ಯಶಸ್ಸಿನ ಗುಟ್ಟು – ಸ್ತಿರತೆ
ಯಶಸ್ವಿಗೆ ಕಾರಣವಾಗುವ ಅಂಶಗಳು ಯಾವುದು? ಪ್ರತಿಬೆ, ಸಂಪರ್ಕ, ಅದ್ರುಶ್ಟ ಹೀಗೆ ಹಲವಾರು ಕಾರಣಗಳು ನಮಗೆ ಹೊಳೆಯಬಹುದು. ಆದರೆ ಜೀವನದ ಯಶಸ್ವಿಗೆ ಕಾರಣ ಇದ್ಯಾವುದು ಅಲ್ಲ!. ಯಶಸ್ವಿಗೆ ನಿಜವಾದ ಕಾರಣ ನಿರಂತರವಾದ ಸ್ತಿರತೆ. ಅದು 1988ರ ಸಮಯ. ಎರಡು ಶಾಲಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯದ ಆಟ. ಸೇಂಟ್ ಜೇವಿಯರ್ಸ್ ತಂಡಗಳ ನಡುವೆ ಸ್ಪರ್ದೆ. ಆ ಕ್ರಿಕೆಟ್ ಸ್ಪರ್ದೆಯ ಹೆಸರು ಹ್ಯಾರಿಸ್ ಶೀಲ್ಡ್ ಪಂದ್ಯಾವಳಿ. ಅದೊಂದು ಸಾಮಾನ್ಯ ಕ್ರಿಕೆಟ್ ಪಂದ್ಯದಾಟ. ಆದರೆ ಶಾರದಾಶ್ರಮ ವಿದ್ಯಾ ಮಂದಿರದ 13 ವರುಶದ ಇಬ್ಬರು ಹುಡುಗರು ಅಂದು ಅದ್ಬುತವನ್ನು ಸ್ರಶ್ಟಿಸಿಬಿಡುತ್ತಾರೆ. 664 ರನ್ಗಳ ಅಜೇಯ ಪಾಲುದಾರಿಕೆ. ನೋಡು ನೋಡುತ್ತಿದ್ದಂತೆ ವಿಶ್ವ ದಾಕಲೆ ಸ್ರುಶ್ಟಿಯಾಗುತ್ತದೆ. ಇಬ್ಬರಲ್ಲೂ ಅಗಾದವಾದ ಪ್ರತಿಬೆಯಿತ್ತು. ಅದ್ರುಶ್ಟ ಕೂಡ ಜೊತೆಯಾಗಿತ್ತು. ಬಾರತದ ಕ್ರಿಕೆಟ್ ಆಯ್ಕೆಗಾರರ ಗಮನ ಸೆಳೆಯುವುದರಲ್ಲಿ ಯಶಸ್ವಿ ಯಾಗುತ್ತಾರೆ. ಇಬ್ಬರು ಆಗರ್ಬ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಮದ್ಯಮ ವರ್ಗದ ಕುಟುಂಬದ ಹಿನ್ನಲೆ. ಆ ಇಬ್ಬರು ಹುಡುಗರಲ್ಲಿ ಒಬ್ಬ ಪ್ರತಿಬೆಯಲ್ಲಿ ಮತ್ತೊಬ್ಬನಿಗಿಂತ ಒಂದು ಕೈ ಮೇಲು . ಆದರೆ ಆ ಹುಡುಗನಲ್ಲಿ ಶಿಸ್ತು ಇರಲಿಲ್ಲ. ನಿರಂತರ ಪ್ರಯತ್ನದ ಶಿಸ್ತು ಇರಲಿಲ್ಲ. ಕಡೆಗೆ ಒಂದು ದಿನ ಕಣ್ಣೀರಿಡುತ್ತ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳುತ್ತಾನೆ. ಮತ್ತೊಬ್ಬ ನಿರಂತರ ಅಬ್ಯಾಸ ನಡೆಸುತ್ತಾನೆ. ದಶಕಗಳ ಕಾಲ ಸ್ತಿರತೆ ಕಾಪಾಡಿಕೊಳ್ಳುತಾನೆ. ಕ್ರಿಕೆಟ್ ಜಗತ್ತಿನ ದೇವರು ಅಂತ ಹೆಸರು ಪಡೆಯುತ್ತಾನೆ. ಆತನ ಹೆಸರನ್ನು ಹೇಳುವ ಅಗತ್ಯ ಇಲ್ಲ. ಪುಟ್ಟ ಮಕ್ಕಳಿಗೂ ಕೂಡ ಗೊತ್ತು ಕ್ರಿಕೆಟ್ ಜಗತ್ತಿನ ದೇವರು ಯಾರು ಅಂತ . ಹೌದು ಆತ ಸಚಿನ್ ರಮೇಶ್ ತೆಂಡೂಲ್ಕರ್. ಆತನ ಸಹಪಾಟಿಯ ಹೆಸರು ವಿನೋದ್ ಕಾಂಬ್ಳಿ. ಹಾಗೆ ನೋಡಿದ್ರೆ ವಿನೋದ್ ಸಚಿನ್ ಗಿಂತ ಹೆಚ್ಚು ಪ್ರತಿಬಾವಂತ. ಆದರೆ ಆತನಲ್ಲಿ ಶಿಸ್ತು ಇರಲಿಲ್ಲ, ಸ್ತಿರತೆ ಇರಲಿಲ್ಲ. ಜೀವನದಲ್ಲಿ ಸೋತು ಹೋದ. ಆತನ ಪ್ರತಿಬೆ ಅವನಿಗೆ ಅವಕಾಶವನ್ನು ಒದಗಿಸಿಕೊಟ್ಟಿತು. ಆದರೆ ಉಳಿಸಿಕೊಳ್ಳುವ ಸಾಮರ್ತ್ಯ ಆತನಲ್ಲಿರಲಿಲ್ಲ.
ವಿನೋದ್ ಕಾಂಬ್ಳಿಯಂತಹ ಎಶ್ಟೋ ಜನ ಈ ಜಗತ್ತಿನಲ್ಲಿ ಇದ್ದಾರೆ ! ರಾತ್ರೋ ರಾತ್ರಿ ತಮ್ಮ ಪ್ರತಿಬೆಯಿಂದ ಮನೆ ಮಾತಾಗಿಬಿಡುತ್ತಾರೆ. ಮತ್ತೆ ಬಂದಶ್ಟೇ ವೇಗವಾಗಿ ಮರೆಯಾಗಿಬಿಡುತ್ತಾರೆ.
ಸ್ತಿರತೆ, ನಿರಂತರ ಪ್ರಯತ್ನ ಆಕಾಶದೆತ್ತರಕ್ಕೆ ಏರಿಸಿ ಬಿಡುತ್ತದೆ ಅನ್ನೋದಕ್ಕೆ ಒಂದು ಒಳ್ಳೆಯ ಉದಾಹರಣೆ ಶಾರುಕ್ ಕಾನ್. ಇಂದು ಶಾರುಕ್ ಕಾನ್ ವಿಶ್ವದ ಅತ್ಯಂತ ಶ್ರೀಮಂತ ನಟ. ಅವರ ಆಸ್ತಿಯ ಡಾಲರ್ ಅಂದಾಜು ನಿವ್ವಳ ಮೌಲ್ಯ ಸುಮಾರು 1.4 ಬಿಲಿಯನ್ ಡಾಲರುಗಳು. 90 ರ ದಶಕದ ಜನಪ್ರಿಯ ನಟ ಶಾರುಕ್ ಕಾನ್. 2025 ರ ಜನಪ್ರಿಯ ನಟ ಮತ್ತದೇ ಶಾರುಕ್ ಕಾನ್. ಒಬ್ಬ ಡೆಲ್ಲಿಯ ಮದ್ಯಮ ವರ್ಗದ ಹುಡುಗ ಇಶ್ಟೊಂದು ಎತ್ತರಕ್ಕೆ ರಾತ್ರೋ ರಾತ್ರಿ ಬೆಳೆದದ್ದಲ್ಲ. ಆತನಲ್ಲಿ ಪ್ರತಿಬೆ ಇತ್ತು ನಿಜ. ಆದರೆ ಆತನ ನಿರಂತರ ಶ್ರಮ, ಕಾಯ್ದುಕೊಂಡ ಸ್ತಿರತೆ ಈ ಯಶಸ್ಸನ್ನು ಆತನಿಗೆ ದೊರಕಿಸಿಕೊಟ್ಟಿದೆ.
ಬಹುತೇಕರಿಗೆ ಸ್ತಿರತೆ ಅನ್ನೋದು ಒಂದು ನೀರಸವಾದ, ಬೇಸರ ತರಿಸುವ ಕ್ರಿಯೆ. ಆದರೆ ಸ್ತಿರತೆ ಇಲ್ಲದೆ ಯಶಸ್ಸು ದೊರಕುವುದಿಲ್ಲ. ಎಶ್ಟೋ ಜನರಿಗೆ ಎಲ್ಲವೂ ಸುಲಬದಲ್ಲಿ ದೊರಕಬೇಕು. ಒಮ್ಮೆಲೇ ಎಲ್ಲವೂ ಆಗಬೇಕು ಅನ್ನುವ ಆಸೆ. ಆದರೆ ಗೆಳೆಯರೇ ಯಶಸ್ವು ಸುಲಬದಲ್ಲಿ ದೊರಕುವುದಿಲ್ಲ. ಒಂದು ವೇಳೆ ಸುಲಬದಲ್ಲಿ ದೊರೆತರು ಅದರ ಆಯಸ್ಸು ಅಲ್ಪ.
ಕೆಲವರ ಮನಸಿನಲ್ಲಿ ತಾವು ತೆಳ್ಳಗಾಗಬೇಕು ಎಂದಿರುತ್ತದೆ. ಆದರೆ ನಿರಂತರ ಶ್ರಮ ಪಡುವುದು ಅವರಿಗೆ ಬೇಕಾಗಿರುವುದಿಲ್ಲ. ಹಾಗಾಗಿ ಯೌಟ್ಯೂಬ್ ನಲ್ಲಿ ಬೇಗನೆ ತೆಳ್ಳಗಾಗುವ ಬಗೆ ಹೇಗೆ ಅನ್ನುವ ವಿಡಿಯೋ ಹುಡುಕತೊಡಗುತಾರೆ. ದಿನ ಒಂದು ನಾಲ್ಕು ಕಿಲೋಮೀಟರು ನೆಡೆಯಬೇಕೆಂದುಕೊಳ್ಳುತ್ತಾರೆ. ಎರಡು ದಿನ ನಡೆಯುತ್ತಾರೆ ಕೂಡ. ಆಮೇಲೆ ಬರುತ್ತೆ ಆದಿತ್ಯವಾರ. ಇವತ್ತು ರಜೆ, ಇನ್ನು ಸೋಮವಾರದಿಂದ ನಡೆಯುತ್ತೇನೆ ಅಂದುಕೊಳ್ಳುತ್ತಾರೆ. ಸೋಮವಾರ ಕಚೇರಿಯ ಕೆಲಸ ತುಂಬಾ ಇತ್ತು ಸುಸ್ತಾಗಿದೆ; ಮಂಗಳವಾರದಿಂದ ನಡೆಯುತ್ತೇನೆಂದು ಕೊಳ್ಳುತ್ತಾರೆ. ಇಲ್ಲಿ ಸ್ತಿರತೆ ಇಲ್ಲ. ಹಾಗಾಗಿ ಪಲಿತಾಂಶ ಕೂಡ ಇಲ್ಲ. ನಾನು ಇನ್ನು ಮೇಲೆ ಸಿಹಿ ತಿನ್ನಲ್ಲ ಅಂತ ನಿರ್ದಾರ ತೆಗೆದುಕೊಳ್ಳುತ್ತಾರೆ. ಎರಡು ದಿನ ತಿನ್ನಲ್ಲ. ಆಮೇಲೆ ಮನೆಗೆ ಬರುವ ನೆಂಟರು ಮೈಸೂರ್ ಪಾಕ್ ತೆಗೆದುಕೊಂಡು ಬರುತ್ತಾರೆ. ಇವತ್ತು ಒಂದು ದಿನ ತಿನ್ನುತ್ತೇನೆ. ನಾಳೆಯಿಂದ ಮುಟ್ಟುವುದಿಲ್ಲ ಅಂದುಕೊಳ್ಳುತ್ತಾರೆ. ಆ ನಾಳೆ ಎಂದಿಗೂ ಬರುವುದೇ ಇಲ್ಲ. ದಿನ ನಾವೆಲ್ಲ ಹಲ್ಲುಜ್ಜುತ್ತೇವೆ. ನಿಜಕ್ಕೂ ಇದೊಂದು ಬೇಸರ ತರಿಸುವ ಕ್ರಿಯೆ. ಆದರೆ ಒಂದು ದಿನ ನಾವು ಹಲ್ಲುಜ್ಜದಿದ್ದರೆ ಪಕ್ಕದಲ್ಲಿ ನಿಂತವರ ಬಳಿ ಮಾತನಾಡಲು ಸಾದ್ಯವಾಗುವುದಿಲ್ಲ. ಹಲ್ಲುಜ್ಜುವುದು ಜೀವನದ ಒಂದು ನಿರಂತರ ಕ್ರಿಯೆ. ಯಶಸ್ವಿಗೆ ಬೇಕಾಗುವ ತಯಾರಿ ಕೂಡ ಹಾಗೇನೇ ! ಅದೊಂದು ನಿರಂತರವಾದ ಕ್ರಿಯೆ. ಅದರಲ್ಲಿ ಯಾವುದೇ ರಾಜಿ ಇಲ್ಲ! ಒಬ್ಬ ವಿದ್ಯಾರ್ತಿಗೆ ಪರೀಕ್ಶೆಯಲ್ಲಿ ಉತ್ತಮ ಅಂಕ ಪಡೆಯೋದು ಯಶಸ್ವಿನ ಮಾನದಂಡವಾದ್ರೆ, ಅದಕ್ಕಾಗಿ ಆ ವಿದ್ಯಾರ್ತಿ ಮಾಡಬೇಕಾಗಿರೋದು ನಿರಂತರವಾದ ಓದು. ಯಾವುದೇ ರಾಜಿ ಇಲ್ಲದ ಒಂದು ವೇಳಾಪಟ್ಟಿ! ಯಾವುದೇ ಕಾರಣಕ್ಕೂ ಆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಹಾಗಿಲ್ಲ. ನಿರಂತರವಾದ, ಸ್ತಿರವಾದ ಓದು. ಈ ಕ್ರಿಯೆ ನಿಜಕ್ಕೂ ಬೇಸರತರಿಸುವ ಕ್ರಿಯೆ. ಆದರೆ ಪಲಿತಾಂಶ ಮಾತ್ರ ನಿಸ್ಸಂದೇಹವಾಗಿ ಅದ್ಬುತ.
ಅನೇಕರಿಗೆ ವ್ಯಾಪಾರ ವಹಿವಾಟು ಮಾಡಬೇಕೆಂಬ ಆಸೆ ಇರುತ್ತೆ. ಆದರೆ ಮಾಡೋದಿಲ್ಲ. ಅವರ ಬಳಿ ಮಾತನಾಡಿಸಿ ನೋಡಿ. ಇಶ್ಟೊಂದು ಅನುಬವ ಇದೆ. ನಿಮ್ಮದೇ ಸ್ವಂತ ವಹಿವಾಟು ನಡೆಸಬಹುದಲ್ವಾ. ಕನಸೇನೋ ಇದೆ ಆದರೆ ದುಡ್ಡಿಲ್ಲ ಅನ್ನುವ ಉತ್ತರ ದೊರಕುತ್ತೆ. ಒಂದು ಐದು ವರ್ಶ ಬಿಟ್ಟು ಅವರ ಬಳಿ ಮತ್ತೆ ಕೇಳಿ, ಅದೇ ಸಿದ್ದ ಉತ್ತರ ದೊರಕುತ್ತೆ. ಕನಸು ಮತ್ತು ಬೇರೆಯವರ ಪ್ರೇರಣೆ ಯಶಸ್ವಿಗೆ ಮಾನದಂಡವಲ್ಲ. ಅದು ಒಂದು ಸಿದ್ದತೆಗೆ ಮುನ್ನುಡಿ ಮಾತ್ರ. ಕನಸಿನ ನನಸು ಸ್ತಿರವಾದ ಪ್ರಯತ್ನದಿಂದ ಮಾತ್ರ ಸಾದ್ಯ. ವಹಿವಾಟು ನಡೆಸಲು ಹಣ ಇಲ್ಲ ಅನ್ನುವವರ ಬಳಿ ನನ್ನ ಪ್ರಶ್ನೆ. ವಹಿವಾಟು ನಡೆಸಲು ಬೇಕಾದ ಬಂಡವಾಳಕ್ಕಾಗಿ ನೀವೇನು ಪ್ರಯತ್ನ ಪಟ್ಟಿದ್ದೀರಿ ? ಈ ಪ್ರಶ್ನೆಗೆ ಬಹುತೇಕರ ಉತ್ತರ ಮೌನ. ನಮ್ಮ ಒಂದು ಕನಸಿದೆ, ಒಂದು ವ್ಯಾಪಾರ ವಹಿವಾಟು ನಡೆಸಬೇಕೆಂದು. ಒಂದು ಮಾತು ನೆನಪಿಡಿ. ವಹಿವಾಟು ನಡೆಸಲು ಬಂಡವಾಳ ಬೇಕು ಅನ್ನೋದು ನಿಜ. ಆದರೆ ತಮ್ಮ ಅಪ್ಪನ ಬಳಿ ಹಣ ಹೂಡು ಅಂತ ಕೇಳಲು, ಎಲ್ಲರೂ ಕುಬೇರರ ಮಕ್ಕಳಾಗಿರುವುದಿಲ್ಲ. ನನಗೆ ವಹಿವಾಟು ನಡೆಸುವ ಕನಸಿದ್ದ್ರೆ, ಅದಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ನಿರಂತರ ಪ್ರಯತ್ನ ನಮ್ಮ ಕಡೆಯಿಂದ ನಡೆಯಬೇಕು. ಮೊದಲಿಗೆ ಒಂದು ವ್ಯಾಪಾರ ಯೋಜನೆಯ ರೂಪುರೇಶೆ. ಅದಕ್ಕೆ ಬೇಕಾಗುವ ಬಂಡವಾಳ, ಸ್ತಳ ಗುರುತಿಸುವಿಕೆ, ನಿರಂತರವಾದ ಕಲಿಕೆ! ಮತ್ತು ಆ ಯೋಜನೆಗಾಗಿ ಹಣದ ಉಳಿತಾಯ. ಆಮೇಲೆ ಸ್ಪಶ್ಟವಾದ, ದ್ರುಡವಾದ ಯೋಜನೆಯ ರೂಪುರೇಶೆಗಳೊಂದಿಗೆ, ಹಣಕಾಸು ಸಂಸ್ತೆಗಳೊಂದಿಗೆ ಅನುಸಂದಾನ. ಸ್ನೇಹಿತರ ಸಹಕಾರ, ಕುಟುಂಬದವರ ಸಹಾಯಕ್ಕಾಗಿ ಪ್ರಯತ್ನ ಹೀಗೆ ಶುರು ಆಗುತ್ತದೆ ವಹಿವಾಟು. ನಿರಂತರ ರೂಪುರೇಶೆಗಳನ್ನು ಯೋಜಿಸುವ ಬದಲು ನನ್ನ ಬಳಿ ದುಡ್ಡಿಲ್ಲ ಅಂತ ಸುಮ್ಮನೆ ಕೂತರೆ ಏನು ಕೂಡ ಸಾದಿಸಲು ಸಾದ್ಯವಿಲ್ಲ.
ಅರವಿಂದ್ ಶ್ರೀನಿವಾಸ್ ಹೆಸರು ಕೇಳಿದ್ದೀರಾ ? ಇಂದಿನ AI ಯುಗದಲ್ಲಿ ಈ ಹುಡುಗ ಒಂದು ಕ್ರಾಂತಿಯನ್ನೇ ತಂದು ಬಿಟ್ಟಿದ್ದಾರೆ. ಐಐಟಿ ಮದ್ರಾಸ್ನಿಂದ ಪದವಿ ಪಡೆದು ದೂರದ ಅಮೇರಿಕಾದಲ್ಲಿ ಕೇವಲ ತನ್ನ 31 ವರ್ಶ ವಯಸ್ಸಿನಲ್ಲಿ ಪರ್ಪ್ಲೆಕ್ಸಿಟಿ( Perplexity ) ಸಂಸ್ತೆಯನ್ನು ತನ್ನ ಮತ್ತಿಬ್ಬರು ಗೆಳೆಯರೊಂದಿಗೆ ಜೊತೆಗೂಡಿ ಸ್ತಾಪಿಸಿದ ಅರವಿಂದ್ ಈಗ ಬಾರತದ ಅತ್ಯಂತ ಕಿರಿಯ ಕೋಟ್ಯಾದಿಪತಿ. 21,190 ಕೋಟಿಗಳ ನಿವ್ವಳ ಮೌಲ್ಯದೊಂದಿಗೆ, ಅವರು AI ನಲ್ಲಿ ಏನೇನು ಮಾಡಲು ಸಾದ್ಯ ಎಂಬುದನ್ನು ಮರು ವ್ಯಾಕ್ಯಾನಿಸುತ್ತಿದ್ದಾರೆ. ಇಂದು ಅವರು ಗೂಗಲ್ ಸಂಸ್ತೆಗೆ ಸವಾಲೊಡ್ಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಆದರೆ ಅವರು ಸಂಸ್ತೆ ಸ್ತಾಪಿಸುವ ನಿರ್ದಾರ ಕೈಗೊಂಡಾಗ ಅವರ ಬಳಿ ದುಡ್ಡಿರಲಿಲ್ಲ. ಇದ್ದದ್ದು ನಿರಂತರ ದುಡಿಮೆಯ ಶ್ರಮ. ಅವರ ಯೋಜನೆ, ಸ್ತಿರತೆ, ಆತ್ಮವಿಶ್ವಾಸ ದೊಡ್ಡ ದೊಡ್ಡ ಕಂಪನಿಗಳ ಗಮನ ಸೆಳೆಯಿತು. ತನ್ನ ಯೋಜನೆಗಳೊಂದಿಗೆ ಅವರು ಆ ದೊಡ್ಡ ಕಂಪನಿಗಳ ಕದ ತಟ್ಟಿದರು. ಅವರ ಸ್ತಿರ ಪ್ರಯತ್ನಕ್ಕೆ ಮನಸೋತ ಕಂಪನಿಗಳ ಮಾಲೀಕರು ಅವರ ಕಂಪನಿಯಲ್ಲಿ ಬಂಡವಾಳ ಹೂಡಿದರು.
ನನ್ನದೇ ಉದಾಹರಣೆ ಕೊಡೋದಾದ್ರೆ, ಪಾಲುದಾರಿಕೆಯಲ್ಲಿ ದುಬೈ ಯಲ್ಲಿ ವ್ಯಾಪಾರ ಶುರು ಮಾಡಿದಾಗ ನಮ್ಮಲ್ಲಿ ಬಂಡವಾಳದ ಕೊರತೆ ಇತ್ತು. ಆದರೆ ಕುಟುಂಬದವರ, ಸ್ನೇಹಿತರ ಬೆಂಬಲದಿಂದ ಸಂಸ್ತೆ ಕಟ್ಟಲು ಸಾದ್ಯವಾಯಿತು. ಆದರೆ ನಮ್ಮ ನಿರಂತರ ಸ್ತಿರವಾದ ಪ್ರಯತ್ನ ಬಹು ಬೇಗನೆ , ಪೂರೈಕೆದಾರರ ಗಮನ ಸೆಳೆಯಿತು. ಕಳೆದ ಹದಿನಾಲ್ಕು ವರ್ಶಗಳಿಂದ ಪೂರೈಕೆದಾರರು ಬಾಯಿ ಬಿಟ್ಟು ಕೇಳುವ ಮೊದಲೇ ನಾವು ಅವರ ಚೆಕ್ಕನ್ನು ಅವರ ಸಂಸ್ತೆಯ ಬಾಗಿಲಿಗೆ ತಲುಪಿಸುತ್ತಿದ್ದೇವೆ. ನಮ್ಮ ಈ ಸ್ತಿರತೆ ಮಾರುಕಟ್ಟೆಯಲ್ಲಿ ನಮಗೆ ಒಳ್ಳೆಯ ಹೆಸರನ್ನು ತಂದುಕೊಟ್ಟು ನಮ್ಮನ್ನು ಬೆಳೆಸಿದೆ.ಗೆಳೆಯರೇ ನಿರಂತರ ಮತ್ತು ಸ್ತಿರತೆ ಬೇಸರ ತರಿಸುತ್ತದೆ ನಿಜ. ಆದರೆ ಪ್ರತಿಪಲ ಮಾತ್ರ ಅದ್ಬುತ!
(ಚಿತ್ರಸೆಲೆ: pixabay.com )


ಇತ್ತೀಚಿನ ಅನಿಸಿಕೆಗಳು