ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 14ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – ದುರ್ಯೋಧನನು ವೈಶಂಪಾಯನ ಸರೋವರವನ್ನು ಹೊಕ್ಕಿದ್ದು ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಷ್ಮ ವಚನಮ್’ ಎಂಬ ಹೆಸರಿನ 6 ನೆಯ ಅದ್ಯಾಯದ 19 ನೆಯ ಪದ್ಯದಿಂದ 24 ನೆಯ ಗದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ರಾಜ್ಯಲಕ್ಷ್ಮಿ: ದುರ್‍ಯೋದನನ ರಾಜ್ಯಾಧಿಕಾರ ಮತ್ತು ಸಂಪತ್ತಿನ ದೇವತೆ. ರಾಜನಾದವನ ಬಳಿಯಲ್ಲಿ ಲಕ್ಶ್ಮಿ ಎಂಬ ಹೆಸರಿನ ದೇವತೆಯು ನೆಲೆಸಿರುತ್ತಾಳೆ ಎಂಬ ನಂಬಿಕೆಯು ಜನಮನದಲ್ಲಿದೆ.
ಹಕ್ಕಿಗಳು: ವೈಶಂಪಾಯನ ಸರೋವರದ ದಡದ ಮರಗಿಡಬಳ್ಳಿಗಳಲ್ಲಿ ನೆಲೆಸಿದ್ದ ಹಕ್ಕಿಗಳು.

ದುರ್ಯೋಧನನು ವೈಶಂಪಾಯನ ಸರೋವರವನ್ನು ಹೊಕ್ಕಿದ್ದು

ಕುರುಕುಲ ಪಿತಾಮಹನನ್ ಬೀಳ್ಕೊಂಡು… ನಿಜಭುಜ ಗದಾ ಸಹಾಯನುಮ್ ಆಗಿ, ಸಂಗ್ರಾಮ ಭೂಮಿಯೊಳಗನೆ ಬರುತ್ತುಮ್… ತನ್ನ ಅಂತರ್ಗತದೊಳ್…)

ದುರ್ಯೋಧನ: ದಿನಕರತನಯನ… ದುಶ್ಶಾಸನನ ವಿಯೋಗದೊಳಮ್ ಇಂದುವರೆಗಮ್ ಎನಗೆ ನೋವಿಲ್ಲ… ಅಹಿತರೊಡನೆ ಸಂಧಿಗುಡು ಎನೆ ಸ್ವಜನ ಗುರುಜನ ಅಭ್ಯರ್ಥನೆಯಿಮ್ ನೊಂದೆನ್… ಅರಿಯರ್ ಪಾಂಡವರ್, ಅವರೊಳ್ ವಿರೋಧಮಮ್ ಬಿಸುಟು ಸಂಧಿಯಮ್ ಮಾಡುವುದು ಎಂಬರ ನುಡಿಯಮ್ ಕೇಳಲ್ಕೆ ಎಂದು ಎರಡುಮ್ ಕಿವಿಗಳುಮನ್ ಎನಗೆ ಬಿದಿ ಮಾಡಿದನೇ.

(ಎನುತುಮ್ ತತ್ ಸರೋವರದ ಸಮೀಪಮಮ್ ಕುರುಕುಲಪ್ರದೀಪನ್ ಎಯ್ದೆ ವಂದಾಗಳ್… ಒಂದೆರಡು ಮತ್ತರಂತರದಿಂದಮ್ ಪೊರಮಟ್ಟ ಪಜ್ಜೆಯಿಮ್ ಸಲೆ ಕೊಳನಮ್ ಪಿಂದುಪೆರಗಾಗಿ ಪುಗೆ…)

ರಾಜ್ಯಲಕ್ಷ್ಮಿ: ಚಿಃ

(ಎಂದು ಪೇಸಿ… ರಾಜ್ಯಲಕ್ಷ್ಮಿ ಅವನನ್ ಬಿಸುಟ್ಟಳ್. ತುರುವಮ್ ಕಳಿಸುವ… ಕೃಷ್ಣೆಯ ನಿರಿಯಮ್ ಪಿಡಿದು ಉರ್ಚವೇಳ್ವ… ಕೊಳನಮ್ ಪಿಂದುಮ್ ಪೆರಗಾಗಿ ಪುಗುವ ದುರ್ನಯಮ್ ಅರಿಪವೆ… ಕೌರವನ ರಾಜ್ಯದ ಆಯದ ಕುಂದನ್… ಅಂತು ಸರೋವರಮನ್ ಎಯ್ದೆವಂದಾಗಳ್… ಗಗನಮ್ಬಿ ಳ್ದುದೊ… ಮೇಣ್… ನೆಲಕ್ಕೆ ನೆಲನೇನ್ ಪತ್ತಿತ್ತೊ… ಮೇಣ್… ಇಲ್ಲಿ ಪನ್ನಗ ವೃಂದಾರಕರ್ ಎಂದುಮ್ ಇರ್ಪ ಬಿಲನೋ… ಮೇಣ್… ಅಷ್ಟ ದಿಗ್ನಾಗರಾಜಿಗೆ ಮೆಯ್ಗರ್ಚಿಕೊಳಲ್ಕೆ ಅಜನ್ ಸಮೆದ ತೋಯೋದ್ದೇಶಮೋ… ಸಂದೆಯಮ್ ಬಗೆಗೆ ಆದತ್ತು ಎನಿಸಿರ್ದುದು… ಏನ್ ಪಿರಿದೊ ವೈಶಂಪಾಯನ ಅಬ್ಜಾಕರಮ್… ಅಂತು ಗಂಭೀರ ನೀರಾಕರಮ್ ಇರ್ಪಂತಿರ್ದ ಕಮಲಾಕರಮ್ ನೋಳ್ಪಿನಮ್ ಅಲ್ಲಿ…)

ಹಕ್ಕಿಗಳು: ಕುರುಪತಿ, ನಿನ್ನ ಪೊಕ್ಕ ತೊರೆಗಳ್ ಮೊದಲಾಗಿರೆ ಬತ್ತಿದಪ್ಪುವು … ಈ ದೊರೆಯ ದುರಾತ್ಮನನ್ … ಖಳನನ್ ಆನ್ ಒಳಕೊಂಡೊಡೆ… ಭೀಮನ್ ಈ ಸರೋವರಮುಮನ್ ಎಮ್ಮುಮಮ್ ಕದಡುಗುಮ್ … ಪುಗದಿರ್ ತೊಲಗು.

(ಎಂದು ಬಗ್ಗಿಪಂತಿರೆ ಅನೇಕ ಬಕ ಕೋಕ ಮರಾಳವಿಹಂಗಮಸ್ವನಮ್ ನೆಗೆದತ್ತು… ಆಗಳ್ ಕುರುಕುಳ ಸರೋರಾಜ ಹಂಸನ್ ಮುನ್ನಮ್ತ ನ್ನ ಮೆಯ್ಯೊಳ್ ಕೆನ್ನೈಸಿದ ಕೆನ್ನೆತ್ತರಮ್ ಕರ್ಚಿ ಕಳೆದು… ಕರಚರಣ ವದನ ಪ್ರಕ್ಷಾಳನಮ್ ಗೆಯ್ದು… ಮುಕ್ಕುಳಿಸಿ ಉಗುಳ್ದು… ಆಚಮನ ಕ್ರಿಯೆಗಳಮ್ ಮಾಡಿ… ಜಲದೇವತಾ ನಮಸ್ಕಾರಮ್ ಗೆಯ್ದು… ಜಲಮಂತ್ರೋಪದೇಶದಿಮ್ ಜಲಜಾಕರಮನ್ಅ ಭಿಮಂತ್ರಿಸಿ ಜಲನಿಲಯನಾಗಿ… ಪರಮಯೋಗಿಯವೋಲ್ ಮಂತ್ರಪದಾಕ್ಷರಂಗಳಮ್ಮಿ ನುಗುತುಮ್ ಇರ್ದನ್.)

ಪದ ವಿಂಗಡಣೆ ಮತ್ತು ತಿರುಳು: ದುರ‍್ಯೋದನನು ವೈಶಂಪಾಯನ ಸರೋವರವನ್ನು ಹೊಕ್ಕಿದ್ದು

ಕುರುಕುಲ ಪಿತಾಮಹನನ್ ಬೀಳ್ಕೊಂಡು=ಕುರುಕುಲ ಪಿತಾಮಹನಾದ ಬೀಶ್ಮನನ್ನು ಬೀಳ್ಕೊಂಡು; ನಿಜ=ತನ್ನ;

ನಿಜಭುಜ ಗದಾಸಹಾಯನುಮ್ ಆಗಿ ಸಂಗ್ರಾಮ ಭೂಮಿಯೊಳಗನೆ ಬರುತ್ತುಮ್=ತನ್ನ ಬಾಹುಬಲ ಮತ್ತು ಗದೆಯ ಶಕ್ತಿಯನ್ನೇ ಅವಲಂಬಿಸಿದವನಾಗಿ ರಣರಂಗದಲ್ಲಿ ಬರುತ್ತ;

ತನ್ನ ಅಂತರ್ಗತದೊಳ್=ದುರ್‍ಯೋದನನು ತನ್ನ ಮನದಲ್ಲಿ ಈ ರೀತಿ ಚಿಂತಿಸತೊಡಗಿದನು;

ದಿನಕರ=ಸೂರ್‍ಯ; ದಿನಕರತನಯ=ಸೂರ್‍ಯನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದ ಮಗ ಕರ್‍ಣ;

ಅಹಿತರ್=ಹಗೆಗಳು/ಶತ್ರುಗಳು; ಸಂಧಿ+ಕುಡು; ಕುಡು=ಒಪ್ಪಿಸು/ಅನುಮತಿ ಕೊಡು; ಎನೆ=ಎನ್ನಲು; ಸ್ವಜನ=ಹೆತ್ತ ತಂದೆತಾಯಿ; ಅಭ್ಯರ್ಥನೆ=ಕೋರಿಕೆ/ಬೇಡಿಕೆ;

 ದಿನಕರತನಯನ ದುಶ್ಶಾಸನನ ವಿಯೋಗದೊಳಮ್ ಇಂದುವರೆಗಮ್ ಎನಗೆ ನೋವಿಲ್ಲ… ಅಹಿತರೊಡನೆ ಸಂಧಿಗುಡು ಎನೆ ಸ್ವಜನ ಗುರುಜನ ಅಭ್ಯರ್ಥನೆಯಿಮ್ ನೊಂದೆನ್=ಜೀವದ ಗೆಳೆಯನಾದ ಕರ್‍ಣ ಮತ್ತು ಒಡಹುಟ್ಟಿದ ದುಶ್ಶಾಸನನ ಅಗಲಿಕೆಯಿಂದಲೂ ಇದುವರೆಗೂ ನನಗೆ ಇಶ್ಟೊಂದು ನೋವಾಗಿರಲಿಲ್ಲ… “ಹಗೆಗಳಾದ ಪಾಂಡವರೊಡನೆ ಸಂದಿಗೆ ಒಪ್ಪಿಕೊಳ್ಳುವುದು” ಎಂದು ನನ್ನ ತಂದೆತಾಯಿ ಮತ್ತು ಬೀಶ್ಮ ಮುಂತಾದ ಗುರುಹಿರಿಯರು ಹೇಳುತ್ತಿರುವ ಮಾತುಗಳನ್ನು ಕೇಳಿಕೇಳಿ ಅಪಾರವಾದ ಸಂಕಟವಾಗುತ್ತಿದೆ;

ಅರಿ=ಶತ್ರು/ಹಗೆ;

ಅರಿಯರ್ ಪಾಂಡವರ್=ಪಾಂಡವರು ಹುಟ್ಟಿನಿಂದಲೇ ನನಗೆ ಹಗೆಗಳು;

ಅವರೊಳ್ ವಿರೋಧಮಮ್ ಬಿಸುಟು=ದಾಯಾದಿಗಳಾದ ಪಾಂಡವರನ್ನು ಎದುರುಹಾಕಿಕೊಳ್ಳದೆ ಇಲ್ಲವೇ ಅವರೊಡನೆ ಯುದ್ದವನ್ನು ಮಾಡದೆ; ವಿದಿ=ಬ್ರಹ್ಮ. ಪ್ರತಿಯೊಂದು ಜೀವಿಯ ಹುಟ್ಟಿಗೆ ಕಾರಣನಾಗಿರುವ ಬ್ರಹ್ಮ ದೇವನು ಜೀವಿಯ ಬದುಕಿನಲ್ಲಿ ಉಂಟಾಗುವ ಒಳಿತು ಕೆಡುಕೆಗಳನ್ನು ಮೊದಲೇ ನಿಶ್ಚಯಿಸಿರುತ್ತಾನೆ. ಅದರಂತೆಯೇ ಎಲ್ಲವೂ ನಡೆಯುವುದು ಎಂಬ ನಂಬಿಕೆಯು ಜನಮನದಲ್ಲಿದೆ;

ಸಂಧಿಯಮ್ ಮಾಡುವುದು ಎಂಬರ ನುಡಿಯಮ್ ಕೇಳಲ್ಕೆ ಎಂದು ಎರಡುಮ್ ಕಿವಿಗಳುಮನ್ ಎನಗೆ ಬಿದಿ ಮಾಡಿದನೇ ಎನುತಮ್=ಸಂದಿಯನ್ನು ಮಾಡಿಕೊಳ್ಳುವುದು ಎನ್ನುವವರ ಮಾತುಗಳನ್ನು ಕೇಳುವುದಕ್ಕೆಂದೇ ಆ ಬ್ರಹ್ಮದೇವನು ಈ ನನ್ನ ಎರಡು ಕಿವಿಗಳನ್ನು ಮಾಡಿದನೇ ಎಂದು ಸಂಕಟಪಡುತ್ತ;

ಎಯ್ದು=ಬರು/ಸೇರು; ಪ್ರದೀಪ=ದೀವಿಗೆ/ದೀಪ; ಕುರುಕುಲಪ್ರದೀಪ=ಕುರುಕುಲವನ್ನು ಬೆಳಗುವವನು/ದುರ್‍ಯೋದನ;

ತತ್ ಸರೋವರದ ಸಮೀಪಮಮ್ ಕುರುಕುಲಪ್ರದೀಪನ್ ಎಯ್ದೆ ವಂದಾಗಳ್=ವೈಶಂಪಾಯನ ಸರೋವರದ ಬಳಿಗೆ ದುರ್‍ಯೋದನನು ಬಂದು ಸೇರಲು;

ಮತ್ತರ್+ಅಂತರದ+ಇಂದಮ್; ಮತ್ತರ=ಬೂಮಿಯನ್ನು ಅಳೆಯುವ ಒಂದು ಮಾಪನ/ ಒಂದು ಅಳತೆ. ಉದಾ: ಕೆಲವು ಅಡಿಗಳು ಇಲ್ಲವೇ ಕೆಲವು ಗಜಗಳು; ಪೊರಮಟ್ಟ=ಹೊರಕ್ಕೆ ಬಂದ; ಪಜ್ಜೆ=ಹಜ್ಜೆ; ಸಲೆ=ಸರಿಯಾಗಿ/ತಕ್ಕಂತೆ; ಪಿಂದು=ಹಿಂಬದಿ; ಪೆರಗು=ಹಿಂದುಗಡೆ; ಪಿಂದುಪೆರಗು=ಹಿಮ್ಮುಕ/ಹಿಂದೆ ಸರಿಯುವಿಕೆ; ಪುಗು=ಪ್ರವೇಶಿಸು/ಒಳಹೊಗು;

ಒಂದೆರಡು ಮತ್ತರಂತರದಿಂದಮ್ ಪೊರಮಟ್ಟ ಪಜ್ಜೆಯಿಮ್ ಸಲೆ ಕೊಳನಮ್ ಪಿಂದುಪೆರಗಾಗಿ ಪುಗೆ=ದುರ್‍ಯೋದನನು ಸರೋವರದಿಂದ ಒಂದೆರಡು ಮತ್ತರಗಳಶ್ಟು ದೂರದಲ್ಲಿಯೇ ನಿಂತು, ಅನಂತರ ಹಿಂದುಹಿಂದಾಗಿ ಹೆಜ್ಜೆಗಳನ್ನಿಡುತ್ತ, ಹಿಮ್ಮುಕನಾಗಿ ಕೊಳವನ್ನು ಪ್ರವೇಶಿಸಿದನು; ಹಿಮ್ಮುಕನಾಗಿ ಕೊಳವನ್ನು ಹೊಕ್ಕ ಉದ್ದೇಶವೇನೆಂದರೆ ಕೊಳದ ದಡದಲ್ಲಿರುವ ಹಸಿ ಮಣ್ಣಿನ ಮೇಲೆ ಇಲ್ಲವೇ ಮರಳಿನ ಮೇಲೆ ಬೀಳುವ ಹೆಜ್ಜೆ ಗುರುತುಗಳಿಂದ ಕೊಳದಿಂದ ಯಾರೋ ಒಬ್ಬ ವ್ಯಕ್ತಿ ಹೊರಗೆ ಹೋಗಿದ್ದಾನೆ ಎಂಬುದು ಮಾತ್ರ ಗೋಚರಿಸುವಂತಿರಬೇಕು; ತಾನು ಕೊಳದೊಳಗೆ ಅಡಗಿ ಕುಳಿತಿರುವುದು ಯಾರಿಗೂ ತಿಳಿಯಬಾರದು ಎಂಬುದಾಗಿತ್ತು;

ರಾಜ್ಯಲಕ್ಷ್ಮಿ=ರಾಜನ ಅದಿಕಾರ ಮತ್ತು ಸಂಪತ್ತಿನ ಪ್ರತಿರೂಪವಾಗಿ ರಾಜ್ಯಲಕ್ಶ್ಮಿ ಎಂಬ ದೇವತೆಯು ರಾಜನ ಬಳಿ ನೆಲೆಸಿರುತ್ತಾಳೆ ಎಂಬ ನಂಬಿಕೆಯು ಜನಮನದಲ್ಲಿದೆ; ಚಿಃ=ವ್ಯಕ್ತಿಯ ಕೆಟ್ಟ ನಡೆನುಡಿಯನ್ನು ಇತರರು ಕಂಡಾಗ, ವ್ಯಕ್ತಿಯ ಬಗ್ಗೆ ನಿಂದನೆ/ತಿರಸ್ಕಾರ/ಅಸಹ್ಯ ಬಾವನೆಗಳನ್ನು ವ್ಯಕ್ತಪಡಿಸುವಾಗ ಬಳಸುವ ಪದ; ಪೇಸು=ಅಸಹ್ಯಪಡು/ಜುಗುಪ್ಸೆಪಡು;

ರಾಜ್ಯಲಕ್ಷ್ಮಿ… ಚಿಃ ಎಂದು ಪೇಸಿ… ಅವನನ್ ಬಿಸುಟ್ಟಳ್=ಚಕ್ರವರ್‍ತಿಯಾದ ದುರ್‍ಯೋದನನು ಹಗೆಗಳಾದ ಪಾಂಡವರನ್ನು ವಂಚಿಸಲೆಂದು ಕಪಟತನದಿಂದ ಕೊಳವನ್ನು ಹಿಮ್ಮುಕನಾಗಿ ಹೊಗುತ್ತಿರುವುದನ್ನು ಕಂಡು ರಾಜ್ಯಲಕ್ಶ್ಮಿಯು ಅಸಹ್ಯಪಟ್ಟುಕೊಂಡು, ಅವನಿಂದ ದೂರಸರಿದಳು;

ತುರು+ಅಮ್; ತುರು=ದನ/ಹಸು/ಗೋವು; ಕಳ್=ಅಪಹರಿಸು;

ತುರುವಮ್ ಕಳಿಸುವ=ದನಗಳನ್ನು ಅಪಹರಿಸುವ; ಪಾಂಡವರು ಒಂದು ವರುಶ ಕಾಲ ವಿರಾಟನಗರಿಯಲ್ಲಿ ಅಜ್ನಾತವಾಸದಲ್ಲಿದ್ದಾಗ, ಅವರನ್ನು ಅವದಿ ಮುಗಿಯುವ ಮುನ್ನ ಗುರುತಿಸಿ, ಮತ್ತೆ ಅವರನ್ನು ಹನ್ನೆರಡು ವರುಶ ಕಾಡಿಗೆ ಅಟ್ಟಬೇಕೆಂದು ಕೆಟ್ಟ ಉದ್ದೇಶದಿಂದ ದುರ್‍ಯೋದನನು ಸೇನೆಯೊಡನೆ ಹೋಗಿ ವಿರಾಟನಗರಿಯ ಹೊರವಲಯದಲ್ಲಿದ್ದ ದನಗಳನ್ನು ಅಪಹರಿಸಿದ್ದನು;

ಕೃಷ್ಣೆ=ದ್ರೌಪದಿ; ನಿರಿ=ಸೀರೆಯ ಮಡಿಕೆ; ಉರ್ಚು+ಪೇಳ್ವ; ಉರ್ಚು=ಕೀಳು/ಸೆಳೆ;

ಕೃಷ್ಣೆಯ ನಿರಿಯಮ್ ಪಿಡಿದು ಉರ್ಚವೇಳ್ವ=ದ್ರೌಪದಿಯ ಸೀರೆಯ ನಿರಿಗೆಯನ್ನು ಹಿಡಿದು ಕೀಳುವಂತೆ ಹೇಳುವ; ಹಸ್ತಿನಾವತಿಯ ರಾಜಸಬೆಯಲ್ಲಿ ಪಗಡೆಯಾಟದ ಕಪಟ ದ್ಯೂತದಿಂದ ಪಾಂಡವರ ರಾಜ್ಯ ಸಂಪತ್ತಿನ ಜತೆಗೆ ದ್ರೌಪದಿಯನ್ನು ಗೆದ್ದ ದುರ್‍ಯೋದನನು, ಆಕೆಯನ್ನು ರಾಣಿವಾಸದಿಂದ ತನ್ನ ತಮ್ಮ ದುಶ್ಶಾಸನನ ಮೂಲಕ ರಾಜಸಬೆಗೆ ಎಳೆದು ತರಿಸಿ, ಪಾಂಡವರಿಗೆ ಅಪಮಾನವನ್ನು ಮಾಡಬೇಕೆಂಬ ಕೆಟ್ಟ ಉದ್ದೇಶದಿಂದ ದ್ರೌಪದಿಯ ಸೀರೆಯನ್ನು ಕಿತ್ತೆಳೆಯಲು ದುಶ್ಶಾಸನನಿಗೆ ಹೇಳಿದ್ದನು;

ದುರ್ನಯ=ಕೆಟ್ಟ ನಡತೆ/ದುರಾಚಾರ; ಅರಿಪು=ತಿಳಿಸು/ಹೇಳು;

ಕೊಳನಮ್ ಪಿಂದುಮ್ ಪೆರಗಾಗಿ ಪುಗುವ ದುರ್ನಯಮ್ ಅರಿಪವೆ=ವೈಶಂಪಾಯನ ಸರೋವರವನ್ನು ಹಿಮ್ಮುಕನಾಗಿ ಪ್ರವೇಶಿಸುವ ಕೆಟ್ಟ ನಡತೆಯೇ ಹೇಳುತ್ತವೆಯಲ್ಲವೇ;

ಆಯ=ಶಕ್ತಿ/ಪರಾಕ್ರಮ; ಕುಂದು=ಕೊರತೆ/ಕಳಂಕ/ಕೀಳುತನ;

ಕೌರವನ ರಾಜ್ಯದ ಆಯದ ಕುಂದನ್=ದುರ್‍ಯೋದನನ ರಾಜ್ಯದ ಶಕ್ತಿಯಲ್ಲಿರುವ ಕೊರತೆಯನ್ನು; ಚಕ್ರವರ್‍ತಿಯಾದ ದುರ್‍ಯೋದನನು ತನ್ನ ಪರಾಕ್ರಮ ಮತ್ತು ರಾಜತನದ ಅಂತಸ್ತಿಗೆ ತಕ್ಕಂತೆ ನಡೆದುಕೊಳ್ಳದೆ, ಹೇಡಿತನದಿಂದ ಹಿಮ್ಮುಕನಾಗಿ ಸರೋವರವನ್ನು ಹೊಗುವ ಕೀಳುತನದ ನಡೆನುಡಿಯಿಂದ ತನ್ನ ವ್ಯಕ್ತಿತ್ವಕ್ಕೆ ಮತ್ತು ರಾಜತನಕ್ಕೆ ಕಳಂಕವುಂಟುಮಾಡಿದ್ದಾನೆ;

ಅಂತು=ಆ ರೀತಿ;

ಅಂತು ಸರೋವರಮನ್ ಎಯ್ದೆವಂದಾಗಳ್=ಆ ರೀತಿ ದುರ್‍ಯೋದನನು ಹಿಮ್ಮುಕನಾಗಿ ಸರೋವರದ ಬಳಿಗೆ ಬಂದು, ಸರೋವರದ ನೀರಿನಲ್ಲಿ ಮುಳುಗಲು ಸಿದ್ದನಾಗುತ್ತಿದ್ದಾಗ; ವೈಶಂಪಾಯನ ಸರೋವರದ ಜಲರಾಶಿಯ ಆಳ ಅಗಲದ ವಿಸ್ತಾರತೆಯನ್ನು ಕವಿಯು ಬಣ್ಣಿಸುವುದರ ಜತೆಗೆ, ಸರೋವರದ ದಂಡೆಯಲ್ಲಿದ್ದ ವಿವಿದ ಬಗೆಯ ಹಕ್ಕಿಗಳ ಕಲರವನ್ನು ಒಂದು ರೂಪಕವನ್ನಾಗಿ ಮಾಡಿಕೊಂಡು, ದುರ್‍ಯೋದನನಿಗೆ ಬಂದೊದಗಿದ ದುಸ್ತಿತಿಯನ್ನು ಚಿತ್ರಿಸಿದ್ದಾನೆ;

ಗಗನಮ್ ಬಿಳ್ದುದೊ=ಮುಗಿಲು ಕಳಚಿಕೊಂಡು ಬಿದ್ದಿರುವುದೋ; ಮೇಣ್=ಇಲ್ಲವೇ;

ಪತ್ತು=ಅಂಟಿಕೊಳ್ಳು/ಬೆಸೆದುಕೊಳ್ಳು;

ನೆಲಕ್ಕೆ ನೆಲನೇನ್ ಪತ್ತಿತ್ತೊ=ನೆಲಕ್ಕೆ ನೆಲವೇನು ಬೆಸೆದುಕೊಂಡಿತೋ; ಪನ್ನಗ=ಹಾವು; ವೃಂದಾರಕ=ದೇವತೆ;

ಇಲ್ಲಿ ಪನ್ನಗ ವೃಂದಾರಕರ್ ಎಂದುಮ್ ಇರ್ಪ ಬಿಲನೋ=ಈ ಸರೋವರದಲ್ಲಿ ನಾಗದೇವತೆಗಳು ಯಾವಾಗಲೂ ಇರುವ ಬಿಲವೋ;

ಅಷ್ಟ=ಎಂಟು; ದಿಕ್+ನಾಗ+ರಾಜಿಗೆ; ನಾಗ=ಆನೆ; ರಾಜಿ=ಗುಂಪು; ಮೆಯ್+ಕರ್ಚಿಕೊಳಲ್ಕೆ; ಕರ್ಚು=ತೊಳೆ/ತೊಳೆಯುವಿಕೆ; ಅಜ=ಬ್ರಹ್ಮ ದೇವ; ಸಮೆ=ಕಟ್ಟು/ಮಾಡು; ತೋಯೋದ್ದೇಶ=ನೀರಿನ ತಾಣ/ಜಲಾಶಯ;

ಅಷ್ಟ ದಿಗ್ನಾಗರಾಜಿಗೆ ಮೆಯ್ಗರ್ಚಿಕೊಳಲ್ಕೆ ಅಜನ್ ಸಮೆದ ತೋಯೋದ್ದೇಶಮೋ=ಎಂಟು ದಿಕ್ಕುಗಳಲ್ಲಿಯೂ ಬೂಮಂಡಲವನ್ನು ಹೊತ್ತುಕೊಂಡಿರುವ ಆನೆಗಳು ಮಯ್ ತೊಳೆದುಕೊಂಡು ಮೀಯಲೆಂದು ಬ್ರಹ್ಮದೇವನು ನಿರ್‍ಮಿಸಿರುವ ಅನಂತವಾದ ಜಲಾಶಯವೋ;

ಸಂದೆಯ=ಸಂದೇಹ/ಸಂಶಯ; ಬಗೆ=ಮನಸ್ಸು;

ಸಂದೆಯಮ್ ಬಗೆಗೆ ಆದತ್ತು ಎನಿಸಿರ್ದುದು=ಸಂದೇಹವು ಮನಸ್ಸಿಗೆ ಉಂಟಾಯಿತು ಎನಿಸುತ್ತಿದೆ; ವೈಶಂಪಾಯನ ಸರೋವರದ ಉದ್ದಗಲ ಮತ್ತು ಆಳವು ಅನಂತವಾಗಿತ್ತು ಎಂಬುದನ್ನು ಈ ಮಾತುಗಳು ಸೂಚಿಸುತ್ತಿವೆ;

ಅಬ್ಜ+ಆಕರಮ್; ಅಬ್ಜ=ತಾವರೆ; ಆಕರ=ಹುಟ್ಟುವ ಜಾಗ; ಅಬ್ಜಾಕರ=ಸರೋವರ;

ಏನ್ ಪಿರಿದೊ ವೈಶಂಪಾಯನ ಅಬ್ಜಾಕರಮ್=ಎಶ್ಟು ದೊಡ್ಡದೋ ವೈಶಂಪಾಯನ ಸರೋವರ; ನೀರ್+ಆಕರ; ನೀರಾಕರ=ಕಡಲು/ಸಾಗರ; ಕಮಲ+ಆಕರ; ಕಮಲಾಕರ=ಸರೋವರ;

ಅಂತು ಗಂಭೀರ ನೀರಾಕರಮ್ ಇರ್ಪಂತಿರ್ದ ಕಮಲಾಕರಮ್ ನೋಳ್ಪಿನಮ್=ಆ ರೀತಿ ಅನಂತವಾದ ಕಡಲಿನಂತಿರುವ ವೈಶಂಪಾಯನ ಸರೋವರವನ್ನು ನೋಡುತ್ತಿರುವಾಗ; ಸರೋವರದಲ್ಲಿರುವ ಜಲಚರಗಳನ್ನು ತಿಂದು ಬದುಕುವ ಬಕ, ಕೋಕ, ಮರಾಳ ಮುಂತಾದ ಹಕ್ಕಿಗಳು ಹಿಮ್ಮುಕನಾಗಿ ಸರೋವರವನ್ನು ಹೊಗಲು ಬರುತ್ತಿರುವ ದುರ್‍ಯೋದನನನ್ನು ನೋಡಿ, ಆತಂಕದಿಂದ ಕೂಗಿಕೊಳ್ಳತೊಡಗುತ್ತವೆ; ಹಕ್ಕಿಗಳ ಆತಂಕದ ದನಿಯನ್ನು ರೂಪಕದ ನುಡಿಗಳ ಮೂಲಕ ಕವಿಯು ಚಿತ್ರಿಸಿದ್ದಾನೆ;

ಬತ್ತು=ಬರಿದಾಗು/ಒಣಗು; ತೊರೆ=ನದಿ/ಹೊಳೆ/ನೀರಿನ ತಾಣ;

ಕುರುಪತಿ, ನಿನ್ನ ಪೊಕ್ಕ ತೊರೆಗಳ್ ಮೊದಲಾಗಿರೆ ಬತ್ತಿದಪ್ಪುವು=ಕುರುಪತಿ, ನೀನು ಹೊಕ್ಕ ನದಿ ಹೊಳೆ ಸರೋವರಗಳು ಮೊದಲಗೊಂಡು ನೀರಿನ ತಾಣಗಳೆಲ್ಲವೂ ಬತ್ತಿಹೋಗುತ್ತವೆ;

ದೊರೆ=ರೀತಿ/ಬಗೆ; ದುರಾತ್ಮ=ಕೆಟ್ಟ ಮನಸ್ಸಿನವನು/ದುರುಳ; ಖಳ=ನೀಚ/ಕೇಡಿ; ಆನ್=ನಾನು;

ಈ ದೊರೆಯ ದುರಾತ್ಮನನ್ ಖಳನನ್ ಆನ್ ಒಳಕೊಂಡೊಡೆ=ನಿನ್ನಂತಹ ಕೆಟ್ಟ ನಡೆನುಡಿಯ ದುರುಳತನದ ಕೇಡಿಯನ್ನು ನಾನು ಒಳಕ್ಕೆ ಸೇರಿಸಿಕೊಂಡರೆ;

ಕದಡು=ಕಲಕು/ಚಿದ್ರಚಿದ್ರ ಮಾಡು; ಪುಗು=ಪ್ರವೇಶಿಸು/ಒಳಕ್ಕೆ ಬರುವುದು; ಬಗ್ಗು=ಹಕ್ಕಿಗಳ ಕೂಗು/ಹಕ್ಕಿಗಳ ಉಲಿ;

ಭೀಮನ್ ಈ ಸರೋವರಮುಮನ್… ಎಮ್ಮುಮಮ್ ಕದಡುಗುಮ್ … ಪುಗದಿರ್ ತೊಲಗು ಎಂದು ಬಗ್ಗಿಪಂತಿರೆ=ಬೀಮನು ಈ ಸರೋವರವನ್ನು ಮತ್ತು ನಮ್ಮನ್ನು ಚಿದ್ರಚಿದ್ರ ಮಾಡುತ್ತಾನೆ. ಆದ್ದರಿಂದ ನೀನು ಈ ಸರೋವರದ ಒಳಕ್ಕೆ ಬರಬೇಡ… ಇಲ್ಲಿಂದ ದೂರ ಹೋಗು ಎಂದು ಕೂಗಿ ಹೇಳುತ್ತಿರುವಂತೆ;

ಬಕ=ಕೊಕ್ಕರೆ; ಕೋಕ=ಜಕ್ಕವಕ್ಕಿ; ಮರಾಳ=ಹಂಸ; ವಿಹಂಗಮ=ಹಕ್ಕಿ; ಸ್ವನ=ದನಿ/ಶಬ್ದ; ನೆಗೆ=ಹಬ್ಬು/ವ್ಯಾಪಿಸು/ಕಾಣಿಸಿಕೊಳ್ಳು;

ಅನೇಕ ಬಕ ಕೋಕ ಮರಾಳ ವಿಹಂಗಮ ಸ್ವನಮ್ ನೆಗೆದತ್ತು=ಅನೇಕ ಬಗೆಯ ಕೊಕ್ಕರೆ, ಜಕ್ಕವಕ್ಕಿ , ಹಂಸ ಪಕ್ಶಿಗಳ ಕೊರಳೊಳಗಿಂದ ಹೊರಹೊಮ್ಮಿದ ದನಿಯು ಎಲ್ಲೆಡೆಯೂ ಹಬ್ಬಿ ಕೇಳಿಬರತೊಡಗಿತು;

ಕುರುಕುಳ ಸರೋರಾಜಹಂಸ=ಕುರುವಂಶವೆಂಬ ಸರೋವರದಲ್ಲಿ ವಿಹರಿಸುವ ರಾಜಹಂಸ. ದುರ್‍ಯೋದನನ ರಾಜತನವನ್ನು ಬಣ್ಣಿಸುವ ಪದಕಂತೆ;

ಮುನ್ನಮ್=ಮೊದಲು; ಕೆನ್ನ=ಕೆಂಪಾದುದು/ಕೆಂಬಣ್ಣ; ಕೆನ್ನೈಸು=ಕೆಂಪಗೆ ಹೆಪ್ಪುಗಟ್ಟಿದ; ಕೆನ್+ನೆತ್ತರ್=ಕೆಂಪಾದ ರಕ್ತ; ಕರ್ಚು=ತೊಳೆಯುವಿಕೆ;

ಆಗಳ್ ಕುರುಕುಳ ಸರೋರಾಜಹಂಸನ್ ಮುನ್ನಮ್ ತನ್ನ ಮೆಯ್ಯೊಳ್ ಕೆನ್ನೈಸಿದ ಕೆನ್ನೆತ್ತರಮ್ ಕರ್ಚಿ ಕಳೆದು=ದುರ್‍ಯೋದನನು ವೈಶಂಪಾಯನ ಸರೋವರವನ್ನು ಒಳಹೊಗುವ ಮುನ್ನ ತನ್ನ ಮಯ್ಯಲ್ಲಿ ಮೆತ್ತುಕೊಂಡಿದ್ದ ಹೆಪ್ಪುಗಟ್ಟಿದ ಕೆಂಪನೆಯ ನೆತ್ತರನ್ನು ತೊಳೆದುಕೊಂಡು;

ಕುರುಕ್ಶೇತ್ರ ರಣರಂಗದಲ್ಲಿ ಅಂದು ಬೆಳಗ್ಗೆ ನಡೆದ ಕದನದಲ್ಲಿ ಹೋರಾಡಿದಾಗ ಮತ್ತು ಅನಂತರ ರಣರಂಗದಲ್ಲಿ ಕೆಡೆದು ಬಿದ್ದಿದ್ದ ಆನೆ, ಕುದುರೆ ಮತ್ತು ಕಾದಾಳುಗಳ ಹೆಣಗಳ ನಡುವೆ ನಡೆದುಬರುವಾಗ ಮಯ್ ಕಯ್ಗಳಿಗೆ ಮೆತ್ತಿಕೊಂಡಿದ್ದ ನೆತ್ತರು;

ಕರ=ಕಯ್; ಚರಣ=ಪಾದ; ವದನ=ಮೊಗ; ಪ್ರಕ್ಷಾಳನ=ನೀರಿನಿಂದ ತೊಳೆಯುವುದು;

ಕರಚರಣ ವದನ ಪ್ರಕ್ಷಾಳನಮ್ ಗೆಯ್ದು=ಕಯ್ ಕಾಲು ಮೊಕವನ್ನು ನೀರಿನಿಂದ ತೊಳೆದುಕೊಂಡು;

ಮುಕ್ಕುಳಿಸಿ ಉಗುಳ್ದು=ಸ್ವಲ್ಪ ನೀರನ್ನು ತೆಗೆದುಕೊಂಡು ಬಾಯಿ ಮುಕ್ಕುಳಿಸಿ ಉಗಿದು;

ಆಚಮನ ಕ್ರಿಯೆ=ಬೊಗಸೆ ಕಯ್ಯಲ್ಲಿ ನೀರನ್ನು ತೆಗೆದುಕೊಂಡು, ದೇವರ ನಾಮಸ್ಮರಣೆ ಮಾಡುತ್ತ ಇನ್ನಿತರ ಮಂತ್ರಗಳನ್ನು ಹೇಳುತ್ತ, ಹಸ್ತದಲ್ಲಿರುವ ನೀರನ್ನು ನಿಸರ್‍ಗ  ದೇವತೆಗಳಿಗೆ ಅರ್‍ಪಿಸುವುದು ಇಲ್ಲವೇ ಕುಡಿಯುವುದು;

ಆಚಮನ ಕ್ರಿಯೆಗಳಮ್ ಮಾಡಿ=ದೇವರ ನಾಮವನ್ನು ಉಚ್ಚರಿಸುತ್ತ… ಮಂತ್ರಗಳ ಸ್ಮರಣೆ ಮಾಡುತ್ತ ನೀರನ್ನು ಸಲ್ಲಿಸಿ;

ಜಲದೇವತಾ ನಮಸ್ಕಾರಮ್ ಗೆಯ್ದು=ಜಲದೇವತೆಗೆ ನಮಸ್ಕಾರವನ್ನು ಮಾಡಿ; ಜಲಜ+ಆಕರ; ಜಲಜ=ತಾವರೆ; ಜಲಜಾಕರ=ತಾವರೆಯ ಸರೋವರ; ಅಭಿಮಂತ್ರಿಸು=ಮಂತ್ರವನ್ನು ಜಪಿಸಿ ಒಳಿತಾಗುವಂತೆ ಕೇಳಿಕೊಳ್ಳುವುದು; ಮಿನುಗು=ಮೆಲುದನಿಯಲ್ಲಿ ಮಂತ್ರಗಳನ್ನು ಜಪಿಸುವುದು;

ಜಲಮಂತ್ರೋಪದೇಶದಿಮ್ ಜಲಜಾಕರಮನ್ ಅಭಿಮಂತ್ರಿಸಿ… ಜಲನಿಲಯನಾಗಿ… ಪರಮಯೋಗಿಯವೋಲ್ ಮಂತ್ರಪದಾಕ್ಷರಂಗಳಮ್ ಮಿನುಗುತುಮ್ ಇರ್ದನ್=ದುರ್‍ಯೋದನನು ಬೀಶ್ಮರಿಂದ ಕೇಳಿ ತಿಳಿದುಕೊಂಡಿದ್ದ ಜಲಮಂತ್ರವನ್ನು ಜಪಿಸುತ್ತ… ವೈಶಂಪಾಯನ ಸರೋವರದ ನೀರಿನ ಆಳಕ್ಕೆ ಇಳಿದು… ಪರಮಯೋಗಿಯಂತೆ ಮಂತ್ರದ ಪದಗಳನ್ನು ಅಕ್ಕರಗಳನ್ನು ಮೆಲುದನಿಯಲ್ಲಿ ನಿರಂತರವಾಗಿ ಜಪಿಸುತ್ತಿದ್ದನು.)

(ಚಿತ್ರ ಸೆಲೆ: jainheritagecentres.com)

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *