ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 20ನೆಯ ಕಂತು: ಲೋಹಿತಾಶ್ವನ ಮರಣ
– ಸಿ.ಪಿ.ನಾಗರಾಜ.
*** ಪ್ರಸಂಗ-20: ಲೋಹಿತಾಶ್ವನ ಮರಣ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು): ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ’ ಎಂಬ ಎಂಟನೆಯ ಅಧ್ಯಾಯದ 1 ರಿಂದ 8 ನೆಯ ಪದ್ಯದ ವರೆಗಿನ ಎಂಟು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರ
ಲೋಹಿತಾಶ್ವ: ಚಂದ್ರಮತಿ ಮತ್ತು ಹರಿಶ್ಚಂದ್ರ ದಂಪತಿಗಳ ಮಗ. ಈಗ ಕಾಶಿನಗರದ ವಿಪ್ರನೊಬ್ಬನ ಮನೆಯ ದಾಸ.
*** ಲೋಹಿತಾಶ್ವನ ಮರಣ ***
ಇಂತು ನೃಪನ್ ಇತ್ತ ದಿವಸಮ್ ಕಳೆಯುತಿರಲ್… ಅಂತು ಅತ್ತಲ್ ಅವರನ್ ಒತ್ತಿಟ್ಟ ಮನೆಯನ್ ಏನ್ ಪೊಗಳ್ವೆನ್. ಅದು ತಿಂತಿಣಿಯ ಸೂನೆಗಾರರ ನಿಳಯ; ರಕ್ಕಸಿಯ ಮಾಡ; ಹಾವಿನ ಹೇಳಿಗೆ; ಅಂತಕನ ನಗರ; ಮೃತ್ಯುವಿನ ಬಲುಬಾಣಸದ ಹಂತಿ; ಮಾರಿಯ ಮೂರಿಯಾಟದ ಎಡೆ ಎಂಬಾಗಳ್… ಅಕಟ… ಅವನಿಪನ ಸತಿಪುತ್ರರು ಮನೆಯವರ ದುರ್ಧರದೊಳ್ ಎಂತು ಜೀವಿಪರ್. ಒಡೆಯನ್ ಅತಿಕೋಪಿ; ಹೆಂಡತಿ ಮಹಾಮೂರ್ಖೆ; ಮಗ ಕಡುದೂರ್ತ; ಸೊಸೆಯಾದಡೆ ಅಧಿಕ ನಿಷ್ಠುರೆ; ಮನೆಯ ನಡೆವವರು ದುರ್ಜನರು; ನೆರೆಮನೆಯವರು ಮಿಥ್ಯವಾದಿಗಳು; ಪಶುಗಳ್ ಅಗಡು; ಅಡಿಗಡಿಗೆ ಕೋಪಿಸುವ, ಸಾಯ ಸದೆಬಡಿವ, ಕಾಳ್ಗೆಡೆವ, ಕರಕರಿಪ , ಸೆಣಸುವ, ತಪ್ಪ ಸಾಧಿಸುವ, ಕೆಡೆಯೊದೆವ ಮಾರಿಗೆ ಆರದೆ ಅವನಿಪನ ಸತಿಪುತ್ರರು ಸತ್ತು ಹುಟ್ಟುತಿಹರ್.
ಎಡೆವಿಡದೆ ಹಲವು ಸೂಳ್ ಒಡೆಯನ ಅರಮನೆಗೆ ನೀರ್ ಅಡಕಿ; ಕೊಟ್ಟನಿತು ಬತ್ತವ ಮಿದಿದು; ಒಡಲಿಗೆ ಎಯ್ದು ಎಡೆಯಿಕ್ಕಿದ ಅನಿತುಮನೆ ಉಂಡು; ಇರುಳುಮ್ ಹಗಲುಮ್ ಎನ್ನದೆ ಓರಂತೆ ಕುದಿವ ಮಡದಿಯ ಕುಮಾರನ್ ಉದಯದೊಳ್ ಎದ್ದು ಹೋಗಿ, ನಿಚ್ಚ ತನ್ನ ಒಡನಾಡಿಗಳ್ ಬೆರಸಿ ಹೇರಡವಿಯಲಿ ಹುಲುಹುಳ್ಳಿಯಮ್ ಕೊಂಡು, ಬೈಗೆ ಬಂದು, ಇಂತು ಕಾಲವನು ಸವೆಯಿಸುತಿರ್ದನು. ಓರಂತೆ ತಲ್ಲಣಿಸಿ ಹೆದರಿ, ಕಣ್ಗೆಟ್ಟು ಓಡಬಾರದು… ಇರಬಾರದು… ಉರೆ ಸಾಯಬಾರದು… ಬದುಕಬಾರದು ಎಂಬಂತೆ ತನ್ನೊಡಲಿಂಗೆ ಬಪ್ಪ ದುಃಖಂಗಳಿಗೆ ಸಾಕ್ಷಿಯಾಗಿ “ಧಾರಿಣಿಯೊಳ್ ಅವನಿಪನ ಸತ್ಯ ಸಲಬೇಹುದು” ಎಂಬ ಆರಯ್ಕೆವಿಡಿದು ನಡೆಯುತ್ತಿಪ್ಪ ನಾರಿಯ ಕುಮಾರಂಗೆ ಬಂದ ಸಂಕಟದ ಸಂವರಣೆಯನ್ ಆದಾವ ಜೀವರು ಕೇಳ್ವರು.
ಎಂದಿನಂತೆ ಉದಯಕಾಲದೊಳ್ ಎದ್ದು ಹುಲುಹುಳ್ಳಿಗೆಂದು ಅರಣ್ಯಕ್ಕೆ ನಡೆದು, ಅಲ್ಲಲ್ಲಿ ಹೋಗಿ ಹಲವು ಅಂದದ ಅಡುಗಬ್ಬನ್ ಆಯ್ದು ಒಟ್ಟಿ ಹೊರೆಗಟ್ಟಿ ಹೊತ್ತು, ಓರಗೆಯ ಮಕ್ಕಳೊಡನೆ ನಿಂದು ಮಧ್ಯಾಹ್ನದ ಉರಿ ಬಿಸಿಲೊಳ್ ಎದೆ ಬಿರಿಯೆ, ಜವಗುಂದಿ ತಲೆಕುಸಿದು ನಡೆಗೆಟ್ಟು ಬಾಯಾರಿ ಹಣೆಯಿಂದ ಬೆಮರುಗೆ, ನೆತ್ತಿ ಹೊತ್ತಿ ತೇಂಕುತ್ತ ಹರಿತಪ್ಪಾಗಳ್ ಏನ್ ಪೊಗಳ್ವೆನು. ಕೆಲದ ಮೆಳೆಯ ಒತ್ತಿನೊಳಗಿರ್ದ ಹುತ್ತಿನೊಳು ನಳನಳಿಸಿ ಕೋಮಲತೆಯಿಮ್ ಕೊಬ್ಬಿ ಕೊನೆವಾಯ್ದು ಕಂಗೆ ಅಳವಟ್ಟು ಬೆಳೆದ ಎಳೆಯ ದರ್ಭೆಯಮ್ ಕಂಡು ಹಾರಯಿಸಿ…
ಲೋಹಿತಾಶ್ವ: ನಾನ್ ಇದನೆಲ್ಲವ ಗಳಗಳನೆ ಕೊಯ್ದುಕೊಂಡು ಎಯ್ದು ಇತ್ತಡೆ, ಎನ್ನೊಡೆಯ ಮುಳಿಯದಿಹನ್.
(ಎಂಬ ಆಸೆಯಿಮ್ ಹೊರೆಯನ್ ಇಳುಹಿ, ಮತ್ತೆ ಎಳಸಿ ಕುಡುಗೋಲ್ ಪಿಡಿದು ಅಸ್ತಾದ್ರಿಯಮ್ ಸಾರ್ದ ಮಾರ್ತಾಂಡನಂತೆ ಸಾರ್ದನ್. ಹೊದೆ
ಕಡಿದು ಹುತ್ತನು ಹತ್ತಿ, ಸುತ್ತಿದ ಎಳಹುಲ್ಲ ಹೊದರ ಅಡಸಿ ಹಿಡಿದು , ಬಿಡದೆ ಅರಿದು ಸೆಳೆಯಲ್, ಕೈಯ ಹದರನ್ ಒಡೆಗಚ್ಚಿ ಜಡಿಯುತ್ತ ಭೋಂಕನೆ
ಬಂದ ರೌದ್ರಸರ್ಪನನು ಕಂಡು ಹೆದರಿ… ಹವ್ವನೆ ಹಾರಿ… ಹಾ ಎಂದು ಕೈಕಾಲ ಕೆದರಿ… ಅಕಟಕಟ… ಮದಮ್ ಉದಿತ ರಾಹುಗ್ರಸ್ತವಾದ
ತರುಣೇಂದುಬಿಂಬಮ್ ನೆಲಕ್ಕೆ ಬೀಳ್ವಂದದೆ ತಲೆಕೆಳಗಾಗಿ ಕೆಡೆದನ್. ಹುತ್ತಿನಿಮ್ ಫಣಿವೆರಸಿ ಕೆಡೆಯೆ, ಕಂಡು ಒಡನಿರ್ದ ಜತ್ತಕಂಗಳು ಹೆದರಿ
ಬಿಟ್ಟೋಡಿ ಊರತ್ತಲ್ ಹೋದರ್. ಇತ್ತಮ್ ತಾಯ್ಗೆ ಹಲುಬಿ… ತಂದೆಯ ಕರೆದು… ದೆಸೆದೆಸೆಗೆ ಬಾಯ ಬಿಟ್ಟು… ನೆತ್ತಿಗೇರಿದ ವಿಷದ ಕೈಯಿಂದ
ಮಡಿದನ್. “ಈ ಹೊತ್ತು ಎನ್ನ ಕುಲದ ಕುಡಿ ಮುರುಟಿತು” ಎಂದು ಉಮ್ಮಳಮ್ ಪೆತ್ತು, “ಬೀಳದೆ ಮಾಣನ್” ಎಂಬಂತೆ ಅಂದು ಪಡುವಣ
ಕಡಲೊಳು ರವಿ ಬಿದ್ದನ್.
ತಿರುಳು: ಲೋಹಿತಾಶ್ವನ ಮರಣ
ಇಂತು ನೃಪನ್ ದಿವಸಮ್ ಇತ್ತ ಕಳೆಯುತಿರಲ್=ಈ ರೀತಿಯಲ್ಲಿ ಹರಿಶ್ಚಂದ್ರನು ಇತ್ತ ಸುಡುಗಾಡಿನಲ್ಲಿ ಕಾವಲುಗಾರನಾಗಿ ದಿನಗಳನ್ನು ಕಳೆಯುತ್ತಿರಲು;
ಅಂತು ಅತ್ತಲ್ ಅವರನ್ ಒತ್ತಿಟ್ಟ ಮನೆಯನ್ ಏನ್ ಪೊಗಳ್ವೆನ್=ಆ ರೀತಿಯಲ್ಲಿ ಅತ್ತ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಕೊಂಡುಕೊಂಡ ಬ್ರಾಹ್ಮಣನ ಮನೆಯಲ್ಲಿ ಅವರು ಪಡುತ್ತಿರುವ ಸಂಕಟವನ್ನು ಏನೆಂದು ವಿವರಿಸಲಿ ಎಂದು ಕವಿಯು ಉದ್ಗಾರವೆಳೆದಿದ್ದಾನೆ; ಬ್ರಾಹ್ಮಣನ ಮನೆಯ ಜನರು ಎಂತಹ ಕ್ರೂರಿಗಳಾಗಿದ್ದರು ಎಂಬುದನ್ನು ರೂಪಕಗಳ ಮೂಲಕ ಕವಿಯು ಚಿತ್ರಿಸಿದ್ದಾನೆ;
ಅದು ಸೂನೆಗಾರರ ತಿಂತಿಣಿಯ ನಿಳಯ=ಅದು ಕೊಲೆಗಡುಕರಿಂದ ತುಂಬಿದ ಮನೆ;
ರಕ್ಕಸಿಯ ಮಾಡ=ರಕ್ಕಸಿಯ ಉಪ್ಪರಿಗೆ. ಅಂದರೆ ಅಲ್ಲಿದ್ದ ಮನೆಯೊಡತಿಯು ಮಹಾಕ್ರೂರಿ;
ಹಾವಿನ ಹೇಳಿಗೆ=ಹಾವನ್ನು ಇಡುವ ಬಿದಿರಿನ ಬುಟ್ಟಿ. ಅಂದರೆ ಯಾವ ಗಳಿಗೆಯಲ್ಲಿ ಯಾವ ಆಪತ್ತು ಚಂದ್ರಮತಿ ಮತ್ತು ಲೋಹಿತಾಶ್ವನಿಗೆ ಬರುವುದೋ ಹೇಳಲಾಗದು;
ಅಂತಕನ ನಗರ=ಸಾವಿನ ದೇವತೆಯಾದ ಯಮನ ಪಟ್ಟಣ;
ಮೃತ್ಯುವಿನ ಬಲುಬಾಣಸದ ಹಂತಿ=ಸಾಲು ಸಾಲು ಸಾವನ್ನುಂಟು ಮಾಡುವ ದೊಡ್ಡ ಅಡುಗೆಯ ಮನೆ;
ಮಾರಿಯ ಮೂರಿಯಾಟದ ಎಡೆ ಎಂಬಾಗಳ್=ಮಾರಿ ದೇವತೆಯ ಮುಂದೆ ಕೋಣನನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಜಾಗ ಎನ್ನುವಂತಿರುವ;
ಅಕಟ… ಅವನಿಪನ ಸತಿಪುತ್ರರು ಮನೆಯವರ ದುರ್ಧರದೊಳ್ ಎಂತು ಜೀವಿಪರ್=ಅಯ್ಯೋ… ಹರಿಶ್ಚಂದ್ರನ ಹೆಂಡತಿ ಮಕ್ಕಳು ಬ್ರಾಹ್ಮಣನ ಮನೆಯವರ ಕೊಡುತ್ತಿರುವ ತಡೆಯಲಾರದ ಹಿಂಸೆಯನ್ನು ಅನುಬವಿಸುತ್ತ ಅದಾವ ರೀತಿಯಲ್ಲಿ ಅಲ್ಲಿ ಜೀವಿಸಿದ್ದಾರೆಯೋ;
ಒಡೆಯನ್ ಅತಿಕೋಪಿ=ಮನೆಯ ಯಜಮಾನ ಅತಿಕೋಪವುಳ್ಳವನು;
ಹೆಂಡತಿ ಮಹಾಮೂರ್ಖೆ=ಅವನ ಹೆಂಡತಿ ದೊಡ್ಡ ತಿಳಿಗೇಡಿ;
ಮಗ ಕಡುದೂರ್ತ=ಅವರ ಮಗ ತುಂಬಾ ಕೆಟ್ಟ ನಡೆನುಡಿಯವನು;
ಸೊಸೆಯಾದಡೆ ಅಧಿಕ ನಿಷ್ಠುರೆ=ಸೊಸೆಯಾದರೊ ಬಹಳ ಒರಟುತನದವಳು;
ಮನೆಯ ನಡೆವವರು ದುರ್ಜನರು=ಮನೆಯಲ್ಲಿದ್ದ ಕೆಲಸದ ಆಳುಗಳು ಕೆಟ್ಟ ನಡೆನುಡಿಯವರು;
ನೆರೆಮನೆಯವರು ಮಿಥ್ಯವಾದಿಗಳು=ಅಕ್ಕಪಕ್ಕದ ಮನೆಯವರು ಇಲ್ಲಸಲ್ಲದ್ದನ್ನು ಹೇಳುವ ಸುಳ್ಳುಗಾರರು;
ಪಶುಗಳ್ ಅಗಡು=ಹಿಡಿತಕ್ಕೆ ಸಿಕ್ಕದ ತೊಂಡುದನಗಳು ಆ ಮನೆಯಲ್ಲಿದ್ದವು;
ಅಡಿಗಡಿಗೆ ಕೋಪಿಸುವ, ಸಾಯ ಸದೆಬಡಿವ, ಕಾಳ್ಗೆಡೆವ, ಕರಕರಿಪ , ಸೆಣಸುವ, ತಪ್ಪ ಸಾಧಿಸುವ, ಕೆಡೆಯೊದೆವ ಮಾರಿಗೆ ಆರದೆ ಅವನಿಪನ ಸತಿಪುತ್ರರು ಸತ್ತು ಹುಟ್ಟುತಿಹರ್=ಪದೇ ಪದೇ ಕೋಪಿಸಿಕೊಳ್ಳುವ; ಸಾಯುವಂತೆ ಹಲ್ಲೆಮಾಡುವ; ಕೆಟ್ಟ ಕೆಟ್ಟ ಮಾತುಗಳನ್ನಾಡುವ; ಕಾಟವನ್ನು ಕೊಡುವ; ಸಿಡಿಮಿಡಿಗೊಳ್ಳುವ; ಒಂದಲ್ಲ ಒಂದು ತಪ್ಪನ್ನು ಹುಡುಕಿ ಬಯ್ಯುತ್ತಿರುವ; ಕೆಳಕ್ಕೆ ಬೀಳುವಂತೆ ಒದೆಯುವ ಹಿಂಸೆಯನ್ನು ತಡೆಯಲಾರದೆ ಹರಿಶ್ಚಂದ್ರನ ಹೆಂಡತಿ ಮಕ್ಕಳು ಪ್ರತಿ ದಿನವೂ ಸತ್ತು ಹುಟ್ಟುತ್ತಿದ್ದರು. ಅಂದರೆ ಕಿರುಕುಳದ ಬೇಗೆಯಲ್ಲಿ ಒಂದೇ ಸಮನೆ ಬೇಯುತ್ತಿದ್ದರು;
ಹಲವು ಸೂಳ್ ಒಡೆಯನ ಅರಮನೆಗೆ ಎಡೆವಿಡದೆ ನೀರ್ ಅಡಕಿ=ಪ್ರತಿ ದಿನವೂ ಹಲವು ಸಾರಿ ಯಜಮಾನನ ದೊಡ್ಡ ಮನೆಗೆ ಹೊರಗಡೆಯಿಂದ ಒಂದೇ ಸಮನೆ ನೀರನ್ನು ತಂದು ತುಂಬಿ;
ಕೊಟ್ಟನಿತು ಬತ್ತವ ಮಿದಿದು=ಅವರು ಕೊಟ್ಟ ಬತ್ತವನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿ ಹಸನು ಮಾಡಿ, ಅಕ್ಕಿಯನ್ನು ತೆಗೆದು;
ಒಡಲಿಗೆ ಎಯ್ದು ಎಡೆಯಿಕ್ಕಿದ ಅನಿತುಮನೆ ಉಂಡು=ಹೊಟ್ಟೆಗೆ ಉಣಲೆಂದು ಅವರು ನೀಡಿದಶ್ಟನ್ನು ಉಂಡು;
ಇರುಳುಮ್ ಹಗಲುಮ್ ಎನ್ನದೆ ಓರಂತೆ ಕುದಿವ ಮಡದಿಯ ಕುಮಾರನ್ ಉದಯದೊಳ್ ಎದ್ದು ಹೋಗಿ=ರಾತ್ರಿ ಹಗಲೆನ್ನದೆ ಒಂದೇ ಸಮನೇ ದುಡಿಯುತ್ತಿರುವ ಲೋಹಿತಾಶ್ವನು ಬೆಳಗಿನ ಜಾವದಲ್ಲಿ ಎದ್ದು ಹೋಗಿ; ನಿಚ್ಚ ತನ್ನ ಒಡನಾಡಿಗಳ್ ಬೆರಸಿ ಹೇರಡವಿಯಲಿ ಹುಲುಹುಳ್ಳಿಯಮ್ ಕೊಂಡು=ನಿತ್ಯವೂ ತನ್ನ ಓರಿಗೆಯ ಮಕ್ಕಳ ಜತೆಗೂಡಿ ದೊಡ್ಡ ಕಾಡಿನಲ್ಲಿರುವ ಹುಲ್ಲನ್ನು ಕೊಯ್ದು ಮತ್ತು ಒಣಗಿದ ಕಟ್ಟಿಗೆಯ ಸಣ್ಣ ಸಣ್ಣ ತುಂಡುಗಳನ್ನು ಆಯ್ದು ತಂದು;
ಬೈಗೆ ಬಂದು=ಕಾಡಿನಿಂದ ಸಂಜೆಯಲ್ಲಿ ಹಿಂತಿರುಗಿ ಬಂದು;
ಇಂತು ಕಾಲವನು ಸವೆಯಿಸುತಿರ್ದನು=ಈ ರೀತಿ ಕಾಲವನ್ನು ತಳ್ಳುತ್ತಿದ್ದನು; ಓರಂತೆ ತಲ್ಲಣಿಸಿ ಹೆದರಿ=ಮನೆಯವರು ನೀಡುತ್ತಿರುವ ಕಿರುಕುಳ ಮತ್ತು ಒಂದೇ ಸಮನೆ ಮಾಡುತ್ತಿರುವ ಕೆಲಸದ ಹೊರೆಯಿಂದ ಚಿಂತೆಗೀಡಾಗಿ ಹೆದರಿಕೊಂಡು;
ಕಣ್ಗೆಟ್ಟು ಓಡಬಾರದು… ಇರಬಾರದು… ಉರೆ ಸಾಯಬಾರದು… ಬದುಕಬಾರದು ಎಂಬಂತೆ=ದಿಕ್ಕುತೋಚದಂತಹ ಸನ್ನಿವೇಶಕ್ಕೆ ಗುರಿಯಾಗಿ ಅಲ್ಲಿಂದ ಓಡಿಹೋಗಲಾರದ… ಕಿರುಕುಳದ ಮನೆಯಲ್ಲಿ ಇರಲಾಗದ… ಇತ್ತ ಸಾಯಲಾಗದ… ಅತ್ತ ಬದುಕಲಾಗದ ಇಬ್ಬಗೆಯ ಸಂಕಟವೆನ್ನುವಂತೆ;
ತನ್ನೊಡಲಿಂಗೆ ಬಪ್ಪ ದುಃಖಂಗಳಿಗೆ ಸಾಕ್ಷಿಯಾಗಿ=ತನ್ನ ಮಯ್ ಮನಕ್ಕೆ ಬಂದ ಸಂಕಟಗಳೆಲ್ಲವನ್ನು ಸಹಿಸಿಕೊಳ್ಳುತ್ತ;
“ಧಾರಿಣಿಯೊಳ್ ಅವನಿಪನ ಸತ್ಯ ಸಲಬೇಹುದು” ಎಂಬ ಆರಯ್ಕೆವಿಡಿದು ನಡೆಯುತ್ತಿಪ್ಪ ನಾರಿಯ ಕುಮಾರಂಗೆ ಬಂದ ಸಂಕಟದ ಸಂವರಣೆಯನ್ ಆದಾವ ಜೀವರು ಕೇಳ್ವರು=“ಬೂಮಂಡಲದಲ್ಲಿ ನಮ್ಮ ತಂದೆಯಾದ ಹರಿಶ್ಚಂದ್ರನ ಸತ್ಯದ ನಡೆನುಡಿಯು ಉಳಿಯಬೇಕು” ಎಂಬ ಉದ್ದೇಶದಿಂದ ಬಾಳುತ್ತಿರುವ ಲೋಹಿತಾಶ್ವನಿಗೆ ಬಂದ ಸಂಕಟದ ಪರಿಸ್ತಿತಿಯನ್ನು ಅದು ಯಾರು ತಾನೆ ಕೇಳಿ ಸಹಿಸಿಕೊಳ್ಳಬಲ್ಲರು. ಅಂದರೆ ಲೋಹಿತಾಶ್ವನಿಗೆ ಬಹು ದೊಡ್ಡ ಆಪತ್ತು ಬರಲಿದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;
ಎಂದಿನಂತೆ ಉದಯಕಾಲದೊಳ್ ಎದ್ದು ಹುಲುಹುಳ್ಳಿಗೆಂದು ಅರಣ್ಯಕ್ಕೆ ನಡೆದು= ಎಂದಿನಂತೆ ಲೋಹಿತಾಶ್ವನು ಪ್ರತಿ ದಿನದ ದುಡಿಮೆಯನ್ನು ಮಾಡಲೆಂದು ಒಂದು ದಿನ ಬೆಳಗಿನ ಸಮಯದಲ್ಲಿ ಎದ್ದು ಹುಲ್ಲು ಮತ್ತು ಕಟ್ಟಿಗೆಯ ಪುಳ್ಳೆಯನ್ನು ತರಲೆಂದು ಕಾಡಿಗೆ ನಡೆದು ಬಂದು;
ಅಲ್ಲಲ್ಲಿ ಹೋಗಿ ಹಲವು ಅಂದದ ಅಡುಗಬ್ಬನ್ ಆಯ್ದು ಒಟ್ಟಿ ಹೊರೆಗಟ್ಟಿ ಹೊತ್ತು=ಕಾಡಿನ ಅನೇಕ ಕಡೆಗಳಲ್ಲಿ ತಿರುತಿರುಗಿ, ಚೆನ್ನಾಗಿರುವ ಕಟ್ಟಿಗೆಯ ತುಂಡುಗಳನ್ನು ಆಯ್ದು, ಒಂದೆಡೆ ರಾಶಿ ಮಾಡಿ, ಹೊರೆಯನ್ನು ಕಟ್ಟಿ ಹೊತ್ತುಕೊಂಡು;
ಓರಗೆಯ ಮಕ್ಕಳೊಡನೆ ನಿಂದು=ತನ್ನ ಒಡನಾಡಿಗಳೊಡನೆ ನಿಂತು ಆಯಾಸವನ್ನು ಪರಿಹರಿಸಿಕೊಳ್ಳುತ್ತ;
ಮಧ್ಯಾಹ್ನದ ಉರಿ ಬಿಸಿಲೊಳ್ ಎದೆ ಬಿರಿಯೆ=ಮದ್ಯಾಹ್ನದ ಉರಿ ಬಿಸಿಲಿನ ತಾಪದಿಂದ ಎದೆ ನೋಯುತ್ತಿರಲು;
ಜವಗುಂದಿ ತಲೆಕುಸಿದು ನಡೆಗೆಟ್ಟು=ದೇಹದ ಬಲವು ಕಡಿಮೆಯಾಗಿ, ತಲೆ ತಿರುಗಿ, ನಡೆಯಲಾರದೆ ಕಾಲುಗಳು ಸುಸ್ತಾಗಿ;
ಬಾಯಾರಿ ಹಣೆಯಿಂದ ಬೆಮರುಗೆ=ಬಾಯಾರಿಕೆಯಿಂದ ತೊಳಲುತ್ತ, ಹಣೆಯಲ್ಲಿ ಬೆವರು ಹರಿಯುತ್ತಿರಲು;
ನೆತ್ತಿ ಹೊತ್ತಿ ತೇಂಕುತ್ತ ಹರಿತಪ್ಪಾಗಳ್ ಏನ್ ಪೊಗಳ್ವೆನು=ತಲೆಯ ಮೇಲೆ ಹುಲ್ಲು ಮತ್ತು ಕಟ್ಟಿಗೆಯ ಹೊರೆಯನ್ನು ಹೊತ್ತುಕೊಂಡು, ಏದುಸಿರನ್ನು ಬಿಡುತ್ತ ಬರುತ್ತಿರುವ ಲೋಹಿತಾಶ್ವನಿಗೆ ಬಂದ ಆಪತ್ತನ್ನು ಏನೆಂದು ತಾನೆ ವಿವರಿಸಲಿ ಎಂದು ಕವಿಯು ಉದ್ಗರಿಸುತ್ತಿದ್ದಾನೆ;
ಕೆಲದ ಮೆಳೆಯ ಒತ್ತಿನೊಳಗಿರ್ದ ಹುತ್ತಿನೊಳು ನಳನಳಿಸಿ ಕೋಮಲತೆಯಿಮ್ ಕೊಬ್ಬಿ ಕೊನೆವಾಯ್ದು ಕಂಗೆ ಅಳವಟ್ಟು ಬೆಳೆದ ಎಳೆಯ ದರ್ಭೆಯಮ್ ಕಂಡು ಹಾರಯಿಸಿ=ಹುಲ್ಲು ಮತ್ತು ಪುಳ್ಳೆಯ ಹೊರೆಯನ್ನು ಹೊತ್ತುಕೊಂಡು ಕಾಡಿನಿಂದ ಬರುತ್ತಿದ್ದ ಲೋಹಿತಾಶ್ವನು ಕಾಲುದಾರಿಯ ಪಕ್ಕದಲ್ಲಿ ಮೆಳೆಗೆ ಸೇರಿದಂತಿದ್ದ ಹುತ್ತದ ಮೇಲೆ ಹುಲುಸಾಗಿ ಬೆಳೆದು ದಟ್ಟವಾಗಿ ಹಬ್ಬಿ ಹರಡಿಕೊಂಡು, ಕಣ್ಣಿಗೆ ಎದ್ದು ಕಾಣುವಂತೆ ಕಂಗೊಳಿಸುತ್ತಿದ್ದ ಎಳೆಯ ಮೊನಚಾದ ಎಳೆಯ ಹುಲ್ಲನ್ನು ಕಂಡು ಬಯಸಿ;
ನಾನ್ ಇದನೆಲ್ಲವ ಗಳಗಳನೆ ಕೊಯ್ದುಕೊಂಡು ಎಯ್ದು ಇತ್ತಡೆ, ಎನ್ನೊಡೆಯ ಮುಳಿಯದಿಹನ್ ಎಂಬ ಆಸೆಯಿಮ್=ನಾನು ಇಂತಹ ಸೊಗಸಾದ ದರ್‍ಬೆಯನ್ನು ಬೇಗನೆ ಕೊಯ್ದುಕೊಂಡು ಹೋಗಿ ಕೊಟ್ಟರೆ, ಒಡೆಯನು ಆನಂದಗೊಂಡು ಎಂದಿನಂತೆ ನನ್ನ ಬಗ್ಗೆ ಕೋಪಿಸಿಕೊಳ್ಳುವುದಿಲ್ಲ ಎಂಬ ಆಸೆಯಿಂದ;
ಹೊರೆಯನ್ ಇಳುಹಿ=ಹೊತ್ತಿದ್ದ ಹೊರೆಯನ್ನು ಕೆಳಕ್ಕಿ ಇಳಿಸಿ;
ಮತ್ತೆ ಎಳಸಿ ಕುಡುಗೋಲ್ ಪಿಡಿದು=ಮತ್ತೆ ದರ್‍ಬೆಯನ್ನು ಕುಯ್ಯಲೆಂದು ಕುಡುಗೋಲನ್ನು ಹಿಡಿದುಕೊಂಡು;
ಅಸ್ತಾದ್ರಿಯಮ್ ಸಾರ್ದ ಮಾರ್ತಾಂಡನಂತೆ ಸಾರ್ದನ್=ಪಶ್ಚಿಮದ ದಿಕ್ಕಿನ ಬೆಟ್ಟದ ಒತ್ತಿಗೆ ಬರುವ ಸೂರ್‍ಯನಂತೆ ಹುತ್ತದ ಬಳಿಗೆ ಬಂದನು;
ಹೊದೆ ಕಡಿದು=ದಟ್ಟವಾಗಿ ಬೆಳೆದಿದ್ದ ಮೆಳೆಯನ್ನು ಕತ್ತರಿಸಿ;
ಹುತ್ತನು ಹತ್ತಿ ಸುತ್ತಿದ ಎಳಹುಲ್ಲ ಹೊದರ ಅಡಸಿ ಹಿಡಿದು, ಬಿಡದೆ ಅರಿದು ಸೆಳೆಯಲ್=ಹುತ್ತದ ಮೇಲೆ ನಿಂತುಕೊಂಡು, ಹುತ್ತದ ಸುತ್ತಲೂ ಮೇಲೆ ಕೆಳಗೆ ಬೆಳೆದಿದ್ದ ಎಳೆಯ ಹುಲ್ಲಿನ ತೆಂಡೆಯನ್ನು ಒತ್ತಿಹಿಡಿದು, ಬಿಡದೆ ಕತ್ತರಿಸಿ ಜಗ್ಗಿಸಿ ಕೀಳುತ್ತಿರಲು;
ಕೈಯ ಹದರನ್ ಒಡೆಗಚ್ಚಿ ಜಡಿಯುತ್ತ ಭೋಂಕನೆ ಬಂದ ರೌದ್ರಸರ್ಪನನು ಕಂಡು ಹೆದರಿ=ಲೋಹಿತಾಶ್ವನ ಕಯ್ಯಿನ ಮಣಿಕಟ್ಟನ್ನು ಕಚ್ಚಿಹಿಡಿದು ಬುಸುಗುಡುತ್ತ ಬೋಂಕನೆ ಬಂದ ಉಗ್ರವಾದ ಹಾವನ್ನು ಕಂಡು ಹೆದರಿಕೊಂಡು;
ಹವ್ವನೆ ಹಾರಿ… ಹಾ ಎಂದು ಕೈಕಾಲ ಕೆದರಿ=ಕೂಡಲೇ ಮೇಲಕ್ಕೆ ನೆಗೆದು… ಹಾ… ಎಂದು ಅರಚುತ್ತ ಕಯ್ ಕಾಲನ್ನು ಜೋರಾಗಿ ಒದರಿ;
ಅಕಟಕಟ… ಮದಮ್ ಉದಿತ ರಾಹುಗ್ರಸ್ತವಾದ ತರುಣೇಂದುಬಿಂಬಮ್ ನೆಲಕ್ಕೆ ಬೀಳ್ವಂದದೆ ತಲೆಕೆಳಗಾಗಿ ಕೆಡೆದನ್=ಅಯ್ಯಯ್ಯೋ… ಮದದಿಂದ ಮೆರೆಯುತ್ತಿರುವ ರಾಹುವಿನಿಂದ ಹಿಡಿಯಲ್ಪಟ್ಟ ಎಳೆಯ ಚಂದ್ರ ಬಿಂಬ ನೆಲಕ್ಕೆ ಉರುಳಿಬೀಳುವ ರೀತಿಯಲ್ಲಿ ಲೋಹಿತಾಶ್ವನು ಹುತ್ತದ ಬುಡದಲ್ಲಿ ಬಿದ್ದನು;
ಹುತ್ತಿನಿಮ್ ಫಣಿವೆರಸಿ ಕೆಡೆಯೆ ಕಂಡು ಒಡನಿರ್ದ ಜತ್ತಕಂಗಳು ಹೆದರಿ ಬಿಟ್ಟೋಡಿ ಊರತ್ತಲ್ ಹೋದರ್=ಹುತ್ತದ ಮೇಲಿನಿಂದ ಹಾವಿನ ಜತೆಗೂಡಿಯೇ ಲೋಹಿತಾಶ್ವನು ಕೆಳಕ್ಕೆ ಬಿದ್ದುದನ್ನು ಕಂಡು ಜತೆಯಲ್ಲಿದ್ದ ಹುಡುಗರು ಹೆದರಿಕೊಂಡು, ಅವನನ್ನು ಅಲ್ಲಿಯೇ ಬಿಟ್ಟು ಬಿದ್ದಂಬೀಳ ಓಡುತ್ತ ಕಾಶಿ ನಗರದತ್ತ ಹೋದರು;
ಇತ್ತಮ್ ತಾಯ್ಗೆ ಹಲುಬಿ… ತಂದೆಯ ಕರೆದು… ದೆಸೆದೆಸೆಗೆ ಬಾಯ ಬಿಟ್ಟು… ನೆತ್ತಿಗೇರಿದ ವಿಷದ ಕೈಯಿಂದ ಮಡಿದನ್=ಇತ್ತ ಲೋಹಿತಾಶ್ವನು ತಾಯಿಗಾಗಿ ರೋದಿಸುತ್ತ… ತಂದೆಯ ಹೆಸರನ್ನು ಹಿಡಿದು ಕೂಗುತ್ತ… ದಿಕ್ಕುದಿಕ್ಕಿಗೆ ಬಾಯಿಬಿಡುತ್ತ, ತಲೆಗೇರಿದ ನಂಜಿನಿಂದ ಮರಣಹೊಂದಿದನು;
ರವಿ “ಈ ಹೊತ್ತು ಎನ್ನ ಕುಲದ ಕುಡಿ ಮುರುಟಿತು” ಎಂದು ಉಮ್ಮಳಮ್ ಪೆತ್ತು, “ಬೀಳದೆ ಮಾಣನ್” ಎಂಬಂತೆ ಅಂದು ಪಡುವಣ ಕಡಲೊಳು ಬಿದ್ದನ್=ಸೂರ್‍ಯನು “ಈ ಹೊತ್ತು ನನ್ನ ಕುಲದ ಚಿಗುರು ಮುದುಡಿಹೋಯಿತು” ಎಂದು ಸಂಕಟಪಡುತ್ತ “ಬೀಳದೆ ಇರಲಾರನು” ಎನ್ನುವಂತೆ, ಅಂದು ಪಶ್ಚಿಮದ ಕಡಲಿನಲ್ಲಿ ಮರೆಯಾದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು