ಲಿಂಗಮ್ಮನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ.

ಮದ ಮತ್ಸರ ಬಿಡದು
ಮನದ ಕನಲು ನಿಲ್ಲದು
ಒಡಲ ಗುಣ ಹಿಂಗದು
ಇವ ಮೂರನು ಬಿಡದೆ
ನಡಸುವನ್ನಕ್ಕ ಘನವ ಕಾಣಬಾರದು
ಘನವ ಕಾಂಬುದಕ್ಕೆ
ಮದ ಮತ್ಸರವನೆ ಬಿಟ್ಟು
ಮನದ ಕನಲನೆ ನಿಲಿಸಿ
ಒಡಲ ಗುಣ ಹಿಂಗಿ
ತಾ ಮೃಡರೂಪಾದಲ್ಲದೆ
ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.

ವ್ಯಕ್ತಿಯು ತನ್ನ ಮಯ್ ಮನದಲ್ಲಿ ಯಾವಾಗಲೂ ತುಡಿಯುತ್ತಿರುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳಿದಾಗ ಮಾತ್ರ, ಅವನ ಬದುಕು ಉತ್ತಮವಾಗಿ ರೂಪುಗೊಳ್ಳುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಮದ=ಸೊಕ್ಕು/ಗರ್‍ವ; ಮೇಲು-ಕೀಳು ಎಂಬ ಜಾತಿ ವ್ಯವಸ್ತೆ ಮತ್ತು ಬಡವ-ಬಲ್ಲಿದ ಎಂಬ ವರ್‍ಗ ತಾರತಮ್ಯದ ಕಾರಣದಿಂದಾಗಿ ಸಮಾಜದಲ್ಲಿರುವ ಬಹುತೇಕ ವ್ಯಕ್ತಿಗಳ ನಡೆನುಡಿಯಲ್ಲಿ ‘ಜಾತಿ ಮದ’ ಮತ್ತು ‘ಹಣ ಮದ’ ತುಂಬಿ ತುಳುಕುತ್ತಿರುತ್ತದೆ;

ಮಾದಿಗ ಜಾತಿಯಿಂದ ತೊಡಗಿ ಬ್ರಾಹ್ಮಣ ಜಾತಿಯವರೆಗೆ ಮೇಲು ಕೀಳಿನ ಮೆಟ್ಟಲುಗಳಿಂದ ಕೂಡಿರುವ ನೂರೆಂಟು ಬಗೆಯ ಜಾತಿಗಳಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನಗಿಂತ ಕೆಳಹಂತದಲ್ಲಿರುವ ಜಾತಿಯ ಜನರನ್ನು ಕೀಳಾಗಿ ಕಾಣುತ್ತ, ‘ತಾನು ಮೇಲು ಜಾತಿಯವನು’ ಎಂಬ ಸೊಕ್ಕಿನಿಂದ ಕೂಡಿರುತ್ತಾನೆ. ಆದ್ದರಿಂದ ‘ಜಾತಿಮದ’ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿಯೂ ನಾನಾ ಪ್ರಮಾಣದಲ್ಲಿ ಅಂದರೆ ಕೆಲವರಲ್ಲಿ ಹೆಚ್ಚಾಗಿ, ಮತ್ತೆ ಕೆಲವರಲ್ಲಿ ಕಡಿಮೆಯ ಪ್ರಮಾಣದಲ್ಲಿ ನೆಲೆಗೊಂಡಿರುತ್ತದೆ;

ವರ್‍ಗ ತಾರತಮ್ಯದಿಂದಾಗಿ ಬಡತನ ಮತ್ತು ಸಿರಿವಂತಿಕೆಯು ಸಮಾಜದಲ್ಲಿ ನೆಲೆಗೊಂಡಿದೆ. ಚಿನ್ನ, ಬೆಳ್ಳಿ, ಒಡವೆ, ವಸ್ತು, ಆಸ್ತಿ-ಪಾಸ್ತಿಗಳನ್ನು ಹೇರಳವಾಗಿ ಹೊಂದಿರುವ ಸಿರಿವಂತರು ಬಡವರ ಮುಂದೆ ಸೊಕ್ಕಿನಿಂದ ಮೆರೆಯುತ್ತಾರೆ;

ಮತ್ಸರ=ಹೊಟ್ಟೆಕಿಚ್ಚು. ಇತರರಿಗೆ ಹಣ/ಆಸ್ತಿ/ವಿದ್ಯೆ/ಹುದ್ದೆಯು ದೊರೆತಾಗ ವ್ಯಕ್ತಿಯು ಅದನ್ನು ಕಂಡು ಸಂಕಟಕ್ಕೆ ಗುರಿಯಾಗುವುದು; ಬಿಡು=ತೊರೆ/ತ್ಯಜಿಸು;

ಮದ ಮತ್ಸರ ಬಿಡದು=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಮದ ಮತ್ಸರದ ಕೆಟ್ಟ ನಡೆನುಡಿಗಳನ್ನು ಬಿಡದೆ, ಅತ್ಯಂತ ನೀಚನಾಗಿ ಬಾಳುತ್ತಿರುವುದು;

ಮನ=ಮನಸ್ಸು; ಕನಲು=ತಳಮಳ/ಕುದಿ.

ಮನದ ಕನಲು ಬಿಡದು=ವ್ಯಕ್ತಿಯ ಮನದಲ್ಲಿ ನೂರಾರು ಬಗೆಯ ಆಸೆ, ಆತಂಕ, ಆಕ್ರೋಶ, ಹೆದರಿಕೆ, ಹಿಂಜರಿಕೆ, ಹಗೆತನದ ಒಳಮಿಡಿತಗಳು ತುಂಬಿಕೊಂಡು, ಸದಾಕಾಲ ಒಂದಲ್ಲ ಒಂದು ಬಗೆಯ ಸಂಕಟದಲ್ಲಿ ವ್ಯಕ್ತಿಯು ನರಳುತ್ತಿರುವುದು/ಚಡಪಡಿಸುತ್ತಿರುವುದು;

ಒಡಲು=ದೇಹ; ಗುಣ=ನಡತೆ; ಒಡಲ ಗುಣ=ವ್ಯಕ್ತಿಯ ಮಯ್ ಮನದಲ್ಲಿರುವ ಒಳಿತು ಕೆಡುಕಿನ ಒಳಮಿಡಿತಗಳು;

ಹಿಂಗು=ಕಡಿಮೆಯಾಗು/ತಗ್ಗು;

ಒಡಲ ಗುಣ ಹಿಂಗದು=ವ್ಯಕ್ತಿಯು ಜೀವಂತವಾಗಿರುವ ಕೊನೆಯ ಗಳಿಗೆಯವರೆಗೂ ಒಂದಲ್ಲ ಒಂದು ಬಗೆಯ ಕೆಟ್ಟ ಒಳಮಿಡಿತಗಳು ಇದ್ದೇ ಇರುತ್ತವೆ. ಅವು ಸಂಪೂರ್‍ಣವಾಗಿ ನಾಶವಾಗುವುದಿಲ್ಲ;

ನಡಸು+ಅನ್ನಕ್ಕ; ನಡಸು=ಆಚರಿಸು; ಅನ್ನಕ್ಕ=ವರೆಗೆ/ತನಕ; ಘನ=ದೊಡ್ಡದು/ಉತ್ತಮವಾದುದು; ಕಾಣ್=ನೋಡು/ಹೊಂದು/ಪಡೆ;

ಘನವ ಕಾಣು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ದೊಡ್ಡದನ್ನು ಇಲ್ಲವೇ ಉತ್ತಮವಾದುದನ್ನು ಕಾಣುವುದು ಎಂದರೆ ವ್ಯಕ್ತಿಯು ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವುದು;

ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಮದ- ಮತ್ಸರ-ಮನದ ತಳವಳವನ್ನು ಬಿಡುವ ತನಕ, ಅವನ ವ್ಯಕ್ತಿತ್ವ ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳುವುದಿಲ್ಲ. ಅವನು ಬದುಕು ಹಸನಾಗುವುದಿಲ್ಲ;

ಕಾಂಬುದಕ್ಕೆ=ಕಾಣುವುದಕ್ಕೆ/ಪಡೆಯುವುದಕ್ಕೆ;

ಘನವ ಕಾಂಬುದಕ್ಕೆ=ಒಳ್ಳೆಯ ವ್ಯಕ್ತಿತ್ವವನ್ನು ಪಡೆಯುವುದಕ್ಕೆ;

ಮನದ ಕನಲನೆ ನಿಲಿಸಿ=ಮನದ ತಳಮಳವನ್ನು ಹೋಗಲಾಡಿಸಿಕೊಂಡು, ಮನದಲ್ಲಿ ಒಳ್ಳೆಯ ನಿಲುವನ್ನು ತಳೆದು;

ತಾ=ತಾನು/ವ್ಯಕ್ತಿ; ಮೃಡ+ರೂಪ+ಆದಲ್ಲದೆ; ಮೃಡ=ಶಿವ; ರೂಪ=ಆಕಾರ; ಮೃಡರೂಪ=ಶಿವನ ರೂಪ. ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಕಲ್ಲು-ಮಣ್ಣು-ಮರ-ಲೋಹದಿಂದ ಮಾಡಿದ ಲಿಂಗದ ಆಕಾರದಲ್ಲಿ ಶಿವನ ರೂಪವನ್ನು ಕಾಣುತ್ತಿರಲಿಲ್ಲ. ಸಹಮಾನವರಿಗೆ ಮತ್ತು ಸಮಾಜಕ್ಕೆ ಜನರು ಮಾಡುವ ಒಳಿತಿನ ನಡೆನುಡಿಗಳಲ್ಲಿ ಶಿವನ ರೂಪವನ್ನು ಕಾಣುತ್ತಿದ್ದರು.

ಕಾಣಬಾರದು+ಎಂದರು;

ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು=ವ್ಯಕ್ತಿಯು ಒಳ್ಳೆಯ ನಡೆನುಡಿಯನ್ನು ಹೊಂದದಿದ್ದರೆ, ಆತನ ವ್ಯಕ್ತಿತ್ವ ಉತ್ತಮಗೊಳ್ಳುವುದಿಲ್ಲ ಮತ್ತು ಅವನು ಶಿವನನ್ನು ಕಾಣಲಾರ. ಅಂದರೆ ಕೆಟ್ಟ ನಡೆನುಡಿಯುಳ್ಳವರಿಗೆ ಶಿವನು ಒಲಿಯುವುದಿಲ್ಲ;

ಅಪ್ಪಣ್ಣ=ಶಿವಶರಣೆ ಲಿಂಗಮ್ಮನ ಗಂಡ; ಅಪ್ಪಣ್ಣ ಪ್ರಿಯ=ಅಪ್ಪಣ್ಣನಿಗೆ ಆಪ್ತನಾದ; ಚೆನ್ನಬಸವಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ;

ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ=ಲಿಂಗಮ್ಮನು ರಚಿಸಿರುವ ವಚನಗಳ ಅಂಕಿತನಾಮ;

(ಚಿತ್ರ ಸೆಲೆ:  shivasharaneyaru)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *