ಕನ್ನಡದಲ್ಲಿ ಮಾಂಜರಿಮೆ – ಒಂದು ಇಣುಕು ನೋಟ

ಯಶವನ್ತ ಬಾಣಸವಾಡಿ.
Manjarime
ಒಂದು ನಾಡಿನ ಏಳಿಗೆಗೆ ಆ ನಾಡಿನ ಕಲಿಕೆಯ ಏರ‍್ಪಾಟು ತೀರಾ ಮುಕ್ಯವಾದದ್ದು. ಕಲಿಕೆಯ ಏರ‍್ಪಾಟು ತಾಯ್ನುಡಿಯಲ್ಲಿ ಇದ್ದರೆ ಮಾತ್ರ ಹೇಳಿಕೊಡುವ ವಿಶಯವನ್ನು ಮನ ಮುಟ್ಟುವಂತೆ ತಿಳಿಸಿಕೊಡಬಹುದು, ಆ ಮೂಲಕ ಗಟ್ಟಿಯಾದ ಕಲಿಕೆ ರೂಪುಗೊಳ್ಳುತ್ತದೆ. ಈ ಗಟ್ಟಿಯಾದ ತಾಯ್ನುಡಿ ಕಲಿಕೆ ಒಂದು ನಾಡನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ ಎಂಬುದನ್ನು ಮುಂದುವರೆದ ನಾಡುಗಳನ್ನು ನೋಡಿ ತಿಳಿಯಬಹುದು.

ಮಕ್ಕಳಿಗೆ ತಾಯ್ನುಡಿಯಲ್ಲಿ ಕಲಿಸುವುದು ಸರಿ ಎಂದಾದರೆ, ಅದು ಹೇಗೆ ಹಾಗು ಯಾವ ಮಟ್ಟದವರೆಗೆ ಎನ್ನುವ ಕೇಳ್ವಿ ಎದುರಾಗುತ್ತದೆ. ನಾಡಿನ ಏಳಿಗೆಗೆ, ತಾಯ್ನುಡಿಯಲ್ಲಿನ ಕಲಿಕೆಯನ್ನು ಮೊದಲ ಹಂತದ ಕಲಿಕೆಯಿಂದ ಹಿಡಿದು ಹೆಚ್ಚಿನ ಕಲಿಕೆಯವರೆಗೂ ಕಟ್ಟಿಕೊಳ್ಳಬೇಕಿದೆ. ಈ ಹಿನ್ನೆಲೆಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ಮೂಡಬಹುದಾದ ಅಳುಕೆಂದರೆ, ನೆಲವಿಡಿಗೊಳ್ಳುತ್ತಿರುವ (globalization) ಈ ಹೊತ್ತಿನಲ್ಲಿ ಕನ್ನಡದಲ್ಲಿ ಕಲಿಕೆಯ ಏರ‍್ಪಾಟು ತರುವುದು ತರವೆ? ತಂದರೂ ಅದು ಯಾವ ಬಗೆಯಲ್ಲಿ ನಾಡನ್ನು ಕಟ್ಟಿಕೊಳ್ಳಲು ನೆರವಾದೀತು? ಈ ಅಳುಕಿನಿಂದ ನಾವು ಹೊರಬರಬೇಕಿದೆ. ಜಪಾನ್, ಪಿನ್‍ಲ್ಯಾಂಡ್ ಮುಂತಾದ ನಾಡುಗಳಲ್ಲಿ ಮೊದಲ ಕಲಿಕೆಯಿಂದ (primary education) ಹಿಡಿದು ಮಾಂಜರಿಮೆಯಂತಹ (medicine) ಹೆಚ್ಚಿನ ಕಲಿಕೆಯವರೆಗೂ ಅವರು ತಂತಮ್ಮ ತಾಯ್ನುಡಿಯಲ್ಲೇ ಕಲಿಯುತ್ತಾರೆ. ಇದು ಅವರ ಏಳಿಗೆಗೆ ತೊಡಕನ್ನು ಒಡ್ಡುತ್ತಿಲ್ಲ, ಬದಲಾಗಿ ಏಳಿಗೆಗೆ ನೆರವನ್ನು ನೀಡಿ ಆ ನಾಡುಗಳನ್ನು ಮುಂದುವರೆದ ನಾಡುಗಳ ಸಾಲಿಗೆ ಕೊಂಡೊಯ್ದಿದೆ.

ತಂತಮ್ಮ ನುಡಿಗಳಲ್ಲಿ ಹೆಚ್ಚಿನ ಕಲಿಕೆಗಳನ್ನು ಕಲಿಸುತ್ತಿರುವ ನಾಡುಗಳಲ್ಲದೇ, ಇತ್ತೀಚಿಗೆ ಮದ್ದರಿಮೆಯನ್ನು ತಮ್ಮದೇ ನುಡಿಯಲ್ಲಿ ಕಲಿಸಲು ಮುಂದಾಗಿರುವ ವೇಲ್ಸ್ (wales) ನಾಡು ನಮಗೆ ಮಾದರಿಯಾಗಬಲ್ಲದು. ಈ ನಾಡು ಇಂಗ್ಲೆಂಡ್, ಸ್ಕಾಟ್ಲೆಂಡ್ ಹಾಗು ಬಡಗ ಅಯ್ರ್ಲೆಂಡ್ ಜೊತೆ ಸೇರಿ ‘ಯುನಯ್ಟೆಡ್ ಕಿಂಗ್ಡಂ’/’ಒಗ್ಗೂಡಿದ ಅರಸುನಾಡು’ (United Kingdom) ಎಂಬ ಒಕ್ಕೂಟದ ಅಡಿಯಲ್ಲಿ ಬರುತ್ತದೆ. ಯುನಯ್ಟೆಡ್ ಕಿಂಗ್ಡಂ ‘ಇಂಗ್ಲಿಶ್’ ನುಡಿಯ ಜೊತೆ, ಒಕ್ಕೂಟದಡಿಯಲ್ಲಿ ಬರುವ ವೇಲ್ಸ್ ನಾಡಿನ ಮಂದಿಯ ವೆಲ್ಶ್ (welsh) ನುಡಿಯನ್ನೂ ಕೂಡ ಆಡಳಿತ ನುಡಿಯನ್ನಾಗಿ ಒಪ್ಪಿಕೊಂಡಿದೆ. ಈ ಒಕ್ಕೂಟದಲ್ಲಿ ವೆಲ್ಶ್ ನುಡಿಯನ್ನು ಆಡುವವರ ಎಣಿಕೆ 0.5 ಕೋಟಿ ಇದೆ.

ವೇಲ್ಸ್ ನಾಡಿನವರಿಗೆ ಅವರ ನುಡಿಯಲ್ಲೇ ಕಲಿಕೆ ಹಾಗು ಬದುಕುಗಳನ್ನು ಕಟ್ಟಿಕೊಡಬೇಕಾದ ಹೆಚ್ಚುಗಾರಿಕೆಯನ್ನು ಅರಿತ ಅಲ್ಲಿನ ಆಡಳಿತ, 2013 ರಿಂದೀಚೆಗೆ ಇಂಗ್ಲಿಶ್ ನಲ್ಲಿ ಇರುವಂತೆಯೇ, ವೆಲ್ಶ್ ನುಡಿಯಲ್ಲಿಯೂ ಮಾಂಜರಿಮೆಯನ್ನು ಕಲಿಸಲು ಮುಂದಾಗಿದೆ. ಈ ಏರ‍್ಪಾಟು ಹೆಚ್ಚಿನ ಮಟ್ಟದ ಗೆಲುವನ್ನೂ ಕಂಡಿದೆ. ಇದಕ್ಕೆ ಕಾರಣ ವೆಲ್ಶ್ ನುಡಿಯಲ್ಲಿ ಮಾಂಜರಿಮೆಯನ್ನು ಕಲಿಸುತ್ತಿರುವುದರಿಂದ, ವೆಲ್ಶ್ ನುಡಿಯಾಡುವವರಿಗೆ ಮಾಂಜರಿಮೆಯ ಸೇವೆಯನ್ನು ತಲುಪಿಸುವುದು ಸುಳುವಾಗುತ್ತಿದೆ. ಜೊತೆಗೆ ಹಿಂದೆ ಆಗುತ್ತಿದ್ದ ತಿಳಿಸುವ-ತೊಡಕುಗಳು (communication gap) ಕಡಿಮೆಯಾಗಿ, ವೆಲ್ಶ್ ನುಡಿಯಲ್ಲಿ ಮುನ್ನಾರಯ್ಕೆಗೆ (preventive medicine) ಸಂಬಂದಿಸಿದ ವಿಶಯಗಳನ್ನು ಆ ನುಡಿಯಾಡುವವರಿಗೆ ತಿಳಿಹೇಳುವ-ದುಡಿಮೆ (extension work) ಸೊಗಸಾಗಿ ನಡೆಯುತ್ತಿದೆ. ಮಾಂಜರಿಮೆಯ ಗುರಿ ಕೂಡ ಇದೆ ಆಗಿದೆ. ವೇಲ್ಸ್ ನ ಅರ‍್ದ ಕೋಟಿ ಮಂದಿಗೆ ದಕ್ಕಿರುವ ಈ ಬಗೆಯ ಒಳಿತು, ಕರ‍್ನಾಟಕದ ಆರು ಕೋಟಿಗೂ ಹೆಚ್ಚಿನ ಸಂಕೆಯಲ್ಲಿರುವ ಕನ್ನಡಿಗರಿಗೆ ದಕ್ಕ ಬೇಕೆಂದರೆ ಕನ್ನಡದಲ್ಲಿ ಮಾಂಜರಿಮೆ ಬರಬೇಕಿದೆ.

ಮಾಂಜರಿಮೆ ಕಲಿಕೆಯನ್ನು ಕನ್ನಡದಲ್ಲಿ ತರಲು ಹಿಂದೆ ಯಾವುದೇ ಬಗೆಯ ಕೆಲಸಗಳು ನಡೆದಿಲ್ಲವೆ?
ಕನ್ನಡದಲ್ಲಿ ಮಾಂಜರಿಮೆಯನ್ನು ತರುವ ಕೆಲಸ ಹೆಚ್ಚಾಗಿ ನಡೆದಿಲ್ಲ. ಆದರೆ, 1965 ರಶ್ಟು ಹಿಂದೆಯೇ ಡಾ. ಶಿವಪ್ಪನವರು ಈ ದಿಕ್ಕಿನಲ್ಲಿ ದುಡಿದಿದ್ದಾರೆ. ಅವರು ಮದ್ದರಿಮೆಗೆ ಸಂಬಂದಿಸಿದ ಹತ್ತು ಹಲವು ಹೊತ್ತಿಗೆಗಳನ್ನು ಕನ್ನಡದ ಸೊಗಡಿಗೆ ಒಗ್ಗುವಂತೆ ಬರೆದಿದ್ದಾರೆ. ಇವರ ಬರವಣಿಗೆಯ ವಿಶೇಶತೆಯೆಂದರೆ, ಬಳಕೆಯಲ್ಲಿದ್ದ ಹಳ್ಳಿಗಾಡಿನ ಪದಗಳನ್ನೇ ಬಳಸಿ ಹೊಸ ಪದಗಳನ್ನು ಕಟ್ಟಿರುವುದು. ಜೊತೆಗೆ ಇಂಗ್ಲಿಶ್, ಲ್ಯಾಟಿನ್‌, ಪ್ರೆಂಚ್, ಜರ‍್ಮನ್‌, ಇಟಲಿ ಮುಂತಾದ ನುಡಿಗಳ ಮಾಂಜರಿಮೆ ಪದಗಳಿಗೆ ಕನ್ನಡದಲ್ಲಿ ಸಮನಾದ ಪದವನ್ನು ಹುಟ್ಟುಹಾಕಿ ಬರಹಗಳನ್ನು ಬರೆಯತೊಡಗಿದರು. ಇವುಗಳಲ್ಲಿ ತುಂಬಾ ಮಂದಿಮೆಚ್ಚುಗೆ ಪಡೆದ ಕೆಲವು ಹೊತ್ತಿಗೆಗಳೆಂದರೆ ‘ಗುಂಡಿಗೆ ರೋಗದ ಕಯ್ಪಿಡಿ’, ‘ವಯ್ದ್ಯ ಪದಕೋಶ’ ಮತ್ತು ‘ಕಿಡಿನುಡಿ’. ಇವರಂತೆ ಕನ್ನಡದಲ್ಲಿ ಮದ್ದರಿಮೆಯ ಬಗ್ಗೆ ದುಡಿದವರು ಮತ್ತೊಬ್ಬರಿಲ್ಲ.

ಆದರೆ, ಕನ್ನಡದಲ್ಲಿ ಮದ್ದರಿಮೆಯ ಬರಹಗಳನ್ನು ಮಾಡಲು ಹೊರಟ ಹೆಚ್ಚಿನ ಬರಹಗಾರರು ಮದ್ದರಿಮೆಯ ಪದಗಳಿಗೆ ಸಂಸ್ಕ್ರುತದ ಮೊರೆ ಹೋದದ್ದರಿಂದ ಇವು ಸಾಮಾನ್ಯ ಜನರನ್ನು ತಲುಪಲು ಎಡವಿದವು. ಕನ್ನಡದಲ್ಲಿ ಮಾಂಜರಿಮೆಯನ್ನು ಕಟ್ಟಿಕೊಳ್ಳಬೇಕಾದ ಹೆಚ್ಚುಗಾರಿಗೆಯನ್ನು ಬಹಳ ಹಿಂದೆಯೇ ಅರಿತು, ಆ ದಿಕ್ಕಿನಲ್ಲಿ ಪಾಡುಪಟ್ಟ ಶಿವಪ್ಪ ಅವರ ದುಡಿಮೆಯು, ಕನ್ನಡದಲ್ಲಿ ಮಾಂಜರಿಮೆಯ ಬರಹಗಳನ್ನು ಬರೆಯುವ ಮಟ್ಟಿಗೆ ಅಡಿಪಾಯ. ಇನ್ನೇನಿದ್ದರೂ ಕನ್ನಡದ ಅರಿಗರು (scientists) ಈ ಬುನಾದಿಯ ಮೇಲೆ ಮಾಂಜರಿಮೆಯ ವಾಡೆಯನ್ನು (mansion) ಕಟ್ಟಿ ಕನ್ನಡಿಗರ ಏಳಿಗೆಗೆ ದುಡಿಯಬೇಕಿದೆ.

ಇತ್ತೀಚಿಗೆ ಡಾ. ವಸಂತ ಕುಲಕರ‍್ಣಿ ಎನ್ನುವವರು ಮಾಂಜರಿಮೆಯನ್ನು ಕನ್ನಡಕ್ಕೆ ತರುವುದರ ಒಳಿತುಗಳ ಬಗ್ಗೆ ಪ್ರಜಾವಾಣಿ ಸುದ್ದಿಹಾಳೆಯೊಂದರ ಬರಹದಲ್ಲಿ ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಮಾಂಜರಿಮೆಯ ಮಾಳಗಳಲ್ಲಿ (medical field) ಕನ್ನಡದ ವಾತಾವರಣವನ್ನು ಹುಟ್ಟುಹಾಕಲು ಸರ‍್ಕಾರ ಮಾಡಬೇಕಾದ ಕೆಲಸಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮತ್ತಶ್ಟು ಕೆಲಸಗಳು ನಡೆದು ಕನ್ನಡದಲ್ಲಿ ಮಾಂಜರಿಮೆಯ ಸಾದ್ಯತೆಗಳನ್ನು ಸಾಕಾರಗೊಳಿಸಬೇಕಿದೆ.

ಕನ್ನಡಕ್ಕಿದೆ ಕಸುವು:
ಕನ್ನಡದಲ್ಲಿ ಅರಿಮೆಯ ಬರಹಗಳನ್ನು ತರಲು ದುಡಿಯುತ್ತಿರುವ ‘ಹೊನಲು’ ಮಿಂಬಾಗಿಲಿನಲ್ಲಿ ಮಾಂಜರಿಮೆಯ ಬರಹಗಳನ್ನು ಕಳೆದ ಒಂದುವರೆ ವರುಶಗಳಿಂದ ಬರೆಯುತ್ತಿದ್ದೇನೆ. ಡಾ. ಶಿವಪ್ಪ ಅವರು ಪದಗಳನ್ನು ಕಟ್ಟಿರುವ ಬಗೆ ನನ್ನ ಬರಹಗಳಿಗೆ ಅಡಿಪಾಯ. ಬರಹಗಳನ್ನು ಮಾಡುವಾಗ ನಾನು ಕಂಡುಕೊಂಡದ್ದೇನೆಂದರೆ, ಯಾವುದೇ ಮಟ್ಟದ ಮಾಂಜರಿಮೆಯ ಪದಗಳನ್ನು ಕಟ್ಟುವ ಅಳವು ಕನ್ನಡಕ್ಕಿದೆ. ಈ ಬರಹಗಳಲ್ಲಿ ಬಳಸಿರುವ ಕನ್ನಡದ ಬೇರಿನ ಅರಿಮೆಯ ಪದಗಳು ಹೊಸತೆನ್ನಿಸಿದರೂ, ಅವುಗಳನ್ನು ಕಟ್ಟಿದ ಬಗೆಯನ್ನು ಒಮ್ಮೆ ತಿಳಿದುಕೊಂಡರೆ, ಆ ಪದಗಳು ಸಾಮಾನ್ಯ ಕನ್ನಡಿಗನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಎರಡು ಮಾತುಗಳಿಲ್ಲ. ಒಟ್ಟಾರೆ ಹೇಳುವುದಾದರೆ ತಿಳಿಯದ ಹೆರನುಡಿಯ ಪದಗಳಿಗೆ ಮೊರೆಹೋಗದೆ, ಆಡುನುಡಿಗೆ ಹತ್ತಿರವಾದ ಕನ್ನಡ ಬೇರಿನ ಪದಗಳನ್ನು ಬಳಸಿ, ಮಾಂಜರಿಮೆಯ ಬರಹಗಳನ್ನು ಮಾಡಿದರೆ, ನಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಮಾಂಜರಿಮೆಯನ್ನು ತರುವುದರಲ್ಲಿ ಕಂಡಿತ ಗೆಲುವನ್ನು ಕಾಣಬಹುದು.

ಕಡೆ ನುಡಿ:
ವೇಲ್ಸ್ ಅನ್ನೂ ಒಳಗೊಂಡಂತೆ, ಮುಂದುವರೆದ ನಾಡುಗಳು ತಾಯ್ನುಡಿಯಲ್ಲಿ ಮಾಂಜರಿಮೆ ಕಲಿಸುತ್ತಿರುವ ಏರ‍್ಪಾಟುಗಳ ಬಗ್ಗೆ ದೊಡ್ಡ ಮಟ್ಟದ ಚರ‍್ಚೆಯನ್ನು ನಡೆಸಿ, ಅವುಗಳ ಒಳಿತು-ಕೆಡುಕುಗಳನ್ನು ಒರೆಹಚ್ಚಿ, ನಮ್ಮ ನಾಡಿಗೆ ಒಪ್ಪುವಂತೆ, ಮಾರ‍್ಪಡಿಸಿದ ಮಾಂಜರಿಮೆಯ ಕಲಿಕೆಯನ್ನು ಬಳಕೆಗೆ ತರಲು ಸರಕಾರವು ಮುಂದಾಗಬೇಕು. ಇವುಗಳಲ್ಲಿ ಮಾಡಲೇಬೇಕಾದ ಕೆಲವು ಮುಕ್ಯ ಕೆಲಸಗಳೆಂದರೆ;

  1. ಕನ್ನಡದಲ್ಲಿ ಮಾಂಜರಿಮೆಯ ಬರಹಗಾರಿಕೆಗೆ ಮುನ್ನುಡಿಯಾಡಿದ ಡಾ. ಶಿವಪ್ಪನವರ ದುಡಿಮೆಯನ್ನು ಮಾದರಿಯಾಗಿಟ್ಟುಕೊಂಡು, ಇಂದಿನ ಮಟ್ಟದ ಮಾಂಜರಿಮೆಯನ್ನು ಕನ್ನಡಕ್ಕೆ ತರುವುದು. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ ಡಾ. ಶಿವಪ್ಪ ಅವರು ಬರೆದಿರುವ ಮಾಂಜರಿಮೆಯ ಪದನೆರಕೆಯನ್ನು ಅಚ್ಚು ಹಾಕಿಸಲು ಕರ‍್ನಾಟಕ ಸರ‍್ಕಾರ ಮುಂದಾಗಬೇಕು.
  2. ಮಾಂಜರಿಮೆಯ ಕಲಿಕೆವೀಡುಗಳಲ್ಲಿ (college), ಆದಶ್ಟು ಆಡುನುಡಿಯಲ್ಲಿ ಮಾಂಜರಿಮೆಯನ್ನು ಕಲಿಸುವ ಏರ‍್ಪಾಟನ್ನು ಮಾಡುವುದು.
  3. ಕನ್ನಡ/ತಾಯ್ನುಡಿಯಲ್ಲಿ ಮಾಂಜರಿಮೆಯ ಸೇವೆಯನ್ನು ಕಡ್ಡಾಯಗೊಳಿಸುವುದು. ಎತ್ತುಗೆಗೆ, ಮಾಂಜರಿಮೆಯ ಸೇವೆ ಕೊಡುವವರು, ರೋಗಿ/ರೋಗಿಯ ಸಂಬಂದಿಕರೊಡನೆ ಬೇನೆಯ ಬಗ್ಗೆ ಕನ್ನಡದಲ್ಲಿ ತಿಳಿ ಹೇಳುವುದು; ಮದ್ದೋಲೆಯನ್ನು (prescription letter) ತಿಳಿಯುವಂತೆ, ಕನ್ನಡದಲ್ಲಿ ಬರೆದುಕೊಡುವುದು; ಮದ್ದಿನ ಬುರುಡೆಯ (medicine bottle) ಮೇಲೆ ಮದ್ದಿಗೆ ಸಂಬಂದಿಸಿದ ತಿಳುವಳಿಕೆಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳುವುದು.

ಇಂತಹ ಹಲವಾರು ಕೆಲಸಗಳು ಹಂತ ಹಂತವಾಗಿ ನಡೆಯಬೇಕಿದೆ, ಆ ಮೂಲಕ ಕನ್ನಡಿಗರಿಗೆ ಕನ್ನಡದಲ್ಲೇ ಮಾಂಜರಿಮೆಯ ಕಲಿಕೆ ಮತ್ತು ಸೇವೆಗಳು ಸಿಗುವಂತೆ ಮಾಡಬೇಕಿದೆ.

(ಸುದ್ದಿ ಸೆಲೆ: globalpartnership.orgswansea.ac.ukprajavani.net)

(ಚಿತ್ರ ಸೆಲೆ: ಶಿಲ್ಪಶಿವರಾಮು ಕೀಲಾರ)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *