಿಯಂತೆ ಹಗುರವಾದ ಈ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಗುಣಹೀನನಾಗಿ, ನಾನೇ ನನ್ನನ್ನು ಹಗುರಗೊಳಿಸಿಕೊಳ್ಳುತ್ತೇನೆಯೇ;

ಕ್ಷೋಭ=ಉದ್ವಿಗ್ನತೆ/ಕದಡುವಿಕೆ; ಚಿತ್ತಕೋಭ=ಮಾನಸಿಕ ತಳಮಳ;

ಮುನಿವನ್ ಮೂದಲಿಸಿಯುಮ್ ಇನ್ ಎನಿತುಮ್ ಪೊಕ್ಕಿರ್ಪೆನ್ ಎಂದು ಚಿತ್ತಕ್ಷೋಭಮ್ ತನಗಾಗೆ=ಬೀಮನು ನನ್ನ ಬಗ್ಗೆ ಕೋಪಿಸಿಕೊಂಡಿದ್ದಾನೆ… ಕಟುನುಡಿಗಳಿಂದ ಹಂಗಿಸುತ್ತಿದ್ದಾನೆ… ಹೀಗಿದ್ದರೂ ಇನ್ನು ಎಶ್ಟು ಕಾಲ ಹಗೆಯನ್ನು ಸಹಿಸಿಕೊಂಡು ಸರೋವರದಲ್ಲಿ ಅಡಗಿರಲಿ ಎಂದು ದುರ್‍ಯೋದನನು ಮಾನಸಿಕವಾಗಿ ಉದ್ವಿಗ್ನಗೊಂಡು;

ನಿನಾದ=ಶಬ್ದ/ದನಿ;

ಜಲಚರಕ್ಷೋಭ ನಿನಾದಮ್ ಪೊಕ್ಕು ಪೊಣ್ಮೆ=ಸರೋವರದ ಜಲಚರಗಳೆಲ್ಲವೂ ಉದ್ವಿಗ್ನಗೊಂಡು ಮಾಡುತ್ತಿರುವ ಚೀತ್ಕಾರ ಹೊರಹೊಮ್ಮುತ್ತಿರಲು; ವಿಭು=ರಾಜ; ವಿಕ್ಷೋಭನ್=ಉದ್ವಿಗ್ನಗೊಂಡಿವನು;

ವಿಭುವಿಕ್ಷೋಭನ್=ರಾಜ ದುರ್‍ಯೋದನನು ಕೋಪೋದ್ರೇಕದಿಂದ ಕೆರಳಿ ಉದ್ವಿಗ್ನಗೊಂಡನು;

ಆಗಳ್ ಆ ಜಲಸ್ತಂಭಮಂತ್ರಮೆಲ್ಲಮ್ ಪರಿಣಾಮ ರಮಣೀಯಮಾಗದೆ ಕಿಡೆಯುಮ್=ಆಗ ಜಲದೊಳಗೆ ಅಡಗಿಕೊಳ್ಳಲು ಉಚ್ಚರಿಸುತ್ತಿದ್ದ ಮಂತ್ರವೆಲ್ಲವೂ ಒಳ್ಳೆಯ ಪರಿಣಾಮವನ್ನುಂಟುಮಾಡದೆ ಹಾಳಾಗಲು;

ಅಹಂಕಾರಮ್ ಕಿಡದೆ=ಚಲದಂಕಮಲ್ಲನಾದ ದುರ್‍ಯೋದನನ ಅಹಂಕಾರ ತುಸುವಾದರೂ ಕಡಿಮೆಯಾಗದೆ;

ನಿಜ=ತನ್ನ; ಮಕುಟ=ಕಿರೀಟ; ಸ್ಫುರತ್=ಹೊಳೆಯುವ/ಮಿನುಗುವ; ಮಣಿ=ಮುತ್ತು, ರತ್ನ, ವಜ್ರ ಮುಂತಾದುವು/ಬೆಲೆ ಬಾಳುವ ಹರಳು; ಗಣ=ಸಮೂಹ;ಛವಿ=ಹೊಳಪು/ಕಾಂತಿ; ಪಂಕಜ=ತಾವರೆ; ಪಂಕಜವನ=ಸರೋವರ; ಸುರ=ದೇವತೆ; ಸುರಚಾಪ=ಏಳು ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲು; ಮನಂಗೊಳಿಸೆ=ಮನಸ್ಸನ್ನು ಸೆಳೆಯುವಂತಿರಲು;

ನಿಜ ಮಕುಟ ಸ್ಫುರತ್ ಮಣಿಗಣಚ್ಛವಿಯಿಮ್ ಪಂಕಜವನದೊಳ್ ಸುರಚಾಪಲೀಲೆ ಮನಂಗೊಳಿಸೆ=ದುರ್‍ಯೋದನನ ಕಿರೀಟದಲ್ಲಿ ಮಿರುಗುತ್ತಿರುವ ಮಣಿಗಳ ಕಾಂತಿಯಿಂದ ವೈಶಂಪಾಯನ ಸರೋವರದಲ್ಲಿ ಮೂಡಿದ ಕಾಮನ ಬಿಲ್ಲಿನ ಕಾಂತಿಯು ಮನವನ್ನು ಸೆಳೆಯುವಂತಿರಲು;

ಒಗೆದು+ಇರ್ದ; ಒಗೆ=ಹುಟ್ಟು/ಆವರಿಸಿಕೊಂಡು/ಹರಡಿಕೊಂಡು; ನೀರಜ=ತಾವರೆ/ಕಮಲ; ಕರಂಗು=ಕಪ್ಪಾಗು;

ತನ್ನಯ ಮೇಗೆ ಒಗೆದಿರ್ದ ನೀಲನೀರಜವನದಿಮ್ ಕರಂಗಿ=ತನ್ನ ಮಯ್ ಮೇಲೆ ಆವರಿಸಿಕೊಂಡಿದ್ದ ನೀಲಿತಾವರೆಯ ವನದಿಂದಾಗಿ ದುರ್‍ಯೋದನನು ಕಪ್ಪನೆಯ ಬಣ್ಣದಿಂದ;

ಭುಜಯುಗ=ಎರಡು ತೋಳುಗಳು; ತೋರಣ+ಆಯಿತ; ಆಯಿತ=ನೀಳವಾದ/ಉದ್ದನೆಯ; ಪರಿಘ=ಉಕ್ಕು/ಕಬ್ಬಿಣದ ಆಯುದ; ಕಮಲ+ಆಕರ; ಆಕರ=ಮೂಲ ನೆಲೆ; ಕಮಲಾಕರ=ಸರೋವರ;

ಆ ಭುಜಯುಗ ತೋರಣಾಯಿತ ಗದಾಪರಿಘನ್=ಎರಡು ತೋಳುಗಳು ತೋರಣಗಳಂತೆ ಕಂಗೊಳಿಸುತ್ತಿರಲು ಗದಾಯುದವನ್ನು ಹಿಡಿದುಕೊಂಡು;

ಫಣಿ=ಹಾವು; ಫಣಿರಾಜ=ಆದಿಶೇಶ; ಫಣಿರಾಜಕೇತನ=ದುರ್‍ಯೋದನ; ಕಮಲಾಕರ=ಕಮಲದ ಹೂವುಗಳಿಂದ ತುಂಬಿರುವ ಸರೋವರ;

ಫಣಿರಾಜಕೇತನನ್ ಕಮಲಾಕರದಿಮ್ ಆಗಳ್ ಪೊರಮಟ್ಟನ್=ದುರ್‍ಯೋದನನು ವೈಶಂಪಾಯನ ಸರೋವರದಿಂದ ಆಗ ಹೊರಕ್ಕೆ ಬಂದನು.

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *