ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 5 ನೆಯ ಕಂತು – ಕಾಡಿನಲ್ಲಿ ಬೇಡರ ಪಡೆಯೊಡನೆ ಹರಿಶ್ಚಂದ್ರ
– ಸಿ.ಪಿ.ನಾಗರಾಜ.
*** ಕಾಡಿನಲ್ಲಿ ಬೇಡರ ಪಡೆಯೊಡನೆ ಹರಿಶ್ಚಂದ್ರ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಮೃಗಯಾ ಪ್ರಸಂಗ’ ಮೂರನೆಯ ಅಧ್ಯಾಯದ 17-18-19-20-23-24 ನೆಯ ಆರು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ಹರಿಶ್ಚಂದ್ರ: ಅಯೋದ್ಯೆಯ ರಾಜ
ಹರಿಶ್ಚಂದ್ರನ ಒಡ್ಡೋಲಗದ ವಂದಿಮಾಗಧರು.
ರಾಜನ ಗುಣಗಾನ ಮಾಡುವ ಹೊಗಳುಬಟ್ಟರು.
ಬೇಡ ಪಡೆಯ ಒಡೆಯರು.
*** ಕಾಡಿನಲ್ಲಿ ಬೇಡರ ಪಡೆಯೊಡನೆ ಹರಿಶ್ಚಂದ್ರ ***
ಸೇನೆ ನೆರೆಯಿತ್ತು.
ವಂದಿಮಾಗಧರು: ರಿಪುಕುಮುದ ಮಾರ್ತಾಂಡ… ಪುಣ್ಯಾನೂನ ತುಂಡ… ಬಲಭರಿತ ದೋರ್ದಂಡ… ಭೂಮಾನಿನಿಯ ಗಂಡ… ವಿಜಯಾಂಗನೆಯ ಮಿಂಡ… ರಣರಂಗಮುಖ ಕಾಲದಂಡ… ದಾನಿ ಚಿತ್ತೈಸು.
(ಎಂಬ ಮಾತಿನೊಳಗೆ ಭಾನುಕುಲತಿಲಕನ್ ಹರಿಶ್ಚಂದ್ರರಾಯನ್ ಎದ್ದು, ಸತಿ ಪುತ್ರ ಮಂತ್ರಿಸಹಿತ ಸುಮ್ಮಾನದಿಮ್ ಮಣಿಮಯ ರಥವನು ಅಡಿಯಿಟ್ಟು ಏರಿದನು. ಪೊಡವಿ ಜಡಿಯಲು… ದೆಸೆಗಳ್ ಉಬ್ಬಸಮ್ ಪಡೆ… ಫಣಿಯ ಹೆಡೆ ಕೊರಳೊಳ್ ಆಳೆ… ಕೂರ್ಮನ ಬೆನ್ನು ತಗ್ಗಿ ಬಸುರೆಡೆಯ ಹೊಗೆ… ಬಲು ಬೇಡ ಪಡೆ ಬೊಬ್ಬೆ ಕೊಟ್ಟು ಅಬ್ಬರಿಸಿ ನಗರಿಯಿಮ್ ಹೊರಗೆ ಹೊರಬೀಡ ಬಿಟ್ಟು… ಘುಡುಘುಡಿಸಿ ರಥವನ್ ಒಲವಿಮ್ ನೂಂಕಿ, ಕಡಗಿ ಹರಕರಿಸಿ ನಡೆಯೆ, ಹೇರಡವಿ ಕೈಮಿಕ್ಕು ಗೋಳಿಡಲು ನಿಜದೇಶ ಜನವನಧಿಕುಮುದಸಖನು ದಾಳಿಕ್ಕಿದನ್. ಬೇಡರ ಪಡೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೂಗುತ್ತ ಬೇಟೆಯಾಡಲು ಕಾಡೆಲ್ಲವನ್ನೂ ಜಾಲಾಡಲು ತೊಡಗುತ್ತಾರೆ.)
ಬೇಡ ಪಡೆ-1: ಹಿಡಿ ನವಿಲನ್.
ಬೇಡ ಪಡೆ-2: ಇರಿ ಹುಲಿಯನ್.
ಬೇಡ ಪಡೆ-3: ಅಟ್ಟು ಮರೆವಿಂಡ.
ಬೇಡ ಪಡೆ-4: ದರಿಗೆಡಹು ಕರಿಯಮ್.
ಬೇಡ ಪಡೆ-5: ರೊಪ್ಪವಿಡಿದ ಹಂದಿಗೆ ತಡವಿ ಬಿಡು ನಾಯನ್.
ಬೇಡ ಪಡೆ-6: ಎಚ್ಚು ಎರಳೆಯಮ್.
ಬೇಡ ಪಡೆ-7: ಕಲ್ಲಲಿ ಇಕ್ಕು ಕೋಣನನು.
ಬೇಡ ಪಡೆ-8: ಹೊರಹೋಗಲೀಯದೆ ಹೊಡೆ ಉಡುವ.
ಬೇಡ ಪಡೆ-10: ಮರೆವಿಡಿದು ಕುತ್ತು ಕೋಣನನ್.
ಬೇಡ ಪಡೆ-11: ಒಯ್ಯನಿಡು ಮೊಲನ.
ಬೇಡ ಪಡೆ-12: ಮರಚು ಸಿಂಹವ.
ಬೇಡ ಪಡೆ-13: ಹಲವು ಬಲೆ ಕೆದರಿ ನಡೆಗೆಡಿಸು ಹಕ್ಕಿಗಳನ್.
(ಎಂಬ ಬೇಡರ ಬೊಬ್ಬೆಯಿಂದ ಅಡವಿ ಘೀಳಿಟ್ಟುದು. ಪ್ರಾಣಿಗಳ ಚಲನವಲನವನ್ನು ಗಮನಿಸಿ, ಅವುಗಳ ಜಾಡನ್ನು ಹಿಡಿದು ಮುನ್ನುಗ್ಗುತ್ತಿದ್ದಾರೆ.)
ಬೇಡ ಪಡೆ-14: ಇಲ್ಲಿ ಎರಳೆ ಸರಳಿಸಿ ಹೋದುದು… ಹಿಂಗಾಲೊದೆದು ತೆರಳ್ದ ಮಣ್ಣಿದೆ.
ಬೇಡ ಪಡೆ-15: ಸೊಕ್ಕಿದ ಎಕ್ಕಲಂಗಳು ಹೋದವು… ಎರಡು ಕಟವಾಯಿಕಡೆ ಸುರಿದನೊರೆಯಿದೆ.
ಬೇಡ ಪಡೆ-16: ಇಲ್ಲಿ ಕರಡಿ ತಣಿದಾಡಿ ಹೋದುದು.
ಬೇಡ ಪೆ-17: ನೆರೆದಿರುಹೆಗಳ ಹೊರೆಯೊಳೆಡೆದ ಹುತ್ತಿದೆ.
ಬೇಡ ಪಡೆ-18: ಹುಲಿಯು ಮರೆಯನ್ ಎಳೆಯಿತ್ತಿಲ್ಲಿ… ಬಿಸುನೆತ್ತರಿದ್ದುದು.
(ಎಂದಿರದೆ ಎರಗಿ ಹಜ್ಜೆಯಮ್ ನೋಡಿ ಬೆಂಬಳಿವಿಡಿದು ಹರಿವ ಲುಬ್ಧಕರ್ ಎಸೆದರು. ಕಂಟಣಿಸಿದ ಆ ಖಗವನ್ ಈ ಮೃಗವನ್ ಎಂತಕ್ಕೆ ಬೇಂಟೆಯಾಡಿದನ್ ಎಂದು ಪೊಗಳಲ್ ಏವುದು. ಗೋರಿವೇಂಟೆ… ಪಳಹರವೇಂಟೆ… ಪಟವೇಂಟೆ… ವಿದ್ಯಾಧರರ ಬೇಂಟೆ… ಚಿತ್ರವೇಂಟೆ… ಅಂಟುಜಲವೇಂಟೆ… ತೋಹಿನ ಬೇಂಟೆ… ಘನ ಸೋಹುವೇಂಟೆಗಳ್ ಎನಿಪ್ಪ ಹೆಸರಮ್ ಹೊತ್ತು ಮೆರೆಯುತಿಪ್ಪ ಎಂಟು ತೆರದ ಉಚಿತವೇಂಟೆಯನ್ ಹರಿಶ್ಚಂದ್ರ ವಸುಧಾಧೀಶನು ಆಡಿದನ್. ಹರಿಶ್ಚಂದ್ರ ನೃಪನು ಗಣ್ಯತರ ಗೌತಮಾರಣ್ಯದಲಿ ದಂಡಕಾರಣ್ಯದಲಿ ಕ್ರೌಂಚಕಾರಣ್ಯದಲಿ ಭಯಗುಹಾರಣ್ಯದಲಿ ನುತ ದಶಾರಣ್ಯದಲಿ ಘೋರ ಕಂಠೀರವಾರಣ್ಯದಲ್ಲಿ ಪುಣ್ಯವಿಡಿದ ಅನಿಮಿಷಾರಣ್ಯದಲಿ ಮಾನುಷಾರಣ್ಯದಲಿ ಬೇಂಟೆಯಾಡುತ್ತ ನಡೆತಂದು ಅಖಿಳ ಪುಣ್ಯವೆಂದೆನಿಪ ಕಿಷ್ಕಿಂಧಾಚಳಕ್ಕೆ ಬಂದನು.)
ತಿರುಳು: ಕಾಡಿನಲ್ಲಿ ಬೇಡರ ಪಡೆಯೊಡನೆ ಹರಿಶ್ಚಂದ್ರ
ಸೇನೆ ನೆರೆಯಿತ್ತು=ರಾಜ ಹರಿಶ್ಚಂದ್ರನ ಅಯೋದ್ಯೆಯ ಅರಮನೆಯ ಮುಂದೆ ಕಾಡಿನ ಬೇಡರ ಪಡೆ ಒಗ್ಗೂಡಿದೆ.
ವಂದಿಮಾಗದರು ರಾಜ ಹರಿಶ್ಚಂದ್ರನ ಬಿರುದುಗಳನ್ನು ಎತ್ತರದ ದನಿಯಲ್ಲಿ ಉಚ್ಚರಿಸುತ್ತ ರಾಜನ ಗುಣಗಾನ ಮಾಡುತ್ತಿದ್ದಾರೆ. ಬಿರುದುಗಳು ರೂಪಕದ ತಿರುಳಿನಲ್ಲಿ ‘ರಾಜನ ಹರಿಶ್ಚಂದ್ರನ ತೋಳ್ಬಲವನ್ನು ಮತ್ತು ಪರಾಕ್ರಮವನ್ನು’ ಸಂಕೇತಿಸುತ್ತವೆ;
ರಿಪುಕುಮುದ ಮಾರ್ತಾಂಡ=ಮುಂಜಾನೆ ಮೂಡುವ ಸೂರ್‍ಯನ ಕಿರಣಗಳ ಬಿಸಿಯು ತಟ್ಟುತ್ತಿದ್ದಂತೆಯೇ ರಾತ್ರಿಯ ಕಾಲದಲ್ಲಿ ಅರಳಿದ್ದ ನೀಲಿ ತಾವರೆಯು ಮುದುಡಿಕೊಳ್ಳುತ್ತದೆ. ಅಂತೆಯೇ ಶತ್ರುಗಳನ್ನು ಮುದುಡಿಕೊಳ್ಳುವಂತೆ ಮಾಡುವ ಸೂರ್‍ಯನೇ ಹರಿಶ್ಚಂದ್ರ;
ಪುಣ್ಯಾನೂನ ತುಂಡ=ಮಂಗಳಕರವಾದ ತೇಜಸ್ಸಿನಿಂದ ಕಂಗೊಳಿಸುತ್ತಿರುವ ಮೊಗವನ್ನುಳ್ಳವನು;
ಬಲಭರಿತ ದೋರ್ದಂಡ=ಕಸುವಿನಿಂದ ಕೂಡಿದ ತೋಳುಗಳನ್ನು ಉಳ್ಳವನು;
ಭೂಮಾನಿನಿಯ ಗಂಡ=ಬೂಮಿಯೆಂಬ ಹೆಣ್ಣಿಗೆ ಗಂಡನಾದವನು;
ವಿಜಯಾಂಗನೆಯ ಮಿಂಡ=ವಿಜಯವೆಂಬ ಹೆಣ್ಣನ್ನು ವಶಪಡಿಸಿಕೊಂಡಿರುವ ಪರಾಕ್ರಮಿ;
ರಣರಂಗಮುಖ ಕಾಲದಂಡ=ರಣರಂಗದ ಮುಂಚೂಣಿಯಲ್ಲಿ ಹಗೆಗಳ ಪಾಲಿಗೆ ಸಾವಿನ ದೇವತೆಯಾದ ಯಮನ ಕಯ್ಯಲ್ಲಿರುವ ಆಯುದ;
ದಾನಿ ಚಿತ್ತೈಸು ಎಂಬ ಮಾತಿನೊಳಗೆ ಭಾನುಕುಲತಿಲಕನ್ ಹರಿಶ್ಚಂದ್ರರಾಯನ್ ಎದ್ದು=ದಾನಶೀಲನಾದ ರಾಜನೇ ಮನವಿಟ್ಟು ಆಲಿಸು ಎಂಬ ಹೊಗಳುಬಟ್ಟರ ಮಾತುಗಳನ್ನು ಕೇಳಿ ಸೂರ್‍ಯವಂಶದ ಹೆಸರಾಂತ ರಾಜನಾದ ಹರಿಶ್ಚಂದ್ರನು ಎಚ್ಚರಗೊಂಡು;
ಸತಿ ಪುತ್ರ ಮಂತ್ರಿಸಹಿತ ಸುಮ್ಮಾನದಿಮ್ ಮಣಿಮಯ ರಥವನು ಅಡಿಯಿಟ್ಟು ಏರಿದನು=ಹೆಂಡತಿ ಮಗ ಮಂತ್ರಿಯ ಜತೆಗೂಡಿ ಹಿಗ್ಗಿನಿಂದ ಮುತ್ತುರತ್ನದ ಮಣಿಗಳಿಂದ ಕಂಗೊಳಿಸುತ್ತಿದ್ದ ತೇರನ್ನೇರಿ ಕಾಡಿನತ್ತ ಬೇಟೆಯಾಡಲು ತೆರಳಿದನು;
ಹರಿಶ್ಚಂದ್ರನ ಜತೆಗೂಡಿ ಬೇಡ ಪಡೆಯು ಕಾಡಿನತ್ತ ಹೊರಟಾಗ ಏನಾಯಿತೆಂಬುದನ್ನು ಅತಿಶಯವಾದ ನುಡಿಗಳಿಂದ ಬಣ್ಣಿಸಲಾಗಿದೆ. ಈ ನುಡಿಗಳೆಲ್ಲವೂ ಹರಿಶ್ಚಂದ್ರನ ಬೇಡ ಪಡೆಯು ಕಸುವನ್ನು ಸಂಕೇತಿಸುತ್ತವೆ;
ಪೊಡವಿ ಜಡಿಯಲು=ಬೂಮಿ ನಡುಗಲು;
ದೆಸೆಗಳ್ ಉಬ್ಬಸಮ್ ಪಡೆ=ಹತ್ತು ದಿಕ್ಕುಗಳು ಉಸಿರಾಡಲಾರದೆ ಮೇಲುಸಿರು ಬಿಡುತ್ತಿರಲು;
ಫಣಿಯ ಹೆಡೆ ಕೊರಳೊಳ್ ಆಳೆ=ಬೂಮಂಡಲವನ್ನು ಹೊತ್ತಿರುವ ಆದಿಶೇಶನೆಂಬ ಹಾವಿನ ಹೆಡೆಯು ಕೊರಳೊಳಕ್ಕೆ ಮುದುಡಿಕೊಳ್ಳಲು;
ಕೂರ್ಮನ ಬೆನ್ನು ತಗ್ಗಿ ಬಸುರೆಡೆಯ ಹೊಗೆ=ಬೂಮಂಡಲವನ್ನು ಹೊತ್ತಿರುವ ಆಮೆಯ ಬೆನ್ನು ತಗ್ಗಿಹೋಗಿ, ಅದರ ಹೊಟ್ಟೆಯೊಳಗೆ ಸೇರಿಕೊಳ್ಳಲು;
ಬಲು ಬೇಡ ಪಡೆ ಬೊಬ್ಬೆ ಕೊಟ್ಟು ಅಬ್ಬರಿಸಿ ನಗರಿಯಿಮ್ ಹೊರಗೆ ಹೊರಬೀಡ ಬಿಟ್ಟು=ದೊಡ್ಡ ಸಂಕೆಯಲ್ಲಿದ್ದ ಬೇಡರ ಪಡೆಯು ಅತಿ ಹೆಚ್ಚಾದ ಆನಂದ ಮತ್ತು ಉತ್ಸಾಹದ ದನಿಯಿಂದ ಅಬ್ಬರಿಸಿ ಕೂಗುತ್ತ ಅಯೋದ್ಯಾ ನಗರದ ಹೊರ ಬಯಲಿನಲ್ಲಿ ಸ್ವಲ್ಪ ಸಮಯ ತಂಗಿದ್ದು;
ಘುಡುಘುಡಿಸಿ ರಥವನ್ ಒಲವಿಮ್ ನೂಂಕಿ ಕಡಗಿ ಹರಕರಿಸಿ ನಡೆಯೆ=ಮತ್ತೆ ಜೋರಾಗಿ ಅಬ್ಬರಿಸುತ್ತ ಒಲವಿನಿಂದ ರಾಜನ ತೇರನ್ನು ತಾವೇ ಉತ್ಸಾಹದಿಂದ ಎಳೆದುಕೊಂಡು ಅತಿಶಯವಾದ ಆನಂದದಿಂದ ಕಾಡಿನತ್ತ ಸಾಗುತ್ತಿರಲು;
ಹೇರಡವಿ ಕೈಮಿಕ್ಕು ಗೋಳಿಡಲು=ದೊಡ್ಡದಾದ ಕಾಡು ಬಹುದೊಡ್ಡ ಸಂಕೆಯಲ್ಲಿ ತನ್ನತ್ತ ಬರುತ್ತಿರುವ ಬೇಡ ಪಡೆಯನ್ನು ಕಂಡು ಸಂಕಟಪಡುತ್ತಿರಲು; ಇದೊಂದು ರೂಪಕದ ನುಡಿ. ಕಾಡಿಗೆ ಬೇಡಪಡೆ ನುಗ್ಗುತ್ತಿರುವುದರಿಂದ ಕಾಡಿನಲ್ಲಿರುವ ಪ್ರಾಣಿಪಕ್ಶಿಗಳಿಗೆ ಮತ್ತು ಮರಗಿಡಬಳ್ಳಿಗಳಿಗೆ ಅಪಾಯ ಉಂಟಾಗಲಿದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;
ನಿಜದೇಶ ಜನವನಧಿಕುಮುದಸಖನು ದಾಳಿಕ್ಕಿದನ್=ತನ್ನ ದೇಶದ ಜನಸಮುದಾಯವೆಂಬ ಕಡಲಿಗೆ ಚಂದ್ರನಂತಿರುವ ರಾಜ ಹರಿಶ್ಚಂದ್ರನು ಕಾಡಿನ ಮೇಲೆ ದಾಳಿಯಿಟ್ಟನು; ಬೇಡರ ಪಡೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೂಗುತ್ತ ಬೇಟೆಯಾಡಲು ಮುನ್ನುಗ್ಗುತ್ತಿದ್ದಾರೆ.
ಹಿಡಿ ನವಿಲನ್=ನವಿಲನ್ನು ಹಿಡಿ;
ಇರಿ ಹುಲಿಯನ್=ಹುಲಿಯನ್ನು ತಿವಿ;
ಅಟ್ಟು ಮರೆವಿಂಡ=ಜಿಂಕೆಗಳ ಹಿಂಡನ್ನು ಬೆನ್ನತ್ತು;
ದರಿಗೆಡಹು ಕರಿಯಮ್=ಆನೆಯನ್ನು ಹಳ್ಳದಲ್ಲಿ ಬೀಳಿಸು;
ರೊಪ್ಪವಿಡಿದ ಹಂದಿಗೆ ತಡವಿ ಬಿಡು ನಾಯನ್=ತನ್ನ ಹಕ್ಕೆಯಲ್ಲಿ ಅಡಗಿ ಕುಳಿತಿರುವ ಹಂದಿಯನ್ನು ಹುಡುಕಿ ಹಿಡಿಯಲು ನಾಯಿಯನ್ನು ಹುರುದುಂಬಿಸಿ ಬಿಡು;
ಎಚ್ಚು ಎರಳೆಯಮ್=ಜಿಂಕೆ ಮೇಲೆ ಬಾಣವನ್ನು ಬಿಡು; ಕಾಡಿನಲ್ಲಿರುವ ಅನೇಕ ಬಗೆಯ ಜಿಂಕೆಗಳನ್ನು ‘ ಚಿಗರೆ/ಹರಿಣ/ಎರಳೆ ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ;
ಕಲ್ಲಲಿ ಇಕ್ಕು ಕೋಣನನು=ಕೋಣನನ್ನು ಕಲ್ಲಿನಲ್ಲಿ ಹೊಡೆ;
ಹೊರಹೋಗಲೀಯದೆ ಹೊಡೆ ಉಡುವ=ನೆಲದೊಳಗಿರುವ ಬಿಲದಿಂದ ಹೊರಕ್ಕೆ ಬರಲು ಬಿಡದೆ ಉಡುವನ್ನು ಹೊಡೆ;
ಮರೆವಿಡಿದು ಕುತ್ತು ಕೋಣನನ್=ಅಡಗಿ ಕುಳಿತುಕೊಂಡು ಕಾಯುತ್ತಿದ್ದು ಕಣ್ಣಿಗೆ ಕಂಡ ಕೂಡಲೇ ಕೋಣನನ್ನು ಚೂಪಾದ ಮೊನೆಯುಳ್ಳ ಈಟಿಯಿಂದ ಚುಚ್ಚು;
ಒಯ್ಯನಿಡು ಮೊಲನ=ತಪ್ಪಿಸಿಕೊಂಡು ಹೋಗಲು ಬಿಡದೆ ಮೊಲವನ್ನು ಹೊಡೆ;
ಮರಚು ಸಿಂಹವ=ಸಿಂಹವನ್ನು ಹಿಂದಕ್ಕೆ ಅಟ್ಟು;
ಹಲವು ಬಲೆ ಕೆದರಿ ನಡೆಗೆಡಿಸು ಹಕ್ಕಿಗಳನ್= ಹಕ್ಕಿಗಳು ಹಾರಿಹೋಗದಂತೆ ಹಲವು ಬಗೆಯ ಬಲೆಗಳನ್ನು ಒಡ್ಡಿ ಬಲೆಯೊಳಕ್ಕೆ ಬೀಳಿಸು;
ಎಂಬ ಬೇಡರ ಬೊಬ್ಬೆಯಿಂದ ಅಡವಿ ಘೀಳಿಟ್ಟುದು=ಎಂದು ಹತ್ತಾರು ಬಗೆಯಲ್ಲಿ ಅಬ್ಬರಿಸುತ್ತಿರುವ ಬೇಡರ ಕೂಗಿನಿಂದ ಕಾಡು ಗೋಳಾಡತೊಡಗಿತು. ಇದೊಂದು ರೂಪಕದ ನುಡಿ. ಕಾಡಿಗೆ ಆಪತ್ತು ಬಂದಿತು;
ಇಲ್ಲಿ ಎರಳೆ ಸರಳಿಸಿ ಹೋದುದು=ಇಲ್ಲಿ ಜಿಂಕೆ ಹಾರಿಹೋಗಿದೆ;
ಹಿಂಗಾಲೊದೆದು ತೆರಳ್ದ ಮಣ್ಣಿದೆ=ಅದರ ಗುರುತಾಗಿ ಜಿಂಕೆಯ ಹಿಂಗಾಲು ಒದೆದು ಮೇಲಕ್ಕೆದ್ದ ಮಣ್ಣಿದೆ;
ಸೊಕ್ಕಿದ ಎಕ್ಕಲಂಗಳು ಹೋದವು=ಅಲ್ಲಿ ಕೊಬ್ಬಿದ ಹಂದಿಗಳು ಅಲ್ಲಿ ಹೋಗಿವೆ.
ಎರಡು ಕಟವಾಯಿಕಡೆ ಸುರಿದನೊರೆಯಿದೆ=ಅದರ ಗುರುತಾಗಿ ಹಂದಿಗಳ ಬಾಯಿನ ಎರಡು ಕಡೆಯ ಅಂಚಿನಿಂದ ಸುರಿದ ನೊರೆ ಅಲ್ಲಿ ಬಿದ್ದಿದೆ;
ಇಲ್ಲಿ ಕರಡಿ ತಣಿದಾಡಿ ಹೋದುದು=ಇಲ್ಲಿ ಕರಡಿ ತನಗೆ ಇಚ್ಚೆ ಬಂದಶ್ಟು ಹೊತ್ತು ಇದ್ದು ಹೋಗಿದೆ. ಕರಡಿ ಇದ್ದ ಜಾಗದ ಸಣ್ಣಪುಟ್ಟ ಗಿಡಬಳಿಗಳೆಲ್ಲವೂ ಮುರಿದು ನೆಲಕಚ್ಚಿವೆ ಎಂಬುದನ್ನು ಸೂಚಿಸುತ್ತಿದೆ;
ನೆರೆದ ಇರುಹೆಗಳ ಹೊರೆಯೊಳೆಡೆದ ಹುತ್ತಿದೆ=ಸಾಲುಸಾಲಾಗಿ ಗುಂಪುಗುಂಪಾಗಿ ಹರಿದಾಡುತ್ತಿರುವ ಇರುವೆಗಳ ಸಮೀಪದ ಜಾಗದಲ್ಲಿ ಬೆಳೆದ ಹುತ್ತವಿದೆ;
ಹುಲಿಯು ಮರೆಯನ್ ಎಳೆಯಿತ್ತಿಲ್ಲಿ… ಬಿಸುನೆತ್ತರಿದ್ದುದು=ಇಲ್ಲಿ ಹುಲಿಯು ಜಿಂಕೆಯನ್ನು ಬೇಟೆಯಾಡಿ ದೇಹವನ್ನು ಎಳೆದಾಡಿಕೊಂಡು ತಿಂದಿದೆ. ಆದ್ದರಿಂದಲೇ ಬಿಸಿರಕ್ತ ಇಲ್ಲಿ ಹರಿದಿದೆ;
ಎಂದಿರದೆ ಎರಗಿ ಹಜ್ಜೆಯಮ್ ನೋಡಿ ಬೆಂಬಳಿವಿಡಿದು ಹರಿವ ಲುಬ್ಧಕರ್ ಎಸೆದರು=ಎಂದು ತಮ್ಮತಮ್ಮಲ್ಲಿಯೇ ಹೇಳಿಕೊಂಡು ಸುಮ್ಮನಿರದೆ, ಮುಂದೆ ಬಂದು ಹುಲಿಯ ಹಜ್ಜೆಗಳನ್ನು ನೋಡುತ್ತ, ಹಜ್ಜೆಗಳ ಜಾಡಿನಲ್ಲಿಯೇ ಅಡಿಯಿಡುತ್ತ ಹುಲಿಯನ್ನು ಬೇಟೆಯಾಡಲು ಮುನ್ನುಗ್ಗುತ್ತಿರುವ ಬೇಡರು ಕಾಡಿನಲ್ಲಿ ಕಂಡುಬಂದರು;
ಕಂಟಣಿಸಿದ ಆ ಖಗವನ್ ಈ ಮೃಗವನ್ ಎಂತಕ್ಕೆ ಬೇಂಟೆಯಾಡಿದನ್ ಎಂದು ಪೊಗಳಲ್ ಏವುದು=ಬೇಡ ಪಡೆಯ ಅಬ್ಬರಕ್ಕೆ ಹೆದರಿ ಕಂಗಾಲಾಗಿ ದಿಕ್ಕಾಪಾಲಾಗಿ ಓಡುತ್ತಿರುವ ಕಾಡಿನಲ್ಲಿದ್ದ ಆ ಪಕ್ಶಿಗಳನ್ನು ಮತ್ತು ಈ ಪ್ರಾಣಿಗಳನ್ನು ಯಾವ ಯಾವ ಬಗೆಗಳಲ್ಲಿ ರಾಜ ಹರಿಶ್ಚಂದ್ರನು ಬೇಟೆಯಾಡಿದನು ಎಂಬುದನ್ನು ಏನೆಂದು ಹೊಗಳಲಿ. ಅಂದರೆ ಹರಿಶ್ಚಂದ್ರನ ಬೇಟೆಯ ಕುಶಲತೆಯು ಬಹುಬಗೆಗಳಲ್ಲಿತ್ತು ಎಂದು ಕವಿಯು ಉದ್ಗರಿಸುತ್ತಿದ್ದಾನೆ;
ಗೋರಿವೇಂಟೆ=ಗೋರಿ+ಬೇಂಟೆ;
ಗೋರಿವೇಂಟೆ=ಪ್ರಾಣಿಗಳನ್ನು ಮರಳುಗೊಳಿಸಿ ಅಂದರೆ ಬೇಟೆಗಾರರು ಬಹುಬಗೆಯ ತಂತ್ರಗಳಿಂದ ಪ್ರಾಣಿಗಳು ತಮ್ಮ ಕಡೆಗೆ ಬರುವಂತೆ ಮಾಡಿಕೊಂಡು ಬಲೆಗೆ ಕೆಡಹುವ ಬೇಟೆ;
ಪಳಹರವೇಂಟೆ=ಒಂದು ಬಗೆಯ ಬೇಟೆ. ಇದು ಯಾವ ಬಗೆಯದು ಎಂಬುದು ತಿಳಿದು ಬಂದಿಲ್ಲ;
ಪಟವೇಂಟೆ=ಬಟ್ಟೆಯನ್ನು ಬಳಸಿ ಪ್ರಾಣಿ ಪಕ್ಶಿಗಳನ್ನು ಹಿಡಿಯುವ ಬೇಟೆ;
ವಿದ್ಯಾಧರರ ಬೇಂಟೆ=ಒಂದು ಬಗೆಯ ಬೇಟೆ. ಇದು ಯಾವ ಬಗೆಯದು ಎಂಬುದು ತಿಳಿದು ಬಂದಿಲ್ಲ;
ಚಿತ್ರವೇಂಟೆ=ಒಂದು ಬಗೆಯ ಬೇಟೆ. ಇದು ಯಾವ ಬಗೆಯದು ಎಂಬುದು ತಿಳಿದು ಬಂದಿಲ್ಲ;
ಅಂಟುಜಲವೇಂಟೆ=ಅಂಟುವ ದ್ರವವನ್ನು ಉಪಯೋಗಿಸಿ ಹಕ್ಕಿಗಳನ್ನೂ ಸಣ್ಣ ಪ್ರಾಣಿಗಳನ್ನೂ ಹಿಡಿಯುವ ಬೇಟೆ;
ತೋಹಿನ ಬೇಂಟೆ=ಬೇಟೆಗಾರನು ಕಾಡಿನಲ್ಲಿ ಪ್ರಾಣಿಗಳು ನಿತ್ಯವೂ ತಿರುಗಾಡುವ ಕಡೆಯಲ್ಲಾಗಲಿ ಇಲ್ಲವೇ ಮರಗಳ ಮರೆಯಲ್ಲಾಗಲಿ ಕುಳಿತು ಕಾಯುತ್ತಿದ್ದು ತನ್ನತ್ತ ಪ್ರಾಣಿಗಳು ಬಂದಾಗ ಹಿಡಿಯುವ ಇಲ್ಲವೇ ಕೊಲ್ಲುವ ಬೇಟೆ;
ಸೋಹುವೇಂಟೆ=ಪ್ರಾಣಿಗಳನ್ನು ಅವುಗಳ ಅಡಗುತಾಣದಿಂದ ಹೊರಬರುವಂತೆ ಮಾಡಿ, ಅಟ್ಟಿಸಿಕೊಂಡು ಹೋಗಿ ಹಿಡಿಯುವ ಇಲ್ಲವೇ ಕೊಲ್ಲುವ ಬೇಟೆ;
ಗೋರಿವೇಂಟೆ… ಪಳಹರವೇಂಟೆ… ಪಟವೇಂಟೆ… ವಿದ್ಯಾಧರರ ಬೇಂಟೆ… ಚಿತ್ರವೇಂಟೆ… ಅಂಟುಜಲವೇಂಟೆ… ತೋಹಿನ ಬೇಂಟೆ… ಘನ ಸೋಹುವೇಂಟೆಗಳ್ ಎನಿಪ್ಪ ಹೆಸರಮ್ ಹೊತ್ತು ಮೆಱೆಯುತಿಪ್ಪ ಎಂಟು ತೆರದ ಉಚಿತವೇಂಟೆಯನ್ ಹರಿಶ್ಚಂದ್ರ ವಸುಧಾಧೀಶನು ಆಡಿದನ್=ರಾಜ ಹರಿಶ್ಚಂದ್ರನು ಕಾಡಿನ ಎಲ್ಲೆಡೆಯಲ್ಲಿಯೂ ಬೇಡ ಪಡೆಯೊಡನೆ ತಿರುಗುತ್ತ ಬೇಟೆಯಲ್ಲಿ ಬಹುದೊಡ್ಡ ಹೆಸರನ್ನು ಹೊಂದಿರುವ ಗೋರಿ ಬೇಟೆ/ಪಳಹರ ಬೇಟೆ/ಪಟ ಬೇಟೆ/ವಿದ್ಯಾಧರರ ಬೇಟೆ/ಚಿತ್ರ ಬೇಟೆ/ಅಂಟುಜಲ ಬೇಟೆ/ತೋಹಿನ ಬೇಟೆ/ಸೋಹು ಬೇಟೆಗಳನ್ನಾಡುತ್ತ ಪ್ರಾಣಿ ಪಕ್ಶಿಗಳ ಉಪಟಳವನ್ನು ಅಡಗಿಸಿದನು;
ಹರಿಶ್ಚಂದ್ರನೃಪನು ಗಣ್ಯತರ ಗೌತಮಾರಣ್ಯದಲಿ ದಂಡಕಾರಣ್ಯದಲಿ ಕ್ರೌಂಚಕಾರಣ್ಯದಲಿ ಭಯಗುಹಾರಣ್ಯದಲಿ ನುತ ದಶಾರಣ್ಯದಲಿ ಘೋರ ಕಂಠೀರವಾರಣ್ಯದಲ್ಲಿ ಪುಣ್ಯವಿಡಿದ ಅನಿಮಿಷಾರಣ್ಯದಲಿ ಮಾನುಷಾರಣ್ಯದಲಿ ಬೇಂಟೆಯಾಡುತ್ತ ನಡೆತಂದು ಅಖಿಳ ಪುಣ್ಯವೆಂದೆನಿಪ ಕಿಷ್ಕಿಂಧಾಚಳಕ್ಕೆ ಬಂದನು=ರಾಜ ಹರಿಶ್ಚಂದ್ರನು ಕಾಡಿನ ಉದ್ದಗಲದಲ್ಲಿ ವಿಸ್ತಾರವಾಗಿ ಮತ್ತು ದಟ್ಟವಾಗಿ ಹಬ್ಬಿಹರಡಿದ್ದ ಹೆಸರಾಂತ ದಂಡಕಾರಣ್ಯ/ಕ್ರೌಂಚಕಾರಣ್ಯ/ ಬಯಗುಹಾರಣ್ಯ/ ದಶಾರಣ್ಯ/ಕಂಟೀರವಾರಣ್ಯ/ಅನಿಮಿಶಾರಣ್ಯ/ ಮಾನುಶಾರಣ್ಯದಲಿ ಬೇಟೆಯಾಡುತ್ತ ಬಂದು ಸಮಸ್ತ ಪುಣ್ಯಕ್ಕೆ ಅಂದರೆ ಮಂಗಳಕರವಾದ ನೆಲೆಯೆಂದು ಕೀರ್‍ತಿಯನ್ನು ಪಡೆದಿರುವ ಕಿಶ್ಕಿಂದಾ ಪರ್‍ವತ ಪ್ರಾಂತ್ಯಕ್ಕೆ ಬಂದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು