ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ದ್ರೌಪದಿಯು ಅಯ್ದು ಮಂದಿ ಪಾಂಡವರ ಮಡದಿಯಾದುದು-ನೋಟ-30

ಸಿ. ಪಿ. ನಾಗರಾಜ.

ಪ್ರಸಂಗ-30
ದ್ರೌಪದಿಯು ಅಯ್ದು ಮಂದಿ ಪಾಂಡವರ ಮಡದಿಯಾದುದು
(ಆದಿ ಪರ‍್ವ: ಹದಿನಾರನೆಯ ಸಂದಿ: ಪದ್ಯ 1-13)

ಪಾತ್ರಗಳು:

ಕುಂತಿ: ಪಾಂಡುರಾಜನ ಹೆಂಡತಿ. ಪಾಂಡವರ ತಾಯಿ.
ದರ‍್ಮರಾಯ: ಕುಂತಿ ಮತ್ತು ಪಾಂಡುರಾಜನ ಮಗ.
ಬೀಮ: ಕುಂತಿ ಮತ್ತು ಪಾಂಡುರಾಜನ ಮಗ.
ಅರ‍್ಜುನ: ಕುಂತಿ ಮತ್ತು ಪಾಂಡುರಾಜನ ಮಗ.
ನಕುಲ: ಮಾದ್ರಿಮತ್ತು ಪಾಂಡುರಾಜನ ಮಗ.
ಸಹದೇವ: ಮಾದ್ರಿ ಮತ್ತು ಪಾಂಡುರಾಜನ ಮಗ.
ಪುರಜನರು: ಚತ್ರಾವತಿ ನಗರದ ಪ್ರಜೆಗಳು.

*** ದ್ರೌಪದಿಯು ಅಯ್ದು ಮಂದಿ ಪಾಂಡವರ ಮಡದಿಯಾದುದು *** 

ಕೇಳು ಜನಮೇಜಯ ಧರಿತ್ರೀಪಾಲ,ಕೌರವ ನೃಪತಿ ಪಯಣದ ಮೇಲೆ ಪಯಣದಲೈದಿ… ಹಸ್ತಿನಾಪುರವ ಹೊಕ್ಕನು…ಹೇಳಲೇನು…ಉಳಿದ ಅಖಿಳ ಧರಣೀಪಾಲಕರ ದುಮ್ಮಾನವನು…ಪಾಂಚಾಲ ದೇಶವ ಕಳೆದು…ತಮ್ಮ ನಗರಿಗಳ ಹೊಕ್ಕರು…ಭೀತಿ ಹರಿದುದು… ರಾಯದಳ ಸಂಘಾತ ಸರಿದುದು…ಮತ್ತೆ ಸುಜನ ವ್ರಾತ ನೆರೆದುದು…ಅವನೀ ದೇವರಅಗ್ಗಳಿಕೆ ಮೆರೆದುದು…ವಾತಜನು ಮರಗೊಂಬಿನಲಿ ಮಾರಾತರನು ಮನ್ನಿಸಿ…ಕುಲಾಲ ನಿಕೇತನಕೆ ಬಂದು…ಧರ್ಮಜನ ಚರಣದಲಿ ಎರಗಿದನು.
ಇತ್ತಲು ಅರ್ಜುನನು ಇನ ಸುತನ ಬೆಂಬತ್ತಿ ಮರಳಿದನು…ಜಯಲಕ್ಷ್ಮಿಯ ಕಟಾಕ್ಷದಲಿ ಅವನಿಪಾಲರ ಮುತ್ತಿಗೆಯ ತೆಗೆಸಿದನು…ಮತ್ತ ರಾಯರ ಬೆನ್ನಕಪ್ಪವನುಎತ್ತಿದಉತ್ಸಹ ವದನದಲಿ…ಹೊಗರೆತ್ತಿದ ಅಕ್ಷಿಯ ಹೊಳಹಿನಲಿನೃಪಾಲಯವ ಹೊಕ್ಕನು.

ಪುರಜನ : ಇಂದು ಈತನಉದಯದೊಳು…ಭೂಸುರ ಜಾತಿಗಾಯ್ತುಅಗ್ಗಳಿಕೆ…ಇಂದುಪಾರ್ಥಿವರು ಉಬ್ಬಟೆಯ ಆತರು…ಧನುವುಇಂದುಇವನ ವಶವಾಯ್ತು…ಸೋತು ತೆಗೆದ ಮಹೀಶ್ವರರ ಮಾತುಏತಕದು…ಮಝ ಪೂತು.
(ಎನುತ ಜನವು…ಈತನನು ನೆರವಿ ನೆರವಿಯಲಿ ಕೊಂಡಾಡುತ ಇರ್ದುದು…ಈತನು ಗತಿಯ ಗರುವಿಕೆಯಿಂದ ಬಂದನು…ತರುಣಿಯ…)

ಅರ್ಜುನ:ನೀನು ಹೊರೆಗೆ ಬಾ.
(ಎಂದುಕರೆದನು…ಸತಿಸಹಿತ ವಹಿಲದಲಿ ತಿರುಗಿದನು…ಇಂದುಮುಖಿಯನು ಕುಂಭಕಾರನ ಮಂದಿರದ ಹೊರಗಿರಿಸಿ…ಫಲುಗುಣ ಬಂದು…ಕುಂತಿಯ ಚರಣಕಮಲದಲಿ ಮೈಯಿಕ್ಕಿದನು.)

ಅರ್ಜುನ: ತಾಯೆ ಬಿನ್ನಹ…ಇಂದು ಧರಣೀ ರಾಯರೆಲ್ಲರ ಗೆಲಿದು ನಾಯಕವನು…ಅನುಪಮಿತ ಮೌಲ್ಯವನು…ಅಮಲ ಮೌಕ್ತಿಕವ ತಂದೆನು…ತಾಯೆ ಚಿತ್ತೈಸಿದಿರೆ.
(ಎನೆ…ತನಿ ಹರುಷದಲಿ ಕಡೆವಾಯಿದಳು.)

ಕುಂತಿ:ಲೇಸಾಯಿತು…ಐವರು ಕೂಡಿ ಭೋಗಿಪುದು. ಅರ್ಜುನ:ಹಸಾದ.
(ಎನುತ್ತ…ಕಮಲಾನನೆಯ ಅವ್ವೆಗೆ ಹೊಡವಂಡಿಸಿದನು.)

ಕುಂತಿ: ತನುಜ, ನೀ ತಂದಅಮಲಮೌಕ್ತಿಕಇದೆಯೊ…ಶಿವ…ತನಗೆ ನುಡಿ ತೊದಲಿಸಿತಲಾ…ನೀವು ಇನಿಬರುಉಪಭೋಗಿಸುವುದುಎಂದೆನು…ವನಿತೆಐವರಿಗೆಅರಸಿಯೇ…ಲೇಸು.

ಅರ್ಜುನ:ಜನನಿ, ನಿಮ್ಮ ನುಡಿ ತಪ್ಪದು…ಈ ವನಜಮುಖಿಎಮ್ಮೈವರಿಗೆ ಸತಿ…ವಿನುತ ಗುರುವಚನಾಂಬುನಿಧಿ… ಮಕ್ಕಳಿಗೆಅಲಂಘ್ಯವಲೆ.
(ಎನೆ…ಯುಧಿಷ್ಠಿರ ನೃಪತಿ ಪಾರ್ಥನ ಕನಲಿದನು…ಕಲಿ ಭೀಮನು.).

ಭೀಮ: ಅಲ್ಲ.(ಎಂದನು…ನಕುಲ ಸಹದೇವರು ಅರ್ಜುನಗೆ…)

ನಕುಲ/ಸಹದೇವ:ಅನುಚಿತ. (ಎಂದರು.)

ಅರ್ಜುನ: ನೀವ್ ನಿಲ್ಲಿ…ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರೈ…ಸಲೆ ಹೇಳ್ಪುದುಆವುದು…
ಸಹದೇವ ನಕುಲರು ನಿಮಗೆ ಮಾತೇಕೆ…ಬಲ್ಲಿರಿ… ಅಖಿಳಆಮ್ನಾಯ ಭಾಷಿತದಲ್ಲಿ ನೋಡಲು… ಧರ್ಮಶಾಸ್ತ್ರದೊಳೆಲ್ಲ ತಾಯಿಂದಅಧಿಕ ಗುರುವಿಲ್ಲ… ಮಾತೃವಚನವು ಅಲಂಘ್ಯ… ಇದು ಧರ‍್ಮ ರಹಸ್ಯನಿಷ್ಠರಿಗೆ ವಿಖ್ಯಾತ ಪದ್ಧತಿ…ಲೋಕಯಾತ್ರಾ ಭೀತಿಯಲಿ ಭಯವೇಕೆ…ಏತಕೆ ಈ ಲೋಕಾನುಸರಣೆ…ಆವುದು ವಿಧೂತ ಕಿಲ್ಬಿಷವು…ಅದು ಧರ್ಮಾತಿಶಯವು…ಇಹಪರಕೆ ಕಡುಹಿತವು…ನೀವು ಈ ಗರುವೆಗೆ…ರಾಗ ಲೋಭವ್ಯಾಪ್ತಿಯಲಿ ಅಳುಪುವರೆ…ಸಲೆ ಧರ್ಮಆಗಮವನುಆಚರಿಸುವದಲೇ…ನಮ್ಮ ಅನುಷ್ಠಾನ…ಈಗಳ್ ಏನಿದು…ಈ ಗುರುವಚನ ಧರ್ಮತ್ಯಾಗವು…ಧರ್ಮವೇ ಉಪಭೋಗವುಐವರಿಗೆ..
(ಎಂದು ಆ ಪಾರ್ಥ…ಅವರನು ತಿಳುಹಿದನು.)

ಅರ್ಜುನ: ಸಂದೇಹಗಳ ಮಾಡದಿರಿ…ಇದರೊಳಗೆಖಯಖೋಡಿ ಇಲ್ಲ…ಧರ್ಮದ ಮೂಡಿಗೆಯೊಳು ಅಂಬು ಇರಲಿ…ಬಹಿರಂಗದಲಿ ಬಳಸದಿರಿ…ಗೂಡು ಹಲವಿಹ ಒಂದು ಪಕ್ಷಿ…ಇದನು ಆಡಬಾರದು…ಸಾಕು…ನೀವು ಚಿಂತಿಸಬೇಡಿ.
(ಎಂದು ಕಲಿಪಾರ್ಥ…ಅನಿಬರನು ತಿಳುಹಿದನು…ತಮ್ಮೊಳಗೆ ಅನುಮತ ಅದುದು…ತತ್ಸೋದರರು ಐವರು ಸೌಹಾರ್ದದಿಂದ ತಳೋದರಿಯನು ಒಲಿದು ಅಂಗೀಕರಿಸಿದರು.)

ಹೊಸಗನ್ನಡ ಗದ್ಯ

“ಜನಮೇಜಯ ರಾಜನೇ ಕೇಳು” ಎಂದು ವೈಶಂಪಾಯನ ಮುನಿಯು ಮಹಾಬಾರತದ ಕತೆಯನ್ನು ಹೇಳುತ್ತಿದ್ದಾನೆ.

ದುರ‍್ಯೋದನನು ಪಯಣದ ಮೇಲೆ ಪಯಣ ಮಾಡುತ್ತ ಹಸ್ತಿನಾಪುರಕ್ಕೆ ಹೋಗಿ ಸೇರಿದನು…ಉಳಿದ ಎಲ್ಲ ರಾಜರಿಗೂ ಆದ ಸಂಕಟವನ್ನು ಏನೆಂದು ತಾನೇ ಹೇಳಲಿ….ಪಾಂಚಾಲ ದೇಶದಿಂದ ಹೊರಟು, ತಮ್ಮ ತಮ್ಮ ನಗರಗಳನ್ನು ಸೇರಿಕೊಂಡರು.

ದುರ‍್ಯೋದನನ ಪಡೆಯಿಂದ ಉಂಟಾಗಿದ್ದ ಅಂಜಿಕೆಯು ನಿವಾರಣೆಯಾಯಿತು. ರಾಜರ ಸೈನ್ಯ ಹೊರಟುಹೋಯಿತು. ಮತ್ತೆ ಸಜ್ಜನರ ಸಮೂಹ ಸೇರಿತು ಬ್ರಾಹ್ಮಣರಿಗೆ ಮನ್ನಣೆ ಹೆಚ್ಚಾಯಿತು. ಬೀಮನು ಆಕ್ರಮಣ ಮಾಡಲು ಬಂದಿದ್ದವರನ್ನು ಮರದ ಕೊಂಬೆಯಿಂದ ಹೊಡೆದೋಡಿಸಿ, ಚತ್ರಾವತಿ ನಗರದಲ್ಲಿ ತಾವು ಉಳಿದುಕೊಂಡಿದ್ದ ಕುಂಬಾರನ ಮನೆಗೆ ಬಂದು, ದರ‍್ಮರಾಯನ ಪಾದಗಳಿಗೆ ನಮಸ್ಕರಿಸಿದನು.

ಇತ್ತ ಕಡೆ…ಅರ‍್ಜುನನು ಕರ‍್ಣನನ್ನು ಬೆನ್ನಟ್ಟಿ…ಓಡಿಸಿ…ಹಿಂತಿರುಗಿದನು….ಜಯಲಕ್ಶ್ಮಿಯ ಅನುಗ್ರಹದಿಂದ , ರಾಜರ ಮುತ್ತಿಗೆಯನ್ನು ತೆಗೆಸಿದನು. ಮದಿಸಿದ ರಾಜರು ಬೆನ್ನು ತೋರಿಸಿ ಓಡುವಂತೆ ಮಾಡಿದ ಉತ್ಸಾಹದಿಂದ ಹೊಳಪಿನ ಕಣ್ಣುಗಳಿಂದ ಕೂಡಿ…ಅರಮನೆಯನ್ನು ಪ್ರವೇಶ ಮಾಡಿದನು.

“ಈತನು ಹುಟ್ಟಿದ್ದರಿಂದ ಬ್ರಾಹ್ಮಣ ಜಾತಿಗೆ ಕ್ಶತ್ರಿಯರಿಗಿಂತ ಹೆಚ್ಚಿನ ಮನ್ನಣೆಯುಂಟಾಯಿತು. ಇಂದು ಕ್ಶತ್ರಿಯರು ಹಿಂಸೆ, ಅವಮಾನಗಳನ್ನು ಪಡೆದರು…ಅಂದು ಈ ಅತಿಶಯವಾದ ಬಿಲ್ಲು ಕ್ಶತ್ರಿಯರ ವಶದಲ್ಲಿತ್ತು. ಇಂದು ಇವನ ವಶವಾಯ್ತು. ಸೋತು ಓಡಿಹೋದ ರಾಜರ ಮಾತು ಅದೇತಕ್ಕೆ…ಮಜು …ಪೂತು” ಎಂಬ ಮೆಚ್ಚುಗೆಯ ನುಡಿಗಳನ್ನಾಡುತ್ತ ಜನರು, ಅರ‍್ಜುನನನ್ನು ಕೊಂಡಾಡುತ್ತಿದ್ದರು.

ಅರ‍್ಜುನನು ಗತ್ತಿನ ನಡೆಯಲ್ಲಿ ದ್ರೌಪದಿಯ ಸಮೀಪಕ್ಕೆ ಬಂದನು. “ನೀನು ನನ್ನೊಡನೆ ಬಾ” ಎಂದು ಕರೆದನು. ಅವಳ ಜೊತೆಯಲ್ಲಿ ಬೇಗಬೇಗನೆ ಮನೆಯ ಕಡೆ ತಿರುಗಿದನು. ದ್ರೌಪದಿಯನ್ನು ಕುಂಬಾರನ ಮನೆಯ ಹೊರಗೆ ನಿಲ್ಲಿಸಿ ಅರ‍್ಜುನನು ಕುಂತಿಯ ಪಾದಗಳಿಗೆ ನಮಸ್ಕರಿಸಿದನು.

“ತಾಯೆ, ಬಿನ್ನಹ…ಈ ದಿನ ರಾಜರೆಲ್ಲರನ್ನೂ ಗೆದ್ದು , ಉತ್ತಮವಾದ…ಹೋಲಿಕೆಗೆ ನಿಲುಕದ…ಪವಿತ್ರವಾದ ಮುತ್ತೊಂದನ್ನು ತಂದಿದ್ದೇನೆ” ಎಂದು ಅರ‍್ಜುನನು ವಿನಯದಿಂದ ಹೇಳಿದನು. ಈ ಮಾತು ಕೇಳಿ ಕುಂತಿಯು ತುಂಬಾ ಆನಂದದಿಂದ ಒಳ್ಳೆಯದಾಯಿತು…“ಐವರೂ ಕೂಡಿ ಸುಕವನ್ನು ಪಡೆಯಿರಿ” . ಎಂದಳು.

ತಾಯಿಯು ಹೇಳಿದ್ದಕ್ಕೆ “ತಮ್ಮ ಅನುಗ್ರಹ..ಹಾಗೇ ಆಗಲಿ” ಎಂದು ನುಡಿದು, ಅರ‍್ಜುನನು ದ್ರೌಪದಿಯನ್ನು ಕರೆತಂದು, ಕುಂತಿಗೆ ನಮಸ್ಕಾರ ಮಾಡಿಸಿದನು. “ಮಗನೇ, ನೀನು ತಂದ ಪವಿತ್ರವಾದ ಮುತ್ತು ಇದೆಯೊ…ಶಿವ ಶಿವಾ…ದುಡುಕಿನ ಮಾತನಾಡಿಬಿಟ್ಟೆನಲ್ಲಾ….ನೀವೆಲ್ಲರೂ ಸುಕಪಡಿರಿ ಎಂದುಬಿಟ್ಟೆ…. ಹೆಂಗಸೊಬ್ಬಳು ಅಯ್ದು ಮಂದಿಗೆ ಹೆಂಡತಿಯೆ” ಎಂದು ಆತಂಕಗೊಂಡಳು.

“ಅಮ್ಮಾ, ನಿಮ್ಮ ನುಡಿ ತಪ್ಪದು….ಈಕೆ ನಾವು ಅಯ್ದು ಮಂದಿಗೂ ಹೆಂಡತಿ. ಪೂಜ್ಯಗುರುವಾದ ತಾಯಿಯ ಮಾತನ್ನು ಮಕ್ಕಳು ಮೀರಬಾರದಲ್ಲವೇ” ಎಂದು ಅರ‍್ಜುನ ನುಡಿದರೆ…ದರ‍್ಮರಾಯ ಅರ‍್ಜುನನ ಮೇಲೆ ಕೋಪಿಸಿಕೊಂಡನು….ಬೀಮನು ಇದು ಆಗದು ಎಂದನು….ನಕುಲ ಸಹದೇವರು ಇದು ಉಚಿತವಲ್ಲ ಎಂದರು….ಹೀಗೆ ನಾಲ್ವರೂ ಅರ‍್ಜುನನಿಗೆ ಪ್ರತಿಯಾಗಿ ಹೇಳಿದರು.

ಅದಕ್ಕೆ ಅರ‍್ಜುನನು “ನೀವು ಎಲ್ಲ ಬಗೆಯ ನೀತಿಯ ಸಾರವನ್ನು ಬಲ್ಲಿರಿ. ಇದರಲ್ಲಿ ನಿಮಗೆ ಹೇಳಬೇಕಾದ್ದೇನಿದೆ…ಸಹದೇವ…ನಕುಲ…ನೀವು ಸುಮ್ಮನಿರಿ…ನೀವು ತಿಳಿದವರು…ಸಮಸ್ತ ವೇದ… ದರ‍್ಮಶಾಸ್ತ್ರಗಳಲ್ಲಿ ವಿಚಾರಿಸಿದರೂ…ತಾಯಿಗಿಂತದೊಡ್ಡ ಗುರುವಿಲ್ಲ ಎಂಬುದನ್ನು ನೀವೆಲ್ಲರೂ ತಿಳಿದಿದ್ದೀರಿ” ಎಂದು ತನ್ನ ಅಣ್ಣಂದಿರು ಮತ್ತು ತಮ್ಮಂದಿರಿಗೆ ಹೇಳಿದನು.

“ತಾಯಿಯ ಮಾತನ್ನು ಮೀರಬಾರದು….ದರ‍್ಮರಹಸ್ಯವನ್ನು ತಿಳಿದು, ಅದರಂತೆ ಬಾಳುವವರಿಗೆ…ಲೋಕದ ನಡವಳಿಕೆಯ ಸಂಪ್ರದಾಯದಲ್ಲಿ ಅಂಜಿಕೆಯೇಕೆ… ಲೋಕದ ಅನುಸರಿಸುವಿಕೆ ಏತಕ್ಕೆ…ಯಾವುದು ಪಾಪ ದೂರವಾಗುತ್ತದೆಯೋ ಅದೇ ಒಳ್ಳೆಯ ದರ‍್ಮ. ಅದೇ ಇಹಪರಗಳಿಗೆ ಒಳ್ಳೆಯದು” ಎಂದು ಅರ‍್ಜುನನು ಹೇಳಿದನು.

“ನೀವು ರಾಗ ಕಾಮನೆಗಳ ಸೆಳೆತಕ್ಕೆ ಒಳಗಾಗಿ ಈಕೆಯನ್ನು ಬಯಸುತ್ತಿಲ್ಲ…ದರ‍್ಮಶಾಸ್ತ್ರದ ಆಚರಣೆಗಳನ್ನು ಅನುಸರಿಸಿ ನಡೆಯುವುದಲ್ಲವೇ ನಮ್ಮ ಜವಾಬ್ದಾರಿ… ಗುರುವಚನ ಪಾಲನೆಯೆಂಬ ದರ‍್ಮವನ್ನು ಬಿಡುವುದು ಸರಿಯೇ…ಈಗ ಈಕೆಯು ಅಯ್ವರಿಗೂ ಹೆಂಡತಿಯಾಗುವುದೇ ದರ‍್ಮ: ಎಂದು ಅರ‍್ಜುನನು ತಿಳಿಯ ಹೇಳಿದನು.

“ಸಂಶಯ ಪಡಬೇಡಿ…ಇದರಲ್ಲಿ ಯಾವ ಅನುಮಾನವೂ ಇಲ್ಲ….ದರ‍್ಮದ ಬತ್ತಳಿಕೆಯಲ್ಲಿ ಬಾಣಗಳು ಇರಲಿ. ಅದನ್ನು ಹೊರಗಡೆ ಉಪಯೋಗಿಸದಿರಿ….ಈ ದ್ರೌಪದಿಯು ಹಲವು ಗೂಡುಗಳಿರುವ ಒಂದು ಹಕ್ಕಿ …ಈಕೆಯನ್ನು ನಿರಾಕರಿಸುವ ಮಾತನ್ನು ಆಡಬಾರದು…ಸಾಕು…ನೀವಿನ್ನು ಚಿಂತಿಸಬೇಡಿ” ಎಂದು ಸಮಾದಾನ ಮಾಡಿ ಅರ‍್ಜುನನು ಅವರನ್ನು ಒಪ್ಪಿಸಿದನು. ಆ ಸೋದರರಿಗೆ ಒಪ್ಪಿಗೆಯಾಯಿತು. ಅಯ್ವರು ಸಹೋದರರು ಒಲವು ನಲಿವಿನಿಂದ ದ್ರೌಪದಿಯನ್ನು ಹೆಂಡತಿಯನ್ನಾಗಿ ಪಡೆದರು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *