ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 21ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 21: ಬೀಮ ದುರ‍್ಯೋದನರ ಮಾತಿನ ಯುದ್ದ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾಯದ 42 ನೆಯ ಪದ್ಯದಿಂದ 59 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

 ಪಾತ್ರಗಳು:

ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.
ಧರ್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಕೃಷ್ಣ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಪಾಂಡವರ ಹಿತಚಿಂತಕ.

*** ಪ್ರಸಂಗ – 21: ಭೀಮ ದುರ್ಯೋಧನರ ಮಾತಿನ ಯುದ್ಧ ***

ರಸೆಯಿಮ್ ಕಾಲಾಗ್ನಿರುದ್ರನ್ ಪೊರಮಡುವವೊಲ್… ಅಂತು ಆ ಸರೋಮಧ್ಯದಿಮ್ ಸಾಹಸ ಗರ್ವಾಲಂಕೃತನ್ ತೊಟ್ಟನೆ ಕೊಳೆ ಪೊರಮಟ್ಟು…

ದುರ್ಯೋಧನ: ಎಲ್ಲಿದನ್ ಭೀಮನ್.

(ಎಂದು ಎಣ್ದೆಸೆಯಮ್ ನೋಡುತ್ತೆ… ಮತ್ತೆ ಅದ್ಭುತ ನಟ ನಿಟಿಲಾಲೋಲ ಕೀಲಾಕ್ಷಿವೊಲ್ ಕೋಪಾರಕ್ತ ನೇತ್ರನ್ ದಳ್ಳಿಸೆ… ಧಾರ್ತರಾಷ್ಟ್ರನ್ ನಿಜ ಭುಜಗದೆಯಮ್ ತೂಗಿದನ್ . ಅಂತು ನಿಜಭುಜಗದೆಯಮ್ ತೂಗುತ್ತುಮಿರ್ದ, ದಂದಶೂಕಪತಾಕನ ಸೆರಗಿಲ್ಲದ ಮೆಯ್ಗಲಿತನಕ್ಕೆ ಮೆಚ್ಚಿ ತಲೆಯಮ್ ತೂಗಿ, ನಿಜ ಭುಜಪ್ರತಾಪ ನಿರ್ಜಿತ ನಿಖಿಲ ಭೀಮಸೇನನ್ ಕೌರವನ ಇದಿರ್ಗೆ ವಂದು… )

ಭೀಮ: ನಿನ್ನ ಅನುಜನ ಅರುಣಜಲಮಮ್ ಮುನ್ನಮ್ ತವೆ ಪೀರ್ದೊಡೆ… ಅಂಜಿ ನೀನ್ ಕೊಳನಮ್ ಪುಗೆ… ಬೆನ್ನನೆ ಬಂದಾತನ್ ಶೌರ್ಯೋನ್ನತನ್ ಈ ಕೌರವಮಲ್ಲನ್ ಇರ್ದನಲ್ತೆ.

(ಎಂದು ನೆರನನ್ ಉಂಟುಮಾಡಿ ಮೂದಲಿಸಿ ನುಡಿಯೆ, ದುರ್ಯೋಧನನ್ ಅತಿ ಕ್ರೋಧಾನಲನಾಗಿ… )

ದುರ್ಯೋಧನ: ಬಾಹುವಿಕ್ರಮಿ ದುಶ್ಶಾಸನನ್ ಯಮರಾಜಪ್ರಿಯ ಸೂನುಗಮ್… ನಿನಗಮ್… ಆ ಗಾಂಡೀವಧನ್ವಂಗಮ್ … ಆ ಯಮಳರ್ಗಮ್ ಪ್ರಿಯೆಯಪ್ಪ ಕೃಷ್ಣೆಯ ಕಚಪ್ರಾರಂಭಮಮ್ ಎನ್ನ ಮುಂದೆ ತೆಗವಂದು ಎಲ್ಲಿರ್ದೆ… ಈ ಗಂಡಗರ್ವಮುಮ್ ಅಂದು ಎಲ್ಲಿಗೆ ಪೋಯ್ತು… ಷಂಡ, ನಿನಗೆ ಇಂದು ಈ ಗಂಡನ್ ಆರ್ ಮಾಡಿದರ್… ಅಸುರನ್ ವಸುಧಾತಳಮನ್ ರಸಾತಳಕ್ಕೆ ಉಯ್ಯೆ ಹರಿ ತರಲ್ ಪೊಕ್ಕವೊಲ್ ಈ ವಸುಮತಿಯನ್ ಎತ್ತಿ ತರೆ ಕೊಳನಮ್ ಪೊಕ್ಕೆನ್… ನಿನ್ನಯ ದೆಸೆಯಿಮ್ ಅಂಜಿ ಪೊಕ್ಕೆನೆ … ನಾಳ್ಕಡೆಗಳೆದು ಉರೆ ಬೇರಮ್ ಬಿಳ್ಕೆಯುಮನ್ ತಿಂದು ನೀಮುಮ್ ವನದೊಳ್ ಅಡಗಿರೆ ಈಗಳ್ ನೀಳ್ಕರಿಸಿ ನಿಂದುಮ್ ಬಿರುದುಮಮ್ ಬೀರಮುಮಮ್ ಪೇಳ್ ಕಮ್ಮೈಸುವರೆ … ಪುಟ್ಟಮ್ ಸಟ್ಟುಗಮನ್ ಕೊಂಡು ಅಟ್ಟಾರಿಸಿ ಬೋನಮಿಟ್ಟು ಬಂದೆಯೊ… ಗದೆಗೊಂಡು ಒಟ್ಟೈಸಿ ಕಾದುವಂತುಟು ತೊಟ್ಟನೆ ಕೊಳೆ ನಿನಗೆ ಗಂಡ ಗರ್ವಮುಮ್ ಆಯ್ತೇ… ಎಸರನಿಡುವ ಅಕ್ಕಿ ಕರ್ಚುವ ಬೆಸನಮ್ ಕಯ್ಗೆರೆವ ಕಂಚು ಕರ್ಚುವ ಬೆಸನಮ್ ಬೆಸನಲ್ಲದೆ ಮತ್ಸ್ಯನ ಬಾಣಿಸಿಗಂಗೆ ಆರ್ ಇತ್ತರ್ ಎಲವೊ ನಿನಗೆ ಈ ಬೆಸನಮ್…

(ಎಂದು ಮುಟ್ಟಿ ಮೂದಲಿಸಿ ನುಡಿಯೆ ಭೀಮಸೇನಮ್ ಮುಗುಳ್ನಗೆ ನಕ್ಕು… )

ಭೀಮ: ಪಿರಿಯಣ್ಣನ ನನ್ನಿಯನ್ ಆದರದಿಮ್ ಕಾಯಲ್ಕೆ ಪೆರರ್ಗೆ ಬಾಣಸುಗೆಯ್ದೆನ್… ಕುರುವಂಶಜ ಕೇಳ್, ನಿನ್ನ ಈ ಶರೀರಮಾಂಸದೊಳೆ ಮರುಳ್ಗೆ ಬಾಣಸುಗೆಯ್ವೆನ್… ಪಾಂಡುರಾಜ ಸುತರಮ್ ಜತುಗೇಹ ಅನಲದಾಹದಿಮ್… ವಿಶೇಷಾ ವಿಷ ಲಿಪ್ತ ಗುಪ್ತಾನ್ನದಿಮ್… ಕೃತಕ ದ್ಯೂತ ವಿನೋದದಿಮ್… ದ್ರುಪದಜಾ ಕೇಶ ಅಂಬರ ಆಕೃಷ್ಟಿಯಿಮ್… ಧೃತರಾಷ್ಟ್ರಾತ್ಮಜ, ಮುನ್ನಮ್ ಕೊಲಲ್ಕೆ ಒಡ್ಡಿದಯ್… ಗತಕಾಲಮ್ ಲಯಕಾಲಮಾಯ್ತು ನಿನಗೆ ಇನ್ನು ಅಂತ್ಯಕಾಲಮ್ ಆಯ್ತು ಗಡಾ..

(ಎಂದು ಉರಗಧ್ವಜನನ್ ಮರ್ಮೋದ್ಘಾಟನಮ್ ಗೆಯ್ದು ಮೂದಲಿಸಿದ ಅನಿತರೊಳೆ… ಉರಗಧ್ವಜನ್ ನಿಂದು ಮುನಿದು ಅನಿಬರ ಮೊಗಮಮ್ ನೋಡಿ… )

ದುರ್ಯೋಧನ: ಮಾದ್ರಿಪುತ್ರರ್ ಇರಲ್ ಇಂತು. ಈ ಬಡವುಗಳ್ ಅವರ್ಗಳ್ ಏಗೆಯ್ದಪರ್. ಧರ್ಮಪುತ್ರನ್ ಭೀಮನ್ ಹರಿಸುತನೊಡನೆ ಬೆರಸಿ ಈಗಳ್ ಈ ಮೂವರುಮ್ ಬರ್ಕೆ ಮೇಣ್ ಅಯ್ವರೆ ಬರ್ಕೆ. ಕೃತಾಂತಾತ್ಮಜ ಪವನಜ ಗಾಂಡೀವಧನ್ವರ್ಕಳ್ ಈ ಮೂವರೊಳ್ ಒರ್ಬನ್ ಬರ್ಕೆ. ಎಂತುಮ್ ಕೃಷ್ಣನ್ ತೊಡರ್ದು ಅನಿಬರೊಳ್ ಬರ್ಕೆ ಮೇಣ್ ಬನ್ನಮನ್ ಈವೆನ್…

(ಎನೆ ಧರ್ಮನಂದನನ್ ಧೃತರಾಷ್ಟನಂದನನ್ ಮುನ್ನ ಗೆಯ್ದ ಅಧರ್ಮಮನ್ ನೆನೆಯದೆ ನಿರ್ಮಲಕ್ಷತ್ರ ಧರ್ಮಮನ್ ನೆನೆದು..)

ಧರ್ಮರಾಯ: ಸಮರಮ್ ಆಗದು… ಶಮಯುತನಾಗು… ಮಹಾಭೋಗಿಯಾಗು… ನಿನ್ನಾಳ್ವ ಮಹೀಭಾಗಮುಮನ್ ಸಕಲ ಮಹೀಭಾಗಮುಮನ್ ನೀನೆ ಕೊಂಡು ಸುಖಮಿರಲಾಗಾ… ಕುರುಕುಲಕ್ಷ್ಮಾಪಾಲ ಚೂಡಾಮಣೀ, ಧರಣೀಚಕ್ರಮನ್ ಒಪ್ಪುಗೊಳ್ … ವಿದ್ವೇಷಮನ್ ಬಗೆಯದಿರ್… ನಮ್ಮನ್ ಅಯ್ವರನ್ ಇನ್ನು ಆಳ್ವೆಸಕೆಯ್ಸಿಕೊಳ್ … ಕೀಳ್ಪೊಕ್ಕಿನೊಳ್ ನೆನೆಯದಿರ್… ತೊಟ್ಟುಕೊಂಡಿರದೆ ಎಮ್ಮ ಎಂಬುದನ್ ಇಂಬುಕೆಯ್… ಮನದೊಳ್ ಒಳ್ಪಿಮ್ ಶಾಂತಿ ವಿಶ್ರಾಂತಿ ಸೋದರನ್ ಎಂಬಂತು ಉಪಶಾಂತಿಯಮ್

(ಎನೆ ಹರಿಯೆಂದನ್… )

ಕೃಷ್ಣ: ದುರೋಧನ, ಧರ್ಮತನೂಜನ್ ಒಳ್ಳಿತಮ್ ಪೇಳ್ದಪನ್ ಆತನ ಪೇಳ್ದುದ ಎಸಗಿ ನೀನ್ ಅರಸನಾಗಿ ವಸುಮತಿಯನ್ ಆಳ್ದು ಸುಖಮಿರಲಾಗ…

(ಎಂಬುದುಮ್ ಭೀಮಸೇನನ್ ಇಂತು ಎಂದನ್.)

ಭೀಮ: ನೀನ್ ಅಯ್ದು ಬಾಡದೊಳ್ ಸಂಧಾನಮ್ ಮಾಡಲ್ಕೆ ಪೋದೊಡೆ ಒಲ್ಲದನ್ ಇನ್ನು ಈ ಮಾನಧನನ್ ಎಯ್ದೆ ನಿಜತನುಜ ಅನುಜರ್ ಅಳ್ಕಾಡೆ ಸಂಧಿಯಮ್ ಮಾಡುವನೇ.

(ಎನೆ ದುರ್ಯೋಧನನ್ ಭೀಮಸೇನನ ನುಡಿಯನೆ ಸಮರ್ಥಿಸಿ…)

ದುರ್ಯೋಧನ: ಕಮಲನಾಭ, ಇನತನಯನ ನೇರ್ಪಿಂಗೆ ಮುನ್ ಅರ್ಜುನನನ್ ಕೊಲ್ವೆನ್… ಎನ್ನ ತಮ್ಮನ ನೇರ್ಪಿಂಗೆ ಅನಿಲಜನನ್ ಕೊಲ್ವೆನ್… ನೇರ್ಪಿಂಗೆ ನೇರ್ಪುಗೊಳ್ಳದೆ ಮಾಣೆನ್… ತಾನ್ ಗಡ ಮಧ್ಯಸ್ಥನ್… ನುಡಿವನ್ ಗಡ… ಪುದುವಾಳ್ಕೆ ಎನಗಮ್ ಅವರ್ಗಮ್ ಸಂಧಾನಮ್ ಗಡ… ಮುನ್ನಮ್ ಸಂಧಿಯ ಮಾತಮ್ ಲಂಘಿಸಿದನ್ ಇನ್ನು ಒಡಂಬಟ್ಟಪೆನೇ… ವನವಾಸಮಲಿನನನ್ ಯಮತನಯನನ್ ಉಜ್ವಳಿಸಿ… ಗೋತ್ರ ಧವಳನನ್ ಎನ್ನನ್ ಘನಮಲಿನಮ್ ಮಾಡಿದೆ… ಕೃಷ್ಣ, ನಿನ್ನ ವೋಲ್ ಶ್ವೇತಕೃಷ್ಣಕಾರಕರ್ ಒಳರೇ… ಯದುಕುಲ ಜಲನಿಧಿಯೊಳ್ ಅಮರ್ದುಮ್ ನಂಜುಮ್ ಒಡನೆ ಪುಟ್ಟುವ ವೋಲ್ ಅಂಕದ ಹಲಿಯುಮ್ ನೀನುಮ್ ಪುಟ್ಟಿದಿರ್… ಅದರ್ಕೆ ಅತ್ತ ಬಲನ್ ಗುಣಿಯಾದನ್… ನೀನ್ ನಿರ್ಗುಣಿಯಯ್…

(ಎಂಬ ಅನ್ನೆಗಮ್, ಆ ಪ್ರಸ್ತಾವದೊಳ್… )

ಪದ ವಿಂಗಡಣೆ ಮತ್ತು ತಿರುಳು: ಬೀಮ ದುರ‍್ಯೋದನರ ಮಾತಿನ ಯುದ್ದ

ರಸೆ+ಇಮ್; ರಸೆ=ಪಾತಾಳ; ಇಮ್=ಇಂದ; ಕಾಲ+ಅಗ್ನಿ+ರುದ್ರನ್; ಕಾಲ=ಪ್ರಳಯ; ರುದ್ರ=ಶಿವ; ಕಾಲಾಗ್ನಿರುದ್ರ=ಇಡೀ ಜಗತ್ತನ್ನೇ ಸರ್‍ವನಾಶ ಮಾಡುವುದಕ್ಕಾಗಿ ಶಿವನು ತಳೆಯುವ ಕೋಪೋದ್ರೇಕದ ರೂಪ;

ರಸೆಯಿಮ್ ಕಾಲಾಗ್ನಿರುದ್ರನ್ ಪೊರಮಡುವವೊಲ್=ಪಾತಾಳ ಲೋಕದಿಂದ ಪ್ರಳಯಕಾಲದ ಬೆಂಕಿಯಂತಹ ಕೋಪೋದ್ರೇಕದ ರುದ್ರನು ಹೊರಬರುವಂತೆ;

ಗರ್ವ+ಅಲಂಕೃತನ್; ಅಲಂಕೃತನ್= ಸಿಂಗರಿಸಿದವನು; ತೊಟ್ಟನೆ ಕೊಳೆ=ಇದ್ದಕ್ಕಿದ್ದಂತೆಯೇ ಕಂಡುಬರುವಂತೆ/ಮೂಡಿಬರುವಂತೆ;

ಅಂತು ಆ ಸರೋಮಧ್ಯದಿಮ್ ಸಾಹಸ ಗರ್ವಾಲಂಕೃತನ್ ತೊಟ್ಟನೆ ಕೊಳೆ ಪೊರಮಟ್ಟು=ಆ ರೀತಿಯಲ್ಲಿ ಆ ಸರೋವರದ ನಡುವೆಯಿಂದ ಪರಾಕ್ರಮಿಯೂ ಸೊಕ್ಕಿನಿಂದ ಮೆರೆಯುತ್ತಿರುವವನೂ ಆದ ದುರ್ಯೋದನನು ಇದ್ದಕ್ಕಿದ್ದಂತೆಯೇ ಹೊರಬಂದು;

ಎಣ್+ದೆಸೆ; ಎಣ್ದೆಸೆ=ಎಂಟು ದಿಕ್ಕು;

ಎಲ್ಲಿದನ್ ಭೀಮನ್ ಎಂದು ಎಣ್ದೆಸೆಯಮ್ ನೋಡುತ್ತೆ=ಎಲ್ಲಿದ್ದಾನೆ ಬೀಮ ಎಂದು ಎಂಟು ದಿಕ್ಕುಗಳ ಕಡೆಯೂ ನೋಡುತ್ತ: ಮತ್ತೆ=ಪುನಹ; ಅದ್ಭುತ ನಟ=ಮಹಾ ನಟ/ತಾಂಡವ ನಾಟ್ಯವನ್ನು ಮಾಡುವ ಶಿವ;

ನಿಟಿಲ+ಆಲೋಲ; ನಿಟಿಲ=ಹಣೆ; ಆಲೋಲ=ಅಲುಗಾಡುವ/ಹೊರಳುವ; ಕೀಲ+ಅಕ್ಷಿ+ವೊಲ್; ಕೀಲ=ಬೆಂಕಿ; ಅಕ್ಷಿ=ಕಣ್ಣು; ವೊಲ್=ಅಂತೆ/ಹಾಗೆ;

ಅದ್ಭುತ ನಟ ನಿಟಿಲಾಲೋಲ ಕೀಲಾಕ್ಷಿವೊಲ್=ತಾಂಡವ ನಾಟ್ಯವನ್ನು ಮಾಡುವ ಮುಕ್ಕಣ್ಣನಾದ ಶಿವನ ಹಣೆಯಲ್ಲಿ ಹೊರಳುವ ಬೆಂಕಿಗಣ್ಣಿನಂತೆ;

ಕೋಪ+ಆರಕ್ತ; ಆರಕ್ತ=ಪೂರ್ಣವಾಗಿ ಕೆಂಪಾದ; ದಳ್ಳಿಸೆ=ಉರಿಯಲು/ದಗದಗಿಸಲು;

ಕೋಪಾರಕ್ತ ನೇತ್ರನ್ ದಳ್ಳಿಸೆ=ಕೋಪದಿಂದ ಕೆಂಗಣ್ಣನಾದ ದುರ್‍ಯೋದನನು ಆಕ್ರೋಶದಿಂದ ಕೆರಳಿ;

ಧಾರ್ತರಾಷ್ಟ್ರನ್= ದ್ರುತರಾಶ್ಟ್ರನ ಮಗ ದುರ್‍ಯೋದನ; ನಿಜ=ತನ್ನ;

ಧಾರ್ತರಾಷ್ಟ್ರನ್ ನಿಜ ಭುಜಗದೆಯಮ್ ತೂಗಿದನ್=ದುರ್‍ಯೋದನನು ತನ್ನ ಹೆಗಲ ಮೇಲಿದ್ದ ಗದೆಯನ್ನು ತೆಗೆದುಕೊಂಡು ಅತ್ತಿತ್ತ ಬೀಸಿದನು;

ಅಂತು ನಿಜಭುಜಗದೆಯಮ್ ತೂಗುತ್ತುಮಿರ್ದ=ಆ ರೀತಿ ದುರ್‍ಯೋದನನು ತನ್ನ ಹೆಗಲಿನ ಮೇಲಿದ್ದ ಗದೆಯನ್ನು ತೆಗೆದುಕೊಂಡು ಆವೇಶ ಮತ್ತು ಆಕ್ರೋಶದಿಂದ ಅತ್ತಿತ್ತ ಬೀಸುತ್ತಿರುವುದನ್ನು;

ದಂದಶೂಕ+ಪತಾಕನ; ದಂದಶೂಕ=ಹಾವು; ದಂದಶೂಕಪತಾಕನ್=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ದುರ್‍ಯೋದನ; ಸೆರಗು+ಇಲ್ಲದ; ಸೆರಗು=ನೆರವು/ಸಹಾಯ; ಸೆರಗಿಲ್ಲದ=ನೆರವಿಲ್ಲದ/ಸಹಾಯವಿಲ್ಲದ; ಮೆಯ್+ಕಲಿತನಕ್ಕೆ; ಮೆಯ್ಗಲಿತನ=ಪರಾಕ್ರಮ/ಶೂರತನ;

ದಂದಶೂಕಪತಾಕನ ಸೆರಗಿಲ್ಲದ ಮೆಯ್ಗಲಿತನಕ್ಕೆ ಮೆಚ್ಚಿ ತಲೆಯಮ್ ತೂಗಿ=ಯಾರ ನೆರವಿಲ್ಲದಿದ್ದರೂ ಏಕಾಂಗಿಯಾಗಿಯೇ ಹೋರಾಡಲು ಸಿದ್ದನಾಗಿರುವ ದುರ್‍ಯೋದನನ ಶೂರತನಕ್ಕೆ ಬೀಮನು ಮೆಚ್ಚುಗೆಯಿಂದ ತಲೆಯನ್ನು ತೂಗುತ್ತ;

ನಿರ್ಜಿತ=ಯಾರಿಂದಲೂ ಜಯಿಸಲು ಅಸಾದ್ಯನಾದವನು; ನಿಖಿಲ=ಎಲ್ಲ/ಸಮಸ್ತ;

ನಿಜ ಭುಜಪ್ರತಾಪ ನಿರ್ಜಿತ ನಿಖಿಲ ಭೀಮಸೇನನ್ ಕೌರವನ ಇದಿರ್ಗೆ ವಂದು=ತನ್ನ ಬಾಹುಬಲದ ಪರಾಕ್ರಮದಿಂದಲೇ ಯಾರಿಂದಲೂ ಜಯಿಸಲು ಅಸಾದ್ಯನಾದ ಮಹಾ ಬಲಶಾಲಿ ಬೀಮಸೇನನು ದುರ್‍ಯೋದನನ ಮುಂದಕ್ಕೆ ಬಂದು;

ಅನುಜ=ತಮ್ಮ; ಅರುಣ+ಜಲಮ್+ಅಮ್; ಅರುಣ=ಕೆಂಪು ಬಣ್ಣ; ಅರುಣಜಲ=ರಕ್ತ/ನೆತ್ತರು; ತವೆ=ಹೆಚ್ಚಾಗಿ/ಅತಿಶಯವಾಗಿ;

ನಿನ್ನ ಅನುಜನ ಅರುಣಜಲಮಮ್ ಮುನ್ನಮ್ ತವೆ ಪೀರ್ದೊಡೆ=ನಿನ್ನ ತಮ್ಮನಾದ ದುಶ್ಶಾಸನನ ನೆತ್ತರನ್ನು ನಾನು ಈ ಮೊದಲು ಸಂಪೂರ್‍ಣವಾಗಿ ಕುಡಿದರೆ;

ಅಂಜಿ ನೀನ್ ಕೊಳನಮ್ ಪುಗೆ=ಹೆದರಿಕೊಂಡು ನೀನು ಜೀವವನ್ನು ಉಳಿಸಿಕೊಳ್ಳಲೆಂದು ಕೊಳವನ್ನು ಹೊಕ್ಕರೆ;

ಶೌರ್ಯ+ಉನ್ನತನ್; ಉನ್ನತನ್= ಉತ್ತಮನಾದವನು/ ಎತ್ತರವಾಗಿರುವವನು; ಶೌರ್ಯೋನ್ನತನ್=ಶೂರತನದಲ್ಲಿ ಎಲ್ಲರಿಗಿಂತ ಮಿಗಿಲಾದವನು; ಮಲ್ಲ=ಜಟ್ಟಿ; ಕೌರವಮಲ್ಲ=ಕುರುವಂಶದವರೆಲ್ಲರನ್ನು ಸೋಲಿಸುವ ಜಟ್ಟಿ/ಬೀಮ; ಇರ್ದನ್+ಅಲ್ತೆ; ನೆರ=ಮರ್ಮಸ್ತಾನ/ಅಂತರಂಗ;

ಬೆನ್ನನೆ ಬಂದಾತನ್ ಶೌರ್ಯೋನ್ನತನ್ ಈ ಕೌರವಮಲ್ಲನ್ ಇರ್ದನಲ್ತೆ ಎಂದು ನೆರನನ್ ಉಂಟುಮಾಡಿ ಮೂದಲಿಸಿ ನುಡಿಯೆ=ನಿನ್ನನ್ನು ಬೆನ್ನಟ್ಟಿ ಬಂದಿರುವ ಮಹಾಶೂರನಾದ ಈ ಬೀಮಸೇನನು ಇದ್ದಾನಲ್ಲವೇ… ನೀನು ಎಲ್ಲೆ ಅಡಗಿಕೊಂಡಿದ್ದರೂ ಬೀಮಸೇನನು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ದುರ್‍ಯೋದನನ ಮರ್ಮಸ್ತಾನಕ್ಕೆ ತಾಕುವಂತೆ ಹೀಯಾಳಿಸಿ ನುಡಿಯಲು;

ಕ್ರೋಧ+ಅನಲನ್+ಆಗಿ; ಅನಲ=ಬೆಂಕಿ;

ದುರ್ಯೋಧನನ್ ಅತಿ ಕ್ರೋಧಾನಲನಾಗಿ=ದುರ್‍ಯೋದನನು ಅತಿಯಾದ ಕೋಪೋದ್ರೇಕದಿಂದ ಕೆರಳಿ ಕೆಂಡವಾಗಿ;

ಸೂನು=ಮಗ; ಯಮರಾಜಪ್ರಿಯಸೂನು=ಯಮರಾಜನ ಪ್ರೀತಿಯ ಮಗ/ದರ್ಮರಾಯ; ಧನ್ವ=ಬಿಲ್ಲು; ಗಾಂಡೀವಧನ್ವಂಗ=ಗಾಂಡೀವ ಎಂಬ ಬಿಲ್ಲನ್ನು ಹೊಂದಿರುವವನು/ಅರ್‍ಜುನ; ಯಮಳರ್=ಅವಳಿ ಜವಳಿ ಮಕ್ಕಳು/ನಕುಲ ಮತ್ತು ಸಹದೇವ; ಕೃಷ್ಣೆ=ದ್ರೌಪದಿ; ಕಚ=ತಲೆಗೂದಲು; ಕಚಪ್ರಾರಂಭ=ತಲೆಗೂದಲಿನ ಬುಡ/ತಲೆಯ ಹಿಂಬದಿಯಲ್ಲಿ ಮುಡಿ; ಬಾಹುವಿಕ್ರಮಿ=ಅಪಾರವಾದ ತೋಳ್ಬಲವುಳ್ಳ ವೀರ; ತೆಗೆವ+ಅಂದು; ತೆಗೆ=ಎಳೆ/ಜಗ್ಗು; ಅಂದು=ಆಗ/ಆ ದಿನ/ಆ ಸಮಯದಲ್ಲಿ;

ಯಮರಾಜಪ್ರಿಯಸೂನುಗಮ್… ನಿನಗಮ್… ಆ ಗಾಂಡೀವಧನ್ವಂಗಮ್ … ಆ ಯಮಳರ್ಗಮ್ ಪ್ರಿಯೆಯಪ್ಪ ಕೃಷ್ಣೆಯ ಕಚಪ್ರಾರಂಭಮಮ್ ಬಾಹುವಿಕ್ರಮಿ ದುಶ್ಶಾಸನನ್ ಎನ್ನ ಮುಂದೆ ತೆಗವಂದು ಎಲ್ಲಿರ್ದೆ=ಬಾಹುಬಲದಲ್ಲಿ ಶೂರನಾದ ನನ್ನ ತಮ್ಮ ದುಶ್ಶಾಸನನು ದರ್‍ಮರಾಯನಿಗೂ… ನಿನಗೂ… ಆ ಅರ್‍ಜುನಗೂ… ಆ ನಕುಲ ಸಹದೇವರಿಗೂ ಪ್ರಿಯಪತ್ನಿಯಾಗಿರುವ ದ್ರೌಪದಿಯ ಮುಡಿಯನ್ನು ಹಿಡಿದು ರಾಜಸಬೆಗೆ ಎಳೆತಂದು, ನನ್ನ ಮುಂದೆ ಸೀರೆಯನ್ನು ಸುಲಿಯುವಾಗ… ನೀನು ಎಲ್ಲಿದ್ದೆ… ಏನು ಮಾಡುತ್ತಿದ್ದೆ;

ಗಂಡಗರ್ವ=ಪರಾಕ್ರಮದ ಸೊಕ್ಕು;

ಈ ಗಂಡಗರ್ವಮುಮ್ ಅಂದು ಎಲ್ಲಿಗೆ ಪೋಯ್ತು=ಈಗ ಮಹಾಪರಾಕ್ರಮಿಯಂತೆ ಸೊಕ್ಕಿನ ನುಡಿಯನ್ನಾಡುತ್ತಿರುವೆಯಲ್ಲಾ… ಅಂದು ನಿನ್ನ ಒಲವಿನ ಹೆಂಡತಿಯ ಮಾನಹರಣವಾಗುತ್ತಿದ್ದಾಗ ನಿನ್ನ ಈ ಪರಾಕ್ರಮ ಎಲ್ಲಿಗೆ ಹೋಗಿತ್ತು;

ಷಂಡ=ನಪುಂಸಕ/ಹೇಡಿ;

ಷಂಡ, ನಿನಗೆ ಇಂದು ಈ ಗಂಡನ್ ಆರ್ ಮಾಡಿದರ್=ಹೇಡಿಯಾದ ಬೀಮನೇ, ನಿನಗೆ ಇಂದು ಈ ಗಂಡಸುತನವನ್ನು ಯಾರು ಕೊಟ್ಟರು;

ಅಸುರ=ರಕ್ಕಸ/ಹಿರಣ್ಯಾಕ್ಶ; ವಸುಧಾತಳ=ಬೂಮಂಡಲ; ರಸಾತಳ=ಪಾತಾಳ; ಉಯ್=ತೆಗೆದುಕೊಂಡು ಹೋಗು; ಹರಿ=ವಿಶ್ಣು;

ಅಸುರನ್ ವಸುಧಾತಳಮನ್ ರಸಾತಳಕ್ಕೆ ಉಯ್ಯೆ ಹರಿ ತರಲ್ ಪೊಕ್ಕವೊಲ್ ಈ ವಸುಮತಿಯನ್ ಎತ್ತಿ ತರೆ ಕೊಳನಮ್ ಪೊಕ್ಕೆನ್=ಅಂದು ತ್ರೇತಾಯುಗದಲ್ಲಿ ಹಿರಣ್ಯಾಕ್ಶನೆಂಬ ರಕ್ಕಸನು ಬೂಮಂಡಲವನ್ನು ಅಪಹರಿಸಿ, ಪಾತಾಳಲೋಕಕ್ಕೆ ತೆಗೆದುಕೊಂಡು ಹೋದಾಗ, ವಿಶ್ಣು ಪರಮಾತ್ಮನು ಹಂದಿಯ ರೂಪನ್ನು ತಳೆದು, ಪಾತಾಳದ ಆಳದಲ್ಲಿದ್ದ ಬೂಮಂಡಲವನ್ನು ಎತ್ತಿ ತರಲೆಂದು ಕಡಲನ್ನು ಹೊಕ್ಕಂತೆ, ನಿಮ್ಮ ವಶವಾಗುತ್ತಿರುವ ಈ ನನ್ನ ರಾಜ್ಯವನ್ನು ಕಾಪಾಡಿಕೊಳ್ಳಲೆಂದು ಈ ಸರೋವರವನ್ನು ಹೊಕ್ಕಿದ್ದೆನು;

ನಿನ್ನಯ ದೆಸೆಯಿಮ್ ಅಂಜಿ ಪೊಕ್ಕೆನೆ=ನಿನ್ನ ಕಡೆಯಿಂದ ಅಪಾಯವಾಗುವುದೆಂದು ಹೆದರಿಕೊಂಡು ಸರೋವರವನ್ನು ಹೊಕ್ಕಿದ್ದೇನೆಯೇ; ಜೀವವನ್ನು ಉಳಿಸಿಕೊಳ್ಳುವುದಕ್ಕಲ್ಲ… ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಸರೋವನ್ನು ಹೊಕ್ಕಿದ್ದೆನು;

ನಾಳ್ಕಡೆ+ಕಳೆದು; ನಾಡು+ಕಡೆ; ಕಡೆ=ದಿಕ್ಕು; ನಾಳ್ಕಡೆ=ನಾಡಿನ ದಿಕ್ಕುಗಳು; ಕಳೆದು=ದಾಟಿ; ಉರೆ=ಅತಿಶಯವಾಗಿ; ಬಿಳ್ಕೆ= ಒಂದು ಬಗೆಯ ಕಾಡುಮರ ಮತ್ತು ಅದರ ಹಣ್ಣು; ಅಡಗು=ಮರೆಯಾಗು;

ನಾಳ್ಕಡೆಗಳೆದು ಉರೆ ಬೇರಮ್ ಬಿಳ್ಕೆಯುಮನ್ ತಿಂದು ನೀಮುಮ್ ವನದೊಳ್ ಅಡಗಿರೆ=ನಾಡಿನಿಂದ ಹೊರಹಾಕಿಸಿಕೊಂಡು ಕಾಡಿನಲ್ಲಿ ತಿನ್ನುವುದಕ್ಕೆ ಅನ್ನವಿಲ್ಲದೆ ಗೆಡ್ಡೆಗೆಣಸುಗಳನ್ನು ಮತ್ತು ಕಾಡಿನ ಮರಗಳ ಹಣ್ಣುಗಳನ್ನು ತಿಂದು ಕಾಡಿನಲ್ಲಿ ಅಡಗಿದ್ದ ನಿಮಗೆ;

ನೀಳ್ಕರಿಸಿ ನಿಂದು= ತಲೆಯೆತ್ತಿ ನಿಂತುಕೊಂಡು/ಗರ್‍ವದಿಂದ ನಿಂತುಕೊಂಡು; ಬಿರುದು=ಪ್ರಶಸ್ತಿ; ಬೀರ= ಕಲಿತನ/ ಪರಾಕ್ರಮ; ಕಮ್ಮೈಸು=ಸೊಗಸಾಗಿಸು/ಚೆಂದಕಾಣಿಸು/ಮೆರೆಯುವುದು;

ಈಗಳ್ ನೀಳ್ಕರಿಸಿ ನಿಂದುಮ್ ಬಿರುದುಮಮ್ ಬೀರಮುಮಮ್ ಪೇಳ್ ಕಮ್ಮೈಸುವರೆ=ಈಗ ಸೊಕ್ಕಿನಿಂದ ತಲೆಯೆತ್ತಿ ನಿಂತು ಬಿರುದಗಳನ್ನು ಹೇಳಿಕೊಳ್ಳುತ್ತ… ಶೂರತನದ ಮಾತುಗಳನ್ನಾಡುತ್ತ ಮೆರೆಯುತ್ತಾರೆಯೇ… ನೀನೇ ಹೇಳು… ಅಂದು ಅಪಮಾನದಿಂದ ಕುಗ್ಗಿ ಬಾಳುತ್ತಿದ್ದವರು… ಇಂದು ಹೀಗೆ ಮೆರೆಯಬಹುದೇ;

ಪುಟ್ಟ=ಮರದ ಸವುಟು; ಸಟ್ಟುಗ=ಸವುಟು; ಅಡು=ಅಡುಗೆ ಮಾಡು/ಬೇಯಿಸು/ ಪಾಕಮಾಡು; ಬೋನಮ್+ಇಟ್ಟು; ಬೋನ=ಅನ್ನ/ಆಹಾರ;

ಪುಟ್ಟಮ್ ಸಟ್ಟುಗಮನ್ ಕೊಂಡು ಅಟ್ಟಾರಿಸಿ ಬೋನಮಿಟ್ಟು ಬಂದೆಯೊ=ಅಲ್ಲೆ ಸವಟುಗಳನ್ನು ಹಿಡಿದುಕೊಂಡು ಬಿಸಿಬಿಸಿ ಅಡುಗೆಯನ್ನು ಮಾಡಿ ಸಿದ್ದಪಡಿಸಿ, ಅನ್ನಪಾನಗಳನ್ನು ಇತರರಿಗೆ ಉಣಬಡಿಸಿ ಬಂದಿರುವೆಯೋ;

ಒಟ್ಟೈಸು=ಆಕ್ರಮಣ ಮಾಡು/ಮುತ್ತು/ಗುಂಪುಗೂಡು; ತೊಟ್ಟನೆ ಕೊಳೆ=ಇದ್ದಕ್ಕಿದ್ದಂತೆಯೇ;

ಗದೆಗೊಂಡು ಒಟ್ಟೈಸಿ ಕಾದುವಂತುಟು ತೊಟ್ಟನೆ ಕೊಳೆ ನಿನಗೆ ಗಂಡಗರ್ವಮುಮ್ ಆಯ್ತೇ=ಗದೆಯನ್ನು ಹಿಡಿದುಕೊಂಡು ಆಕ್ರಮಣಮಾಡಿ ಹೋರಾಡಬೇಕೆಂದು ಇದ್ದಕ್ಕಿದ್ದಂತೆಯೇ ನಿನಗೆ ಶೂರತನದ ಸೊಕ್ಕು ಬಂದಿತೇ;

ಎಸರನ್+ಇಡುವ; ಎಸರು=ಅಡುಗೆಯನ್ನು ಮಾಡುವುದಕ್ಕಾಗಿ ಕುದಿಯಲು ಇಡುವ ನೀರು; ಕರ್ಚು=ತೊಳೆಯುವಿಕೆ; ಬೆಸನ=ಕೆಲಸ;

ಎಸರನಿಡುವ ಅಕ್ಕಿ ಕರ್ಚುವ ಬೆಸನಮ್=ಅಡುಗೆಯನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ನೀರನ್ನು ಇಡುವ, ಅಕ್ಕಿಯನ್ನು ತೊಳೆಯುವ ಕೆಲಸ;

ಕಯ್ಗೆ+ಎರೆವ; ಎರೆ=ಹಾಕು/ಹೊಯ್ಯು/ಸುರಿ; ಕಂಚು=ಕಂಚಿನ ಲೋಹದ ತಟ್ಟೆ, ಲೋಟ ಮತ್ತು ಇತರ ವಸ್ತುಗಳು;

ಕಯ್ಗೆರೆವ ಕಂಚು ಕರ್ಚುವ ಬೆಸನಮ್=ಉಣಬಂದವರ ಕಯ್ಯಿಗೆ ನೀರನ್ನು ಹೊಯ್ಯುವ, ಅಡುಗೆ ಮಾಡಿದ ಕಂಚಿನ ಪಾತ್ರೆಗಳನ್ನು ಮತ್ತು ಉಂಡ ತಟ್ಟೆ ಲೋಟಗಳನ್ನು ತೊಳೆಯುವ ಕೆಲಸ; ಮತ್ಸ್ಯ=ಇದು ಒಂದು ದೇಶದ ಹೆಸರು; ಮತ್ಸ್ಯನ=ಮತ್ಸ್ಯ ದೇಶದ ಅರಸನಾದ ವಿರಾಟರಾಯನ; ಬಾಣಿಸಿಗ=ಅಡುಗೆಯವನು; ಮತ್ಸ್ಯನ ಬಾಣಿಸಿಗ=ಬೀಮಸೇನ. ಪಾಂಡವರು ಹನ್ನೆರಡು ವರುಶ ವನವಾಸವನ್ನು ಮುಗಿಸಿದ ನಂತರ ಜೂಜಾಟದ ಕರಾರಿನಂತೆ ಒಂದು ಅಜ್ನಾತವಾಸವನ್ನು ಕಳೆಯಲೆಂದು ಮತ್ಸ್ಯದೇಶದ ರಾಜನ ವಿರಾಟರಾಯನ ಅರಮನೆಯಲ್ಲಿ ದರ್ಮರಾಯನು ಕಂಕಬಟ್ಟನಾಗಿಯೂ, ಬೀಮನು ವಲಲ ಎಂಬ ಹೆಸರಿನಲ್ಲಿ ಬಾಣಿಸಿಗನಾಗಿಯೂ, ಅರ್‍ಜುನನು ಬೃಹನ್ನಳೆಯ ವೇಶದಲ್ಲಿ ರಾಣಿವಾಸದಲ್ಲಿ ನಾಟ್ಯವನ್ನು ಕಲಿಸುವ ಗುರುವಾಗಿಯೂ, ನಕುಲನು ಗೊಲ್ಲನಾಗಿಯೂ, ಸಹದೇವನು ಕುದುರೆಗಳ ಪಾಲಕನಾಗಿಯೂ, ದ್ರೌಪದಿಯು ರಾಣಿವಾಸದಲ್ಲಿ ದಾಸಿಯಾಗಿಯೂ ಕೆಲಸಕ್ಕೆ ಸೇರುತ್ತಾರೆ;

ಮುಟ್ಟಿ ಮೂದಲಿಸಿ=ಮನಸ್ಸಿಗೆ ಗಾಸಿಯಾಗುವಂತೆ ಹೀಯಾಳಿಸಿ/ಹಂಗಿಸಿ;

ಬೆಸನಲ್ಲದೆ ಮತ್ಸ್ಯನ ಬಾಣಸಿಗಂಗೆ ಆರ್ ಇತ್ತರ್ ಎಲವೊ ನಿನಗೆ ಈ ಬೆಸನಮ್ ಎಂದು ಮುಟ್ಟಿ ಮೂದಲಿಸಿ ನುಡಿಯೆ=ಅಡುಗೆಯನ್ನು ಬೇಯಿಸುವ… ಉಣ ಬಡಿಸುವ… ಪಾತ್ರೆಗಳನ್ನು ತೊಳೆಯುವ ಬಾಣಿಸಿಗನ ಕೆಲಸ ಮಾಡುವುದನ್ನು ಬಿಟ್ಟು, ಮತ್ಸ್ಯನ ಬಾಣಸಿಗನಾದ ನಿನಗೆ ರಣರಂಗದಲ್ಲಿ ಹೋರಾಡುವ ಈ ಕೆಲಸವನ್ನು ಯಾರು ಕೊಟ್ಟರೋ ಎಂದು ಬೀಮಸೇನನ ಮನಸ್ಸಿಗೆ ಗಾಸಿಯಾಗುವಂತೆ ದುರ್‍ಯೋದನನು ಹಂಗಿಸಿ ನುಡಿಯಲು;

ಭೀಮಸೇನಮ್ ಮುಗುಳ್ನಗೆ ನಕ್ಕು=ಬೀಮಸೇನನು ದುರ್‍ಯೋದನನ ಮೂದಲಿಕೆಯ ಮಾತನ್ನು ಮನಸ್ಸಿಗೆ ಹಾಕಿಕೊಳ್ಳದೇ ಮುಗುಳ್ನಗೆಯನ್ನು ಬೀರುತ್ತ;

ನನ್ನಿ=ಸತ್ಯ;

ಪಿರಿಯಣ್ಣನ ನನ್ನಿ=ಪಾಂಡವರಲ್ಲಿ ಹಿರಿಯ ಪುತ್ರನಾದ ದರ್‍ಮರಾಯನು ಜೂಜಿನ ಆಟದಲ್ಲಿ ಸಕಲ ಸಂಪತ್ತನ್ನು ಸೋತು, ಜೂಜಾಟದ ಪಣದಂತೆ ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶ ಅಜ್ನಾತವಾಸದ ಕರಾರಿಗೆ ಬದ್ದನಾಗಿದ್ದನು. ಅಣ್ಣನಾದ ದರ್‍ಮರಾಯನ ಆ ಮಾತನ್ನು ಉಳಿಸುವುದಕ್ಕಾಗಿಯೇ ದ್ರೌಪದಿಯನ್ನೊಳಗೊಂಡು ಬೀಮ, ಅರ್‍ಜುನ, ನಕುಲ, ಸಹದೇವರೆಲ್ಲರೂ ಮೂಕರಾಗಿ ನೋವನ್ನು ಉಣ್ಣುತ್ತಿದ್ದರು;

ಆದರ=ಪ್ರೀತಿ/ಮರ್‍ಯಾದೆ/ಗಮನ;

ಪಿರಿಯಣ್ಣನ ನನ್ನಿಯನ್ ಆದರದಿಮ್ ಕಾಯಲ್ಕೆ ಪೆರರ್ಗೆ ಬಾಣಸುಗೆಯ್ದೆನ್=ನಮ್ಮ ದೊಡ್ಡ ಅಣ್ಣನಾದ ದರ್‍ಮರಾಯನ ಸತ್ಯದ ನಡೆನುಡಿಯನ್ನು ಎಚ್ಚರದಿಂದ ಕಾಯ್ದುಕೊಳ್ಳಬೇಕು ಎಂಬ ಪ್ರೀತಿಯಿಂದ ಬೇರೆಯವರ ಬಳಿಯಲ್ಲಿ ಅಡುಗೆಯ ಕೆಲಸವನ್ನು ಮಾಡಿದೆನು;

ಕುರುವಂಶಜ ಕೇಳ್=ಕುರುವಂಶದಲ್ಲಿ ಹುಟ್ಟಿರುವ ದುರ್‍ಯೋದನನೇ ಕೇಳು;

ಮರುಳ್=ದೆವ್ವ/ಪಿಶಾಚಿ;

ನಿನ್ನ ಈ ಶರೀರಮಾಂಸದೊಳೆ ಮರುಳ್ಗೆ ಬಾಣಸುಗೆಯ್ವೆನ್=ನಿನ್ನನ್ನು ಕೊಂದು, ನಿನ್ನ ಮಯ್ಯಿನ ಮಾಂಸದಿಂದಲೇ ಇಂದು ದೆವ್ವಗಳಿಗೆ ಅಡುಗೆಯನ್ನು ಮಾಡಿ ಉಣಬಡಿಸುತ್ತೇನೆ;

ಪಾಂಡುರಾಜ ಸುತರಮ್=ಪಾಂಡುರಾಜನ ಮಕ್ಕಳಾದ ನಮ್ಮನ್ನು;

ಜತುಗೇಹ=ಅರಗಿನ ಮನೆ; ಅನಲ=ಬೆಂಕಿ; ದಾಹ=ಉರಿ;

ಜತುಗೇಹ ಅನಲದಾಹದಿಮ್= ಅರಗಿನ ಮನೆಯ ಬೆಂಕಿಯ ಉರಿಯಲ್ಲಿ ಕೊಲ್ಲಲು;

ಲಿಪ್ತ=ಬೆರೆಸಿದ; ವಿಶೇಷ=ಹೆಚ್ಚಾದ; ಗುಪ್ತ+ಅನ್ನದಿಮ್;

ವಿಷ ಲಿಪ್ತ ಆ ವಿಶೇಷ ಗುಪ್ತಾನ್ನದಿಮ್= ನನ್ನನ್ನು ಕೊಲ್ಲಲೆಂದೇ ರಹಸ್ಯವಾಗಿ ವಿಶವನ್ನು ಬೆರೆಸಿ ಸಿದ್ದಪಡಿಸಿದ ಅನ್ನದಿಂದ/ವಿಶದ ಲಡ್ಡುಗೆಗಳಿಂದ;

ಕೃತಕ=ವಂಚನೆ/ಕಪಟತನ; ದ್ಯೂತ=ಜೂಜು; ವಿನೋದ=ಆಟ;

ಕೃತಕ ದ್ಯೂತ ವಿನೋದದಿಮ್=ಪಾಂಡವರಾದ ನಮ್ಮನ್ನು ವಂಚಿಸಿ ರಾಜಸಂಪತ್ತೆಲ್ಲವನ್ನೂ ದೋಚಬೇಕೆಂಬ ದುರುದ್ದೇಶದಿಂದ ಏರ್‍ಪಡಿಸಿದ ಜೂಜಿನ ಪಗಡೆಯಾಟದಿಂದ;

ದ್ರುಪದಜಾ=ದ್ರುಪದನ ಮಗಳಾದ ದ್ರೌಪದಿ; ಕೇಶ=ತಲೆಗೂದಲು; ಅಂಬರ=ಬಟ್ಟೆ; ಆಕೃಷ್ಟಿ+ಇಮ್; ಆಕೃಷ್ಟಿ= ಸೆಳೆಯುವಿಕೆ/ ಜಗ್ಗುವಿಕೆ/ಎಳೆಯುವಿಕೆ;

ದ್ರುಪದಜಾ ಕೇಶ ಅಂಬರ ಆಕೃಷ್ಟಿಯಿಮ್=ನಿನ್ನ ತಮ್ಮನಾದ ದುಶ್ಶಾಸನನಿಂದ ರಾಜಸಬೆಗೆ ದ್ರೌಪದಿಯ ಮುಡಿಯನ್ನು ಹಿಡಿದು ಎಳೆತರಿಸಿ, ಆಕೆಯ ಸೀರೆಯನ್ನು ಸುಲಿದು ಮಾಡಿದ ಅಪಮಾನದಿಂದ;

ಧೃತರಾಷ್ಟ್ರಾತ್ಮಜ ಮುನ್ನಮ್ ಕೊಲಲ್ಕೆ ಒಡ್ಡಿದಯ್=ದುರ್‍ಯೋದನನೇ… ಈ ಮೊದಲು ನಮ್ಮನ್ನು ಅಪಮಾನಪಡಿಸಿ ಕೊಲ್ಲುವುದಕ್ಕೆ ಬಹುಬಗೆಯ ಒಳಸಂಚುಗಳನ್ನು ಹೂಡಿದೆ;

ಗತಕಾಲ=ಕಳೆದುಹೋದ ಕಾಲ; ಲಯಕಾಲ=ನಾಶವಾದ ಕಾಲ; ಲಯಕಾಲಮ್+ಆಯ್ತು;

ಗತಕಾಲಮ್ ಲಯಕಾಲಮಾಯ್ತು=ನಮ್ಮ ಪಾಲಿನ ಕೆಟ್ಟಕಾಲವು ಈಗ ನಾಶವಾಯಿತು/ಇಲ್ಲವಾಯಿತು;

ಗಡಾ=ಕಂಡೆಯಾ/ತಿಳಿದಿರುವೆಯಾ;

ನಿನಗೆ ಇನ್ನು ಅಂತ್ಯಕಾಲಮ್ ಆಯ್ತು ಗಡಾ..ಎಂದು=ನಿನಗೆ ಇನ್ನು ಕೊನೆಗಾಲ ಬಂದಿತು… ಕಂಡೆಯಾ… ಎಂದು;

ಉರಗಧ್ವಜ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು/ದುರ್‍ಯೋದನ; ಮರ್ಮ+ಉದ್ಘಾಟನಮ್; ಮರ್ಮ=ಅಂತರಂಗ/ಮನಸ್ಸು; ಉದ್ಘಾಟನ=ತಪ್ಪನ್ನು ಎತ್ತಿ ಹೇಳು; ಗೆಯ್ದು=ಮಾಡಿ;

ಉರಗಧ್ವಜನನ್ ಮರ್ಮೋದ್ಘಾಟನಮ್ ಗೆಯ್ದು ಮೂದಲಿಸಿದ ಅನಿತರೊಳೆ=ದುರ್‍ಯೋದನನ ಮನಸ್ಸನ್ನು ಗಾಸಿಗೊಳಿಸುವಂತೆ ಬೀಮಸೇನನು ಮೂದಲಿಕೆಯ ನುಡಿಗಳನ್ನಾಡುತ್ತಿರುವಾಗಲೇ;

ಉರಗಧ್ವಜನ್ ನಿಂದು ಮುನಿದು ಅನಿಬರ ಮೊಗಮಮ್ ನೋಡಿ=ದುರ್‍ಯೋದನನು ಒಂದೆಡೆ ನಿಂತುಕೊಂಡು… ಕೋಪೋದ್ರೇಕದಿಂದ ವೈಶಂಪಾಯನ ಸರೋವರವನ್ನು ಸುತ್ತುವರಿದು ನಿಂತಿದ್ದ ಪಾಂಡವರ ಮತ್ತು ಕ್ರಿಶ್ಣನ ಮೊಗವನ್ನು ನೋಡಿ, ಅವರನ್ನು ತನ್ನೊಡನೆ ಯುದ್ದ ಮಾಡುವುದಕ್ಕೆ ಕರೆಯತೊಡಗಿದನು;

ಬಡವು=ಬಲವಿಲ್ಲದವನು/ಕಿರಿದು; ಬಡವುಗಳ್=ಬಲವಿಲ್ಲದವರು/ಕಿರಿಯರು;

ಮಾದ್ರಿಪುತ್ರರ್ ಇರಲ್ ಇಂತು. ಈ ಬಡವುಗಳ್ ಅವರ್ಗಳ್ ಏಗೆಯ್ದಪರ್=ಮಾದ್ರಿಪುತ್ರರಾದ ನಕುಲ ಸಹದೇವರು ಸುಮ್ಮನೆ ಇರಲಿ. ಈ ಬಲಹೀನರಾದ ಅವರುಗಳು ಏನನ್ನು ತಾನೆ ಮಾಡಬಲ್ಲರು; ಅವರು ನನ್ನೊಡನೆ ಹೋರಾಡಲು ಸಮಬಲರಲ್ಲ;

ಹರಿ=ದೇವೇಂದ್ರ; ಹರಿಸುತ=ದೇವೇಂದ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ಅರ್ಜುನ;ಮೇಣ್=ಇಲ್ಲವೇ; ಬರ್ಕೆ=ಬರಲಿ;

ಧರ್ಮಪುತ್ರನ್ ಭೀಮನ್ ಹರಿಸುತನೊಡನೆ ಬೆರಸಿ ಈಗಳ್ ಈ ಮೂವರುಮ್ ಬರ್ಕೆ ಮೇಣ್ ಅಯ್ವರೆ ಬರ್ಕೆ=ದರ್‍ಮರಾಯ, ಬೀಮ, ಅರ್‍ಜುನನ ಜತೆಗೂಡಿ ಈ ಮೂವರು ಈಗ ನನ್ನೊಡನೆ ಹೋರಾಟಕ್ಕೆ ಬರಲಿ ಇಲ್ಲವೇ ಅಯ್ದು ಮಂದಿಯೂ ಬರಲಿ;

ಕೃತಾಂತ+ಆತ್ಮಜ; ಕೃತಾಂತ=ಯಮ; ಆತ್ಮಜ=ಮಗ; ಕೃತಾಂತಾತ್ಮಜ=ಯಮನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ದರ್‍ಮರಾಯ; ಪವನ=ವಾಯುದೇವ; ಪವನಜ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ಬೀಮ; ಧನ್ವ=ಬಿಲ್ಲು; ಗಾಂಡೀವಧನ್ವನ್=ಗಾಂಡೀವ ಎಂಬ ಹೆಸರಿನ ಬಿಲ್ಲನ್ನು ಹೊಂದಿರುವವನು/ಅರ್‍ಜುನ;

ಕೃತಾಂತಾತ್ಮಜ ಪವನಜ ಗಾಂಡೀವಧನ್ವರ್ಕಳ್ ಈ ಮೂವರೊಳ್ ಒರ್ಬನ್ ಬರ್ಕೆ=ದರ್‍ಮರಾಯ… ಬೀಮ… ಅರ್‍ಜುನ… ಈ ಮೂವರಲ್ಲಿ ಒಬ್ಬನು ನನ್ನೊಡನೆ ಕಾದಾಡಲು ಬರಲಿ; ತೊಡರ್=ಸೇರು/ಕೂಡು;

ಮೇಣ್ ಕೃಷ್ಣನ್ ಅನಿಬರೊಳ್ ತೊಡರ್ದು ಬರ್ಕೆ=ಇಲ್ಲವೇ ಕ್ರಿಶ್ಣನು ಅವರೊಡನೆ ಜತೆಗೂಡಿ ನನ್ನೊಡನೆ ಕಾದಾಡಲು ಬರಲಿ;

ಎಂತುಮ್=ಹೇಗಾದರೂ ಸರಿಯೇ; ಬನ್ನ=ಸೋಲು;

ಎಂತುಮ್ ಬನ್ನಮನ್ ಈವೆನ್ ಎನೆ=ಹೇಗಾದರೂ ಸರಿಯೇ ಪಾಂಡವರಲ್ಲಿ ಮೂರು ಮಂದಿಯೇ ಬರಲಿ ಇಲ್ಲವೇ ಅಯ್ದು ಮಂದಿಯೂ ಜತೆಗೂಡಿ ಬರಲಿ ಇಲ್ಲವೇ ಕ್ರಿಶ್ಣನು ಇವರೆಲ್ಲರ ಜತೆಗೂಡಿ ಹೋರಾಟಕ್ಕೆ ಬರಲಿ… ಎಲ್ಲರನ್ನೂ ಸದೆಬಡಿದು ಸೋಲುಣಿಸುತ್ತೇನೆ ಎಂದು ದುರ್‍ಯೋದನನು ಪರಾಕ್ರಮದ ಸವಾಲನ್ನು ಹಾಕಲು;

ಧರ್ಮನಂದನನ್ ಧೃತರಾಷ್ಟನಂದನನ್ ಮುನ್ನ ಗೆಯ್ದ ಅಧರ್ಮಮನ್ ನೆನೆಯದೆ=ದರ್‍ಮರಾಯನು ದುರ್‍ಯೋದನನು ಈ ಮೊದಲು ಪಾಂಡವರಾದ ತಮ್ಮೆಲ್ಲರನ್ನೂ ನಾಶಮಾಡಲು ಹೂಡಿದ್ದ ಸಂಚುಗಳು ಮತ್ತು ಕೇಡಿನ ಕೆಲಸಗಳನ್ನು ಈಗ ನೆನೆದುಕೊಳ್ಳದೆ;

ನಿರ್ಮಲ=ಪರಿಶುದ್ದವಾದ/ಒಳ್ಳೆಯ; ಕ್ಷತ್ರ=ಕ್ಶತ್ರಿಯ;

ನಿರ್ಮಲಕ್ಷತ್ರ ಧರ್ಮಮನ್ ನೆನೆದು=ಪರಿಶುದ್ದವಾದ ಕ್ಶತ್ರಿಯ ದರ್‍ಮವನ್ನು ನೆನೆದುಕೊಂಡು;

ಸಮರ=ಕಾಳೆಗ/ಯುದ್ದ;

ಸಮರಮ್ ಆಗದು=ನಮ್ಮಗಳ ನಡುವೆ ಕಾಳೆಗ ನಡೆಯಬಾರದು;

ಶಮ=ನೆಮ್ಮದಿ/ಶಾಂತಿ/ಮನೋನಿಗ್ರಹ;

ಶಮಯುತನಾಗು=ಮನಸ್ಸಿನಲ್ಲಿರುವ ಕೋಪತಾಪವನ್ನು ತೊರೆದು ಶಾಂತಿಯಿಂದಿರು;

ಭೋಗ=ಒಲವು ನಲಿವು ನೆಮ್ಮದಿಯಿಂದ ಬಾಳುವುದು;

ಮಹಾಭೋಗಿಯಾಗು=ದೊಡ್ಡ ಮಟ್ಟದಲ್ಲಿ ಆನಂದವನ್ನು ಹೊಂದಿ ಬಾಳುವುದು;

ನಿನ್ನ+ಆಳ್ವ; ನಿನ್ನಾಳ್ವ=ನಿನ್ನ ಆಳ್ವಿಕೆಗೆ ಈಗ ಒಳಪಟ್ಟಿರುವ; ಮಹೀ=ಬೂಮಂಡಲ;

ನಿನ್ನಾಳ್ವ ಮಹೀಭಾಗಮುಮನ್ ಸಕಲ ಮಹೀಭಾಗಮುಮನ್ ನೀನೆ ಕೊಂಡು ಸುಖಮಿರಲಾಗಾ=ಈಗ ನೀನು ಆಳುತ್ತಿರುವ ಪ್ರಾಂತ್ಯದ ಜತೆಗೆ ಬೂಮಂಡಲದ ಎಲ್ಲಾ ರಾಜ್ಯಗಳನ್ನು ನೀನೇ ಪಡೆದುಕೊಂಡು ಸುಕವಾಗಿರುವುದಕ್ಕೆ ಆಗುವುದಿಲ್ಲವೇ/ನಮಗೆ ಅರ್‍ದ ರಾಜ್ಯವೂ ಬೇಡ… ಅಯ್ದು ಊರುಗಳೂ ಬೇಡ… ಎಲ್ಲವನ್ನೂ ನೀನೇ ಆಳುವುದು;

ಕ್ಷ್ಮಾ=ಬೂಮಿ; ಕ್ಷ್ಮಾಪಾಲ=ಬೂಮಿಯನ್ನು ಕಾಪಾಡುವವನು/ರಾಜ; ಚೂಡಾಮಣಿ=ತಲೆಯಲ್ಲಿ ತೊಡುವ ರತ್ನದ ಒಡವೆ/ಉತ್ತಮ ವ್ಯಕ್ತಿ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗುತ್ತದೆ; ಧರಣೀಚಕ್ರ=ಗುಂಡಗಿರುವ ಬೂಮಂಡಲ; ಒಪ್ಪುಗೊಳ್= ಸ್ವೀಕರಿಸು/ ತೆಗೆದುಕೊಳ್ಳು;

ಕುರುಕುಲಕ್ಷ್ಮಾಪಾಲ ಚೂಡಾಮಣೀ, ಧರಣೀಚಕ್ರಮನ್ ಒಪ್ಪುಗೊಳ್=ಕುರುಕುಲದ ರಾಜರ ಸಮೂಹದಲ್ಲಿ ಚೂಡಾಮಣಿಯಂತೆ ಕಂಗೊಳಿಸುತ್ತಿರುವ ದುರ್‍ಯೋದನನೇ, ಇಡೀ ರಾಜ್ಯವನ್ನು ನಿನ್ನದಾಗಿ ಸ್ವೀಕರಿಸು. ಪಾಂಡವರಾದ ನಮಗೆ ರಾಜ್ಯದಲ್ಲಿ ಪಾಲು ಬೇಕಾಗಿಲ್ಲ;

ವಿದ್ವೇಷಮ್+ಅನ್; ವಿದ್ವೇಷ=ಹಗೆತನ;

ವಿದ್ವೇಷಮನ್ ಬಗೆಯದಿರ್=ಹಗೆತನವನ್ನು ಮುಂದುವರಿಸುವ ಆಲೋಚನೆಯನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕು;

ಆಳ್+ಬೆಸಕೆಯ್ಸಿಕೊಳ್; ಬೆಸಕೆಯ್=ಹೇಳಿದ ಕೆಲಸವನ್ನು ಮಾಡು; ಬೆಸೆಕೆಯ್ಸಿಕೊಳ್=ಸೇವೆಯನ್ನು ಮಾಡಿಸಿಕೊ;

ನಮ್ಮನ್ ಅಯ್ವರಮ್ ಇನ್ನು ಆಳ್ವೆಸಕೆಯ್ಸಿಕೊಳ್=ನಮ್ಮ ಅಯ್ದು ಮಂದಿಯಿಂದಲೂ ಇನ್ನು ಮುಂದೆ ಸೇವೆಯನ್ನು ಮಾಡಿಸಿಕೊ;

ಕೀಳ್ಪೊಕ್ಕು=ಕೆಟ್ಟ ನಡೆನುಡಿ/ನೀಚತನದ ಕೆಲಸ;

ಕೀಳ್ಪೊಕ್ಕಿನೊಳ್ ನೆನೆಯದಿರ್=ನೀಚತನದ ಕೆಲಸದಲ್ಲಿ ತೊಡಗುವ ಆಲೋಚನೆಯನ್ನು ಮಾಡಬೇಡ;

ಇಂಬುಕೆಯ್=ಒಪ್ಪಿಕೊ/ಸಮ್ಮತಿಸು;

ತೊಟ್ಟುಕೊಂಡಿರದೆ ಎಮ್ಮ ಎಂಬುದನ್ ಇಂಬುಕೆಯ್=ಹಗೆತನವನ್ನೇ ಮುಂದುವರಿಸದೆ ನಾವು ಹೇಳುತ್ತಿರುವುದನ್ನು ಒಪ್ಪಿಕೊ;

ಒಳ್ಪಿಮ್=ಒಳ್ಳೆಯತನದಿಂದ; ವಿಶ್ರಾಂತಿ=ಬಿಡುವು; ಉಪಶಾಂತಿ= ಸಹನೆ/ತಾಳ್ಮೆ;

 ಮನದೊಳ್ ಒಳ್ಪಿಮ್ ಸೋದರನ್ ಎಂಬಂತು ಶಾಂತಿ ವಿಶ್ರಾಂತಿ ಉಪಶಾಂತಿಯಮ್ ಎನೆ=ಮನದಲ್ಲಿ ಒಳ್ಳೆಯ ರೀತಿಯಲ್ಲಿ ಆಲೋಚನೆಯನ್ನು ಮಾಡುತ್ತ, ಒಡಹುಟ್ಟಿದ ಸೋದರ ಎಂಬಂತೆ ನಮ್ಮೊಡನೆ ಒಲವು ನಲಿವು ನೆಮ್ಮದಿಯಿಂದ ಬಾಳು ಎಂದು ದರ್‍ಮರಾಯನು ದುರ್‍ಯೋದನನಿಗೆ ಹಿತನುಡಿಗಳನ್ನಾಡಲು;

ಹರಿಯೆಂದನ್=ದರ್‍ಮರಾಯನ ಹಿತನುಡಿಗಳ ನಂತರ ಕ್ರಿಶ್ಣನು ದುರ್‍ಯೋದನನನ್ನು ಕುರಿತು ನುಡಿಯುತ್ತಾನೆ;

ದುರೋಧನ, ಧರ್ಮತನೂಜನ್ ಒಳ್ಳಿತಮ್ ಪೇಳ್ದಪನ್ ಆತನ ಪೇಳ್ದುದ ಎಸಗಿ ನೀನ್ ಅರಸನಾಗಿ ವಸುಮತಿಯನ್ ಆಳ್ದು ಸುಖಮಿರಲಾಗ ಎಂಬುದುಮ್=ದುರ್‍ಯೋದನನೇ, ದರ್‍ಮರಾಯನು ನಿನಗೆ ಒಳ್ಳೆಯದನ್ನು ಹೇಳಿದ್ದಾನೆ. ಅವನು ಹೇಳಿದಂತೆಯೇ ನಡೆದುಕೊಂಡು, ನೀನು ಅರಸನಾಗಿ ಬೂಮಂಡಲವನ್ನು ಆಳುತ್ತ ಸುಕದಿಂದಿರಲಾಗದೇ ಎಂದು ಕ್ರಿಶ್ಣನು ನುಡಿಯಲು; 

ಭೀಮಸೇನನ್ ಇಂತು ಎಂದನ್=ಬೀಮಸೇನನು ಕ್ರಿಶ್ಣನ ಮಾತಿಗೆ ಪ್ರತಿಕ್ರಿಯಿಸುತ್ತ ಈ ರೀತಿ ನುಡಿದನು;

ಬಾಡ=ಹಳ್ಳಿ/ಊರು; ಸಂಧಾನ=ಒಡಂಬಡಿಕೆ/ರಾಜಿ; ಒಲ್ಲದನ್= ಒಪ್ಪದವನು/ನಿರಾಕರಿಸಿದವನು;

ನೀನ್ ಅಯ್ದು ಬಾಡದೊಳ್ ಸಂಧಾನಮ್ ಮಾಡಲ್ಕೆ ಪೋದೊಡೆ ಒಲ್ಲದನ್=ಕ್ರಿಶ್ಣ, ನೀನು ಕುರುಕ್ಶೇತ್ರ ಯುದ್ದಕ್ಕೆ ಮೊದಲು ದುರ್‍ಯೋದನನೊಡನೆ ಸಂದಾನಕ್ಕೆ ಹೋಗಿದ್ದಾಗ, ಪಾಂಡವರಾದ ನಮಗೆ ಅರ್‍ದ ರಾಜ್ಯವನ್ನು ಕೊಡಲು ಒಪ್ಪದಿದ್ದರೆ, ಅವರು ನೆಮ್ಮದಿಯಿಂದ ಬಾಳುವುದಕ್ಕೆ ಅಯ್ದು ಊರುಗಳನ್ನಾದರೂ ಕೊಡು ಎಂದು ಕೇಳಿಕೊಂಡಾಗ, ಅದನ್ನೇ ಒಪ್ಪದಿದ್ದವನು;

ಮಾನಧನ=ತನ್ನ ನಿಲುವನ್ನೇ ಸರಿಯೆಂದು ನಂಬಿ ಬಾಳುವವನು/ಇತರರಿಗೆ ಯಾವುದೇ ಕಾರಣದಿಂದಲೂ ತಲೆಬಾಗಿ ನಡೆಯದವನು;

ಎಯ್ದೆ=ಎಲ್ಲಕ್ಕಿಂತ ಹೆಚ್ಚಾಗಿ; ನಿಜ=ತನ್ನ; ತನುಜ=ಮಗ; ಅನುಜ=ತಮ್ಮ; ಅಳ್ಕು=ಲಯವಾಗು/ಇಲ್ಲವಾಗು; ಅಳ್ಕಾಡು= ನಾಶವಾಗಲು/ ಇಲ್ಲವಾಗಲು;

ಇನ್ನು ಈ ಮಾನಧನನ್ ಎಯ್ದೆ ನಿಜತನುಜ ಅನುಜರ್ ಅಳ್ಕಾಡೆ… ಸಂಧಿಯಮ್ ಮಾಡುವನೇ ಎನೆ=ಇನ್ನು ತನ್ನ ಚಲವನ್ನೇ ಕೊನೆತನಕ ಪಟ್ಟುಹಿಡಿದು ಸಾದಿಸುವ ಮಾನದನನಾದ ಈ ದುರ್‍ಯೋದನನು, ಇದೀಗ ಎಲ್ಲಕ್ಕಿಂತ ಮಿಗಿಲಾಗಿ ಕುರುಕ್ಶೇತ್ರ ಕಾಳೆಗದಲ್ಲಿ ತನ್ನ ಮಕ್ಕಳು ಮತ್ತು ತಮ್ಮಂದಿರೆಲ್ಲರೂ ಸಾವನ್ನಪ್ಪಿರುವಾಗ ಸಂದಿಯನ್ನು ಮಾಡಿಕೊಳ್ಳುತ್ತಾನೆಯೇ ಎಂದು ಬೀಮನು ನುಡಿಯಲು;

ದುರ್ಯೋಧನನ್ ಭೀಮಸೇನನ ನುಡಿಯನೆ ಸಮರ್ಥಿಸಿ=ದುರ್‍ಯೋದನನು ಬೀಮಸೇನನು ಆಡಿದ ಮಾತುಗಳನ್ನೇ ಸರಿಯೆಂದು ಹೇಳುತ್ತ, ಕ್ರಿಶ್ಣನೊಡನೆ ಈ ರೀತಿ ಹೇಳುತ್ತಾನೆ;

ಕಮಲನಾಭ=ಕ್ರಿಶ್ಣ; ಇನ=ಸೂರ್‍ಯ; ಇನತನಯ= ಸೂರ್‍ಯದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು/ಕರ್‍ಣ; ನೇರ್ಪು=(ಕೊಲೆಯ) ಸೇಡು/ಮುಯ್ಯಿ;

ಕಮಲನಾಭ, ಇನತನಯನ ನೇರ್ಪಿಂಗೆ ಮುನ್ ಅರ್ಜುನನನ್ ಕೊಲ್ವೆನ್=ಕ್ರಿಶ್ಣ… ಕರ್‍ಣನ ಕೊಲೆಗೆ ಪ್ರತೀಕಾರವಾಗಿ ಮೊದಲು ಅರ್ಜುನನ್ನು ಕೊಲ್ಲುತ್ತೇನೆ;

ಅನಿಲ=ವಾಯು; ಅನಿಲಜ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು/ಬೀಮ;

ಎನ್ನ ತಮ್ಮನ ನೇರ್ಪಿಂಗೆ ಅನಿಲಜನನ್ ಕೊಲ್ವೆನ್=ನನ್ನ ತಮ್ಮ ದುಶ್ಶಾಸನನ ಕೊಲೆಗೆ ಪ್ರತೀಕಾರವಾಗಿ ಬೀಮನನ್ನು ಕೊಲ್ಲುತ್ತೇನೆ;

ನೇರ್ಪಿಂಗೆ ನೇರ್ಪುಗೊಳ್ಳದೆ ಮಾಣೆನ್=ಕೊಲೆಯ ಸೇಡಿಗೆ ಸೇಡನ್ನು ತೀರಿಸಿಕೊಳ್ಳದೇ ಬಿಡುವುದಿಲ್ಲ; ಈಗ ದುರ್‍ಯೋದನನು ಪಾಂಡವರಿಗೆ ಮಾರ್ಗದರ್ಶಕನಾಗಿ ನಿಂತು, ಅವರ ಹಿತವನ್ನು ಕಾಯುತ್ತಿರುವ ಕ್ರಿಶ್ಣನ ಬಗ್ಗೆ ತನ್ನ ಆಕ್ರೋಶವನ್ನು ವ್ಯಂಗ್ಯದ ನುಡಿಗಳ ಮೂಲಕ ಹೊರಹೊಮ್ಮಿಸುತ್ತಾನೆ;

ಗಡ=ಕಂಡೆಯಾ; ಅಚ್ಚರಿ/ಮೆಚ್ಚುಗೆ/ನಿಂದನೆ/ಹಾಸ್ಯ/ಸಂಕಟ ಮುಂತಾದ ಬಾವಾವೇಶವನ್ನು ವ್ಯಕ್ತಪಡಿಸುವಾಗ ಬಳಸುವ ಪದ; ಮಧ್ಯಸ್ಥ=ಎದುರಾಳಿಗಳಾದ ಇಬ್ಬರ ನಡುವಣ ಸಮಸ್ಯೆಯನ್ನು ಒಡಂಬಡಿಕೆಯ ಮೂಲಕ ಪರಿಹರಿಸುವವನು/ರಾಜಿ ಮಾಡುವವನು/ಸಂದಾನಕಾರ;

ತಾನ್ ಗಡ ಮಧ್ಯಸ್ಥನ್=ಈ ಕ್ರಿಶ್ಣನೊಬ್ಬ ಸಂದಾನಕಾರ… ಕಂಡೆಯಾ;

ನುಡಿವನ್ ಗಡ=ಈ ಕ್ರಿಶ್ಣನು ಸಂದಾನದ ಮಾತುಗಳನ್ನಾಡುತ್ತಾನೆ ಕಂಡೆಯಾ;

ಪುದುವಾಳ್=ಕೂಡಿಬಾಳು/ಸಹಜೀವನ ನಡೆಸು;

ಎನಗಮ್ ಅವರ್ಗಮ್ ಪುದುವಾಳ್ಕೆ ಸಂಧಾನಮ್ ಗಡ=ನಾನು ಮತ್ತು ಪಾಂಡವರು ಜತೆಗೂಡಿ ಬಾಳುವುದಕ್ಕಾಗಿ ಸಂದಾನವನ್ನು ಮಾಡಿಕೊಳ್ಳಬೇಕಂತೆ… ಕಂಡೆಯಾ;

ಮುನ್ನಮ್ ಸಂಧಿಯ ಮಾತಮ್ ಲಂಘಿಸಿದನ್ ಇನ್ನು ಒಡಂಬಟ್ಟಪೆನೇ=ಈ ಮೊದಲು ಸಂದಿಯ ಮಾತನ್ನು ತಿರಸ್ಕರಿಸಿರುವ ನಾನು ಈಗ ಇನ್ನು ಅದನ್ನು ಒಪ್ಪುತ್ತೇನೆಯೇ;

ಮಲಿನ=ಕಳಂಕಿತವಾದ; ಮಲಿನನ್=ಕಳಂಕಿತನಾದವನು; ಉಜ್ವಳ=ತೇಜಸ್ಸು/ಪ್ರಕಾಶ/ಉತ್ತಮ;

ವನವಾಸಮಲಿನನನ್ ಯಮತನಯನನ್ ಉಜ್ವಳಿಸಿ=ಪಾಂಡುರಾಜನು ಕಾಡಿನಲ್ಲಿದ್ದಾಗ ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದ ದರ್‍ಮರಾಯನನ್ನು ಉತ್ತಮನನ್ನಾಗಿ ಮಾಡಿದೆ; ದುರ್‍ಯೋದನನ ಕಣ್ಣಿನಲ್ಲಿ ದರ್‍ಮರಾಯನು ಕುರುವಂಶಕ್ಕೆ ಸೇರಿದವನಲ್ಲ. ಏಕೆಂದರೆ ದರ್‍ಮರಾಯನು ಪಾಂಡು ಮತ್ತು ಕುಂತಿಯ ಸಮಾಗಮದಿಂದ ಹುಟ್ಟಿಲ್ಲ; ಆದ್ದರಿಂದ ದರ್‍ಮರಾಯನು ಹುಟ್ಟಿನಿಂದ ಕಳಂಕಿತ ವ್ಯಕ್ತಿ;

ಗೋತ್ರ=ವಂಶ/ಕುಲ; ಧವಳ=ಬಿಳುಪಾದ/ಸುಂದರವಾದ/ಉತ್ತಮವಾದ; ಘನ=ಹೆಚ್ಚಾದ/ದೊಡ್ಡದಾದ;

ಗೋತ್ರ ಧವಳನನ್ ಎನ್ನನ್ ಘನಮಲಿನಮ್ ಮಾಡಿದೆ=ಉತ್ತಮವಂಶದಲ್ಲಿ ಹುಟ್ಟಿ ಕೀರ್‍ತಿವಂತನಾಗಿದ್ದ ನನ್ನನ್ನು ಅತಿಕಳಂಕಿತ ವ್ಯಕ್ತಿಯನ್ನಾಗಿ ಮಾಡಿದೆ; ದುರ್‍ಯೋದನನಾದ ನಾನು ಕುರುವಂಶಕ್ಕೆ ಸೇರಿದ ದ್ರುತರಾಶ್ಟ್ರ ಮತ್ತು ಗಾಂದಾರಿಯ ಮಗ. ಕುರುಕುಲದ ಹಿನ್ನೆಲೆಯಲ್ಲಿ ನಾನು ನಿಜವಾದ ವಂಶಸ್ತ;

ಶ್ವೇತ=ಬಿಳುಪು; ಕೃಷ್ಣ=ಕಪ್ಪು;

ಕೃಷ್ಣ, ನಿನ್ನ ವೋಲ್ ಶ್ವೇತಕೃಷ್ಣಕಾರಕರ್ ಒಳರೇ=ಕ್ರಿಶ್ಣನೇ, ನಿನ್ನಂತೆ ಬಿಳುಪನ್ನು ಕಪ್ಪುಮಾಡುವವರು ಇದ್ದಾರೆಯೇ; ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡುವ/ನಿಜವನ್ನು ಸುಳ್ಳನ್ನಾಗಿ ಮಾಡುವ ವಂಚಕರು ಇದ್ದಾರೆಯೇ;

ಜಲನಿಧಿ+ಒಳ್; ಜಲನಿಧಿ=ಸಮುದ್ರ/ಕಡಲು; ಅಮರ್ದು=ಅಮ್ರುತ; ನಂಜು=ವಿಶ; ಒಡನೆ=ಜತೆಯಲ್ಲಿ; ಅಂಕ=ಪ್ರಸಿದ್ದಿ/ಹೆಸರುವಾಸಿ; ಹಲಿ=ಬಲರಾಮ;

ಯದುಕುಲ ಜಲನಿಧಿಯೊಳ್ ಅಮರ್ದುಮ್ ನಂಜುಮ್ ಒಡನೆ ಪುಟ್ಟುವ ವೋಲ್ ಅಂಕದ ಹಲಿಯುಮ್ ನೀನುಮ್ ಪುಟ್ಟಿದಿರ್=ಯದುಕುಲವೆಂಬ ಸಮುದ್ರದಲ್ಲಿ ಅಮ್ರುತ ಮತ್ತು ವಿಶ ಜತೆಜತೆಯಲ್ಲಿ ಹುಟ್ಟುವಂತೆ ಹೆಸರುವಾಸಿಯಾದ ಬಲರಾಮನೂ ನೀನೂ ಹುಟ್ಟಿದಿರಿ; ಹಾಲಿನ ಕಡಲನ್ನು ದೇವತೆಗಳು ಮತ್ತು ರಕ್ಕಸರು ಕಡೆದಾಗ… ಅಮ್ರುತ ಮತ್ತು ವಿಶ ಜತೆಜತೆಯಲ್ಲಿ ಉತ್ಪತ್ತಿಯಾದವು ಎಂಬ ದಂತಕತೆಯೊಂದು ಜನಮನದಲ್ಲಿದೆ;

ಅದರ್ಕೆ ಅತ್ತ ಬಲನ್ ಗುಣಿಯಾದನ್… ನೀನ್ ನಿರ್ಗುಣಿಯಯ್ ಎಂಬ ಅನ್ನೆಗಮ್=ಆದ್ದರಿಂದಲೇ ಆ ಕಡೆ ಬಲರಾಮನು ಗುಣವಂತ ವ್ಯಕ್ತಿಯಾದನು… ನೀನು ಗುಣವಿಲ್ಲದ ವಂಚಕನಾದೆ ಎಂದು ದುರ್‍ಯೋದನನು ಕ್ರಿಶ್ಣನನ್ನು ಚುಚ್ಚುಮಾತುಗಳಿಂದ ಹಂಗಿಸುತ್ತಿರುವಾಗ;

ಆ ಪ್ರಸ್ತಾವದೊಳ್=… ಆ ಸಮಯದಲ್ಲಿ/ಆ ಸನ್ನಿವೇಶದಲ್ಲಿ;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *