ಗುಪ್ತ ಮಂಚಣ್ಣ ವಚನದ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಗುಪ್ತ ಮಂಚಣ್ಣ
ಕಾಲ: ಕ್ರಿ.ಶ.12ನೆಯ ಶತಮಾನ
ಕಸುಬು: ಬಿಜ್ಜಳ ದೊರೆಯ ಕೋಶಾಗಾರದಲ್ಲಿ ಕರಣಿಕನಾಗಿದ್ದನು
ದೊರೆತಿರುವ ವಚನಗಳು: 100
ಅಂಕಿತ ನಾಮ: ನಾರಾಯಣಪ್ರಿಯ ರಾಮನಾಥ

ಉಳಿಯ ಹಿಡಿಯಲ್ಲಿ
ಕಲೆ ಮಾಡಿಸಿಕೊಂಡ ದೇವರಿಗೆ
ಅಳಿವು ಉಳಿವಲ್ಲದೆ
ಉಳಿಗೆ ಹೊರಗಾದ ಅಳಿಯದವನನರಿಯಾ
ನಾರಾಯಣಪ್ರಿಯ ರಾಮನಾಥ.

ವಿಗ್ರಹರೂಪದಲ್ಲಿ ದೇವರನ್ನು ಕಾಣುವ ಬದಲು, ಜನರ ದಿನ ನಿತ್ಯದ ಒಳ್ಳೆಯ ನಡೆನುಡಿಯಲ್ಲಿ ದೇವರನ್ನು ಕಾಣಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಉಳಿ=ಕಲ್ಲಿನ ಬಂಡೆಗಳನ್ನು ಸೀಳಲು, ಕಲ್ಲು ಚಪ್ಪಡಿಗಳ ಮೇಲೆ ಅಕ್ಕರಗಳನ್ನು ಕೆತ್ತಲು ಮತ್ತು ಕಲ್ಲಿನ ಬಂಡೆಗಳಲ್ಲಿ ಬಗೆಬಗೆಯ ವಿಗ್ರಹಗಳನ್ನು ಕೆತ್ತಿ, ಶಿಲೆಯಿಂದ ಶಿಲ್ಪವನ್ನು ನಿರ‍್ಮಿಸಲು ಕಲ್ಲುಕುಟಿಗರು ಬಳಸುವ ಚೂಪಾದ ಮೊನೆಯುಳ್ಳ ಕಬ್ಬಿಣದ ಉಪಕರಣ; ಈ ಉಪಕರಣವನ್ನು ‘ಚಾಣ/ಟಂಕ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ;

ಹಿಡಿ+ಅಲ್ಲಿ; ಹಿಡಿ=ಕೆಳ ತುದಿಯಲ್ಲಿ ಚೂಪಾದ ಮೊನೆಯಿಂದ ಕೂಡಿರುವ ಉಳಿಯನ್ನು ಹಿಡಿದುಕೊಳ್ಳಲು ಮಾಡಿರುವ ಮೇಲಿನ ತುದಿ/ಹಿಡಿಕೆ; ಕಲೆ=ಶಿಲೆಯಿಂದ ರೂಪುಗೊಂಡಿರುವ ಶಿಲ್ಪ/ಕಲ್ಲಿನಿಂದ ಕೆತ್ತಿರುವ ವಿಗ್ರಹ ; ದೇವರು=ಜೀವನದಲ್ಲಿನ ಎಡರುತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು/ಶಕ್ತಿಯನ್ನು ‘ದೇವರು’ ಎಂದು ಜನಸಮುದಾಯ ಕಲ್ಪಿಸಿಕೊಂಡಿದೆ ಮತ್ತು ನಂಬಿಕೊಂಡಿದೆ;

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರು= ಕಲ್ಲು ಬಂಡೆಯನ್ನು ಉಳಿಯ ಮೊನೆಯ ಪೆಟ್ಟುಗಳಿಂದ ಶಿಲ್ಪಿಯು ಕುಶಲತೆಯಿಂದ ಕೆತ್ತಿದಾಗ ರೂಪುಗೊಂಡ ದೇವರ ಶಿಲ್ಪ;

ಅಳಿವು=ನಾಶವಾಗುವುದು; ಉಳಿವು+ಅಲ್ಲದೆ; ಉಳಿವು=ನಾಶವಾಗದೆ ಇರುವುದು;

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ ಅಳಿವು ಉಳಿವು=ಮಾನವರಿಂದ ನಿರ‍್ಮಾಣಗೊಂಡ ದೇವರ ವಿಗ್ರಹಗಳು ಚಿರಕಾಲ ಉಳಿಯುವುದಿಲ್ಲ. ಏಕೆಂದರೆ ಸಾವಿರಾರು ವರುಶಗಳು ಉರುಳುತ್ತಿದ್ದಂತೆಯೇ ಮಾನವ ಸಮುದಾಯಗಳಲ್ಲಿರುವ ಬೇರೆ ಬೇರೆ ಮತಗಳ ನಡುವೆ ಉಂಟಾಗುವ ಪರಸ್ಪರ ಹಗೆತನದಿಂದಲೋ ಇಲ್ಲವೇ ರಾಜಕೀಯ ಕಾರಣಗಳಿಂದಲೋ ಇಲ್ಲವೇ ಈ ದೇವರಿಗಿಂತ ಆ ದೇವರು ಹೆಚ್ಚು ಎಂಬ ನಂಬಿಕೆಯಿಂದಲೋ, ಮೊದಲು ಇದ್ದ ದೇವರ ವಿಗ್ರಹ ನಾಶಗೊಂಡು, ಅದರ ಜಾಗದಲ್ಲಿ ಮತ್ತೊಂದು ದೇವರ ವಿಗ್ರಹ ನೆಲೆಗೊಳ್ಳುತ್ತದೆ. ಈ ರೀತಿ ಹೊಸದಾಗಿ ನೆಲೆಗೊಂಡ ದೇವರ ವಿಗ್ರಹವೂ ಮುಂದೊಂದು ದಿನ ಮತ್ತೊಂದು ಕಾರಣದಿಂದ ನಾಶವಾಗುತ್ತದೆ. ಕಾಲಾನುಗತಿಯಲ್ಲಿ ಮಾನವರಿಂದ ನಿರ್ಮಾಣಗೊಂಡ ವಿಗ್ರಹರೂಪದ ದೇವರು ಮಾನವರಿಂದಲೇ ಇಲ್ಲವಾಗುತ್ತಿರುತ್ತದೆ;

ಅಲ್ಲದೆ=ಹೊರತುಪಡಿಸಿ; ಹೊರಗೆ+ಆದ; ಹೊರಗಾದ=ಉಳಿಯ ಪೆಟ್ಟಿನಿಂದ ರೂಪುಗೊಳ್ಳದ;

ಅಳಿಯದ+ಅವನ್+ಅನ್+ಅರಿಯಾ; ಅಳಿಯದ=ನಾಶವಾಗದ; ಅನ್=ಅನ್ನು; ಅಳಿಯದವನ್=ಎಂದೆಂದಿಗೂ ನಾಶವಾಗದವನು;

ಅರಿ=ತಿಳಿ; ಅರಿಯಾ=ತಿಳಿದುನೋಡು/ವಾಸ್ತವವನ್ನು ಒರೆಹಚ್ಚಿ ನೋಡು;

ಉಳಿಗೆ ಹೊರಗಾದ ಅಳಿಯದವನು=ಉಳಿಯ ಪೆಟ್ಟುಗಳಿಂದ ರೂಪುಗೊಳ್ಳದ ದೇವರು. ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಜನರ ಒಳ್ಳೆಯ ನಡೆನುಡಿಗಳಲ್ಲಿ ದೇವರು ಶಾಶ್ವತವಾಗಿ ಇರುತ್ತಾನೆಯೆ ಹೊರತು ಕಲ್ಲಿನಿಂದ ಕೆತ್ತಿದ ವಿಗ್ರಹರೂಪದಲ್ಲಿ ದೇವರಿಲ್ಲ ಎಂಬ ತಿರುಳನ್ನು ಸೂಚಿಸುತ್ತವೆ;

ರಾಮನಾಥ=ಶಿವನಿಗೆ ಇದ್ದ ಮತ್ತೊಂದು ಹೆಸರು; ನಾರಾಯಣಪ್ರಿಯ ರಾಮನಾಥ=ಗುಪ್ತ ಮಂಚಣ್ಣನ ವಚನಗಳ ಅಂಕಿತನಾಮ;

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇವರಾದ ಶಿವನನ್ನು ಕಲ್ಲು, ಮಣ್ಣು, ಮರ, ಲೋಹದಿಂದ ಮಾಡಿದ ವಿಗ್ರಹ ರೂಪದಲ್ಲಿ ಕಾಣುತ್ತಿರಲಿಲ್ಲ. ಜನರು ನಿತ್ಯ ಜೀವನದಲ್ಲಿ ಆಚರಿಸುವ ಒಳ್ಳೆಯ ನಡೆನುಡಿಗಳಲ್ಲಿ ಶಿವನ ಪ್ರತಿರೂಪವನ್ನು ಕಾಣುತ್ತಿದ್ದರು.

“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸಗಳು, ತನಗೆ ಮತ್ತು ತನ್ನ ಕುಟುಂಬಕ್ಕೆ ಒಲವು, ನಲಿವು, ನೆಮ್ಮದಿಯನ್ನು ನೀಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *