ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 4 ನೆಯ ಕಂತು – ಪ್ರಜೆಗಳ ಮೊರೆ

– ಸಿ.ಪಿ.ನಾಗರಾಜ.

*** ರಾಜ ಹರಿಶ್ಚಂದ್ರನಲ್ಲಿ ಪ್ರಜೆಗಳ ಮೊರೆ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ ಮೃಗಯಾ ಪ್ರಸಂಗ ’ ಮೂರನೆಯ ಅಧ್ಯಾಯದ 12 ರಿಂದ 16 ರ ವರೆಗಿನ ಅಯ್ದು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಹರಿಶ್ಚಂದ್ರ: ಅಯೋದ್ಯೆಯ ರಾಜ.
ಹರಿಶ್ಚಂದ್ರನ ಪ್ರಜೆಗಳು.
ಬೇಡ ಪಡೆಯ ಒಡೆಯರು.

*** ರಾಜ ಹರಿಶ್ಚಂದ್ರನಲ್ಲಿ ಪ್ರಜೆಗಳ ಮೊರೆ ***

ಆಗ… ಭೂಸುರರು ಮಂತ್ರಾಕ್ಷತೆಯನಿತ್ತು; ಶಿವಭಕ್ತರು ಆಸುರದಿ ಭಸಿತಮಮ್ ಕೊಟ್ಟು; ಉಳಿದ ಜನವೆಲ್ಲ ಲೇಸೆನಿಪ ವಸ್ತುವಮ್ ಕಾಣಿಕೆಯನಿತ್ತು…

ಪ್ರಜೆಗಳು: ಭೂಪ ಚಿತ್ತೈಸು.

(ಎಂದು ದೇಶದೊಳಗಾದ ಖಗಮೃಗದ ಬಾಧೆಯನು ಧರಣೀಶನ್ ಎನಿಸುವ ಹರಿಶ್ಚಂದ್ರರಾಯಂಗೆ ತಮ್ಮ ಆಸರಳಿವಂತೆ ಬಿನ್ನೈಸುತ್ತ ಕೈಮುಗಿಯುತಿರ್ದರು ಏವಣ್ಣಿಸುವೆನು.)

ಪ್ರಜೆಗಳು: ಬಲ್ಲಹ ಚಿತ್ತೈಸು, ಅರಸುಬಾಧೆಗಳಿಲ್ಲ… ಬಿಟ್ಟಿಯೂಳಿಗವಿಲ್ಲ… ಪರನೃಪರ ಭಯವಿಲ್ಲ… ಸಾಲದ ಅಂಡಲೆಯಿಲ್ಲ; ನೆರೆಯೂರ ಕದನವಿಲ್ಲ… ಅದ್ಭುತವ ಏನ್ ಎಂಬೆವು. ಖಗಮೃಗದ ಕಾಟದಿಂದ ಧರೆಯೊಳಗೆ ಬಿತ್ತಿಲ್ಲ… ಬೆಳೆಯಿಲ್ಲ… ನೀರಿಲ್ಲ… ತರಹರಿಸಿ ಹದುಳವಿರಲಿಲ್ಲ. ದುಃಖಮಮ್ ಪರಿಹರಿಸಬೇಕು.

(ಎಂದು ಭೂಜನಮ್ ಮೊರೆಯಿಟ್ಟುದು. ಜಯಲೋಲ ಭೂಪಾಲಕನ್ ಲೀಲೆಯಿಂದ ಓಲಗಮ್ ಕೊಟ್ಟು… )

ಹರಿಶ್ಚಂದ್ರ: ಸಮಸ್ತ ಬೇಂಟೆಯ ಶಬರ ಜಾಲಮಮ್ ಕರೆ ಕರೆ … ಖಗಹೃದಯದ ಶೂಲಮಮ್… ಮೃಗದ ಕಡೆಗಾಲಮಮ್ ಬೇಗ.

(ಎಂದು ಮೇಲೆಮೇಲಾಕ್ರಮಿಸಿ ಕರಸೆ… ಅಮಮ… ನಿಟ್ಟಿಸುವ ಕಣ್ಣಾಲಿ ಕತ್ತಲಿಸೆ… ಕತ್ತಲೆಯ ತತ್ತಿಗಳಂತೆ ಹೋಲಿಕೆಗೆ ಹೊರಗಾಗೆ ಕರ್ಕಶಬೇಡ ಪಡೆ ಒಡೆಯರು ಬರುತಿರ್ದರು…
ಮದಹಸ್ತಿ ಇರಿದ ಘಾಯಂಗಳ; ವರಾಹನ್ ಎತ್ತಿದ ಡೋರುಗಳ; ಮೃಗಾಧಿಪನ್ ಉಗಿದು ಬಗಿದು ತೋಡಿದ ಬಾದಣದ; ಕರಡಿ ಕಾರಿ ಬತ್ತಿದ ತೋಳ; ಹುಲಿ ಹೊಯ್ದು ಜರಿದ ಹೆಗಲ; ಕೋಣಮ್ ಪದದಿ ಹೊಯಿದ ಹೋರ; ಭೇರುಂಡನ್ ಎರಗಿದ ಗಂಟುಗಳ; ಕಡವೆ ತುಳಿದ ಹಜ್ಜೆಗಳ ಚಿಹ್ನದ ಬೇಡನಾಯಕರು ಹರಿಶ್ಚಂದ್ರಭೂನಾಥನ ಓಲಗದೊಳು ನೆರೆದರು. ಕಡವೆಗೆ ಅತ್ಯಾಸ್ವಾದಿಯೆಂಬ; ಉಡು ಮೊಲಗಳಿಗೆ ದಡಿವೊಯ್ಲನೆಂಬ; ಕರಡಿಯ ಗಂಡನೆಂಬ; ಬಿಟ್ಟಡೆ ತೋಳಜಜ್ಝಾರನೆಂಬ; ನರಿದಿನಿಹಿಯಿಂದೆಂಬ ಕುನ್ನಿಗಳನ್ ಆಯ್ದು ಗಡಣದಿಮ್ ಬೇಡ ಪಡೆ ಒಡೆಯರೆಲ್ಲರು ನೆರೆದು, ಪೊಡವಿಪತಿಯಾ ಹರಿಶ್ಚಂದ್ರರಾಯನ ಮುಂದೆ ನಿಂತು..)

ಬೇಡಪಡೆ ಒಡೆಯರು: ನಡೆ ಜೀಯ ತಡವೇಕೆ ಕಣ್ಗೆ ಹಬ್ಬವ ಮಾಡುವೆ ಎಡೆಯ ತೋರುವೆವು.

(ಎಂದರು.)

ತಿರುಳು: ರಾಜ ಹರಿಶ್ಚಂದ್ರನಲ್ಲಿ ಪ್ರಜೆಗಳ ಮೊರೆ

ಆಗ ಭೂಸುರರು ಮಂತ್ರಾಕ್ಷತೆಯನಿತ್ತು=ಅಯೋದ್ಯೆಯ ರಾಜನಾದ ಹರಿಶ್ಚಂದ್ರನ ಬಳಿಗೆ ತಮ್ಮನ್ನು ಪ್ರಾಣಿಪಕ್ಶಿಗಳ ಕಾಟದಿಂದ ಪಾರುಮಾಡುವಂತೆ ಮೊರೆಯಿಡಲು ಬಂದ ಪ್ರಜೆಗಳ ಗುಂಪಿನ ಮುಂದೆ ಇದ್ದ ಬ್ರಾಹ್ಮಣರು ಆಗ ರಾಜನಿಗೆ ಅರಿಸಿನ ಸವರಿದ ಅಕ್ಕಿಯ ಕಾಳುಗಳನ್ನು ನೀಡಿ ಆಶೀರ್ವದಿಸಿದರು;

ಶಿವಭಕ್ತರು ಆಸುರದಿ ಭಸಿತಮಮ್ ಕೊಟ್ಟು=ಪ್ರಜೆಗಳ ಗುಂಪಿನಲ್ಲಿದ್ದ ಶಿವಶರಣರು ರಾಜ ಹರಿಶ್ಚಂದ್ರನಿಗೆ ವಿಬೂತಿಯನ್ನು ಅತಿಶಯವಾದ ಪ್ರೀತಿಯಿಂದ ಕೊಟ್ಟು;

ಉಳಿದ ಜನವೆಲ್ಲ ಲೇಸೆನಿಪ ವಸ್ತುವಮ್ ಕಾಣಿಕೆಯನಿತ್ತು=ಗುಂಪಿನಲ್ಲಿದ್ದ ಉಳಿದ ಜನರೆಲ್ಲರೂ ರಾಜನಿಗೆ ಒಳ್ಳೆಯ ವಸ್ತುಗಳನ್ನು ಕಾಣಿಕೆ ನೀಡಿ;

 ಭೂಪ ಚಿತ್ತೈಸುಎಂದು=ರಾಜನೇ, ನಮ್ಮ ಅಳಲನ್ನು ಮನವಿಟ್ಟು ಕೇಳು ಎಂದು ಮೊರೆಯಿಡುತ್ತ;

ದೇಶದೊಳಗಾದ ಖಗಮೃಗದ ಬಾಧೆಯನು=ನಾಡಿನಲ್ಲಿ ಪಕ್ಶಿಗಳಿಂದ ಮತ್ತು ಪ್ರಾಣಿಗಳಿಂದ ಉಂಟಾದ ಸಂಕಟವನ್ನು ಮತ್ತು ಹಾನಿಯನ್ನು;

ಧರಣೀಶನ್ ಎನಿಸುವ ಹರಿಶ್ಚಂದ್ರರಾಯಂಗೆ=ಬೂಮಂಡಲದಲ್ಲಿ ಹೆಸರಾಂತ ರಾಜನಾಗಿರುವ ಹರಿಶ್ಚಂದ್ರರಾಯನಿಗೆ;

ತಮ್ಮ ಆಸರಳಿವಂತೆ ಬಿನ್ನೈಸುತ್ತ ಕೈಮುಗಿಯುತಿರ್ದರು=ಪ್ರಜೆಗಳೆಲ್ಲರೂ ತಮ್ಮ ಒಡಲ ಸಂಕಟವನ್ನು ಪರಿಹರಿಸುವಂತೆ ಮೊರೆಯಿಡುತ್ತ ರಾಜನಿಗೆ ಕಯ್ ಮುಗಿಯುತ್ತಿದ್ದರು;

ಏನ್ ಬಣ್ಣಿಸುವೆನು=ರಾಜನ ಮುಂದೆ ಪ್ರಜೆಗಳು ತಮ್ಮ ಒಡಲ ಸಂಕಟವನ್ನು ತೋಡಿಕೊಳ್ಳುತ್ತಿರುವ ನೋಟವನ್ನು ಏನೆಂದು ವಿವರಿಸಲಿ. ಇದು ಕವಿಯ ಉದ್ಗಾರದ ಮಾತು;

ಬಲ್ಲಹ ಚಿತ್ತೈಸು=ಬಲಶಾಲಿಯಾದ ರಾಜನೇ, ಈ ನಮ್ಮ ಮೊರೆಯನ್ನು ಮನವಿಟ್ಟು ಕೇಳು;

ಅರಸು ಬಾಧೆಗಳಿಲ್ಲ=ಅಯೋದ್ಯೆಯ ನೆರೆಹೊರೆಯಲ್ಲಿರುವ ರಾಜರಿಂದ ನಮಗೆ ಯಾವುದೇ ಬಗೆಯ ತೊಂದರೆಗಳಿಲ್ಲ;

ಬಿಟ್ಟಿಯೂಳಿಗವಿಲ್ಲ=ಯಾವುದೇ ರಾಜನ ಇಲ್ಲವೇ ಸಿರಿವಂತರ ದಬ್ಬಾಳಿಕೆ ಮತ್ತು ಬಲಾತ್ಕಾರಕ್ಕೆ ಮಣಿದು ಅವರ ಹೇಳಿದ ಕೆಲಸವನ್ನು ಬಿಟ್ಟಿಯಾಗಿ ಮಾಡಿಕೊಡುವಂತಹ ಇಕ್ಕಟ್ಟಿನ ಸಂಕಟವಿಲ್ಲ; ಬಿಟ್ಟಿ+ಊಳಿಗ; ಊಳಿಗ=ಸೇವೆ/ಕೆಲಸ; ಬಿಟ್ಟಿಯೂಳಿಗ=ಪ್ರಾಚೀನ ಕಾಲದಲ್ಲಿ ಇದ್ದಂತಹ ಒಂದು ಆಚರಣೆ; ರಾಜರ/ಸಿರಿವಂತರ/ಬಲಶಾಲಿಗಳ ಬಲಾತ್ಕಾರಕ್ಕೆ ತಲೆಬಾಗಿ, ಅವರು ಹೇಳಿದ ಕೆಲಸವನ್ನು ಬಿಟ್ಟಿಯಾಗಿ ಮಾಡಿಕೊಟ್ಟು, ಅವರಿಂದ ದವಸವನ್ನಾಗಲಿ ಇಲ್ಲವೇ ಹಣವನ್ನಾಗಲಿ ಪಡೆಯದಿರುವುದು;

ಪರನೃಪರ ಭಯವಿಲ್ಲ=ಶತ್ರುರಾಜರ ಹೆದರಿಕೆಯಿಲ್ಲ;

ಸಾಲದ ಅಂಡಲೆಯಿಲ್ಲ=ಸಾಲದ ಬಾದೆಯಿಲ್ಲ. ಅಂದರೆ ಸಾಲಗಾರರ ಕಾಟವಿಲ್ಲ;

ನೆರೆಯೂರ ಕದನವಿಲ್ಲ=ಪಕ್ಕದ ಊರಿನವರೊಡನೆ ನೀರು/ನೆಲ/ಗಡಿಯ ಕಾರಣಕ್ಕಾಗಿ ಯಾವುದೇ ಹೊಡೆದಾಟವಿಲ್ಲ;

ಅದ್ಭುತವ ಏನ್ ಎಂಬೆವು=ಅಚ್ಚರಿಯನ್ನುಂಟುಮಾಡುವಂತೆ ಈಗ ನಡೆಯುತ್ತಿರುವ ಪಿಡುಗನ್ನು ಏನೆಂದು ತಾನೆ ಹೇಳಬಲ್ಲೆವು;

ಖಗಮೃಗದ ಕಾಟದಿಂದ=ಪಕ್ಶಿ ಪ್ರಾಣಿಗಳ ಕಾಟದಿಂದ;

ಧರೆಯೊಳಗೆ ಬಿತ್ತಿಲ್ಲ… ಬೆಳೆಯಿಲ್ಲ… ನೀರಿಲ್ಲ=ಬೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ, ಬೆಳೆಯಿಲ್ಲ, ನೀರಿಲ್ಲ;

ತರಹರಿಸಿ ಹದುಳವಿರಲಿಲ್ಲ=ಕಾಡಿನ ಪ್ರಾಣಿಪಕ್ಶಿಗಳ ಕಾಟದಿಂದಾಗಿ ತತ್ತರಿಸಿ ನಡುಗುತ್ತಿರುವ ನಾವು ನೆಮ್ಮದಿಯನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ;

ದುಃಖಮಮ್ ಪರಿಹರಿಸಬೇಕು ಎಂದು ಭೂಜನಮ್ ಮೊರೆಯಿಟ್ಟುದು=ನಮಗೆ ಬಂದು ಒದಗಿರುವ ಈ ಸಂಕಟವನ್ನು ನಿವಾರಿಸಬೇಕು ಎಂದು ರಾಜನಲ್ಲಿ ಪ್ರಜೆಗಳು ಮೊರೆಯಿಟ್ಟರು.

ಜಯಲೋಲ ಭೂಪಾಲಕನ್ ಲೀಲೆಯಿಂದ ಓಲಗಮ್ ಕೊಟ್ಟು=ಸದಾಕಾಲ ಜಯಶೀಲನಾಗಿರುವ ರಾಜನು ಅಪಾರವಾದ ಕಾಳಜಿಯಿಂದ ತನ್ನ ಒಡ್ಡೋಲಗಕ್ಕೆ ಮಂತ್ರಿ ಸೇನಾದಿಪತಿ ಮತ್ತು ಇತರರ ರಾಜಪ್ರಮುಕರನ್ನು ಕರೆಸಿಕೊಂಡು;

ಸಮಸ್ತ ಬೇಂಟೆಯ ಶಬರ ಜಾಲಮಮ್ ಕರೆ ಕರೆ=ಬೇಟೆಯಾಡುವ ಎಲ್ಲಾ ಬೇಡರ ಸಮುದಾಯವನ್ನು ಈ ಕೂಡಲೇ ಬೇಟೆಗೆ ಸಿದ್ದರಾಗಿ ಬರುವಂತೆ ಆದೇಶ ನೀಡಿರಿ;

ಖಗಹೃದಯದ ಶೂಲಮಮ್=ಹಕ್ಕಿಗಳ ಎದೆಗೆ ಶೂಲವಾಗಿರುವ ಬೇಡರನ್ನು;

ಮೃಗದ ಕಡೆಗಾಲಮಮ್ ಬೇಗಎಂದು ಮೇಲೆಮೇಲಾಕ್ರಮಿಸಿ ಕರಸೆ =ಪ್ರಜೆಗಳ ಸಂಕಟಕ್ಕೆ ಕಾರಣವಾಗಿರುವ ಪ್ರಾಣಿಗಳನ್ನು ಕೊಂದು ಕೊನೆಗಾಣಿಸುವ ಯಮರೂಪಿಗಳಾದ ಬೇಡರನ್ನು ಬೇಗ ಬರುವಂತೆ ಮತ್ತೆ ಮತ್ತೆ ರಾಜಾಜ್ನೆಯನ್ನು ನೀಡಿ ಬೇಡರನ್ನು ಓಲಗಕ್ಕೆ ಕರೆಸಿಕೊಳ್ಳಲು;

ಅಮಮ=ಅಬ್ಬಬ್ಬಾ!;

ನಿಟ್ಟಿಸುವ ಕಣ್ಣಾಲಿ ಕತ್ತಲಿಸೆ=ರಾಜನ ಓಲಗಕ್ಕೆ ಬರುತ್ತಿರುವ ಬೇಡರನ್ನು ನೋಡುತ್ತಿರುವ ಪ್ರಜೆಗಳ ಕಣ್ಣುಗುಡ್ಡೆಗಳಿಗೆ ಕತ್ತಲು ಕವಿಯುತ್ತಿರಲು;

ಕತ್ತಲೆಯ ತತ್ತಿಗಳಂತೆ=ಕತ್ತಲೆಯ ಮೊಟ್ಟೆಗಳಂತೆ;

ಹೋಲಿಕೆಗೆ ಹೊರಗಾಗೆ=ಜಗತ್ತಿನಲ್ಲಿ ಕಪ್ಪಗಿರುವ ಯಾವೊಂದು ವಸ್ತುವಿಗೂ ಕಪ್ಪನೆಯ ಮಯ್ ಬಣ್ಣವುಳ್ಳ ಈ ಬೇಡರನ್ನು ಹೋಲಿಸಲಾಗದು. ಅಂದರೆ ಕಡುಕಪ್ಪು ಬಣ್ಣವುಳ್ಳ ಬೇಡರು;

ಕರ್ಕಶ ಬೇಡ ಪಡೆ ಒಡೆಯರು ಬರುತಿರ್ದರು= ಕಟ್ಟುಮಸ್ತಾದ ದೇಹದ ಬೇಡ ಪಡೆಯ ನೇತಾರರು ರಾಜ ಹರಿಶ್ಚಂದ್ರನ ಒಡ್ಡೋಲಗದಲ್ಲಿ ನೆರೆಯತೊಡಗಿದರು;

ಕಾಡಿನಲ್ಲಿ ಬೇಟೆಯಾಡುವಾಗ ಪ್ರಾಣಿ ಪಕ್ಶಿಗಳ ಕೊಕ್ಕು/ಪಂಜ/ದಂತದ ಪೆಟ್ಟಿಗೆ ಸಿಲುಕಿ ಗಾಯಗೊಂಡಿದ್ದ ಬೇಡರ ಮಯ್ ಮೇಲಿನ ಗಾಯಗಳನ್ನು ಮತ್ತು ಮಚ್ಚೆಗಳನ್ನು ಈ ಮುಂದಿನ ವರ್ಣನೆಯಲ್ಲಿ ನೀಡಲಾಗಿದೆ.

ಮದಹಸ್ತಿ ಇರಿದ ಘಾಯಂಗಳ=ಮದಿಸಿದ ಆನೆಯ ದಂತಗಳಿಂದ ಇರಿದ ಗಾಯಗಳ;

ವರಾಹನ್ ಎತ್ತಿದ ಡೋರುಗಳ=ಹಂದಿಯು ಕೋರೆಹಲ್ಲುಗಳಿಂದ ಸಿಗಿದಾಗ ಆದ ಸೀಳುಗಳ;

ಮೃಗಾಧಿಪನ್ ಉಗಿದು ಬಗಿದು ತೋಡಿದ ಬಾದಣದ=ಸಿಂಹವು ಪಂಜಗಳಿಂದ ಸೀಳಿ ಕತ್ತರಿಸಿ ಮಾಂಸಕಂಡವನ್ನು ಹೊರತೆಗೆದಾಗ ಬಿದ್ದ ತೂತುಗಳ;

ಕರಡಿ ಕಾರಿ ಬತ್ತಿದ ತೋಳ=ಕರಡಿಯ ಉಗುರುಗಳ ಗೋರುವಿಕೆಯಿಂದ ಮಾಂಸಕಂಡವಿಲ್ಲದ ತೋಳಿನ;

ಹುಲಿ ಹೊಯ್ದು ಜರಿದ ಹೆಗಲ=ಹುಲಿಯ ಪಂಜಗಳ ಹೊಡೆತಕ್ಕೆ ಸಿಲುಕಿ ಇಳಿಬಿದ್ದಿರುವ ಹೆಗಲಿನ;

ಕೋಣಮ್ ಪದದಿ ಹೊಯಿದ ಹೋರ=ಕೋಣನ ಕಾಲ್ತುಳಿತದಿಂದಾದ ತೂತಿನ;

ಭೇರುಂಡನ್ ಎರಗಿದ ಗಂಟುಗಳ=ಎರಡು ಕತ್ತುಗಳನ್ನುಳ್ಳ ಬೇರುಂಡ ಹಕ್ಕಿಯು ಮೇಲೆರಗಿ ಕುಕ್ಕಿದಾಗ ಉಂಟಾದ ಗಂಟುಗಳ;

ಕಡವೆ ತುಳಿದ ಹಜ್ಜೆಗಳ ಚಿಹ್ನದ ಬೇಡನಾಯಕರು==ಜಿಂಕೆಗಳ ಕಾಲ್ತುಳಿತದ ಹಜ್ಜೆ ಗುರುತಿನಿಂದಾಗಿರುವ ಮಚ್ಚೆಗಳನ್ನುಳ್ಳ ಬೇಡನಾಯಕರು;

ಹರಿಶ್ಚಂದ್ರಭೂನಾಥನ ಓಲಗದೊಳು ನೆರೆದರು=ರಾಜ ಹರಿಶ್ಚಂದ್ರನ ಓಲಗದಲ್ಲಿ ಸೇರಿದರು;

ಕಡವೆಗೆ ಅತ್ಯಾಸ್ವಾದಿಯೆಂಬ=ಜಿಂಕೆಯನ್ನು ಬೇಟೆಯಾಡುವುದರಲ್ಲಿ ಪರಿಣತಿಯನ್ನು ಹೊಂದಿದ್ದ ‘ಅತ್ಯಾಸ್ವಾದಿ’ ಎನ್ನುವ ಬೇಟೆನಾಯಿ;

ಉಡು ಮೊಲಗಳಿಗೆ ದಡಿವೊಯ್ಲನೆಂಬ= ಉಡು ಮತ್ತು ಮೊಲಗಳನ್ನು ಬೇಟೆಯಾಡುವದರಲ್ಲಿ ಪರಿಣತಿಯನ್ನು ಪಡೆದಿದ್ದ ‘ದಡಿವೊಯ್ಲ’ ಎನ್ನುವ ಬೇಟೆನಾಯಿ;

ಕರಡಿಯ ಗಂಡನೆಂಬ ಬೇಟೆ ನಾಯಿ;

ಬಿಟ್ಟಡೆ ತೋಳಜಜ್ಝಾರನೆಂಬ=ಬಿಟ್ಟರೆ ಸಾಕು ಮುನ್ನುಗ್ಗಿ ತೋಳನನ್ನು ಬೇಟೆಯಾಡುವದರಲ್ಲಿ ಪರಿಣತಿಯನ್ನು ಪಡೆದಿದ್ದ ‘ತೋಳಜಜ್ಝಾರ’ ಎನ್ನುವ ಬೇಟೆನಾಯಿ;

ನರಿದಿನಿಹಿಯಿಂದೆಂಬ=ನರಿಯನ್ನು ಬೇಟೆಯಾಡುವುದರಲ್ಲಿ ಪರಿಣತಿಯನ್ನು ಪಡೆದಿದ್ದ ‘ನರಿದಿನಿಹಿ’ ಎಂಬ ಹೆಸರನ್ನುಳ್ಳ ಬೇಟೆನಾಯಿ;

ಕುನ್ನಿಗಳನ್ ಆಯ್ದು=ಬೇಟೆನಾಯಿಗಳನ್ನು ಆಯ್ದುಕೊಂಡು;

ಬೇಡ ಪಡೆ ಒಡೆಯರೆಲ್ಲರು ಗಡಣದಿಮ್ ನೆರೆದು=ಬೇಡ ಪಡೆಯ ನೇತಾರರೆಲ್ಲರೂ ಗುಂಪುಗೂಡಿ;

ಪೊಡವಿಪತಿಯಾ ಹರಿಶ್ಚಂದ್ರರಾಯನ ಮುಂದೆ= ಬೂಮಂಡಲದ ಒಡೆಯನಾದ ಹರಿಶ್ಚಂದ್ರರಾಯನ ಮುಂದೆ ನಿಂತುಕೊಂಡು, ;

“ಕಣ್ಣಿಗೆ ಹಬ್ಬವ ಮಾಡುವ ಎಡೆ” ಎಂದರೆ ಬೇಟೆಯಾಡುವುದಕ್ಕೆ ಅತಿಹೆಚ್ಚಿನ ಪ್ರಾಣಿಪಕ್ಶಿಗಳು ಸಿಗುವ ಕಾಡಿನ ಪ್ರದೇಶ.

ನಡೆ ಜೀಯ, ತಡವೇಕೆ… ಕಣ್ಗೆ ಹಬ್ಬವ ಮಾಡುವ ಎಡೆಯ ತೋರುವೆವು ಎಂದರು=ಬೇಡ ಪಡೆಯ ನೇತಾರರು ರಾಜ ಹರಿಶ್ಚಂದ್ರನಿಗೆ “ನಡೆಯಿರಿ ಸ್ವಾಮಿ, ತಡವೇಕೆ… ನಿಮ್ಮ ಕಣ್ಣಿಗೆ ಹಬ್ಬವನ್ನುಂಟುಮಾಡುವ ಜಾಗವನ್ನು ತೋರಿಸುತ್ತೇವೆ“ ಎಂದರು.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *