ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 22ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 22: ಬಲರಾಮನ ಬರುವಿಕೆ… ಗದಾಯುದ್ದ ಸಿದ್ದತೆ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾಯದ 60 ನೆಯ ಪದ್ಯದಿಂದ 68 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ಬಲರಾಮ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಕ್ರಿಶ್ಣನ ಅಣ್ಣ. ದುರ್‍ಯೋನನ ಹಿತಚಿಂತಕ.
ಕೃಷ್ಣ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಪಾಂಡವರ ಹಿತಚಿಂತಕ.
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.

*** ಪ್ರಸಂಗ – 22: ಬಲರಾಮನ ಬರುವಿಕೆ… ಗದಾಯುದ್ಧ ಸಿದ್ಧತೆ ***

ಆ ಪ್ರಸ್ತಾವದೊಳ್… .ಹಲ ಮುಸಲಪಾಣಿ ಮಧುಪಾಟಲನೇತ್ರನ್ ನೀಲವಸನನ್ ಆ ಧವಳಾಂಗನ್ ಏಕಕುಂಡಲನ್ ತಾಳಲಕ್ಷನ್ ಬಲನ್ ಕುರುಕುಲನನ್ ಕೂಡಲ್ಕೆ ಬಂದನ್.

ಅಂತು ಸುಯೋಧನಂಗೆ ಸೈಪು ಬರ್ಪಂತೆಯುಮ್ … ಜಂಗಮ ಹಿಮಾಚಲಮೆ ಬರ್ಪಂತೆಯುಮ್ ಸಂಕರ್ಷಣನ್ ಬಂದು… ತಮ್ಮನಿಬರ್ ಒಂದಾಗಿ ಗೊಂದಣಿಸಿ ನಿಂದ ಪಾಂಡುನಂದನರುಮನ್… ಏಕಾಕಿಗನಾಗಿ ಸಾವಿಯ ದೇಸಿಗನಾಗಿ ನಿಂದ ಕುರುಕುಲಸ್ವಾಮಿಯುಮನ್ ಕಂಡು… ದೇವಕೀನಂದನನ ವದನಾರವಿಂದಮನ್ ನೋಡಿ… ವಿಸ್ಮಯಾಕ್ರಾಂತಚಿತ್ತನಾಗಿ ಮನದೊಳ್ ಕಟ್ಟುಕಡೆದು… ತನಗೆ ಎರಗಿದ ಫಣಿರಾಜಕೇತನನನ್ ಮನದೆ ಎರಕದಿಮ್ ಪರಸಿ… ಗರುಡಕೇತನನುಮನ್ ಪಾಂಡವರುಮನ್ ಪರಸಲೊಲ್ಲದೆ ಮುಳಿದು… ತಮ್ಮನನ್ ಅಯ್ವರುಮನ್ ನೋಡಿ ಕೌರವಕುಲ ಚೂಡಾಮಣಿಯೊಳ್…

ಬಲರಾಮ: ಏನನ್ ಆಳೋಚಿಸಿದಯ್.

(ಎಂದು ನುಡಿದ ಹಲಾಯುಧನ ನುಡಿಗೆ ಚಕ್ರಾಯುಧನ್ ಇಂತು ಎಂದನ್. ದುರ್ಯೋದನನು ಬಲರಾಮನ ಮಾತಿಗೆ ಉತ್ತರವನ್ನು ಕೊಡುವುದಕ್ಕೆ ಮುಂಚಿತವಾಗಿಯೇ ಕ್ರಿಶ್ಣನು ಅಣ್ಣ ಬಲರಾಮನೊಡನೆ ಯುದ್ದದ ಸಂಗತಿಯನ್ನು ಕುರಿತು ಮಾತನಾಡತೊಡಗುತ್ತಾನೆ.)

ಕೃಷ್ಣ: ಅಗ್ರಜಾತ, ನೀಮ್ ಎನಗೆ ಅಭಿವಂದಿತಾರ್ಥರ್. ಚಿತ್ತದೊಳ್ ಮುನಿಯದೆ ಅವಧಾರಿಸು.  ಪಾಂಡುನಂದನರ್ಗೆ ಬಾಡಮನ್ ಅಯ್ದನೆ ಬೇಡೆ ಪೋಗೆ, ದ್ರೋಣನ ಧೃತರಾಷ್ಟ್ರ  ಸಿಂಧುಸುತರ್ ಎಂದುದನ್ ಎನ್ನದೆ… ನೀವ್ ಇದಮ್ ಸುಯೋಧನನೊಳೆ ಕೇಳ್ದು ನಂಬುವುದು… ಫಣಿರಾಜಕೇತನನ್ ಎರಳ್ನುಡಿಯನ್.

(ಎನೆ ದುರ್ಯೋಧನನ್ ಎಂದನ್.)

ದುರ್ಯೋಧನ: ಏಕೆ ಮುನಿವಿರ್ … ಪಾಂಡುನಂದನರ್ ನಿರ್ದೋಷಿಗಳ್ . ಎಂತುಮ್ ಇವರೊಳ್

ಸಂಧಾನಮನ್ ಮುನ್ನಮ್ ಆನ್ ಒಲ್ಲೆನೆ. ಒಂದನೆ ಪೇಳ್ವೆನ್. ತನುಜಾತರ್  ಪಲಬರುಮ್ ಸತ್ತರ್ . ಎನಸುಮ್ ತತ್ ದುಃಖಮನ್ ಸೈರಿಸಲ್ಕೆ ಬಂದಪುದಿಲ್ಲ.  ಪಗೆವರ್ ಬರ್ಕೆ ಸನ್ನದ್ಧನಾಗಿ ಇರ್ದಪೆನ್… . ಅವಧಾರಿಪುದು… ಇವರ್ ಎನ್ನ  ಅನುವರಮನ್ ನೋಡುವುದಲ್ಲದೆ , ಬೇರೆ ಪೆರವು ಮಾತಿಂಗೆ ಎಡೆಯಿಲ್ಲ .

( ಎಂದೊಡೆ.. ಮುಸಲಪಾಣಿ ಕೌರವೇಂದ್ರನನ್ ಮನದೊಳ್ ಪೊಗಳ್ದನ್… ಅಂತು ಪೊಗಳ್ದು… ರಾಜರಾಜನ ನಿರ್ವ್ಯಾಜ ಶೌರ್ಯಕ್ಕೆ ಸಂಕರ್ಷಣನ್ ಆಶ್ಚರ್ಯಮ್ ಪಟ್ಟು ಪೆರತೇನುಮನ್ ಎನಲ್ ಅರಿಯದೆ, ಧರ್ಮನಂದನಾದಿಗಳ ಮೊಗಮನ್ ನೋಡಿ… )

ಬಲರಾಮ: ನಿಮ್ಮ ಅಯ್ವರೊಳ್ ಆರಾಗಿಯುಮ್ ಈತನೊಳ್ ಒರ್ವನೆ ಕಾದುವುದು… ಕಾದಿ ಗೆಲ್ದಿಮ್  ಬಳಿಕ್ಕೆ… ದುರ್ಯೋಧನನ್ ನೆಲನನ್ ಆಳ್ವನ್… ಆತಂಗೆ ಉಳಿದ ನಾಲ್ವರ್ ಬೆಸಕೆಯ್ದು  ಬಾಳ್ವಿರ್.

(ಎಂದು ನುಡಿಯೆ… ಭೀಮಸೇನನ್ ಇದಿರ್ಗೆ ವಂದು…)

ಭೀಮ: ಹಲಾಯುಧ, ಅರಮಗನ್ ಇರ್ಕೆ… ಅರ್ಜುನನ್ ಇರ್ಕೆ… ಅರಿಕೆಯ ಮಾದ್ರೀಸುತರ್ಕಳ್  ಇರ್ಕೆ.. .ಅಳಿವಗೆಯನ್ ಪರಿಪಡಿಸಲ್ಕೆ ನೆರೆದಿರ್ದಪೆನ್… ಕೌರವನನ್ ಎನಗೆ ತೋರಿ ಬಿಡು.

(ಅಂತು ಮರುತ್ ನಂದನನ್ ರೋಹಿಣೀ ನಂದನಂಗೆ ನುಡಿದು, ದ್ವಂದ್ವಯುದ್ಧಕ್ಕೆ ಧರ್ಮನಂದನಾದಿಗಳ ಮೊಗಮನ್ ನೋಡಿ… )

ಭೀಮ: ಆನ್ ಪಗೆಗೆ ಮೊದಲಿಗನೆನ್… ಅಂತು ಕೌರವನ್ ಇಡುವಗೆ… ಅದರ್ಕೆ ನೀಮ್ ಎಲ್ಲಮ್  ಇಲ್ಲಿ ದಾಯಿಗತನಮನ್ ತೋರಲ್ ತಗದು. ಈತನ್ ಮುನ್ನಮ್ ಎನಗೆ  ದೊರೆಯಾಗಿರ್ದನ್.

 ( ಎಂಬುದುಮ್ , ಧರ್ಮನಂದನಾದಿಗಳ್ ಇರ್ದು… ಮಾರುತಿಗಮ್ ಫಣಿರಾಜಕೇತನಂಗಮ್ ಧರ್ಮಯುದ್ಧಮನೆ ಸಮಕಟ್ಟಿದಾಗಳ್… ವನರುಹನಾಭನ ಬಲದೇವನ ಸಾಕ್ಷಿಯೊಳಿರ್ದು… ಕೌರವೇಶ್ವರನ್ ಆ ಭೀಮನ ಕಯ್ವೊಯ್ದೊಡೆ… ತತ್ ದೇವನಿಕಾಯಮ್ ಕುರುಪತಿಯಾ ಅದಟುಮನ್ ಪೊಗಳ್ದರ್… ಅಂತು ಧರ್ಮಯುದ್ಧಮಮ್ ಕೈವೊಯ್ದಾಗಳ್… .ಕುರುಕ್ಷೇತ್ರದೊಳ್ ಎಡೆ ಎನಿತು ಅನಿತುಮ್ ಬರಿದಿಲ್ಲದಂತು ಶವಶತದಿಮ್ ತೆಕ್ಕನೆ ತೀವೆ… ರಣೋತ್ಸವದಿಂದೆ ಅನಿಲಸುತನ್ ಕೊಳ್ಗುಳಮನ್ ತಾನೆ ಸಮರಿದನ್.)

ಭೀಮ: ಪುದುವೆತ್ತ ಎಕ್ಕಟಿಗಾಳೆಗಮ್ ಸಮನಿಸಿತ್ತು… ಎಮ್ಮ ಈ ಗದಾಯುದ್ಧಮನ್ ತ್ರಿದಶರ್

 ನೋಡಲೆ ಕೌತುಕಮ್ ಬೆರಸಿ ನಭೋಭಾಗದೊಳ್ ಬಂದಿರ್ದರ್… ಮದವತ್ ವೈರಿಯನ್

 ಇಕ್ಕಿ … ಭೂವಳಯಮಮ್ ನಿಷ್ಕಂಟಕಮ್ ಮಾಳ್ಪೆನ್.

(ಎಂಬುದನ್ ಎಂದು… ಆಹವಲಂಪಟನ್ ಚಾಳುಕ್ಯಕಂಠೀರವನ್ ಮಸಗಿದನ್.)

ಪದ ವಿಂಗಡಣೆ ಮತ್ತು ತಿರುಳು: ಬಲರಾಮನ ಬರುವಿಕೆ… ಗದಾಯುದ್ದ ಸಿದ್ದತೆ

ಆ ಪ್ರಸ್ತಾವದೊಳ್=ವೈಶಂಪಾಯನ ಸರೋವರದ ತೀರದಲ್ಲಿ ಕ್ರಿಶ್ಣ ಮತ್ತು ಪಾಂಡವರೊಡನೆ ದುರ್‍ಯೋದನನನು ಮಾತಿನ ಯುದ್ದದಲ್ಲಿ ತೊಡಗಿದ್ದಾಗ; ಹಲ=ನೇಗಿಲು; ಮುಸಲ=ಒನಕೆ ಆಕಾರದ ಆಯುದ; ಪಾಣಿ=ಕಯ್/ಹಸ್ತ; ಮಧು=ಜೇನು ತುಪ್ಪ; ಪಾಟಲ=ನಸುಗೆಂಪು ಬಣ್ಣ; ಮಧುಪಾಟಲ=ಜೇನುತುಪ್ಪದ ಕೆಂಪನೆಯ ಬಣ್ಣ; ನೇತ್ರ=ಕಣ್ಣು; ವಸನ=ಬಟ್ಟೆ; ನೀಲವಸನನ್=ನೀಲಿಯ ಬಣ್ಣದ ಬಟ್ಟೆಯನ್ನುಟ್ಟಿರುವವನು; ಧವಳ+ಅಂಗನ್; ಧವಳ=ಬಿಳುಪು; ಅಂಗ=ದೇಹ/ಮಯ್; ಧವಳಾಂಗನ್=ಬಿಳಿಯ ಬಣ್ಣದ ದೇಹದವನು; ಕುಂಡಲ=ಓಲೆ; ಏಕಕುಂಡಲನ್=ಒಂಟಿ ಓಲೆಯನ್ನು ತೊಟ್ಟವನು; ತಾಳ=ತಾಳೆಯ ಮರ; ಲಕ್ಷನ್=ಗುರುತುಳ್ಳವನು; ತಾಳಲಕ್ಷನ್=ತಾಳೆಯ ಮರದ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳವನು; ಬಲನ್=ಬಲರಾಮನು; ಕುರುಕುಲನ್=ದುರ್‍ಯೋದನ;

ಹಲ ಮುಸಲ ಪಾಣಿ… ಮಧುಪಾಟಲನೇತ್ರನ್… ನೀಲವಸನನ್… ಆ ಧವಳಾಂಗನ್… ಏಕಕುಂಡಲನ್… ತಾಳಲಕ್ಷನ್ ಬಲನ್ ಕುರುಕುಲನನ್ ಕೂಡಲ್ಕೆ ಬಂದನ್=ನೇಗಿಲು ಮತ್ತು ಒನಕೆಯ ಆಕಾರದ ಆಯುದಗಳನ್ನು ಕಯ್ಯಲ್ಲಿ ಹಿಡಿದುಕೊಂಡಿರುವ… ಕೆಂಗಣ್ಣಿನ… ನೀಲಿ ಬಣ್ಣದ ಬಟ್ಟೆಯನ್ನು ಉಟ್ಟಿರುವ… ಬಿಳಿಯ ಮಯ್ ಬಣ್ಣದ… ಒಂಟಿ ಓಲೆಯನ್ನು ತೊಟ್ಟಿರುವ… ತಾಳೆಮರದ ಚಿತ್ರವನ್ನುಳ್ಳ ಬಾವುಟವನ್ನು ಹಿಡಿದಿರುವ ಬಲರಾಮನು ದುರ್‍ಯೋದನನ ಜತೆ ಸೇರಲೆಂದು ಬಂದನು;

ಕುರುಕ್ಶೇತ್ರ ಯುದ್ದಕ್ಕೆ ಪಾಂಡವರು ಮತ್ತು ದುರ್‍ಯೋದನನನು ಸೇನಾಬಲವನ್ನು ಕಲೆಹಾಕುತ್ತಿದ್ದಾಗ, ಯಾದವ ಸೇನಾಬಲ ಮತ್ತು ಬಲರಾಮನು ದುರ್‍ಯೋದನನ ಕಡೆಯಲ್ಲಿಯೂ, ಕ್ರಿಶ್ಣನು ಒಬ್ಬನು ಮಾತ್ರ ಪಾಂಡವರ ಕಡೆಯಲ್ಲಿಯೂ ಯುದ್ದದಲ್ಲಿ ಬಾಗವಹಿಸುವುದೆಂದು ತೀರ‍್ಮಾನವಾಗಿತ್ತು. ಯುದ್ದ ಪ್ರಾರಂಬವಾಗುವ ಕೆಲವು ದಿನಗಳ ಮುಂಚೆ ಬಲರಾಮನ ಅಚಾತುರ‍್ಯದಿಂದ ಹಸುವೊಂದು ಸಾವನ್ನಪ್ಪಿದ್ದಾಗಿಯೂ, ಅದರಿಂದ ಉಂಟಾದ ಪಾಪವನ್ನು ಪರಿಹರಿಸಿಕೊಳ್ಳಲೆಂದು ಬಲರಾಮನು ಕೆಲವು ದಿನಗಳ ತೀರ‍್ತಯಾತ್ರೆಗೆ ಹೋದನೆಂದೂ, ಈಗ ಕುರುಕ್ಶೇತ್ರದ ಹದಿನೆಂಟನೆಯ ದಿನ ನಡುಹಗಲಿನಲ್ಲಿ ತೀರ‍್ತಯಾತ್ರೆಯನ್ನು ಮುಗಿಸಿಕೊಂಡು ಬಲರಾಮನು ಹಸ್ತಿನಾವತಿಯತ್ತ ಬಂದನು ಎಂಬ ದಂತಕತೆಯೊಂದು ಜನಮನದಲ್ಲಿ ಚಲಾವಣೆಯಲ್ಲಿದೆ; ಗದಾವಿದ್ಯೆಯಲ್ಲಿ ಹೆಚ್ಚಿನ ಕುಶಲತೆಯನ್ನು ಬೀಮ ದುರ‍್‍ಯೋದನರು ಬಲರಾಮನಿಂದ ಕಲಿತಿದ್ದರು ಎಂಬ ಸುದ್ದಿಯು ಜನಜನಿತವಾಗಿತ್ತು;

ಅಂತು=ಆ ರೀತಿ; ಸೈಪು=ಪುಣ್ಯ; ಬರ್ಪ+ಅಂತೆಯುಮ್; ಬರ್ಪಂತೆಯುಮ್=ಬರುವಂತೆಯೂ; ಜಂಗಮ=ಚಲಿಸುವ/ನಡೆದಾಡು; ಸಂಕರ್ಷಣ=ಬಲರಾಮ;

ಅಂತು ಸುಯೋಧನಂಗೆ ಸೈಪು ಬರ್ಪಂತೆಯುಮ್ … ಜಂಗಮ ಹಿಮಾಚಲಮೆ ಬರ್ಪಂತೆಯುಮ್ ಸಂಕರ್ಷಣನ್ ಬಂದು=ಆ ರೀತಿಯಲ್ಲಿ ದುರ್‍ಯೋದನನ ಪಾಲಿಗೆ ಒಳಿತನ್ನು ಮಾಡುವ ಪುಣ್ಯವೇ ಬರುವಂತೆಯೂ… ಚಲಿಸುತ್ತಿರುವ ಹಿಮಾಚಲ ಪರ್‍ವತವೇ ಬರುವಂತೆಯೂ ಬಲರಾಮನು ಬಂದನು. ಬಲರಾಮನ ಬರುವಿಕೆಯಿಂದ ದುರ್‍ಯೋದನನಿಗೆ ಹೆಚ್ಚಿನ ಬಲ ದೊರೆಯಿತು ಎಂಬುದನ್ನು ‘ಸೈಪು ಬರ್ಪಂತೆಯುಮ್ ಮತ್ತು ಜಂಗಮ ಹಿಮಾಚಲಮೆ ಬರ್ಪಂತೆಯುಮ್’ ಎಂಬ ರೂಪಕಗಳು ಸೂಚಿಸುತ್ತಿವೆ;

ತಮ್ಮ+ಅನಿಬರ್; ಅನಿಬರ್=ಅವರೆಲ್ಲರೂ; ಗೊಂದಣ=ಗುಂಪು;

ತಮ್ಮನಿಬರ್ ಒಂದಾಗಿ ಗೊಂದಣಿಸಿ ನಿಂದ ಪಾಂಡುನಂದನರುಮನ್=ಅಣ್ಣತಮ್ಮಂದಿರೆಲ್ಲರೂ ಒಂದಾಗಿ ಗುಂಪುಗೂಡಿ ನಿಂತಿರುವ ಪಾಂಡುನಂದರನ್ನು;

ಏಕಾಕಿಗ=ಒಬ್ಬಂಟಿ; ದೇಸಿಗ=ದಿಕ್ಕಿಲ್ಲದವನು; ಸಾವಿಯ ದೇಸಿಗ=ಯಾರೊಬ್ಬರ ನೆರವಿಲ್ಲದ ಪರದೇಸಿಯಾಗಿ;

ಏಕಾಕಿಗನಾಗಿ… ಸಾವಿಯ ದೇಸಿಗನಾಗಿ ನಿಂದ ಕುರುಕುಲಸ್ವಾಮಿಯುಮನ್ ಕಂಡು=ಒಬ್ಬಂಟಿಗನಾಗಿ ಯಾರೊಬ್ಬರ ನೆರವಿಲ್ಲದೆ ಪರದೇಸಿಯಂತೆ ನಿಂತಿರುವ ಕುರುಕುಲದ ಒಡೆಯನಾದ ದುರ್‍ಯೋದನನನ್ನು ಕಂಡು;

ದೇವಕೀನಂದನ=ಕ್ರಿಶ್ಣ; ವಸುದೇವ ಮತ್ತು ದೇವಕಿ ದಂಪತಿಯ ಮಗ ಕ್ರಿಶ್ಣ; ವದನ+ ಅರವಿಂದಮ್+ ಅನ್; ವದನ=ಮೊಗ; ಅರವಿಂದ=ತಾವರೆ;

ದೇವಕೀನಂದನನ ವದನಾರವಿಂದಮನ್ ನೋಡಿ=ಅರಳಿದ ತಾವರೆಯಂತಿರುವ ಕ್ರಿಶ್ಣನ ಮೊಗವನ್ನು ನೋಡಿ; ವಿಸ್ಮಯ+ಆಕ್ರಾಂತ+ಚಿತ್ತನ್+ಆಗಿ; ವಿಸ್ಮಯ=ಅಚ್ಚರಿ; ಆಕ್ರಾಂತ=ಆವರಿಸು/ಕವಿ/ಹರಡು; ಚಿತ್ತ=ಮನಸ್ಸು; ಕಟ್ಟುಕಡೆದು=ಅತಿಶಯವಾಗಿ ಮರುಗು/ಹೆಚ್ಚಿನ ಕಳವಳಕ್ಕೆ ಒಳಗಾಗಿ;

ವಿಸ್ಮಯಾಕ್ರಾಂತಚಿತ್ತನಾಗಿ ಮನದೊಳ್ ಕಟ್ಟುಕಡೆದು=ಚಕ್ರವರ‍್ತಿಯಾದ ದುರ‍್‍ಯೋದನನಿಗೆ ಬಂದೊದಗಿರುವ ಇಂತಹ ಹೀನಸ್ತಿತಿಯನ್ನು ಕಂಡು ಅಚ್ಚರಿಯಿಂದ ಗಾಸಿಗೊಂಡು, ಮನದಲ್ಲಿ ತುಂಬಾ ಕಳವಳಗೊಂಡು;

ಎರಗು=ನಮಸ್ಕರಿಸು; ಫಣಿ=ಹಾವು; ಫಣಿರಾಜ=ಆದಿಶೇಶ; ಕೇತನ=ಬಾವುಟ; ಫಣಿರಾಜಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ಲಾಂಚನವಾಗುಳ್ಳವನು/ದುರ್‍ಯೋದನ; ಎರಕ=ಪ್ರೀತಿ;

ತನಗೆ ಎರಗಿದ ಫಣಿರಾಜಕೇತನನನ್ ಮನದೆ ಎರಕದಿಮ್ ಪರಸಿ=ತನ್ನ ಪಾದಗಳಿಗೆ ನಮಿಸಿದ ದುರ್‍ಯೋದನನನ್ನು ಮನದುಂಬಿ ಪ್ರೀತಿಯಿಂದ ಆಶೀರ‍್ವದಿಸಿ;

ಗರುಡಕೇತನ=ಗರುಡ ಪಕ್ಶಿಯ ಚಿತ್ರವನ್ನು ತನ್ನ ಬಾವುಟದಲ್ಲಿ ಲಾಂಚನವಾಗುಳ್ಳವನು/ಕ್ರಿಶ್ಣ; ಪರಸಲ್+ಒಲ್ಲದೆ; ಮುಳಿದು=ಕೋಪಗೊಂಡು;

ಗರುಡಕೇತನನುಮನ್ ಪಾಂಡವರುಮನ್ ಪರಸಲೊಲ್ಲದೆ ಮುಳಿದು=ತನಗೆ ನಮಿಸಿದ ಕ್ರಿಶ್ಣನನ್ನು ಮತ್ತು ಪಾಂಡವರನ್ನು ಆಶೀರ‍್ವದಿಸಲು ಇಚ್ಚಿಸದೆ, ದುರ್‍ಯೋದನನ ಇಂತಹ ಸ್ತಿತಿಗೆ ಕಾರಣರಾಗಿರುವ ಅವರ ಬಗ್ಗೆ ಕೋಪಗೊಂಡು;

ತಮ್ಮನನ್ ಅಯ್ವರುಮನ್ ನೋಡಿ=ಬಲರಾಮನು ತನ್ನ ತಮ್ಮನಾದ ಕ್ರಿಶ್ಣನನ್ನು ಮತ್ತು ಅಯ್ದು ಮಂದಿ ಪಾಂಡವರನ್ನು ಕೋಪೋದ್ರೇಕದಿಂದ ನೋಡುತ್ತ; ಚೂಡಾಮಣಿ=ತಲೆಯಲ್ಲಿ ತೊಡುವ ರತ್ನದ ಒಡವೆ/ಉತ್ತಮ ವ್ಯಕ್ತಿ;

ಹಲಾಯುಧ=ಬಲರಾಮ;

ಕೌರವಕುಲ ಚೂಡಾಮಣಿಯೊಳ್ ಏನನ್ ಆಳೋಚಿಸಿದಯ್ ಎಂದು ನುಡಿದ ಹಲಾಯುಧನ ನುಡಿಗೆ=ಕುರುಕುಲಕ್ಕೆ ಚೂಡಾಮಣಿಯಂತಿರುವ ದುರ್‍ಯೋದನನನ್ನು ಉದ್ದೇಶಿಸಿ “ಈಗ ಏನನ್ನು ಮಾಡಬೇಕೆಂದು ಆಲೋಚಿಸುತ್ತಿರುವೆ” ಎಂದು ಬಲರಾಮನು ಆಡಿದ ನುಡಿಗೆ;

ಚಕ್ರಾಯುಧ=ಚಕ್ರವನ್ನು ಆಯುದವನ್ನಾಗಿ ಉಳ್ಳವನು/ಕ್ರಿಶ್ಣ;

ಚಕ್ರಾಯುಧನ್ ಇಂತು ಎಂದನ್=ಬಲರಾಮನ ಪ್ರಶ್ನೆಗೆ ದುರ್‍ಯೋದನನನು ಉತ್ತರವನ್ನು ಕೊಡುವುದಕ್ಕೆ ಮುಂಚಿತವಾಗಿಯೇ ಕ್ರಿಶ್ಣನು ಅಣ್ಣ ಬಲರಾಮನೊಡನೆ ಯುದ್ದದ ಸಂಗತಿಯನ್ನು ಕುರಿತು ಮಾತನಾಡತೊಡಗುತ್ತಾನೆ;

ಅಗ್ರಜಾತ=ಮೊದಲು ಹುಟ್ಟಿದವನು/ಅಣ್ಣ; ಅಭಿವಂದತ+ಅರ್ಥರ್; ಅಭಿವಂದಿಸು=ನಮಸ್ಕರಿಸು; ಅಭಿವಂದಿತಾರ್ಥರ್=ಮನ್ನಣೆಗೆ ಯೋಗ್ಯರಾದವರು/ಆದರಣೀಯರು;

ಅಗ್ರಜಾತ, ನೀಮ್ ಎನಗೆ ಅಭಿವಂದಿತಾರ್ಥರ್= ಅಣ್ಣಾ, ನೀವು ನನಗೆ ಪೂಜನೀಯರು; ಅವಧಾರಿಸು=ಮನಸ್ಸಿಟ್ಟು ಕೇಳು;

ಚಿತ್ತದೊಳ್ ಮುನಿಯದೆ ಅವಧಾರಿಸು=ಮನದಲ್ಲಿ ಕೋಪವನ್ನು ತಳೆಯದೆ ತಾಳ್ಮೆಯಿಂದ ನಾನು ಹೇಳುವುದನ್ನು ಕೇಳಿರಿ;

ಬಾಡ=ಹಳ್ಳಿ/ಊರು;

ಪಾಂಡುನಂದನರ್ಗೆ ಬಾಡಮನ್ ಅಯ್ದನೆ ಬೇಡೆ ಪೋಗೆ=ಕುರುಕ್ಶೇತ್ರ ಯುದ್ದಕ್ಕೆ ಮೊದಲು ನಾನು ಪಾಂಡವರು ಮತ್ತು ಕೌರವರ ನಡುವೆ ಸಂದಾನವನ್ನು ಮಾಡಲೆಂದು ಹಸ್ತಿನಾವತಿಗೆ ಹೋಗಿ, ಪಾಂಡವರಿಗೆ ಅರ್‍ದರಾಜ್ಯವನ್ನು ಕೊಡಲು ದುರ್‍ಯೋದನನನ್ನು ಕೇಳಿಕೊಂಡೆನು. ಅದಕ್ಕೆ ಒಪ್ಪದಿದ್ದಾಗ, ಪಾಂಡುಪುತ್ರರು ನೆಮ್ಮದಿಯಿಂದ ಬಾಳಲು ಅಯ್ದು ಊರುಗಳನ್ನಾದರೂ ಕೊಡು ಎಂದು ಬೇಡಿಕೊಂಡಾಗ;

ದ್ರೋಣನ ಧೃತರಾಷ್ಟ್ರ ಸಿಂಧುಸುತರ್ ಎಂದುದನ್ ಎನ್ನದೆ=ಆಗ ದ್ರೋಣ, ದ್ರುತರಾಶ್ಟ್ರ, ಬೀಶ್ಮರು ಸಂದಾನವನ್ನು ಮಾಡಿಕೊಳ್ಳುವಂತೆ ದುರ್‍ಯೋದನನಿಗೆ ಹಿತನುಡಿಗಳನ್ನು ಹೇಳಿದರೂ ಕಿವಿಗೊಡದೆ ದುರ್‍ಯೋದನನನು ಅವರ ಮಾತಿಗೆ ಒಪ್ಪಲಿಲ್ಲ;

ನೀವ್ ಇದಮ್ ಸುಯೋಧನನೊಳೆ ಕೇಳ್ದು ನಂಬುವುದು=ಯುದ್ದಕ್ಕೆ ಮೊದಲು ನಡೆದ ಸಂದಾನದ ಸಂಗತಿಯನ್ನು ಮತ್ತು ಸಂದಾನವು ಮುರಿದುಬಿದ್ದುದಕ್ಕೆ ಯಾರು ಕಾರಣರು ಎಂಬುದನ್ನು ನೀವು ದುರ್‍ಯೋದನನನ್ನೇ ಕೇಳಿ ತಿಳಿದುಕೊಂಡು, ನಿಜಸಂಗತಿಯನ್ನು ನಂಬುವುದು;

ಎರಡು+ನುಡಿ=ಎರಳ್ನುಡಿ=ಸುಳ್ಳು ಹೇಳು;

ಫಣಿರಾಜಕೇತನನ್ ಎರಳ್ನುಡಿಯನ್ ಎನೆ=ದುರ್‍ಯೋದನನನು ಸುಳ್ಳನ್ನು ಹೇಳುವುದಿಲ್ಲ ಎಂದು ಕ್ರಿಶ್ಣನು ನುಡಿಯಲು;

ದುರ್ಯೋಧನನ್ ಎಂದನ್=ದುರ್‍ಯೋದನನನು ಬಲರಾಮನಿಗೆ ಈ ರೀತಿ ಹೇಳತೊಡಗಿದನು;

ಏಕೆ ಮುನಿವಿರ್=ಏಕೆ ಕೋಪಿಸಿಕೊಳ್ಳುವಿರಿ;

ಪಾಂಡುನಂದನರ್ ನಿರ್ದೋಷಿಗಳ್=ಪಾಂಡವರು ಯಾವ ತಪ್ಪನ್ನು ಮಾಡಿಲ್ಲ;

ಎಂತುಮ್ ಇವರೊಳ್ ಸಂಧಾನಮನ್ ಮುನ್ನಮ್ ಆನ್ ಒಲ್ಲೆನೆ=ಹೇಗಿದ್ದರೂ ಈ ಪಾಂಡವರೊಡನೆ ಸಂದಾನವನ್ನು ಮೊದಲಿನಿಂದಲೂ ನಾನು ಒಪ್ಪುತ್ತಿಲ್ಲ; ಕುರುವಂಶಕ್ಕೆ ಸೇರಿದ ಈ ರಾಜ್ಯವನ್ನು ಇಡಿಯಾಗಿ ನಾನು ಆಳಬೇಕು ಇಲ್ಲವೇ ಪಾಂಡವರು ಆಳಬೇಕು. ಇದನ್ನು ಹಂಚಿಕೊಂಡು ಬಾಳುವುದಕ್ಕೆ ನನ್ನಿಂದ ಸಾದ್ಯವೇ ಇಲ್ಲ ಎಂಬುದೇ ನನ್ನ ಅಚಲ ನಿರ್‍ದಾರ;

ಒಂದನೆ ಪೇಳ್ವೆನ್=ನಾನು ಚಿಕ್ಕಂದಿನಿಂದಲೂ ಅದೊಂದನ್ನೇ ಹೇಳಿಕೊಂಡು ಬಂದಿದ್ದೇನೆ. ಈಗಲೂ ಅದನ್ನೇ ಹೇಳುವೆನು. ನನಗೆ ಸಂದಾನ ಬೇಕಾಗಿಲ್ಲ;

ತನುಜ=ತಮ್ಮ; ತನುಜಾತರ್=ಒಡಹುಟ್ಟಿದವರು; ಎನಸುಮ್=ಬಹಳವಾಗಿ/ಅತಿಶಯವಾಗಿ; ಸೈರಿಸು=ತಾಳು/ಸಹಿಸು;

ತನುಜಾತರ್ ಪಲಬರುಮ್ ಸತ್ತರ್. ಎನಸುಮ್ ತತ್ ದುಃಖಮನ್ ಸೈರಿಸಲ್ಕೆ ಬಂದಪುದಿಲ್ಲ=ನನ್ನ ಒಡಹುಟ್ಟಿದ ತಮ್ಮಂದಿರಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಯಾವ ರೀತಿಯಿಂದಲೂ ಆ ಸಂಕಟವನ್ನು ತಾಳಿಕೊಳ್ಳುವುದಕ್ಕೆ ನನ್ನಿಂದಾಗುತ್ತಿಲ್ಲ;

ಸನ್ನದ್ಧನ್+ಆಗಿ; ಸನ್ನದ್ಧ=ಸಜ್ಜು/ಸಿದ್ದತೆ;

ಪಗೆವರ್ ಬರ್ಕೆ ಸನ್ನದ್ಧನಾಗಿ ಇರ್ದಪೆನ್=ಹಗೆಗಳಾದ ಪಾಂಡವರು ಬರಲಿ… ಅವರೊಡನೆ ಹೋರಾಡಲು ಸಿದ್ದನಾಗಿದ್ದೇನೆ;

ಅವಧಾರಿಸು=ಕೇಳು; ಅನುವರಮ್+ಅನ್; ಅನುವರ=ಕಾಳೆಗ/ಯುದ್ದ;

ಅವಧಾರಿಪುದು, ಇವರ್ ಎನ್ನ ಅನುವರಮನ್ ನೋಡುವುದಲ್ಲದೆ ಬೇರೆ ಪೆರವು ಮಾತಿಂಗೆ ಎಡೆಯಿಲ್ಲ ಎಂದೊಡೆ=ಕೇಳಿರಿ… ಈ ಪಾಂಡವರು ನನ್ನೊಡನೆ ಕಾಳೆಗ ಮಾಡುವುದನ್ನು ನೋಡುವುದಲ್ಲದೆ, ಬೇರೆ ಯಾವುದೇ ಮಾತಿಗೆ ಅವಕಾಶವಿಲ್ಲ ಎಂದು ದುರ್‍ಯೋದನನನು ಬಲರಾಮನಿಗೆ ಹೇಳಲು;

ಮುಸಲಪಾಣಿ=ಮುಸಲವೆಂಬ ಆಯುದವನ್ನು ಹಿಡಿದುಕೊಂಡುವವನು/ ಬಲರಾಮ;

ಮುಸಲಪಾಣಿ ಕೌರವೇಂದ್ರನನ್ ಮನದೊಳ್ ಪೊಗಳ್ದನ್=ಬಲರಾಮನು ದುರ್‍ಯೋದನನನ್ನು ಮನದಲ್ಲಿಯೇ ಹೊಗಳಿದನು; ಅಂತು ಪೊಗಳ್ದು=ಆ ರೀತಿ ಮನದಲ್ಲಿ ಮೆಚ್ಚಿಕೊಂಡು ದುರ್‍ಯೋದನನನ್ನು ಹೊಗಳಿ;

ನಿರ್ವ್ಯಾಜ=ಕಪಟವಿಲ್ಲದ/ನಿಜವಾದ/ಸಹಜವಾದ; ಸಂಕರ್ಷಣ=ಬಲರಾಮ;

ರಾಜರಾಜನ ನಿರ್ವ್ಯಾಜ ಶೌರ್ಯಕ್ಕೆ ಸಂಕರ್ಷಣನ್ ಆಶ್ಚರ್ಯಮ್ ಪಟ್ಟು=ದುರ್‍ಯೋನನ ಸಹಜವಾದ ಪರಾಕ್ರಮಕ್ಕೆ ಬಲರಾಮನು ಅಚ್ಚರಿಯನ್ನು ಹೊಂದಿ; ಕುರುಕ್ಶೇತ್ರ ಕಾಳೆಗದಲ್ಲಿ ಹನ್ನೊಂದು ಅಕ್ಶೋಹಿಣಿ ಸೇನಾಬಲವನ್ನು ಕಳೆದುಕೊಂಡು ಒಬ್ಬಂಟಿಗನಾಗಿದ್ದರೂ, ತಾನು ಹಿಡಿದ ಚಲವನ್ನೇ ಪಟ್ಟುಹಿಡಿದು ಪಾಂಡವರೊಡನೆ ಹೋರಾಡಲು ಸಿದ್ದನಾಗಿರುವ ದುರ್‍ಯೋದನನ ಸಹಜವಾದ ಶೂರತನವನ್ನು ಕಂಡು ಬಲರಾಮನು ಅಚ್ಚರಿಗೊಂಡಿದ್ದಾನೆ;

ಪೆರತು+ಏನುಮನ್;

ಪೆರತೇನುಮನ್ ಎನಲ್ ಅರಿಯದೆ=ತನ್ನ ಚಲಕ್ಕೆ ಬದ್ದನಾಗಿರುವ ದುರ್‍ಯೋದನನಿಗೆ ಮತ್ತೇನನ್ನು ಹೇಳಲು ತಿಳಿಯದೆ;

ಧರ್ಮನಂದನಾದಿಗಳ ಮೊಗಮನ್ ನೋಡಿ=ಬಲರಾಮನು ದರ‍್ಮರಾಯನನ್ನು ಒಳಗೊಂಡಂತೆ ಪಾಂಡವರೆಲ್ಲರ ಮೊಗವನ್ನು ನೋಡುತ್ತ;

ನಿಮ್ಮ ಅಯ್ವರೊಳ್ ಆರಾಗಿಯುಮ್ ಈತನೊಳ್ ಒರ್ವನೆ ಕಾದುವುದು=ನಿಮ್ಮ ಅಯ್ದು ಮಂದಿಯಲ್ಲಿ ಯಾರಾದರೊಬ್ಬರು ಈತನೊಡನೆ ಹೋರಾಡುವುದು;

ಕಾದಿ ಗೆಲ್ದಿಮ್ ಬಳಿಕ್ಕೆ… ದುರ್ಯೋಧನನ್ ನೆಲನನ್ ಆಳ್ವನ್=ಹೋರಾಡಿ ಗೆದ್ದ ನಂತರ, ದುರ್‍ಯೋದನನನು ರಾಜ್ಯವನ್ನು ಆಳುತ್ತಾನೆ;

ಬೆಸಕೆಯ್=ಸೇವೆ ಮಾಡು/ಹೇಳಿದ ಕೆಲಸವನ್ನು ಮಾಡು;

ಆತಂಗೆ ಉಳಿದ ನಾಲ್ವರ್ ಬೆಸಕೆಯ್ದು ಬಾಳ್ವಿರ್ ಎಂದು ನುಡಿಯೆ=ಗೆದ್ದ ದುರ್‍ಯೋದನನಿಗೆ ಉಳಿದ ನಾಲ್ವರು ಪಾಂಡವ ಸೋದರರು ಅವನು ಹೇಳಿದ ಕೆಲಸವನ್ನು ಮಾಡಿಕೊಂಡಿರಬೇಕು ಎಂದು ಬಲರಾಮನು ನುಡಿಯಲು; ಬಲರಾಮನಿಗೆ ಈಗ ನಡೆಯಲಿರುವ ಕಾಳೆಗದಲ್ಲಿ ದುರ್‍ಯೋದನನನು ಗೆದ್ದೇ ಗೆಲ್ಲುತ್ತಾನೆ. ಅವನೊಡನೆ ಕಾಳೆಗ ಮಾಡುವ ಒಬ್ಬ ಪಾಂಡುಕುಮಾರನು ಸೋತು ಸಾವನ್ನಪ್ಪುತ್ತಾನೆ ಎಂಬ ವಿಶ್ವಾಸವಿದೆ;

ಭೀಮಸೇನನ್ ಇದಿರ್ಗೆ ವಂದು=ಬಲರಾಮನ ನುಡಿಗಳನ್ನು ಕೇಳುತ್ತಿದ್ದಂತೆಯೇ ಪಾಂಡುಕುಮಾರರಲ್ಲಿ ಒಬ್ಬನಾದ ಬೀಮಸೇನನು ಬಲರಾಮನ ಮುಂದಕ್ಕೆ ಬಂದು;

ಹಲಾಯುಧ=ನೇಗಿಲಿನ ಆಕಾರದ ಆಯುದವನ್ನು ಹೊಂದಿರುವವನು/ಬಲರಾಮ; ಅರ=ಯಮ; ಅರಮಗ=ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ದರ‍್ಮರಾಯ;

ಇರ್ಕೆ=ಇರಲಿ; ಅರಿಕೆ=ಕೀರ್ತಿ/ಯಶಸ್ಸು;

ಹಲಾಯುಧ, ಅರಮಗನ್ ಇರ್ಕೆ… ಅರ್ಜುನನ್ ಇರ್ಕೆ… ಅರಿಕೆಯ ಮಾದ್ರೀಸುತರ್ಕಳ್ ಇರ್ಕೆ=ಬಲರಾಮನೇ, ದರ‍್ಮರಾಯನು ಈ ಕಾಳೆಗದಿಂದ ದೂರವಿರಲಿ… ಅದೇ ರೀತಿ ಅರ‍್ಜುನ ಮತ್ತು ಕೀರ‍್ತಿವಂತರಾದ ನಕುಲ ಸಹದೇವರು ದೂರವಿರಲಿ;

ಅಳಿ+ಪಗೆ+ಅನ್; ಅಳಿ=ಹೀನತನ/ಅಲ್ಪತನ/ನೀಚತನ; ಪಗೆ=ಶತ್ರು/ಹಗೆ; ಅಳಿವಗೆ=ನೀಚನಾದ ಶತ್ರು; ಪರಿಪಡಿಸು=ಕತ್ತರಿಸು/ನಾಶಪಡಿಸು; ನೆರೆದು+ಇರ್ದಪೆನ್; ನೆರೆ=ಸಿದ್ದವಾಗು/ಸಜ್ಜಾಗು;

ಅಳಿವಗೆಯನ್ ಪರಿಪಡಿಸಲ್ಕೆ ನೆರೆದಿರ್ದಪೆನ್=ನೀಚನಾದ ಹಗೆಯನ್ನು ಕತ್ತರಿಸಿ ಕೊಲ್ಲಲು ಸಿದ್ದನಾಗಿದ್ದೇನೆ;

ಕೌರವನನ್ ಎನಗೆ ತೋರಿ ಬಿಡು=ದುರ್‍ಯೋದನನನ್ನು ನನ್ನೊಡನೆ ಕಾಳೆಗ ಮಾಡಲು ಕಳುಹಿಸು;

ಮರುತ್=ವಾಯುದೇವ; ಮರುತ್ ನಂದನ=ಬೀಮಸೇನ; ರೋಹಿಣೀ ನಂದನ=ಬಲರಾಮ;

ಅಂತು ಮರುತ್ ನಂದನನ್ ರೋಹಿಣೀ ನಂದನಂಗೆ ನುಡಿದು=ಆ ರೀತಿಯಲ್ಲಿ ಬೀಮಸೇನನು ಬಲರಾಮನಿಗೆ ಹೇಳಿ;

ದ್ವಂದ್ವ=ಎರಡು; ದ್ವಂದ್ವಯುದ್ಧ=ಇಬ್ಬರ ನಡುವೆ ನಡೆಯುವ ಕಾಳೆಗ;

ದ್ವಂದ್ವಯುದ್ಧಕ್ಕೆ ಧರ್ಮನಂದನಾದಿಗಳ ಮೊಗಮನ್ ನೋಡಿ=ಬೀಮಸೇನನು ತನ್ನ ಮತ್ತು ದುರ್‍ಯೋದನನ ನಡುವೆ ದ್ವಂದ್ವಯುದ್ದವನ್ನು ತಾನೇ ನಿಶ್ಚಯಿಸಿರುವುದಕ್ಕೆ ಕಾರಣವೇನೆಂಬುದನ್ನು ಅಣ್ಣತಮ್ಮಂದಿರಿಗೆ ತಿಳಿಸುವುದಕ್ಕಾಗಿ ಅವರ ಮೊಗವನ್ನು ನೋಡುತ್ತ ಈ ರೀತಿ ನುಡಿಯತೊಡಗುತ್ತಾನೆ;

ಆನ್ ಪಗೆಗೆ ಮೊದಲಿಗನೆನ್=ನಾನು ದುರ್‍ಯೋದನನಿಗೆ ಮೊದಲನೆಯ ಶತ್ರು. ಚಿಕ್ಕಂದಿನಿಂದಲೂ ಆತ ನನ್ನನ್ನು ಕೊಲ್ಲಲು ಹಲವಾರು ಬಗೆಯ ಸಂಚನ್ನು ಹೂಡುತ್ತಲೇ ಇದ್ದಾನೆ;

ಇಡು+ಪಗೆ; ಇಡು=ಇರಿಸು/ಮಡಗು; ಪಗೆ=ಶತ್ರು/ಹಗೆ; ಇಡುವಗೆ=ಬಲವಾದ ಹಗೆತನ/ಬದ್ದದ್ವೇಶ;

ಅಂತು ಕೌರವನ್ ಇಡುವಗೆ=ಆದ್ದರಿಂದ ದುರ್‍ಯೋದನನನು ನನ್ನ ಕಡುಹಗೆಯಾಗಿದ್ದಾನೆ. ಅವನ ಮತ್ತು ನನ್ನ ನಡುವೆ ಇರುವ ಹಗೆತನ… ಇಬ್ಬರಲ್ಲಿ ಒಬ್ಬ ಇಲ್ಲವಾದಾಗ ಮಾತ್ರ ತೀರುತ್ತದೆ;

ದಾಯಿಗತನ=ಒಂದೇ ಮನೆತನದಲ್ಲಿ ಹುಟ್ಟಿ ಬೆಳೆದು ಮನೆತನದ ಸಂಪತ್ತಿಗೆ ಪಾಲುದಾರರಾದ ಅಣ್ಣತಮ್ಮಂದಿರ/ಅಕ್ಕತಂಗಿಯರ ಹಕ್ಕು; ತಗು=ಯೋಗ್ಯವಾಗು/ಉಚಿತವಾಗು;

ಅದರ್ಕೆ ನೀಮ್ ಎಲ್ಲಮ್ ಇಲ್ಲಿ ದಾಯಿಗತನಮನ್ ತೋರಲ್ ತಗದು=ಅದಕ್ಕಾಗಿ ಅಂದರೆ ನನ್ನ ಮತ್ತು ದುರ್‍ಯೋದನನ ನಡುವೆ ಕಡು ಹಗೆತನ ಇರುವುದರಿಂದ ನೀವೆಲ್ಲರೂ ಈ ಕಾಳೆಗದಲ್ಲಿ ಹಕ್ಕುದಾರಿಕೆಯನ್ನು ತೋರಿಸುವುದು ಸರಿಯಲ್ಲ;

ದೊರೆ+ಆಗಿ+ಇರ್ದನ್; ದೊರೆ=ಸಮಾನ;

ಈತನ್ ಮುನ್ನಮ್ ಎನಗೆ ದೊರೆಯಾಗಿರ್ದನ್ ಎಂಬುದುಮ್=ಈ ದುರ್‍ಯೋದನನನು ಚಿಕ್ಕಂದಿನಿಂದಲೂ ನನಗೆ ಬಾಹುಬಲದಲ್ಲಿ ಮತ್ತು ಗದಾವಿದ್ಯೆಯ ಕುಶಲತೆಯಲ್ಲಿ ಸರಿಸಮಾನನಾಗಿದ್ದಾನೆ ಎಂದು ಬೀಮಸೇನನು ತನ್ನ ಆಯ್ಕೆಗೆ ಕಾರಣವನ್ನು ವಿವರಿಸಲು;

ಇರ್ದು= ಇದ್ದು;

ಧರ್ಮನಂದನಾದಿಗಳ್ ಇರ್ದು=ಬೀಮಸೇನನ ಕೋರಿಕೆಗೆ ಅಣ್ಣ ದರ್‍ಮರಾಯ ಮತ್ತು ತಮ್ಮಂದಿರಾದ ಅರ್‍ಜುನ, ನಕುಲ, ಸಹದೇವರು ಒಪ್ಪಿಕೊಂಡು;

ಮಾರುತಿ=ಬೀಮಸೇನ; ಫಣಿರಾಜಕೇತನ=ದುರ್‍ಯೋದನ; ಸಮಕಟ್ಟು=ನಿಶ್ಚಯಿಸು;

ಮಾರುತಿಗಮ್ ಫಣಿರಾಜಕೇತನಂಗಮ್ ಧರ್ಮಯುದ್ಧಮನೆ ಸಮಕಟ್ಟಿದಾಗಳ್= ಬೀಮಸೇನ ಮತ್ತು ದುರ್‍ಯೋದನ ನಡುವೆ ದರ್‍ಮಯುದ್ದವನ್ನು ನಿಶ್ಚಯಿಸಿದಾಗ; ವನರುಹ=ತಾವರೆ; ನಾಭಿ=ಹೊಕ್ಕಳು; ವನರುಹನಾಭ=ಹೊಕ್ಕಳಲ್ಲಿ ತಾವರೆಯ ಹೂವನ್ನು ಉಳ್ಳವನು/ವಿಶ್ಣು/ಕ್ರಿಶ್ಣ; ಕ್ರಿಶ್ಣನು ವಿಶ್ಣುವಿನ ಅವತಾರವೆಂಬ ನಂಬಿಕೆಯು ಜನಮನದಲ್ಲಿದೆ; ಸಾಕ್ಷಿಯೊಳ್+ಇರ್ದು; ಸಾಕ್ಷಿ=ನೋಡುವಿಕೆ/ಕಾಣುವಿಕೆ; ಕಯ್+ಪೊಯ್ದೊಡೆ; ಕಯ್ ಪೊಯ್=ಕಾಳೆಗಕ್ಕೆ ನಿಲ್ಲು;

ವನರುಹನಾಭನ ಬಲದೇವನ ಸಾಕ್ಷಿಯೊಳಿರ್ದು ಕೌರವೇಶ್ವರನ್ ಆ ಭೀಮನ ಕಯ್ವೊಯ್ದೊಡೆ=ಕ್ರಿಶ್ಣ ಮತ್ತು ಬಲರಾಮರನ್ನು ಸಾಕ್ಶಿಯಾಗಿಟ್ಟುಕೊಂಡು ದುರ್‍ಯೋದನನನು ಬೀಮನನ್ನು ಕಯ್ ತಟ್ಟಿ ಕಾಳೆಗಕ್ಕೆ ಕರೆಯಲು;

ತತ್=ಆ; ನಿಕಾಯ=ಗುಂಪು/ಸಮೂಹ; ಅದಟು=ಪರಾಕ್ರಮ;

ತತ್ ದೇವನಿಕಾಯಮ್ ಕುರುಪತಿಯಾ ಅದಟುಮನ್ ಪೊಗಳ್ದರ್=ಗಗನದಲ್ಲಿದ್ದು ಇದೆಲ್ಲವನ್ನೂ ನೋಡುತ್ತಿರುವ ದೇವತೆಗಳ ಗುಂಪು… ಒಬ್ಬಂಟಿಯಾಗಿದ್ದರೂ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಹಿಂಜರಿಯದೆ ಗದಾಯುದ್ದಕ್ಕೆ ಕರೆಯನ್ನು ನೀಡಿದ ದುರ್‍ಯೋದನನ ಪರಾಕ್ರಮವನ್ನು ಹೊಗಳಿದರು;

ಕಯ್+ಪೊಯ್ದು+ಆಗಳ್;

ಅಂತು ಧರ್ಮಯುದ್ಧಕ್ಕೆ ಕೈವೊಯ್ದಾಗಳ್=ಆ ರೀತಿ ದರ್‍ಮಯುದ್ದಕ್ಕೆ ಕರೆಕೊಟ್ಟು, ಇಬ್ಬರು ಅಣಿಯಾಗಿ ನಿಂತಾಗ;

ಎಡೆ=ಜಾಗ; ಎನಿತು=ಎಶ್ಟು; ಅನಿತು=ಅಶ್ಟು; ಬರಿದು+ಇಲ್ಲದ+ಅಂತು; ಶತ=ನೂರು; ತೆಕ್ಕೆನೆ ತೀವು=ಜಡಿದು ತುಂಬು/ತುಸುವಾದರೂ ಎಡೆಯಿಲ್ಲದಂತೆ ತುಂಬಿರುವುದು;

ಕುರುಕ್ಷೇತ್ರದೊಳ್ ಎಡೆ ಎನಿತು ಅನಿತುಮ್ ಬರಿದಿಲ್ಲದಂತು ಶವಶತದಿಮ್ ತೆಕ್ಕನೆ ತೀವೆ=ಕುರುಕ್ಶೇತ್ರ ರಣರಂಗದ ಉದ್ದಗಲದಲ್ಲಿ ಎಶ್ಟು ಜಾಗವಿದೆಯೋ ಅಶ್ಟೆಲ್ಲಾ ಜಾಗದಲ್ಲಿ ತುಸುವಾದರೂ ಜಾಗ ಕಾಲಿಯಿಲ್ಲದಂತೆ ನೂರಾರು ಹೆಣಗಳಿಂದ ತುಂಬಿಹೋಗಿರಲು;

ರಣ+ಉತ್ಸವದ+ಇಂದೆ; ರಣ=ಕಾಳೆಗ/ಯುದ್ದ; ಉತ್ಸವ=ಸಡಗರ; ಅನಿಲಸುತ=ವಾಯುದೇವನ ಮಗ/ಬೀಮ; ಕೊಳ್ಗುಳ=ರಣರಂಗ/ಯುದ್ದಬೂಮಿ; ಸಮರು=ಗುಡಿಸಿ ಶುಚಿಮಾಡು/ಬಾಚು/ಹಿಕ್ಕು;

ರಣೋತ್ಸವದಿಂದೆ ಅನಿಲಸುತನ್ ತಾನೆ ಕೊಳ್ಗುಳಮನ್ ಸಮರಿದನ್=ಕಾಳೆಗವನ್ನು ಮಾಡಬೇಕೆಂಬ ಸಡಗರದಿಂದ ಬೀಮಸೇನನು ತಾನೆ ಮುಂದೆ ಬಂದು, ರಣರಂಗದಲ್ಲಿ ತುಂಬಿದ್ದ ಹೆಣಗಳನ್ನು, ಆಯುದಗಳನ್ನು ಮತ್ತು ಮುರಿದು ಬಿದ್ದ ತೇರುಗಳನ್ನು ಪಕ್ಕಕ್ಕೆ ದೂಡಿ, ಕಸಕಡ್ಡಿಗಳನ್ನು ತೆಗೆದು, ಎಲ್ಲವನ್ನೂ ಗುಡಿಸಿ ಶುಚಿಗೊಳಿಸಿ ಗದಾಯುದ್ದಕ್ಕೆ ಅಗತ್ಯವಾದಶ್ಟು ಜಾಗವನ್ನು ಅಣಿಗೊಳಿಸಿದನು; ದುರ್‍ಯೋದನನೊಡನೆ ಗದಾಯುದ್ದವನ್ನು ಮಾಡಲು ಆಕ್ರೋಶದಿಂದ ಕುದಿಯುತ್ತಿದ್ದ ಬೀಮಸೇನನು ಹೋರಾಟಕ್ಕೆ ಜಾಗವನ್ನು ಸಿದ್ದಗೊಳಿಸಿ, ಈ ರೀತಿ ನುಡಿಯತೊಡಗುತ್ತಾನೆ;

ಪುದುವು+ಪೆತ್ತ; ಪುದುವು=ಸಮ/ಸಾಟಿ; ಪೆತ್ತ=ಪಡೆದ; ಪುದುವೆತ್ತ= ಸರಿಜೋಡಿಯಾಗಿರುವ/ ಸರಿಸಮಾನವಾದ; ಎಕ್ಕಟಿ+ಕಾಳೆಗಮ್; ಎಕ್ಕಟಿ=ಒಬ್ಬಂಟಿಗ/ಏಕಾಂಗಿ; ಎಕ್ಕಟಿಗಾಳೆಗ= ದ್ವಂದ್ವಯುದ್ದ/ಇಬ್ಬರ ನಡುವೆ ಮಾತ್ರ ನಡೆಯುವ ಯುದ್ದ; ಸಮನಿಸು=ಒದಗು/ಉಂಟಾಗು;

ಪುದುವೆತ್ತ ಎಕ್ಕಟಿಗಾಳೆಗಮ್ ಸಮನಿಸಿತ್ತು= ಸರಿಸಮಾನವಾದ ಬಲವುಳ್ಳ ನಮ್ಮಿಬ್ಬರ ನಡುವೆ ದ್ವಂದ್ವಯುದ್ದವು ಒದಗಿಬಂದಿದೆ;

ತ್ರಿದಶ=ದೇವತೆ;

ತ್ರಿದಶರ್ ಎಮ್ಮ ಈ ಗದಾಯುದ್ಧಮನ್ ನೋಡಲೆ ಕೌತುಕಮ್ ಬೆರಸಿ ನಭೋಭಾಗದೊಳ್ ಬಂದಿರ್ದರ್=ನಮ್ಮಿಬ್ಬರ ಈ ಗದಾಯುದ್ದವನ್ನು ನೋಡುವ ಕುತೂಹಲದಿಂದ ಕೂಡಿ ದೇವತೆಗಳು ಗಗನ ಮಂಡಲದಲ್ಲಿ ನೆರೆದಿದ್ದಾರೆ;

ಮದವತ್=ಸೊಕ್ಕಿನಿಂದ ಮೆರೆಯುತ್ತಿರುವ; ಇಕ್ಕು=ಹೊಡೆ/ಬಡಿ/ಕೊಲ್ಲು; ಭೂವಳಯಮ್+ಅಮ್; ಭೂವಳಯ=ಬೂಮಂಡಲ; ನಿಷ್ಕಂಟಕ=ಪೀಡೆಯಿಲ್ಲದಿರುವುದು/ತೊಂದರೆಯಿಲ್ಲದಿರುವುದು;

ಮದವತ್ ವೈರಿಯನ್ ಇಕ್ಕಿ … ಭೂವಳಯಮಮ್ ನಿಷ್ಕಂಟಕಮ್ ಮಾಳ್ಪೆನ್ ಎಂಬುದನ್ ಎಂದು=ಸೊಕ್ಕಿನಿಂದ ಮೆರೆಯುತ್ತಿರುವ ಹಗೆಯಾದ ದುರ್‍ಯೋದನನನ್ನು ಹೊಡೆದು ಕೊಂದು, ಬೂಮಂಡಲದಲ್ಲಿ ಯಾವುದೇ ಪೀಡೆಯಿಲ್ಲದಂತೆ ಮಾಡುತ್ತೇನೆ ಎಂದು ನುಡಿದು;

ಆಹವ=ಯುದ್ದ/ಕಾಳೆಗ; ಲಂಪಟನ್=ಅತಿಯಾದ ಆಸಕ್ತಿಯುಳ್ಳವನು/ಗೀಳು ಉಳ್ಳವನು; ಕಂಠೀರವ=ಸಿಂಹ; ಚಾಳುಕ್ಯಕಂಠೀರವ=ಇದು ಚಾಳುಕ್ಯ ಚಕ್ರವರ‍್ತಿ ಸತ್ಯಾಶ್ರಯನಿಗೆ ಇದ್ದ ಬಿರುದು. ರನ್ನ ಕವಿಯು ತಾನು ರಚಿಸಿದ ‘ಗದಾಯುದ್ದ’ ಕಾವ್ಯದಲ್ಲಿ ಬೀಮಸೇನನ ಪಾತ್ರವನ್ನು ಚಕ್ರವರ‍್ತಿಯಾದ ಸತ್ಯಾಶ್ರಯನ ಹೆಸರಿನೊಡನೆ ಸಮೀಕರಿಸಿರುವುದರಿಂದ, ಚಕ್ರವರ‍್ತಿಯ ಬಿರುದಿನಲ್ಲಿಯೇ ಬೀಮನನ್ನು ಚಿತ್ರಿಸಿದ್ದಾನೆ;

ಮಸಗು=ಕೆರಳು/ಉತ್ಸಾಹಗೊಳ್ಳು/ಹುರುಪೇರು;

ಆಹವಲಂಪಟನ್ ಚಾಳುಕ್ಯಕಂಠೀರವನ್ ಮಸಗಿದನ್=ಯುದ್ದಪ್ರಿಯನಾದ ಬೀಮಸೇನನು ಹುರುಪಿನಿಂದ ಕಂಗೊಳಿಸಿದನು;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *