ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಗಾಂದಾರಿಯ ಆತಂಕ – ನೋಟ – 8

ಗಾಂದಾರಿಯ ಆತಂಕ
(ಆದಿಪರ್ವ: ಸಂದಿ-4: ಪದ್ಯ-40 ರಿಂದ 46)
ಪಾತ್ರಗಳು:
ಗಾಂದಾರಿ: ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರನ ಹೆಂಡತಿ. ಪಟ್ಟದ ರಾಣಿ.
ವೇದವ್ಯಾಸ ಮುನಿ: ಪರಾಶರ ಮುನಿ ಮತ್ತು ಮತ್ಸ್ಯಗಂದಿಯ ಮಗ.
ಕಾಂತಾಜನ: ಪಟ್ಟದ ರಾಣಿ ಗಾಂದಾರಿಯ ರಾಣಿವಾಸದಲ್ಲಿದ್ದ ಹೆಂಗಸರು / ದಾಸಿಯರು.
*** ಗಾಂದಾರಿಯ ಆತಂಕ ***
ಪಾಂಡುವಿನ ಅರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ಗಾಂಧಾರಿ ಕೇಳಿದಳು.
ಗಾಂಧಾರಿ: ಕುಂತಿಗೆ ಬಾಲ ಕೇಳಿ ವಿನೋದವೇ… ಹಾ… ಮುನ್ನ ಕೈ ಮೇಳವಿಸಿತೇ… ತಪ್ಪೇನು
ತಪ್ಪೇನು… ಎನಗೆ ಮುನಿಪತಿ ಕಾಳು ಮಾಡಿದನೆ… ಠೌಳಿಕಾರನಲಾ… ಈ
ಗರ್ಭಾಳಿಗಳನು ಸುಡಿ.
(ಎಂದು ಅಬಲೆ ಬಸುರನು ಒಡೆಮುರಿದು ಹೊಸೆದಳು. ಧರಣಿಯಲಿ ಖಂಡದ ಸುಢಾಳದ
ಜಿಗಿಯ ಪೇಸಿಕೆ ನಿಕರ ನೂರೊಂದು ಬಲು ಮಾಂಸದ ಸುರಕ್ತದ ಘಟ್ಟಿಗಳು ಉದುರಿದವು.
ವಾಮಾಂಘ್ರಿಯಲಿ ಕೆದರಿದಳು ನೂಕಿದಳು.)
ಗಾಂಧಾರಿ: ಕೈನೆಯರನು ಕರೆ… ಹಾಯ್ಕಿವ ಹೊರಗೆ.
(ಎನುತ ಕಠೋರ ಕೋಪದಲಿ ನೋಡಿದಳು. ತನ ತನಗೆ ನಡುನಡುಗಿ ಕಾಂತಾಜನವು ಬಂದುದು.)
ಕಾಂತಾಜನ: ತಾಯೆ, ಬೆಸನ ಏನು.
(ಎನಲು)
ಗಾಂಧಾರಿ: ಊರ ಹೊರಗೆ ಇವನು ಬಿಸುಡಿ.
(ಎಂಬ ಆ ಮುಹೂರ್ತದಲಿ ಮುನಿಪ ವೇದವ್ಯಾಸನು ಆಕೆಯ ಮನೆಗೆ ಬಂದನು. ಈ ಕಾಮಿನಿಯ
ಕೋಲಾಹಲವ ಕಂಡನು.)
ವೇದವ್ಯಾಸ: ಇದೇನು… ಏನು?
(ಎಂದು ಬೆಸಗೊಂಡ.)
ಗಾಂಧಾರಿ: ಭರತ ಸಂತಾನಕೆ ಕುಮಾರರ ಹೆರುವೆ ನಾ ಮುನ್ನ ಎಂದು ನಿಮ್ಮಡಿಯ ಕೃಪೆಯಲಿ
ಮಂತ್ರಭಾವಿತವ ಗರ್ಭವ ಧರಿಸಿದೆನು. ಇವರ ಭಾರವ ಧರಿಸಿದೆನು. ವರುಷವು
ಎರಡಾಯ್ತು. ದಾಯಾದ್ಯರೊಳಗೆ ಮಗನು ಅವತರಿಸಿದನು.
(ಎನುತ ಗಾಂಧಾರಿ ಮುಖ ತಿರುಹಿದಳು.)
ವೇದವ್ಯಾಸ: ಮರುಳು ಹೆಂಗುಸಲಾ… ಮಹಾತ್ಮರ ಪರಿಯ ನೀನು ಎಂತು ಅರಿವೆ… ಪಾಪಿ,
ಗರ್ಭೋತ್ಕರವ ಕೆಡಿಸಿದೆ ನೀ ಸಾರು.
(ಎನುತ ಮುನಿ ಮುಳಿದು, ಘೃತಪೂರಿತದ ಕೊಪ್ಪರಿಗೆಗಳನು ತರಿಸಿದನು. ಒಂದೊಂದನು
ಒಂದರೊಳು ಇರಿಸಿ, ರಕ್ಷೆಗಳ ರಚಿಸಿ ಮಂತ್ರಿಸಿ ನೀರ ತಳಿದನು.)
ವೇದವ್ಯಾಸ: ಗಾಂಧಾರಿ ,ಚಿಂತೆಯಿಲ್ಲದೆ ನೂರುದಿನ ಪರಿಯಂತ ರಕ್ಷಿಸು. ಬಳಿಕ ನಿನ್ನಯ ಸಂತತಿಯ
ಸಾಮರ್ಥ್ಯವನು ನೋಡು.
(ಎಂದು ಕಂತುಪಿತ ಸನ್ನಿಭನು ಸತಿಯನು ಸಂತವಿಸಿ ಮರಳಿದನು.)
ಪದ ವಿಂಗಡಣೆ ಮತ್ತು ತಿರುಳು
ಜನಜನಿತ=ಜನರೆಲ್ಲರಿಗೂ ತಿಳಿದಿರುವ ಸಂಗತಿ; ಕೇಳಿ=ಆಟ; ವಿನೋದ=ಹಿಗ್ಗು/ಆನಂದ; ಕೈಮೇಳವಿಸು=ಉಂಟಾಗು/ಒದಗು/ನೆರವೇರು; ಮುನಿಪತಿ=ಮುನಿಗಳ ಒಡೆಯನಾದ ವ್ಯಾಸ; ಕಾಳುಮಾಡು=ಕೆಡಿಸು/ಹಾಳುಮಾಡು; ಠೌಳಿ=ಸುಳ್ಳು; ಠೌಳಿಕಾರ=ಸುಳ್ಳುಗಾರ; ಗರ್ಭಾಳಿ=ಬಸಿರಿನಲ್ಲಿರುವ ಬ್ರೂಣಗಳು; ಅಬಲೆ=ಹೆಂಗಸು; ಬಸುರು=ಹೊಟ್ಟೆ; ಒಡೆಮುರಿ=ಚೂರುಚೂರುಮಾಡುವುದು; ಹೊಸೆ=(ಹೊಟ್ಟೆಯನ್ನು) ಹಿಸುಕು/ತಿಕ್ಕು; ಧರಣಿ=ಬೂಮಿ; ಖಂಡ=ತುಂಡು/ಚೂರು; ಸುಢಾಳ=ಬಹಳ ಹೊಳಪು/ಕಾಂತಿ; ಜಿಗಿ=ನೆಗೆ/ಹಾರು/ಅಂಟು; ಪೇಸಿಕೆ=ಹೇಸಿಗೆ/ಜುಗುಪ್ಸೆ; ನಿಕರ=ಗುಂಪು; ಸುರಕ್ತ=ರಕ್ತದಿಂದ ಕೂಡಿದ; ಘಟ್ಟಿ=ಗಟ್ಟಿಯಾದ ಉಂಡೆ/ಮುದ್ದೆ; ವಾಮಾಂಘ್ರಿ=ಎಡದ ಪಾದ; ಕೈನೆ=ದಾಸಿ/ಸೇವಕಿ; ಬೆಸನ=ಕೆಲಸ; ದಾಯಾದ್ಯ=ಮನೆತನದ ಸಂಪತ್ತಿನ ಪಾಲಿನಲ್ಲಿ ಹಕ್ಕುಳ್ಳ ವ್ಯಕ್ತಿಗಳು; ಮರುಳು=ತಿಳಿಗೇಡಿ; ಪರಿ=ರೀತಿ; ಗರ್ಭ+ಉತ್ಕರ; ಉತ್ಕರ=ರಾಶಿ; ಗರ್ಭೋತ್ಕರ=ಹೊಟ್ಟೆಯಲ್ಲಿದ್ದ ನೂರೊಂದು ಬ್ರೂಣಗಳು; ಸಾರು=ದೂರ ಹೋಗು; ಘೃತ=ತುಪ್ಪ; ಪೂರಿತ=ತುಂಬಿದ; ಕೊಪ್ಪರಿಗೆ=ಅಗಲವಾದ ಬಾಯಿಯುಳ್ಳ ಲೋಹದ ಪಾತ್ರೆ/ಕಡಾಯಿ; ಪರಿಯಂತ=ವರೆಗೆ/ತನಕ; ಕಂತುಪಿತ=ವಿಶ್ಣು; ಸನ್ನಿಭ=ಸಮಾನ;
ಹೊಸಗನ್ನಡ ಗದ್ಯರೂಪ
“ಪಾಂಡುವಿನ ಹೆಂಡತಿ ಕುಂತಿಗೆ ಮಗುವಾಯಿತು”ಎಂಬ ಜನಜನಿತವಾದ ಸುದ್ದಿಯನ್ನು ಗಾಂದಾರಿಯು ಕೇಳಿದಳು… ಈಗಾಗಲೇ ಬಸುರಿಯಾಗಿದ್ದ ಗಾಂದಾರಿಗೆ ಇನ್ನೂ ಹೆರಿಗೆಯಾಗಿರಲಿಲ್ಲ… ಈ ಸುದ್ದಿಯನ್ನು ಕೇಳಿ… ತನಗಿಂತ ಮೊದಲೇ ಕುಂತಿಗೆ ಮಗು ಹುಟ್ಟಿತೆಂಬ ಹತಾಶೆ ಮತ್ತು ಆಕ್ರೋಶದಿಂದ ಗಾಂದಾರಿಯು ಅಬ್ಬರಿಸತೊಡಗುತ್ತಾಳೆ.
“ಕುಂತಿಗೆ ಮಗುವಿನೊಡನೆ ಆಟವಾಡುವ ಆನಂದ ದೊರೆಯಿತೆ… ಹಾ… ನನಗಿಂತ ಮೊದಲೇ ಮಗುವನ್ನು ಹೆರುವ ಅವಕಾಶ ಅವಳಿಗೆ ದೊರಕಿತೆ… ಇದರಲ್ಲಿ ಅವಳ ತಪ್ಪೇನು ಇಲ್ಲ… ನೂರು ಮಂದಿ ಗಂಡು ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿ ಅನುಗ್ರಹಿಸಿದ್ದ ವ್ಯಾಸನು ನನಗೆ ಕೆಟ್ಟದ್ದನ್ನು ಮಾಡಿದನೆ… ಅವನೊಬ್ಬ ಸುಳ್ಳುಗಾರನಲಾ… ಈ ನನ್ನ ಹೊಟ್ಟೆಯಲ್ಲಿರುವ ಬ್ರೂಣಗಳನ್ನು ಸುಡು”ಎಂದು ಅರಚುತ್ತ… ಬಸುರಿಯಾಗಿದ್ದ ಗಾಂದಾರಿಯು ತನ್ನ ಹೊಟ್ಟೆಯಲ್ಲಿನ ಬ್ರೂಣಗಳು ತುಂಡು ತುಂಡಾಗುವಂತೆ ಹೊಟ್ಟೆಯನ್ನು ಹಿಸುಕಿಕೊಂಡಳು;
ಆಗ, ಜುಗುಪ್ಸೆಯುಂಟಾಗುವಂತೆ ಹೆಪ್ಪುಗಟ್ಟಿದ ರಕ್ತದ ಮುದ್ದೆಯಂತೆ ಹೊಳೆಯುತ್ತಿದ್ದ ನೂರೊಂದು ಮಾಂಸದ ತುಂಡುಗಳು ಕೆಳಗೆ ಉದುರಿದವು. ಕೆಳಗೆ ಬಿದ್ದಿದ್ದ ನೂರೊಂದು ಮಾಂಸದ ತುಂಡುಗಳನ್ನು ಗಾಂದಾರಿಯು ತನ್ನ ಎಡಪಾದಿಂದ ಕೆದರಿ, ಅವನ್ನು ದೂರ ನೂಕಿದಳು;
“ದಾಸಿಯರನ್ನು ಕರೆಯಿರಿ… ಇವನ್ನು ಹೊರಕ್ಕೆ ಹಾಕಿ”ಎಂದು ಉಗ್ರವಾದ ಕೋಪದಿಂದ ತನ್ನ ಸುತ್ತಲಿದ್ದ ರಾಣಿವಾಸದವರನ್ನು ನೋಡಿದಳು… ಗಾಂದಾರಿಯ ಅಬ್ಬರದ ದನಿಯನ್ನು ಕೇಳಿ ರಾಣಿವಾಸದ ಹೆಂಗಸರು ತುಂಬಾ ಹೆದರಿಕೆಯಿಂದ ನಡುಗುತ್ತ,..ಅವಳ ಬಳಿಗೆ ಓಡೋಡಿ ಬಂದರು; “ತಾಯೆ… ಕೆಲಸವೇನು”ಎಂದು ಕೇಳಲು;
“ಈ ತುಂಡುಗಳನ್ನು ಊರ ಹೊರಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿ” ಎಂದು ಗಾಂದಾರಿಯು ದಾಸಿಯರಿಗೆ ಆಜ್ನಾಪಿಸುತ್ತಿದ್ದ ಸಮಯದಲ್ಲಿಯೇ… ವೇದವ್ಯಾಸ ಮುನಿಯು ಗಾಂದಾರಿಯ ರಾಣಿವಾಸದ ಮನೆಗೆ ಬಂದನು… ಗಾಂದಾರಿಯ ಆಕ್ರೋಶದಿಂದ ಉಂಟಾಗಿದ್ದ ಈ ಗಲಾಟೆಯನ್ನು ನೋಡಿದನು;
“ಗಾಂದಾರಿ, ಇದೇನು ಮಾಡುತ್ತಿರುವೆ”ಎಂದು ವೇದವ್ಯಾಸ ಮುನಿಯು ಕೇಳಿದನು;
“ಬರತ ವಂಶದ ರಾಜ್ಯಪಟ್ಟಕ್ಕಾಗಿ ನಾನು ಮೊದಲು ಕುಮಾರರನ್ನು ಹೆರುವೆನೆಂಬ ನಂಬಿಕೆಯಿಂದ… ನಿಮ್ಮ ಪಾದಗಳ ಅನುಗ್ರಹದಿಂದ ಮಂತ್ರಪಿಂಡಕವನ್ನು ಪಡೆದು ಬಸುರನ್ನು ಹೊಂದಿದೆನು… ಬಸಿರನ್ನು ಹೊತ್ತು ಎರಡು ವರುಶಗಳು ತುಂಬಿದವು… ಅಂದಿನಿಂದ ನೂರೊಂದು ಮಂದಿ ಮಕ್ಕಳ ಬಸಿರನ ಹೊರೆಯನ್ನು ಹೊತ್ತಿದ್ದೇನೆ… ಈಗ ನೋಡಿದರೆ ದಾಯಾದಿಗಳಾದ ಪಾಂಡುವಿನ ಮಡದಿಗೆ ಮಗನು ಹುಟ್ಟಿದ್ದಾನೆ”ಎಂದು ಹೇಳುತ್ತ ಗಾಂದಾರಿಯು ತನ್ನ ಆಕ್ರೋಶ, ಆತಂಕ ಮತ್ತು ಮುನಿಸನ್ನು ವ್ಯಕ್ತಪಡಿಸುವಂತೆ ಮೊಗವನ್ನು ಮತ್ತೊಂದೆಡೆಗೆ ತಿರುಗಿಸಿದಳು;
“ತಿಳಿಗೇಡಿ ಹೆಂಗಸಲ್ಲವೇ ನೀನು… ಗುರುಹಿರಿಯರ ಹಿರಿಮೆಯನ್ನು ನೀನು ಯಾವ ರೀತಿ ತಾನೆ ತಿಳಿಯುವೆ… ಪಾಪಿ… ನೂರೊಂದು ಬ್ರೂಣಗಳಿಂದ ತುಂಬಿದ್ದ ಬಸಿರನ್ನು ಹಾಳುಮಾಡಿದೆ… ನೀನು ದೂರ ನಿಲ್ಲು”ಎಂದು ವೇದವ್ಯಾಸ ಮುನಿಯು ಕೋಪದಿಂದ ಗಾಂದಾರಿಯನ್ನು ತೆಗಳಿ… ಆಗಿದ್ದ ಅನಾಹುತವನ್ನು ಪರಿಹರಿಸಲು ಮುಂದಾಗುತ್ತಾನೆ;
ತುಪ್ಪ ತುಂಬಿದ ನೂರೊಂದು ಕೊಪ್ಪರಿಗೆಗಳನ್ನು ತರಿಸಿದನು… ಒಂದೊಂದು ಕೊಪ್ಪರಿಗೆಯಲ್ಲಿ ಒಂದೊಂದು ಬ್ರೂಣವನ್ನು ಇರಿಸಿ… ಅವನ್ನು ಕಾಪಾಡುವುದಕ್ಕೆ ಸೂಕ್ತವಾದ ಸಿದ್ದತೆಗಳನ್ನು ಮಾಡಿ… ಮಂತ್ರಗಳನ್ನು ಉಚ್ಚರಿಸುತ್ತ ಕೊಪ್ಪರಿಗೆಗಳ ಮೇಲೆ ನೀರನ್ನು ಸಿಂಪಡಿಸಿದನು;
“ಗಾಂದಾರಿ, ಚಿಂತೆಯಿಲ್ಲದೆ ನೂರು ದಿನದ ವರೆಗೆ ಈ ಕೊಪ್ಪರಿಗೆಗಳನ್ನು ಕಾಪಾಡು. ಅನಂತರ ಕೊಪ್ಪರಿಗೆಗಳಿಂದ ಹೊರಬರುವ ನಿನ್ನ ಮಕ್ಕಳ ಶಕ್ತಿಯನ್ನು ನೋಡು”ಎಂದು ವಿಶ್ಣು ಪರಮಾತ್ಮನಿಗೆ ಸಮಾನನಾದ ವೇದವ್ಯಾಸ ಮುನಿಯು ಆತಂಕದಿಂದ ಕಂಗೆಟ್ಟಿದ್ದ ಗಾಂದಾರಿಯನ್ನು ಸಮಾದಾನ ಮಾಡಿ… ತನ್ನ ಆಶ್ರಮಕ್ಕೆ ಹಿಂತಿರುಗಿದನು;
(ಚಿತ್ರ ಸೆಲೆ: quoracdn.net)

ಇತ್ತೀಚಿನ ಅನಿಸಿಕೆಗಳು