ಕಿರುಬರಹ: ಒಳಿತು ಮಾಡು ಮನುಸ
ಒಳಿತು ಮಾಡು ಮನುಸ… ನೀ ಇರೋದು ಮೂರು ದಿವಸ
ಈ ದೇಹವೆಂಬುದು ನಶ್ವರ, ನಾವು ಸತ್ತ ಮೇಲೆ ಹೆಣ ಎನ್ನುತ್ತಾರೆ ವಿನಹ ಯಾರು ಹೆಸರು ಹಿಡಿದು ಕರೆಯುವುದಿಲ್ಲ! ಮನುಶ್ಯನ ದೇಹಕ್ಕೆ ಬದುಕಿದ್ದಾಗ ಇದ್ದ ಗೌರವ, ಬೆಲೆ ಉಸಿರು ನಿಂತು ಹೆಣವಾಗಿ ಮಲಗಿದ ಮೇಲೆ ಇರುವುದಿಲ್ಲ. ಆತ ಸತ್ತ ನಂತರ ಆತ ಮಾಡಿರಬಹುದಾದ ಒಳ್ಳೆಯ ಕೆಲಸಗಳು ನೆನೆಯುತ್ತಾರೆ, ಆತನಲ್ಲಿ ಪರೋಪಕಾರದ ಗುಣವಿದ್ದು ನಾಲ್ಕು ಜನರಿಗೆ ಸಹಾಯ ಮಾಡಿದ್ದರೆ ಆತನನ್ನು ಹಾಡಿ ಹೊಗಳುತ್ತಾರೆ. ಆತನೇನಾದರೂ ಅವಗುಣಗಳ ಮಾಲೀಕನಾಗಿ ನಾಲ್ಕಾರು ಜನರಿಗೆ ಕಿರುಕುಳ ಕೊಟ್ಟಿದ್ದರೆ, ಪಿಸುಣನಾಗಿ ಪರೋಪಕಾರಿಯಾಗಿಲ್ಲದಿದ್ದರೆ ಜನರು ಹಿಡಿ ಶಾಪ ಹಾಕಿ ನಿಂದಿಸುತ್ತಾರೆ.
ಜೀವನವೆಂಬುದು ಮೂರು ದಿನದ ಸಂತೆ ಅದನ್ನೆ ನಗುನಗುತ ಕಳೆಯಬೇಕು. “ಪರೋಪಕಾರಂ ಇದಂ ಶರೀರಂ” ಎನ್ನುವ ಮಾತಿನಂತೆ ಜೀವನದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣವನ್ನು ಬೆಳೆಸಿಕೊಂಡಿರಲೇಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ ಎಂಬ ಒಂದು ಮಾತಿದೆ. ಅಂದರೆ ಅದು ಪ್ರೀತಿ, ಅನುಕಂಪ, ಸಹಾಯಹಸ್ತ ಏನೇ ಆಗಿರಬಹುದು. ನಾವು ಮಾಡುವ ಸಣ್ಣ ಸಣ್ಣ ಸಹಾಯವೂ ಕೂಡಾ ಕುಶಿ ನಮಗೆ ನೀಡುತ್ತದೆ.
ಸ್ವಾರ್ತವೇ ಪ್ರದಾನವಾಗಿರುವ ಈ ಜಗತ್ತಿನಲ್ಲಿ ಪರರಿಗೆ ಉಪಕಾರ ಮಾಡಬೇಕೆಂಬ ಮನೋಬಾವ ತಾಳುವುದು ಅಶ್ಟು ಸುಲಬದ ಮಾತಲ್ಲ. ಎಶ್ಟೇ ಇದ್ದರೂ ನನಗೆ ಇರಲಿ ಎಂಬ ದುರಾಸೆಯ ಮನುಶ್ಯನಿಗೆ ಪರೋಪಕಾರವೆಂಬುದು ಸಂಸ್ಕಾರದಿಂದ ಬರಲು ಮಾತ್ರ ಸಾದ್ಯ! ಯಾರಲ್ಲಿ ಕರುಣೆ, ಪ್ರೀತಿ, ಪರರಿಗೆ ಪ್ರೀತಿ ವಿಶ್ವಾಸ ತೋರುವುದು, ಕಶ್ಟದಲ್ಲಿದ್ದವರಿಗೆ ಸ್ಪಂದಿಸುವ ಮನೋಬಾವ ಇರುತ್ತದೋ ಅವರು ನಿಜವಾಗಿಯೂ ಆತ್ಮ ಸಂತ್ರುಪ್ತಿ ಹೊಂದುವುದರ ಜೊತೆಗೆ ಸುಕಿಗಳಾಗಿ ಬದುಕುತ್ತಾರೆ. ನಮಗೆ ಇನ್ನೊಬ್ಬರಿಗೆ ಸಹಾಯ ಮಾಡಲು ಆಗದಿದ್ದರೂ ಪರವಾಗಿಲ್ಲ ಅವರಿಗೆ ತೊಂದರೆ ಕೊಡದಂತೆ ಬದುಕಿದರೆ ಸಾಕು ಅದರಿಂದ ಎಶ್ಟೋ ಪುಣ್ಯ ಲಬಿಸುತ್ತದೆ.
ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು?
ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ?
ಶಿವಬಕ್ತನಾಗಿ ಬಕ್ತಿಪಕ್ಶವಿಲ್ಲದಿದ್ದರೆ ಕಾಗೆ ಕೋಳಿಯಿಂದ ಕರಕಶ್ಟ! ಕೂಡಲಸಂಗಮದೇವಾ.
ಎಂಬ ಬಸವಣ್ಣನವರ ವಚನದಲ್ಲಿ ಕಾಗೆ ಕೋಳಿಗಳು ಆಹಾರ ಕಂಡಾಕ್ಶಣ ತನ್ನ ಬಳಗವನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುವ ಪ್ರೀತಿ ವಾತ್ಸಲ್ಯ ಹೊಂದಿರುವಾಗ, ಬುದ್ದಿ, ಆಲೋಚನೆ ಹೊಂದಿದ ಮನುಶ್ಯ ಮಾತ್ರ ಪ್ರೀತಿ ಪ್ರೇಮ ಮರೆತು, ಸ್ವಾರ್ತಿಯಾಗಿ ಇನ್ನೊಬ್ಬರೊಡನೆ ಹಂಚಿ ತಿನ್ನದೇ… ಹೆಚ್ಚಾಗಿ ಚೆಲ್ಲಿದರೂ ಇನ್ನೊಬ್ಬರಿಗೆ ಕರೆದು ದಾನ ಮಾಡುವ ಬುದ್ದಿ ಬರದಿದ್ದರೆ ಮನುಶ್ಯ ಪ್ರಾಣಿ ಪಕ್ಶಿಗಳಿಗಿಂತ ಕಡೆ.
ಬದುಕಿರುವಾಗ ಪರಸ್ಪರ ಸಹೋದರ ಬಾವದಿಂದ ಪ್ರೀತಿ ಹಂಚಿ ಸೌಹಾರ್ದದಿಂದ ಬದುಕಿದರೆ ಆ ಬದುಕು ಸಾರ್ತಕವೆನಿಸುತ್ತದೆ. ಶಾಶ್ವತವಲ್ಲದ ನಮ್ಮ ಜೀವ, ಸತ್ತಾಗ ಹೊತ್ತಕೊಂಡು ಹೋಗದ ಹಣ ಆಸ್ತಿಯನ್ನು ದುರಾಸೆಯಿಂದ ಕೂಡಿಟ್ಟು ಬದುಕುವುದಕ್ಕಿಂತ ಕೊಂಚ ಪರೋಪಕಾರಿಯಾಗಿ ಬದುಕಿದರೆ ಆತ ಇತರರ ದ್ರುಶ್ಟಿಯಲ್ಲಿ ವಿಶೇಶ ವ್ಯಕ್ತಿಯಾಗಿ, ತಾನು ಅಳಿದ ಮೇಲು ಕೆಲವರ ಹ್ರುದಯದಲ್ಲಿ ಶಾಶ್ವತ ಸ್ತಾನ ಪಡೆದುಕೊಳ್ಳುತ್ತಾನೆ ಆದ್ದರಿಂದ ‘ಒಳಿತು ಮಾಡು ಮನುಸ ನೀನು ಇರೊದು ಮೂರು ದಿವಸ’.
(ಚಿತ್ರ ಸೆಲೆ: needpix.com)
ಇತ್ತೀಚಿನ ಅನಿಸಿಕೆಗಳು