ಬಯವನ್ನು ಪ್ರೀತಿಸಿ, ಅದು ನಮ್ಮ ಜೀವನದ ಮಾರ‍್ಗದರ‍್ಶಿ

ಇದೇನಪ್ಪ ಎಲ್ಲರೂ, ಜೀವನದಲ್ಲಿ ಬಯಪಡಬಾರದು, ಬಯ ಪಟ್ಟರೆ ಜೀವನ ಯಶಸ್ವಿಯಾಗಲು ಸಾದ್ಯವಿಲ್ಲ ಎಂದು ಹೇಳುತ್ತಾರೆ, ಇಲ್ಲಿ ನೋಡಿದರೆ ಇವನು ಬಯವನ್ನು ಪ್ರೀತಿಸಿ ಎಂದು ಹೇಳುತ್ತಿದ್ದಾನೆ ಏನಾಗಿದೆ ಇವನಿಗೆ ಎಂದು ಅಂದುಕೊಳ್ಳುತ್ತಿದ್ದೀರಾ? ಬಯದ ವಿರುದ್ದ ಪದ ದೈರ‍್ಯ, ಆದರೆ ನಾನು ಹೇಳುತ್ತೇನೆ ಬಯದ ಗೆಳೆಯ ದೈರ‍್ಯ. ಇಬ್ಬರೂ ಜೊತೆಗೂಡಿದರೆ ಮಾತ್ರ ಜೀವನ ಬೊಂಬಾಟ್ ಆಗುತ್ತೆ.
ಅದೊಂದು ಕಡಿದಾದ ಬೆಟ್ಟ ಹತ್ತಲು ಬಲು ಕಶ್ಟ. ಆ ಬೆಟ್ಟ ಹತ್ತಬೇಕು ಅನ್ನುತ್ತೆ ನಮ್ಮ ಸಾಹಸಿ ಮನಸು, ಅದು ನಮ್ಮ ದೈರ‍್ಯ. ತಕ್ಶಣ ಬೆಟ್ಟ ತುಂಬಾ ಕಡಿದಾಗಿದೆ ಬಿದ್ರೆ ಏನು ಗತಿ ಅನ್ನುತ್ತೆ ಬಯದಿಂದ ಮನಸು. ನೋಡಿ ನಾನು ಹೇಳಿದೆ ಅಲ್ವ ದೈರ‍್ಯ ಮತ್ತು ಬಯ ಇಬ್ಬರೂ ಗೆಳೆಯರು ಎಂದು. ದೈರ‍್ಯ ಸಾಹಸ ಮಾಡಲು ತಯಾರಾದಾಗ ಬಯ ಬಂದು ಹೇಳುತ್ತದೆ, ನಿಲ್ಲು ನಾನು ಜೊತೆಗೆ ಬರುತ್ತೇನೆ. ಇಲ್ಲಿ ದೈರ‍್ಯಕ್ಕೆ, ಬಾ ಮಾರಾಯ ಅನ್ನೋದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ. ನಮ್ಮೊಳಗಿನ ದೈರ‍್ಯ ಬೆಟ್ಟ ಹತ್ತಲು ನಮಗೆ ಪ್ರೇರಣೆ ನೀಡಿತು ಆದರೆ ನಮ್ಮಲಿರುವ ಬಯ ಆ ಬೆಟ್ಟವನ್ನು ಹತ್ತಲು ಮಾಡಬೇಕಾದ ತಯಾರಿಯ ಬಗ್ಗೆ ನಮಗೆ ಎಚ್ಚರಿಸಿತು. ಹಾಗಾಗಿ ಚೆನ್ನಾಗಿ ಹಿಡಿತ ಇರುವ ಜಾರದಿರುವ ಬೂಟು, ಕುಡಿಯಲು ಸಾಕಶ್ಟು ನೀರು, ಹಗ್ಗ, ಹವಾಮಾನದ ಬಗ್ಗೆ ಮಾಹಿತಿ, ಹೀಗೆ ಹತ್ತು ಹಲವು ತಯಾರಿಗಳನ್ನು ಮಾಡಿಕೊಂಡು ನಾವು ಮುಂದೆ ಹೆಜ್ಜೆ ಇಡುತ್ತೇವೆ. ದೈರ‍್ಯ ಇದೆ ಎಂದು ಸುಮ್ಮನೆ ಮುನ್ನುಗುವುದಿಲ್ಲ, ಅಜಾಗರೂಕತೆಯಿಂದ ಇರದಂತೆ, ಆತುರ ಪಡದಂತೆ ಬಯ ನಮ್ಮನ್ನು ಎಚ್ಚರಿಸುತ್ತದೆ. ಸಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಬಯ ಇದೆ ಅಲ್ವ ಅದು ನಮ್ಮ ಬೆಟ್ಟ ಹತ್ತುವ ಪ್ರಯಾಣವನ್ನು ಸುಗಮ ಗೊಳಿಸುತ್ತದೆ. ಕೆಳಗೆ ಬೀಳುತ್ತೇವೆ ಅನ್ನುವ ಬಯ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ನಮ್ಮನ್ನು ಪ್ರೇರೇಪಿಸುತ್ತದೆ.
ನಿಜ ಸ್ನೇಹಿತರೆ ಜೀವನದ ಪ್ರತಿ ಹೆಜ್ಜೆಯಲ್ಲೂ ದೈರ‍್ಯದ ಜೊತೆ ಬಯ ಕೂಡ ಇರಬೇಕು. ಬಯ ಮತ್ತು ದೈರ‍್ಯ ಇಬ್ಬರೂ ಕೂಡ ಆಪ್ತ ಮಿತ್ರರು. ಕೇವಲ ದೈರ‍್ಯ ಮಾತ್ರ ಇದ್ದರೆ ಪ್ರಯೋಜನವಿಲ್ಲ. ಬಯ ಬೀಳದೆ ದೈರ‍್ಯದಿಂದ ಮುನ್ನುಗ್ಗಿದರೆ ಗೆಲುವು ಸಿಗಬಹುದು ಆದರೆ ಅದು ತಾತ್ಕಾಲಿಕವಾಗಿರುತ್ತದೆ. ಎಚ್ಚರಿಕೆ ಇಲ್ಲದ, ವಿವೇಕ ಇಲ್ಲದ ದೈರ‍್ಯ ಮೂರ‍್ಕತನದ್ದಾಗಿರುತ್ತದೆ. ಆದರೆ ಬಯ ನಮ್ಮೊಳಗೇ ಎಚ್ಚರಿಕೆ ಮತ್ತು ವಿವೇಕವನ್ನು ಮೂಡಿಸುತ್ತದೆ.
ಬಯ ನಮ್ಮ ಶತ್ರು ಕಂಡಿತ ಅಲ್ಲ. ಬಯ ಬಿದ್ರೆ ನಾವು ದುರ‍್ಬಲರು ಎಂದು ಅಂದುಕೊಳ್ಳುತ್ತೇವೆ. ಆದರೆ ಬಯವೇ ನಮಗೆ ಜೀವ ಉಳಿಸುವ ಶಕ್ತಿ. ಬಯ ನಮ್ಮನ್ನು ಎಚ್ಚರಿಸಿ ಸರಿಯಾದ ದಾರಿಯನ್ನು ತೋರಿಸುತ್ತದೆ. ವಿಪಲತೆಯ ಬಯವಿದ್ದರೂ ಮುಂದೆ ಹೆಜ್ಜೆ ಇಡುವವನು ನಿಜವಾದ ದೈರ‍್ಯವಂತ. ಬಯ ಇಲ್ಲದಿರುವುದು ದೈರ‍್ಯವಲ್ಲ. ಬಯ ಇದ್ದರೂ ಮುಂದೆ ಸಾಗೋದೇ ದೈರ‍್ಯ. ಬಯವನ್ನು ಗೆಲ್ಲಬೇಕಾದರೆ ಮೊದಲು ಅದನ್ನು ಅರ‍್ತಮಾಡಿಕೊಳ್ಳಬೇಕು. ಬಯ ಜೀವನದ ಒಂದು ಬಾಗ. ಅದು ನಮ್ಮನ್ನು ಅಪಾಯದಿಂದ ಕಾಪಾಡುವುದು ಮಾತ್ರವಲ್ಲ ಜವಾಬ್ದಾರಿಯನ್ನು ಕಲಿಸುತ್ತದೆ.
ಬಯ ನಮ್ಮನ್ನು ಅಪಾಯಗಳಿಂದ ಕಾಪಾಡುತ್ತದೆ. ಬೆಂಕಿಗೆ ಕೈ ಹಾಕಬೇಡ ಎಂದು ಎಚ್ಚರಿಸುತ್ತದೆ. ಅಜಾಗರೂಕನಾಗಿ ರಸ್ತೆ ದಾಟಬೇಡ ಎಂದು ಎಚ್ಚರಿಸುತ್ತದೆ ಬಯ. ಸಮಾಜದಲ್ಲಿ ಕಾನೂನು ಉಲ್ಲಂಗಿಸಿದರೆ ಶಿಕ್ಶೆಯಾಗುವ ಬಯ ಇರುವುದರಿಂದ ಬಹುತೇಕ ಜನರು ನಿಯಮ ಪಾಲಿಸುತ್ತಾರೆ. ಬಯ ಶಿಸ್ತು ಮತ್ತು ನಿಯಂತ್ರಣವನ್ನು ಕಲಿಸುತ್ತದೆ. ಆದರೆ ಬಯವನ್ನು ನಮ್ಮ ಬೆಳವಣಿಗೆಗೆ ಪೂರಕವಾಗಿ ನಾವು ಉಪಯೋಗಿಸಿಕೊಳ್ಳಬೇಕು. ಅತಿ ದೈರ‍್ಯವೂ ಒಳ್ಳೆಯದಲ್ಲ. ಅತಿಯಾದ ಬಯ ಕೂಡ ಹಾನಿಕಾರಕ. ವಿಪಲತೆಯ ಬಯದಿಂದ ಪ್ರಯತ್ನವನ್ನೇ ಪಡದಿರುವುದು, ಜನ ಏನು ಹೇಳುತ್ತಾರೋ ಅನ್ನುವ ಬಯದಿಂದ ನಮ್ಮ ಪ್ರತಿಬೆಯನ್ನು ಮರೆಮಾಚುವುದು, ಬವಿಶ್ಯದ ಬಯದಲ್ಲಿ ವರ‍್ತಮಾನವನ್ನು ಕಳೆದುಕೊಳ್ಳುವುದು ಇಂತಹ ಬಯ ನಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಬಯವನ್ನು ನಾವು ಶತ್ರುವನ್ನಾಗಿ ಅಲ್ಲ ಬದಲಿಗೆ ಮಾರ‍್ಗದರ‍್ಶಿಯಾಗಿ ನೋಡಬೇಕು. ಬಯ ಬಂದಾಗ ಓಡಿ ಹೋಗದೆ ಈ ಬಯ ನನಗೆ ಏನು ಹೇಳಲು ಪ್ರಯತ್ನಿಸುತ್ತಿದೆ ಎಂದು ಯೋಚಿಸಬೇಕು. ಅಗತ್ಯ ಇರುವ ಬಯಕ್ಕೆ ಗೌರವ ಕೊಟ್ಟು ಅನವಶ್ಯಕ ಬಯವನ್ನು ದೈರ‍್ಯದಿಂದ ಎದುರಿಸಿದಾಗ ಮಾತ್ರ ಜೀವನದಲ್ಲಿ ಸಮತೋಲನ ಸಾದ್ಯ.
ನಾನು ಯಾಕೆ ಬಯದ ಬಗ್ಗೆ ಇಶ್ಟೆಲ್ಲ ಹೇಳಿದೆ ಎಂದರೆ ನಾನು ಗಮನಿಸುತ್ತಿರುವ ಪ್ರಕಾರ ಸಮಾಜದಲ್ಲಿ ಅದರಲ್ಲೂ ವಿಶೇಶವಾಗಿ ಯುವ ಜನತೆಯಲ್ಲಿ ಬಯ ಕಡಿಮೆಯಾಗುತ್ತಿದೆ. ಇದನ್ನು ಸೂಕ್ಶ್ಮವಾಗಿ ಗಮನಿಸಿದಾಗ ಒಳ್ಳೆಯ ಲಕ್ಶಣ ಅಲ್ಲ ಎನ್ನುವ ಅರಿವು ನಮಗಾಗುತ್ತದೆ. ಕಚೇರಿಯಲ್ಲಿ ನಾನು ಗಮನಿಸುತ್ತೇನೆ ಯಾಕೆ ಈ ಕೆಲಸ ಆಗಲಿಲ್ಲ, ಇದು ನನ್ನ ಪ್ರಶ್ನೆ. ಅವರ ಉತ್ತರ: ಆಗಲಿಲ್ಲ, ನಾನು ಮಾಡಲಿಲ್ಲ, ನನಗೆ ಮರೆತು ಹೋಯಿತು ಅಶ್ಟೇ. ನಾನು ಈ ಕೆಲಸ ಮಾಡಿ ಮುಗಿಸಲಿಲ್ಲ, ಏನು ಹೇಳ್ತಾರೋ, ಎಶ್ಟು ಬಯ್ಯುತ್ತಾರೋ ಯಾವುದರ ಬಗ್ಗೆಯೂ ಬಯ ಇಲ್ಲ. ಮಾಡ್ಲಿಲ್ಲ ಏನಿವಾಗ ಅನ್ನುವ ದಾಟಿ. ಆಗಲಿಲ್ಲ ಕ್ಶಮಿಸಿ ಅನ್ನುವ ಮಾತು ಕೂಡ ಇಲ್ಲ. ನಮ್ಮ ಮಕ್ಕಳು ಕೂಡ ಹೀಗೆ. ಈಗಿನ ಮಕ್ಕಳು ಶಿಕ್ಶಕರಿಗೆ ಕೂಡ ಬಯ ಬೀಳೋದಿಲ್ಲ. ಒಂದು ನೆನಪಿಡಿ ಬಯ ಇಲ್ಲದ ಬದುಕು ಬದುಕಿನಲ್ಲಿ ವಿಪಲತೆಯತ್ತ ಇಡುವ ಮೊದಲ ಹೆಜ್ಜೆ. ಮಕ್ಕಳು ಹಟಮಾಡಿದಾಗ ರಚ್ಚೆ ಹಿಡಿದಾಗ ನಾವು ಈಗಿನ ಪೋಶಕರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತೆವೆ. ಟಿವಿ ಇಲ್ಲದೆ ಮಕ್ಕಳು ಊಟ ಮಾಡುವುದಿಲ್ಲವಾದರೆ ಮೊದಲು ಟಿವಿ ಹಾಕುತ್ತೇವೆ. ಮಕ್ಕಳಿಗಾಗಿ ಈಗ ನಾವು ಮನೆಯವರು ಜೊತೆಯಾಗಿ ಕೂತು ಕಾರ‍್ಯಕ್ರಮ ನೋಡುವುದನ್ನು ಬಿಟ್ಟು ಬಿಟ್ಟಿದ್ದೇವೆ, ಮಕ್ಕಳು ಟಿವಿಯೊಳಗೆ ಮತ್ತುನಾವು ಮೊಬೈಲ್ ಲೋಕದೊಳಗೆ. ಹಿಂದೆ ಅಜ್ಜ ಅಜ್ಜಿ ಎಂದರೆ ಗೌರವದ ಜೊತೆಗೆ ಬಯ ಕೂಡ ಜಾಸ್ತಿ ಇತ್ತು. ಈಗ ಅವರೆಂದರೆ ಮೊಮ್ಮಕ್ಕಳಿಗೆ ಅಸಡ್ಡೆ. ಮಕ್ಕಳಿಗೆ ನಾವು ಬಯದ ಅರಿವು ಮೂಡಿಸುತ್ತಿಲ್ಲ ಎಂದರೆ, ಜೀವನದಲ್ಲಿ ಅವರು ಸೋಲಲು ಕೂಡ ನಾವೇ ಕಾರಣರಾಗುತ್ತೇವೆ. ಇತ್ತೀಚೆಗೆ ಗಮನಿಸಿ, ಟಿವಿ ನೋಡಲು ಬಿಡಲಿಲ್ಲ, ಮೊಬೈಲ್ ನೋಡಲು ಬಿಡಲಿಲ್ಲ ಎಂದು 10-12 ವರುಶದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾವಿನ ಬಯ ಇದೆಯಾ ಅವರಿಗೆ? ತರುಣರು ಮಾದಕ ದ್ರವ್ಯದ ವ್ಯಸನಿಗಳಾಗುತ್ತಿದ್ದಾರೆ. ಮೊನ್ನೆ ಒಬ್ಬ ತರುಣ ಕೆಲವು ಜನಪ್ರತಿನಿದಿಗಳ ಮನೆಗೆ ನುಗ್ಗಿ ಅವರಿಗೆ ಗುಂಡು ಹೊಡೆದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡುತ್ತಾನೆ ಇದಕೆಲ್ಲ ಕಾರಣ ಏನು? ಬಯದ ಕೊರತೆ. ಸಮಾಜದಲ್ಲಿ ಬಯಕ್ಕೆ ಗೌರವ ಕಡಿಮೆಯಾದರೆ ಸಮಾಜ ವಿನಾಶದತ್ತ ಸಾಗುತ್ತಿದೆ ಎಂದು ಅರ‍್ತ.
(ಚಿತ್ರಸೆಲೆ : pixabay.com )

ಇತ್ತೀಚಿನ ಅನಿಸಿಕೆಗಳು