ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 13 ನೆಯ ಕಂತು – ರಾಜ್ಯ ಸಮರ್‍ಪಣ
– ಸಿ.ಪಿ.ನಾಗರಾಜ.
*** ರಾಜ್ಯ ಸಮರ್‍ಪಣ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ರಾಜ್ಯ ಸಮರ್ಪಣ’ ಎಂಬ ಆರನೆಯ ಅಧ್ಯಾಯದ 1 ರಿಂದ 27 ರ ವರೆಗಿನ ಇಪ್ಪತ್ತೇಳು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ವಿಶ್ವಾಮಿತ್ರ: ಒಬ್ಬ ಮುನಿ. ಈತನು ಕುಶಿಕನೆಂಬ ರಾಜನ ಮಗನಾದ್ದರಿಂದ ಕೌಶಿಕ ಎಂಬ ಮತ್ತೊಂದು ಹೆಸರಿದೆ.
ಹರಿಶ್ಚಂದ್ರ: ಅಯೋಧ್ಯೆಯ ರಾಜ.
*** ರಾಜ್ಯ ಸಮರ್ಪಣ ***
ಧರೆ ಬಿರಿಯಲ್ ಅಳ್ಳಿರಿವ ಅನಂತ ನಿಸ್ಸಾಳದ ಅಬ್ಬರವನ್ ಆಲಿಸಿ… ಪುರದ ಕೇರಿಗಳನ್ ಒಪ್ಪೆ ಸಿಂಗರಿಸಿ… ಮನೆಮನೆಗಳೊಳು ಗುಡಿತೋರಣಂಗಳ ಸರ ತೆಗೆದು… ಸಂಭ್ರಮದಲಿ… ಅರರೆ… ಪರಿಜನಮ್ ಆ ಹರಿಶ್ಚಂದ್ರ ಭೂವರನನ್ ಮತ್ತೆ ಇದಿರ್ಗೊಳಲು ಶಶಿಯನ್ ಇದಿರ್ಗೊಂಡು ಹೆಚ್ಚುವ ಅಂಭೋಧಿಯಂತೆ ಕೋಟಾಕೋಟಿ ಕರಿ ತುರಗ ರಥ ಪತ್ತಿ ಬೆರಸಿ ನಡೆದರು ಮುತ್ತಿ ಮುಸುಕಿದ ಹಲವು ಕೈದುಗಳ ಝಲ್ಲರಿಗಳ ಒತ್ತಿನೊಳು… ತಳಿತ ಬೆಳುಗೊಡೆಗಳ ಇಡುಕುರ ನೆಳಲ ಕುತ್ತುರೊಳು ಡಾಳಿಸುವ ಚಮರಿ ಸೀಗುರಿಗಳ ಒಗ್ಗಿನ ಕುರುಹು ಪಿಡಿದು ನಡೆದು… ಎತ್ತಿದ ಮೊಗಮ್ ನಿಲುಕಿ ನೋಳ್ಪ ಕಂಗಳು ಮುಗಿದು ಹೊತ್ತ ಕೈ…
ಪ್ರಜೆಗಳು: ಅವಧಾರು… ಜೀಯ…
(ಎಂದೆಂಬ ನುಡಿವೆತ್ತು ಹತ್ತಿರೆ ಬಂದು ಮುನಿಯ ಮೊಗವಮ್ ಕಂಡ ಹೊತ್ತನ್ ಇನ್ನು ಏನ್ ಪೊಗಳ್ವೆನು. ನಸು ನನೆಯನ್ ಅಪ್ಪಿದ ಅಳಿಕುಳದಂತೆ; ಕಡುಹಸಿದು ಕಸುಗಾಯನ್ ಅಗಿದ ಗಿಳಿಗಳ ಬಳಗದಂತೆ; ನಿಟ್ಟಿಸದೆ ವಿಷಮನ್ ಸವಿದ ಶಿಶುವಿಸರದಂತೆ; ಕೊರಡಮ್ ಕರ್ದುಕಿ ಚಂಚು ನೊಂದು ಕುಸಿದ ಪಿಕನಿಕರದಂತೆ
ಪುರಜನಮ್ ಆಸತ್ತು ಬೇಸತ್ತು ಬಸವಳಿಯುತ, ಹೊಲಗೆಟ್ಟ ಕರು ತಾಯನ್ ಅರಸುವಂತೆ ಮಾಮಸಕದಿಮ್ ಅಂದು ಮಂದಿಗಳೊಳ್ ಭೂಪನನ್ ಅರಸಿದರು.
ಹಗಲ್ ಒಗೆದ ಚಂದ್ರಕಳೆಯಂತೆ; ಬಿರುವೈಶಾಖ ಅಗಿದ ಬನದಂತೆ; ಬಿಸಿಳೊಲು ಬಿಸುಟ ತಳಿರಂತೆ; ಮೊಗ ಕಂದಿ ಕಳೆಗುಂದಿ; ಅರುವೆ ಕಪ್ಪಡವುಟ್ಟು, ರಾಗವಳಿದು ಒಪ್ಪಗೆಟ್ಟು, ಮಗನ್ ಅರಸಿ ಮಂತ್ರಿ ಸಹಿತ ಅವನಿಪನ್ ಕೌಶಿಕನ ಹಿಂದೆ ದೇಸಿಗನಂತೆ ಕಾಹಿನೊಳು ಬರೆ ಕಂಡು, ಬಗೆ ಬೆದರಿ ಹೊದ್ದಿ ಹೊಡೆವಟ್ಟು…)
ಪ್ರಜೆಗಳು: ಕಾಣಿಕೆಯ ಚಿತ್ತೈಸು ಭೂಭುಜ.
(ಎಂದರು. ಆಗ ಹರಿಶ್ಚಂದ್ರನು…)
ಹರಿಶ್ಚಂದ್ರ: ಎನಗೆ ಅರಸುತನ ಮಾದು ಹೋಗಿ, ವಿಶ್ವಾಮಿತ್ರಮುನಿಗೆ ಆದುದು. ಆತನನ್ ಕಂಡು ಕಾಣಿಕೆಯನಿತ್ತು ಅನುದಿನಮ್ ಬೆಸಕೈವುದು.
ಪ್ರಜೆಗಳು: ಒಲ್ಲೆವು.
(ಎನಲು ಬೋಧಿಸಿ, ಬಲಾತ್ಕಾರದಿಂದ ಜನವ ಕಾಣಿಸಿ, ಕಾಣಿಕೆಯ ಕೊಡಿಸಿ, ಹಿಂದುಗೊಂಡು ಇನಕುಲಲಲಾಮನ್ ಎಯ್ತಂದು ಪುರಮಮ್ ಹೊಕ್ಕು, ಮನದೊಳ್
ಉತ್ಸವದ ಹೆಚ್ಚುಗೆ ಅಳಿದು ನಿಂದ ಮಂದಿಯ ನೋಡುತಮ್ ನಡೆದನು. ನೂಕಿ ನಡೆದು… ಅರಮನೆಯ ಹೊಕ್ಕು… ಸಿಂಹಾಸನಕ್ಕೆ ಆ ಕೌಶಿಕನ್ ಬಂದು, ಭೂಭುಜನ
ಕೈಯ ಪಿಡಿದು…)
ವಿಶ್ವಾಮಿತ್ರ: ಈ ಕಟಕ… ಈ ಕೋಟೆ… ಈ ಕರಿಗಳ್… ಈ ತುರಗ… ಈ ರಥಗಳ್… ಈ ಪರಿಜನ… ಈ ಕೋಶ… ಈ ಕಾಂತೆ… ಈ ಕುವರನ್… ಈ ಮಂತ್ರಿ… ಈ ಕಾಮಿನೀ ಜನಮ್ ಮರುಗದಂತೆ
ಅರಸಾಗಬೇಕಾದಡೆ, ಎನ್ನ ಮಕ್ಕಳ ಮದುವೆಯಾಗು. ಕಾಡದೆ ಬಿಟ್ಟು ಹೋಹೆನ್.
ಹರಿಶ್ಚಂದ್ರ: ಹೆತ್ತ ತಾಯನ್ ಮಾರಿ, ತೊತ್ತ ಕೊಂಬರೆ… ಮೂಗನ್ ಇತ್ತು, ಕನ್ನಡಿಯ ನೋಡುವರೆ… ಮಾಣಿಕದ ತೊಡವನ್ ಒತ್ತೆಯಿಟ್ಟು, ಒಡೆದ ಗಾಜಮ್ ಹಿಡಿವರೇ… ಕೋಪದಿಮ್
ಸತ್ತು, ಮದುವೆಯಹರೆ… ಕತ್ತುರಿಯ ಸುಟ್ಟು, ಅರಳ ಕುರುಕಲನು ಗೆಯ್ವರೇ… ಚಿತ್ತೈಸು, ಹೊಲತಿಯರ ನೆರೆದು, ನಾನ್ ಓವದಿ ಇಪ್ಪತ್ತೊಂದು ತಲೆವೆರಸಿ ನರಕಕ್ಕೆ
ಹೋಹೇನೇ… ಮುನಿನಾಥ ಹೇಳ್.
ವಿಶ್ವಾಮಿತ್ರ: ಒಲ್ಲನಿರಬೇಡ.
ಹರಿಶ್ಚಂದ್ರ: ಲೇಸು… ಒಲ್ಲೆ.
ವಿಶ್ವಾಮಿತ್ರ: ಏಕೊಲ್ಲೆ.
ಹರಿಶ್ಚಂದ್ರ: ಎಮ್ಮಲ್ಲಿ ತಪ್ಪಿಲ್ಲಾ…
ವಿಶ್ವಾಮಿತ್ರ: ಆದಡೆ ಇನ್ನು ನೀನೀಗ ನಿನಗುಳ್ಳ ಪರಿವಾರಮಮ್ ಬೇಗದಲಿ ಕರೆಸು. ಇಂತು ಚತುರಂಗಬಲ ಸೇನೆಯ… ಸಲ್ಲಲಿತ ದೇಶಕೋಶವನು… ಕಟಕವನು… ಅವಕ್ಕುಳ್ಳ ಕುಲಕರಣ
ದುರ್ಗಮ್ ಮುದ್ರೆ ಮೊದಲಾದುವೆಲ್ಲವಮ್ ಬಿಡದೆ ಒಪ್ಪುಗೊಟ್ಟು ಹೋಗು… ಏಳು.
(ಎನಲು, ಭೂನಾಥನು ಕರಸಿದನ್. ಬಾಡಿದ ಮೊಗಮ್… ಬರತ ಬಾಯ್… ಸುರಿವ ನಯನಾಂಬು… ಪಾಡಳಿದ ಮತಿ… ನೀಡಿ ಬೆಳೆದ ಸುಯ್… ದುಗುಡ ಒಕ್ಕಾಡುವ
ಅಂಗಮ್… ನಿರೋಧಾಗ್ನಿಯಿಮ್ ಕುದಿದು ಮರುಗುವ ಮನಮ್… ಮಾಸಿದ ಮುದಮ್ ಕೂಡೆ ಬಂದ ಅಖಿಳ ಪರಿವಾರಮಮ್, ಸತಿಯರಮ್, ನಾಡೆ ಚತುರಂಗ
ಬಲವಮ್, ಪುರಜನಂಗಳಮ್ ಆ ಧೈರ್ಯನಿಧಿ ಭೂಪನು ನೋಡಿ… ತೋರಿಸಿ… ಬೇರೆ ಬೇರೆ ಒಪ್ಪುಗೊಡುತಿರ್ದನ್.)
ಹರಿಶ್ಚಂದ್ರ: ಇದು ರತ್ನ ಭಂಡಾರ… ಇದು ಹೇಮ ಭಂಡಾರ… ಇದು ಸುನಾಣೆಯ ವರ್ಗ… ಇದು ಪಟ್ಟಕರ್ಮಕುಲ… ಇದು ಬೆಳ್ಳಿ ಉಗ್ರಾಣ… ಇದು ಕಂಚಿನ ಗ್ರಾಣ… ಇದು
ಸರ್ವ ಶಸ್ತ್ರಶಾಲೆ… ಇದು ಹಸ್ತಿ ಸಂದೋಹ… ಇದು ತುರಗ ಸಂತಾನ… ಇದು ವರೂಥ ಪ್ರಕರ… ಇದು ಪದಾತಿ ವ್ರಾತ… ನೋಡಿಕೋ.
(ಎನುತ ಭೂನಾಥ ಕಂದರ್ಪನು ಆ ಮುನಿಗೆ ಒಪ್ಪಿಸಿದನ್.)
ಹರಿಶ್ಚಂದ್ರ: ಇದು ಹಿರಿಯ ಬಿರುದಿನ ಮುದ್ರೆ… ಇದು ನಗರ… ಇದು ಪೂರ್ವದ ಅರಮನೆ… ಇದು ಅಖಿಳ ಪರಿವಾರ… ಇದು ಸಿವುಡಿ… ಇದು ಕರಣ… ಇದು ಮೇಲುಳ್ಳ
ಸರ್ವಸ್ವ… ನೋಡಿಕೋ, ಮಹಾಪುರುಷ.
(ಎಂದು ವರ ಕೌಶಿಂಗೆ ಒಪ್ಪುಗೊಟ್ಟು…)
ಹರಿಶ್ಚಂದ್ರ: ಎಲ್ಲ ಸಂದುದೇ… ಪರಿಣಾಮವೇ… ಇನ್ನು ಹೋಹೇನೇ… ಮುನಿನಾಥ ಕರುಣಿಸಿದಿರೇ…
(ಎಂದು ಪೊಡವಂಟು ಹೋಹ ಅರಸನೊಡನೆ ಆ ಮುನಿಪನು ಎದ್ದನ್. ಪೊರಮಡುವ ಭೂಪಾಲನನ್ ಕಂಡು… ಕಣ್ಗೆಟ್ಟು ಮರುಗಿ… ಬಸುರಮ್ ಹೊಸೆದು… ಬಸವಳಿದು… ಬಿಸುಸುಯ್ದು…ಮೊರೆಯಿಟ್ಟು…ಬಾಯ್ವಿಟ್ಟು… ಕೈನೀಡಿ ಕರೆದು ಕಟ್ಟೊರಲಿ ಸೈರಿಸಲಾರದೆ…)
ಪೌರಜನ: ನೆರೆ ನಿನ್ನ ನಂಬಿ ನಚ್ಚಿರ್ದ ಪರಿವಾರಮಮ್ ಮರೆದೆಯೋ… ತೊರೆದೆಯೋ… ಮಾರಿದೆಯೊ. ಪೇಳು, ನೇಸರ ಕುಲಜ.
(ಎಂದೆಂದು ಪೌರಜನವು ನುಡಿನುಡಿದು ಮಿಡುಮಿಡನೆ ಮಿಡುಕಿತ್ತು.)
ಪೌರಜನ: ದಂತಿಯಿಂದಿಳಿದು ನಡೆದು ಅರಿಯದವ, ಬರಿಗಾಲೊಳ್ ಎಂತು ಅಡಿಯನ್ ಇಡುವೆ; ಹಾಸಿನೊಳು ಪವಡಿಸುವಾತನ್, ಎಂತು ಕಲು ನೆಲದೊಳು ಒರಗುವೆ; ಸಿತಚ್ಛತ್ರ
ತಂಪಿನೊಳು ಬಪ್ಪಾತ ನೀನು… ಎಂತು ಬರ ಬಿಸಿಲನ್ ಆನುವೆ; ಪುರದೊಳ್ ಇಪ್ಪಾತನ್… ಎಂತು ಅರಣ್ಯದೊಳಿಪ್ಪೆ; ಜನವನ್ ಅಗಲ್ದು ಅರಿಯದವನ್… ಎಂತು ಏಕಾಕಿಯಾಗಿಪ್ಪೆ… ಪೇಳ್…
(ಎಂದು ಸಮಸ್ತ ಜನವು ಬಾಯ್ವಿಟ್ಟುದು.)
ಪೌರಜನ-ಒಂದು ಗುಂಪು: ಕೊಟ್ಟು ಬೇಸರದ ಮುಗುದ ಅರಸು ದೊರಕಿದನಲಾ ಎಂದು ಹೊರಗೆ ದಾನವ ಬೇಡುವವರುಂಟೆ. ಕಟ್ಟರೆಗಂಡ… ಪಾಪಿ… ನಿಷ್ಕರುಣಿ… ನಿರ್ದಯ… ಮೂರ್ಖ…
ನೀಚ… ನೀರಸ… ನಿರ್ಗುಣ… ನೆರೆ ಕೊಂದೆ. ನಂಬಿ ನಚ್ಚಿರ್ದರ್ ಎಮ್ಮ ಒಡಲೊಳ್ ಅಳ್ಳಿರಿಯುತಿಪ್ಪ ಅಳಲ ಬೇಗೆಯ ಬೆಂಕಿಯುರಿ ನಿನ್ನನ್ ಇರಿಯದೇ ಹೇಳು. ವಿಶ್ವಾಮೃತ್ಯವಾದೆ ವಿಶ್ವಾಮಿತ್ರ.
(ಎನುತ ಇರ್ದರು.)
ಪೌರಜನ-ಇನ್ನೊಂದು ಗುಂಪು: ಜಡೆಗಳೆದು ಮಕುಟಮಮ್; ನಾರ ಸೀರೆಯನು ತೊರೆದು, ಉಡಿಗೆಯಮ್; ರುದ್ರಾಕ್ಷಮಾಲೆಯಮ್ ಕಳೆದು, ಮಣಿ ತೊಡಿಗೆಯಮ್: ಕಂದಮೂಲವಮ್
ಒಲ್ಲದೆ, ಊಟಮನ್: ದರ್ಭೆಯಮ್ ಬಿಟ್ಟು, ಅಸಿಯನು: ಅಡವಿಯಮ್ ಬಿಟ್ಟು, ನಗರಿಯ: ಭಸಿತಮಮ್ ಬಿಟ್ಟು, ಕಡುಸುಗಂಧಗಳ: ಜಗವರಿಯೆ
ಜಿತೇಂದ್ರಿಯತ್ವವ ಬಿಟ್ಟು, ಮಡದಿಯರ ಕೂಡಲು… ವ್ರತಕ್ಕೆ ಮುಪ್ಪಿನೊಳ್ ಮುಪ್ಪಾಯ್ತೆ.
ಪೌರಜನ-ಮತ್ತೊಂದು ಗುಂಪು: ಮಲೆತು ಬೆನ್ನಟ್ಟುವ ಮಹಾ ಅರಿಷಡುವರ್ಗಮನ್ ಗೆಲಲ್ ಅರಿಯದವನ್, ಆವ ಹಗೆಗಳಮ್ ಗೆಲುವೆ; ನಿನ್ನೊಳಗೆ ಕರಣವ ಸಂತವಿಡಲ್
ಅರಿಯದವನ್, ಆವ ದೇಶವಮ್ ಸಂತವಿಡುವೆ; ಸಲೆ ತಪಸ್ತೇಜದಿನ್ ಪುರುಷಾರ್ಥಕೋಶಮನ್ ಬಳಸಲ್ ಅರಿಯದನ್, ಆವ ತೇಜದಿಮ್
ಕೋಶಮಮ್ ಬಳಸಿದಪೆ. ಕಂಗೆಟ್ಟು, ಕಡುಪಾಪಿ ಮೂರ್ಖ ಕೌಶಿಕ ಕೇಳು… ಕೇಳ್.
ಪೌರಜನ: ಪುರದ ಪುಣ್ಯಮ್ ಪುರುಷರೂಪಿಂದೆ ಪೋಗುತಿದೆ… ಪರಿಜನದ ಭಾಗ್ಯ ಅಡವಿಗೆ ನಡೆಯುತಿದೆ. ಸಪ್ತ ಶರಧಿ ಪರಿವೃತ ಧರೆಯ ಸಿರಿಯ ಸೊಬಗು ಅಜ್ಞಾತವಾಸಕ್ಕೆ
ಪೋಗುತಿದೆಕೋ… ಎರೆವ ದೀನ ಅನಾಥರ ಆನಂದ ಅಡಗುತಿದೆ. ನಿರುತವು ವರಮುನೀಂದ್ರರ ಯಾಗರಕ್ಷೆ ಬಲವು ಅಳಿಯುತಿದೆ.
(ಎಂದು ಒಂದಾಗಿ ಬಂದು ಸಂದಿಸಿ ನಿಂದ ಮಂದಿ ನೆರೆ ಮೊರೆಯಿಟ್ಟುದು. ವಸುಧೆ ಬಾಯ್ಬಿಡೆ… ದೆಸೆಗಳ್ ಅಸವಳಿದು ಮರುಗೆ… ನಿಟ್ಟಿಸಲಾರದೆ ಅಂಬರಮ್
ಕಂಬನಿಯನ್ ಉಗುಳೆ… ಶೋಕಿಸುವ ಪರಿಜನದ ಅಳಲನ್ ಆರಿಸುತ… ಸರದೋರಿ ಸಂತವಿಡುತ… ಮಸಗಿ ಪುರಮಮ್ ಮೀರಿ ಹೋಗುತ್ತ… ಹಿಂದೆ
ಸಂದಿಸಿ ಬಪ್ಪ ಕೌಶಿಕನ ಕಂಡು ನಿಂದು, ಅವನೀಶನ್ ಒಸೆದು ನಿಲಿಸುವ ಭರದೊಳ್ ಒಂದೆರಡು ಮಾತನಾಡಿದನ್. ಅದ ಏನ್ ಬಣ್ಣಿಸುವೆನು.)
ಹರಿಶ್ಚಂದ್ರ: ಹಿಂದೆ ರಾಜ್ಯಮ್ ಗೆಯ್ವ ಗರ್ವದಿಮ್ ಹೊಲತಿಯರ ತಂದು ಕುಲವಮ್ ಕೆಡಿಸಲಾರದ ಅಳಲಿಮ್, ನಿಮ್ಮನ್ ಒಂದೊಂದು ವಿಧದಿ ದಟ್ಟಿಸಿ ಜರಿದು ಮಾರುತ್ತರಮ್
ಕೊಟ್ಟು, ಕೆಟ್ಟು ನುಡಿದು, ನಿಂದೆಗೆಯ್ದ ಅನ್ಯಾಯ ಪಾಪಿ ಚಂಡಾಲನ್… ಎನ್ನಿಂದ ಅಧಮರ್ ಆರಯ್ಯ… ಸರ್ವ ಅಪರಾಧಿ ಆನ್. ತಂದೆ, ಕರುಣಮ್ ಕೆಡದಿರು.
(ಎಂದು ಮುನಿಯನ್ ಹರಿಶ್ಚಂದ್ರನು ಬೇಡಿಕೊಂಡನು.)
ಹರಿಶ್ಚಂದ್ರ: (ಪುರಜನರನ್ನು ಕುರಿತು)
ಮನದೊಳಗೆ ಮರುಗದಿರಿ… ಚಿಂತಿಸದಿರಿ… ಅಳಲದಿರಿ… ಮುನಿಯದಿರಿ… ನೋಯದಿರಿ… ಧೃತಿಗೆಡದಿರಿ. ಈಗಳ್ ಎರಡನೆಯ ಶಿವನ್ ಎನಿಪ ಕೌಶಿಕನ್ ಒಡೆಯನಾದನ್.
ಆತನ ಪಾದಪಂಕಜಕ್ಕೆ ಎನಗೆ ಬೆಸಕೈವಂತೆ ಬೆಸಕೈವುದು… ಅಂಜುವುದು… ವಿನಯಮನ್ ನುಡಿವುದು. ಓಲೈಸುತಿಹುದು.
(ಎಂದು ಪರಿಜನಕೆ ಕೈಮುಗಿದು ಧೈರ್ಯನಿಧಿ ಹರಿಶ್ಚಂದ್ರನೃಪನು ಎಯ್ದೆ ಬೇಡಿಕೊಂಡನ್.)
ಹರಿಶ್ಚಂದ್ರ: ಧರೆಗೆ ಅಧಿಕವೆನಿಪ ರವಿವಂಶದ ಇಕ್ಷ್ವಾಕು ಭೂವರನು ಮೊದಲ್ ಅನ್ವಯಾಗತವಾಗಿ ಬಂದುದು ಈ ಪರಿವಾರ… ಈ ದೇಶ… ಈ ನಗರ. ಇಂದು ತನಕ ಆವ ಎಡರು
ಬಡತನವನು ನೆರೆದು ಅರಿಯದಯ್ಯ. ನೀವಿನ್ನು ಇದಮ್ ರಕ್ಷಿಪುದು… ಹೊರೆವುದು. ಇನಿತಮ್ ನಾ ನಿಮ್ಮಲ್ಲಿ ಬೇಡಿ ಪಡೆದೆ. ಎನಗೆ ಕರುಣಿಸು.
(ಎಂದು ಕೈಮುಗಿದು ಮುನಿಗೆ ಹರಿಶ್ಚಂದ್ರನು ಅಪ್ಪಯಿಸಿಕೊಟ್ಟನು.)
ಹರಿಶ್ಚಂದ್ರ: ಒಸೆದೀವ ತೆರಕಾರನ್ ಆರ್. ಆತನನ್ ನಿಯಾಮಿಸು ತಂದೆ.
(ಎನೆ… ತನ್ನ ಶಿಷ್ಯಾಳಿಯೊಳು ನೋಡಿ ಹುಸಿ… ಅಸೂಯಾ… ನೀಚವೃತ್ತಿ… ನಿರ್ದಾಕ್ಷಿಣ್ಯ… ನಿಷ್ಕರುಣ… ಅನೀತಿಗಳಲಿ ಹೆಸರುಳ್ಳ ಹಿರಿಯ ನಕ್ಷತ್ರಕನ್ ಎನಿಪ್ಪ ಮಾನಿಸನ ಎಕ್ಕಟಿ ಕರೆದು… ಕೈವಿಡಿದು… ಕಿವಿಯೊಡ್ಡಿ, ವಸುಧಾಧಿಪತಿಯ ಬಳಿವಿಡಿದು ಕಳುಹಲು ಬುದ್ಧಿ ಕಲಿಸಿದನ್. ಅದ ಏನ್ ಪೊಗಳ್ವೆನು.)
ವಿಶ್ವಾಮಿತ್ರ: ಕೊಡುವ ಒಡವೆ ಬರಲಿ… ಬಾರದೆ ಕೆಡಲಿ… ಕಾನನದ ನಡುವೆ ತಗಹಿನಲಿ ಇರಿಸಿ, ಕೆಲವು ದಿನ ಉಪವಾಸ ಪಡಿಸಿರ್ದು, ಕೆಲವು ದಿನ ದೇಹವನ್ ಒಲ್ಲೆಂದು ನೆವವೊಡ್ಡಿ,
ಕೆಲವು ದಿವಸ ನಡೆವಾಗ ದಾರಿ ತಪ್ಪಿಸಿ ತಿರಿಪಿ, ಕೆಲವು ದಿನ ಪಡಿಯ ಬೀಯಕ್ಕೆ ಆಣೆಯಿಟ್ಟು, ಇಂತು ಕೆಲವು ದಿನ ಕೆಡಿಸಿ ನುಡಿದು, ಅವಧಿಯು ಆಯ್ತೆಂದು ಧರೆ
ಅರಿಯೆ ನೃಪನನ್ ಹುಸಿಕನ್ ಎನಿಸು. ಕರುಣಿಸದಿರ್… ಅನುಗೊಡದಿರ್… ಅಗಲದಿರು… ಅನುಸರಿಸದಿರು… ಬಟ್ಟೆಯೂರಲ್ ಎಡೆಗೆಯ್ಯದಿರು. ಕಡೆಗೆ ಆವ ಪರಿಯೊಳ್… ಆವಾವ ನಿಗ್ರಹ ನಿರೋಧ ಆಯಾಸಪಡಸುವ ಅಂದದಿ ಮಾಳ್ಪುದು. ಗುರುಭಕ್ತನಾದಡೆ… ಅತಿಬುದ್ಧಿಯುಳ್ಳವನಾದಡೆ ಅರಸನನ್ ಕೆಡಿಸಿ ಹುಸಿತೋರು.
(ಎಂದಡೆ…)
ನಕ್ಷತ್ರಕ: ದೇವ, ಎನಗೆ ಅವನ್ ಕರಗುವನೆ.
ವಿಶ್ವಾಮಿತ್ರ: ನೇಮಕ್ಕೆ ನೀನಿರ್. ಆನ್ ಬಂದು ಕಾಡುವೆನ್. ಬಿಸಿಲಾಗಿ… ಬಿರುಗಾಳಿಯಾಗಿ… ಕಲುನೆಲವಾಗಿ… ವಿಷಮಾಗ್ನಿಯಾಗಿ… ನಾನಾ ಕ್ರೂರಮೃಗವಾಗಿ… ಮಸಗಿ ಘೋರಾರಣ್ಯವಾಗಿ ಗರ್ಜಿಸಿ… ಕವಿವ ಭೂತ ಬೇತಾಳರಾಗಿ… ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂದಿಸಿ ಹೋಗಿ… ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ ಭೂಭುಜನನ್ ಹುಸಿಗೆ ಹೂಂಕೊಳಿಸುವೆನ್. ಎನ್ನಿಂದ ಬಲ್ಲಿದರ್ ಅದಾರ್.
(ಎಂದನು. ನಕ್ಷತ್ರಕನಿಗೆ ಸೂಚನೆಯನ್ನು ಕೊಟ್ಟ ನಂತರ, ಹರಿಶ್ಚಂದ್ರನ ಬಳಿಗೆ ಅವನನ್ನು ಕರೆದುಕೊಂಡು ಬಂದು, ಹರಿಶ್ಚಂದ್ರನನ್ನು ಕುರಿತು…)
ವಿಶ್ವಾಮಿತ್ರ: ಈತನ್ ಈ ಬಂದನ್. ಬೇರೊಬ್ಬನಲ್ಲ. ಆಯಾಸಕಾರನ್… ಅತಿಗರುವನ್… ಅತಿಸುಖಿ… ಈತನ್ ಎಂದುದಮ್ ಮೀರದಿರು. ಧನವ ಕೊಡು. ನಡೆ ಅರಸ… ಹೋಗು.
(ಎನಲು, ಮುನಿವರನ ಚರಣಕೆ ಎರಗಿ ನೀರೆ ಸತಿ, ಸುತ ಮಂತ್ರಿವೆರಸಿ ರಿಪುಬಲ ಸೂರೆಕಾರನ್ ಒಲವಿಮ್ ತಿರುಗಿ ನಡೆವಾಗ, ಮಂದಿ ಬಾಯಾರುತ್ತ…
ಚೀರುತ್ತ… ಗೋಳಿಡುತ್ತ… ಅಳುತ… ಎದ್ದು ನಡೆದುದು. ಏನ್ ಬಣ್ಣಿಸುವೆನು. ಜನಪತಿ ಹರಿಶ್ಚಂದ್ರನ್ ಎಲ್ಲವಮ್ ಮುನಿಗಿತ್ತು ಅರಣ್ಯಕ್ಕೆ ನಡೆವಾಗಲು… ಆ ಪುರಜನಮ್
ಪರಿಜನಮ್ ಜನನಿ ಹಿಂಗಿದ ಶಿಶುಗೆ… ಸಸಿ ಬಿಟ್ಟ ಕುಮುದಕ್ಕೆ… ದಿನನಾಥನ್ ಉಳಿದ ಕಮಲಕ್ಕೆ… ನೆರೆ ಸಿರಿ ಸಮೆದ ಮನೆಗೆ… ಜೀವಮ್ ತೊಲಗಿದ ಒಡಲಿಂಗೆ…
ತೈಲವಿಂಗಿದ ದೀಪ್ತಿಗೆ… ಉದಕ ಅರತ ಘನ ತಟಾಕಕ್ಕೆ… ಫಲ ಇಳುಹಿದ ಮರಕ್ಕೆ… ನೆಟ್ಟನೆ ಜೋಡಿಯಾದುದು.)
ತಿರುಳು: ರಾಜ್ಯ ಸಮರ್ಪಣ
ಧರೆ ಬಿರಿಯಲ್ ಅಳ್ಳಿರಿವ ಅನಂತ ನಿಸ್ಸಾಳದ ಅಬ್ಬರವನ್ ಆಲಿಸಿ=ಬೂಮಿಯೇ ಬಿರುಕು ಬಿಡುವಂತೆ ದೊಡ್ಡ ದನಿಯಲ್ಲಿ ಕೇಳಿಬರುತ್ತಿರುವ ನಗಾರಿ ಡಮರುಗ ತಮಟೆ ಮುಂತಾದ ಚರ್‍ಮವಾದ್ಯಗಳ ಅಬ್ಬರವನ್ನು ಕೇಳಿ; ಕಾಡಿನ ಪ್ರಾಣಿ ಪಕ್ಶಿಗಳ ಉಪಟಳದಿಂದ ಪ್ರಜೆಗಳನ್ನು ಕಾಪಾಡಲೆಂದು ಹೋಗಿದ್ದ ರಾಜ ಹರಿಶ್ಚಂದ್ರನು ಹಿಂತಿರುಗುತ್ತಿರುವುದನ್ನು ಅರಿತು ಅಯೋದ್ಯಾ ನಗರದಲ್ಲಿದ್ದ ಪ್ರಜೆಗಳು ರಾಜನನ್ನು ಸ್ವಾಗತಿಸಲು ಸಿದ್ದತೆಯನ್ನು ಮಾಡತೊಡಗಿದರು;
ಪುರದ ಕೇರಿಗಳನ್ ಒಪ್ಪೆ ಸಿಂಗರಿಸಿ=ಅಯೋದ್ಯಾನಗರದ ಬೀದಿಬೀದಿಗಳನ್ನು ಗುಡಿಸಿ ಶುಚಿಗೊಳಿಸಿ ಅಲಂಕಾರ ಮಾಡಿ;
ಮನೆಮನೆಗಳೊಳು ಗುಡಿತೋರಣಂಗಳ ಸರ ತೆಗೆದು=ಮನೆಮನೆಗಳ ಮೇಲೆ ಬಾವುಟಗಳನ್ನು ಮತ್ತು ಬಾಗಿಲುಗಳಲ್ಲಿ ತಳಿರು ತೋರಣಗಳ ಮಾಲೆಗಳನ್ನು ಕಟ್ಟಿ;
ಸಂಭ್ರಮದಲಿ=ಅತ್ಯಂತ ಆನಂದ, ಸಡಗರ ಮತ್ತು ಉತ್ಸಾಹದಿಂದ;
ಅರರೆ… ಪರಿಜನಮ್ ಆ ಹರಿಶ್ಚಂದ್ರ ಭೂವರನನ್ ಮತ್ತೆ ಇದಿರ್ಗೊಳಲು ಶಶಿಯನ್ ಇದಿರ್ಗೊಂಡು ಹೆಚ್ಚುವ ಅಂಭೋಧಿಯಂತೆ ಕೋಟಾಕೋಟಿ ಕರಿ ತುರಗ ರಥ ಪತ್ತಿ ಬೆರಸಿ ನಡೆದರು=ಅಬ್ಬಬ್ಬಾ… ಪ್ರಜೆಗಳು ಆ ಹರಿಶ್ಚಂದ್ರ ರಾಜನನ್ನು ಮತ್ತೆ ಸ್ವಾಗತಿಸಲು ಹುಣ್ಣಿಮೆಯ ಚಂದ್ರನನ್ನು ಕಂಡು ಉಕ್ಕೆದ್ದು ಕುಣಿಯುವ ಕಡಲಿನಂತೆ ಅಪಾರವಾದ ಸಡಗರದಿಂದ ಆನೆ, ಕುದುರೆ, ತೇರು, ಕಾಲ್ದಳದ ದೊಡ್ಡ ಸೇನಾಪಡೆಯೊಡನೆ ನಡೆದರು;
ಮುತ್ತಿ ಮುಸುಕಿದ ಹಲವು ಕೈದುಗಳ ಝಲ್ಲರಿಗಳ ಒತ್ತಿನೊಳು=ಸುತ್ತಲೂ ಕವಿದುಕೊಂಡಿರುವ ಹಲವು ಬಗೆಯ ಆಯುದಗಳ , ದೊಡ್ಡ ದೊಡ್ಡ ಚರ್‍ಮವಾದ್ಯಗಳ ಸಂದಣಿಯಲ್ಲಿ;
ತಳಿತ ಬೆಳುಗೊಡೆಗಳ ಇಡುಕುರ ನೆಳಲ ಕುತ್ತುರೊಳು=ಹರಡಿಕೊಂಡಿರುವ ಬೆಳುಗೊಡೆಗಳ ಗುಂಪಿನ ನೆಳಲ ರಾಶಿಯಲ್ಲಿ;
ಡಾಳಿಸುವ ಚಮರಿ ಸೀಗುರಿಗಳ ಒಗ್ಗಿನ ಕುರುಹು ಪಿಡಿದು ನಡೆದು=ಅತ್ತಿತ್ತ ಜೋರಾಗಿ ಬೀಸುತ್ತಿರುವ ಚಾಮರಗಳ ಗುಂಪಿನ ರಾಜ ಲಾಂಚನಗಳನ್ನು ಗುರುತಿಸಿ ನಡೆದು;
ಎತ್ತಿದ ಮೊಗಮ್… ನಿಲುಕಿ ನೋಳ್ಪ ಕಂಗಳು… ಮುಗಿದು ಹೊತ್ತ ಕೈ=ರಾಜ ಹರಿಶ್ಚಂದ್ರನನ್ನು ನೋಡುವ ಆಸೆಯಿಂದ ಎತ್ತಿದ ಮೊಗ, ನಿಟ್ಟಿಸಿ ನೋಡುತ್ತಿರುವ ಕಣ್ಣುಗಳು, ಕರಗಳನ್ನು ಜೋಡಿಸಿಕೊಂಡು ಕಯ್ ಮುಗಿಯುತ್ತ ಬಂದ ಪ್ರಜೆಗಳು;
ಜೀಯ… ಅವಧಾರು ಎಂದೆಂಬ ನುಡಿವೆತ್ತು ಹತ್ತಿರೆ ಬಂದು, ಮುನಿಯ ಮೊಗವಮ್ ಕಂಡ ಹೊತ್ತನ್ ಇನ್ನು ಏನ್ ಪೊಗಳ್ವೆನು=ಒಡೆಯನೇ… ನಮ್ಮ ನಮನಗಳನ್ನು ಸ್ವೀಕರಿಸು ಎಂದು ಒಲವು ನಲಿವಿನಿಂದ ಹೇಳುತ್ತ ಹತ್ತಿರ ಬಂದ ಪ್ರಜೆಗಳು ತೇರಿನಲ್ಲಿದ್ದ ವಿಶ್ವಾಮಿತ್ರ ಮುನಿಯ ಮೊಗವನ್ನು ಕಂಡ ಗಳಿಗೆಯಲ್ಲಿ… ಪ್ರಜೆಗಳು ಗಾಸಿಗೊಂಡು ಸಂಕಟದಿಂದ ಪರಿತಪಿಸಿದ ಬಗೆಯನ್ನು ಇನ್ನು ಯಾವ ಬಗೆಯಲ್ಲಿ ಚಿತ್ರಿಸಲಿ ಎಂದು ಕವಿಯು ಉದ್ಗಾರದ ನುಡಿಯನ್ನಾಡಿದ್ದಾನೆ;
ನಸು ನನೆಯನ್ ಅಪ್ಪಿದ ಅಳಿಕುಳದಂತೆ=ಇನ್ನು ಅರಳದ ಮೊಗ್ಗಿನ ಮಕರಂದವನ್ನು ಹೀರಲಾರದೆ ಕಂಗಾಲಾದ ದುಂಬಿಗಳ ಸಮೂಹದಂತೆ;
ಕಡುಹಸಿದು ಕಸುಗಾಯನ್ ಅಗಿದ ಗಿಳಿಗಳ ಬಳಗದಂತೆ=ಬಹಳ ಹಸಿದಿರುವಾಗ ಹೀಚುಕಾಯನ್ನು ಕಚ್ಚಿ, ಸಂಕಟಕ್ಕೆ ಒಳಗಾದ ಗಿಳಿಗಳ ಗುಂಪಿನಂತೆ;
ನಿಟ್ಟಿಸದೆ ವಿಷಮನ್ ಸವಿದ ಶಿಶುವಿಸರದಂತೆ=ಗಮನಿಸಿದೆ ವಿಶವನ್ನು ತಿಂದು ಸಾವು ಬದುಕಿನ ನಡುವೆ ಒದ್ದಾಡುವ ಮಕ್ಕಳಂತೆ;
ಕೊರಡಮ್ ಕರ್ದುಕಿ ಚಂಚು ನೊಂದು ಕುಸಿದ ಪಿಕನಿಕರದಂತೆ=ಒಣಗಿದ ಮರದ ತುಂಡನ್ನು ಕೊಕ್ಕಿನಿಂದ ಕುಕ್ಕಿ ಗಾಯಗೊಂಡು ಗಾಸಿಗೊಂಡ ಕೋಗಿಲೆಗಳ ಗುಂಪಿನಂತೆ;
ಪುರಜನಮ್ ಆಸತ್ತು ಬೇಸತ್ತು ಬಸವಳಿಯುತ=ಪುರಜನರು ಜುಗುಪ್ಸೆಗೊಂಡು, ಬೇಸರಿಸಿಕೊಂಡು, ಮಯ್ ಮನದ ಶಕ್ತಿಯು ಉಡುಗಿದವರಾಗಿ;
ಹೊಲಗೆಟ್ಟ ಕರು ತಾಯನ್ ಅರಸುವಂತೆ=ದಾರಿ ತಪ್ಪಿದ ಕರು ತಾಯಿಯನ್ನು ಹುಡುಕುವಂತೆ;
ಅಂದು ಮಾಮಸಕದಿಮ್ ಮಂದಿಗಳೊಳ್ ಭೂಪನನ್ ಅರಸಿದರು=ಆಗ ಅತಿಯಾದ ಆಕ್ರೋಶದಿಂದ ಕೂಡಿದವರಾಗಿ ಆ ಗುಂಪಿನಲ್ಲಿ ರಾಜ ಹರಿಶ್ಚಂದ್ರನನ್ನು ಹುಡುಕತೊಡಗಿದರು;
ಹಗಲ್ ಒಗೆದ ಚಂದ್ರಕಳೆಯಂತೆ=ಹಗಲಿನಲ್ಲಿ ಕಾಣಿಸಿಕೊಳ್ಳುವ ಕಾಂತಿಯಿಲ್ಲದ ಚಂದ್ರನ ಮೊಗದಂತೆ;
ಬಿರುವೈಶಾಖ ಅಗಿದ ಬನದಂತೆ=ಬೇಸಗೆಯ ಸುಡು ಸುಡು ಬಿಸಿಲಿನ ಬೇಗೆಯಿಂದ ಒಣಗಿ ಬಾಡಿರುವ ಕಾಡಿನಂತೆ;
ಬಿಸಿಳೊಲು ಬಿಸುಟ ತಳಿರಂತೆ=ಬಿಸಿಲಿನಲ್ಲಿ ಕಿತ್ತು ಬಿಸಾಕಿರುವುದರಿಂದ ಬಾಡಿ ಮುದುರಿಕೊಂಡಿರುವ ಚಿಗುರಿನಂತೆ;
ಮೊಗ ಕಂದಿ ಕಳೆಗುಂದಿ=ಮೊಗ ಕಪ್ಪಾಗಿ ಕಳೆಗುಂದಿ;
ಅರುವೆ ಕಪ್ಪಡವುಟ್ಟು=ಚಿಂದಿಚಿಂದಿಯಾಗಿರುವ ನಾರುಮಡಿಯನ್ನುಟ್ಟು;
ರಾಗವಳಿದು=ಆನಂದ ಇಲ್ಲವಾಗಿ;
ಒಪ್ಪಗೆಟ್ಟು=ಮಯ್ ಮನದ ಚೆಲುವನ್ನು ಕಳೆದುಕೊಂಡು;
ಅವನಿಪನ್ ಮಗನ್ ಅರಸಿ ಮಂತ್ರಿಸಹಿತ ಕೌಶಿಕನ ಹಿಂದೆ ದೇಸಿಗನಂತೆ ಕಾಹಿನೊಳು ಬರೆ ಕಂಡು=ರಾಜ ಹರಿಶ್ಚಂದ್ರನು ತನ್ನ ಮಗ ಲೋಹಿತಾಶ್ವ, ಅರಸಿ ಚಂದ್ರಮತಿ ಮತ್ತು ಮಂತ್ರಿ ಸತ್ಯಕೀರ್‍ತಿಯೊಡನೆ ವಿಶ್ವಾಮಿತ್ರನ ತೇರಿನ ಹಿಂದೆ ಗತಿಗೆಟ್ಟವನಂತೆ ಸೇನಾಪಡೆಯ ಕಾವಲಿನಲ್ಲಿ ಬರುತ್ತಿರುವುದನ್ನು ನೋಡಿ;
ಬಗೆ ಬೆದರಿ=ಪ್ರಜೆಗಳ ಎದೆ ನಡುಗಿ;
ಹೊದ್ದಿ ಹೊಡೆವಟ್ಟು=ಹರಿಶ್ಚಂದ್ರನ ಹತ್ತಿರಕ್ಕೆ ಹೋಗಿ, ಅಡ್ಡಬಿದ್ದು ನಮಿಸಿ;
ಕಾಣಿಕೆಯ ಚಿತ್ತೈಸು ಭೂಭುಜ=ಉಡುಗೊರೆಯನ್ನು ಸ್ವೀಕರಿಸು ಮಹಾರಾಜ;
ಎನಗೆ ಅರಸುತನ ಮಾದು ಹೋಗಿ ವಿಶ್ವಾಮಿತ್ರಮುನಿಗೆ ಆದುದು. ಆತನನ್ ಕಂಡು ಕಾಣಿಕೆಯನಿತ್ತು ಅನುದಿನಮ್ ಬೆಸಕೈವುದು=ಈಗ ನನಗೆ ಅರಸುತನ ಇಲ್ಲವಾಗಿ, ವಿಶ್ವಾಮಿತ್ರ ಮುನಿಯು ರಾಜನಾಗಿದ್ದಾನೆ. ತೇರಿನಲ್ಲಿರುವ ಅವನನ್ನು ಕಂಡು ನಮಿಸಿ, ರಾಜ ವಿಶ್ವಾಮಿತ್ರನಿಗೆ ಉಡುಗೊರೆಯನ್ನು ನೀಡಿ, ಪ್ರತಿನಿತ್ಯವೂ ಆತನ ಸೇವೆಯನ್ನು ಮಾಡುವುದು;
ಒಲ್ಲೆವು ಎನಲು=ಪ್ರಜೆಗಳು ಆಗುವುದಿಲ್ಲ. ನಾವು ಅವನನ್ನು ರಾಜನೆಂದು ಒಪ್ಪಿಕೊಳ್ಳುವುದಿಲ್ಲ ಎನ್ನಲು;
ಬೋಧಿಸಿ=ರಾಜ್ಯವು ತನ್ನಿಂದ ವಿಶ್ವಾಮಿತ್ರ ಮುನಿಗೆ ವರ್‍ಗಾವಣೆಗೊಂಡ ಸನ್ನಿವೇಶವನ್ನು ಪ್ರಜೆಗಳಿಗೆ ಮನಗಾಣುವಂತೆ ತಿಳಿಯ ಹೇಳಿ;
ಬಲಾತ್ಕಾರದಿಂದ ಜನವ ಕಾಣಿಸಿ ಕಾಣಿಕೆಯ ಕೊಡಿಸಿ=ಹರಿಶ್ಚಂದ್ರನು ಪ್ರಜೆಗಳನ್ನು ಬಲತ್ಕಾರದಿಂದ ಈ ಬದಲಾವಣೆಗೆ ಒಪ್ಪಿಸಿ, ವಿಶ್ವಾಮಿತ್ರನ ಮುಂದಕ್ಕೆ ತಾನೇ ಕರೆದುಕೊಂಡು ಬಂದು, ಉಡುಗೊರೆಯನ್ನು ಕೊಡಿಸಿ;
ಹಿಂದುಗೊಂಡು ಇನಕುಲಲಲಾಮನ್ ಎಯ್ತಂದು ಪುರಮಮ್ ಹೊಕ್ಕು=ವಿಶ್ವಾಮಿತ್ರನ ತೇರನ್ನು ಹಿಂಬಾಲಿಸಿಕೊಂಡು ಬಂದ ಹರಿಶ್ಚಂದ್ರನು ಅಯೋದ್ಯಾ ಪುರವನ್ನು ಪ್ರವೇಶಿಸಿ;
ಮನದೊಳ್ ಉತ್ಸವದ ಹೆಚ್ಚುಗೆ ಅಳಿದು ನಿಂದ ಮಂದಿಯ ನೋಡುತಮ್ ನಡೆದನು=ಕೇರಿ ಕೇರಿಗಳ ಇಕ್ಕೆಲದಲ್ಲಿಯೂ ಮನದಲ್ಲಿ ಸ್ವಾಗತದ ಸಡಗರ ಅಳಿದು, ಸಂಕಟದಿಂದ ನಿಂತಿದ್ದ ಪ್ರಜೆಗಳ ಮೊಗವನ್ನು ನೋಡುತ್ತ, ಅರಮನೆಯತ್ತ ಹರಿಶ್ಚಂದ್ರನು ನಡೆದನು;
ನೂಕಿ ನಡೆದು… ಅರಮನೆಯ ಹೊಕ್ಕು… ಸಿಂಹಾಸನಕ್ಕೆ ಆ ಕೌಶಿಕನ್ ಬಂದು, ಭೂಭುಜನ ಕೈಯ ಪಿಡಿದು=ತೇರಿನಿಂದ ಇಳಿದ ವಿಶ್ವಾಮಿತ್ರನು ವೇಗವಾಗಿ ನಡೆದು ಅರಮನೆಯನ್ನು ಹೊಕ್ಕು, ಸಿಂಹಾಸನದ ಬಳಿಗೆ ಬಂದು, ಹರಿಶ್ಚಂದ್ರನ ಕಯ್ಯನ್ನು ಹಿಡಿದುಕೊಂಡು;
ಈ ಕಟಕ… ಈ ಕೋಟೆ… ಈ ಕರಿಗಳ್… ಈ ತುರಗ… ಈ ರಥಗಳ್… ಈ ಪರಿಜನ… ಈ ಕೋಶ… ಈ ಕಾಂತೆ… ಈ ಕುವರನ್… ಈ ಮಂತ್ರಿ… ಈ ಕಾಮಿನೀ ಜನಮ್ ಮರುಗದಂತೆ ಅರಸಾಗಬೇಕಾದಡೆ ಎನ್ನ ಮಕ್ಕಳ ಮದುವೆಯಾಗು. ಕಾಡದೆ ಬಿಟ್ಟು ಹೋಹೆನ್=ಈ ರಾಜದಾನಿ… ಈ ಕೋಟೆ… ಈ ಆನೆಯ ದಳ… ಈ ಕುದುರೆಯ ದಳ… ಈ ತೇರುಗಳು… ಈ ನಿನ್ನ ರಾಜ ಪರಿವಾರ ಮತ್ತು ಪ್ರಜೆಗಳು… ಈ ಬೊಕ್ಕಸ… ಈ ನಿನ್ನ ಹೆಂಡತಿ ಚಂದ್ರಮತಿ… .ಈ ನಿನ್ನ ಮಗ ಲೋಹಿತಾಶ್ವ—ಈ ನಿನ್ನ ಮಂತ್ರಿ ಸತ್ಯಕೀರ್ತಿ… ರಾಣಿವಾಸದಲ್ಲಿರುವ ಹೆಂಗಸರು ರಾಜ್ಯವನ್ನು ಕಳೆದುಕೊಳ್ಳುವ ಸಂಕಟಕ್ಕೆ ಒಳಗಾಗದಂತೆ ನೀನ ಅರಸನಾಗಿಯೇ ಉಳಿಯಬೇಕೆಂದರೆ, ನನ್ನ ಮಕ್ಕಳನ್ನು ಮದುವೆಯಾಗು. ನಿನಗೆ ಯಾವ ತೊಂದರೆಯನ್ನು ಕೊಡದೆ, ನಿನ್ನ ರಾಜ್ಯಸಂಪತ್ತೆಲ್ಲವನ್ನೂ ನಿನಗೆ ಒಪ್ಪಿಸಿ, ನನ್ನ ಆಶ್ರಮಕ್ಕೆ ಹೋಗುತ್ತೇನೆ;
ಹೆತ್ತ ತಾಯನ್ ಮಾರಿ ತೊತ್ತ ಕೊಂಬರೆ=ಜನ್ಮಕೊಟ್ಟ ತಾಯಿಯನ್ನು ಮಾರಿ, ದಾಸಿಯನ್ನು ಕೊಳ್ಳುತ್ತಾರೆಯೇ;
ಮೂಗನ್ ಇತ್ತು ಕನ್ನಡಿಯ ನೋಡುವರೆ=ಮೂಗನ್ನು ಕತ್ತರಿಸಿಕೊಂಡು ಕನ್ನಡಿಯನ್ನು ನೋಡುತ್ತಾರೆಯೇ;
ಮಾಣಿಕದ ತೊಡವನ್ ಒತ್ತೆಯಿಟ್ಟು ಒಡೆದ ಗಾಜಮ್ ಹಿಡಿವರೇ=ರತ್ನದ ಒಡವೆಯನ್ನು ಅಡವಿಟ್ಟು, ಒಡೆದ ಗಾಜಿನ ಚೂರುಗಳನ್ನು ತೆಗೆದುಕೊಳ್ಳುತ್ತಾರೆಯೇ;
ಕೋಪದಿಮ್ ಸತ್ತು ಮದುವೆಯಹರೆ=ಆಕ್ರೋಶ ಮತ್ತು ಆವೇಶದಲ್ಲಿ ಸಾವನ್ನಪ್ಪಿ, ಅನಂತರ ಮದುವೆಯಾಗುತ್ತಾರೆಯೆ;
ಕತ್ತುರಿಯ ಸುಟ್ಟು ಅರಳ ಕುರುಕಲನು ಗೆಯ್ವರೇ=ಸುವಾಸನೆಯಿಂದ ಕೂಡಿದ ಕಸ್ತೂರಿಯನ್ನು ಬೆಂಕಿಯಿಂದ ಸುಟ್ಟು, ಹುರಿಗಾಳನ್ನಾಗಿ ಮಾಡುತ್ತಾರೆಯೆ; ಈ ನಾಲ್ಕು ರೂಪಕದ ನುಡಿಗಳ ಮೂಲಕ ಹರಿಶ್ಚಂದ್ರನು ಹೊಲತಿಯರನ್ನು ಮದುವೆಯಾದರೆ, ತಾನು ತಿಳಿಗೇಡಿಯಾಗುತ್ತೇನೆ ಎಂಬುದನ್ನು ವಿಶ್ವಾಮಿತ್ರನಿಗೆ ಮನಗಾಣಿಸುತ್ತಿದ್ದಾನೆ;
ಚಿತ್ತೈಸು=ಮನವಿಟ್ಟು ಕೇಳು;
ಹೊಲತಿಯರ ನೆರೆದು ನಾನ್ ಓವದಿ ಇಪ್ಪತ್ತೊಂದು ತಲೆವೆರಸಿ ನರಕಕ್ಕೆ ಹೋಹೇನೇ=ನಿನ್ನ ಮಾತಿಗೆ ಮನಸೋತು ನಾನು ಹೊಲತಿಯರನ್ನು ಮದುವೆಯಾಗಿ ಇಪ್ಪತ್ತೊಂದು ತಲೆಮಾರು ನರಕಕ್ಕೆ ಹೋಗುತ್ತೇನೆಯೇ. ಈ ಮಾತುಗಳನ್ನು ಮತ್ತೊಂದು ತಿರುಳಿನಲ್ಲಿಯೂ ಗ್ರಹಿಸಬಹುದು. ಹೊಲತಿಯರನ್ನು ನಾನು ಮದುವೆಯಾದರೆ, ಆ ಪಾಪವು ಸೂರ್‍ಯವಂಶದ ನನ್ನ ಹಿಂದಿನ ತಲೆಮಾರಿನ ಇಪ್ಪತ್ತೊಂದು ಮಂದಿ ರಾಜರನ್ನು ನನ್ನೊಡನೆ ನರಕಕ್ಕೆ ಒಯ್ಯುತ್ತದೆ;
ಮುನಿನಾಥ ಹೇಳ್=ಮುನಿಗಳ ಒಡೆಯನಾದ ವಿಶ್ವಾಮಿತ್ರನೇ ನೀನೇ ಹೇಳು. ನಿನ್ನ ಆಜ್ನೆಯಂತೆ ನಡೆದರೆ ನನಗೆ ಮತ್ತು ನನ್ನ ಸೂರ್‍ಯವಂಶಕ್ಕೆ ಕಳಂಕ ತಟ್ಟುವುದಿಲ್ಲವೇ;
ಒಲ್ಲನಿರಬೇಡ=ಮದುವೆಯಾಗುವುದಿಲ್ಲವೆಂದು ಹೇಳಬೇಡ;
ಲೇಸು… ಒಲ್ಲೆ=ನನ್ನ ನಿಲುವೇ ಸರಿಯಾಗಿದೆ. ನಾನು ಮದುವೆಯಾಗುವುದಿಲ್ಲ;
ಏಕೊಲ್ಲೆ=ಏಕೆ ಮದುವೆಯಾಗುವುದಿಲ್ಲ;
ಎಮ್ಮಲ್ಲಿ ತಪ್ಪಿಲ್ಲಾ=ನನ್ನಲ್ಲಿ ಯಾವ ತಪ್ಪು ಇಲ್ಲ;
ಆದಡೆ… ಇನ್ನು ನೀನೀಗ ನಿನಗುಳ್ಳ ಪರಿವಾರಮಮ್ ಬೇಗದಲಿ ಕರಸು=ನನ್ನ ಮಕ್ಕಳನ್ನು ಮದುವೆಯಾಗುವುದಿಲ್ಲವೆಂದು ನೀನು ನಿಶ್ಚಯಿಸಿದ್ದರೆ, ಈಗ ನಿನ್ನ ಪರಿವಾರದವರೆಲ್ಲರನ್ನು ಇಲ್ಲಿಗೆ ಬೇಗ ಕರೆಸು;
ಇಂತು ಚತುರಂಗಬಲ ಸೇನೆಯ… ಸಲ್ಲಲಿತ ದೇಶಕೋಶವನು… ಕಟಕವನು… ಅವಕ್ಕುಳ್ಳ ಕುಲಕರಣ ದುರ್ಗಮ್ ಮುದ್ರೆ ಮೊದಲಾದುವೆಲ್ಲವಮ್ ಬಿಡದೆ ಒಪ್ಪುಗೊಟ್ಟು ಹೋಗು… ಏಳು ಎನಲು=ನಿನ್ನ ಪರಿವಾರದವರ ಮುಂದೆ ನಿನ್ನ ಚತುರಂಗಬಲದ ಸೇನೆಯನ್ನು; ಸುಂದರವಾದ ದೇಶ ಮತ್ತು ಬೊಕ್ಕಸವನ್ನು; ರಾಜದಾನಿಯನ್ನು; ರಾಜದಾನಿಯ ಆಡಳಿತಕ್ಕೆ ಸಂಬಂದಪಟ್ಟ ಸಾಮಗ್ರಿ, ಮೊಹರು ಮತ್ತು ಇನ್ನಿತರ ದಾಕಲೆಗಳಲ್ಲಿ ಯಾವುದನ್ನೂ ಬಿಡದಂತೆ ನನಗೆ ಒಪ್ಪಿಸಿ ಹೋಗು… ಸಿದ್ದನಾಗು ಎಂದು ವಿಶ್ವಾಮಿತ್ರನು ಕಟುವಾಗಿ ನುಡಿಯಲು;
ಭೂನಾಥನು ಕರಸಿದನ್=ಹರಿಶ್ಚಂದ್ರನು ತನ್ನ ಪರಿವಾರದವರೆಲ್ಲರನ್ನೂ ಅರಮನೆಯ ಅಂಗಣಕ್ಕೆ ಕರೆಸಿದನು;
ಬಾಡಿದ ಮೊಗಮ್=ಕಳೆಗುಂದಿದ ಮೊಗ;
ಬರತ ಬಾಯ್=ಒಣಗಿದ ಬಾಯಿ;
ಸುರಿವ ನಯನಾಂಬು=ಸುರಿಯುತ್ತಿರುವ ಕಣ್ಣೀರು;
ಪಾಡಳಿದ ಮತಿ=ದಿಕ್ಕುತೋಚದ ಮನಸ್ಸು;
ನೀಡಿ ಬೆಳೆದ ಸುಯ್=ಹೊಟ್ಟೆಯ ಸಂಕಟದಿಂದ ಹೊರಹೊಮ್ಮುತ್ತಿರುವ ನಿಟ್ಟುಸಿರು;
ದುಗುಡ ಒಕ್ಕಾಡುವ ಅಂಗಮ್=ಮಯ್ ಮನದಲ್ಲಿ ತುಂಬಿಕೊಂಡಿರುವ ಆತಂಕದಿಂದ ಕಂಗಾಲಾಗಿರುವ ದೇಹ;
ನಿರೋಧಾಗ್ನಿಯಿಮ್ ಕುದಿದು ಮರುಗುವ ಮನಮ್=ನಿರಾಶೆಯೆಂಬ ಬೆಂಕಿಯಿಂದ ಆಕ್ರೋಶಗೊಂಡು ಏನನ್ನೂ ಮಾಡಲಾಗದೆ ಮರುಗುತ್ತಿರುವ ಮನಸ್ಸು;
ಮಾಸಿದ ಮುದ=ಕಳೆಗುಂದಿದ ಹಿಗ್ಗು;
ಕೂಡೆ ಬಂದ ಅಖಿಳ ಪರಿವಾರಮಮ್, ಸತಿಯರಮ್, ನಾಡೆ ಚತುರಂಗ ಬಲವಮ್, ಪುರಜನಂಗಳಮ್ ಆ ಧೈರ್ಯನಿಧಿ ಭೂಪನು ನೋಡಿ… ತೋರಿಸಿ=ಅಪಾರವಾದ ಸಂಕಟದಿಂದ ತೊಳಲಾಡುತ್ತ ತನ್ನನ್ನು ಸುತ್ತುವರಿದ ಸಮಸ್ತ ಪರಿವಾರವನ್ನು, ಹೆಂಗಸರನ್ನು, ದೊಡ್ಡ ಚತುರಂಗ ಬಲದ ಸೇನಾನಿಗಳನ್ನು, ಪುರಜನರನ್ನು ಆ ಕೆಚ್ಚೆದೆಯ ಹರಿಶ್ಚಂದ್ರನು ನೋಡಿ, ಅವರೆಲ್ಲರನ್ನೂ ವಿಶ್ವಾಮಿತ್ರ ಮುನಿಗೆ ತೋರಿಸಿ;
ಬೇರೆ ಬೇರೆ ಒಪ್ಪುಗೊಡುತಿರ್ದನ್=ಅವರೆಲ್ಲರನ್ನೂ ಸಾಕ್ಶಿಯಾಗಿ ಇಟ್ಟುಕೊಂಡು, ತನ್ನ ರಾಜ್ಯ ಸಂಪತ್ತೆಲ್ಲವನ್ನೂ ಒಂದೊಂದಾಗಿ ಹೆಸರಿಸುತ್ತಾ, ವಿಶ್ವಾಮಿತ್ರನಿಗೆ ಒಪ್ಪಿಸತೊಡಗಿದನು;
ಇದು ರತ್ನ ಭಂಡಾರ=ಇದು ವಜ್ರ, ಮಾಣಿಕ್ಯ ಮರಕತ ಮಣಿಗಳಿಂದ ತುಂಬಿರುವ ಬೊಕ್ಕಸ;
ಇದು ಹೇಮ ಭಂಡಾರ=ಇದು ಚಿನ್ನದ ಒಡವೆಗಳಿಂದ ತುಂಬಿರುವ ಬೊಕ್ಕಸ;
ಇದು ಸುನಾಣೆಯ ವರ್ಗ=ಇದು ನನ್ನ ರಾಜ್ಯದಲ್ಲಿ ಈಗ ಚಲಾವಣೆಯಲ್ಲಿರುವ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆ;
ಇದು ಪಟ್ಟಕರ್ಮಕುಲ=ಇದು ರೇಶ್ಮೆಯ ಉಡುಗೆ ತೊಡುಗೆಗಳನ್ನು ನೇಯುವ ನೆಲೆ;
ಇದು ಬೆಳ್ಳಿ ಉಗ್ರಾಣ=ಇದು ಬೆಳ್ಳಿಯ ಒಡವೆ ವಸ್ತುಗಳನ್ನು ದಾಸ್ತಾನು ಮಾಡಿರುವ ಕೊಟಡಿ;
ಇದು ಕಂಚಿನ ಉಗ್ರಾಣ=ಇದು ಕಂಚಿನ ಪಾತ್ರೆಗಳನ್ನು ಮತ್ತು ಕರಕುಶಲವಸ್ತುಗಳನ್ನು ದಾಸ್ತಾನು ಮಾಡಿರುವ ಕೊಟಡಿ;
ಇದು ಸರ್ವ ಶಸ್ತ್ರಶಾಲೆ=ಚತುರಂಗ ಸೇನೆಗೂ ಬೇಕಾದ ಎಲ್ಲಾ ಬಗೆಯ ಆಯುದಗಳನ್ನು ಇಟ್ಟಿರುವ ಮನೆ;
ಇದು ಹಸ್ತಿ ಸಂದೋಹ=ಇದು ಆನೆಗಳ ಪಡೆ;
ಇದು ತುರಗ ಸಂತಾನ=ಇದು ಕುದುರೆಯ ದಳ;
ಇದು ವರೂಥ ಪ್ರಕರ=ಇದು ತೇರುಗಳ ಗುಂಪು;
ಇದು ಪದಾತಿ ವ್ರಾತ=ಇದು ಕಾಲ್ದಳದ ಪಡೆ;
ನೋಡಿಕೋ ಎನುತ ಭೂನಾಥ ಕಂದರ್ಪನು ಆ ಮುನಿಗೆ ಒಪ್ಪಿಸಿದನ್=ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳುವುದು ಎಂದು ಹರಿಶ್ಚಂದ್ರನು ನುಡಿಯುತ್ತ ಆ ವಿಶ್ವಾಮಿತ್ರ ಮುನಿಗೆ ಒಪ್ಪಿಸಿದನು;
ಇದು ಹಿರಿಯ ಬಿರುದಿನ ಮುದ್ರೆ=ಇದು ರಾಜಮನೆತನದ ಬಿರುದಿನ ಆಡಳಿತದ ಮೊಹರು;
ಇದು ನಗರ=ಇದು ಅಯೋದ್ಯಾ ನಗರ;
ಇದು ಪೂರ್ವದ ಅರಮನೆ=ಇದು ನಮ್ಮ ಹಿರಿಯರು ಬಾಳಿ ಬದುಕಿದ ಅರಮನೆ;
ಇದು ಅಖಿಳ ಪರಿವಾರ=ಇದೆಲ್ಲವೂ ನನ್ನ ಸಮಸ್ತ ಪರಿವಾರ; ರಾಜವಂಶಕ್ಕೆ ಸೇರಿದ ಸಕಲವೂ ಇಲ್ಲಿದೆ;
ಇದು ಸಿವುಡಿ=ಇದು ಲೆಕ್ಕದ ಪುಸ್ತಕ; ರಾಜ್ಯದ ಆಸ್ತಿಪಾಸ್ತಿಯ ವಿವರ ಮತ್ತು ಹಣಕಾಸಿನ ವ್ಯವಹಾರವನ್ನು ಬರೆದಿಟ್ಟಿರುವ ಕಿರ್‍ದಿ;
ಇದು ಕರಣ=ಇದು ಬಗೆಬಗೆಯ ಸಾಮಗ್ರಿಗಳನ್ನಿಟ್ಟಿರುವ ಕೊಟಡಿ;
ಮಹಾಪುರುಷ, ಇದು ಮೇಲುಳ್ಳ ಸರ್ವಸ್ವ… ನೋಡಿಕೋ ಎಂದು ವರ ಕೌಶಿಂಗೆ ಒಪ್ಪುಗೊಟ್ಟು=ಮಹಾವ್ಯಕ್ತಿಯೇ… ನನ್ನ ರಾಜ್ಯದ ಅತ್ಯುತ್ತಮವಾದ ಸಂಪತ್ತೆಲ್ಲವನ್ನೂ ಚೆನ್ನಾಗಿ ನೋಡಿಕೊಳ್ಳುವುದು ಎಂದು ಹೇಳಿ ವಿಶ್ವಾಮಿತ್ರ ಮುನಿಗೆ ಹರಿಶ್ಚಂದ್ರನು ತನ್ನ ರಾಜ್ಯಸಂಪತ್ತೆಲ್ಲವನ್ನೂ ಒಪ್ಪಿಸಿ;
ಎಲ್ಲ ಸಂದುದೇ… ಪರಿಣಾಮವೇ… ಇನ್ನು ಹೋಹೇನೇ… ಮುನಿನಾಥ ಕರುಣಿಸಿದಿರೇ… ಎಂದು ಪೊಡವಂಟು ಹೋಹ ಅರಸನೊಡನೆ ಆ ಮುನಿಪನು ಎದ್ದನ್=ಎಲ್ಲವೂ ನಿಮಗೆ ಸಂದಾಯವಾಯಿತಲ್ಲವೇ… ಈಗ ನಿಮಗೆ ಸಮಾದಾನವಾಯಿತೇ… ಇನ್ನು ಹೊರಡುತ್ತೇನೆ… ವಿಶ್ವಾಮಿತ್ರ ಮುನಿಯೇ, ಇನ್ನ ನನಗೆ ಹೋಗಲು ಅನುಮತಿಯನ್ನು ನೀಡುತ್ತೀರಲ್ಲವೇ ಎಂದು ನುಡಿದು, ಮುನಿಗೆ ನಮಿಸಿ, ಹೋಗುತ್ತಿರುವ ಹರಿಶ್ಚಂದ್ರನೊಡನೆ ವಿಶ್ವಾಮಿತ್ರನು ಮೇಲೆದ್ದನು;
ಪೊರಮಡುವ ಭೂಪಾಲನನ್ ಕಂಡು=ಅರಮನೆಯಿಂದ ಹೊರಡುತ್ತಿರುವ ಹರಿಶ್ಚಂದ್ರನನ್ನು ಅಯೋದ್ಯಾನಗರದ ಪ್ರಜೆಗಳು ನೋಡಿ;
ಕಣ್ಗೆಟ್ಟು ಮರುಗಿ=ದಿಕ್ಕುತೋಚದಂತಾಗಿ ಸಂಕಟಪಡುತ್ತ;
ಬಸುರಮ್ ಹೊಸೆದು… ಬಸವಳಿದು… ಬಿಸುಸುಯ್ದು… ಮೊರೆಯಿಟ್ಟು… ಬಾಯ್ವಿಟ್ಟು ಕೈನೀಡಿ ಕರೆದು ಕಟ್ಟೊರಲಿ ಸೈರಿಸಲಾರದೆ=ಹರಿಶ್ಚಂದ್ರನ ಅಗಲಿಕೆಯ ಸಂಕಟವನ್ನು ತಡೆದುಕೊಳ್ಳಲಾರದೆ ಪ್ರಜೆಗಳು ಹೊಟ್ಟೆಯನ್ನು ಹಿಸುಕಿಕೊಳ್ಳುತ್ತ… ಆಯಾಸಗೊಂಡು ನಿಟ್ಟುಸಿರು ಬಿಡುತ್ತ… ಆಕ್ರಂದನ ದನಿಯಿಂದ ಮೊರೆಯಿಡುತ್ತ… ಸಂಕಟದಿಂದ ಬಾಯಿ ಬಿಡುತ್ತ… ಹೋಗುತ್ತಿರುವ ಹರಿಶ್ಚಂದ್ರನನ್ನು ಕಯ್ ನೀಡಿ ಕರೆಯುತ್ತ, ದೊಡ್ಡ ದನಿಯಲ್ಲಿ ಅರಚುತ್ತ ತೀವ್ರತೆಯಲ್ಲಿ ಅರಚುತ್ತ, ಹರಿಶ್ಚಂದ್ರನ ಅಗಲಿಕೆಯನ್ನು ತಡೆದುಕೊಳ್ಳಲಾಗದೆ;
ನೇಸರ ಕುಲಜ ಪೇಳು, ನೆರೆ ನಿನ್ನ ನಂಬಿ ನಚ್ಚಿರ್ದ ಪರಿವಾರಮಮ್ ಮರೆದೆಯೋ… ತೊರೆದೆಯೋ… ಮಾರಿದೆಯೊ. ಎಂದೆಂದು ಪೌರಜನವು ನುಡಿನುಡಿದು ಮಿಡುಮಿಡನೆ ಮಿಡುಕಿತ್ತು=ಸೂರ್‍ಯವಂಶದ ರಾಜನೇ ಹೇಳು, ಅತಿಶಯವಾಗಿ ನಿನ್ನನ್ನೇ ನಂಬಿಕೊಂಡಿದ್ದ ನಮ್ಮೆಲ್ಲರನ್ನೂ ಮರೆದೆಯೋ… ತ್ಯಜಿಸಿದೆಯೋ… ಮಾರಿದೆಯೋ ಎಂದು ಆಕ್ರಂದನ ದನಿಯಿಂದ ನುಡಿಯುತ್ತ… ಚಡಪಡಿಸುತ್ತ… ನಡುಗುತ್ತಿದ್ದರು;
ದಂತಿಯಿಂದಿಳಿದು ನಡೆದು ಅರಿಯದವ , ಬರಿಗಾಲೊಳ್ ಎಂತು ಅಡಿಯನ್ ಇಡುವೆ=ಅಂಬಾರಿಯನ್ನು ಹೊತ್ತ ಆನೆಯ ಮೇಲೆ ಹೋಗುತ್ತಿದ್ದ ನೀನು, ಈಗ ಬರಿಗಾಲಿನಲ್ಲಿ ಹೇಗೆ ನಡೆಯುತ್ತೀಯೆ;
ಹಾಸಿನೊಳು ಪವಡಿಸುವಾತನ್ , ಎಂತು ಕಲು ನೆಲದೊಳು ಒರಗುವೆ=ಅರಮನೆಯ ಹಂಸತೂಲಿಕಾ ತಲ್ಪದ ಮೆತ್ತನೆಯ ಹಾಸುಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದ ನೀನು, ಇನ್ನು ಮುಂದೆ ಕಲ್ಲು ಮಣ್ಣಿನಿಂದ ಕೂಡಿರುವ ಬರಿನೆಲದ ಮೇಲೆ ಹೇಗೆ ಮಲಗಿ ನಿದ್ರಿಸುವೆ;
ಸಿತಚ್ಛತ್ರ ತಂಪಿನೊಳು ಬಪ್ಪಾತ ನೀನು, ಎಂತು ಬರ ಬಿಸಿಲನ್ ಆನುವೆ=ರಾಜ ಲಾಂಚನವಾದ ಬೆಳ್ಗೊಡೆಯ ನೆರಳಿನಲ್ಲಿ ಬರುತ್ತಿದ್ದ ನೀನು, ಇನ್ನು ಮುಂದೆ ಯಾವ ರೀತಿ ಬರಬಿಸಲನ್ನು ತಡೆದುಕೊಳ್ಳುವೆ;
ಪುರದೊಳ್ ಇಪ್ಪಾತನ್, ಎಂತು ಅರಣ್ಯದೊಳಿಪ್ಪೆ=ಅಯೋದ್ಯಾಪುರದ ಅರಮನೆಯಲ್ಲಿದ್ದ ನೀನು, ಇನ್ನು ಮುಂದೆ ಕಾಡಿನಲ್ಲಿ ಹೇಗಿರುವೆ;
ಜನವನ್ ಅಗಲ್ದು ಅರಿಯದವನ್, ಎಂತು ಏಕಾಕಿಯಾಗಿಪ್ಪೆ… ಪೇಳ್… ಎಂದು ಸಮಸ್ತ ಜನವು ಬಾಯ್ವಿಟ್ಟುದು=ಸದಾಕಾಲ ಪ್ರಜೆಗಳಿಗೆ ಒಳಿತನ್ನು ಮಾಡುತ್ತ, ಅವರ ನಡುವೆಯೇ ಒಲವು ನಲಿವು ನೆಮ್ಮದಿಯಿಂದ ಬಾಳುತ್ತಿದ್ದ ನೀನು, ಈಗ ಅವರಿಂದ ದೂರವಾಗಿ ಯಾವ ರೀತಿ ಒಬ್ಬಂಟಿಯಾಗಿ ಇರುವೆ… ಹೇಳು ಎಂದು ಪ್ರಜೆಗಳೆಲ್ಲರೂ ಸಂಕಟದಿಂದ ಮೊರೆಯಿಟ್ಟರು;
ಕೊಟ್ಟು ಬೇಸರದ ಮುಗುದ ಅರಸು ದೊರಕಿದನಲಾ ಎಂದು ಹೊರಗೆ ದಾನವ ಬೇಡುವವರುಂಟೆ=ದಾನ ಮಾಡುವುದರಲ್ಲಿ ತುಸುವಾದರೂ ಬೇಸರಪಟ್ಟುಕೊಳ್ಳದ ಕಪಟವನ್ನು ಅರಿಯದ ಒಳ್ಳೆಯ ಮನಸ್ಸಿನ ರಾಜ ಸಿಕ್ಕಿದನು ಎಂದು ರಾಜ್ಯದ ಹೊರಗೆ ದಾನವನ್ನು ಯಾರಾದರೂ ಬೇಡಿದವರು ಇದ್ದಾರೆಯೇ. ಅಂದರೆ ಅರಮನೆಗೆ ಬಂದು ದಾನವನ್ನು ಪಡೆಯದೆ, ಕಾಡಿನಲ್ಲಿ ಪಡೆದಿರುವ ನಿನ್ನ ನಡೆನುಡಿ ಸರಿಯಲ್ಲ;
ಕಟ್ಟರೆಗಂಡ ಪಾಪಿ=ಅತಿಯಾಸೆಯುಳ್ಳ ಪಾಪಿ; ‘ ಕಟ್ಟರೆಗಂಡ ’ ಎಂಬ ಪದಕ್ಕೆ ಸರಿಯಾದ ತಿರುಳು ತಿಳಿದುಬಂದಿಲ್ಲ;
ನಿಷ್ಕರುಣಿ=ಕರುಣೆಯಿಲ್ಲದವನು;
ನಿರ್ದಯ=ದಯೆಯಿಲ್ಲದವನು/ಕ್ರೂರವಾಗಿ ನಡೆದುಕೊಳ್ಳುವವನು;
ಮೂರ್ಖ=ತಿಳಿಗೇಡಿ;
ನೀರಸ=ಒಳ್ಳೆಯ ನಡೆನುಡಿಯನ್ನು ಮೆಚ್ಚದವನು;
ನಿರ್ಗುಣ=ಒಳ್ಳೆಯ ಗುಣವಿಲ್ಲದವನು;
ನೆರೆ ಕೊಂದೆ=ಅಯೋದ್ಯಾನಗರದ ಪ್ರಜೆಗಳಾದ ನಮ್ಮೆಲ್ಲರನ್ನೂ ಸಂಪೂರ್ಣವಾಗಿ ಕೊಂದೆ;
ನಂಬಿ ನಚ್ಚಿರ್ದರ್ ಎಮ್ಮ ಒಡಲೊಳ್ ಅಳ್ಳಿರಿಯುತಿಪ್ಪ ಅಳಲ ಬೇಗೆಯ ಬೆಂಕಿಯುರಿ ನಿನ್ನನ್ ಇರಿಯದೇ ಹೇಳು=ಈಗ ನೀನು ಮಾಡಿರುವ ಕೇಡಿನಿಂದ ಹರಿಶ್ಚಂದ್ರ ರಾಜನನ್ನೇ ನಂಬಿಕೊಂಡು ನೆಮ್ಮದಿಯಿಂದ ಬಾಳುತ್ತಿದ್ದ ನಮ್ಮ ಒಡಲಿನಲ್ಲಿ ಚುಚ್ಚುತ್ತಿರುವ ಸಂಕಟದ ಕಿಚ್ಚಿನ ಬೆಂಕಿಯ ತಾಪವು ನಿನ್ನನ್ನು ಚುಚ್ಚದಿರುವುದೇ ಹೇಳು; ಅಂದರೆ ನಮ್ಮ ಹೊಟ್ಟೆಯ ಉರಿ ನಿನಗೂ ತಟ್ಟುತ್ತದೆ;
ವಿಶ್ವಾಮೃತ್ಯುವಾದೆ ವಿಶ್ವಾಮಿತ್ರ ಎನುತ ಇರ್ದರು=ಜಗತ್ತಿನ ಜೀವರಾಶಿಗಳಿಗೆ ಒಳಿತನ್ನು ಮಾಡುವ ಗೆಳೆಯನಾಗಬೇಕಾಗಿದ್ದ ನೀನು, ನಿನ್ನ ವಂಚನೆಯ ಮತ್ತು ಕೇಡಿನ ನಡೆನುಡಿಯಿಂದ ಜಗತ್ತಿನ ಜೀವರಾಶಿಗಳ ಪಾಲಿಗೆ ಯಮರೂಪಿಯಾದೆಯಲ್ಲ ವಿಶ್ವಾಮಿತ್ರನೇ ಎಂದು ಪ್ರಜೆಗಳು ಹೀಯಾಳಿಸತೊಡಗಿದರು;
ಜಡೆಗಳೆದು ಮಕುಟಮಮ್=ಮುನಿ ವೇಶದ ತಲೆಯ ಮೇಲೆ ಎತ್ತಿಕಟ್ಟಿರುವ ಜಡೆಯನ್ನು ಕಿತ್ತುಬಿಸುಟು, ತಲೆಗೆ ತೊಡಲು ರಾಜ ಪಟ್ಟದ ಕಿರೀಟವನ್ನು ;
ನಾರ ಸೀರೆಯನು ತೊರೆದು ಉಡಿಗೆಯಮ್=ಮರಗಿಡಗಳ ತೊಗಟೆಯ ನೂಲಿನಿಂದ ಮಾಡಿರುವ ನಾರುಮಡಿಯನ್ನು ಬಿಟ್ಟು ಉಟ್ಟುಕೊಳ್ಳಲೆಂದು ನೆಯ್ದಿರುವ ಬಟ್ಟೆಯನ್ನು;
ರುದ್ರಾಕ್ಷಮಾಲೆಯಮ್ ಕಳೆದು ಮಣಿ ತೊಡಿಗೆಯಮ್=ಮುನಿಗಳು ಮಯ್ ಮೇಲೆ ತೊಟ್ಟುಕೊಳ್ಳುವ ರುದ್ರಾಕ್ಶಿಮಾಲೆಯನ್ನು ಕಳಚಿಹಾಕಿ, ಬೆಲೆ ಬಾಳುವ ರತ್ನ,ವಜ್ರ, ವೈಡೂರ್‍ಯದ ಹರಳಿನ ಒಡವೆಗಳನ್ನು;
ಕಂದಮೂಲವಮ್ ಒಲ್ಲದೆ ಊಟಮನ್=ಗೆಡ್ಡೆಗೆಣಸಿನ ಉಣಸು ತಿನಸನ್ನು ಒಲ್ಲದೆ ರುಚಿಕರವಾದ ಊಟವನ್ನು;
ದರ್ಭೆಯಮ್ ಬಿಟ್ಟು ಅಸಿಯನು=ಯಾಗವನ್ನು ಮಾಡುವಾಗ ಕಯ್ಯಲ್ಲಿ ಹಿಡಿದುಕೊಳ್ಳುವ ಮೊನಚಾದ ಹುಲ್ಲಿನ ಕಡ್ಡಿಯನ್ನು ಬಿಟ್ಟು, ಕತ್ತಿಯನ್ನು;
ಅಡವಿಯಮ್ ಬಿಟ್ಟು ನಗರಿಯ=ಕಾಡಿನ ವಾಸವನ್ನು ಬಿಟ್ಟು, ನಗರವಾಸವನ್ನು;
ಭಸಿತಮಮ್ ಬಿಟ್ಟು ಕಡುಸುಗಂಧಗಳ= ಮಯ್ ಮೇಲೆ ವಿಬೂತಿಯನ್ನು ಬಳಿದುಕೊಳ್ಳುವುದನ್ನು ಬಿಟ್ಟು, ತುಂಬಾ ಸುವಾಸನೆಯಿಂದ ಕೂಡಿರುವ ವಸ್ತುಗಳನ್ನು ಮಯ್ ತುಂಬಾ ಲೇಪಿಸಿಕೊಳ್ಳಲು;
ಜಿತೇಂದ್ರಿಯತ್ವವ ಬಿಟ್ಟು ಜಗವರಿಯೆ ಮಡದಿಯರ ಕೂಡಲು=ಪಂಚೇಂದ್ರಿಯಗಳ ಮೇಲಣ ಹತೋಟಿಯನ್ನು ಬಿಟ್ಟು, ಹೆಣ್ಣುಗಳ ಜತೆ ಕಾಮಪ್ರೇಮದ ನಂಟನ್ನು ಪಡೆದು ಸಂಸಾರ ಸುಕವನ್ನು ಅನುಬವಿಸಲೆಂದು;
ವ್ರತಕ್ಕೆ ಮುಪ್ಪಿನೊಳ್ ಮುಪ್ಪಾಯ್ತೆ=ನಿನ್ನ ಮುನಿತನದ ಆಚರಣೆಗೆ ಈ ಮುಪ್ಪಿನ ವಯೋಮಾನದಲ್ಲಿ ಮುಪ್ಪು ಬಂದಿತೆ ಎಂದು ಪ್ರಜೆಗಳು ಹಂಗಿಸಿದರು;
ಮಲೆತು ಬೆನ್ನಟ್ಟುವ ಮಹಾ ಅರಿಷಡುವರ್ಗಮನ್ ಗೆಲಲ್ ಅರಿಯದವನ್, ಆವ ಹಗೆಗಳಮ್ ಗೆಲುವೆ=ಮಯ್ ಮನವನ್ನು ಎಡೆಬಿಡದೆ ಬೆನ್ನಟ್ಟಿ ಕಾಡುತ್ತಿರುವ ಕಾಮ/ಕ್ರೋದ/ಮೋಹ/ಮದ/ಮತ್ಸರ/ಲೋಬ ಎಂಬ ದೊಡ್ಡ ಶತ್ರುಗಳನ್ನು ಹತ್ತಿಕ್ಕಿ ಗೆಲ್ಲಲು ಶಕ್ತನಾಗದ ನೀನು, ಜೀವನದಲ್ಲಿ ಯಾವ ಹಗೆಗಳನ್ನು ಗೆಲ್ಲುವೆ;
ನಿನ್ನೊಳಗೆ ಕರಣವ ಸಂತವಿಡಲ್ ಅರಿಯದವನ್ , ಆವ ದೇಶವಮ್ ಸಂತವಿಡುವೆ=ನಿನ್ನೊಳಗಿನ ಒಡಲನ್ನು ಶಾಂತಚಿತ್ತದಿಂದ ಇಟ್ಟುಕೊಳ್ಳಲು ತಿಳಿಯದವನು, ಯಾವ ದೇಶದ ಪ್ರಜೆಗಳನ್ನು ಪರಸ್ಪರ ಪ್ರೀತಿ ಕರುಣೆ ಸಹಬಾಳ್ವೆಯಿಂದ ಶಾಂತವಾಗಿರುವಂತೆ ನೋಡಿಕೊಳ್ಳುವೆ;
ಪುರುಷಾರ್ಥಕೋಶ=ದರ್‍ಮ-ಕಾಮ-ಸಂಪತ್ತು-ಮೋಕ್ಶ ಎಂಬ ನಾಲ್ಕು ಸಂಗತಿಗಳಲ್ಲಿಯೂ ವ್ಯಕ್ತಿಯು ಯಶಸ್ಸನ್ನು ಗಳಿಸುವುದು;
ಪುರುಷಾರ್ಥಕೋಶಮನ್ ಸಲೆ ತಪಸ್ತೇಜದಿನ್ ಬಳಸಲ್ ಅರಿಯದನ್, ಆವ ತೇಜದಿಮ್ ಕೋಶಮಮ್ ಬಳಸಿದಪೆ=ನಿನ್ನ ವ್ಯಕ್ತಿಗತ ಜೀವನದಲ್ಲಿ ದರ್‍ಮ-ಕಾಮ-ಸಂಪತ್ತು-ಮೋಕ್ಶಗಳನ್ನು ಸರಿಯಾಗಿ ತಪಸ್ಸಿನ ತೇಜಸ್ಸಿನಿಂದ ಆಚರಿಸಲು ಶಕ್ತನಲ್ಲದ ನೀನು, ಯಾವ ಬುದ್ದಿಶಕ್ತಿಯಿಂದ ರಾಜ್ಯದ ಬೊಕ್ಕಸವನ್ನು ಪ್ರಜೆಗಳ ಹಿತಕ್ಕಾಗಿ ಬಳಸುತ್ತೀಯೆ; ರಾಜ್ಯವನ್ನು ಆಳುವ ಯೋಗ್ಯತೆಯಾಗಲಿ ಇಲ್ಲವೇ ಶಕ್ತಿಯಾಗಲಿ ನಿನ್ನಲ್ಲಿ ಇಲ್ಲ;
ಕಂಗೆಟ್ಟು, ಕಡುಪಾಪಿ ಮೂರ್ಖ ಕೌಶಿಕ ಕೇಳು ಕೇಳ್=ಮುನಿತನವನ್ನು ಬಿಟ್ಟು ರಾಜತನಕ್ಕೆ ಬಂದು ದಿಕ್ಕೆಟ್ಟಿರುವ ಕಡುಪಾಪಿಯೂ ತಿಳಿಗೇಡಿಯೂ ಆದ ವಿಶ್ವಾಮಿತ್ರನೇ, ನಮ್ಮ ಸಂಕಟದ ಮತ್ತು ಆಕ್ರೋಶದ ನುಡಿಗಳನ್ನು ಮನವಿಟ್ಟು ಕೇಳು;
ಪುರದ ಪುಣ್ಯಮ್ ಪುರುಷರೂಪಿಂದೆ ಪೋಗುತಿದೆ=ಪುರದ ಪುಣ್ಯವೇ ಹರಿಶ್ಚಂದ್ರನ ರೂಪದಲ್ಲಿ ಹೋಗುತ್ತಿದೆ. ಪರಿಜನದ ಭಾಗ್ಯ ಅಡವಿಗೆ ನಡೆಯುತಿದೆ=ರಾಜಾಶ್ರಯದಲ್ಲಿದ್ದ ಸಕಲ ಸೇವಕ ವರ್‍ಗದವರ ಸಿರಿಸಂಪದವೆಲ್ಲವೂ ಕಾಡಿನತ್ತ ನಡೆಯುತ್ತಿದೆ;
ಸಪ್ತ ಶರಧಿ ಪರಿವೃತ ಧರೆಯ ಸಿರಿಯ ಸೊಬಗು ಅಜ್ಞಾತವಾಸಕ್ಕೆ ಪೋಗುತಿದೆಕೋ=ಏಳು ಕಡಲುಗಳಿಂದ ಸುತ್ತುವರಿದಿರುವ ಬೂಮಂಡಲದ ಸಿರಿಯ ಅಂದಚೆಂದವೆಲ್ಲವೂ ಯಾರಿಗೂ ಕಾಣದಂತೆ ಮರೆಯಾಗುತ್ತಿದೆ ನೋಡು ವಿಶ್ವಾಮಿತ್ರ;
ಎರೆವ ದೀನ ಅನಾಥರ ಆನಂದ ಅಡಗುತಿದೆ=ದೀನರ ಮತ್ತು ಗತಿಹೀನರ ಬದುಕಿಗೆ ಆಸರೆಯಾಗಿದ್ದ ಹರಿಶ್ಚಂದ್ರನ ಹೋಗುವಿಕೆಯಿಂದ, ಅವರೆಲ್ಲರ ಬದುಕಿನ ಆನಂದವೇ ನಾಶವಾಗುತ್ತಿದೆ;
ವರಮುನೀಂದ್ರರ ಯಾಗರಕ್ಷೆ ಬಲವು ನಿರುತವು ಅಳಿಯುತಿದೆ ಎಂದು=ಉತ್ತಮರಾದ ಮುನಿಗಳು ಮಾಡಿದ ಯಾಗವು ಹರಿಶ್ಚಂದ್ರನನ್ನು ಒಳಗೊಂಡಂತೆ ಎಲ್ಲರನ್ನು ಕಾಪಾಡಬೇಕಾಗಿತ್ತು. ವಿಶ್ವಾಮಿತ್ರನೇ, ನಿನ್ನ ಕೇಡಿನ ಕಾರ್‍ಯದಿಂದ ಯಾಗದ ಬಲವೆಲ್ಲವೂ ದಿಟವಾಗಿಯೂ ನಾಶವಾಗುತ್ತಿದೆ ಎಂದು;
ಒಂದಾಗಿ ಬಂದು ಸಂದಿಸಿ ನಿಂದ ಮಂದಿ ನೆರೆ ಮೊರೆಯಿಟ್ಟುದು=ಪ್ರಜೆಗಳೆಲ್ಲರೂ ಒಂದಾಗಿ ಬಂದು, ಜತೆಗೂಡಿ ನಿಂದು ವಿಶ್ವಾಮಿತ್ರ ಮುನಿಯ ಬಗ್ಗೆ ಆಕ್ರೋಶವನ್ನು ಮತ್ತು ಹರಿಶ್ಚಂದ್ರನ ಬಗ್ಗೆ ತಮ್ಮ ಸಂಕಟವನ್ನು ತೋಡಿಕೊಂಡರು; ರಾಜ್ಯವನ್ನು ವಿಶ್ವಾಮಿತ್ರನಿಗಿತ್ತು ಹರಿಶ್ಚಂದ್ರನು ಹೋಗುತ್ತಿರುವುದರಿಂದ ಪ್ರಜೆಗಳಾದ ತಮ್ಮೆಲ್ಲರ ಒಲವು ನಲಿವು ನೆಮ್ಮದಿ ಸಹಬಾಳ್ವೆಯಿಂದ ಕೂಡಿದ ಜೀವನದ ಒಳಿತೆಲ್ಲವೂ ಇಲ್ಲವಾಗುತ್ತದೆ ಎಂಬ ಸಂಕಟವನ್ನು ಪ್ರಜೆಗಳು ವ್ಯಕ್ತಪಡಿಸುತ್ತಿರುವುದನ್ನು ಈ ರೂಪಕದ ನುಡಿಗಳು ಸೂಚಿಸುತ್ತಿವೆ;
ವಸುಧೆ ಬಾಯ್ಬಿಡೆ=ಬೂಮಿಯು ಬಾಯ್ಬಡಿಲು ಅಂದರೆ ಬೂಕಂಪನದಿಂದ ಬಿರುಕುಬಿಡಲು;
ದೆಸೆಗಳ್ ಅಸವಳಿದು ಮರುಗೆ=ದಿಕ್ಕುಗಳು ಶಕ್ತಿಗುಂದಿ ಕೊರಗಲು;
ನಿಟ್ಟಿಸಲಾರದೆ ಅಂಬರಮ್ ಕಂಬನಿಯನ್ ಉಗುಳೆ=ಹರಿಶ್ಚಂದ್ರನ ಅಗಲಿಕೆ ಮತ್ತು ಪ್ರಜೆಗಳ ಸಂಕಟವನ್ನು ನೋಡಲಾರದೆ ಆಕಾಶವು ಕಣ್ಣೀರನ್ನು ಕರೆಯುತ್ತಿರಲು;
ಶೋಕಿಸುವ ಪರಿಜನದ ಅಳಲನ್ ಆರಿಸುತ=ಪರಿತಪಿಸುತ್ತಿರುವ ತನ್ನ ಪ್ರಜೆಗಳ ಸಂಕಟವನ್ನು ಹೋಗಲಾಡಿಸುತ್ತ;
ಸರದೋರಿ ಸಂತವಿಡುತ=ಸಾಂತ್ವನದ ನುಡಿಗಳಿಂದ ಪ್ರಜೆಗಳನ್ನು ಸಮಾದಾನಮಾಡುತ್ತ;
ಪುರಮಮ್ ಮಸಗಿ ಮೀರಿ ಹೋಗುತ್ತ=ಹರಿಶ್ಚಂದ್ರನು ಅಯೋದ್ಯಾಪುರದಿಂದ ವೇಗವಾಗಿ ಮುನ್ನಡೆದು ಹೋಗುತ್ತಿರಲು;
ಹಿಂದೆ ಸಂದಿಸಿ ಬಪ್ಪ ಕೌಶಿಕನ ಕಂಡು ನಿಂದು=ಹಿಂದೆ ತನ್ನನ್ನೇ ಹಿಂಬಾಲಿಸಿಕೊಂಡು ಬರುತ್ತಿರುವ ವಿಶ್ವಾಮಿತ್ರನನ್ನು ಕಂಡು, ನಿಂತುಕೊಂಡು;
ಅವನೀಶನ್ ಒಸೆದು ನಿಲಿಸುವ ಭರದೊಳ್ ಒಂದೆರಡು ಮಾತನಾಡಿದನ್. ಅದ ಏನ್ ಬಣ್ಣಿಸುವೆನು=ಹರಿಶ್ಚಂದ್ರನು ವಿಶ್ವಾಮಿತ್ರನನ್ನು ಪ್ರೀತಿಯಿಂದ ತಡೆದು ನಿಲ್ಲಿಸುವ ಸಮಯದಲ್ಲಿ ಒಂದೆರಡು ನುಡಿಗಳನ್ನಾಡಿದನು. ಅದನ್ನು ಏನೆಂದು ತಾನೆ ಬಣ್ಣಿಸುವೆನು ಎಂದು ಕವಿಯು ಅಚ್ಚರಿಯನ್ನು ಪಡುತ್ತಿದ್ದಾನೆ;
ಹಿಂದೆ ರಾಜ್ಯಮ್ ಗೆಯ್ವ ಗರ್ವದಿಮ್=ಈ ಹಿಂದೆ ನಾನು ರಾಜ್ಯವನ್ನು ಆಳುತ್ತಿದ್ದಾಗ ಸೊಕ್ಕಿನಿಂದ;
ಹೊಲತಿಯರ ತಂದು ಕುಲವಮ್ ಕೆಡಿಸಲಾಱದ ಅಳಲಿಮ್=ನಿನ್ನ ಆಜ್ನೆಯಂತೆ ಹೊಲತಿಯರನ್ನು ಮದುವೆಯಾಗಿ ಕುಲವನ್ನು ಕೆಡಿಸಿಕೊಳ್ಳಲಾರದ ದರ್‍ಮಸಂಕಟದಿಂದ;
ನಿಮ್ಮನ್ ಒಂದೊಂದು ವಿಧದಿ ದಟ್ಟಿಸಿ ಜರಿದು=ನಿಮ್ಮನ್ನು ಬಹುಬಗೆಯಲ್ಲಿ ಮೂದಲಿಸಿ ನಿಂದಿಸಿ;
ಮಾರುತ್ತರಮ್ ಕೊಟ್ಟು=ನಿಮಗೆ ಎದುರಾಗಿ ನುಡಿದು;
ಕೆಟ್ಟು ನುಡಿದು ನಿಂದೆಗೆಯ್ದ ಅನ್ಯಾಯ ಪಾಪಿ ಚಂಡಾಲನ್=ಕೆಟ್ಟ ಮಾತುಗಳನ್ನಾಡಿ, ತೆಗಳಿ ನಿಮ್ಮೊಡನೆ ಅನ್ಯಾಯವಾಗಿ ನಡೆದುಕೊಂಡ ಪಾಪಿ ಚಂಡಾಲನು ನಾನು;
ಎನ್ನಿಂದ ಅಧಮರ್ ಆರಯ್ಯ=ಈ ಜಗತ್ತಿನಲ್ಲಿ ನನಗಿಂತಲೂ ಕೀಳಾದ ವ್ಯಕ್ತಿಗಳು ಯಾರಿದ್ದಾರಯ್ಯ;
ಸರ್ವ ಅಪರಾಧಿ ಆನ್=ನಿನ್ನೊಡನೆ ಎಲ್ಲ ರೀತಿಯಿಂದಲೂ ಕೆಟ್ಟದ್ದಾಗಿ ನಡೆದುಕೊಂಡು ತಪ್ಪುಗಳನ್ನು ಮಾಡಿರುವವನು ನಾನು;
ತಂದೆ, ಕರುಣಮ್ ಕೆಡದಿರು ಎಂದು ಮುನಿಯನ್ ಹರಿಶ್ಚಂದ್ರನು ಬೇಡಿಕೊಂಡನು=ತಂದೆಯ ಸ್ವರೂಪನಾದ ವಿಶ್ವಾಮಿತ್ರನೇ, ನನ್ನ ಬಗ್ಗೆ ಕ್ರೂರನಾಗಬೇಡ. ನನಗೆ ಕರುಣೆಯನ್ನು ತೋರು ಎಂದು ಹರಿಶ್ಚಂದ್ರನು ಮುನಿಯನ್ನು ಬೇಡಿಕೊಂಡನು;
ಮನದೊಳಗೆ ಮರುಗದಿರಿ… ಚಿಂತಿಸದಿರಿ… ಅಳಲದಿರಿ… ಮುನಿಯದಿರಿ… ನೋಯದಿರಿ… ಧೃತಿಗೆಡದಿರಿ=ಕಂಬನಿ ಕರೆಯುತ್ತ ಸಂಕಟದಲ್ಲಿ ಮುಳುಗಿದ್ದ ತನ್ನ ಪ್ರಜೆಗಳನ್ನು ಕುರಿತು “ ಮರುಗಬೇಡಿ; ಚಿಂತಿಸಬೇಡಿ; ಶೋಕಿಸಬೇಡಿ; ಹೀಗಾಯಿತಲ್ಲ ಎಂದು ವಿಶ್ವಾಮಿತ್ರ ರಾಜನ ಬಗ್ಗೆ ಕೋಪಿಸಿಕೊಳ್ಳಬೇಡಿ; ನೋಯಬೇಡಿ; ಎದೆಗುಂದಬೇಡಿ ” ಎಂದು ಹರಿಶ್ಚಂದ್ರನು ಅವರೆಲ್ಲರನ್ನೂ ಸಮಾದಾನಪಡಿಸಿದನು;
ಈಗಳ್ ಎರಡನೆಯ ಶಿವನ್ ಎನಿಪ ಕೌಶಿಕನ್ ಒಡೆಯನಾದನ್=ಈಗ ಎರಡನೆಯ ಶಿವನೆಂದು ಹೆಸರಾಂತ ವಿಶ್ವಾಮಿತ್ರ ಮುನಿಯು ಲಾಳದೇಶದ ರಾಜನಾಗಿದ್ದಾನೆ;
ಆತನ ಪಾದಪಂಕಜಕ್ಕೆ ಎನಗೆ ಬೆಸಕೈವಂತೆ ಬೆಸಕೈವುದು… ಅಂಜುವುದು… ವಿನಯಮನ್ ನುಡಿವುದು. ಓಲೈಸುತಿಹುದು ಎಂದು ಪರಿಜನಕೆ ಕೈಮುಗಿದು ಧೈರ್ಯನಿಧಿ ಹರಿಶ್ಚಂದ್ರನೃಪನು ಎಯ್ದೆ ಬೇಡಿಕೊಂಡನ್=ರಾಜ ವಿಶ್ವಾಮಿತ್ರನ ಪಾದಕಮಲಕ್ಕೆ ನನಗೆ ಸೇವೆಮಾಡುತ್ತಿದ್ದಂತೆಯೇ ಸೇವೆಯನ್ನು ಮಾಡುವುದು. ರಾಜನಿಗೆ ಎದುರಾಡದೆ ವಿನಯದಿಂದ ನುಡಿಯುವುದು. ಪ್ರೀತಿಯಿಂದ ಅವನ ಆಜ್ನೆಯನ್ನು ನೆರವೇರಿಸುವುದು ಎಂದು ಕೆಚ್ಚೆದೆಯ ಹರಿಶ್ಚಂದ್ರನು ತನ್ನ ಪರಿಜನಕ್ಕೆ ಕಯ್ ಮುಗಿದು ಬಹಳವಾಗಿ ಬೇಡಿಕೊಂಡನು;
ಧರೆಗೆ ಅಧಿಕವೆನಿಪ ರವಿವಂಶದ ಇಕ್ಷ್ವಾಕು ಭೂವರನು ಮೊದಲ್ ಅನ್ವಯಾಗತವಾಗಿ ಈ ಪರಿವಾರ… ಈ ದೇಶ… ಈ ನಗರ ಬಂದುದು=ಇಡೀ ಬೂಮಂಡಲದಲ್ಲಿಯೇ ಹೆಚ್ಚಿನದು ಎಂದು ಹೆಸರಾಂತ ಸೂರ್‍ಯವಂಶದ ಇಕ್ಷ್ವಾಕು ರಾಜನಿಂದ ಮೊದಲುಗೊಂಡು ವಂಶಪರಂಪರೆಯಿಂದ ಈ ಪರಿವಾರ, ಈ ಲಾಳ ದೇಶ… ಈ ಅಯೋದ್ಯಾನಗರ ನನ್ನ ಪಾಲಿಗೆ ಬಂದಿದೆ;
ಇಂದು ತನಕ ಆವ ಎಡರು ಬಡತನವನು ನೆರೆದು ಅರಿಯದಯ್ಯ=ಈ ದಿನದ ತನಕ ಯಾವುದೇ ಅಡೆತಡೆಯನ್ನಾಗಲಿ ಬಡತನವನ್ನಾಗಲಿ ಕಂಡು ತಿಳಿಯದಯ್ಯ;
ನೀವಿನ್ನು ಇದಮ್ ರಕ್ಷಿಪುದು… ಹೊರೆವುದು=ನೀವು ಇನ್ನು ಮುಂದೆ ಈ ದೇಶವನ್ನು ಮತ್ತು ಈ ನನ್ನ ಪ್ರಜೆಗಳನ್ನು ಕಾಪಾಡುವುದು ಮತ್ತು ಸಲಹುವುದು;
ಇನಿತಮ್ ನಾ ನಿಮ್ಮಲ್ಲಿ ಬೇಡಿ ಪಡೆದೆ. ಎನಗೆ ಕರುಣಿಸು ಎಂದು ಕೈಮುಗಿದು ಮುನಿಗೆ ಹರಿಶ್ಚಂದ್ರನು ಅಪ್ಪಯಿಸಿಕೊಟ್ಟನು=ಇಶ್ಟನ್ನು ಮಾತ್ರ ನಾನು ನಿಮ್ಮಲ್ಲಿ ಬೇಡಿ ಪಡೆಯುತ್ತಿದ್ದೇನೆ. ಈ ನನ್ನ ಮೊರೆಯನ್ನು ಈಡೇರಿಸಿಕೊಡಿರೆಂದು ಕೇಳಿಕೊಳ್ಳುತ್ತಿದ್ದೇನೆ. ನನಗೆ ಕರುಣೆಯನ್ನು ತೋರಿ ಎಂದು ಹರಿಶ್ಚಂದ್ರನು ವಿಶ್ವಾಮಿತ್ರ ಮುನಿಗೆ ತನ್ನೆಲ್ಲಾ ಹೊಣೆಗಾರಿಕೆಯನ್ನು ಒಪ್ಪಿಸಿಕೊಟ್ಟನು;
ಒಸೆದೀವ ತೆರಕಾರನ್ ಆರ್. ಆತನನ್ ನಿಯಾಮಿಸು ತಂದೆ ಎನೆ=ನನ್ನಿಂದ ಹಣವನ್ನು ವಸೂಲುಮಾಡಲು ನೀನು ಅನುಗ್ರಹಿಸಿ ಕಳುಹಿಸುವ ತೆರಕಾರನು ಯಾರು. ಅವನನ್ನು ನೇಮಿಸಿ ನನ್ನೊಡನೆ ಕಳುಹಿಸು ತಂದೆ ಎಂದು ಹರಿಶ್ಚಂದ್ರನು ನುಡಿಯಲು;
ತನ್ನ ಶಿಷ್ಯಾಳಿಯೊಳು ನೋಡಿ=ವಿಶ್ವಾಮಿತ್ರನು ತನ್ನ ಶಿಶ್ಯರ ಗುಂಪಿನತ್ತ ಒಮ್ಮೆ ಕಣ್ಣಾಡಿಸಿ ಗಮನಿಸಿ; ಹುಸಿ… ಅಸೂಯಾ… ನೀಚವೃತ್ತಿ… ನಿರ್ದಾಕ್ಷಿಣ್ಯ… ನಿಷ್ಕರುಣ… ಅನೀತಿಗಳಲಿ ಹೆಸರುಳ್ಳ ಹಿರಿಯ ನಕ್ಷತ್ರಕನ್ ಎನಿಪ್ಪ ಮಾನಿಸನ ಎಕ್ಕಟಿ ಕರೆದು=ಸುಳ್ಳು, ಹೊಟ್ಟೆಕಿಚ್ಚು, ನೀಚತನದ ಕೆಲಸ, ತುಸುವಾದರೂ ಮಾನವೀಯತೆಯಿಲ್ಲದ ಕ್ರೂರತನ ಮತ್ತು ಅನೀತಿಯ ನಡೆನುಡಿಯಲ್ಲಿ ಹೆಸರಾಂತ ನಕ್ಶತ್ರಕನೆಂಬ ಹಿರಿಯ ಶಿಶ್ಯನನ್ನು ಏಕಾಂತಕ್ಕೆ ಕರೆದು;
ಕೈವಿಡಿದು ಕಿವಿಯೊಡ್ಡಿ, ವಸುಧಾಧಿಪತಿಯ ಬಳಿವಿಡಿದು ಕಳುಹಲು ಬುದ್ಧಿ ಕಲಿಸಿದನ್. ಅದ ಏನ್ ಪೊಗಳ್ವೆನು=ನಕ್ಶತ್ರಕನ ಕಯ್ಯನ್ನು ಹಿಡಿದುಕೊಂಡು, ಅವನ ಕಿವಿಯ ಬಳಿಯಲ್ಲಿ ಪಿಸುನುಡಿಯನ್ನಾಡುತ್ತ, ಹರಿಶ್ಚಂದ್ರನ ಜತೆಯಲ್ಲಿ ಕಳುಹಿಸಿಕೊಡುವ ಮುನ್ನ, ಅವನು ಹರಿಶ್ಚಂದ್ರನ ಜತೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ತರಬೇತಿಯನ್ನು ನೀಡಿದನು; ಅದನ್ನು ಏನೆಂದು ತಾನೆ ಬಣ್ಣಿಸಲಿ ಎಂದು ಕವಿಯು ಅಚ್ಚರಿಪಟ್ಟಿದ್ದಾನೆ;
ಕೊಡುವ ಒಡವೆ ಬರಲಿ… ಬಾರದೆ ಕೆಡಲಿ=ಕೊಡಬೇಕಾದ ಸಂಪತ್ತು ಬರಲಿ… ಬಾರದೆ ನಾಶವಾಗಲಿ ಅದರ ಬಗ್ಗೆ ನೀನು ಚಿಂತಿಸಬೇಡ;
ಕಾನನದ ನಡುವೆ ತಗಹಿನಲಿ ಇರಿಸಿ=ಕಾಶಿ ಪಟ್ಟಣವನ್ನು ಬೇಗ ತಲುಪದಂತೆ ಕಾಡಿನ ಹಾದಿಯಲ್ಲಿ ಹರಿಶ್ಚಂದ್ರನನ್ನು ತಡೆದು ನಿಲ್ಲಿಸಿ;
ಕೆಲವು ದಿನ ಉಪವಾಸ ಪಡಿಸಿರ್ದು=ಕೆಲವು ದಿನ ಅನ್ನ ಆಹಾರ ಸಿಗದಂತೆ ಮಾಡಿ ಉಪವಾಸದಿಂದ ನರಳುವಂತೆ ಮಾಡಿ;
ಕೆಲವು ದಿನ ದೇಹವನ್ ಒಲ್ಲೆಂದು ನೆವವೊಡ್ಡಿ=ಕೆಲವು ದಿನ ನಿನ್ನ ದೇಹದ ಆರೋಗ್ಯ ಸರಿಯಿಲ್ಲವೆಂಬ ನೆಪವನ್ನು ಒಡ್ಡಿ;
ಕೆಲವು ದಿವಸ ನಡೆವಾಗ ದಾರಿ ತಪ್ಪಿಸಿ ತಿರಿಪಿ=ಕೆಲವು ದಿನ ಹೋಗತ್ತಿರುವಾಗ ಉದ್ದೇಶಪೂರ್ವಕವಾಗಿಯೇ ಕಾಶಿಯತ್ತಣ ದಾರಿಯನ್ನು ತಪ್ಪಿಸಿ, ಕಾಡಿನಲ್ಲಿಯೇ ದಾರಿಗಾಣದೆ ಸುತ್ತುವಂತೆ ಮಾಡಿ;
ಕೆಲವು ದಿನ ಪಡಿಯ ಬೀಯಕ್ಕೆ ಆಣೆಯಿಟ್ಟು=ಕೆಲವು ದಿನ ನಿನಗೆ ಪ್ರತಿನಿತ್ಯವೂ ಊಟಕ್ಕೆಂದು ಹರಿಶ್ಚಂದ್ರನು ಕೊಡಬೇಕಾಗಿರುವ ದಿನಸಿಗಾಗಿ ಇಲ್ಲಸಲ್ಲದ ತೊಂದರೆಯನ್ನು ಕೊಡುತ್ತ;
ಇಂತು ಕೆಲವು ದಿನ ಕೆಡಿಸಿ ನುಡಿದು=ಈ ರೀತಿ ಕೆಲವು ದಿನ ಕಿರುಕುಳವನ್ನು ಕೊಡುವಂತೆ ನುಡಿಯುತ್ತಿದ್ದು;
ಅವಧಿಯು ಆಯ್ತೆಂದು ಧರೆ ಅರಿಯೆ ನೃಪನನ್ ಹುಸಿಕನ್ ಎನಿಸು=ಹರಿಶ್ಚಂದ್ರನು ಹಣ ಸಂಪಾದನೆಗೆ ಕಾಶಿ ಪಟ್ಟಣವನ್ನು ತಲುಪದಂತೆ ಅಡ್ಡಿಪಡಿಸಿ, ನನ್ನಿಂದ ತೆಗೆದುಕೊಂಡಿರುವ ಅವದಿಯಲ್ಲಿ ಸಾಲವನ್ನು ಅವನು ಕೊಡಲಾಗದಂತೆ ಮಾಡಿ, ಜಗತ್ತು ತಿಳಿಯುವಂತೆ ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡು;
ಕರುಣಿಸದಿರ್… ಅನುಗೊಡದಿರ್… ಅಗಲದಿರು… ಅನುಸರಿಸದಿರು… ಬಟ್ಟೆಯೂರಲ್ ಎಡೆಗೆಯ್ಯದಿರು=ಕರುಣೆ ತೋರಿಸಬೇಡ; ಕಾಶಿ ಪಟ್ಟಣಕ್ಕೆ ಬೇಗ ಹೋಗಲು ಅವಕಾಶ ಕೊಡಬೇಡ; ಅರೆಗಳಿಗೆಯೂ ಹರಿಶ್ಚಂದ್ರನನ್ನು ಬಿಟ್ಟಿರಬೇಡ; ಹರಿಶ್ಚಂದ್ರನ ಒಳ್ಳೆಯ ನಡೆನುಡಿಗೆ ಮರುಳಾಗಿ ಅವನಂತಾಗಬೇಡ; ದಾರಿಯ ನಡುವೆ ನೆಮ್ಮದಿಯಿಂದ ತಂಗಲು ಅವಕಾಶವನ್ನು ಕೊಡಬೇಡ;
ಕಡೆಗೆ ಆವ ಪರಿಯೊಳ್ ಆವಾವ ನಿಗ್ರಹ ನಿರೋಧ ಆಯಾಸಪಡಸುವ ಅಂದದಿ ಮಾಳ್ಪುದು=ಈ ಬಗೆಯ ಅಡ್ಡಿ ಆತಂಕಗಳಿಗೆ ಹರಿಶ್ಚಂದ್ರ ಬಗ್ಗದಿದ್ದರೆ, ಕೊನೆಗೆ ಯಾವ ಯಾವ ರೀತಿಯಲ್ಲಾದರೂ ಹರಿಶ್ಚಂದ್ರನನ್ನು ಕಾಡಿಸಿ ಪೀಡಿಸಿ ಅಡೆತಡೆಗಳನ್ನೊಡ್ಡಿ ಬಳಲಿಸುವ ರೀತಿಯಲ್ಲಿ ಹರಿಶ್ಚಂದ್ರನ ಮಾನಸಿಕ ಶಕ್ತಿಯನ್ನು ಕುಗ್ಗಿಸುವುದು;
ಗುರುಭಕ್ತನಾದಡೆ… ಅತಿಬುದ್ಧಿಯುಳ್ಳವನಾದಡೆ ಅರಸನನ್ ಕೆಡಿಸಿ ಹುಸಿತೋರು ಎಂದಡೆ=ನಿಜಕ್ಕೂ ನೀನು ನನ್ನ ಶಿಶ್ಯನೇ ಆಗಿದ್ದರೆ, ಅತಿಬುದ್ದಿಯುಳ್ಳವನಾಗಿದ್ದರೆ, ಹರಿಶ್ಚಂದ್ರನ ನಡೆನುಡಿಯಲ್ಲಿ ಕೆಟ್ಟದ್ದು ಕಾಣುವಂತೆ ಮಾಡಿ, ಅವನು ಸುಳ್ಳನ್ನಾಡುವಂತೆ ಮಾಡು ಎಂದು ವಿಶ್ವಾಮಿತ್ರನು ತನ್ನ ತೆರಕಾರನಿಗೆ ಹೇಳಿದಾಗ;
ದೇವ, ಎನಗೆ ಅವನ್ ಕರಗುವನೆ=ಪೂಜ್ಯ ಗುರುವೇ, ನನಗೆ ಅವನು ಬಗ್ಗುವನೇ. ನಾನು ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡಲು ಸಾದ್ಯವೇ;
ನೇಮಕ್ಕೆ ನೀನಿರ್. ಆನ್ ಬಂದು ಕಾಡುವೆನ್=ತೆರಕಾರನ ಜಾಗದಲ್ಲಿ ನೀನು ಇರು. ನಾನು ಬಂದು ಕೊಡಬಾರದ ಕಿರುಕುಳವನ್ನು ನೀಡುತ್ತೇನೆ;
ಬಿಸಿಲಾಗಿ… ಬಿರುಗಾಳಿಯಾಗಿ… ಕಲುನೆಲವಾಗಿ… ವಿಷಮಾಗ್ನಿಯಾಗಿ… ನಾನಾ ಕ್ರೂರಮೃಗವಾಗಿ ಮಸಗಿ… ಘೋರಾರಣ್ಯವಾಗಿ ಗರ್ಜಿಸಿ=ಬಿಸಿಲಾಗಿ; ಬಿರುಗಾಳಿಯಾಗಿ; ಕಲ್ಲುನೆಲವಾಗಿ; ಬಯಂಕರವಾದ ಬೆಂಕಿಯಾಗಿ; ಬಹುಬಗೆಯ ಕ್ರೂರ ಪ್ರಾಣಿಗಳಾಗಿ ಮೇಲೆ ಎರಗಿ, ಉಗ್ರವಾದ ಕಾಡಿನ ರೂಪದಲ್ಲಿ ಅಬ್ಬರಿಸಿ; ಕವಿವ ಭೂತ ಬೇತಾಳರಾಗಿ=ಮಯ್ ಮೇಲೆ ಎರಗುವ ಬೂತ ಬೇತಾಳರಾಗಿ;
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂದಿಸಿ ಹೋಗಿ=ಹಸಿವು, ಬಾಯಾರಿಕೆಯಿಂದ ತೊಳಲುತ್ತ, ನಿದ್ರೆಯಿಲ್ಲದೆ ನರಳುವ ಹಾಗೆ ಮಾಡಿ;
ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ ಭೂಭುಜನನ್ ಹುಸಿಗೆ ಹೂಂಕೊಳಿಸುವೆನ್=ಹರಿಶ್ಚಂದ್ರನು ಅಡಿಯಿಟ್ಟ ಕಡೆಯಲ್ಲೆಲ್ಲಾ ಹೋಗಿ ಅವನು ಬಳಲುವಂತೆ ಮಾಡಿ , ಅವನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇನೆ;
ಎನ್ನಿಂದ ಬಲ್ಲಿದರ್ ಅದಾರ್ ಎಂದನು=ನನಗಿಂತ ಬಲಶಾಲಿಗಳು ಅದು ಯಾರಿದ್ದಾರೆ ಎಂದು ವಿಶ್ವಾಮಿತ್ರನು ತನ್ನನ್ನು ತಾನೇ ಹೊಗಳಿಕೊಂಡನು;
ಈತನ್ ಈ ಬಂದನ್… ಬೇರೊಬ್ಬನಲ್ಲ=ಹರಿಶ್ಚಂದ್ರನೇ, ಈಗ ನಿನ್ನೊಡನೆ ತೆರಕಾರನಾಗಿ ಬರುತ್ತಿರುವವನು ಯಾರೋ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ;
ಆಯಾಸಕಾರನ್… ಅತಿಗರುವನ್… ಅತಿಸುಖಿ=ಈತ ಬಹುಬೇಗ ಬಳಲುತ್ತಾನೆ.ಅಂದರೆ ಹೆಚ್ಚಿನ ಕಶ್ಟಕ್ಕೆ ಆಳಲ್ಲ. ಯಾರಿಗೂ ತಲೆಬಾಗದವನು. ಬಹಳ ಸುಕದಲ್ಲಿ ಬೆಳದುಬಂದವನು;
ಈತನ್ ಎಂದುದಮ್ ಮೀರದಿರು=ಈತನು ಹೇಳುವ ಮಾತುಗಳನ್ನು ಮೀರಿ ನಡೆಯಬೇಡ;
ಧನವ ಕೊಡು. ನಡೆ ಅರಸ… ಹೋಗು ಎನಲು=ಈತನ ಕಯ್ಗೆ ನನಗೆ ಕೊಡಬೇಕಾದ ಹಣವನ್ನು ಕೊಡು. ಇನ್ನು ನಿನ್ನ ಪಯಣವನ್ನು ಮುಂದುವರಿಸು. ಹರಿಶ್ಚಂದ್ರನೇ ಹೊರಡು ಎನ್ನಲು;
ಮುನಿವರನ ಚರಣಕೆ ಎರಗಿ=ವಿಶ್ವಾಮಿತ್ರ ಮುನಿಯ ಪಾದಕ್ಕೆ ನಮಿಸಿ;
ನೀರೆ ಸತಿ, ಸುತ ಮಂತ್ರಿವೆರಸಿ ರಿಪುಬಲ ಸೂರೆಕಾರನ್ ಒಲವಿಮ್ ತಿರುಗಿ ನಡೆವಾಗ=ಹೆಂಡತಿ ಚಂದ್ರಮತಿ, ಮಗ ಲೋಹಿತಾಶ್ವ, ಮಂತ್ರಿ ಸತ್ಯಕೀರ್‍ತಿಯ ಜತೆಗೂಡಿ ಶತ್ರುರಾಜ ಸೇನಾಬಲವನ್ನು ಸದೆಬಡೆಯಬಲ್ಲ ಶೂರನಾದ ಹರಿಶ್ಚಂದ್ರನು ಪ್ರೀತಿಯಿಂದ ತಿರುಗಿ ಕಾಶಿಯತ್ತ ನಡೆಯುವಾಗ;
ಮಂದಿ ಬಾಯಾರುತ್ತ… ಚೀರುತ್ತ… ಗೋಳಿಡುತ್ತ … ಅಳುತ… ಎದ್ದು ನಡೆದುದು ಏನ್ ಬಣ್ಣಿಸುವೆನು=ಹರಿಶ್ಚಂದ್ರನ ಅಗಲಿಕೆಯನ್ನು ಸಹಿಸಲಾರದೆ ಪ್ರಜೆಗಳು ದೊಡ್ಡ ದನಿಯಲ್ಲಿ ಕೂಗುತ್ತ, ಕಿರುಚುತ್ತ, ಗೋಳಿಡುತ್ತ, ಅಳುತ್ತ ಹರಿಶ್ಚಂದ್ರನ ಜತೆಜತೆಯಲ್ಲಿಯೇ ತಾವು ಅಯೋದ್ಯಾಪುರವನ್ನು ಬಿಟ್ಟು ಹೊರಟರು. ಪ್ರಜೆಗಳ ಪರಿತಾಪವನ್ನು ಏನೆಂದು ಬಣ್ಣಿಸಲಿ ಎಂದು ಕವಿಯು ಉದ್ಗರಿಸಿದ್ದಾನೆ;
ಜನಪತಿ ಹರಿಶ್ಚಂದ್ರನ್ ಎಲ್ಲವಮ್ ಮುನಿಗಿತ್ತು ಅರಣ್ಯಕ್ಕೆ ನಡೆವಾಗಲು=ಪ್ರಜೆಗಳ ಮೆಚ್ಚಿನ ಒಡೆಯನಾದ ಹರಿಶ್ಚಂದ್ರನು ಸಕಲ ರಾಜ್ಯಸಂಪತ್ತೆಲ್ಲವನ್ನೂ ಮುನಿಗೆ ಕೊಟ್ಟು ಕಾಡಿನತ್ತ ನಡೆಯುತ್ತಿರುವಾಗ;
ಆ ಪುರಜನಮ್ ಪರಿಜನ ಜನನಿ ಹಿಂಗಿದ ಶಿಶುಗೆ… ಸಸಿ ಬಿಟ್ಟ ಕುಮುದಕ್ಕೆ… ದಿನನಾಥನ್ ಉಳಿದ ಕಮಲಕ್ಕೆ… ನೆರೆ ಸಿರಿ ಸಮೆದ ಮನೆಗೆ… ಜೀವಮ್ ತೊಲಗಿದ ಒಡಲಿಂಗೆ… ತೈಲವಿಂಗಿದ ದೀಪ್ತಿಗೆ… ಉದಕ ಅರತ ಘನ ತಟಾಕಕ್ಕೆ… ಫಲ ಇಳುಹಿದ ಮರಕ್ಕೆ… ನೆಟ್ಟನೆ ಜೋಡಿಯಾದುದು=ಅಯೋದ್ಯಾಪುರದ ಪ್ರಜೆಗಳ ಮತ್ತು ರಾಜಪರಿವಾರದವರ ಮಯ್ ಮನದ ಸಂಕಟವು ತಾಯಿಯನ್ನು ಕಳೆದುಕೊಂಡ ಮಗುವಿಗೆ; ಚಂದ್ರನಿಲ್ಲದೆ ಮುದುಡಿದ ನೀಲಿತಾವರೆಗೆ; ಸೂರ್‍ಯನಿಲ್ಲದೆ ಮುದುಡಿದ ಬಿಳಿಯ ತಾವರೆಗೆ; ಸಂಪೂರ್‍ಣವಾಗಿ ಸಿರಿಸಂಪದ ನಾಶವಾದ ಮನೆಗೆ; ಜೀವವಿಲ್ಲದ ದೇಹಕ್ಕೆ; ಎಣ್ಣೆಯಿಲ್ಲದ ದೀಪಕ್ಕೆ; ನೀರು ಬತ್ತಿದ ದೊಡ್ಡ ಸರೋವರಕ್ಕೆ; ಹಣ್ಣೆಲ್ಲವನ್ನೂ ಕುಯ್ದುಕೊಂಡು ಬರಿದಾಗಿರುವ ಮರಕ್ಕೆ ಸಮಾನವಾಗಿತ್ತು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು