ನಾವೇಕೆ ಬಯ್ಯುತ್ತೇವೆ? – 9ನೆಯ ಕಂತು

– ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

“ಕೆಲವೇ ಬಗೆಯ ಪದಗಳನ್ನು ಮಾತ್ರ ಜನರು ಏಕೆ ಬಯ್ಗುಳವಾಗಿ ಬಳಸುತ್ತಾರೆ?” ಎಂದು ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬುವವರು ಕೇಳಿದ ಎರಡನೆಯ ಪ್ರಶ್ನೆಗೆ ಉತ್ತರವನ್ನು ವಿಜ್ನಾನಿಗಳು ನುಡಿ ಸಮುದಾಯದ ಸಾಮಾಜಿಕ ರಚನೆಯ ಸ್ವರೂಪದಲ್ಲಿ ಮತ್ತು ಸಂಸ್ಕ್ರುತಿಯ ಆಚರಣೆಯ ನೆಲೆಯಲ್ಲಿ ಅರಸಿದ್ದಾರೆ.

ನಾವು ನಿತ್ಯವೂ ಆಡುತ್ತಿರುವ ನುಡಿಯಲ್ಲಿ ಯಾತಕ್ಕಾಗಿ ಕೆಲವು ಬಗೆಯ ಪದಗಳು ಮಾತ್ರ ಬಯ್ಗುಳದ ನುಡಿಗಳಾಗಿ ಬಳಕೆಯಾಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕಾದರೆ “ಯಾವ ಬಗೆಯ ಪದಗಳನ್ನು ನುಡಿ ಸಮುದಾಯ ಬಯ್ಗುಳವೆಂದು ಪರಿಗಣಿಸಿದೆ?… ಇದಕ್ಕೆ ಕಾರಣವಾದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸಂಗತಿಗಳೇನು? ” ಎಂಬುದನ್ನು ತಿಳಿದುಕೊಳ್ಳಬೇಕು.

ಪ್ರತಿಯೊಂದು ನುಡಿ ಸಮುದಾಯದಲ್ಲಿಯೂ ಬಳಕೆಯಾಗುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳು ಅಂದರೆ “ಮಾತಿನ ದನಿಗಳು, ಪದಗಳು ಮತ್ತು ವಾಕ್ಯಗಳು ”ಆಯಾಯ ನುಡಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸಂಗತಿಗಳಿಂದ ರೂಪುಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ನಿತ್ಯ ಜೀವನದ ಮಾತುಕತೆಗಳಲ್ಲಿ ಬಳಸುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳಿಗೆ ಸಂಬಂದಿಸಿದ ಸಂಗತಿಗಳನ್ನು ಅರಿತುಕೊಳ್ಳಲು ಕನ್ನಡ ಜನಸಮುದಾಯದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸ್ವರೂಪವನ್ನು ಮೊದಲು ತಿಳಿದುಕೊಳ್ಳಬೇಕು,

ಕನ್ನಡ ನುಡಿ ಸಮುದಾಯದ ಸಾಮಾಜಿಕ ರಚನೆಯ ಸ್ವರೂಪ

ಕರ‍್ನಾಟಕ ರಾಜ್ಯದಲ್ಲಿ ಹಿಂದು, ಜೈನ, ಬೌದ್ದ, ಸಿಕ್ , ಇಸ್ಲಾಂ, ಕ್ರಿಶ್ಚಿಯನ್ ಮತ್ತು ಇನ್ನಿತರ ಮತಗಳಿಗೆ ಸೇರಿದ ಹಾಗೂ ಅನೇಕ ಬುಡಕಟ್ಟುಗಳ ಜನರು ನೆಲೆಸಿದ್ದಾರೆ. ರಾಜ್ಯದ ಸುಮಾರು ಏಳು ಕೋಟಿ ಜನಸಂಕೆಯಲ್ಲಿ ಶೇ 65ರಶ್ಟು ಮಂದಿ ಕನ್ನಡವನ್ನು ತಾಯ್ನುಡಿಯಾಗಿ ಹೊಂದಿದ್ದಾರೆ. ಕನ್ನಡ ನುಡಿಗರಲ್ಲಿ ಹೆಚ್ಚಿನ ಮಂದಿ ಹಿಂದುಗಳಾಗಿದ್ದಾರೆ. ಹಿಂದು ಮತವೆಂಬುದು ಹತ್ತಾರು ಬಗೆಯ ಜಾತಿ, ನೂರಾರು ಬಗೆಯ ಉಪಜಾತಿಗಳಿಂದ ಹೆಣೆದುಕೊಂಡಿದೆ. ಈ ಜಾತಿ ಉಪಜಾತಿಗಳೆಲ್ಲವೂ ಮೇಲುಕೀಳಿನ ಮೆಟ್ಟಿಲುಗಳಿಂದ ಕೂಡಿವೆ. ಜಾತಿ ತಾರತಮ್ಯದ ಜತೆಗೆ ವರ‍್ಗ ತಾರತಮ್ಯವು ಕನ್ನಡ ಸಮುದಾಯದಲ್ಲಿದೆ.

‘ವರ‍್ಗ ತಾರತಮ್ಯ’ ಎಂದರೆ ಆಸ್ತಿಪಾಸ್ತಿ ಹಣಕಾಸು ಒಡವೆ ವಸ್ತುಗಳನ್ನು ಬೇರೆಬೇರೆ ಪ್ರಮಾಣದಲ್ಲಿ ಹೊಂದಿರುವುದು. ಬಡವರು, ಮದ್ಯಮ ಕೆಳವರ‍್ಗದವರು , ಮದ್ಯಮ ವರ‍್ಗದವರು , ಮದ್ಯಮ ಮೇಲುವರ‍್ಗದವರು , ಶ್ರೀಮಂತರು ಎಂಬ ವರ‍್ಗ ತಾರತಮ್ಯಗಳಿವೆ. ಜಾತಿ ಮತ್ತು ವರ‍್ಗ ತಾರತಮ್ಯದ ಜತೆಜತೆಗೆ ಲಿಂಗ ತಾರತಮ್ಯವೂ ದೊಡ್ಡದಾಗಿ ಎದ್ದು ಕಾಣುತ್ತದೆ. ಲಿಂಗವೆಂದರೆ ಮಾನವ ಸಮುದಾಯದಲ್ಲಿ ಹೆಣ್ಣು ಮತ್ತು ಗಂಡುಗಳನ್ನು ಗುರುತಿಸುವುದು. ಸಮಾಜದ ಎಲ್ಲಾ ರಂಗಗಳ ಗದ್ದುಗೆಗಳಲ್ಲಿ ಗಂಡಸರ ಪಾಲು ಹೆಚ್ಚಿನದಾಗಿದೆ. ಹೆಣ್ಣು ಎಲ್ಲಾ ರೀತಿಯಿಂದಲೂ ಸಾಮಾಜಿಕವಾಗಿ ಎರಡನೆಯ ದರ‍್ಜೆಯ ವ್ಯಕ್ತಿಯಾಗಿದ್ದಾಳೆ. ಈ ರೀತಿ ಕನ್ನಡ ನುಡಿ ಸಮುದಾಯದವರು ಜಾತಿ, ವರ‍್ಗ ಮತ್ತು ಲಿಂಗ ತಾರತಮ್ಯವುಳ್ಳ ಸಮಾಜದಲ್ಲಿ ಬಾಳುತ್ತಿದ್ದಾರೆ.

ಕನ್ನಡ ನುಡಿ ಸಮುದಾಯದ ಸಾಂಸ್ಕ್ರುತಿಕ ಆಚರಣೆಗಳ ಸ್ವರೂಪ

ಸಂಸ್ಕ್ರುತಿ ಎಂದರೆ ಜನರು ತಮ್ಮ ನಿತ್ಯ ಜೀವನದಲ್ಲಿ ಆಚರಿಸುವಂತಹ ನಡೆನುಡಿಗಳು. ಈ ನಡೆನುಡಿಗಳು ಆಯಾಯ ಜಾತಿ ಮತದವರು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ಅನುಗುಣವಾಗಿರುತ್ತವೆ. ಕನ್ನಡ ನುಡಿ ಸಮುದಾಯದಲ್ಲಿರುವ ಜಾತಿಗಳ ಮತ್ತು ಮತಗಳ ರಚನೆಗೆ ಅನುಗುಣವಾಗಿ ಆಯಾಯ ಜಾತಿ ಮತದವರು ಹುಟ್ಟು ಮದುವೆ ಸಾವಿನ ಸನ್ನಿವೇಶಗಳಲ್ಲಿ ಮತ್ತು ತಮ್ಮ ಮನೆ ದೇವರುಗಳನ್ನು ಪೂಜಿಸುವಾಗ ಮಾಡುವ ಆಚರಣೆಗಳು ಬೇರೆ ಬೇರೆ ಬಗೆಯಲ್ಲಿವೆ.

ಈಗ ಮೊದಲ ಹಂತದಲ್ಲಿ ಬಯ್ಯುವಿಕೆ ಎಂದರೇನು? ಯಾವ ಬಗೆಯ ನುಡಿ ಸಾಮಗ್ರಿಗಳು ಬಯ್ಗುಳವಾಗಿ ಬಳಕೆಯಾಗುತ್ತವೆ? ಎಂಬುದನ್ನು ನೋಡೋಣ.

ಯಾವುದೇ ಒಬ್ಬ ವ್ಯಕ್ತಿ/ಜೀವಿ/ವಸ್ತುವನ್ನು ಕುರಿತು ತೆಗಳುವ ಇಲ್ಲವೇ ಹಾಳಾಗುವಂತೆ ಶಪಿಸುವ ಮಾತಿನ ಕ್ರಿಯೆಯನ್ನು ಬಯ್ಯುವಿಕೆಯೆಂದು ಕರೆಯುತ್ತಾರೆ. ಈ ರೀತಿ ತೆಗಳುವಾಗ ಇಲ್ಲವೇ ಶಪಿಸುವಾಗ ಬಳಸುವ ನುಡಿ ಸಾಮಗ್ರಿಗಳನ್ನು ಬಯ್ಗುಳಗಳೆಂದು ಗುರುತಿಸುತ್ತಾರೆ.

‘ಬಯ್ + ಗುಳ್’ ಎಂಬ ಎರಡು ಪದಗಳು ಜತೆಗೂಡಿ ಬಯ್ಗುಳ ಎಂಬ ಪದ ರೂಪಗೊಂಡಿದೆ. ‘ಬಯ್’ ಎಂಬ ಕ್ರಿಯಾಪದಕ್ಕೆ “ಕೆಟ್ಟ ಮಾತನ್ನಾಡು; ಜರೆ; ತೆಗಳು; ನಿಂದಿಸು” ಎಂಬ ತಿರುಳಿದೆ. “ಕೂಡಿರುವುದು/ಹೊಂದಿರುವುದು” ಎಂಬ ತಿರುಳನ್ನು ಸೂಚಿಸುವ ‘ಗುಳ್’ ಎಂಬ ಪ್ರತ್ಯಯ ಸೇರಿ ‘ಬಯ್ಗುಳ್’ ಎಂಬ ನಾಮಪದ ರೂಪುಗೊಂಡು, ಜನರ ಬಾಯಲ್ಲಿ ‘ಬಯ್ಗುಳ’ ಎಂಬ ರೂಪದಲ್ಲಿ ಉಚ್ಚಾರಣೆಗೊಳ್ಳುತ್ತಿದೆ. ಬಯ್ಗುಳ ಎಂಬ ನಾಮಪದಕ್ಕೆ “ಜರಿಯುವಿಕೆ; ತೆಗಳಿಕೆ; ಮೂದಲಿಕೆ; ಶಪಿಸುವಿಕೆ” ಎಂಬ ತಿರುಳಿಗಳಿವೆ.

ನಮ್ಮೆಲ್ಲರ ನಿತ್ಯ ಜೀವನದ ಸಾಮಾಜಿಕ ಸನ್ನಿವೇಶಗಳಲ್ಲಿ “ಅವರು ನನ್ನನ್ನು ಬಯ್ದರು” ಎಂಬ ಮಾತನ್ನು ಇತರರಿಂದ ಕೇಳುತ್ತಿರುತ್ತೇವೆ ಇಲ್ಲವೇ ನಾವೇ ಹೇಳುತ್ತಿರುತ್ತೇವೆ. ಅಂತಹ ಸನ್ನಿವೇಶಗಳಲ್ಲಿ ಯಾವ ಬಗೆಯ ಮಾತುಗಳು ಬಳಕೆಯಾದುವು ಎಂಬುದನ್ನು ಒರೆಹಚ್ಚಿ ನೋಡಿದಾಗ ಯಾವ ಬಗೆಯ ನುಡಿಗಳು ಬಯ್ಗುಳವಾಗಿ ಬಳಕೆಗೊಳ್ಳುತ್ತವೆ ಎಂಬುದು ತಿಳಿದುಬರುತ್ತದೆ.

ಉದಾಹರಣೆ:

1. “ಈ ರೀತಿ ಪ್ರತಿನಿತ್ಯ ಕಚೇರಿಗೆ ನೀನು ತಡವಾಗಿ ಬಂದರೆ ನಿನ್ನನ್ನು ಕೆಲಸದಿಂದ ತೆಗೆಯಬೇಕಾಗುತ್ತದೆ.”

2. “ಇದೇ ರೀತಿ ನೀನು ದುಂದು ವೆಚ್ಚ ಮಾಡುತ್ತಿದ್ದರೆ ಇನ್ನು ಮುಂದೆ ನಾನು ನಿನ್ನ ಕಯ್ಗೆ ಒಂದು ರೂಪಾಯನ್ನೂ ಕೊಡೂದಿಲ್ಲ.”

3. “ನೀನು ಇದೇ ರೀತಿ ಆಡುತ್ತಿದ್ದರೆ ನಿನ್ನ ಕಯ್ ಕಾಲ್ ಮುರಿದು ಒಂದು ಕಡೆ ಕುಂತ್ಕೊಳುವಂಗೆ ಮಾಡ್ತೀನಿ.”

4. “ನನ್ನ ಕೆಣಕಬೇಡ. ನಂಗೇ ಕೋಪ ಬಂದರೆ ಎದ್ದು ಬಂದು ಎದೆಗೆ ಒದ್ದು ನಡ ಮುರಿತೀನಿ.”

5. “ಏನೋ ತಾಯ್ಗಂಡ ನನ್ಮಗ್ನೆ… ಸಾಲ ತಕೊಂಡ್ ಮ್ಯಾಲೆ ದುಡ್ಡ ಸರಿಯಾದ ಟೇಮಿಗೆ ಕೊಡಬೇಕು ಅನ್ನು ಗ್ಯಾನ ಇಲ್ವಲ್ಲೋ ನಿಂಗೆ.”

6. “ಏನೇ ಹಾದರಗಿತ್ತಿ… ನಮ್ಮ ಮನೆ ಮುಳುಗಿಸ್ಬುಟ್ಟಲ್ಲೆ.”

ಮೇಲ್ಕಂಡ ಆರು ಬಗೆಯ ಮಾತುಗಳಲ್ಲಿ ಮೊದಲ ಎರಡು ಬಗೆಗಳಲ್ಲಿ “ಕೆಲಸದಿಂದ ತೆಗೆಯುವ ಮತ್ತು ದುಡ್ಡನ್ನು ಕೊಡದಿರುವ” ಎಚ್ಚರಿಕೆಯ ನುಡಿಗಳಿವೆ. ಅನಂತರದ ಎರಡು ಬಗೆಗಳಲ್ಲಿ “ಕಾಲನ್ನು ಮುರಿದು ಮತ್ತು ಎದೆಗೆ ಒದ್ದು ನಡ ಮುರಿದು” ದೇಹದ ಮೇಲೆ ಹಲ್ಲೆಯನ್ನು ಮಾಡುವ ಬೆದರಿಕೆಯ ನುಡಿಗಳಿವೆ. ಈ ನಾಲ್ಕು ಬಗೆಗಳಲ್ಲಿ ಬಳಕೆಯಾಗಿರುವ ಪದಗಳು ಎಚ್ಚರಿಕೆಯ ಇಲ್ಲವೇ ಬೆದರಿಕೆಯ ನುಡಿಗಳೇ ಹೊರತು ಬಯ್ಗುಳದ ಪದಗಳಲ್ಲ. ಕೊನೆಯ ಎರಡು ಬಗೆಗಳಲ್ಲಿ ಬಳಕೆಯಾಗಿರುವ “ತಾಯಿಗಂಡ ಮತ್ತು ಹಾದರಗಿತ್ತಿ” ಎಂಬ ಪದಗಳನ್ನು ಮಾತ್ರ ಬಯ್ಗುಳವೆಂದು ಕರೆಯುತ್ತಾರೆ.

‘ತಾಯ್ಗಂಡ’ ಎಂಬ ಪದ ಬಯ್ಗುಳವಾಗಿ ಬಳಕೆಯಾಗಲು ಕಾರಣವನ್ನು ತಿಳಿಯಬೇಕಾದರೆ ಅದನ್ನು ಕನ್ನಡ ನುಡಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸಂಗತಿಯ ಹಿನ್ನೆಲೆಯಲ್ಲಿ ನೋಡಬೇಕು, ಕನ್ನಡ ನುಡಿ ಸಮುದಾಯಕ್ಕೆ ಸೇರಿದ ಕುಟುಂಬಗಳಲ್ಲಿ “ಗಂಡು ಹೆಣ್ಣುಗಳ ನಡುವೆ ಯಾರು ಯಾರೊಡನೆ ಕಾಮದ ನಂಟನ್ನು ಹೊಂದಬಹುದು ಇಲ್ಲವೇ ಹೊಂದಬಾರದು” ಎಂಬುದಕ್ಕೆ ತಲೆತಲಾಂತರಗಳಿಂದಲೂ ನಡೆದುಬರುತ್ತಿರುವ ಬಹುಬಗೆಯ ಸಂಪ್ರದಾಯದ ಕಟ್ಟುಪಾಡುಗಳಿವೆ.

ವ್ಯಕ್ತಿಯು ತನ್ನನ್ನು ಹೆತ್ತ ತಾಯಿಯನ್ನು ಕಾಮದ ಬಯಕೆಯಿಂದ ನೋಡುವುದಾಗಲಿ ಇಲ್ಲವೇ ತಾಯಿಯೊಡನೆ ಕಾಮದ ನಂಟನ್ನು ಪಡೆಯುವುದನ್ನು ಬಹು ದೊಡ್ಡ ತಪ್ಪು ಎಂದು ಸಮಾಜ ಪರಿಗಣಿಸಿದೆ. ಈ ಬಗೆಯ ತಪ್ಪನ್ನು ಮಾಡಿದವನನ್ನು ‘ತಾಯಿಗಂಡ’ ಎನ್ನುತ್ತಾರೆ. ಈ ಬಗೆಯ ಕಾಮದ ನಂಟನ್ನು ಅತಿ ದೊಡ್ಡ ಸಾಮಾಜಿಕ ಕಳಂಕವೆಂದು ಜನಸಮುದಾಯ ನಂಬಿದೆ. ‘ಸಾಮಾಜಿಕ ಕಳಂಕ ’ ಎಂದರೆ ಸಮಾಜಕ್ಕೆ ಒಪ್ಪಿತವಲ್ಲದ ಮತ್ತು ಸಮಾಜಕ್ಕೆ ಹಾನಿಯನ್ನುಂಟುಮಾಡುವ ನಡೆನುಡಿ.

‘ಹಾದರ’ ಎಂಬ ಪದಕ್ಕೆ ‘ಗಿತ್ತಿ’ ಎಂಬ ಪ್ರತ್ಯಯ ಸೇರಿ ‘ಹಾದರಗಿತ್ತಿ’ ಎಂಬ ಪದ ರೂಪುಗೊಂಡಿದೆ. ‘ಹಾದರ’ ಎಂದರೆ ಒಂದು ಗಂಡು ಇಲ್ಲವೇ ಹೆಣ್ಣು ಸಮಾಜ ಒಪ್ಪಿತವಲ್ಲದ ರೀತಿಯಲ್ಲಿ ಕಾಮದ ನಂಟನ್ನು ಹೊಂದಿರುವುದು. ಯಾವುದೇ ಒಂದು ಹೆಣ್ಣು ಈ ರೀತಿ ಕೆಟ್ಟ ನಂಟನ್ನು ಹೊಂದಿದ್ದರೆ, ಅವಳನ್ನು ಹಾದರಗಿತ್ತಿ ಎಂದು ಕರೆಯುತ್ತಾರೆ. ಗಂಡಾಗಲಿ ಇಲ್ಲವೇ ಹೆಣ್ಣಾಗಲಿ ಈ ರೀತಿ ಹಾದರವನ್ನು ಮಾಡುವುದು ಸಾಮಾಜಿಕ ಕಳಂಕಗಳಲ್ಲಿ ಒಂದಾಗಿದೆ.

ಸಾಮಾಜಿಕ ಕಳಂಕವನ್ನು ಸೂಚಿಸುವ ಕಾರಣದಿಂದಾಗಿ ‘ತಾಯಿಗಂಡ’ ಮತ್ತು ‘ಹಾದರಗಿತ್ತಿ’ ಎಂಬ ಪದಗಳು ಬಯ್ಗುಳವಾಗಿ ಬಳಕೆಯಾಗುತ್ತಿವೆ. ನಾವು ಬಯ್ಗುಳ ಪದಗಳ ಬಳಕೆಯಲ್ಲಿ ಮತ್ತೊಂದು ಸಂಗತಿಯನ್ನು ಗಮನಿಸಬೇಕು. ಪ್ರತಿಯೊಂದು ಬಯ್ಗುಳವೂ ಬಳಕೆಯ ಸನ್ನಿವೇಶದಲ್ಲಿ ಬಯ್ಯುವವರ ಮನದ ಇಂಗಿತವನ್ನು ಸೂಚಿಸುವ ರೂಪಕದ ತಿರುಳನ್ನು ಹೊಂದುತ್ತದೆ.

ಉದಾಹರಣೆ: 5. “ಏನೋ ತಾಯ್ಗಂಡ ನನ್ಮಗ್ನೆ… ಸಾಲ ತಕೊಂಡ್ ಮ್ಯಾಲೆ ದುಡ್ಡ ಸರಿಯಾದ ಟೇಮಿಗೆ ಕೊಡಬೇಕು ಅನ್ನುಗ್ಯಾನ ಇಲ್ವಲ್ಲೋ ನಿಂಗೆ.”

ಈ ಸನ್ನಿವೇಶದಲ್ಲಿ ‘ತಾಯ್ಗಂಡ’ ಎಂಬ ಬಯ್ಗುಳದ ನುಡಿಯು “ಅತ್ಯಂತ ಕೀಳಾದ ನಡೆನುಡಿಯುಳ್ಳವನು/ನಂಬಿಕೆಗೆ ಯೋಗ್ಯನಲ್ಲದ ವ್ಯಕ್ತಿ” ಎಂಬ ತಿರುಳನ್ನು ಪಡೆದಿದೆ.

6. “ಏನೇ ಹಾದರಗಿತ್ತಿ… ನಮ್ಮ ಮನೆ ಮುಳುಗಿಸ್ಬುಟ್ಟಲ್ಲೆ.”

ಈ ಸನ್ನಿವೇಶದಲ್ಲಿ ‘ಹಾದರಗಿತ್ತಿ’ ಎಂಬ ಬಯ್ಗುಳದ ನುಡಿಯು “ಕೆಟ್ಟ ನಡೆನುಡಿಯುಳ್ಳವಳು” ಎಂಬ ತಿರುಳಿನಲ್ಲಿ ಬಳಕೆಯಾಗಿದೆ.

ಬಯ್ಯುವ ವ್ಯಕ್ತಿಯು ತನ್ನ ಮನದ ಆಕ್ರೋಶ, ಹತಾಶೆ, ಸಂಕಟ , ಹೆದರಿಕೆ ಮುಂತಾದ ಒಳಮಿಡಿತಗಳನ್ನು ಹೊರಹಾಕುವಾಗ ಬಳಸುವ ಬಯ್ಗುಳಗಳು ಹೆಚ್ಚಿನ ಸನ್ನಿವೇಶಗಳಲ್ಲಿ ನೇರವಾದ ತಿರುಳಿಗಿಂತಲೂ ರೂಪಕದ ತಿರುಳಿನಲ್ಲಿಯೇ ಬಳಕೆಗೊಳ್ಳುತ್ತವೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: