ಕುಮಾರವ್ಯಾಸ ಬಾರತ ಓದು: ಆದಿಪರ್ವ – ಶಾಪಕ್ಕೆ ಗುರಿಯಾದ ಪಾಂಡುರಾಜ- ನೋಟ – 6

ಶಾಪಕ್ಕೆ ಗುರಿಯಾದ ಪಾಂಡುರಾಜ
( ಆದಿ ಪರ್ವ: ನಾಲ್ಕನೆಯ ಸಂಧಿ: ಪದ್ಯ:11 ರಿಂದ 24 )
ಪಾತ್ರಗಳು:
ಕಿಂದಮ ಮುನಿ ದಂಪತಿ: ಕಾಡಿನಲ್ಲಿ ವಾಸವಾಗಿದ್ದ ಕಿಂದಮ ಮತ್ತು ಅವನ ಹೆಂಡತಿ.
ಪಾಂಡುರಾಜ: ಹಸ್ತಿನಾವತಿಯನ್ನು ಆಳುತ್ತಿರುವ ರಾಜ. ಅಂಬಿಕೆ ಮತ್ತು ವೇದವ್ಯಾಸ ಮುನಿಯ ಮಗ.
ಬೀಶ್ಮ: ಶಂತನು ಮತ್ತು ಗಂಗಾದೇವಿಯ ಮಗ.
*** ಶಾಪಕ್ಕೆ ಗುರಿಯಾದ ಪಾಂಡುರಾಜ ***
ಅರಸ ಕೇಳೈ, ಪಾಂಡು ನೃಪಾಲನೋಲಗಕೆ ಬೇಂಟೆಗಾರರು ಮೃಗನಿಕಾಯದ ನೆರವಿಗಳ ನೆಲೆಗೊಳಿಸಿ ಕರೆಯ ಬಂದರು. ಮೃಗದಿಕ್ಕೆ ಹಕ್ಕೆಯ ಗಾಳಿಯನು ಕೊಂಬುಗಳನು ಕೇಳಿದನು. ಆಗಳೆ ರಾಜಸಭೆಯನು ರಾಯನು ಉಚಿತದಲಿ ಬೀಳು ಕೊಟ್ಟನು. ಬೋಳೆ ಕವಲಂಬುಗಳ… ಹದವಿಲು… ತಾಳಿಕೆಯ ಕುಪ್ಪಸದ ಬೇಂಟೆಯ ಮೇಳದಲಿ ಭೂಪಾಲ ನಿಜಾಲಯವ ಹೊರಹೊರಟನು. ನಿಮ್ಮನು ಏನನು ಎಂಬೆನು.“ಪಿಶಾಚೋನ್ನೃಪಾಲಕರ್” ಎಂಬವೋಲ್…ವ್ಯಸನ ಅನುಬಂಧದ ಬೇಗೆ… ಮಹೀಪತಿಯ ಕಾನನದೊಳು ಕೊಂಡೊಯ್ದುದು.
ಆಯತದ ಶರ ಸಂಧಾನ ಕಲಿತ ಶರಾಸನನು… ಮೃಗಹಾನಿಗಳ ಹೆಕ್ಕಳದೊಳು… ಬೇಂಟೆಯಲಿ ಓಲಾಡಿದನು. ಆ ಪಾಂಡುವಿಗೆ ನಿನ್ನಯ ತಂದೆಗಾದ ವಿಪತ್ತಿನ ಅಂದದಲಿ ಬಂದುದು.
ಒಂದು ಠಾವಿನಲಿ ಒಬ್ಬ ಮುನಿ ಮೃಗ ಮಿಥುನ ರೂಪಿನಲಿ ನಿಂದು ರಮಿಸುತ್ತಿರೆ… ಮೃಗದ್ವಯವೆಂದು ಅಂಬನು ಹೂಡಿದನು. ಇಬ್ಬರಿಗೆ ಒಂದು ಶರದಲಿ ಕೀಲಿಸಿದಡೆ ನರರಾಗಿ ಒರಲಿದರು.
ಮುನಿ: ಹಾ ಮಹಾದೇವಾ…
( ಎನುತ್ತೆ ಸನಾಮಮುನಿ… ತೆತ್ತಿಸಿದ ಬೆನ್ನಿನ ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ…)
ಮುನಿ: ಕಾಮಿನಿಯೆ ಕಡುನೊಂದೆಲಾ… ಮುಖ ತಾಮರಸವನು ತೋರು ತೋರು…
( ಎನುತ ಆ ಮುನೀಶ್ವರನು ನಿಜಸತಿಯ ಅಪ್ಪಿ ಮುಂಡಾಡಿದನು… ಕಾತರಿಪ ಮುನಿಮಿಥುನವನು ನಿನ್ನಾತ ಕಂಡನು. ಆತ ಬಿಲ್ಲ ಕೊಪ್ಪಿನಲಿ ಕದಪಿನ…ಮುಕುಟದ ಒಲವಿನ ಬೆರಳ…ನಾಸಿಕದ ಬೀತಸೊಂಪಿನ ಬಿರುದನಿಯ…ತಳಿತ ಬೆರಗಿನ ಪಾತಕದ… ಪರುಠವದ ಮುಖದ ಮಹೀತಳಾಧಿಪ ಸುಯ್ದು…)
ಪಾಂಡುರಾಜ: ಶಿವ ಶಿವಾ…
( ಎನುತ ನೊಂದನು.)
ಪಾಂಡುರಾಜ: ಇವರು ಎಂದು ನಾನು ಅರಿಯೆ… ಮೃಗವೆಂದು ಅರಿದೊಡೆ… ಇದು ಮತ್ತೊಂದು ಪರಿಯಾಯ್ತು… ಉರುವ ಮಾಣಿಕವೆಂದು ಕೊಂಡಡೆ… ಕೆಂಡವಾದುದಲ… ಸರವಿಯೇ ಹಾವಾದುದು… ಈ ಕೌತುಕವನು ಏನೆಂದು ಅರಿಯೆನು… ವಿಧಿ ಉರೆ ಮೈಮರೆಸಿ ಕೊಂದುದೆ.
( ಎನುತ ಆ ಸ್ಥಳಕೆ ಹರಿತಂದನು…ಸರಳ ಉಗಿದು ಬಿಸುಟನು…ಮಗ್ಗುಲ ಮಗುಚಿ… ನೆತ್ತರ ಹೊನಲಿನ್ ಈಚೆಗೆ ತೆಗೆದು… ಸಗ್ಗಳೆಯ ನೀರಿನಲಿ ತೊಳೆತೊಳೆದು ಒರಸಿದನು.)
ಪಾಂಡುರಾಜ: ಮಾನಿಸರು ಮೃಗವಹರೆ… ಅಕಟ, ಪಾಪಿಗಳಿಗೆ ಎತ್ತಣ ತಪವು… ಇದು ಎತ್ತಣ ಮೃಗ ವಿನೋದಕ್ರೀಡೆ… ಕೊಂದಿರಿ.
( ಎನುತ್ತ ಬಿಸುಸುಯ್ದ.)
ಮುನಿ: ಮತ್ತೆ ನಾವೇ ಪಾಪಿಗಳೆ… ನೀನು ಉತ್ತಮನಲಾ… ಸಾಕು ಇದೇತಕೆ…
( ಎನುತ್ತ… ಮರಳುವ ಕಂಗಳ… ಅಡಿಗಡಿಗೆ ಉಗಿವ ಮೇಲುಸುರ… ಎತ್ತಿ ಹಾಯ್ಕುವ ಕೊರಳ ಬಿಕ್ಕಳ… ಕೆತ್ತುವ ಅಧರದ ರೋಷದಲಿ… ಅವನಿಪನ ಮೇಲೆ ಹೊಗೆಸುತ್ತಿದ ಉರಿವಾತುಗಳ ಸೂಸಿದರು.)
ಮುನಿ: ಎಲವೊ ರಾಜಬ್ರುವನೆ… ತನ್ನಯ ಲಲನೆಯ ಒಡನಿರೆ ಕೊಂದೆ… ಹಲವು ಮಾತೇಕೆ… ನಿನ್ನಯ ಲಲನೆಯನು ನೀ ಕೂಡಿದಾಗಲೇ… ಮರಣ ನಿನಗಹುದು.
( ಎನುತ ಆ ಮುನಿ ಮಿಥುನವು ಹರಣವ ಕಳೆದುದು…ಅವನಿಪ ತಿಲಕ ಹಸ್ತಿನಾಪುರಕೆ ದುಮ್ಮಾನದಲಿ ಬಂದನು…ಆದ ಹದನನು ಭೀಷ್ಮ ಧೃತರಾಷ್ಟ್ರಾದಿಗಳಿಗೆ ಅರುಹಿದರೆ…)
ಭೀಷ್ಮ ಮತ್ತು ಇತರರು: ವೈದಿಕೋಕ್ತಿಯ ಮಂತ್ರದಲಿ… ಹಯ ಮೇಧಾದಿ ಯಜ್ಞದಲಿ… ಈ ಮಹಾ ಪಾತಕ ವಿಘಾತಕವ ಸಂಪಾದಿಸುವೆವು.
( ಎನೆ, ಶಿರವ ಬಿದುರಿ… ಮಹಾ ದುರಾಗ್ರಹ ಬುದ್ಧಿಯಲಿ ಅರಮನೆಯ ಹೊರವಂಟನು… ಸಕಲ ಭಂಡಾರವನು ಭೂಸುರ ನಿಕರದಲಿ ಚಲ್ಲಿದನು ಸುಜನ ಪ್ರಕರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ…)
ಪಾಂಡುರಾಜ: ಮುನಿಹತಿಯ ಪಾತಕದ ನೆತ್ತಿಯ ಸಬಳವು ಸಕಲ ಯೋಗಾವಳಿಯೊಳು ಆವುದೊ…
( ಎನುತ ಚಕಿತ ಚಿತ್ತನು ಕಾನನವ ಐದಿದನು…ಅರಸ ಕೇಳ್, ನಿಮ್ಮ ಅರಸ ಶತಶೃಂಗ ಶೈಲದ ವರತಪೋಧನರ ಆಶ್ರಮಕೆ ಬಂದನು… ಆ ಪರಮ ಮುನಿವರರ ವಂದಿಸಿದನು… ಜಾಬಾಲಿ, ಗಾರ್ಗಿ, ಅಂಗಿರಸ, ಗಾಲವ, ಗೌತಮಾದ್ಯರು ಅರ್ಘ್ಯಾಸನಾದಿಯಲಿ ಧರಣಿಪನ ಹರುಷದಲಿ ಸಂಭಾವಿಸಿದರು… ಈತನು ಅಮಲ ಅಷ್ಟಾಂಗಯೋಗ ವಿಧೂತ ಕಿಲ್ಬಿಷನಾಗಿ… ಬಳಿಕ ತೀವ್ರ ತೇಜದಲಿ ಮಹಾ ತಪಸ್ವಿಗಳೊಳಗೆ ಸಂದನು.ಕುಂತಿ ಮಾದ್ರಿಯರು ತಾವು ಆ ತಪೋನಿಷ್ಠಂಗೆ ಅತಿಭೀತಿ ಭಕ್ತಿಯೊಳು ಅಧಿಕ ಶುಶ್ರೂಷ ಅತಿಶಯದಲಿ ಮನವ ಹಿಡಿದರು.)
ಪದ ವಿಂಗಡಣೆ ಮತ್ತು ತಿರುಳು
ಅರಸ ಕೇಳೈ= ಜನಮೇಜಯ ರಾಜನೇ ಕೇಳು; ವೈಶಂಪಾಯನ ಮುನಿಯು ವ್ಯಾಸರಿಂದ ರಚಿತವಾದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಜನಮೇಜಯ ರಾಜನಿಗೆ ಹೇಳುತ್ತಿದ್ದಾನೆ; ನೃಪಾಲನ+ಓಲಗಕೆ; ಓಲಗ= ರಾಜ ಸಬೆ; ನಿಕಾಯ= ಗುಂಪು/ಸಮೂಹ; ನೆರವಿ= ದಟ್ಟಣೆ/ಹೆಚ್ಚಳ; ನೆಲೆ= ಜಾಗ;
ಮೃಗದ+ಇಕ್ಕೆ; ಇಕ್ಕೆ= ಇರವು/ವಾಸಿಸುವ ಜಾಗ; ಹಕ್ಕೆ= ವಿಶ್ರಮಿಸುವ ಜಾಗ/ಮಲಗುವ ಜಾಗ; ಕೊಂಬು= ಸಂಕೇತದ ಜಾಗ; ರಾಯನು+ಉಚಿತದಲಿ; ಉಚಿತದಲಿ= ಯೋಗ್ಯವಾದ ರೀತಿಯಲ್ಲಿ; ಬೋಳೆ= ಹರಿತವಾದ ಮೊನೆಯುಳ್ಳ ಬಾಣ; ಕವಲು+ಅಂಬು; ಅಂಬು= ಬಾಣ; ಕವಲಂಬು= ಅರ್ದ ಚಂದ್ರನ ಆಕಾರದಲ್ಲಿರುವ ಬಾಣ; ಹದವಿಲು= ಬಾಣ ಪ್ರಯೋಗಕ್ಕೆ ಸೂಕ್ತವಾದ ಬಿಲ್ಲು; ತಾಳಿಕೆ= ಬಾಳಿಕೆ ಬರುವುದು/ಹೆಚ್ಚು ಕಾಲ ಉಳಿಯುವುದು; ಕುಪ್ಪಸ= ಅಂಗ ಕವಚ/ಉಕ್ಕಿನ ನಿಲುವಂಗಿ; ಮೇಳ= ಪಡೆ;
ಪಿಶಾಚೋ ನೃಪಾಲಕರ್= ದೊರೆಗಳು ಪಿಶಾಚಿಗಳು; ವ್ಯಸನ= ಚಟ; ಅನುಬಂಧ= ಸಂಬಂದ; ಬೇಗೆ= ಉರಿ; ವ್ಯಸನ ಅನುಬಂಧದ ಬೇಗೆ= ‘ ಚಟದ ಸೆಳೆತ ’ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;
ಆಯತ= ಅತಿಶಯ; ಶರ= ಬಾಣ; ಸಂಧಾನ= ಬಾಣವನ್ನು ಹೂಡುವುದು; ಶರಾಸನ= ಬಿಲ್ಲು; ಹೆಕ್ಕಳ= ಹಿಗ್ಗು; ಠಾವು= ನೆಲೆ/ಜಾಗ; ಮೃಗ= ಪ್ರಾಣಿ; ಮಿಥುನ= ಜೋಡಿ; ರಮಿಸು= ಹೆಣ್ಣು ಗಂಡು ಕಾಮದ ನಂಟನ್ನು ಹೊಂದುವುದು; ದ್ವಯ= ಎರಡು; ಸನಾಮ= ಹೆಸರುವಾಸಿಯಾದ; ತೆತ್ತಿಸು= ನಾಟಿಕೊಳ್ಳು; ತೋಮರ= ತುದಿಯ ಮೊನೆಯಲ್ಲಿ ಅರ್ದ ಚಂದ್ರನ ಆಕಾರವುಳ್ಳ ಬಾಣ; ಮರುಮೊನೆ= ಮುಂದಿನ ತುದಿ; ಕಿಬ್ಬಸುರು= ಕೆಳಹೊಟ್ಟೆ ; ನಿಜ+ಅಂಗನೆ; ಕಾಮಿನಿ= ಹೆಂಗಸು/ಕಾಮಾತುರ ಉಳ್ಳವಳು; ತಾಮರಸ= ತಾವರೆಯ ಹೂವು; ಮುಂಡಾಡು= ಮುತ್ತಿಡು/ಚುಂಬಿಸು; ಕಾತರ= ಕಳವಳ/ಉದ್ವಿಗ್ನತೆ; ಮಿಥುನ= ಜೋಡಿ; ಕೊಪ್ಪು= ಬಿಲ್ಲಿನ ತುದಿ; ಕದಪು= ಕೆನ್ನೆ; ಒಲವು= ತೂಗಾಟ/ಹೊಯ್ದಾಟ; ಮುಕುಟ= ಕಿರೀಟ;
ಒಲವಿನ ಮಕುಟದ= “ ಹೀಗಾಗಬಾರದಿತ್ತು ” ಎನ್ನುವಂತೆ ಕಿರೀಟವನ್ನು ತೊಟ್ಟಿರುವ ತಲೆಯನ್ನು ಅತ್ತಿತ್ತ ಆಡಿಸುತ್ತಿರುವ; ಬೆರಳ ನಾಸಿಕದ= ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡಿರುವ; ಬೀತ= ಕುಂದು/ಕುಗ್ಗು; ಸೊಂಪು= ಶಕ್ತಿ/ತ್ರಾಣ; ಬೀತಸೊಂಪಿನ= ಮಯ್ ಮನದ ತ್ರಾಣ ಕುಗ್ಗಿದ; ಬಿರುದನಿಯ= ಕೋಪ ತಾಪ ಅಂಜಿಕೆಯಿಂದ ಹೊರಹೊಮ್ಮಿದ ದನಿಯ; ತಳಿತ= ಕೆದರು/ಹರಡು; ತಳಿತ ಬೆರಗಿನ= ಅಚ್ಚರಿಯಿಂದ ಕಂಗಾಲಾದ; ಪಾತಕ= ಪಾಪ ಮಾಡಿದ/ಕೆಟ್ಟ ಕಾರ್ಯ; ಪರುಠವ= ಆವರಿಸು/ಮುತ್ತು; ಉರು= ಉತ್ತಮವಾದ; ಮಾಣಿಕ= ನವರತ್ನಗಳಲ್ಲಿ ಒಂದು ಬಗೆಯ ರತ್ನದ ಹರಳು; ಸರವಿ= ಹಗ್ಗ;
ವಿಧಿ= ಮಾನವ ಬದುಕಿನಲ್ಲಿ ಯಾವ ಯಾವ ಬಗೆಯ ಒಳಿತು ಕೆಡುಕುಗಳು ಆಗಬೇಕೆಂಬುದನ್ನು ಮಗು ಹುಟ್ಟಿದಾಗಲೇ ನಿಶ್ಚಯಿಸಿರುವ ಒಂದು ಶಕ್ತಿಯಿದೆ ಎಂಬ ನಂಬಿಕೆಯು ಜನಮನದಲ್ಲಿದೆ. ಅದನ್ನು ವಿದಿ ಬರಹ/ಹಣೆಬರಹ ಎಂದು ಕರೆಯುತ್ತಾರೆ; ಉರೆ= ಅತಿಶಯವಾಗಿ/ಹೆಚ್ಚಾಗಿ; ಸರಳು= ಬಾಣ; ಉಗಿ= ಹೊರಕ್ಕೆ ಎಳೆದು; ಮಗ್ಗುಲ ಮಗುಚಿ= ನೆಲದ ಮೇಲೆ ಮೊಗ ಕೆಳಗಾಗಿ ಬಿದ್ದಿದ್ದವರನ್ನು ಅಂಗಾತ ಮಲಗಿಸಿ; ನೆತ್ತರು= ರಕ್ತ; ಹೊನಲು= ಪ್ರವಾಹ;
ಸಗ್ಗಳೆ=ನೀರು ತುಂಬಲು ಬಳಸುವ ತೊಗಲಿನ ಚೀಲ; ಮರಳು= ಹೊರಳು/ತಿರುಗು; ಉಗಿ= ಹೊರಬೀಳುವ; ಕೆತ್ತು= ನಡುಗು/ಕಂಪಿಸು; ಅಧರ= ತುಟಿ; ಉರಿ+ಮಾತು; ಉರಿ= ಬೆಂಕಿ; ಹೊಗೆಸುತ್ತಿದ ಉರಿವಾತುಗಳು= ಇದೊಂದು ರೂಪಕ. ತೀವ್ರವಾದ ಸಂಕಟದಿಂದ ನರಳುತ್ತ, ಕೋಪೋದ್ರೇಕದಿಂದ ಆಡುತ್ತಿರುವ ಶಾಪದ ನುಡಿಗಳು ; ಸೂಸು= ಚೆಲ್ಲು/ಎಸೆ; ರಾಜಬ್ರುವ= ರಾಜನೆಂದು ಹೇಳಿಕೊಳ್ಳುವವನು; ಲಲನೆ= ಹೆಂಡತಿ; ಹರಣ= ಜೀವ/ಪ್ರಾಣ; ಅವನಿಪ= ರಾಜ; ತಿಲಕ= ಉತ್ತಮನಾದ ವ್ಯಕ್ತಿ; ದುಮ್ಮಾನ= ದುಗುಡ/ ಮನಸ್ಸಿನ ತಳಮಳ;
ಹದನ= ತೊಂದರೆ/ ಕಶ್ಟ; ಅರುಹು= ಹೇಳು/ತಿಳಿಸು; ಹಯ= ಕುದುರೆ; ಮೇಧ+ಆದಿ; ಮೇಧ= ಯಾಗ; ಹಯಮೇಧ= ಕುದುರೆಯನ್ನು ಬಲಿಕೊಟ್ಟು ಮಾಡುವ ಯಾಗ; ಆದಿ= ಮೊದಲಾದ/ಮುಂತಾದ; ಪಾತಕ= ಪಾಪ; ವಿಘಾತಕ= ನಾಶ; ವೈದಿಕ+ಉಕ್ತಿ; ವೈದಿಕ= ವೇದಗಳಲ್ಲಿ ಹೇಳಿರುವ ಆಚರಣೆಗಳು; ಉಕ್ತಿ= ನುಡಿ/ಮಾತು; ಬಿದುರು= ಕೊಡಹು/ಜಾಡಿಸು; ದುರಾಗ್ರಹ= ಹಟಮಾರಿತನ; ಭಂಡಾರ= ಬೊಕ್ಕಸ/ಬೆಲೆಬಾಳುವ ಚಿನ್ನ ಬೆಳ್ಳಿ ಒಡವೆಗಳನ್ನು ಮತ್ತು ಹಣವನ್ನು ಸಂಗ್ರಹಿಸಿ ಇಡುವ ನೆಲೆ; ಭೂಸುರ= ಬೂಮಿಯ ಮೇಲಣ ದೇವತೆಗಳೆಂದು ಕರೆಸಿಕೊಳ್ಳವವನು/ ಬ್ರಾಹ್ಮಣ; ನಿಕರ= ಸಮೂಹ;
ಸುಜನ= ಒಳ್ಳೆಯ ವ್ಯಕ್ತಿಗಳು; ಪ್ರಕರ= ಸಮೂಹ/ಗುಂಪು; ಕೈಗೊಳಿಸು= ಒಪ್ಪಿಸು; ಹತಿ= ಕೊಲೆ ; ಸಬಳ= ಈಟಿ ; ಯೋಗಾವಳಿ= ಯೋಗಗಳ ಸಮೂಹ; ಅರ್ಘ್ಯ+ಆಸನ+ಆದಿಯಲಿ; ಅರ್ಘ್ಯ = ಬಂದ ನೆಂಟರಿಶ್ಟರಿಗೆ ಕಯ್ ಕಾಲುಗಳನ್ನು ತೊಳೆಯಲು ಕೊಡುವ ನೀರು; ಸಂಭಾವಿಸು= ಆದರಿಸು; ಆಸನ= ಕುಳಿತುಕೊಳ್ಳಲು ಬಳಸುವ ವಸ್ತು; ಅಮಲ= ಪರಿಶುದ್ದ/ನಿರ್ಮಲ; ಅಷ್ಟಾಂಗಯೋಗ= ಯಮ—ನಿಯಮ—ಆಸನ—ಪ್ರಾಣಾಯಾಮ—ಪ್ರತ್ಯಾಹಾರ—ದ್ಯಾನ—ದಾರಣ—ಸಮಾದಿ ಎಂಬ ಎಂಟು ಬಗೆಯ ಆಚರಣೆಗಳು; ವಿಧೂತ= ತೊರೆದ/ಬಿಟ್ಟ/ತ್ಯಜಿಸಿದ; ಕಿಲ್ಬಿಷನ್+ಆಗಿ; ಕಿಲ್ಬಿಷ= ಕೊಳೆ/ಕಳಂಕ/ಪಾಪ ; ಸಲ್ಲು= ಯೋಗ್ಯವಾಗಿರು/ತಕ್ಕುದಾಗಿರು ;
ಹೊಸಗನ್ನಡ ಗದ್ಯರೂಪ
“ ಜನಮೇಜಯ ರಾಜನೇ ಕೇಳು ” ಎಂದು ವೈಶಂಪಾಯನು ಮುನಿಯು ವ್ಯಾಸರಿಂದ ರಚಿತವಾದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಜನಮೇಜಯ ರಾಜನಿಗೆ ಹೇಳುತ್ತಿದ್ದಾನೆ; ಒಂದು ದಿನ ಕಾಡಿನಿಂದ ಬೇಟೆಗಾರರು ಕಾಡುಪ್ರಾಣಿಗಳ ಗುಂಪು ದಟ್ಟವಾಗಿ ನೆಲೆಸಿದ್ದ ಜಾಗವನ್ನು ಗುರುತುಹಾಕಿಕೊಂಡು ಪಾಂಡು ರಾಜನನ್ನು ಬೇಟೆಯಾಡುವುದಕ್ಕೆ ಕರೆಯಲೆಂದು ಒಡ್ಡೋಲಗಕ್ಕೆ ಬಂದರು; ಕಾಡು ಪ್ರಾಣಿಗಳು ನೆಲೆಸಿರುವ ಜಾಗ…ಅವು ಓಡಿಯಾಡುವ… ವಿಶ್ರಮಿಸುವ ಜಾಗ… ಬೀಸುವ ಗಾಳಿಯ ದಿಕ್ಕಿನಿಂದ ಅವುಗಳ ಸುಳಿವನ್ನು ತಿಳಿಯುವ ಬಗೆ ಮತ್ತು ಸಂಕೇತದ ನೆಲೆಯನ್ನು ಬೇಡರಿಂದ ರಾಜನು ಕೇಳಿ ತಿಳಿದುಕೊಂಡನು; ಆ ಕೂಡಲೇ ರಾಜನು ಓಲಗದಲ್ಲಿದ್ದವರನ್ನು ಸತ್ಕರಿಸಿ ಕಳುಹಿಸಿಕೊಟ್ಟನು;
ಪಾಂಡುರಾಜನು ಹರಿತವಾದ ಬಾಣ, ಕವಲಂಬು, ಗಟ್ಟಿಯಾದ ಬಿಲ್ಲನ್ನು ಹಿಡಿದುಕೊಂಡು, ಉಕ್ಕಿನ ಕವಚವನ್ನು ತೊಟ್ಟು ಬೇಟೆಯ ಪಡೆಯೊಡನೆ ತನ್ನ ಅರಮನೆಯಿಂದ ಕಾಡಿನತ್ತ ಹೊರಟನು. ಜನಮೇಜಯ ರಾಜನೇ, ರಾಜ ಪದವಿಯಲ್ಲಿರುವ ನಿಮ್ಮವರ ನಡೆನುಡಿಯನ್ನು ಏನೆಂದು ಹೇಳಲಿ; “ ದೊರೆಗಳು ಪಿಶಾಚಿಗಳಂತೆ ರಕ್ತದಾಹಿಗಳು ” ಎಂಬ ನುಡಿಯಂತೆ… ಪ್ರಾಣಿಗಳನ್ನು ಕೊಂದು ನೆತ್ತರನ್ನು ಹರಿಸುವ ರಾಜರ ಬೇಟೆಯ ಚಟದ ಸೆಳೆತವು ಪಾಂಡುರಾಜನನ್ನು ಕಾಡಿನೊಳಕ್ಕೆ ಕರೆದೊಯ್ದಿತು; ಅತಿಶಯವಾದ ರೀತಿಯಲ್ಲಿ ಬಾಣವನ್ನು ಪ್ರಯೋಗ ಮಾಡುವ ವಿದ್ಯೆಯಲ್ಲಿ ಪರಿಣತ ಬಿಲ್ಲುಗಾರನಾದ ಪಾಂಡುರಾಜನು ಪ್ರಾಣಿಗಳನ್ನು ಕೊಲ್ಲುತ್ತ… ಹಿಗ್ಗಿನಿಂದ ಬೇಟೆಯ ಕ್ರೀಡೆಯಲ್ಲಿ ನಲಿದಾಡಿದನು;
ಜನಮೇಜಯ ರಾಜನೇ, ಆ ಪಾಂಡುರಾಜನಿಗೆ ನಿನ್ನ ತಂದೆಯಾದ ಪರೀಕ್ಶಿತ ರಾಜನಿಗೆ ಬಂದ ಕೇಡಿನ ರೀತಿಯಲ್ಲಿಯೇ ಇದೀಗ ಒಂದು ಕೇಡು ತಟ್ಟಿತು;
( ಅಬಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಶಿತ. ಪರೀಕ್ಶಿತ ರಾಜನ ಮಗ ಜನಮೇಜಯ; ಪರೀಕ್ಶಿತ ರಾಜನು ಒಮ್ಮೆ ಸಮಿಕ ಎಂಬ ರಿಸಿಯ ಆಶ್ರಮಕ್ಕೆ ಹೋಗಿದ್ದಾಗ, ಜಪತಪದಲ್ಲಿ ತೊಡಗಿ ಕಣ್ಮುಚ್ಚಿ ಕುಳಿತಿದ್ದ ರಿಸಿಯು ಇವನನ್ನು ಗಮನಿಸದಿದ್ದಾಗ, ಕುಪಿತಗೊಂಡ ಪರೀಕ್ಶಿತನು ಹತ್ತಿರದಲ್ಲೇ ಸತ್ತು ಬಿದ್ದಿದ್ದ ಹಾವೊಂದನ್ನು ರಿಸಿಯ ಕೊರಳಿಗೆ ಹಾಕಿ ಹಿಂತಿರುಗುತ್ತಾನೆ. ಅನಂತರ ಆಶ್ರಮಕ್ಕೆ ಬಂದ ಸಮಿಕ ರಿಸಿಯ ಮಗ ಶ್ರುಂಗಿಯು ಕೋಪೋದ್ರೇಕದಿಂದ “ ತನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿರುವ ವ್ಯಕ್ತಿಯು ಹಾವು ಕಚ್ಚಿ ಸಾವನ್ನಪ್ಪಲಿ ” ಎಂದು ಶಪಿಸುತ್ತಾನೆ. ಅನಂತರದ ಕೆಲವು ದಿನಗಳಲ್ಲಿ ಪರೀಕ್ಶಿತನು ಹಾವು ಕಚ್ಚಿ ಸಾಯುತ್ತಾನೆ; ಪರೀಕ್ಶಿತನು ರಿಸಿಯೊಬ್ಬನಿಂದ ಶಾಪಕ್ಕೆ ಗುರಿಯಾದಂತೆಯೇ ಇದೀಗ ಪಾಂಡುರಾಜನು ರಿಸಿಯೊಬ್ಬನ ಶಾಪಕ್ಕೆ ಗುರಿಯಾಗಲಿದ್ದಾನೆ;)
ಕಾಡಿನ ಎಡೆಯೊಂದರಲ್ಲಿ ಒಬ್ಬ ಮುನಿಯು ಪ್ರಾಣಿಗಳ ರೂಪವನ್ನು ತೊಟ್ಟು, ತನ್ನ ಹೆಂಡತಿಯೊಡನೆ ಕಾಮದ ನಂಟನ್ನು ಪಡೆದು ಕ್ರೀಡಿಸುತ್ತಿರಲು…ಪಾಂಡುರಾಜನು ಆ ಮುನಿದಂಪತಿಯನ್ನು ಎರಡು ಪ್ರಾಣಿಗಳೆಂದು ತಿಳಿದು ಬಾಣದಿಂದ ಹೊಡೆದನು… ಮಯ್ ಮಯ್ ಬೆಸೆದುಕೊಂಡು ಕಾಮದ ನಂಟನ್ನು ಪಡೆದಿದ್ದ ಆ ಪ್ರಾಣಿಗಳ ಎರಡು ದೇಹಗಳಿಗೆ ಒಂದೇ ಬಾಣವು ನಾಟಿಕೊಂಡಾಗ… ಅವರು ಮಾನವ ರೂಪಕ್ಕೆ ಮರಳಿ ಬಂದು ಸಂಕಟದಿಂದ ಅರಚತೊಡಗಿದರು…
“ ಹಾ…ಮಹಾದೇವ ” ಎಂದು ಸಂಕಟದಿಂದ ಮುನಿಯು ನರಳುತ್ತ…ತನ್ನ ಬೆನ್ನನ್ನು ಹಾಯ್ದ ಅರ್ದ ಚಂದ್ರಾಕಾರದ ಬಾಣವು ತನ್ನ ಹೆಂಡತಿಯ ಕೆಳಹೊಟ್ಟೆಯಲ್ಲಿ ನಾಟಿಕೊಂಡಿರುವುದನ್ನು ಗಮನಿಸಿ…ತನ್ನ ಹೆಂಡತಿಯನ್ನು ಕುರಿತು ಈ ರೀತಿ ನುಡಿಯುತ್ತಾನೆ.
“ ಕಾಮಿನಿಯೆ, ತುಂಬಾ ನೋವಿಗೆ ಗುರಿಯಾಗಿ ನರಳುತ್ತಿರುವೆ…ನಿನ್ನ ಮೊಗದಾವರೆಯನ್ನು ನನ್ನತ್ತ ತಿರುಗಿಸು ” ಎಂದು ಗೋಳಿಡುತ್ತ, ಆ ಮುನಿಯ ತನ್ನ ಹೆಂಡತಿಯನ್ನು ತಬ್ಬಿಕೊಂಡು ಸಂತಯಿಸತೊಡಗಿದನು; ಬಾಣದ ಪೆಟ್ಟಿನಿಂದ ಕಂಗಾಲಾಗಿ ಉದ್ವಿಗ್ನಗೊಂಡಿರುವ ಮುನಿದಂಪತಿಯನ್ನು ನಿನ್ನ ವಂಶದ ರಾಜನಾದ ಪಾಂಡು ನೋಡಿದನು;
ಮುನಿ ದಂಪತಿಯ ದೇಹಗಳಲ್ಲಿ ನಾಟಿಕೊಂಡಿದ ಬಾಣವನ್ನು ಹೊರಕ್ಕೆಳೆದು ಬಿಸಾಕಿದನು…ನೆಲದ ಮೇಲೆ ಮೊಗ ಕೆಳಗಾಗಿ ಬಿದ್ದಿದ್ದವರನ್ನು ಅಂಗಾತ ಮಲಗಿಸಿ… ಹರಿಯುತ್ತಿರುವ ನೆತ್ತರಿನಿಂದ ಅವರನ್ನು ಪಕ್ಕಕ್ಕೆ ಹೊರಳಿಸಿ… ಸಗ್ಗಳೆಯ ನೀರಿನಿಂದ ಗಾಯಗೊಂಡ ಬಾಗಗಳನ್ನು ತೊಳೆತೊಳೆದು… ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿದನು. “ ಮಾನವರು ಎಲ್ಲಿಯಾದರೂ ಪ್ರಾಣಿಗಳ ರೂಪ ತಳೆಯುತ್ತಾರೆಯೆ… ಅಯ್ಯೋ… ಈ ಪಾಪಿಗಳ ಪಾಲಿಗೆ ಇದಾವ ಬಗೆಯ ತಪಸ್ಸು… ಇವರು ತಳೆದ ಪ್ರಾಣಿಗಳ ರೂಪವೇನು… ತಪಸ್ಸನ್ನು ಮಾಡಬೇಕಾದ ನೀವು ಪ್ರಾಣಿಗಳ ರೂಪದಲ್ಲಿ ಕಾಮಕೂಟವನ್ನು ನಡೆಸಿ ನನ್ನನ್ನು ಕೊಂದಿರಿ ” ಎಂದು ಪಾಂಡುರಾಜನು ಮುನಿ ದಂಪತಿಯ ಮೇಲೆ ಆಕ್ರೋಶವನ್ನು ಕಾರುತ್ತ, ಸಂಕಟದಿಂದ ನಿಟ್ಟುಸಿರನ್ನು ಬಿಟ್ಟನು;
“ ಹಾಗಾದರೆ ನಾವೇ ಪಾಪಿಗಳೆ… ನೀನು ಉತ್ತಮನೋ.. ಸಾಕು… ಇದೇತಕ್ಕೆ ಈ ರೀತಿ ನಮ್ಮ ಮೇಲೆಯೇ ತಪ್ಪನ್ನು ಹೊರಿಸುತ್ತಿರುವೆ ” ಎಂದು ಮುನಿಯು ಪಾಂಡುರಾಜನನ್ನು ತೆಗಳುತ್ತ… ಪದೇ ಪದೇ ಹೊರಬೀಳುತ್ತಿರುವ ಏದುಸಿರಿನ…ದೇಹವನ್ನೇ ಎತ್ತಿ ಎತ್ತಿ ಹಾಕುತ್ತಿರುವ ಕೊರಳ ಬಿಕ್ಕಳಿಕೆಯ… ನಡುಗುತ್ತಿರುವ ತುಟಿಗಳ ಮುನಿ ದಂಪತಿಯು ತೀವ್ರವಾದ ಸಂಕಟದಿಂದ ನರಳುತ್ತಿರಲು…ಮುನಿಯು ಕೋಪೋದ್ರೇಕದಿಂದ ರಾಜನ ಮೇಲೆ ತನ್ನ ಆಕ್ರೋಶವನ್ನು ಕಾರುತ್ತ, ಶಪಿಸಿದನು…
“ ಎಲವೋ, ರಾಜನೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೇ… ನನ್ನ ಹೆಂಡತಿಯೊಡನೆ ನಾನು ಕಾಮದ ನಂಟನ್ನು ಹೊಂದಿದ್ದ ಸಮಯದಲ್ಲಿ… ನೀನು ನಮ್ಮನ್ನು ಕೊಂದಿರುವೆ. ಹಲವು ಮಾತೇಕೆ…ನಿನ್ನ ಹೆಂಡತಿಯೊಡನೆ ನೀನು ಕಾಮದ ನಂಟನ್ನು ಪಡೆದಾಗಲೇ… ನಿನಗೂ ಮರಣವುಂಟಾಗುವುದು ” ಎಂದು ಶಾಪದ ನುಡಿಗಳನ್ನಾಡುತ್ತಿರುವಾಗಲೇ, ಆ ಮುನಿ ದಂಪತಿಯ ಜೀವ ಹೋಯಿತು.ಶಾಪಗ್ರಸ್ತನಾದ ಪಾಂಡುರಾಜನು ದುಗುಡದಿಂದ ಕಾಡಿನಿಂದ ಹಸ್ತಿನಾಪುರಕ್ಕೆ ಹಿಂತಿರುಗಿದನು…ಕಾಡಿನಲ್ಲಿ ನಡೆದ ಸಂಗತಿಯನ್ನು ಬೀಶ್ಮ , ದ್ರುತರಾಶ್ಟ್ರ ಮತ್ತು ಇತರರಿಗೆ ತಿಳಿಸಿದಾಗ…ಅವರು ಪಾಂಡುರಾಜನಿಗೆ ಶಾಪ ಪರಿಹಾರದ ದಾರಿಯನ್ನು ಸೂಚಿಸಿ, ಸಾಂತ್ವನವನ್ನು ಮಾಡಲು ಪ್ರಯತ್ನಿಸುತ್ತಾರೆ;
“ ವೇದಗಳಲ್ಲಿ ಹೇಳಿರುವ ಮಂತ್ರಗಳನ್ನು ಉಚ್ಚರಿಸುತ್ತ… ಅಶ್ವಮೇದ ಯಾಗ ಮತ್ತು ಇನ್ನಿತರ ಆಚರಣೆಗಳನ್ನು ಮಾಡುವುದರ ಮೂಲಕ ಮುನಿದಂಪತಿಯನ್ನು ಕೊಂದಿರುವ ಪಾಪದ ನಿವಾರಣೆಯನ್ನು ಮಾಡಿಕೊಳ್ಳಬಹುದು ” ಎಂದು ಅವರೆಲ್ಲರೂ ಹೇಳಲು… ಕುರುಕುಲದ ಹಿರಿಯರು ನೀಡಿದ ಸಲಹೆಗೆ ಪಾಂಡುರಾಜನು “ ತನಗೆ ಒಪ್ಪಿಗೆಯಿಲ್ಲ ” ಎಂದು ತಲೆ ಕೊಡಹಿ…ಬಹಳ ಹಟಮಾರಿತನದಿಂದ ಅರಮನೆಯನ್ನು ಬಿಟ್ಟು ಹೊರಟನು… ಹೊರಡುವ ಮುನ್ನ ಪಾಂಡುರಾಜನು ತನ್ನ ಪಾಲಿನ ಸಕಲ ಒಡವೆ ವಸ್ತುಗಳೆಲ್ಲವನ್ನೂ ಬ್ರಾಹ್ಮಣ ಸಮುದಾಯಕ್ಕೆ ನೀಡಿದನು… ಸಜ್ಜನರ ಗುಂಪನ್ನು ಕಾಪಾಡುವ ಜವಾಬ್ದಾರಿಯನ್ನು ಗಾಂಗೇಯ ದ್ರುತರಾಶ್ಟ್ರರಿಗೆ ಪಾಲಿಗೆ ಒಪ್ಪಿಸಿ…
“ ಮುನಿ ದಂಪತಿಯನ್ನು ಕೊಂದ ಪಾಪವೆಂಬುದು ನನ್ನ ನೆತ್ತಿಯ ಮೇಲಿರುವ ಈಟಿಯಂತಿದೆ. ಇದರಿಂದ ನಾನು ಪಾರಾಗುವ ಬಗೆಯು ಯೋಗಗಳಲ್ಲಿ ಯಾವುದಾದರೂ ಇದೆಯೋ ಇಲ್ಲವೋ ” ಎಂದು ಅಂಜಿಕೆಯಿಂದ ತತ್ತರಿಸುತ್ತಿರುವ ಮನದ ಪಾಂಡುರಾಜನು ಕಾಡನ್ನು ಹೊಕ್ಕನು; ಜನಮೇಜಯ ರಾಜನೇ ಕೇಳು. ಶತಶ್ರುಂಗ ಪರ್ವತದಲ್ಲಿರುವ ಉತ್ತಮರಾದ ತಪಸ್ವಿಗಳ ಆಶ್ರಮಕ್ಕೆ ನಿಮ್ಮ ಕುಲದ ರಾಜನಾದ ಪಾಂಡು ಬಂದನು…ಅಲ್ಲಿದ್ದ ಉತ್ತಮರಾದ ಮುನಿಗಳಿಗೆ ನಮಸ್ಕರಿಸಿದನು…
ಜಾಬಾಲಿ, ಗಾರ್ಗಿ, ಅಂಗಿರಸ, ಗಾಲವ, ಗವುತಮ ಮೊದಲಾದ ರಿಸಿಗಳು ಪಾಂಡುರಾಜ ಮತ್ತು ಅವನ ಹೆಂಡತಿಯರಿಗೆ ಅರ್ಗ್ಯ ಮತ್ತು ಆಸನವನ್ನಿತ್ತು… ಆನಂದದಿಂದ ಆದರಿಸಿದರು; ಪಾಂಡು ಪರಿಶುದ್ದವಾದ ಅಶ್ಟಾಂಗಯೋಗದ ಆಚರಣೆಗಳಿಂದ ಪಾಪವನ್ನು ಹೋಗಲಾಡಿಸಿಕೊಂಡು, ಕಾಲಕ್ರಮೇಣ ಒಳ್ಳೆಯ ತೇಜಸ್ಸಿನಿಂದ ಮಹಾತಪಸ್ವಿಗಳ ಸಮೂಹದಲ್ಲಿರಲು ತಕ್ಕವನಾದನು; ಕುಂತಿ ಮಾದ್ರಿಯರು ತಪಸ್ವಿಯಂತಿರುವ ಪಾಂಡುವಿಗೆ ಅತಿಶಯವಾದ ರೀತಿಯಲ್ಲಿ ಅಂಜಿಕೆ ಮತ್ತು ಬಕ್ತಿಯಿಂದ ಹೆಚ್ಚಿನ ಉಪಚಾರವನ್ನು ಮಾಡುತ್ತ, ಪಾಂಡುವಿನ ಮನಸ್ಸಿಗೆ ಮೆಚ್ಚುಗೆಯಾದರು;
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು