ಪಂಪ ಬಾರತ ಓದು – 7ನೆಯ ಕಂತು

ಸಿ.ಪಿ.ನಾಗರಾಜ.

ಪಾತ್ರಗಳು

ಪಾಂಡುರಾಜ – ಕುಂತಿ ಮತ್ತು ಮಾದ್ರಿಯರ ಗಂಡ. ಕಿಂದಮನೆಂಬ ರಿಸಿಯ ಶಾಪದ ಕಾರಣದಿಂದಾಗಿ ಹಸ್ತಿನಾವತಿಯ ರಾಜ್ಯಪಟ್ಟವನ್ನು ತೊರೆದು ಈಗ ಕಾಡಿನಲ್ಲಿ ನೆಲೆಸಿದ್ದಾನೆ.
ಕುಂತಿ – ಪಾಂಡುರಾಜನ ಹೆಂಡತಿ
ದುರ್ವಾಸ – ಒಬ್ಬ ಮುನಿ.
ಕುಂತಿಭೋಜ-ಕುಂತಳ ದೇಶದ ರಾಜ. ಕುಂತಿಯ ಸಾಕು ತಂದೆ. ಶೂರಸೇನನ ಸೋದರತ್ತೆಯ ಮಗನಾದ ಕುಂತಿಬೋಜನು ತನಗೆ ಮಕ್ಕಳಿಲ್ಲದ್ದರಿಂದ ಕುಂತಿಯು ಚಿಕ್ಕ ವಯಸ್ಸಿನ ಬಾಲೆಯಾಗಿದ್ದಾಗಲೇ ಅವಳನ್ನು ದತ್ತು ಮಗಳನ್ನಾಗಿ ಪಡೆದಿದ್ದನು.
ಧೃತರಾಷ್ಟ್ರ – ಹಸ್ತಿನಾವತಿಯ ರಾಜ. ಪಾಂಡುರಾಜನ ಅಣ್ಣ
ಗಾಂಧಾರಿ – ದ್ರುತರಾಶ್ಟ್ರನ ಹೆಂಡತಿ.
ಯಮರಾಜ – ದೇವಲೋಕದಲ್ಲಿರುವ ಒಬ್ಬ ದೇವತೆ

============================

ಕುಂತಿಯ ಬಯಕೆ

ಪಾಂಡುರಾಜನ್ ಈ ತಪೋವನಮೆ ಪಾವನಮ್ ಎಂದು ತಪೋವನದ ಮುನಿಜನದ ಪರಮ ಅನುರಾಗಮನ್ ಪೆರ್ಚಿಸಿ, ಕಾಮಾನುರಾಗಮನ್ ಬೆರ್ಚಿಸಿ ತದಾಶ್ರಮದೊಳ್ ಆಶ್ರಮಕ್ಕೆ ಗುರುವಾಗೆ ಇರ್ಪನ್ನೆಗಮ್, ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ ಮಕ್ಕಳನ್ ಪಡೆವಂತು ಪರಾಶರಮುನೀಂದ್ರನೊಳ್ ಬರಮ್ ಪಡೆದಳ್ ಎಂಬುದನ್ ಕುಂತಿ ಕೇಳ್ದು ತಾನುಮ್ ಪುತ್ರಾರ್ಥಿಯಾಗಲ್ ಬಗೆದು-

ಕುಂತಿ: (ಪಾಂಡುರಾಜನ ಮುಂದೆ) ವಿರೋಧಿ ನೃಪರನ್ ವಿಸಸನದೊಳ್ ತಱಿದು ಒಟ್ಟಲುಮ್, ಅರ್ಥಿಗೆ ಅರ್ಥಮನ್ ಕಸವಿನ ಲೆಕ್ಕಮ್ ಎಂದು ಕುಡಲುಮ್, ವಿಪುಳ ಆಯತಿಯಮ್ ದಿಗಂತದೊಳ್ ಪಸರಿಸಲುಮ್ ಕರಮ್ ನೆಱೆವ ಮಕ್ಕಳನ್ ಈಯದೆ , ನೋಡೆ ಇಕ್ಷುಪುಷ್ಪದವೊಲ್ ಎನ್ನಯ ನಿಷ್ಫಲ ಪುಷ್ಪದರ್ಶನಮ್ ನಾಡೆ ನೋಯಿಸಿದಪುದು

(ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯನ್ ಕಂಡು ಪಾಂಡುರಾಜನ್ ಏಕಾಂತದೊಳ್ ಇಂತು ಎಂದನ್.)

ಪಾಂಡುರಾಜ: ತಳೋದರೀ , ಚಿಂತೆ ಇದೇನೊ…ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡೆ ಇನ್ನು ಇಂತಿರ ಬೇಡ. ನಿಜ ಬಗೆ ತೀರ್ಪಿನಮ್ ಅತ್ಯಂತ ಪತಿವ್ರತಾಗುಣದಿನ್ ದಿವ್ಯ ಮುನಿಪುಂಗವರಮ್ ನೀನ್ ಅರ್ಚಿಸಿ ಮೆಚ್ಚಿಸು. ದಿಗಂತ ವಿಶ್ರಾಂತ ಯಶರ್ಕಳಮ್ ವರ ತನೂಭವರನ್ ನೀನ್ ಪಡೆ.

ಕುಂತಿ: ಎನ್ನ ಕನ್ನಿಕೆಯಾ ಕಾಲದೊಳ್ ನಾನ್ ಎನ್ನ ಮಾವನ್ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರ್ ಎಮ್ಮ ಮನೆಗೆ ನಿಚ್ಚಕ್ಕಮ್ ಬರ್ಪರ್. ಅವರ್ ಎನ್ನ ವಿನಯಕ್ಕಮ್ ಭಕ್ತಿಗಮ್ ಬೆಸಕೆಯ್ವುದರ್ಕಮ್ ಮೆಚ್ಚಿ ಮಂತ್ರಾಕ್ಷರಂಗಳನ್ ಅಯ್ದಮ್ ವರವಿತ್ತರ್. “ಈ ಅಯ್ದು ಮಂತ್ರಕೆ ನಿನ್ನ ಬಗೆಗೆ ಬಂದವರನ್ ಆಹ್ವಾನಮ್ ಗೆಯ್ಯಲ್ ಅವರ ಪೋಲ್ವೆಯ ಅಯ್ವರ್ ಮಕ್ಕಳನ್ ಪಡೆವೆ ” ಎಂದು ಬೆಸಸಿದೊಡೆ, ಈಗಳ್ ಎನ್ನ ಪುಣ್ಯದಿನ್ ಒಳ್ಳಿತ್ತು ದೊರೆಕೊಂಡುದು.

ಪಾಂಡುರಾಜ: ಅದರ್ಕೆ ಏನುಮ್ ಚಿಂತಿಸಲ್ವೇಡ. ದಿವ್ಯ ಮುನಿ ವಾಕ್ಯಮ್ ಅಮೋಘ ವಾಕ್ಯಮ್ ಅಕ್ಕುಮ್.

ಕುಂತಿ: ಅಂತೆ ಗೆಯ್ವೆನ್

(ಎಂದು ಸರೋಜಾನನೆ ತೀರ್ಥಜಲಂಗಳಮ್ ಮಿಂದು ದಳಿಂಬವನ್ ಉಟ್ಟು ಮುತ್ತಿನ ತೊಡಿಗೆಗಳನ್ ತೊಟ್ಟು ದರ್ಭಶಯನದೊಳ್ ಇರ್ದು… ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮನ್ ಓದಿ ಓದಿ ಜ್ಞಾನದಿನ್ ಇರ್ದು ನಿಟ್ಟಿಪೊಡೆ ಯಮರಾಜನನ್ ಅದ್ಭುತ ತೇಜನನ್ ಜಾನದಿಮ್ ಬರಿಸೆ, ಯಮನ್ ಬಂದು…)

ಯಮ: ಆತ್ಮಾನುಗತಾರ್ಥಮ್ ಬೆಸನ್ ಆವುದು?

ಕುಂತಿ: ನಿನ್ನನೆ ಪೋಲ್ವ ಪುತ್ರನನ್ ಎನಗೆ ಈವುದು.

ಯಮ: ತಥಾಸ್ತು.

(ಎಂದು ಯಮಭಟ್ಟಾರಕನ್ ತನ್ನ ಅಂಶಮನ್ ಆಕೆಯ ಗರ್ಭದೊಳ್ ಅವತರಿಸಿ ಅಂತರ್ಧಾನಕ್ಕೆ ಸಂದನ್.)

============================

ಪದ ವಿಂಗಡಣೆ ಮತ್ತು ತಿರುಳು

ತಪ=ದೇವತೆಗಳ ಹೆಸರು ಪದೇಪದೇ ಉಚ್ಚರಿಸುತ್ತ, ಅವರ ಮಹಿಮೆಯನ್ನು ಕೊಂಡಾಡುವುದರ ಜತೆಜತೆಗೆ ಒಳ್ಳೆಯ ಅರಿವನ್ನು ಪಡೆಯಲು ನೆರವಾಗುವ ಓದು ಹಾಗೂ ಚಿಂತನೆಯಲ್ಲಿ ತೊಡಗುವುದು; ವನ=ಕಾಡು; ತಪೋವನ=ತಪಸ್ಸಿನಲ್ಲಿ ತೊಡಗಿರುವ ರಿಸಿಗಳು ನೆಲೆಸಿರುವ ಕಾಡು; ಪಾವನ=ಪವಿತ್ರವಾದುದು;

ಪಾಂಡುರಾಜನ್ ಈ ತಪೋವನಮೆ ಪಾವನಮ್ ಎಂದು=ಪಾಂಡುರಾಜನು ಈ ತಪೋವನವೇ ಪವಿತ್ರವೆಂದು ತಿಳಿದುಕೊಂಡು, ಅಂದರೆ ತಾನು ನೆಲೆಸುವುದಕ್ಕೆ ಸರಿಯಾದ ಜಾಗವೆಂದು ನಿಶ್ಚಯಿಸಿಕೊಂಡು;

ಮುನಿ=ರಿಸಿ; ಮುನಿಜನ=ರಿಸಿಗಳು; ಪರಮ=ಅತಿಶಯವಾದ; ಅನುರಾಗಮ್+ಅನ್; ಅನುರಾಗ=ಒಲವು; ಅನ್=ಅನ್ನು; ಪೆರ್ಚು=ಹೆಚ್ಚು/ಹಿರಿದಾಗು/ದೊಡ್ಡದಾಗು;

ತಪೋವನದ ಮುನಿಜನದ ಪರಮ ಅನುರಾಗಮನ್ ಪೆರ್ಚಿಸಿ=ತಪೋವನದಲ್ಲಿದ್ದ ಮುನಿಜನಗಳ ಬಗ್ಗೆ ಹೆಚ್ಚಿನ ಒಲವನ್ನು ತಳೆದು;

ಕಾಮ+ಅನುರಾಗಮ್+ಅನ್; ಕಾಮ=ಗಂಡು ಹೆಣ್ಣಿನ ದೇಹಗಳು ಜತೆಗೂಡುವುದು; ಅನುರಾಗ=ಒಲವು; ಬೆರ್ಚು=ಹೆದರು/ಅಂಜು; ಬೆರ್ಚಿಸಿ=ಅಂಜುವಂತೆ ಮಾಡಿ ಅಂದರೆ ಮಯ್ ಮನವನ್ನು ಕಾಡದಂತೆ ಎಚ್ಚರವುಳ್ಳವನಾಗಿ;

ಕಾಮಾನುರಾಗಮನ್ ಬೆರ್ಚಿಸಿ=ತನ್ನ ದೇಹದಲ್ಲಿ ತುಡಿಯುವ ಕಾಮದ ಬಯಕೆಯನ್ನು ಅದುಮಿಟ್ಟು ಇಲ್ಲವೇ ಹಿಮ್ಮೆಟ್ಟಿಸಿ;

ತತ್+ಆಶ್ರಮ+ಒಳ್; ತತ್=ಆ ; ಆಶ್ರಮ=ರಿಸಿಗಳ ವಾಸಿಸುವ ನೆಲೆ; ಒಳ್=ಅಲ್ಲಿ; ಗುರು+ಆಗೆ; ಗುರು=ಹಿರಿಯ; ಇರ್ಪ+ಅನ್ನೆಗಮ್; ಇರ್ಪ=ಇರುವ; ಅನ್ನೆಗಮ್=ತನಕ/ವರೆಗೆ; ಇರ್ಪನ್ನೆಗಮ್=ಇರುವಾಗ;

ತದಾಶ್ರಮದೊಳ್ ಆಶ್ರಮಕ್ಕೆ ಗುರುವಾಗೆ ಇರ್ಪನ್ನೆಗಮ್=ಆ ಆಶ್ರಮದಲ್ಲಿ ಎಲ್ಲರ ಆದರಕ್ಕೆ ಪಾತ್ರನಾಗಿ ಬಾಳುತ್ತಿರುವಾಗ;

ಇತ್ತ=ಈ ಕಡೆ; ಮಹಾದೇವಿ+ಅಪ್ಪ; ಮಹಾದೇವಿ=ಪಟ್ಟದ ರಾಣಿ; ಅಪ್ಪ=ಆಗಿರುವ; ನೂರ್ವರ್=ನೂರು ಮಂದಿ; ಪಡೆವ+ಅಂತು; ಪಡೆ=ಹೊಂದು; ಅಂತು=ಹಾಗೆ; ಪರಾಶರ+ಮುನೀಂದ್ರ+ಒಳ್; ಮುನೀಂದ್ರ=ದೊಡ್ಡ ರಿಸಿ; ಒಳ್=ಅಲ್ಲಿ; ಬರ=ವರ; ಬರಮ್=ವರವನ್ನು; ಎಂಬುದನ್=ಎನ್ನುವ ಸುದ್ದಿಯನ್ನು;

ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ ಮಕ್ಕಳನ್ ಪಡೆವಂತು ಪರಾಶರಮುನೀಂದ್ರನೊಳ್ ಬರಮ್ ಪಡೆದಳ್ ಎಂಬುದನ್ ಕುಂತಿ ಕೇಳ್ದು=ಇತ್ತ ಹಸ್ತಿನಾವತಿಯಲ್ಲಿ ದ್ರುತರಾಶ್ಟ್ರನ ಮಡದಿಯಾದ ಪಟ್ಟದ ರಾಣಿ ಗಾಂದಾರಿಯು ಪರಾಶರಮುನಿಯಿಂದ ಒಂದು ನೂರು ಮಕ್ಕಳನ್ನು ಹಡೆಯುವ ವರವನ್ನು ಪಡೆದುಕೊಂಡಿದ್ದಾಳೆ ಎಂಬ ಸುದ್ದಿಯನ್ನು ಕುಂತಿಯು ಕೇಳಿ;

ತಾನ್+ಉಮ್; ಉಮ್=ಊ; ಪುತ್ರ+ಅರ್ಥಿ+ಆಗಲ್; ಪುತ್ರ=ಮಗ; ಅರ್ಥಿ=ಪಡೆಯಬೇಕೆಂಬ ಆಸೆ; ಬಗೆ=ಎಣಿಸು/ಯೋಚಿಸು;

ತಾನುಮ್ ಪುತ್ರಾರ್ಥಿಯಾಗಲ್ ಬಗೆದು=ಗಾಂದಾರಿಯಂತೆಯೇ ತಾನೂ ಮಗನನ್ನು ಪಡೆಯಬೇಕೆಂಬ ಹಂಬಲಕ್ಕೆ ಒಳಗಾಗಿ;

ವಿರೋಧಿ=ಹಗೆ/ಶತ್ರು; ನೃಪರ್+ಅನ್; ನೃಪ=ರಾಜ; ವಿಸಸನ+ಒಳ್; ವಿಸಸನ=ಸಂಗ್ರಾಮ/ಕಾಳೆಗ; ತಱಿ/ತರಿ=ಕತ್ತರಿಸು; ಒಟ್ಟಲ್+ಉಮ್; ಒಟ್ಟು=ರಾಶಿ ಮಾಡು/ಗುಡ್ಡೆ ಹಾಕು;

ವಿರೋಧಿ ನೃಪರನ್ ವಿಸಸನದೊಳ್ ತಱಿದು ಒಟ್ಟಲುಮ್=ಎದುರಾಗಿ ಬಂದ ಶತ್ರುರಾಜರನ್ನು ಕಾಳೆಗದಲ್ಲಿ ಕಡಿದು ತುಂಡರಿಸಿ ರಾಶಿ ಮಾಡಲು;

ಅರ್ಥಿ=ಬೇಡುವವನು/ಯಾಚಕ; ಅರ್ಥಮ್+ಅನ್; ಅರ್ಥ=ಸಂಪತ್ತು/ಹಣ/ದ್ರವ್ಯ; ಕಸ=ಜನವಸತಿಯಿರುವ ಜಾಗವನ್ನು ಗುಡಿಸಿದಾಗ ದೊರೆಯುವ ದೂಳು ದುಂಬು ಮತ್ತು ಕೊಳಕಾದ ವಸ್ತು; ಲೆಕ್ಕ=ಗಣನೆ; ಕುಡಲ್+ಉಮ್; ಕುಡು=ನೀಡು;

ಅರ್ಥಿಗೆ ಅರ್ಥಮನ್ ಕಸವಿನ ಲೆಕ್ಕಮ್ ಎಂದು ಕುಡಲುಮ್=ಬೇಡಿಬಂದ ಯಾಚಕರಿಗೆ ಸಂಪತ್ತನ್ನು ಕಸಕ್ಕೆ ಸಮಾನವಾಗಿ ಕಂಡು ದಾನಮಾಡಲು, ಅಂದರೆ ದಾನ ಕೊಡುವ ಸಂಪತ್ತನ್ನು ದೊಡ್ಡದೆಂದು ಎಣಿಸದೆ ಬೇಡುವವರಿಗೆ ಕಯ್ ತುಂಬ ನೀಡಲು;

ವಿಪುಲ=ವಿಶಾಲವಾದ/ದೊಡ್ಡದಾದ; ಆಯತಿ+ಅಮ್; ಆಯತಿ=ಶಕ್ತಿ/ಬಲ; ದಿಗಂತ+ಒಳ್; ದಿಗಂತ=ದಿಕ್ಕಿನ ಕೊನೆ; ಪಸರಿಸಲ್+ಉಮ್; ಪಸರಿಸು=ಹರಡು;

ವಿಪುಳ ಆಯತಿಯಮ್ ದಿಗಂತದೊಳ್ ಪಸರಿಸಲುಮ್=ದೊಡ್ಡದಾದ ತಮ್ಮ ಬಲವನ್ನು ದಿಕ್ಕಿನ ಎಲ್ಲೆಡೆಯಲ್ಲಿಯೂ ಹರಡುವಂತೆ ಮಾಡಲು;

ಕರ=ಹೆಚ್ಚಾಗಿ; ನೆಱೆ/ನೆರೆ=ಈಡೇರು/ನಡೆದುಕೊಳ್ಳು; ಈ=ಕೊಡು; ಈಯದೆ=ಕೊಡದೆ;

ಕರಮ್ ನೆಱೆವ ಮಕ್ಕಳನ್ ಈಯದೆ=ಜಗತ್ತಿನಲ್ಲಿ ದೊಡ್ಡದನ್ನು ಮಾಡಿ ತೋರಿಸುವ ಮಕ್ಕಳನ್ನು ಪಡೆಯದೆ;

ನೋಡು=ಆಲೋಚಿಸು/ವಿಚಾರಮಾಡು; ಇಕ್ಷು+ಪುಷ್ಪದ+ವೊಲ್; ಇಕ್ಷು=ಕಬ್ಬು; ಪುಷ್ಪ=ಹೂವು; ಇಕ್ಷುಪುಷ್ಪ=ಸೂಲಂಗಿ; ವೊಲ್=ಅಂತೆ; ಎನ್ನಯ=ನನ್ನ; ನಿಷ್ಫಲ=ಫಲವಿಲ್ಲದ; ಪುಷ್ಪ=ದೊಡ್ಡವಳಾದ ಹೆಣ್ಣಿನ ದೇಹದಲ್ಲಿ ತಿಂಗಳಿಗೊಮ್ಮೆ ಕಂಡು ಬರುವ ಮುಟ್ಟು; ದರ್ಶನ=ಕಾಣಿಸಿಕೊಳ್ಳುವುದು; ಪುಷ್ಪದರ್ಶನ=ಮುಟ್ಟಾಗುವಿಕೆ; ನಾಡೆ=ಹೆಚ್ಚಾಗಿ/ಬಹಳವಾಗಿ; ನೋಯಿಸಿದಪುದು=ನೋವನ್ನು ನೀಡುತ್ತಿದೆ;

ನೋಡೆ ಇಕ್ಷುಪುಷ್ಪದವೊಲ್ ಎನ್ನಯ ನಿಷ್ಫಲ ಪುಷ್ಪದರ್ಶನಮ್ ನಾಡೆ ನೋಯಿಸಿದಪುದು=ಮಕ್ಕಳನ್ನು ಪಡೆಯದೆ ಇರುವ ನನ್ನ ಈಗಿನ ಇರುವಿಕೆಯನ್ನು ಕುರಿತು ಚಿಂತಿಸಿದಾಗ. ಕಬ್ಬಿನ ಹೂವು ಅರಳಿ ನಿಂತರೂ ಅದು ಹೇಗೆ ಯಾರಿಗೂ ಬೇಕಾಗುವುದಿಲ್ಲವೋ ಅಂತೆಯೇ ನನ್ನ ಮುಟ್ಟು ನಿಲ್ಲದೆ ಅಂದರೆ ಬಸಿರಾಗದೆ ಕಾಲ ಉರುಳುತ್ತಿರುವುದು ನನ್ನನ್ನು ಮನಸ್ಸನ್ನು ತುಂಬಾ ನೋಯಿಸುತ್ತಿದೆ;

ಚಿಂತಾ+ಆಕ್ರಾಂತೆ+ಆಗಿ+ಇರ್ದ; ಚಿಂತೆ=ಕಳವಳ/ಸಂಕಟ/ದುಗುಡ; ಆಕ್ರಾಂತ=ಕೂಡಿರುವುದು/ಹಿಡಿದಿರುವುದು; ಇರ್ದ=ಇರುವ; ಏಕಾಂತ+ಒಳ್; ಏಕಾಂತ=ಅವಳು ಒಬ್ಬಳೇ ಇದ್ದಾಗ; ಇಂತು=ಈ ರೀತಿ;

ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯನ್ ಕಂಡು ಪಾಂಡುರಾಜನ್ ಏಕಾಂತದೊಳ್ ಇಂತು ಎಂದನ್=ಮಕ್ಕಳನ್ನು ಹಡೆಯಲಾಗಲಿಲ್ಲವೆಂಬ ಕೊರಗಿನಿಂದ ಸಂಕಟಪಡುತ್ತಿದ್ದ ಕುಂತಿಯನ್ನು ಪಾಂಡುರಾಜನು ಗಮನಿಸಿ, ಅವಳೊಬ್ಬಳೇ ಇದ್ದಾಗ ಈ ರೀತಿ ಹೇಳಿದನು;

ತಳೋದರಿ=ಸುಂದರಿ/ಹೆಂಡತಿ; ಸಂತತಿ=ಮನೆತನ/ಪೀಳಿಗೆ/ವಂಶ; ನೆಟ್ಟನೆ=ಅಂದವಾಗಿ/ಚೆನ್ನಾಗಿ; ಬಾರ್ತೆ+ಅಪ್ಪೊಡೆ; ಬಾರ್ತೆ=ಅಗತ್ಯ/ಅವಶ್ಯ/ಬೇಕೆಬೇಕು; ಅಪ್ಪೊಡೆ=ಆದರೆ; ಇಂತು+ಇರಬೇಡ; ಇಂತು=ಈ ರೀತಿ; ಇಂತಿರಬೇಡ=ಈ ರೀತಿ ಒಬ್ಬಳೇ ಮನದಲ್ಲಿ ಕೊರಗಬೇಡ;

ತಳೋದರೀ , ಚಿಂತೆ ಇದೇನೊ… ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡೆ ಇನ್ನು ಇಂತಿರಬೇಡ=ಸುಂದರಿ, ಇದೇಕೆ ಈ ರೀತಿ ಚಿಂತಿಸುತ್ತಿರುವೆ. ನಮ್ಮ ವಂಶದ ಬೆಳವಣಿಗೆಗೆ ಮಕ್ಕಳು ಬೇಕೆಬೇಕು ಎಂದು ನೀನು ಬಯಸುವುದಾರೆ , ಇನ್ನು ಮುಂದೆ ಈ ರೀತಿ ಕೊರಗಬೇಡ;

ನಿಜ=ತನ್ನ/ಸ್ವಂತದ; ಬಗೆ=ಬಯಕೆ/ಆಸೆ; ತೀರ್=ಪೂರಯಿಸು/ಈಡೇರು/ಕಯ್ಗೂಡು; ತೀರ್ಪಿನಮ್=ಈಡೇರುವವರೆಗೂ; ಅತ್ಯಂತ=ಎಲ್ಲಕ್ಕೂ ಮಿಗಿಲಾದ; ಪತಿವ್ರತಾ+ಗುಣ+ಇನ್; ಪತಿವ್ರತಾಗುಣ=ಹೆಂಡತಿಯಾದವಳು ಗಂಡನಲ್ಲಿರುವ ಅರೆಕೊರೆಗಳೆಲ್ಲವನ್ನೂ ಸಹಿಸಿಕೊಂಡು, ಅವನನ್ನೇ ಹೆಚ್ಚಿನ ಒಲವು ನಲಿವಿನಿಂದ ನಂಬಿ ಬಾಳುವ ನಡೆನುಡಿ; ಇನ್=ಇಂದ; ದಿವ್ಯ=ಉತ್ತಮವಾದುದು; ಮುನಿ+ಪುಂಗವರ್+ಅಮ್; ಮುನಿ=ರಿಸಿ; ಪುಂಗವ=ಒಡೆಯ; ಮುನಿಪುಂಗವರು=ದೊಡ್ಡ ದೊಡ್ಡ ಮುನಿಗಳು; ಅರ್ಚಿಸು=ಪೂಜಿಸಿ/ಸೇವೆ ಮಾಡಿ; ಮೆಚ್ಚಿಸು=ಒಲಿಸಿಕೊಳ್ಳುವುದು;

ನಿಜ ಬಗೆ ತೀರ್ಪಿನಮ್ ಅತ್ಯಂತ ಪತಿವ್ರತಾಗುಣದಿನ್ ದಿವ್ಯ ಮುನಿಪುಂಗವರಮ್ ನೀನ್ ಅರ್ಚಿಸಿ ಮೆಚ್ಚಿಸು=ಮಕ್ಕಳನ್ನು ಪಡೆಯಬೇಕೆಂಬ ನಿನ್ನ ಬಯಕೆಯು ಈಡೇರುವವರೆಗೂ ನಿನ್ನಲ್ಲಿರುವ ಪತಿವ್ರತಾಗುಣದಿಂದ ದೊಡ್ಡ ದೊಡ್ಡ ಮುನಿಗಳ ಸೇವೆಯನ್ನು ಮಾಡುತ್ತ, ಅವರನ್ನು ಒಲಿಸಿಕೊ;

ದಿಗಂತ=ದಿಕ್ಕಿನ ಕೊನೆ; ವಿಶ್ರಾಂತ=ನೆಲೆ; ಯಶರ್+ಕಳ್+ಅಮ್; ಯಶ=ಕೀರ‍್ತಿ; ಯಶರ್=ಕೀರ‍್ತಿವಂತರು; ಕಳ್=ಗಳು; ವರ=ಒಳ್ಳೆಯವರಾದ; ತನೂಭವರ್+ಅನ್; ತನೂಭವ=ಮಗ;

ದಿಗಂತ ವಿಶ್ರಾಂತ ಯಶರ್ಕಳಮ್ ವರ ತನೂಭವರನ್ ನೀನ್ ಪಡೆ= ದಿಕ್ಕಿನ ಕೊನೆಯವರೆಗೂ ಹಬ್ಬುವಂತಹ ಅಂದರೆ ಜಗತ್ತಿನಲ್ಲಿಯೇ ಕೀರ‍್ತಿವಂತರಾದ ಒಳ್ಳೆಯ ಮಕ್ಕಳನ್ನು ನೀನು ಪಡೆಯುವಂತವಳಾಗು;

ಎನ್ನ=ನನ್ನ; ಕನ್ನಿಕೆ=ಹದಿಹರೆಯದ ಪ್ರಾಯದ ಹೆಣ್ಣು/ಕುಮಾರಿ; ಬಳೆ+ಅಂದು; ಬಳೆ=ಬೆಳೆ; ಅಂದು=ಆಗ; ಬಳೆವಂದು=ಬೆಳೆಯುವಾಗ;

ಎನ್ನ ಕನ್ನಿಕೆಯಾ ಕಾಲದೊಳ್ ನಾನ್ ಎನ್ನ ಮಾವನ್ ಕೊಂತಿಭೋಜನ ಮನೆಯೊಳ್ ಬಳೆವಂದು=ನನ್ನ ಪ್ರಾಯದ ಕಾಲದಲ್ಲಿ ನನ್ನ ಮಾವನಾದ ಕುಂತಿಬೋಜನ ಮನೆಯಲ್ಲಿ ನಾನು ಬೆಳೆಯುತ್ತಿದ್ದಾಗ;

ಮಹಾಮುನಿ+ಅರ್; ಮಹಾಮುನಿ=ದೊಡ್ಡ ರಿಸಿ; ಎಮ್ಮ=ನಮ್ಮ; ನಿಚ್ಚ+ಕ್ಕೆ+ಅಮ್; ನಿಚ್ಚ=ಪ್ರತಿನಿತ್ಯ/ಯಾವಾಗಲೂ; ಬರ್ಪರ್=ಬರುತ್ತಿದ್ದರು;

ದುರ್ವಾಸ ಮಹಾಮುನಿಯರ್ ಎಮ್ಮ ಮನೆಗೆ ನಿಚ್ಚಕ್ಕಮ್ ಬರ್ಪರ್=ದೊಡ್ಡ ಮುನಿಗಳಾದ ದುರ‍್ವಾಸರು ಪ್ರತಿನಿತ್ಯವೂ ನಮ್ಮ ಮನೆಗೆ ಬರುತ್ತಿದ್ದರು;

ವಿನಯ+ಕ್ಕೆ+ಅಮ್; ವಿನಯ=ಗುರುಹಿರಿಯರನ್ನು ಒಲವು ನಲಿವುಗಳಿಂದ ಕಾಣುವ ಮತ್ತು ಉಪಚರಿಸುವ ಗುಣ; ಭಕ್ತಿ+ಗೆ+ಅಮ್; ಭಕ್ತಿ=ದೇವರಲ್ಲಿ ಮತ್ತು ಗುರುಹಿರಿಯರಲ್ಲಿ ಇಟ್ಟಿರುವ ನಂಬಿಕೆ; ಬೆಸಕೆಯ್=ಹೇಳಿದ ಕೆಲಸವನ್ನು ಮಾಡು; ಬೆಸಕೆಯ್ವುದರ್ಕಮ್=ನನಗೆ ವಹಿಸಿದ್ದ ಕೆಲಸವನ್ನು ಮಾಡುತ್ತಿರುವುದಕ್ಕೆ; ಮೆಚ್ಚಿ=ನೋಡಿ ಆನಂದಗೊಂಡು;

ಅವರ್ ಎನ್ನ ವಿನಯಕ್ಕಮ್ ಭಕ್ತಿಗಮ್ ಬೆಸಕೆಯ್ವುದರ್ಕಮ್ ಮೆಚ್ಚಿ=ದುರ‍್ವಾಸ ಮುನಿಗಳಿಗೆ ನಾನು ವಿನಯ ಮತ್ತು ಆದರದಿಂದ ಮಾಡುತ್ತಿದ್ದ ಸೇವೆಯನ್ನು ಕಂಡು ಮೆಚ್ಚಿದವರಾಗಿ;

ಮಂತ್ರ+ಅಕ್ಷರಮ್+ಗಳ್+ಅನ್; ಮಂತ್ರ=ವ್ಯಕ್ತಿಯು ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ದೇವತೆಯ ಮಹಿಮೆಯನ್ನು ಕೊಂಡಾಡುವಾಗ ಉಚ್ಚರಿಸುವಂತಹ ನುಡಿ; ಅಕ್ಷರ=ಉಚ್ಚಾರಣೆಯ ದನಿ ಮತ್ತು ಬರಹದ ಲಿಪಿ; ಅನ್=ಅನ್ನು; ವರ+ಇತ್ತರ್; ವರ=ಕೊಡುಗೆ; ಇತ್ತರ್=ನೀಡಿದರು;

ಮಂತ್ರಾಕ್ಷರಂಗಳನ್ ಅಯ್ದಮ್ ವರವಿತ್ತರ್=ಐದು ಮಂತ್ರಾಕ್ಶರಗಳನ್ನು ವರವಾಗಿ ನೀಡಿದರು;

ಬಗೆ=ಮನಸ್ಸು/ಬಯಕೆ; ಆಹ್ವಾನ=ಕರೆಯುವಿಕೆ; ಗೆಯ್=ಮಾಡು;

ಈ ಅಯ್ದು ಮಂತ್ರಕೆ ನಿನ್ನ ಬಗೆಗೆ ಬಂದವರನ್ ಆಹ್ವಾನಮ್ ಗೆಯ್ಯಲ್=ಈ ಅಯ್ದು ಮಂತ್ರಗಳಿಂದ ನಿನ್ನ ಮನಸ್ಸಿಗೆ ಬಂದವರನ್ನು ಕರೆದರೆ;

ಪೋಲ್ವೆಯ=ಹೋಲಿಕೆಯ; ಅಯ್ವರ್=ಐದು ಮಂದಿ; ಬೆಸಸು=ಅಪ್ಪಣೆ ಮಾಡು/ಆದೇಶ ನೀಡು;

ಅವರ ಪೋಲ್ವೆಯ ಅಯ್ವರ್ ಮಕ್ಕಳನ್ ಪಡೆವೆ ಎಂದು ಬೆಸಸಿದೊಡೆ=ಅವರನ್ನೇ ಹೋಲುವ ಅಯ್ದು ಮಕ್ಕಳನ್ನು ಪಡೆಯುತ್ತೀಯೆ ಎಂದು ಆದೇಶ ನೀಡಿದರು;

ಪುಣ್ಯ=ವ್ಯಕ್ತಿಯು ಮಾಡುವ ಒಳ್ಳೆಯ ಕೆಲಸಗಳಿಂದ ಜೀವನದಲ್ಲಿ ದೊರೆಯುವ ನಲಿವು ನೆಮ್ಮದಿ; ಒಳ್ಳಿತ್ತು=ಒಳ್ಳೆಯದು; ದೊರೆ=ಸಿಗು/ಕಾಣು/ತೋರು; ದೊರೆಕೊಳ್=ಸಿಗುವುದು/ಈಡೇರುವುದು;

ಈಗಳ್ ಎನ್ನ ಪುಣ್ಯದಿನ್ ಒಳ್ಳಿತ್ತು ದೊರೆಕೊಂಡುದು=ಮುನಿಗಳ ಸೇವೆಯನ್ನು ಮಾಡಿ ಆಗ ನಾನು ಪಡೆದಿದ್ದ ಪುಣ್ಯದಿಂದ ಈಗ ನನಗೆ ಒಳ್ಳೆಯದು ದೊರಕುವಂತಾಯಿತು;

ಅದರ್ಕೆ=ಅದಕ್ಕಾಗಿ; ಏನುಮ್=ಯಾವುದನ್ನು; ಚಿಂತಿಸಲ್+ಬೇಡ;

ಅದರ್ಕೆ ಏನುಮ್ ಚಿಂತಿಸಲ್ವೇಡ=ಮಕ್ಕಳಿಲ್ಲವೆಂಬ ಕಾರಣಕ್ಕಾಗಿ ಇನ್ನು ಮುಂದೆ ಚಿಂತಿಸಬೇಡ;

ವಾಕ್ಯ=ನುಡಿ/ಮಾತು; ಅಮೋಘ=ತುಂಬಾ ಬೆಲೆಯುಳ್ಳ/ಅತಿಶಯವಾದ; ಅಕ್ಕುಮ್=ಆಗಿವೆ;

ದಿವ್ಯ ಮುನಿ ವಾಕ್ಯಮ್ ಅಮೋಘ ವಾಕ್ಯಮ್ ಅಕ್ಕುಮ್=ದಿವ್ಯ ಮುನಿಯ ನುಡಿಗಳು ತುಂಬಾ ಬೆಲೆಯುಳ್ಳ ನುಡಿಗಳಾಗಿವೆ. ಅವರು ಹೇಳಿದಂತೆಯೇ ನೀನು ಮಂತ್ರಗಳನ್ನು ಉಚ್ಚರಿಸಿ ಮಕ್ಕಳನ್ನು ಪಡೆಯಬೇಕೆಂಬ ನಿನ್ನ ಬಯಕೆಯನ್ನು ಈಡೇರಿಸಿಕೊ;

ಅಂತೆ=ಹಾಗೇಯೇ ; ಗೆಯ್=ಮಾಡು;

ಅಂತೆ ಗೆಯ್ವೆನ್ ಎಂದು=ಮುನಿಗಳು ಹೇಳಿದಂತೆಯೇ ಮಾಡುತ್ತೇನೆ ಎಂದು ಪಾಂಡುರಾಜನಿಗೆ ಹೇಳಿ;

ಸರೋಜ+ಆನನೆ; ಸರೋಜ=ತಾವರೆಯ ಹೂವು; ಆನನ=ಮೊಗ; ಸರೋಜಾನನೆ=ತಾವರೆಮೊಗದವಳು/ಸುಂದರಿ; ತೀರ್ಥ+ಜಲಮ್+ಗಳ್; ತೀರ್ಥ=ದೇವರನ್ನು ಪೂಜಿಸದ ನಂತರ ಪೂಜಾರಿಯು ಜನರಿಗೆ ನೀಡುವ ನೀರು. ಇದನ್ನು ಕುಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯ ಜನಮನದಲ್ಲಿದೆ/ದೇವಾಲಯಗಳು ಇರುವ ಪವಿತ್ರವಾದ ಜಾಗ; ತೀರ್ಥಜಲ=ದೇಗುಲಗಳ ಬಳಿ ಹರಿಯುವ ನದಿ ತೊರೆ ಹೊಳೆಗಳು. ಇಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ; ಮೀ=ಸ್ನಾನ ಮಾಡು; ಮಿಂದು=ಸ್ನಾನ ಮಾಡಿ; ದಳಿಂಬ+ಅನ್; ದಳಿಂಬ=ಮಡಿಯಾದ ಬಟ್ಟೆ; ತೊಡಿಗೆ+ಗಳ್+ಅನ್; ತೊಡಿಗೆ=ಒಡವೆ ; ದರ್ಭ+ಶಯನ+ಒಳ್; ದರ್ಭ=ಒಂದು ಬಗೆಯ ಹುಲ್ಲು; ಶಯನ=ಮೆತ್ತೆ/ಮಂಚ; ಇರ್ದು=ಇದ್ದು;

ಸರೋಜಾನನೆ ತೀರ್ಥಜಲಂಗಳಮ್ ಮಿಂದು ದಳಿಂಬವನ್ ಉಟ್ಟು ಮುತ್ತಿನ ತೊಡಿಗೆಗಳನ್ ತೊಟ್ಟು ದರ್ಭಶಯನದೊಳ್ ಇರ್ದು=ಸುಂದರಿಯಾದ ಕುಂತಿಯು ತಾನು ಪವಿತ್ರವೆಂದು ನಂಬಿರುವ ನದಿ ತೊರೆ ಹೊಳೆಗಳಲ್ಲಿ ಸ್ನಾನವನ್ನು ಮಾಡಿ, ಮಡಿ ಬಟ್ಟೆಯನ್ನುಟ್ಟು, ಮುತ್ತಿನ ಒಡವೆಗಳನ್ನು ತೊಟ್ಟು ಹುಲ್ಲಿನ ಮೆತ್ತೆಯ ಮೇಲೆ ಕುಳಿತುಕೊಂಡು;

ಸಂತಾನಮ್+ಅನ್; ಮಂತ್ರ ಸಂತಾನ=ದುರ‍್ವಾಸ ಮುನಿಯು ಕುಂತಿಯು ಮಕ್ಕಳನ್ನು ಪಡೆಯುವುದಕ್ಕಾಗಿ ಹೇಳಿಕೊಟ್ಟಿರುವ ಮಂತ್ರ; ಜ್ಞಾನ+ಇನ್; ಜ್ಞಾನ=ಎಚ್ಚರ; ಇರ್ದು=ಇದ್ದು; ನಿಟ್ಟಿಸು=ಎದುರು ನೋಡು;

ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮನ್ ಓದಿ ಓದಿ ಜ್ಞಾನದಿನ್ ಇರ್ದು ನಿಟ್ಟಿಪೊಡೆ=ಮಕ್ಕಳನ್ನು ಪಡೆಯಲೆಂದು ದುರ‍್ವಾಸ ಮುನಿಯು ಹೇಳಿಕೊಟ್ಟಿರುವ ಮಂತ್ರದಲ್ಲಿನ ದೇವತೆಯನ್ನು ಹೆಸರನ್ನು ಮತ್ತೆ ಮತ್ತೆ ಉಚ್ಚರಿಸಿ ಕರೆಯುತ್ತ ಎಚ್ಚರದಿಂದ ಕೂಡಿದವಳಾಗಿ ದೇವತೆಯ ಆಗಮನವನ್ನು ಎದುರುನೋಡುತ್ತಿರಲು;

ಯಮರಾಜನ್+ಅನ್; ಯಮರಾಜ=ಒಬ್ಬ ದೇವತೆ. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯ ಆಯುಸ್ಸು ತುಂಬಿದ ಕೂಡಲೇ ಆ ಜೀವಿಯ ಪ್ರಾಣವನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವಂತಹ ಸಾವಿನ ದೇವತೆಯನ್ನು ಯಮನೆಂದು ಜನಸಮುದಾಯ ಕಲ್ಪಿಸಿಕೊಂಡಿದೆ; ಯಾವುದೇ ಜೀವಿಯ ಬಗ್ಗೆ ಒಲವನ್ನು ತೋರಿಸದೆ, ಎಲ್ಲಾ ಜೀವಿಗಳನ್ನು ಒಂದೇ ಸಮನಾಗಿ ಕಾಣುವಂತಹ ‘ದರ‍್ಮದೇವತೆ ‘ ಎಂಬ ಬಿರುದು ಯಮನಿಗೆ ಇದೆ; ಅದ್ಭುತ=ಅಚ್ಚರಿಯನ್ನುಂಟುಮಾಡುವ; ತೇಜ=ಕಾಂತಿ/ಶಕ್ತಿ; ತೇಜನ್=ಶಕ್ತಿಯುಳ್ಳವನು/ಕಾಂತಿಯುಳ್ಳವನು; ಜಾನ+ಇಮ್; ಜಾನ=ದೇವತೆಯ ನಾಮಸ್ಮರಣೆ; ಬರಿಸೆ=ಕರೆಸಲು;

ಯಮರಾಜನನ್ ಅದ್ಭುತ ತೇಜನನ್ ಜಾನದಿಮ್ ಬರಿಸೆ=ಕುಂತಿಯು ಯಮರಾಜನ ನಾಮಸ್ಮರಣೆಯನ್ನು ಮಾಡುತ್ತ, ಆತನನ್ನು ಬರಮಾಡಿಕೊಳ್ಳಲು;

ಆತ್ಮ+ಅನುಗತ+ಅರ್ಥಮ್; ಆತ್ಮ=ಮನಸ್ಸು; ಅನುಗತ=ಹೊಂದಿರುವ; ಅರ್ಥ=ಬೇಡಿಕೆ/ಉದ್ದೇಶ/ಕೋರಿಕೆ; ಬೆಸ=ಕೆಲಸ/ಕಾರ‍್ಯ; ಆವುದು=ಯಾವುದು;

ಯಮನ್ ಬಂದು ಆತ್ಮಾನುಗತಾರ್ಥಮ್ ಬೆಸನ್ ಆವುದು=ಯಮನು ಕುಂತಿಯ ಬಳಿಗೆ ಬಂದು ನಿನ್ನ ಮನಸ್ಸಿನಲ್ಲಿರುವ ಬೇಡಿಕೆಯು ಯಾವುದು?…ನನ್ನಿಂದ ಆಗಬೇಕಾದ ಕಾರ‍್ಯವೇನು ಎಂದು ಕೇಳಲು;

ನಿನ್ನನೆ=ನಿನ್ನನ್ನೇ; ಪೋಲ್ವ=ಹೋಲುವ; ಪುತ್ರನ್+ಅನ್; ಪುತ್ರ=ಮಗ; ಎನಗೆ=ನನಗೆ; ಈ=ಕೊಡು; ಈವುದು=ಕೊಡುವುದು;

ನಿನ್ನನೆ ಪೋಲ್ವ ಪುತ್ರನನ್ ಎನಗೆ ಈವುದು=ನಿನ್ನನ್ನೇ ಹೋಲುವ ಮಗನನ್ನು ನನಗೆ ಕೊಡು;

ತಥಾಸ್ತು=ಹಾಗೆಯೇ ಆಗಲಿ; ಭಟ್ಟಾರಕ=ರಾಜ,ಗುರು,ಹಿರಿಯರ ಹೆಸರುಗಳ ಕೊನೆಯಲ್ಲಿ ಒಲವು ನಲಿವು ಆದರ ಸೂಚಕವಾಗಿ ಸೇರುವ ಪದ; ಅಂಶಮ್+ಅನ್; ಅಂಶ=ತನ್ನ ತೇಜಸ್ಸಿನ ಭಾಗವನ್ನು; ಗರ್ಭ+ಒಳ್; ಗರ್ಭ=ಬಸಿರು; ಅವತರಿಸಿ=ಇಳಿಯಬಿಟ್ಟು; ಅಂತರ್ಧಾನ=ಮಾಯವಾಗುವುದು; ಸಲ್=ಹೋಗು; ಸಂದನ್=ಹೋದನು;

ತಥಾಸ್ತು ಎಂದು ಯಮಭಟ್ಟಾರಕನ್ ತನ್ನ ಅಂಶಮನ್ ಆಕೆಯ ಗರ್ಭದೊಳ್ ಅವತರಿಸಿ ಅಂತರ್ಧಾನಕ್ಕೆ ಸಂದನ್= “ನಿನ್ನ ಕೋರಿಕೆಯು ಈಡೇರಲಿ” ಎಂದು ಯಮನು ಒಪ್ಪಿಕೊಂಡು, ತನ್ನ ಅಂಶವನ್ನು ಆಕೆಯ ಬಸಿರಿನಲ್ಲಿ ಇಳಿಸಿ ಇಳೆಯಿಂದ ಮರೆಯಾದನು. ಅಂದರೆ ದೇವಲೋಕಕ್ಕೆ ತೆರಳಿದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: