ನಾ ನೋಡಿದ ಸಿನೆಮಾ: ಆರಾಮ್ ಅರವಿಂದ ಸ್ವಾಮಿ
ಕನ್ನಡದಲ್ಲಿ ಕಮರ್ಶಿಯಲ್ ಸಿನೆಮಾಗಳಿಗೇನು ಕಮ್ಮಿ ಇಲ್ಲ. ಅದೇ ಸಾಲಿಗೆ ಸೇರುವ, ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದ ಅಕಿರ ಸಿನೆಮಾ ಕ್ಯಾತಿಯ ಅನೀಶ್ ತೇಜೇಶ್ವರ್ ನಟಿಸಿರುವ ಆರಾಮ್ ಅರವಿಂದಸ್ವಾಮಿ ಸಿನೆಮಾ 2024 ನವೆಂಬರ್ 22 ರಂದು ತೆರೆಗೆ ಬಂದಿದೆ.
ತನಗೆ ಹಲವಾರು ನೋವುಗಳಿದ್ದರೂ, ಇಡೀ ಊರೇ ನಾಯಕನಿಗೆ, ಅವನಿಗೇನು ಆರಾಮಾಗಿದ್ದಾನೆ ಎಂದರೆ ಹೇಗಿರಬೇಡ. ಇದೆ ಈ ಸಿನಿಮಾದಲ್ಲಿ ನಾಯಕನಿಗಿರುವ ಸಮಸ್ಯೆ. ನಾಯಕ ತನಗಿರುವ ಕಶ್ಟಗಳನ್ನು ಹೇಳಿಕೊಂಡರೂ, ಯಾರೂ ನಂಬಲು ತಯಾರಿಲ್ಲ. ಇದಶ್ಟೆ ಅಲ್ಲದೆ, ನಾಯಕ ಒಬ್ಬ ಪ್ರಬಾವಿ, ಜೀವನದಲ್ಲಿ ಎಲ್ಲಾ ಇರುವವನು ಎನ್ನುವ ನಂಬಿಕೆ ಸುತ್ತ ಮುತ್ತಲಿನ ಜನರದ್ದು. ಇದನ್ನು ಕೇಳಿ ಅಳಬೇಕೋ, ನಗಬೇಕೋ ಎನ್ನುವ ಪರಿಸ್ತಿತಿ ನಾಯಕನದ್ದು. ಇದರೊಟ್ಟಿಗೆ ಸುಳ್ಳುಗಳ ಸರಮಾಲೆಯನ್ನೇ ಹೆಣೆದು, ಪ್ರೀತಿಯನ್ನು ದಕ್ಕಿಸಿಕೊಂಡಿರುವ ನಾಯಕ. ಪ್ರೀತಿಸಿದ ಹುಡುಗಿಯೊಂದಿಗೆ ಸುಂದರ ಬದುಕನ್ನು ಕಟ್ಟಿಕೊಳ್ಳುವಶ್ಟರಲ್ಲಿ ಎಲ್ಲವೂ ಅಯೋಮಯ ಎಂಬಂತೆ ಬದಲಾದಾಗ, ಮುಂದೆ ನಾಯಕನ ಗತಿ ಏನು ಎನ್ನುವುದೇ ಸಿನೆಮಾದ ಕತೆ.
ಅನೀಶ್ ಅವರು ಒಬ್ಬ ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಹಲವು ವರುಶಗಳಿಂದ ಒಂದು ಗೆಲುವಿಗಾಗಿ ಕಾದಿರುವ ಅನೀಶ್ ಅವ್ರು ಇಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕನ ಪ್ರೇಯಸಿಯಾಗಿ ಮಿಲನಾ ನಾಗರಾಜ್ ಆವರು ನಟಿಸಿದ್ದಾರೆ. ಮತ್ತೊಂದು ಪ್ರಮುಕ ಪಾತ್ರದಲ್ಲಿ ಹ್ರಿತಿಕಾ ಶ್ರೀನಿವಾಸ್ ಅವರು ನಟಿಸಿದ್ದು, ತಮ್ಮ ಮುಗ್ದ ನಟನೆಯ ಮೂಲಕ ನೋಡುಗರನ್ನು ಸೆಳೆಯುತ್ತಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಗೌರವ್ ಶೆಟ್ಟಿ, ಆರ್ ಜೆ ವಿಕ್ಕಿ, ಮಂಜುನಾತ್ ಹೆಗ್ಡೆ, ರಗು ರಾಮನಕೊಪ್ಪ ಹಾಗೂ ಇತರರು ನಟಿಸಿದ್ದಾರೆ.
ಗಣಿ ಬಿ. ಕಾಮ್ ಪಾಸ್ ಕ್ಯಾತಿಯ ಅಬಿಶೇಕ್ ಶೆಟ್ಟಿ ಅವರ ಚಿತ್ರಕತೆ ಹಾಗೂ ನಿರ್ದೇಶನವಿದ್ದು, ಅರ್ಜುನ್ ಜನ್ಯ ಅವರ ಸಂಗೀತವಿದೆ. ಶಿವಸಾಗರ್ ವೈ ವಿ ಬಿ ಅವರ ಸಿನೆಮಾಟೊಗ್ರಪಿ, ಉಮೇಶ್ ಆರ್ ಬಿ ಅವರ ಎಡಿಟಿಂಗ್ ಇದ್ದು, ಐಕ್ಯಾ ಸ್ಟುಡಿಯೋ ಅವರು ಈ ಸಿನೆಮಾವನ್ನು ನಿರ್ಮಿಸಿದ್ದಾರೆ.
ಒಂದು ರೊಮ್ಯಾಂಟಿಕ್ ಕಾಮಿಡಿ ಸಿನೆಮಾ ಎಂದು ಪ್ರಚಾರಗೊಂಡಿದ್ದ ಈ ಸಿನೆಮಾ, ಟ್ರೇಲರ್ ಮೂಡಿಸಿದ್ದ ಬರವಸೆಯನ್ನು ಕಾಯ್ದುಕೊಳ್ಳುವಲ್ಲಿ ಎಡವಿದೆ. ಬೆರಳೆಣಿಕೆಯಶ್ಟು ಹಾಸ್ಯ ದ್ರುಶ್ಯಗಳು, ಒಂದೆರಡು ಎಮೋಶನಲ್ ಸನ್ನಿವೇಶಗಳನ್ನು ಬಿಟ್ಟರೆ ನೋಡುಗರನ್ನು ಹಿಡಿದಿಡುವ ಸನ್ನಿವೇಶಗಳು ಕಡಿಮೆಯೇ. ನೋಡುಗರಿಗೆ ಬೇಸರ ತರಿಸದೆ ಕತೆ ಮುಂದೆ ಸಾಗುತ್ತದೆಯಾದರೂ, ಕತೆಯಲ್ಲಿ ಹೊಸತನವಾಗಲಿ, ಇಲ್ಲವೇ ನೋಡುಗನನ್ನು ಸೆಳೆಯುವ ಅಂಶಗಳಾಗಲಿ ಇಲ್ಲ. ಯಾವುದೇ ರೀತಿಯ ಅಪೇಕ್ಶೆ ಇಲ್ಲದೆ ಒಮ್ಮೆ ನೋಡಬಹುದಾದ ಸಿನೆಮಾ ಇದಾಗಿದೆ.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು