ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ದ್ರುತರಾಶ್ಟ್ರನಿಗೆ ವ್ಯಾಸರ ಅನುಗ್ರಹ – ನೋಟ – 5

– ಸಿ. ಪಿ. ನಾಗರಾಜ.

ದ್ರುತರಾಶ್ಟ್ರನಿಗೆ ವ್ಯಾಸರ ಅನುಗ್ರಹ

(ಆದಿ ಪರ್ವ : ನಾಲ್ಕನೆಯ ಸಂಧಿ: ಪದ್ಯ: 1 ರಿಂದ 11)

ಪಾತ್ರಗಳು:

ದ್ರುತರಾಶ್ಟ್ರ: ವ್ಯಾಸ ಮತ್ತು ಅಂಬಿಕೆಯ ಮಗ. ಹಸ್ತಿನಾವತಿಯ ರಾಜ.

ವ್ಯಾಸ: ಪರಾಶರ ಮುನಿ ಮತ್ತು ಮತ್ಸ್ಯಗಂದಿಯ ಮಗ. ವೇದಗಳನ್ನು ಸಂಗ್ರಹಿಸಿ ಸಂಪಾದನೆ ಮಾಡಿದ್ದರಿಂದ ವೇದವ್ಯಾಸ ಎಂಬ ಹೆಸರು ಬಂದಿದೆ.

*** ಧೃತರಾಷ್ಟ್ರನಿಗೆ ವ್ಯಾಸರ ಅನುಗ್ರಹ ***

ಕೇಳು ಜನಮೇಜಯ ಧರಿತ್ರೀಪಾಲ, ಕುಂತೀಭೋಜ ಭೂಪತಿಯ ಆಲಯದೊಳು ಈ ಕುಂತಿ ವಿವಿಧ ವಿಭವದಲಿ ಮೆರೆದಳು. ಆ ನೀಲಾಳಕಿಯ ಕುಲ ರೂಪು ಲಕ್ಷಣಶೀಲವನು ಗಾಂಗೇಯನು ಕೇಳಿದನು. ಪಾಂಡುವಿಗೆ ಪಾಸಟಿಯೆಂದು ರಾಗದಲಿ ಕುಂತೀಭೋಜನನು ಕರೆಸಿ ಸತ್ಕರಿಸಿ, ಕುಂತಿಯ ಪಾಂಡುವಿಗೆ ಭೂಸುರರ ಮತದಿಂದ ಅಗ್ನಿ ಸಾಕ್ಷಿಕ ವರವಿವಾಹವನು ಪರಮ ವಿಭವದಲಿ ಎಸಗಿ, ಮದ್ರೇಶ್ವರನ ಅನುಜೆ ಮಾದ್ರಿಯನು ವೈವಾಹಿಕ ಮುಹೂರ್ತದಲಿ ಪಾಂಡುವಿಗೆ ಅರಸಿಯನು ಮಾಡಿದನು.

ವರ ವಿವಾಹ ಮುಹೂರ್ತ ಸಮನಂತರ ಸುರನದೀಸುತ ಧೃತರಾಷ್ಟ ವಿದುರರ ಪರಮ ಪರಿತೋಷ ಅನುಮತದಲಿ… ಸುಲಗ್ನದೊಳು ಪಾಂಡುವಿಗೆ ಅಖಿಳ ರಾಜ್ಯದ ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ ವಿಸ್ತರಿಸಿದನು. ಆ ವಿಭವ ಮೆರೆದುದು.

ಅವನೀಪಾಲ ಕೇಳು, ಸೋಮಕುಲದವರಲಿ ಭವತ್ ಪ್ರಪಿತಾಮಹನವೋಲ್ ಧರ್ಮದಲಿ ಸಂಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ ಸಾಮದಲಿ ಶೌರ್ಯದಲಿ ಸುಜನಪ್ರೇಮದಲಿ ನೀತಿಯಲಿ ದೃಢದಲಿ ಭೂಮಿಯಲಿ ನಾ ಕಾಣೆನು ಎಂದ.

ಪಸರಿಸಿದ ಪರಿಧೌತಕೀರ್ತಿ ಪ್ರಸರದಲಿ ಜಗ ಬೆಳುಪಾಯ್ತು. ನಿಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ ಅಗ್ಗದ ಕೆಂಪು ಮಸಗಿತು; ಪರಬಲ ವಿಸರದಳನ ಕ್ರೋಧಮಯ ತಾಮಸದಿನ್ ಭುವನವಿಸ್ತಾರ ಅಸಿತಾಭಾಸಮ್ ಆದುದು. ಮಿತ್ರ ರಾಯರ ಮೌಳಿಮಣಿ ಪಾಂಡುವಿನ ಚರಣ ನಖಾಳಿಯನು ಓಲಗಿಸುವುದು. ಸೆಣಸುವ ಮಹೀಶ್ವರ ಮೌಳಿಮಣಿ ಕಿರಣ ಪ್ರಣಯದ ಅಮರೀಬಾಲೆಯರ ಪದನಖವನು ಓಲಗಿಸಿತು.

ಪಾಂಡುವಿನ ಖಂಡೆಯ ಸಿರಿಯ ಸಡಗರವದನು ಏವೇಳುವೆನು. ಓಲಗಿಸಿ ಕೊಂಬಾತನು ಅಂಧನೃಪಾಲನು; ಪಾಂಡುಭೂಪತಿಗೆ ಉಳಿದಂತೆ ಅಖಿಳ ಧರಣೀಪಾಲಕತ್ಪ; ಈ ಕುಮಾರಕರ ಲಾಲಿಸುವ ಕುಲನೀತಿ ವಿಧದಲಿ ಪಾಲಿಸುವ ಭರ ಭೀಷ್ಮನದು. ನಳ ನಹುಷಚರಿತವನು ಇವರ ಪರಿಪಾಟಿ ಸಂಬಾಳಿಸಿತು.

ಧೃತರಾಷ್ಟ್ರ: (ತನ್ನ ಮನದಲ್ಲಿ)

ನೃಪ ಪರಂಪರೆಯಿಂದ ಬಂದ ಈ ವಿಪುಳ ವಂಶಸ್ಥಿತಿ ವಿಸರ್ಗವನು… ಹಿಂದೆ ವೇದವ್ಯಾಸ ಮುನಿ ಬಂದು ಅಪಹರಿಸಿದನು… ಕೃಪೆಯ ಮಾಡನೆ… ತನ್ನ ಸಂತತಿ ಕೃಪಣವಾಯ್ತು.

(ಎಂದು ಅನವರತ ಕುರುನೃಪತಿ ಧೃತರಾಷ್ಟ್ರ ಚಿಂತಾಭಾರದಲಿ ಬಳಲುವನು.
ಅರಸ ಚಿತ್ತೈಸು, ಒಂದು ದಿನ ಮುನಿವರನು ಬಿಜಯಂಗೈದು ಹಸ್ತಿನಪುರವ ಹೊಕ್ಕನು.
ರಾಜಭವನಕೆ ಬಂದು ಹರ್ಷದಲಿ ಸುರನದೀತನುಜಾದಿಗಳ ಸತ್ಕರಣೆಯನು ಕೈಕೊಂಡು,
ಮಕ್ಕಳ ಮುರಿದ ವಿಭವಕೆ ಮೈಯನಾಂತು ಮುನೀಂದ್ರನು ಇಂತು ಎಂದ…)

ವ್ಯಾಸ: ಭರತ ಕುಲದಲಿ ಕೋಮಲ ಸೌಖ್ಯಲತೆಗೆ ಮಕ್ಕಳಿಲ್ಲದ ಕೊರತೆ ಇದು ಕರಗಸವಲಾ…ತಂದೆ,

ಬಾಧೃತರಾಷ್ಟ್ರ… ಬಾ…

(ಎನುತ ಕರೆದು ಕಟ್ಟೇಕಾಂತದಲಿ…)

ವ್ಯಾಸ: ಮಂತ್ರ ಪಿಂಡಕವ ಕೊಳ್. ನಿನ್ನ ಅರಸಿಗೆ ಅನುಪಮ ಪುತ್ರ ಶತ ಅವತರಿಸುವುದು.

(ಗಾಂಧಾರಿ ಗರ್ಭೋತ್ಕರವನು ಧರಿಸಿದಳು. ಇತ್ತ ನಿಜಾಶ್ರಮಕೆ ಮುನಿ ತಿರುಗಿದನು.
ರಾಯನ ಅಭ್ಯುದಯ ದಿನದಿನದೊಳು ಉಬ್ಬಿತು.)

ಪದ ವಿಂಗಡಣೆ ಮತ್ತು ತಿರುಳು

ಕೇಳು ಜನಮೇಜಯ ಧರಿತ್ರೀಪಾಲ=ಕೇಳು ಜನಮೇಜಯ ರಾಜ; ವೈಶಂಪಾಯನ ಮುನಿಯು ವ್ಯಾಸರು ಬರೆದ ಮಹಾಬಾರತದ ಕತೆಯನ್ನು ಜನಮೇಜಯ ರಾಜನಿಗೆ ಹೇಳುತ್ತಿದ್ದಾನೆ; ವಿಭವ=ಸಿರಿ/ಸಂಪತ್ತು/ಸೊಗಸು/ಹಿರಿಮೆ; ನೀಲ+ಅಳಕಿಯ; ನೀಲ=ಕಡುಕಪ್ಪು ಬಣ್ಣ; ಅಳಕ=ಗುಂಗುರು ಕೂದಲು; ಪಾಸಟಿ=ಸರಿ/ಸಮಾನ; ರಾಗ=ಒಲುಮೆ/ಪ್ರೀತಿ; ಭೂಸುರ=ಬೂಮಿಯಲ್ಲಿರುವ ದೇವತೆ/ಬ್ರಾಹ್ಮಣ; ಮತ=ಆಶಯ; ಮದ್ರೇಶ್ವರ=ಮದ್ರದೇಶದ ದೊರೆ ಶಲ್ಯ; ಅನುಜೆ=ತಂಗಿ; ಸಮನಂತರ=ತರುವಾಯ; ಸುರನದೀಸುತ=ದೇವಗಂಗೆಯ ಮಗನಾದ ಬೀಶ್ಮ;

ಪರಿತೋಷ=ಹೆಚ್ಚಿನ ಆನಂದ; ಅನುಮತ=ಒಪ್ಪಿಗೆ/ಸಮ್ಮತಿ; ಸುಲಗ್ನ=ಒಳ್ಳೆಯ ಗಳಿಗೆ/ಕಾಲ; ಧುರ=ಹೊಣೆ/ಜವಾಬ್ದಾರಿ; ಮಹಾ+ಪಟ್ಟ+ಅಭೀಷೇಚನ; ಅಭಿಷೇಚನ=ಕಿರೀಟವನ್ನು ತೊಡಿಸುವುದು; ಸೋಮ=ಚಂದ್ರ; ಭವತ್=ನಿನ್ನ; ಪ್ರಪಿತಾಮಹ=ಮುತ್ತಾತ/ಪಾಂಡು; ಸಾಮ=ಶಾಂತರೀತಿಯ ನಡೆನುಡಿ/ಹೊಂದಾಣಿಕೆಯ ನಡೆನುಡಿ; ಪಸರಿಸು=ಹೆಚ್ಚಾಗು/ವಿಸ್ತಾರವಾಗು; ಪರಿಧೌತ=ಪವಿತ್ರವಾದ/ಶುದ್ದವಾದ; ಪ್ರಸರ=ಹರಡುವುದು/ವೇಗ; ಬೆಳುಪು+ಆಯ್ತು; ಬೆಳುಪು=ಕಾಂತಿ/ಹೊಳಪು; ನಿಪ್ಪಸರ=ಜೋರು/ಆವೇಗ;

ಝಳಪಿಸು=ಬೀಸು; ಖಂಡೆ=ಕತ್ತಿ; ಸೊಂಪು=ಕಾಂತಿ; ಅಗ್ಗ=ಅತಿಶಯ; ಮಸಗು=ಹೊರಹೊಮ್ಮು; ಪರಬಲ=ಶತ್ರುಸೇನೆ; ವಿಸರ=ಗುಂಪು/ಹಿಂಡು; ದಳನ=ನಾಶಪಡಿಸುವುದು/ಸೀಳುವಿಕೆ; ಅಸಿತ+ಆಭಾಸಮ್; ಅಸಿತ=ಕಪ್ಪು; ಆಭಾಸ=ಹೊರತೋರಿಕೆ/ಹೊರಗಡೆ ಕಾಣುವುದು; ಮೌಳಿ=ಕಿರೀಟ; ಮಣಿ=ರತ್ನ; ಚರಣ=ಪಾದ; ನಖ+ಆಲಿ; ನಖ=ಉಗುರು; ಆಲಿ=ಸಾಲು/ಗುಂಪು; ಓಲಗಿಸು=ಸೇವೆಮಾಡು; ಸೆಣೆಸುವ ಮಹೀಶ್ವರ=ಪಾಂಡುವಿನೊಡನೆ ಕಾಳೆಗಕ್ಕೆ ಬಂದು ಹೋರಾಡುವ ರಾಜ; ಪ್ರಣಯ=ಪ್ರೀತಿ/ಅನುರಾಗ; ಅಮರೀ ಬಾಲೆಯರು=ದೇವಲೋಕದ ಕನ್ಯೆಯರು; ಪದನಖ=ಪಾದದ ಉಗುರು; ಏನ್+ಪೇಳುವೆನು; ಲಾಲಿಸು=ಆರಯಿಕೆ ಮಾಡು/ಅಕ್ಕರೆಯನ್ನು ತೋರಿಸು;

ಭರ=ಹೊಣೆ/ಜವಾಬ್ದಾರಿ; ಚರಿತ=ನಡವಳಿಕೆ/ಆಚಾರ; ಪರಿಪಾಟಿ=ಸಮಾನತೆ/ಸಾಲು/ರೀತಿ; ಸಂಬಾಳಿಸು=ಅನುಸರಿಸು; ವಿಸರ್ಗ=ನಾಶ/ಹಾನಿ; ಅಪಹರಿಸು=ಹೋಗಲಾಡಿಸು/ನಿವಾರಿಸು; ಕೃಪಣ+ಆಯ್ತು; ಕೃಪಣ=ಕೊರತೆ; ಕೃಪೆ=ಅನುಗ್ರಹ; ಅನವರತ=ಸದಾಕಾಲ; ಪಿಂಡ=ಉಂಡೆ/ಮುದ್ದೆ/ಒಂದು ಸಲ ನುಂಗುವಂತಹ ಆಹಾರದ ಉಂಡೆ; ಪಿಂಡಕ=ಸುವಾಸನೆಯ ಉಂಡೆ; ಅನುಪಮ=ಅತ್ಯುತ್ತಮವಾದ/ಹೋಲಿಕೆಗೆ ಮೀರಿದ; ಶತ=ನೂರು; ಗರ್ಭ+ಉತ್ಕರವನು; ಗರ್ಭ=ಬಸಿರು/ಬ್ರೂಣ; ಉತ್ಕರ=ರಾಶಿ/ಗುಂಪು; ಗರ್ಭೋತ್ಕರ=ಹೊಟ್ಟೆಯಲ್ಲಿ ಅನೇಕ ಬ್ರೂಣಗಳನ್ನು ಹೊಂದಿರುವುದು;

ಹೊಸಗನ್ನಡ ಗದ್ಯರೂಪ

ಕೇಳು ಜನಮೇಜಯ ರಾಜ, ಕುಂತಿಬೋಜ ರಾಜನ ಅರಮನೆಯಲ್ಲಿ ಕುಂತಿಯು ಬಹುಬಗೆಯ ಸಿರಿಸಂಪದಗಳಿಂದ ಕಂಗೊಳಿಸುತ್ತಿದ್ದಳು. ಮುಂಗುರುಳಿನ ಸೊಗಸಿನಿಂದ ಕೂಡಿರುವ ಕುಂತಿಯ ಕುಲದ ಹಿರಿಮೆ, ರೂಪದ ಚೆಲುವು ಮತ್ತು ಒಳ್ಳೆಯ ನಡೆನುಡಿಯನ್ನು ಗಾಂಗೇಯನು ಕೇಳಿದನು; “ಪಾಂಡುವಿಗೆ ಈ ಕುಂತಿಯು ಸರಿಯಾದ ಹೆಣ್ಣು” ಎಂದು ಗಾಂಗೇಯನು ನಿಶ್ಚಯಿಸಿಕೊಂಡು , ಒಲುಮೆಯಿಂದ ಕುಂತಿಯ ಸಾಕುತಂದೆಯಾದ ಕುಂತಿಬೋಜನನ್ನು ಹಸ್ತಿನಾವತಿಗೆ ಕರೆಸಿಕೊಂಡು ಸತ್ಕಾರವನ್ನು ಮಾಡಿ;

ಕುಂತಿ ಮತ್ತು ಪಾಂಡುವಿಗೆ ಬ್ರಾಹ್ಮಣರ ಆಶಯದಂತೆ ಅಗ್ನಿಸಾಕ್ಶಿಯಾಗಿ ಮಂಗಳಕರವಾದ ಮದುವೆಯನ್ನು ಅತ್ಯಂತ ಅದ್ದೂರಿಯಾಗಿ ಮಾಡಿದನು. ಅನಂತರ ಮದ್ರದೇಶದ ದೊರೆಯಾದ ಶಲ್ಯನ ತಂಗಿ ಮಾದ್ರಿಯನ್ನು ಮದುವೆಯ ಮತ್ತೊಂದು ಮುಹೂರ‍್ತದಲ್ಲಿ ಪಾಂಡುವಿಗೆ ಹೆಂಡತಿಯನ್ನಾಗಿ ಮಾಡಿದನು. ಈ ರೀತಿಯಲ್ಲಿ ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರು ಹೆಂಡತಿಯರಾದರು. ಪಾಂಡುವಿನ ಮದುವೆಯ ಕಾರ‍್ಯಗಳೆಲ್ಲವೂ ಮುಗಿದ ನಂತರ, ಬೀಶ್ಮನು ದ್ರುತರಾಶ್ಟ್ರ ಮತ್ತು ವಿದುರರು ತೆರೆದ ಮನದಿಂದ ನೀಡಿದ ಒಪ್ಪಿಗೆಯನ್ನು ಪಡೆದು;

ಒಳ್ಳೆಯ ಮುಹೂರ‍್ತದಲ್ಲಿ ಪಾಂಡುವಿಗೆ ಸಮಸ್ತ ರಾಜ್ಯದ ಜವಾಬ್ದಾರಿಯನ್ನು ನಿರ‍್ವಹಿಸುವ ಮಹಾಪಟ್ಟವನ್ನು ಕಿರೀಟವನ್ನು ತೊಡಿಸುವುದರ ಮೂಲಕ ಮಾಡಿದನು; ಪಟ್ಟಾಬಿಶೇಕದ ಮಹೋತ್ಸವ ಸಿರಿಸಂಪದಗಳಿಂದ ಕಂಗೊಳಿಸಿತು; ಜನಮೇಜಯ ರಾಜನೇ ಕೇಳು, “ಚಂದ್ರವಂಶದ ರಾಜರ ಪೀಳಿಗೆಯಲ್ಲಿ ನಿನ್ನ ಮುತ್ತಾತನಾದ ಪಾಂಡುವಿನಂತೆ ದರ‍್ಮದಲ್ಲಿ, ಕಾಳೆಗದಲ್ಲಿ, ಸತ್ಯದ ನಡೆನುಡಿಯಲ್ಲಿ, ಸಾಹಿತ್ಯದಲ್ಲಿ, ವಿನಯದಲ್ಲಿ, ಶಾಂತ ರೀತಿಯಲ್ಲಿ, ವೀರತನದಲ್ಲಿ, ಒಳ್ಳೆಯ ಜನಗಳನ್ನು ಒಲುಮೆ ನಲುಮೆಯಿಂದ ಕಾಣುವುದರಲ್ಲಿ, ನೀತಿಯಲ್ಲಿ, ಅಚಲವಾದ ನಿಲುವಿನಲ್ಲಿ ಬಾಳಿರುವ ರಾಜರನ್ನೇ ನಾನು ಕಾಣೆನು” ಎಂದು ವೈಶಂಪಾಯನ ಮುನಿಯು ಪಾಂಡುರಾಜನ ಸದ್ಗುಣಗಳನ್ನು ಹೊಗಳತೊಡಗಿದನು;

ದೊಡ್ಡದಾಗಿ ಬೆಳೆದ ಪಾಂಡುರಾಜನ ಒಳ್ಳೆಯ ಕೀರ‍್ತಿಯು ಎಲ್ಲ ಕಡೆಯಲ್ಲಿಯೂ ಹರಡಲು ಜಗತ್ತೆಲ್ಲವೂ ಕಾಂತಿಯಿಂದ ಕಂಗೊಳಿಸಿತು; ಪಾಂಡುರಾಜನು ಜೋರಾಗಿ ಬೀಸುತ್ತಿರುವ ಕತ್ತಿಯ ಏಟಿನಿಂದಾಗಿ ಅತಿಶಯವಾದ ಕೆಂಪು ಹೊರಹೊಮ್ಮಿತು; ಶತ್ರುಸೇನೆಯ ಪಡೆಯನ್ನು ನಾಶಪಡಿಸುವ ಪಾಂಡುವಿನ ಕೋಪೋದ್ರೇಕದ ವರ‍್ತನೆಯಿಂದ ಲೋಕವೆಲ್ಲವೂ ಕಪ್ಪಾಯಿತು;

ಪಾಂಡುವಿಗೆ ಮಿತ್ರರಾಗಿರುವ ರಾಜರು ತಲೆಬಾಗಿ ನಮಿಸುವಾಗ, ಅವರ ಕಿರೀಟದ ರತ್ನದ ಕಾಂತಿಯು ಪಾಂಡುವಿನ ಪಾದದ ಉಗುರುಗಳ ಮೇಲೆ ಕಂಗೊಳಿಸುವುದು; ಪಾಂಡುರಾಜನ ಎದುರಾಗಿ ಕಾಳೆಗ ಮಾಡಿದ ರಾಜನ ಕಿರೀಟದ ಕಾಂತಿಯು ದೇವಲೋಕದ ಕನ್ಯೆಯ ಪಾದದ ಉಗುರಿನ ಮೇಲೆ ಕಂಗೊಳಿಸಿತು. ಅಂದರೆ ಎದುರಾಳಿಯಾದ ರಾಜನು ಕಾಳೆಗದಲ್ಲಿ ಸಾವನ್ನಪ್ಪುತ್ತಿದ್ದನು; ಪಾಂಡುವಿನ ಕತ್ತಿಯ ಪರಾಕ್ರಮದ ಸಿರಿಯ ಸಡಗರವನ್ನು ಏನೆಂದು ಬಣ್ಣಿಸಲಿ; ಕುರುಡನಾಗಿದ್ದ ದ್ರುತರಾಶ್ಟ್ರನು ಎಲ್ಲರಿಂದಲೂ ಸೇವೆಯನ್ನು ಪಡೆಯುತ್ತಿದ್ದಾನೆ; ಪಾಂಡುರಾಜನಿಗೆ ಇನ್ನುಳಿದ ಸಮಸ್ತ ರಾಜ್ಯವನ್ನು ಕಾಪಾಡುವ ಹೊಣೆಗಾರಿಕೆಯಿದೆ; ಬೀಶ್ಮನು ರಾಜಕುಮಾರರಾದ ದ್ರುತರಾಶ್ಟ್ರ ಮತ್ತು ಪಾಂಡುವನ್ನು ಅಕ್ಕರೆಯಿಂದ ಕಾಣುತ್ತ, ಕುಲದ ನೀತಿಗೆ ಅನುಗುಣವಾಗಿ ಅವರನ್ನು ಕಾಪಾಡುವಂತಹ ಹೊಣೆಯನ್ನು ಹೊತ್ತಿದ್ದನು; ನಳ ನಹುಶ ಚಕ್ರವರ‍್ತಿಗಳ ನಡೆನುಡಿಗೆ ಸಮಾನವಾದ ಪರಂಪರೆಯನ್ನು ಇವರೆಲ್ಲರೂ ಅನುಸರಿಸಿದರು;

ಮದುವೆಯಾಗಿ ಬಹಳ ವರುಶಗಳಾಗಿದ್ದರೂ ಮಕ್ಕಳಾಗದ ಕಾರಣದಿಂದಾಗಿ ದ್ರುತರಾಶ್ಟ್ರನು ತನ್ನ ಮನದಲ್ಲಿ ಕೊರಗುತ್ತ ಈ ರೀತಿ ಚಿಂತಿಸತೊಡಗುತ್ತಾನೆ.

“ತಲೆತಲೆಮಾರುಗಳಿಂದ ಮುಂದುವರಿದುಕೊಂಡು ಬಂದಿದ್ದ ರಾಜವಂಶಕ್ಕೆ ಮಕ್ಕಳಿಲ್ಲದೆ ಹಾನಿಯುಂಟಾಗಿದ್ದಾಗ, ವೇದ ವ್ಯಾಸ ಮುನಿಯು ಬಂದು ರಾಜವಂಶ ಮುಂದುವರಿಯುವಂತೆ ಮಾಡಿದ್ದನು. ಈ ಹಿಂದೆ ವಿಚಿತ್ರವೀರ‍್ಯನು ಸಾವನ್ನಪ್ಪಿದಾಗ, ಅಂಬಿಕೆ ಮತ್ತು ಅಂಬಾಲಿಕೆಯರೊಡನೆ ವೇದವ್ಯಾಸ ಮುನಿಯು ದೇಹದ ನಂಟನ್ನು ಪಡೆದು ತನ್ನ ಮತ್ತು ಪಾಂಡುವಿನ ಹುಟ್ಟಿಗೆ ಕಾರಣನಾಗಿದ್ದನು. ಮಕ್ಕಳಿಲ್ಲದ ಕೊರತೆಯು ನನ್ನನ್ನು ಕಾಡುತ್ತಿದೆ. ವೇದವ್ಯಾಸ ಮುನಿಯು ನಮಗೆ ಅನುಗ್ರಹವನ್ನು ಮಾಡದಿರುವನೇ” ಎಂದು ಸದಾಕಾಲ ಚಿಂತೆಯ ಹೊರೆಯಲ್ಲಿ ಬಳಲುತ್ತಿದ್ದನು;

ಜನಮೇಜಯ ರಾಜನೇ ಕೇಳು; ಒಂದು ದಿನ ವೇದವ್ಯಾಸ ಮುನಿಯು ಆಗಮಿಸಿ ಹಸ್ತಿನಪುರವನ್ನು ಹೊಕ್ಕನು; ಅರಮನೆಗೆ ಬಂದು ಆನಂದದಿಂದ ಬೀಶ್ಮ ಮತ್ತು ಇನ್ನಿತರರಿಂದ ಸತ್ಕಾರವನ್ನು ಪಡೆದುಕೊಂಡು… ಮಕ್ಕಳಿಲ್ಲದೆ ಕೊರತೆಯಿಂದಾಗಿ ಸಿರಿಸಂಪದಕ್ಕೆ ಬರಲಿರುವ ಹಾನಿಯನ್ನು ವೇದವ್ಯಾಸನು ಅರಿತುಕೊಂಡು… ಈ ರೀತಿ ದ್ರುತರಾಶ್ಟ್ರನಿಗೆ ಹೇಳಿದನು. “ಬರತ ಕುಲದಲ್ಲಿ ಕೋಮಲವಾದ ಸುಕವೆಂಬ ಬಳ್ಳಿಗೆ ಮಕ್ಕಳಿಲ್ಲದ ಕೊರತೆಯು ಗರಗಸವಾಗಿದೆಯಲ್ಲವೇ… ಮಗನೇ ಬಾ… ದ್ರುತರಾಶ್ಟ್ರ… ಬಾ” ಎಂದು ಅವನೊಬ್ಬನನ್ನೇ ಕರೆದು; ದ್ರುತರಾಶ್ಟ್ರನನ್ನು ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡುಹೋಗಿ “ಈ ಮಂತ್ರದ ಉಂಡೆಯನ್ನು ತೆಗೆದುಕೊ. ಇದನ್ನು ನಿನ್ನ ಹೆಂಡತಿ ಗಾಂದಾರಿಗೆ ಕೊಡು. ನಿನ್ನ ಹೆಂಡತಿಯ ಹೊಟ್ಟೆಯಲ್ಲಿ ಅತ್ಯುತ್ತಮರಾದ ನೂರು ಮಕ್ಕಳು ಹುಟ್ಟುತ್ತಾರೆ” ಎಂದು ನುಡಿದು ಅನುಗ್ರಹಿಸಿದನು. ಅದನ್ನು ತಿಂದ ಗಾಂದಾರಿಯು ನೂರು ಮಕ್ಕಳ ಬಸುರಿಯಾದಳು; ಇತ್ತ ವೇದವ್ಯಾಸ ಮುನಿಯು ತನ್ನ ಆಶ್ರಮಕ್ಕೆ ಹಿಂತಿರುಗಿದನು; ರಾಜನ ಏಳಿಗೆಯು ದಿನಗಳು ಉರುಳಿದಂತೆಲ್ಲಾ ಇಮ್ಮಡಿಯಾಗತೊಡಗಿತು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *