ಬ್ರೆಕ್ಟ್ ಕವನಗಳ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ.

ಪುಸ್ತಕ ದಹನ

(ಕನ್ನಡ ಅನುವಾದ: ಶಾ.ಬಾಲುರಾವ್)

ಹಾನಿಕಾರಕ ಪುಸ್ತಕಗಳನ್ನು
ಸಾರ್ವಜನಿಕವಾಗಿ ಸುಡಬೇಕೆಂದು
ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.

ಎಲ್ಲೆಲ್ಲೂ ಪುಸ್ತಕಗಳನ್ನು
ಎತ್ತಿನ ಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು

ಆಗ ಒಬ್ಬ ಬಹಿಷ್ಕೃತ ಸಾಹಿತಿ, ಶ್ರೇಷ್ಠರಲ್ಲೊಬ್ಬ
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ

ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ
ಅಧಿಕಾರಿಗಳಿಗೆ ಪತ್ರ ಗೀಚಿದ:
“ಸುಡಿ, ನನ್ನನ್ನು ಸುಡಿ!”
ಲೇಖನಿ ಹಕ್ಕಿವೇಗದಲ್ಲಿ ಹಾರಿತ್ತು

“ನನ್ನನ್ನು ಸುಡಿ!
ನನಗೇನೂ ಪರವಾಗಿಲ್ಲ! ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು ಯಾವಾಗಲೂ ಸತ್ಯವನ್ನೇ ಸಾರಿಲ್ಲವೆ?
ಈಗ ನಿಮ್ಮಿಂದ ನಾನು ಸುಳ್ಳನೆನಿಸಿಕೊಳ್ಳಬೇಕೇನು?
ಇದು ನನ್ನ ಆಜ್ಞೆ. ನನ್ನನ್ನು ಸುಡಿ!”

ಸರಕಾರದ ಕಟ್ಟಪ್ಪಣೆಯಂತೆ ಸುಡಲಿರುವ ಪುಸ್ತಕಗಳ ಆಯ್ಕೆಯ ಪಟ್ಟಿಯಲ್ಲಿ ತನ್ನ ಪುಸ್ತಕವಿಲ್ಲದ್ದನ್ನು ಕಂಡು ಆತಂಕಕ್ಕೆ ಒಳಗಾಗಿ, ಆಕ್ರೋಶಗೊಂಡು ಹತಾಶೆಯಿಂದ ಬಡಬಡಿಸುತ್ತಿರುವ ಹೆಸರಾಂತ ಸಾಹಿತಿಯೊಬ್ಬನ ಅಳಲನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.

ಪುಸ್ತಕ=ಮಾನವ ಸಮುದಾಯದ ಸಾಮಾಜಿಕ, ದಾರ್‍ಮಿಕ, ರಾಜಕೀಯ, ವಿಜ್ನಾನ, ತಂತ್ರಜ್ನಾನ, ಸಂಪತ್ತಿನ ವಿತರಣೆ, ಕಲೆ, ಸಂಗೀತ, ಸಾಹಿತ್ಯ ಮತ್ತು ನಿಸರ್‍ಗವನ್ನು ಒಳಗೊಂಡಂತೆ ಜಗತ್ತಿನ ಎಲ್ಲಾ ಬಗೆಯ ಚಟುವಟಿಕೆಗಳ ಸಂಗತಿಗಳನ್ನು ಬರಹರೂಪದಲ್ಲಿ ತಿಳಿಸುವ ಹೊತ್ತಿಗೆಗಳು; ದಹನ=ಸುಡುವಿಕೆ/ಸುಟ್ಟು ಬೂದಿ ಮಾಡುವುದು;

ಪುಸ್ತಕ ದಹನ=ಎರಡು ಸೇನೆಗಳ ನಡುವೆ ಕಾಳಗ ನಡೆದಾಗ, ಕಾಳಗದಲ್ಲಿ ಸೋಲನ್ನಪ್ಪಿದ ನಾಡಿನ ಜನರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿ, ಮಾನಪ್ರಾಣಗಳನ್ನು ತೆಗೆಯುತ್ತಿದ್ದ ಗೆದ್ದ ಸೇನೆಯ ದಾಳಿಕೋರರು ಸೋತ ಪಂಗಡದವರ ಬಳಿಯಿದ್ದ ಪುಸ್ತಕಗಳನ್ನೂ ಸುಡುತ್ತಿದ್ದರು. ಅರಿವಿನ ಆಕರವಾಗಿ ಬರಹರೂಪದಲ್ಲಿದ್ದ ಪುಸ್ತಕಗಳನ್ನು ಸುಡುವುದರ ಮೂಲಕ ಸೋತ ಜನ ಸಮುದಾಯದ ಮುಂದಿನ ತಲೆಮಾರುಗಳಿಗೆ ಆ ಸಮುದಾಯದ ಆಚಾರವಿಚಾರಗಳು, ಸಾದನೆ ಸಂಶೋದನೆಗಳು ಮತ್ತು ಜ್ನಾನದ ಸಂಪತ್ತು ಸಂವಹನಗೊಳ್ಳದಂತೆ ನಾಶಗೊಳಿಸುತ್ತಿದ್ದರು;

ಸರಕಾರ=ಒಂದು ನಾಡಿನ ಆಡಳಿತದ ಗದ್ದುಗೆಯ ಚುಕ್ಕಾಣಿಯನ್ನು ಹಿಡಿದು, ಪ್ರಜೆಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿರುವ ಒಕ್ಕೂಟ. ಈ ಒಕ್ಕೂಟದಲ್ಲಿ ರಾಜಶಾಹಿ ಮತ್ತು ಪುರೋಹಿತಶಾಹಿ ಎಂಬ ಎರಡು ಅಂಗಗಳು ಜತೆಗೂಡಿರುತ್ತವೆ.

ರಾಜಶಾಹಿ: ರಾಜಮನೆತನದ ವಂಶವಾಹಿಯಿಂದ ಬಂದಿರುವ ರಾಜ / ಸೇನಾಬಲದಿಂದ ಗದ್ದುಗೆಯನ್ನೇರಿರುವ ಸರ್‍ವಾವಾದಿಕಾರಿ / ಪ್ರಜಾಪ್ರಬುತ್ವದಿಂದ ಆಯ್ಕೆಗೊಂಡ ನಾಯಕ / ಸಮತಾವಾದ ಇಲ್ಲವೇ ಸಮಾಜವಾದದ ಚಳುವಳಿಯಲ್ಲಿ ರೂಪುಗೊಂಡು ಗದ್ದುಗೆಯನ್ನು ಪಡೆದಿರುವ ವ್ಯಕ್ತಿ; ರಾಜಶಾಹಿಯು ಪ್ರಜೆಗಳ ಬಹಿರಂಗದ ಚಲನವಲನಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಅವರನ್ನು ಅಡಿಯಾಳುಗಳನ್ನಾಗಿ ಮಾಡಿಕೊಂಡಿರುತ್ತದೆ;

ಪುರೋಹಿತಶಾಹಿ: ಇದರಲ್ಲಿ ಮೇಲುಜಾತಿ, ಪ್ರಬಲ ಕೋಮು ಮತ್ತು ಮೇಲು ವರ್‍ಗದ ಜನರು ಇರುತ್ತಾರೆ. ಪುರೋಹಿತಶಾಹಿಯು ಜಾತಿ ಮತ ದೇವರ ಹೆಸರಿನಲ್ಲಿ ಜನಮನದಲ್ಲಿ ಬಹುಬಗೆಯ ನಂಬಿಕೆಗಳು ನೆಲೆಗೊಳ್ಳುವಂತಹ ಆಚರಣೆಗಳ ಮೂಲಕ ಪ್ರಜೆಗಳ ಮನಸ್ಸನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿರುತ್ತದೆ. ಪುರೋಹಿತಶಾಹಿಯು ಒಂದು ನಾಡಿನಲ್ಲಿರುವ ಬೇರೆ ಬೇರೆ ಜಾತಿ ಮತ ಜನಾಂಗದ ಹೆಣಿಗೆಯಿಂದ ಕೂಡಿರುವ ಜನಸಮುದಾಯವು ಒಗ್ಗಟಿನಿಂದ ಜತೆಗೂಡಿ ಒಲವು ನಲಿವು ನೆಮ್ಮದಿಯಿಂದ ಬಾಳುವುದಕ್ಕೆ ಅವಕಾಶವನ್ನು ನೀಡದಂತಹ ತಾರತಮ್ಯದ ಒಳಮಿಡಿತಗಳನ್ನು ಜನಮನದಲ್ಲಿ ಬಿತ್ತಿ, ಜನರು ಪರಸ್ಪರ ಅನುಮಾನ, ಅಸೂಯೆ ಮತ್ತು ಹಗೆತನದಿಂದ ನಿರಂತರವಾಗಿ ಹೊಡೆದಾಡುತ್ತಿರುವಂತೆ ಅನೇಕ ಹುನ್ನಾರಗಳನ್ನು ಹೂಡುತ್ತಿರುತ್ತದೆ;

ರಾಜಶಾಹಿಯು ಪ್ರಜೆಗಳ ದೇಹದ ಮೇಲೆ ಹತೋಟಿಯನ್ನು ಹೊಂದಿದ್ದರೆ, ಪುರೋಹಿತಶಾಹಿಯು ಪ್ರಜೆಗಳ ಮನಸ್ಸಿನ ಮೇಲೆ ಹತೋಟಿಯನ್ನು ಹೊಂದಿರುತ್ತದೆ;

ಸುಗ್ರೀವಾಜ್ಞೆ=ಇದೊಂದು ನುಡಿಗಟ್ಟು. ನಾಡಿನ ಉನ್ನತ ಅದಿಕಾರದಲ್ಲಿರುವವರು ಹೊರಡಿಸುವ ಕಟ್ಟಪ್ಪಣೆ ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ; ಹೊರಡಿಸಿತ್ತು=ಪ್ರಕಟಿಸಿತ್ತು:

ಹಾನಿ=ಕೇಡು/ನಾಶ; ಕಾರಕ=ಉಂಟುಮಾಡುವ; ಹಾನಿಕಾರಕ=ಕೆಡುಕನ್ನು ಉಂಟುಮಾಡುವ;

ಹಾನಿಕಾರಕ ಪುಸ್ತಕಗಳು=ಸರಕಾರ ಅದು ಯಾವುದೇ ಬಗೆಯದಾಗಿರಲಿ, ಉದಾಹರಣೆಗೆ: ರಾಜವಂಶ/ಸರ್‍ವಾದಿಕಾರ/ಪ್ರಜಾಪ್ರಬುತ್ವ/ಮಿಲೆಟೆರಿ /ಕಮ್ಯುನಿಸಮ್/ಸೋಶಿಯಲಿಸಮ್ ಆಡಳಿತಕ್ಕೆ ಒಳಪಟ್ಟಿರಲಿ, ಈ ಕೆಳಕಂಡ ಸಂಗತಿಗಳನ್ನು ಒಳಗೊಂಡ ಪುಸ್ತಕಗಳನ್ನು ಹಾನಿಕಾರಕ ಪುಸ್ತಕಗಳೆಂದು ಪರಿಗಣಿಸುತ್ತದೆ.

“ಆಡಳಿತದ ಗದ್ದುಗೆಯಲ್ಲಿರುವ ವ್ಯಕ್ತಿಗಳು ಮತ್ತು ನಾಡಿನ ಸಂಪತ್ತಿನಲ್ಲಿ ಬಹುದೊಡ್ಡ ಪಾಲನ್ನು ಪಡೆಯುತ್ತಿರುವ ಮೇಲುಜಾತಿ, ಪ್ರಬಲ ಕೋಮು ಮತ್ತು ಮೇಲು ವರ್‍ಗದವರು ದುಡಿಯುವ ವರ್‍ಗದ ಬಡಜನತೆಗೆ ಮಾಡುತ್ತಿರುವ ವಂಚನೆ, ಸುಲಿಗೆಯ ಬಗೆಗಳನ್ನು ಹಾಗೂ ಜಾತಿ ಮತ ದೇವರ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕಪಟತನದ ಆಚರಣೆಗಳ ಹಿಂದೆ ಅಡಗಿರುವ ವಾಸ್ತವದ ಸಂಗತಿಗಳನ್ನು ಜನಸಾಮಾನ್ಯರು ಅರಿತುಕೊಳ್ಳುವಂತೆ ಬರೆದಿರುವ ವಿಚಾರಗಳನ್ನುಳ್ಳ ಪುಸ್ತಕಗಳನ್ನು” ಹಾನಿಕಾರಕ ಪುಸ್ತಕಗಳೆಂದು ಸರಕಾರ ಪರಿಗಣಿಸುತ್ತದೆ. ಅಂತಹ ಪುಸ್ತಕಗಳನ್ನು ಪ್ರಜೆಗಳು ಓದುವುದರಿಂದ ಇಲ್ಲವೇ ಕೇಳಿ ತಿಳಿಯುವುದರಿಂದ ದುಡಿಯುವ ವರ್‍ಗದ ಬಡಜನರು ಪ್ರಚೋದಿತರಾಗಿ ದಂಗೆ ಏಳಬಹುದು ಇಲ್ಲವೇ ದೇಶದಲ್ಲಿ ಜಾರಿಯಲ್ಲಿರುವ ಜನವಿರೋದಿ ಕಾನೂನು ಕಟ್ಟಲೆಗಳ ಎದುರು ಹೋರಾಡಬಹುದು ಎಂಬ ಆತಂಕಕ್ಕೆ ಸರಕಾರ ಒಳಗಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಜೆಗಳಲ್ಲಿ ಸಾಮಾಜಿಕ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಮೂಡಿಸುವ ಸಂಗತಿಗಳನ್ನೊಳಗೊಂಡ ಪುಸ್ತಕಗಳೆಲ್ಲವನ್ನೂ ಹಾನಿಕಾರಕ ಪುಸ್ತಕಗಳೆಂದೇ ಸರಕಾರ ನಿರ್‍ಣಯಿಸುತ್ತದೆ;

ಸಾರ್ವಜನಿಕ=ಎಲ್ಲ ಜನರು/ಬಹಿರಂಗವಾದುದು; ಸುಡಬೇಕು+ಎಂದು; ಸುಡು=ಬೆಂಕಿಯ ತಾಪ ತಟ್ಟುವಂತೆ ಮಾಡುವುದು;

ಎಲ್ಲೆಲ್ಲೂ=ನಾಡಿನ ಉದ್ದಗಲದಲ್ಲಿ/ಎಲ್ಲ ಕಡೆಗಳಲ್ಲಿಯೂ; ಹೇರು=ಒಂದರ ಮೇಲೆ ಮತ್ತೊಂದನ್ನು, ಮತ್ತೊಂದರ ಮೇಲೆ ಮಗದೊಂದನ್ನು ಅಡುಕಿಕೊಂಡು; ಕೊಂಡ=ಬೆಂಕಿಯನ್ನು ಹಾಕಿ ಉರಿಸಲೆಂದು ತೋಡಿರುವ ಗುಳಿ/ಗುಣಿ; ಸುಡುಕೊಂಡ=ವಸ್ತುಗಳನ್ನು ಹಾಕಿ ಸುಡುವುದಕ್ಕಾಗಿ ದೊಡ್ಡ ಗುಂಡಿಯನ್ನು ತೋಡಿ, ಅಲ್ಲಿ ಬೆಂಕಿಯನ್ನು ಒಡ್ಡಿರುವ ಜಾಗ;

ಬಹಿಷ್ಕೃತ=ಹೊರಹಾಕಲ್ಪಟ್ಟವನು/ಹೊರದೂಡಲ್ಪಟವನು; ಸಾಹಿತಿ=ನುಡಿ ಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳಿನ ಮೂಲಕ ಕಲಾತ್ಮಕವಾಗಿ ಗದ್ಯ ಮತ್ತು ಪದ್ಯಗಳನ್ನು ರಚಿಸುವವನು;

ಬಹಿಷ್ಕೃತ ಸಾಹಿತಿ=ಸರಕಾರವು ದೂರವಿಟ್ಟಿದ್ದ ಒಬ್ಬ ಸಾಹಿತಿ; ಆಳುವ ಸರಕಾರಗಳು ಬರಹಗಾರರ ಬಗ್ಗೆ ಸಾಮಾನ್ಯವಾಗಿ ಒಂದು ಬಗೆಯ ತಿರಸ್ಕಾರದ ನಿಲುವನ್ನು ಹೊಂದಿರುತ್ತವೆ. ಏಕೆಂದರೆ ಬರಹದ ಮೂಲಕ ಪ್ರಜೆಗಳು ಅರಿವು ಮತ್ತು ಎಚ್ಚರವನ್ನು ಹೊಂದಬಲ್ಲರು ಎಂಬ ಆತಂಕ ಸರಕಾರಕ್ಕೆ ಯಾವಾಗಲೂ ಇದ್ದೇ ಇರುತ್ತದೆ;

ಶ್ರೇಷ್ಠರಲ್ಲಿ+ಒಬ್ಬ; ಶ್ರೇಷ್ಠ=ಉತ್ತಮ/ಒಳ್ಳೆಯ;

ಕೃತಿ=ಪುಸ್ತಕ; ಹೆಸರು+ಇಲ್ಲದ್ದನ್ನು; ಹೌಹಾರಿದ=ಗಾಬರಿಗೊಂಡನು; ತಕ್ಷಣ=ಕೂಡಲೇ/ಮರುಗಳಿಗೆಯಲ್ಲಿಯೇ; ಕೋಪ=ಸಿಟ್ಟು/ಆಕ್ರೋಶ; ಭರ=ಉದ್ರೇಕ/ಆವೇಶ/ತೀವ್ರತೆ; ಧಾವಿಸಿ=ವೇಗವಾಗಿ ಬಳಿಸಾರಿ ಬಂದು; ಅಧಿಕಾರಿಗಳಿಗೆ=ಸರಕಾರದ ಅಪ್ಪಣೆಯಂತೆ ಪುಸ್ತಕಗಳನ್ನು ಸುಡಲಿರುವ ವ್ಯಕ್ತಿಗಳಿಗೆ; ಗೀಚಿದ=ಆತುರಾತುರವಾಗಿ ಬರೆದ;

ಲೇಖನಿ=ಬರಹ/ಪತ್ರ/ಓಲೆ; ಹಕ್ಕಿವೇಗ=ಇದೊಂದು ನುಡಿಗಟ್ಟು. ಬಹಳ ವೇಗವಾಗಿ; ಹಕ್ಕಿವೇಗದಲಿ ಹಾರಿತ್ತು=ತುಸು ಸಮಯದಲ್ಲಿಯೇ ಅಧಿಕಾರಿಗಳ ಕಯ್ಗೆ ತಲುಪಿತ್ತು; ನನಗೇನೂ ಪರವಾಗಿಲ್ಲ=ನಾನು ಸತ್ತರೂ ಚಿಂತೆಯಿಲ್ಲ;

ಸತ್ಯ=ದಿಟ/ನಿಜ/ವಾಸ್ತವ; ಸಾರು+ಇಲ್ಲವೆ; ಸಾರು=ಪ್ರಕಟಿಸು/ಗಟ್ಟಿದನಿಯಲ್ಲಿ ನುಡಿ/ನಿಶ್ಚಿತವಾಗಿ ಹೇಳು; ಸತ್ಯವನ್ನು ಸಾರುವುದು=ದಿಟದ ಸಂಗತಿಗಳನ್ನು ತಿಳಿಸುವುದು; ಸುಳ್ಳನು+ಎನಿಸಿಕೊಳ್ಳಬೇಕೇನು; ಸುಳ್ಳ=ಕಟ್ಟುಕತೆಯನ್ನು ಕಟ್ಟುವವನು/ನಿಜದ ಸಂಗತಿಯನ್ನು ಮುಚ್ಚಿಡುವವನು; ಆಜ್ಞೆ=ಅಪ್ಪಣೆ/ಆದೇಶ;

ನನ್ನ ಪುಸ್ತಕಗಳು ಯಾವಾಗಲೂ ಸತ್ಯವನ್ನೇ ಸಾರಿಲ್ಲವೆ?…ಈಗ ನಿಮ್ಮಿಂದ ನಾನು ಸುಳ್ಳನೆನಿಸಿಕೊಳ್ಳಬೇಕೇನು? ದು ನನ್ನ ಆಜ್ಞೆ… ನನ್ನನ್ನು ಸುಡಿ!=ಈಗ ಈ ಹೆಸರಾಂತ ಸಾಹಿತಿಗೆ ತಾನು ರಚಿಸಿದ್ದ ಪುಸ್ತಕಗಳ ಮಿತಿ ಮನದಟ್ಟಾಗಿದೆ. ತಾನು ಇದುವರೆಗೂ ರಚಿಸಿದ್ದ ಬರಹವೆಲ್ಲವೂ ಗದ್ದುಗೆಯಲ್ಲಿದ್ದವರ, ಉಳ್ಳವರ, ಜಾತಿ ಮತ ದೇವರ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದವರ ಪರವಾಗಿತ್ತೇ ಹೊರತು , ನಾಡಿಗೆ ಅಗತ್ಯವಾದುದೆಲ್ಲವನ್ನೂ ನೀಡಿ ಜನಸಮುದಾಯಕ್ಕಾಗಿ ದುಡಿದು ಹಸಿವು ಬಡತನ ಮತ್ತು ಅಪಮಾನದಲ್ಲಿ ನೋಯುತ್ತಿರುವವರ ಪರವಾಗಿ ಇರಲಿಲ್ಲವೆಂಬ ದಿಟ ಗೋಚರಿಸಿದೆ. ಸಾಮಾಜಿಕ ಅನ್ಯಾಯವನ್ನಾಗಲಿ, ದರ್‍ಮದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನಾಗಲಿ ಇಲ್ಲವೇ ಸಂಪತ್ತಿನ ವಿತರಣೆಯಲ್ಲಿ ಮಾಡಿರುವ ಬಡವ/ಬಲ್ಲಿದರ ನಡುವಣ ದೊಡ್ಡ ಅಂತರದ ವ್ಯವಸ್ತೆಯನ್ನಾಗಲಿ ತನ್ನ ಬರಹಗಳು ಎಂದಿಗೂ ಪ್ರಸ್ತಾಪ ಮಾಡಿಲ್ಲವಾದ್ದರಿಂದ, ತನ್ನ ಪುಸ್ತಕವನ್ನು ಸರಕಾರವು ಹಾನಿಕಾರಕವೆಂದು ಪರಿಗಣಿಸಿಲ್ಲವೆಂಬ ಸತ್ಯ ಗೋಚರಿಸುತ್ತದೆ. ತನ್ನ ಬರಹ ಮತ್ತು ತನ್ನ ವ್ಯಕ್ತಿತ್ವದ ಬಗ್ಗೆ ತನ್ನಲ್ಲಿಯೇ ಮೂಡಿದ ತಿರಸ್ಕಾರದ ಒಳಮಿಡಿತಗಳನ್ನು ಹತ್ತಿಕ್ಕಿಕೊಳ್ಳಲಾಗದೆ, ಜನರ ಒಳಿತಿಗಾಗಿ ಮಿಡಿಯದ ಸಾಹಿತ್ಯವನ್ನು ಬರೆದಿರುವ ನನ್ನಂತಹವನ ಬದುಕಿಗಾಗಲಿ ಇಲ್ಲವೇ ಬರಹಕ್ಕಾಗಲಿ ಯಾವುದೇ ಬೆಲೆಯಿಲ್ಲವೆಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಈ ಕವನದ ಓದಿಗೆ ಪೂರಕವಾಗಿ ಜರ್‍ಮನಿ ದೇಶ ಮತ್ತು ಬ್ರೆಕ್ಟ್ ಕವಿಯ ಬಗೆಗಿನ ಕೆಲವು ಸಂಗತಿಗಳನ್ನು ತಿಳಿಯಬಹುದು.

1. ಜರ್‍ಮನಿಯಲ್ಲಿ ಸರ್‍ವಾದಿಕಾರಿಯಾಗಿದ್ದ ಅಡಾಲ್ಪ್ ಹಿಟ್ಲರನ ಆಡಳಿತ ಕಾಲದಲ್ಲಿ(ಕ್ರಿಶ 1933-1945) ಬರ್‍ಲಿನ್ ನಗರದಲ್ಲಿ 10-ಮೇ-1933 ರಂದು ಜರ್‍ಮನ್ ಸ್ಟೂಡೆಂಟ್ಸ್ ಯೂನಿಯನ್ ವತಿಯಿಂದ ‘ಪುಸ್ತಕಗಳನ್ನು ಸುಡುವ ಕಾರ್‍ಯಾಯಾಚರಣೆ’ ನಡೆಯಿತು. “ಜಗತ್ತಿನ ಜನಸಮುದಾಯದಲ್ಲಿ ಆರ್‍ಯನ್ ಜನಾಂಗವೇ ಅತ್ಯುತ್ತಮವಾದುದು” ಎಂಬ ನಾಜಿ ತತ್ವದಿಂದ ಪ್ರೇರಿತರಾಗಿದ್ದ ಜರ್‍ಮನ್ ಯುವಕರು ಯಹೂದಿ ಜನಾಂಗದವರು ರಚಿಸಿದ್ದ ಪುಸ್ತಕಗಳನ್ನು ಮತ್ತು ನಾಜಿ ತತ್ವದ ಜನಾಂಗೀಯ ಕ್ರೂರತನಕ್ಕೆ ವಿರುದ್ದವಾದ ವಿಚಾರಗಳನ್ನೊಳಗೊಂಡ ಅನೇಕ ಬರಹಗಾರರ ಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟರು. ಈ ಕಾರ್‍ಯಾಚರಣೆಯಲ್ಲಿ ಸುಟ್ಟು ಬೂದಿಯಾದ ಪುಸ್ತಕಗಳ ರಾಶಿಯಲ್ಲಿ ಸಮತಾವಾದಿ ಕಾರ್‍ಲ್ ಮಾರ್‍ಕ್ಸ್, ಬೌತ ವಿಜ್ನಾನಿ ಐನ್ ಸ್ಟೀನ್, ಮನೋ ವಿಜ್ನಾನಿ ಸಿಗ್ಮಂಡ್ ಪ್ರಾಯ್ಡ್, ಸಾಹಿತಿ ಬ್ರೆಕ್ಟ್ ಮುಂತಾದವರ ಪುಸ್ತಕಗಳು ಸೇರಿದ್ದವು.

2. ಬ್ರೆಕ್ಟ್ ಅವರು ‘ಪುಸ್ತಕ ದಹನ’ ಎಂಬ ಈ ಕವನವನ್ನು ಕ್ರಿಶ 1935 ರಲ್ಲಿ ರಚಿಸಿದರು. ಈ ವೇಳೆಗಾಗಲೇ ಜರ್‍ಮನಿಯಲ್ಲಿ ಹಿಟ್ಲರನ ಜನಾಂಗೀಯ ದಾಳಿಯಲ್ಲಿ ಯಹೂದಿಗಳ ಮೇಲೆ ಹಲ್ಲೆ, ಕೊಲೆ, ಸುಲಿಗೆಗಳು ಹೆಚ್ಚಾಗಿದ್ದುದರಿಂದ ಯೆಹೂದಿಯಾದ ಬ್ರೆಕ್ಟ್ ತಮ್ಮ ಸೆರೆಯಾಗಬಹುದೆಂದು ಹೆದರಿ, ಬರ್‍ಲಿನ್ ನಗರವನ್ನು ತೊರೆದು ದೇಶಾಂತರವಾಸಿಯಾಗಿ ಆಸ್ಟ್ರಿಯಾ, ಸ್ವಿಟ್ಜರ್ ಲ್ಯಾಂಡ್, ಪ್ರಾನ್ಸ್ ಗಳಲ್ಲಿ ಕೆಲವು ವರುಶಗಳ ಕಾಲ ಇದ್ದು, 1941 ರಲ್ಲಿ ಅಮೆರಿಕ ದೇಶಕ್ಕೆ ಬಂದು ನೆಲೆಸಿದರು. ಹಿಟ್ಲರ್ ನ ಮರಣದ ನಂತರ, ಅಮೆರಿಕ ದೇಶದಿಂದ ಯುರೋಪಿಗೆ 1947 ರಲ್ಲಿ ಹಿಂತಿರುಗಿ ಬಂದು, ಅನಂತರ ಇಬ್ಬಾಗಗೊಂಡ ಜರ್‍ಮನಿಯ ಪೂರ್‍ವ ಬರ್‍ಲಿನ್ ನಗರದಲ್ಲಿ ಬ್ರೆಕ್ಟ್ ಅವರು 1948 ರಿಂದ ನೆಲೆಗೊಂಡು ರಂಗ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks