ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 15ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 15: ದುರ್ಯೋಧನನನ್ನು ಕಾಣದೆ ಭೀಮಸೇನನ ಆತಂಕ, ಆಕ್ರೋಶ ಮತ್ತು ಅಬ್ಬರ ***
ತೀ.ನಂ.ಶ್ರೀಕಂಠಯ್ಯ(ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾಯದ 1 ನೆಯ ಪದ್ಯದಿಂದ 7 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಧರ್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಕೃಷ್ಣ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಪಾಂಡವರ ಹಿತಚಿಂತಕ.
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
*** ದುರ್ಯೋಧನನನ್ನು ಕಾಣದೆ ಭೀಮಸೇನನ ಆತಂಕ, ಆಕ್ರೋಶ ಮತ್ತು ಅಬ್ಬರ ***
ಅನ್ನೆಗಮ್ ಇತ್ತಲ್ ಶಲ್ಯನ ವಧೆಯಿಮ್ ಬಳಿಯಮ್ ಎಲ್ಲಿಯುಮ್ ಅರಸಿಯುಮ್ ದುರ್ಯೋಧನನ ರೂಪು ಕಾಣದೆ…
ಧರ್ಮರಾಯ: ಇದು ಏನಾನುಮ್ ಒಂದು ಕಾರಣಮ್ ಆಗಲ್ವೇಳ್ಕುಮ್.
(ಎಂದು ಸೂಕ್ಷ್ಮಕ್ರಿಯೆಯಿಮ್ ಅಂತಕತನಯನ್ ಗರುಡಧ್ವಜನೊಳ್ ಆಳೋಚಿಸುವುದಮ್ ಕುರುಕುಳಾಂತಕನ್ ಕೇಳ್ದು…)
ಭೀಮ: ಸಭೆಯೊಳ್ ಎನ್ನಯ ಪೂಣ್ದ ಪೂಣ್ಕೆ ತೊದಳಾಯ್ತು… ಪಾಂಚಾಲರಾಜಾತ್ಮಜಾವದನಮ್ಲಾನತೆ ಮಾಣ್ದುದಿಲ್ಲ ಗಡ… ಮತ್ ದೋರ್ದಂಡ ಕಂಡೂತಿ ತೀರ್ದುದುಮಿಲ್ಲ… ಸುಯೋಧನನ್ ಇನ್ನುಮ್ ಒಳನ್… ಅದರ್ಕೆ ಏಗೆಯ್ವೆನ್… ಎಂತಕ್ಕುಮ್.
(ಎಂಬುದನ್ ಎಂದು, ಉತ್ಸುಕಚಿತ್ತನ್ ಕೌರವ್ಯಕೋಳಾಹಳನ್ ಉಮ್ಮಳಿಸಿದನ್…ಅಂತು ಉಮ್ಮಳಿಸಿ… ಕುರುಕುಲಮಹೀಪಾಲ ಬೃಹತ್ ಊರು ದ್ವಂದ್ವಗಳಮ್ ತನ್ನ ಗದಾದಂಡದಿಮ್ ನುರ್ಗುನುರಿ ಮಾಡಲುಮ್… ತತ್ ಕೌರವೇಶ್ವರನ ಬಾಹುಶಾಖೆಗಳಮ್ ತನ್ನ ಗದಾಕುಠಾರದಿಮ್ ತತ್ತರದರಿಯಲುಮ್… ತತ್ ಪಿಂಗಾಕ್ಷನ ವಕ್ಷಃಸ್ಥಳಮಮ್ ತನ್ನ ಗದಾಲಾಂಗಲದಿಂದ ಇರ್ಬಗಿಯಾಗಿ ಪೋಳ್ದು ಪರಪಲುಮ್… ತತ್ ಫಣಿರಾಜಕೇತನನ ಲಲಾಟಶಿಲಾಪಟ್ಟಮಮ್ ತನ್ನ ಗದಾಘಾತದಿಮ್ ಚಿಪ್ಪುಚಿಪ್ಪಾರ್ದಿಡಲುಮ್… ತತ್ ದ್ರೌಪದೀದ್ರೋಹನ ಮಣಿಮಯ ಮಕುಟಮಮ್ ತನ್ನ ಗದಾಪ್ರಹರಣದಿಂದ ಉರುಳ್ಚಿ ಪುಡಿಯೊಳ್ ಪೊರಳ್ಚಲುಮ್… ಆ ಸುಯೋಧನನ ರುಧಿರ ಧಾರಾಪೂರದಿಮ್ ತನ್ನ ಧಗಧಗಾಯಮಾನ ವಿಪುಳ ಕೋಪಪಾವಕ ಶಿಖಾಕಲಾಪಮನ್ ಆರಿಸಲುಮ್ ಪಡೆಯದೆ ಅಡಹಡಿಸಿ, ಭೀಮಸೇನನ್ ಕಿಡಿಕಿಡಿವೋಗಿ ಮೀಸೆಯಮ್ ಕಡಿದು…)
ಭೀಮ: ಮೀರಿದ ಪಗೆವನ ಪಟ್ಟಮ್ ಪಾರಿಸುವೆನೊ… ಮುನ್ನಮ್ ಅಮರರ್ ಉಂಡ ಅಮೃತಮನ್ ಏನ್ ಕಾರಿಸುವೆನೊ… ಖಚರರನ್ ಅಡರ್ದು ಮೇರುಗಿರಿಯ ತೂರಲ ತುದಿಯಮ್ ಏರಿಸುವೆನೊ… ಮಂದರಾದ್ರಿಯನ್ ಎತ್ತುವೆನೊ… ನೆಲನಮ್ ರಸಾತಳಕ್ಕೆ ಒತ್ತುವೆನೊ… ದೆಸೆಯಮ್ ಪತ್ತುವೆನೊ… ಪಗೆಯ ಬೆನ್ನಮ್ ಪತ್ತುವೆನೊ… ದಿಶಾಗಜಂಗಳಮ್ ತುತ್ತುವೆನೋ… . ಕುಲ ನಗಂಗಳನ್ ದಾಂಟುವೆನೊ … ಚತುಸ್ಸಮುದ್ರಮಮ್ ಈಂಟುವೆನೊ… ಗಗನ ತಳದಿಮ್ ರವಿಶಶಿಯಮ್ ಮೀಂಟುವೆನೊ… ಸಕಲ ದಿಕ್ಪಾಲಕರಮ್ ಗಂಟಲನ್ ಒತ್ತುವೆನೊ…
(ಎಂದು ಕುರುಕುಲಕೃತಾಂತಕನ್ ಅಂತಕನಂತೆ ಮಾಮಸಕಮ್ ಮಸಗಿ ಪ್ರಳಯಕಲ್ಪಮ್ ಗೆಯ್ದು…)
ಭೀಮ: ಖಳನ್ ರಸೆಗಿಳಿದನೊ… ಮೇಣ್… ನಾಲ್ಕುಮ್ ದೆಸೆಗಳ ಕೋಣೆಗಳೊಳ್ ಉಳಿದನೋ… ಇಲ್ಲಿ ಈ ವಸುಮತಿಯೊಳ್ ಗಾಂಧಾರಿಯ ಬಸಿರಮ್ ಮೇಣ್ ಮಗುಳೆ ಪೋಗಿ ಪೊಕ್ಕಿರ್ದಪನೋ… ..ಚರಮ್ ಅಚರಮ್ ಎಂಬ ಜಗದಂತರದೊಳ್ ಖಳನ್ ಎಲ್ಲಿ ಪೊಕ್ಕೊಡಮ್… ತತ್ ಭುಜಪಂಜರದೊಳ್ ಇರ್ದೊಡೆ… ಹರಿಹರ ಹಿರಣ್ಯಗರ್ಭರ್ಕಳ್ ಆಂತೊಡಮ್ ಕೊಲ್ಲದಿರೆನ್… .ಚತುರಂತ ಕ್ಷಿತಿಕಾಂತೆ ಕೇಳ್… ಜಲಧಿ ಕೇಳ್… ಸಪ್ತಾರ್ಚಿ ಕೇಳ್… ತಾತ ಮಾರುತ ಕೇಳ್… ಮಾರುತ ಮಾರ್ಗ ಕೇಳ್… ಪಗೆವನಮ್ ಕೊಂದು ಎನ್ನ ಕೋಪಾಗ್ನಿಗೆ ಆಹುತಿ ಮಾಳ್ಪೆನ್… ಕೊಲಲಾರದಂದು ತರಿಸಂದು ಆನ್ ಎನ್ನ ಸಂದು ಅಗ್ನಿಗೆ ಆಹುತಿ ಮಾಳ್ಪೆನ್ ಗಡಮ್
(ಎಂದು ಪೂಣ್ದು ಒದರಿದನ್ ಕೌರವ್ಯಕೋಳಾಹಳನ್.)
ಪದ ವಿಂಗಡಣೆ ಮತ್ತು ತಿರುಳು: ದುರ‍್ಯೋದನನನ್ನು ಕಾಣದೆ ಬೀಮಸೇನನ ಆತಂಕ, ಆಕ್ರೋಶ ಮತ್ತು ಅಬ್ಬರ
ಅನ್ನೆಗಮ್=ಅದೇ ಸಮಯದಲ್ಲಿ; ಇತ್ತಲ್=ಈ ಕಡೆ/ಪಾಂಡವರ ಶಿಬಿರದಲ್ಲಿ;
ಅನ್ನೆಗಮಿತ್ತಲ್=ಕುರುಕ್ಶೇತ್ರ ರಣರಂಗದ ಒಂದು ಕಡೆಯಲ್ಲಿ ದುರ್‍ಯೋದನನು ವೈಶಂಪಾಯನ ಸರೋವರದೊಳಗೆ ಜಲಮಂತ್ರವನ್ನು ಉಚ್ಚರಿಸುತ್ತ ಅಡಗಿಕೊಂಡಿರುವ ಸಮಯದಲ್ಲಿಯೇ, ಕುರುಕ್ಶೇತ್ರ ರಣರಂಗದ ಮತ್ತೊಂದು ಕಡೆಯಲ್ಲಿದ್ದ ಪಾಂಡವರ ಶಿಬಿರದಲ್ಲಿ;
ವಧೆ=ಕೊಲೆ; ಅರಸು=ಹುಡುಕು;
ಶಲ್ಯನ ವಧೆಯಿಮ್ ಬಳಿಯಮ್ ಎಲ್ಲಿಯುಮ್ ಅರಸಿಯುಮ್ ದುರ್ಯೋಧನನ ರೂಪು ಕಾಣದೆ=ಹದಿನೆಂಟನೆಯ ದಿನದಂದು ಬೆಳಗ್ಗೆ ನಡೆದ ಯುದ್ದದಲ್ಲಿ ಸೇನಾದಿಪತಿಯಾಗಿದ್ದ ಶಲ್ಯನು ಸಾವನ್ನಪ್ಪಿದ್ದಾನೆ. ಬೀಶ್ಮರ ಹಿತನುಡಿಯಂತೆ ದುರ್‍ಯೋದನನು ವೈಶಂಪಾಯನ ಸರೋವರದಲ್ಲಿ ಆ ಒಂದು ದಿನದ ಮಟ್ಟಿಗೆ ಹಗೆಗಳ ಕಣ್ಣಿಗೆ ಕಾಣದಂತಿರಲು ವೈಶಂಪಾಯನ ಸರೋವರವನ್ನು ಹೊಕ್ಕಿರುವುದರಿಂದ, ಪಾಂಡವರು ರಣರಂಗದ ಎಲ್ಲಾ ಕಡೆ ಹುಡುಕಿದರೂ ಎಲ್ಲಿಯೂ ದುರ್‍ಯೋದನನನ್ನು ಕಾಣದೆ;
ಸೂಕ್ಷ್ಮ=ಚತುರತೆ/ಜಾಣ್ಮೆ; ಸೂಕ್ಷ್ಮಕ್ರಿಯೆ=ಜಾಣ್ಮೆಯಿಂದ ಗಮನಿಸಿ; ಅಂತಕ=ಯಮ; ಅಂತಕತನಯ=ದರ್‍ಮರಾಯ; ಗರುಡಧ್ವಜ=ಕ್ರಿಶ್ಣ;
ಇದು ಏನಾನುಮ್ ಒಂದು ಕಾರಣಮ್ ಆಗಲ್ವೇಳ್ಕುಮ್ ಎಂದು ಸೂಕ್ಷ್ಮಕ್ರಿಯೆಯಿಮ್ ಅಂತಕತನಯನ್ ಗರುಡಧ್ವಜನೊಳ್ ಆಳೋಚಿಸುವುದಮ್=ಕುರುಕ್ಶೇತ್ರ ಯುದ್ದರಂಗದಲ್ಲಿ ಎಲ್ಲಿಯೂ ದುರ್‍ಯೋದನನು ಕಾಣಿಸಿಕೊಳ್ಳದಿರುವುದಕ್ಕೆ ಏನಾದರೂ ಒಂದು ಪ್ರಬಲವಾದ ಕಾರಣವಿರಲೇಬೇಕೆಂಬುದನ್ನು ಜಾಣ್ಮೆಯಿಂದ ಗಮನಿಸಿದ ದರ್‍ಮರಾಯನು ಕ್ರಶ್ಣನೊಡನೆ ರಣರಂಗದಿಂದ ಕಣ್ಮರೆಯಾಗಿರುವ ದುರ್‍ಯೋದನನ ಬಗ್ಗೆ ಸಮಾಲೋಚನೆಯನ್ನು ಮಾಡತೊಡಗಲು;
ಕುರುಕುಲ+ಅಂತಕ; ಕುರುಕುಲಾಂತಕ=ಕುರುಕುಲಕ್ಕೆ ಯಮನಂತಿರುವ ಬೀಮಸೇನ;
ಕುರುಕುಳಾಂತಕನ್ ಕೇಳ್ದು=ದುರ್‍ಯೋದನನು ಯುದ್ದರಂಗದಿಂದ ಕಾಣೆಯಾಗಿರುವ ಸಂಗತಿಯನ್ನು ಮತ್ತು ಈ ಬಗ್ಗೆ ದರ್‍ಮರಾಯನು ಕ್ರಿಶ್ಣನೊಡನೆ ಸಮಾಲೋಚನೆಯಲ್ಲಿ ತೊಡಗಿದ್ದಾನೆ ಎಂಬ ಸುದ್ದಿಯನ್ನು ಕೇಳಿ, ಬೀಮಸೇನನು ತನ್ನಲ್ಲಿಯೇ ಈ ರೀತಿ ಮಾತನಾಡಿಕೊಳ್ಳತೊಡಗುತ್ತಾನೆ;
ಪೂಣ್=ಆಣೆ ಮಾಡು/ಶಪತ ಮಾಡು/ಪ್ರತಿಜ್ನೆ ಮಾಡು; ಪೂಣ್ಕೆ=ಆಣೆ/ಶಪತ/ಪ್ರತಿಜ್ನೆ; ತೊದಳ್+ಆಯ್ತು; ತೊದಳ್=ಸುಳ್ಳು/ಹುಸಿ;
ಸಭೆಯೊಳ್ ಎನ್ನಯ ಪೂಣ್ದ ಪೂಣ್ಕೆ ತೊದಳಾಯ್ತು=ಸಬೆಯಲ್ಲಿ ನಾನು ಮಾಡಿದ ಪ್ರತಿಜ್ನೆಯು ಸುಳ್ಳಾಯಿತು; ಇಂದಿಗೆ ಹದಿಮೂರು ವರುಶಗಳ ಹಿಂದೆ ಹಸ್ತಿನಾವತಿಯಲ್ಲಿ ನಡೆದ ಪಗಡೆಯಾಟದ ಜೂಜಿನಲ್ಲಿ ದರ್‍ಮರಾಯನನ್ನು ಸೋಲಿಸಿ, ತಮ್ಮೆಲ್ಲಾ ಸಂಪತ್ತನ್ನು ದೋಚಿದ್ದ ದುರ್‍ಯೋದನನು ರಾಜಸಬೆಗೆ ದ್ರೌಪದಿಯನ್ನು ತನ್ನ ತಮ್ಮ ದುಶ್ಶಾಸನನಿಂದ ಎಳೆದು ತರಿಸಿ, ಅವಳು ಸೀರೆಯನ್ನು ಸುಲಿಸಿ ಅಪಮಾನಮಾಡಿದ್ದಾಗ, ದ್ರೌಪದಿಯ ಮುಡಿಯೆಳೆದು ತಂದ ದುರುಳ ದುಶ್ಶಾಸನನ್ನು ಕೊಂದು, ಅವನ ನೆತ್ತರನ್ನು ಕುಡಿಯುವುದಾಗಿಯೂ ಮತ್ತು ದುರ್‍ಯೋದನನ ತೊಡೆಯನ್ನು ಮುರಿದು ಕೊಲ್ಲುವುದಾಗಿಯೂ ಬೀಮಸೇನನು ರಾಜಸಬೆಯಲ್ಲಿ ಪ್ರತಿಜ್ನೆಯನ್ನು ಮಾಡಿದ್ದನು.
ಪಾಂಚಾಲ+ರಾಜ+ಆತ್ಮಜಾ; ಆತ್ಮಜಾ=ಮಗಳು; ಪಾಂಚಾಲರಾಜಾತ್ಮಜಾ=ಪಾಂಚಾಲ ರಾಜ ದ್ರುಪದನ ಮಗಳಾದ ದ್ರೌಪದಿ; ವದನ=ಮೊಗ; ಮ್ಲಾನತೆ=ಕಾಂತಿ ಹೀನತೆ/ಕಳೆಗುಂದಿರುವುದು; ಮಾಣ್=ಇಲ್ಲವಾಗು/ಪರಿಹಾರವಾಗು; ಗಡ=ಕಂಡೆಯಾ/ನೋಡಿದೆಯಾ; ಅಚ್ಚರಿಯನ್ನು ಇಲ್ಲವೇ ಆತಂಕವನ್ನು ಸೂಚಿಸುವಾಗ ಬಳಸುವ ಪದ;
ಪಾಂಚಾಲರಾಜಾತ್ಮಜಾ ವದನಮ್ಲಾನತೆ ಮಾಣ್ದುದಿಲ್ಲ ಗಡ=ನೋಡಿದೆಯಾ… ಕಳೆಗುಂದಿದ ಮೊಗದ ದ್ರೌಪದಿಯ ಅಪಮಾನದ ಸಂಕಟ ಇನ್ನೂ ಹೋಗಿಲ್ಲ; ಮತ್=ನನ್ನ; ದೋರ್ದಂಡ=ದಂಡದಂತೆ ಉದ್ದವಾದ ತೋಳು/ಶಕ್ತಿಯುತವಾದ ತೋಳುಗಳು; ಕಂಡೂತಿ=ತುರಿಕೆ/ನವೆ/ತೀಟೆ; ತೀರು=ಮುಗಿ/ಕಳೆ;
ಮತ್ ದೋರ್ದಂಡ ಕಂಡೂತಿ ತೀರ್ದುದುಮಿಲ್ಲ=ನನ್ನ ತೋಳುಗಳು ತೀಟೆಯು ಇನ್ನೂ ತೀರಿಲ್ಲ. ಅಂದರೆ ದುರ್‍ಯೋದನನನ್ನು ಕೊಲ್ಲಬೇಕೆಂದು ಹಾತೊರೆಯುತ್ತಿರುವ ಈ ನನ್ನ ತೋಳುಗಳ ಶಕ್ತಿಯು ಇನ್ನೂ ಕಾರ್‍ಯರೂಪಕ್ಕೆ ಬಂದಿಲ್ಲ;
ಸುಯೋಧನನ್ ಇನ್ನುಮ್ ಒಳನ್=ದುರ್‍ಯೋದನನು ಇನ್ನೂ ಬದುಕಿದ್ದಾನೆ;
ಅದರ್ಕೆ ಏಗೆಯ್ವೆನ್… ಎಂತಕ್ಕುಮ್ ಎಂಬುದನ್ ಎಂದು=ದುರ್‍ಯೋದನನು ಯಾರ ಕಣ್ಣಿಗೂ ಕಾಣದಂತೆ ತಲೆಮರೆಸಿಕೊಂಡಿದ್ದಾನೆ… ಅದಕ್ಕೆ ಈಗ ನಾನೇನು ಮಾಡಲಿ… ಮುಂದೆ ಏನಾಗುವುದೋ ಎಂದು ಬೀಮನು ನುಡಿಯುತ್ತ;
ಚಿತ್ತ=ಮನಸ್ಸು; ಉತ್ಸುಕಚಿತ್ತನ್=ಆದಶ್ಟು ಬೇಗ ಕಯ್ಗೊಂಡ ಪ್ರತಿಜ್ನೆಯನ್ನು ಈಡೇರಿಸಬೇಕೆಂದು ತವಕಿಸುತ್ತಿರುವವನು; ಕೌರವ್ಯ=ಕುರುಕುಲಕ್ಕೆ ಸೇರಿದ ವ್ಯಕ್ತಿಗಳು; ಕೋಳಾಹಳ/ಕೋಲಾಹಲ=ಕಾಳೆಗ/ಯುದ್ದ; ಕೌರವ್ಯಕೋಳಾಹಳನ್=ಕುರುವಂಶದವರೆಲ್ಲರನ್ನು ಕಾಳೆಗದಲ್ಲಿ ಸದೆಬಡಿಯುವ ಬೀಮಸೇನ; ಉಮ್ಮಳಿಸು=ಚಿಂತಿಸು/ಆತಂಕಪಡು;
ಉತ್ಸುಕಚಿತ್ತನ್ ಕೌರವ್ಯಕೋಳಾಹಳನ್ ಉಮ್ಮಳಿಸಿದನ್=ಹಗೆಗಳನ್ನು ಬುಡಸಮೇತ ನಾಶಮಾಡಲು ತವಕಿಸುತ್ತಿರುವ ಬೀಮಸೇನನು ದುರ್‍ಯೋದನನು ಕಾಣೆಯಾಗಿರುವುದರಿಂದ ಆತಂಕ, ಕೋಪ ಮತ್ತು ಆವೇಶದಿಂದ ಪರಿತಪಿಸತೊಡಗಿದನು;
ಅಂತು ಉಮ್ಮಳಿಸಿ=ಆ ರೀತಿಯಲ್ಲಿ ಬೀಮಸೇನನು ಆತಂಕ, ಕೋಪ ಮತ್ತು ಆವೇಶದಿಂದ ಕೂಡಿದವನಾಗಿ;
ಮಹೀಪಾಲ=ಬೂಮಂಡಲವನ್ನು ಪಾಲಿಸುವವನು/ರಾಜ; ಕುರುಕುಲ ಮಹೀಪಾಲ=ದುರ್‍ಯೋದನ; ಬೃಹತ್=ದೊಡ್ಡದಾದ/ಬಲಯುತವಾದ; ಊರು=ತೊಡೆ; ದ್ವಂದ್ವ=ಎರಡು;
ಕುರುಕುಲ ಮಹೀಪಾಲ ಬೃಹತ್ ಊರು ದ್ವಂದ್ವಗಳಮ್ ತನ್ನ ಗದಾದಂಡದಿಮ್ ನುರ್ಗುನುರಿ ಮಾಡಲುಮ್=ದುರ್‍ಯೋದನನ ಬಲಯುತವಾದ ಎರಡು ತೊಡೆಗಳನ್ನು ತನ್ನ ಗದಾದಂಡದಿಂದ ಬಡಿದು ಮುರಿದು ಚಿದ್ರಚಿದ್ರಮಾಡಲು;
ಬಾಹುಶಾಖೆ=ತೋಳು; ಕುಠಾರ= ಕೊಡಲಿ/ಒಂದು ಬಗೆಯ ಆಯುದ; ತತ್ತರದರಿ+ಉಮ್; ತತ್ತರದರಿ=ಕೊಚ್ಚಿಹಾಕು/ತುಂಡುತುಂಡಾಗಿ ಕತ್ತರಿಸು;
ತತ್ ಕೌರವೇಶ್ವರನ ಬಾಹುಶಾಖೆಗಳಮ್ ತನ್ನ ಗದಾಕುಠಾರದಿಮ್ ತತ್ತರದರಿಯಲುಮ್=ಆ ದುರ್‍ಯೋದನನ ತೋಳುಗಳನ್ನು ತನ್ನ ಕೊಡಲಿಯಾಕಾರದ ಗದೆಯಿಂದ ತುಂಡುತುಂಡಾಗಿ ಕತ್ತರಿಸಲು;
ತತ್=ಆ; ಪಿಂಗಾಕ್ಷ=ಕೆಂಗಣ್ಣಿನವನು/ದುರ್‍ಯೋದನ; ವಕ್ಷಃಸ್ಥಳ=ಎದೆ; ಲಾಂಗಲ=ನೇಗಿಲು/ಒಂದು ಬಗೆಯ ಆಯುದ; ಪರಪು=ಚೆಲ್ಲಾಡು/ಚೆಲ್ಲಾಪಿಲ್ಲಿ ಮಾಡು/ಹರಡು;
ತತ್ ಪಿಂಗಾಕ್ಷನ ವಕ್ಷಃಸ್ಥಳಮಮ್ ತನ್ನ ಗದಾಲಾಂಗಲದಿಂದ ಇರ್ಬಗಿಯಾಗಿ ಪೋಳ್ದು ಪರಪಲುಮ್=ಆ ದುರ್‍ಯೋದನನ ಎದೆಯನ್ನು ತನ್ನ ನೇಗಿಲಿನಾಕಾರದ ಗದೆಯಿಂದ ಎರಡು ಹೋಳುಗಳನ್ನಾಗಿ ಸೀಳಿ, ಕುರುಕ್ಶೇತ್ರ ರಣರಂಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುವಂತೆ ಮಾಡಲು;
ಫಣಿ=ಹಾವು; ಫಣಿರಾಜ=ಹಾವುಗಳ ಒಡೆಯ/ಆದಿಶೇಶ; ಕೇತನ=ಬಾವುಟ; ಫಣಿರಾಜಕೇತನ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜ ಲಾಂಚನವಾಗುಳ್ಳವನು/ದುರ್‍ಯೋದನ; ಲಲಾಟ=ಹಣೆ; ಶಿಲಾಪಟ್ಟ=ಒಂದು ಬಗೆಯ ಒಡವೆ; ಲಲಾಟ ಶಿಲಾಪಟ್ಟ=ರಾಜಪಟ್ಟದ ಲಾಂಚನವಾಗಿ ರಾಜನ ಹಣೆಗೆ ಕಟ್ಟುವ ಒಡವೆ; ಗದಾ+ಆಘಾತ; ಆಘಾತ=ಪೆಟ್ಟು/ಹೊಡೆತ; ಚಿಪ್ಪು+ಚಿಪ್ಪು+ಆರ್ದು+ಇಡಲುಮ್; ಚಿಪ್ಪು=ಚೂರು; ಆರ್ದು=ಅಬ್ಬರಿಸಿ/ಗರ್‍ಜಿಸಿ;
ತತ್ ಫಣಿರಾಜಕೇತನನ ಲಲಾಟಶಿಲಾಪಟ್ಟಮಮ್ ತನ್ನ ಗದಾಘಾತದಿಮ್ ಚಿಪ್ಪುಚಿಪ್ಪಾರ್ದಿಡಲುಮ್=ಹಗೆಯಾದ ದುರ್‍ಯೋದನನ ಹಣೆಯಲ್ಲಿ ಕಟ್ಟಿರುವ ಶಿಲಾಪಟ್ಟವನ್ನು ಚೂರುಚೂರಾಗುವಂತೆ ಅಬ್ಬರಿಸುತ್ತ ಹೊಡೆಯಲು;
ಮಣಿ=ಹರಳು, ರತ್ನ, ಮುತ್ತು, ವಜ್ರ; ಮಕುಟ=ಕಿರೀಟ; ಪ್ರಹರಣ=ಪೆಟ್ಟು/ಹೊಡೆತ; ಪುಡಿ+ಒಳ್; ಪುಡಿ=ಮಣ್ಣು/ದೂಳು; ಪೊರಳ್ಚು=ಉರುಳಿಸು/ಉರುಳಾಡುವಂತೆ ಮಾಡು; ದ್ರೌಪದೀದ್ರೋಹನ್=ದ್ರೌಪದಿಗೆ ಅಪಮಾನ ಮಾಡಿರುವ ದುರ್‍ಯೋದನ;
ತತ್ ದ್ರೌಪದೀದ್ರೋಹನ ಮಣಿಮಯ ಮಕುಟಮಮ್ ತನ್ನ ಗದಾಪ್ರಹರಣದಿಂದ ಉರುಳ್ಚಿ ಪುಡಿಯೊಳ್ ಪೊರಳ್ಚಲುಮ್=ದ್ರೌಪದಿಗೆ ಅಪಮಾನವನ್ನು ಮಾಡಿರುವ ಆ ದುರ್‍ಯೋದನನ ರತ್ನ ವಜ್ರ ಮುತ್ತು ಮಾಣಿಕ್ಯಗಳಿಂದ ಕೂಡಿರುವ ಕಿರೀಟವನ್ನು ತನ್ನ ಗದೆಯಿಂದ ಹೊಡೆದುರುಳಿಸಿ, ಹಗೆಯನ್ನು ಮಣ್ಣಿನ ದೂಳಿನಲ್ಲಿ ಹೊರಳಾಡುವಂತೆ ಮಾಡಲು;
ರುಧಿರ=ನೆತ್ತರು/ರಕ್ತ; ಧಾರಾ=ಜೋರಾಗಿ ಮಳೆ ಸುರಿಯುವಿಕೆ; ಪೂರ=ಪ್ರವಾಹ/ತುಂಬಿ ಹರಿಯುವುದು; ಧಗಧಗಾಯಮಾನ=ಬೆಂಕಿಯ ಜ್ವಾಲೆಗಳು ದೊಡ್ಡದಾಗಿ ಉರಿಯುವುದು; ವಿಪುಳ=ಹೆಚ್ಚು; ಪಾವಕ=ಬೆಂಕಿ; ಶಿಖಾಕಲಾಪಮ್+ಅನ್; ಶಿಖಾಕಲಾಪ=ಬೆಂಕಿಯ ಜ್ವಾಲೆಗಳು; ಅಡಹಡಿಸು=ಚಡಪಡಿಸು/ತವಕಿಸು;
ಆ ಸುಯೋಧನನ ರುಧಿರ ಧಾರಾಪೂರದಿಮ್ ತನ್ನ ಧಗಧಗಾಯಮಾನ ವಿಪುಳ ಕೋಪಪಾವಕ ಶಿಖಾಕಲಾಪಮನ್ ಆರಿಸಲುಮ್ ಪಡೆಯದೆ ಅಡಹಡಿಸಿ = ತನ್ನ ಮಯ್ ಮನದಲ್ಲಿ ಉರಿದೇಳುತ್ತಿರುವ ಕೋಪವೆಂಬ ಬೆಂಕಿಯ ಜ್ವಾಲೆಗಳನ್ನು ಆ ದುರ್‍ಯೋದನನ ನೆತ್ತರಿನ ಹೊನಲಿನಲ್ಲಿ ಆರಿಸಲು ಅವಕಾಶವಿಲ್ಲದಿರುವುದಕ್ಕಾಗಿ ಬೀಮಸೇನನು ಚಡಪಡಿಸುತ್ತ;
ಕಿಡಿಕಿಡಿ+ಪೋಗಿ; ಕಿಡಿಕಿಡಿವೋಗಿ=ತೀವ್ರವಾದ ಕೋಪೋದ್ರೇಕದಿಂದ ಕೆರಳಿ; ಮೀಸೆಯಮ್ ಕಡಿದು=ಇದೊಂದು ನುಡಿಗಟ್ಟು. ಮೀಸೆಯನ್ನು ಹುರಿಗೊಳಿಸುತ್ತ/ಮೀಸೆಯನ್ನು ತಿರುಗಿಸುತ್ತ; ವ್ಯಕ್ತಿಯು ತನ್ನ ಬಲ ಮತ್ತು ಪರಾಕ್ರಮವನ್ನು ಮೆರೆಸುವುದರ ಸಂಕೇತವಾಗಿ ತನ್ನ ಮೀಸೆಯನ್ನು ಹುರಿಗೊಳಿಸುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ;
ಭೀಮಸೇನನ್ ಕಿಡಿಕಿಡಿವೋಗಿ ಮೀಸೆಯಮ್ ಕಡಿದು=ಬೀಮಸೇನನು ಕೋಪೋದ್ರೇಕದಿಂದ ಕೆರಳಿ ಕೆಂಡವಾಗಿ ಮೀಸೆಯನ್ನು ಹುರಿಗೊಳಿಸುತ್ತ; ಮೀರು=ಸೊಕ್ಕಿನಿಂದ ಮೆರೆ/ಅಹಂಕಾರಪಡು; ಪಟ್ಟ=ಸಿಂಹಾಸನ/ಗದ್ದುಗೆ/ಕಿರೀಟ;
ಮೀರಿದ ಪಗೆವನ ಪಟ್ಟಮ್ ಪಾರಿಸುವೆನೊ=ಸೊಕ್ಕಿನಿಂದ ಮೆರೆಯುತ್ತಿರುವ ಹಗೆಯಾದ ದುರ್‍ಯೋದನನ ಗದ್ದುಗೆಯನ್ನು ದೂಳಿಪಟಮಾಡುತ್ತೇನೆ;
ಬೀಮಸೇನನು ದುರ್‍ಯೋದನನ ಬಗ್ಗೆ ತನ್ನ ಮಯ್ ಮನದಲ್ಲಿರುವ ತೀವ್ರವಾದ ಆಕ್ರೋಶವನ್ನು ಕಾರುತ್ತ, “ಆತನು ಎಲ್ಲೆ ಅಡಗಿರಲಿ… ಯಾರನ್ನೇ ಮೊರೆಹೊಕ್ಕಿರಲಿ… ಆತನನ್ನು ತನ್ನಿಂದ ಕಾಪಾಡಲು ಯಾರೇ ಬರಲಿ… ಯಾವುದನ್ನು ಲೆಕ್ಕಿಸದೆ ದರ್‍ಯೋದನನನ್ನು ಕೊಂದೇ ಕೊಲ್ಲುತ್ತೇನೆ” ಎಂದು ದೊಡ್ಡ ದನಿಯಲ್ಲಿ ಅಬ್ಬರಿಸುತ್ತಿದ್ದಾನೆ. ಈ ಮಾತುಗಳೆಲ್ಲವೂ ಬೀಮಸೇನನ ಅಚಲ ನಿರ್‍ದಾರವನ್ನು, ತೋಳ್ಬಲವನ್ನು ಮತ್ತು ಪರಾಕ್ರಮವನ್ನು ಸೂಚಿಸುವ ರೂಪಕಗಳಾಗಿವೆ;
ಅಮರ=ದೇವತೆ; ಕಾರಿಸು=ಕಕ್ಕಿಸು/ವಾಂತಿಮಾಡಿಸು;
ಮುನ್ನಮ್ ಅಮರರ್ ಉಂಡ ಅಮೃತಮನ್ ಏನ್ ಕಾರಿಸುವೆನೊ=ಒಂದು ವೇಳೆ ದುರ್‍ಯೋದನನು ದೇವತೆಗಳ ಮರೆಹೊಕ್ಕು ದೇವಲೋಕದಲ್ಲಿ ಅಡಗಿಕೊಂಡಿದ್ದರೆ… ನನ್ನ ಹಗೆಗೆ ಆಶ್ರಯವನ್ನು ನೀಡಿರುವ ಆ ದೇವತೆಗಳು ಕುಡಿದಿರುವ ಅಮ್ರುತವನ್ನು ಮೊದಲು ಕಕ್ಕಿಸುತ್ತೇನೆ;
ಖಚರ=ಗಂದರ್‍ವ; ಅಡರ್=ಮೇಲೆ ಬೀಳು/ಆಕ್ರಮಿಸು; ತೂರಲ=ತುದಿ; ತೂರಲ ತುದಿ=ಕೊನೆಯ ತುಟ್ಟ ತುದಿ; ಏರಿಸು=ಮೇಲಕ್ಕೆ ಹತ್ತಿಸು/ಮೇಲೇರಿಸು;
ಖಚರರನ್ ಅಡರ್ದು ಮೇರುಗಿರಿಯ ತೂರಲ ತುದಿಯಮ್ ಏರಿಸುವೆನೊ=ಗಂದರ್‍ವರ ಮರೆಹೊಕ್ಕರೆ ಅವರ ಮೇಲೆ ದಾಳಿಯನ್ನು ಮಾಡಿ, ಅವರನ್ನು ಮೇರುಗಿರಿಯ ತುತ್ತತುದಿಗೆ ಅಟ್ಟುತ್ತೇನೆ;
ಮಂದರಾದ್ರಿಯನ್ ಎತ್ತುವೆನೊ=ಮಂದರ ಗಿರಿಯನ್ನೇ ಮೇಲೆತ್ತುತ್ತೇನೆ;
ನೆಲನಮ್ ರಸಾತಳಕ್ಕೆ ಒತ್ತುವೆನೊ=ಬೂಮಿಯನ್ನೇ ಪಾತಾಳಕ್ಕೆ ತುಳಿಯುತ್ತೇನೆ;
ಪತ್ತು=ಆವರಿಸು/ಆಕ್ರಮಿಸು;
ದೆಸೆಯಮ್ ಪತ್ತುವೆನೊ=ದಿಕ್ಕುಗಳನ್ನೇ ಆವರಿಸಿಕೊಳ್ಳುತ್ತೇನೆ;
ಪಗೆಯ ಬೆನ್ನಮ್ ಪತ್ತುವೆನೊ=ಹಗೆಯಾದ ದರ್‍ಯೋದನನನ್ನು ಬೆನ್ನಟ್ಟುತ್ತೇನೆ;
ತುತ್ತು=ಅಡಗಿಸು/ನಾಶಗೊಳಿಸು/ನುಂಗು;
ದಿಶಾ ಗಜಂಗಳಮ್ ತುತ್ತುವೆನೋ=ಬೂಮಂಡಲವನ್ನು ಎಂಟು ದಿಕ್ಕುಗಳಲ್ಲಿಯೂ ಹೊತ್ತಿರುವ ಆನೆಗಳನ್ನು ಅಡಗಿಸುತ್ತೇನೆ;
ನಗ=ಪರ್‍ವತ/ಬೆಟ್ಟ; ಕುಲ=ಗುಂಪು/ಸಮೂಹ; ನಗ=ಬೆಟ್ಟ;
ಕುಲ ನಗಂಗಳನ್ ದಾಂಟುವೆನೊ=ಬೆಟ್ಟ ಗುಡ್ಡ ಪರ್‍ವತಗಳನ್ನೇ ದಾಟುತ್ತೇನೆ;
ಚತುಸ್ಸಮುದ್ರಮಮ್ ಈಂಟುವೆನೊ=ನಾಲ್ಕು ಕಡಲುಗಳ ನೀರನ್ನು ಕುಡಿಯುತ್ತೇನೆ;
ಶಶಿ=ಚಂದ್ರ; ಮೀಂಟು=ಕೀಳು/ಹೊರಗೆ ತೆಗೆ;
ಗಗನ ತಳದಿಮ್ ರವಿಶಶಿಯಮ್ ಮೀಂಟುವೆನೊ=ಗಗನ ಪ್ರದೇಶದಲ್ಲಿ ಉರಿಯುತ್ತಿರುವ ಸೂರ್‍ಯ ಮತ್ತು ಬೆಳಗುತ್ತಿರುವ ಚಂದ್ರನನ್ನು ಕೀಳುತ್ತೇನೆ;
ಸಕಲ ದಿಕ್ಪಾಲಕರಮ್ ಗಂಟಲನ್ ಒತ್ತುವೆನೊ ಎಂದು=ದಿಕ್ಕನ್ನು ಕಾಯುವ ದೇವತೆಗಳೆಲ್ಲರ ಗಂಟಲನ್ನು ಮೆಟ್ಟಿ ತುಳಿಯುತ್ತೇನೆ ಎಂದು;
ಕುರುಕುಲ+ಕೃತಾಂತಕನ್; ಕೃತಾಂತಕ=ಯಮ; ಕುರುಕುಲಕೃತಾಂತಕ=ಕುರುಕುಲದ ವ್ಯಕ್ತಿಗಳಿಗೆ ಯಮನಾಗಿರುವವನು/ಬೀಮಸೇನ; ಅಂತಕ=ಯಮ; ಮಾಮಸಕ=ಅತಿಯಾದ ಕೋಪ/ಸಿಟ್ಟು; ಮಸಗು=ಹೊರಹೊಮ್ಮು/ಪ್ರಕಟವಾಗು/ಹೆಚ್ಚಾಗು; ಪ್ರಳಯ=ನಾಶ; ಪ್ರಳಯಕಲ್ಪ=ಪ್ರಪಂಚವೆಲ್ಲವನ್ನು ನಾಶಪಡಿಸುವ ಮಹಾಪ್ರಳಯ;
ಕುರುಕುಲಕೃತಾಂತಕನ್ ಅಂತಕನಂತೆ ಮಾಮಸಕಮ್ ಮಸಗಿ ಪ್ರಳಯಕಲ್ಪಮ್ ಗೆಯ್ದು=ಕುರುಕುಲಕ್ಕೆ ಸಾವಿನ ದೇವತೆಯಾಗಿರುವ ಬೀಮಸೇನನು ಯಮನಂತೆ ಅತಿಯಾದ ಕೋಪದಿಂದ ಕುದಿಯುತ್ತ ಕುರುಕುಲವನ್ನೇ ಸಂಪೂರ್‍ಣವಾಗಿ ನಾಶಪಡಿಸುವ ಪ್ರತಿಜ್ನೆಯನ್ನು ಮಾಡಿ;
ಖಳ=ನೀಚ/ಕೇಡಿ; ರಸೆಗೆ+ಇಳಿದನೊ; ರಸೆ=ಪಾತಾಳ;
ಖಳನ್ ರಸೆಗಿಳಿದನೊ=ಕೇಡಿಯಾದ ದುರ್‍ಯೋದನನು ಪಾತಾಳವನ್ನು ಹೊಕ್ಕಿರಲಿ;
ಮೇಣ್=ಇಲ್ಲವೇ;
ನಾಲ್ಕುಮ್ ದೆಸೆಗಳ ಕೋಣೆಗಳೊಳ್ ಉಳಿದನೋ=ನಾಲ್ಕು ದಿಕ್ಕುಗಳ ಕೋಣೆಗಳಲ್ಲಿ ಅಡಗಿರಲಿ;
ವಸುಮತಿ=ಬೂಮಂಡಲ; ಬಸಿರು=ಹೊಟ್ಟೆ;ಮಗುಳೆ=ಮತ್ತೊಮ್ಮೆ;
ಇಲ್ಲಿ ಈ ವಸುಮತಿಯೊಳ್ ಗಾಂಧಾರಿಯ ಬಸಿರಮ್ ಮೇಣ್ ಮಗುಳೆ ಪೋಗಿ ಪೊಕ್ಕಿರ್ದಪನೋ=ಇಲ್ಲಿ ಈ ಬೂಮಂಡಲದಲ್ಲಿ ಹೆತ್ತತಾಯಿಯಾದ ಗಾಂದಾರಿಯ ಹೊಟ್ಟೆಯೊಳಗೆ ಮತ್ತೊಮ್ಮೆ ಹೋಗಿ ಬಚ್ಚಿಟ್ಟುಕೊಂಡಿರುವನೋ; ಚರ=ಚಲಿಸುವ ಜೀವಿಗಳು; ಅಚರ=ಜಡ ವಸ್ತುಗಳು;
ಚರಮ್ ಅಚರಮ್ ಎಂಬ ಜಗದಂತರದೊಳ್ ಖಳನ್ ಎಲ್ಲಿ ಪೊಕ್ಕೊಡಮ್=ಚಲಿಸುವ ಜೀವಿಗಳಿಂದ ಮತ್ತು ಜಡವಸ್ತುಗಳಿಂದ ತುಂಬಿರುವ ಈ ಜಗತ್ತಿನೊಳಗೆ ಕೇಡಿಯಾದ ದುರ್‍ಯೋದನನು ಎಲ್ಲಿ ಅಡಗಿಕೊಂಡಿದ್ದರೂ;
ತತ್=ಹರಿ ಹರ ಬ್ರಹ್ಮ ದೇವರುಗಳು; ಭುಜಪಂಜರ=ತೋಳುಗಳ ರಕ್ಶಣೆ;
ತತ್ ಭುಜಪಂಜರದೊಳ್ ಇರ್ದೊಡೆ=ಜಗತ್ತಿನಲ್ಲಿ ಯಾರ ತೋಳುಗಳ ರಕ್ಶಣೆಯಲ್ಲಿದ್ದರೂ;
ಹರಿ=ವಿಶ್ಣು; ಹರ=ಶಿವ; ಹಿರಣ್ಯಗರ್ಭರ್+ಕಳ್; ಹಿರಣ್ಯಗರ್ಭ=ಬ್ರಹ್ಮ; ಕಳ್=ಗಳು; ಆಂತೊಡಮ್=ಎದುರಾದರೂ; ಕೊಲ್ಲದೆ+ಇರೆನ್;
ಹರಿಹರ ಹಿರಣ್ಯಗರ್ಭರ್ಕಳ್ ಆಂತೊಡಮ್ ಕೊಲ್ಲದಿರೆನ್=ಹರಿ ಹರ ಬ್ರಹ್ಮ-ಈ ಮೂರು ಮಂದಿ ದೇವರುಗಳೇ ದರ್‍ಯೋದನನನ್ನು ಕಾಪಾಡಲೆಂದು ಆಶ್ರಯವನ್ನು ನೀಡಿ, ನನಗೆ ಎದುರಾದರೂ ದರ್‍ಯೋದನನನ್ನು ಕೊಲ್ಲದೆ ಬಿಡುವುದಿಲ್ಲ; ಚತುರಂತ=ನಾಲ್ಕು ದಿಕ್ಕಿನ ಕಡಲುಗಳು ಮೇರೆಯಾಗಿರುವ;
ಕ್ಷಿತಿಕಾಂತೆ=ಬೂದೇವಿ;
ಚತುರಂತ ಕ್ಷಿತಿಕಾಂತೆ ಕೇಳ್=ನಾಲ್ಕು ದಿಕ್ಕುಗಳಲ್ಲಿಯೂ ಕಡಲುಗಳನ್ನು ಎಲ್ಲೆಯಾಗುಳ್ಳ ಬೂದೇವಿಯೇ ಕೇಳು;
ಜಲಧಿ=ಕಡಲು/ಸಮುದ್ರ;
ಜಲಧಿ ಕೇಳ್=ಸಮುದ್ರರಾಜನೇ ಕೇಳು;
ಸಪ್ತಾರ್ಚಿ=ಅಗ್ನಿದೇವ;
ಸಪ್ತಾರ್ಚಿ ಕೇಳ್=ಅಗ್ನಿದೇವನೇ ಕೇಳು; ತಾತ=ಅಪ್ಪ/ತಂದೆ; ಮಾರುತ=ವಾಯು ದೇವ;
ತಾತ ಮಾರುತ ಕೇಳ್=ತಂದೆಯಾದ ವಾಯುದೇವನೇ ಕೇಳು. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಬೀಮನು ಹುಟ್ಟಿದ್ದನು;
ಮಾರುತ ಮಾರ್ಗ=ಆಕಾಶ ಪ್ರದೇಶ;
ಮಾರುತ ಮಾರ್ಗ ಕೇಳ್=ಗಾಳಿಯು ಸುಳಿದು ಸೂಸುವ ಪ್ರದೇಶವಾದ ಆಕಾಶವೇ ಕೇಳು;
ಪಗೆವನಮ್ ಕೊಂದು ಎನ್ನ ಕೋಪಾಗ್ನಿಗೆ ಆಹುತಿ ಮಾಳ್ಪೆನ್=ಹಗೆಯಾದ ದರ್‍ಯೋದನನನ್ನು ಕೊಂದು ನನ್ನ ಕೋಪಾಗ್ನಿಗೆ ಬಲಿ ತೆಗೆದುಕೊಳ್ಳುತ್ತೇನೆ;
ತರಿಸಂದು=ನಿಶ್ಚಯಿಸಿ; ಸಂದು=ಒಳಹೊಕ್ಕು/ಪ್ರವೇಶಿಸಿ; ಆಹುತಿ=ಬಲಿ; ಕೌರವ್ಯಕೋಳಾಹಲ=ಬೀಮಸೇನ; ಒದರು=ಅಬ್ಬರಿಸು/ಗರ್‍ಜಿಸು;
ಕೊಲಲಾರದಂದು ತರಿಸಂದು ಆನ್ ಎನ್ನ ಸಂದು ಅಗ್ನಿಗೆ ಆಹುತಿ ಮಾಳ್ಪೆನ್ ಗಡಮ್ ಎಂದು ಕೌರವ್ಯಕೋಳಾಹಳನ್ ಪೂಣ್ದು ಒದರಿದನ್=ಹಗೆಯಾದ ದರ್‍ಯೋದನನನ್ನು ಕೊಲ್ಲುವುದಕ್ಕೆ ಆಗದಿದ್ದರೆ, ನಿಶ್ಚಯವಾಗಿಯೂ ಬೆಂಕಿಯನ್ನು ಹೊಕ್ಕು ನನ್ನನ್ನು ನಾನೇ ಬಲಿಕೊಡುತ್ತೇನೆ… ಕಂಡೆಯಾ… ಎಂದು ಬೀಮಸೇನನು ಪ್ರತಿಜ್ನೆಯನ್ನು ಮಾಡಿ ಅಬ್ಬರಿಸಿದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು