ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 19ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 19: ಅಣಕಕ್ಕೆ ಗುರಿಯಾದ ದುರ್ಯೋದನ ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಭೀಮಸೇನಾಡಂಬರಮ್’ ಎಂಬ ಹೆಸರಿನ 7 ನೆಯ ಅದ್ಯಾಯದ 23 ನೆಯ ಗದ್ಯದಿಂದ 29 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ನಕುಲ: ಅಶ್ವಿನಿ ದೇವತೆಗಳ ಅನುಗ್ರಹದಿಂದ ಮಾದ್ರಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ಸಹದೇವ: ಅಶ್ವಿನಿ ದೇವತೆಗಳ ಅನುಗ್ರಹದಿಂದ ಮಾದ್ರಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ಅರ್ಜುನ: ದೇವೇಂದ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ಧರ್ಮರಾಯ: ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
*** ಪ್ರಸಂಗ – 19: ಅಣಕಕ್ಕೆ ಗುರಿಯಾದ ದುರ್ಯೋಧನ ***
ಆಗಳ್ ಆ ಕೊಳನಮ್ ಬಳಸಿ ಬಂದು… ನಿರ್ಭರಮಾಗಿ ಬೊಬ್ಬಿರಿದು… ಅಬ್ಬರಮ್ ಗೆಯ್ದು… ಪಲತೆರದ ಪರೆಗಳಮ್ ಪೊಯ್ಸಿಯುಮ್… ಶಂಖಂಗಳಮ್ ಪೂರೈಸಿಯುಮ್… ಭೇರಿಗಳಮ್ ತಾಟಿಸಿಯುಮ್… ಕಹಳೆಗಳನ್ ಒತ್ತಿಸಿಯುಮ್… ಪಂಚ ಮಹಾಶಬ್ದಗಳಮ್ ಬಾಜಿಸಿಯುಮ್… ಎಂತುಮ್ ಪೊರಮಡಿಸಲಾರದೆ… ಸುಯೋಧನನನ್ ಪೆಸರ್ಗೊಂಡು ನಕುಲನ್ ಆಸ್ಫೋಟಿಸಿ…
ನಕುಲ: ಅಂಕದ ಕಲಿ… ಕುರುವಂಶ ಶಶಾಂಕನೆ… ದುರ್ಯೋಧನಾಂಕನ್ ಎನೆ ನೆಗಳ್ದು… ಅಯಶಃ ಪಂಕದೊಳಮ್ … ಈ ಸರೋವರ ಪಂಕದೊಳಮ್… ನೀನೆ ನಿನ್ನನ್ ಇಂತು ಅರ್ದುವುದೇ… ..ಇರಿವ ಬೆಡಂಗನೊಳ್ ಇರಿಯಲ್ ನೆರೆಯಯ್. ನಿನಗೆ ಆನೆ ಸಾಲ್ವೆನ್. ಎಕ್ಕತುಳಕ್ಕಮ್ ನೆರೆದಿರ್ದೆನ್. ಇರದೆ ಕೊಳನಮ್ ಪೊರಮಡು. ಎನ್ನ ಕೊಂತದ ಸವಿಯಮ್ ತೋರಿದಪೆನ್.
(ಎನೆ, ಸಹದೇವನ್ ಉತ್ಕಟಿಸಿ…)
ಸಹದೇವ: ಜವನ ಮಗನ್ ಇರ್ಕೆ… ಸುಭಟರ ಜವನ್ ಇರ್ಕೆ… ಸಿತಾಶ್ವನ್ ಇರ್ಕೆ… ನಕುಲನುಮ್ ಇರ್ಕೆ… ಅಣ್ಮುವೊಡೆ… ಎನ್ನ ಬಾಳ ಸವಿಯಮ್ ಸವಿನೋಡಿ, ಬಳಿಕ್ಕೆ ನೀರ ಸವಿಯಮ್ ನೋಡಾ.
(ಎಂಬುದುಮ್ ಅರ್ಜುನನ್ ವಿಜೃಂಭಿಸಿ…)
ಅರ್ಜುನ: ಸುಯೋಧನ, ನೀನ್ ಮಾನಧನನ್ ಎನಿಸಿ… ನಿನ್ನ ಅಭಿಮಾನ ಕ್ಷತಿ ಮಾಡಿದಯ್… ಮತ್ತೆ ಈ ನೀರೊಳಗೆ ಎಸಡಿ ಇರ್ಕುಮ್… ಮೀನ್ ಇರ್ಕುಮ್… ಕಪ್ಪೆ ಇರ್ಕುಮ್… ಗಂಡರ್ ಇರ್ಪರೆ… ಕುಮರಂಕರಾಮ ನೃಪನೊಳ್ ಸಮರಮ್ ನಿನಗೆ ಅರಿದು. ಎನಗಮ್ ನಿನಗಮ್ ಸಮರಮ್ ತಕ್ಕುದು. ನಿನ್ನನ್ ನುಂಗಲ್ಕೆ ಅಮೋಘಶರಮ್ ಇರ್ದುವು. ಇವರ ಸವಿಯಮ್ ನೋಡಾ.
(ಎಂಬುದುಮ್ ಧರ್ಮನಂದನನ್ ಧೃತರಾಷ್ಟ್ರನಂದನನ್ ಮುನ್ನ ಗೆಯ್ದ ಅಧರ್ಮಮನ್ ನೆನೆಯದೆ… ಕುಲಕ್ರಮಯುಕ್ತಮಪ್ಪ ನಿರ್ಮಲ ಕ್ಷತ್ರಧರ್ಮಮನೆ ಬಗೆದು… ಇಂತು ಎಂದನ್.)
ಧರ್ಮರಾಯ: ಭರತಾನ್ವಾಯದೊಳ್ ಅಂದಿನಿಂದುವರೆಗಮ್ ಸಾಪತ್ನ್ಯದೊಳ್ ಬದ್ಧಮತ್ಸರವಿಲ್ಲ… ಎಮ್ಮನ್ ಅಕಾರಣಮ್ ಕದಡಿದಯ್… ಸಾವ್ ಎಯ್ದಿದಯ್… ನಷ್ಟಸೋದರಮ್ ಆದತ್ತು… ಎನಗಮ್ ಸ್ವಗೋತ್ರವಧೆಯಪ್ಪ ಆ ಪಾತಕಮ್… ಕೌರವೇಶ್ವರ, ನೀನ್ ಸಂಧಿಗೆ ಒಡಂಬಡು… ಇಂತು ಕೊಳನಮ್ ಪೊಕ್ಕಿರ್ಪುದೇನ್ ತಕ್ಕುದೇ..
(ಎಂಬುದುಮ್…)
ಪದ ವಿಂಗಡಣೆ ಮತ್ತು ತಿರುಳು: ಅಣಕಕ್ಕೆ ಗುರಿಯಾದ ದುರ್ಯೋದನ
ಆಗಳ್ ಆ ಕೊಳನಮ್ ಬಳಸಿ ಬಂದು=ಆಗ ಪಾಂಡವರೆಲ್ಲರೂ ತಮ್ಮ ಸೇನಾಬಲದೊಡನೆ ಆ ವೈಶಂಪಾಯನ ಸರೋವರವನ್ನು ಸುತ್ತುವರಿದು ನಿಂತುಕೊಂಡು;
ನಿರ್ಭರಮ್+ಆಗಿ; ನಿರ್ಭರ= ಉತ್ಸಾಹ/ಹುರುಪು; ಬೊಬ್ಬಿರಿ=ಆನಂದ/ಕೋಪ/ಆವೇಶದಿಂದ ದೊಡ್ಡ ದನಿಯಲ್ಲಿ ಅರಚುವುದು;
ನಿರ್ಭರಮಾಗಿ ಬೊಬ್ಬಿರಿದು… ಅಬ್ಬರಮ್ ಗೆಯ್ದು=ಅತ್ಯಂತ ಹುರುಪಿನಿಂದ ದೊಡ್ಡ ದನಿಯಲ್ಲಿ ಬೊಬ್ಬಿರಿದು ಅಬ್ಬರಿಸುತ್ತ;
ಪರೆ=ದೊಡ್ಡ ಆಕಾರದ ಚರ್ಮವಾದ್ಯ;
ಪಲತೆರದ ಪರೆಗಳಮ್ ಪೊಯ್ಸಿಯುಮ್=ಹಲವು ಬಗೆಯ ಚರ್ಮವಾದ್ಯಗಳಿಂದ ದೊಡ್ಡ ದನಿಯನ್ನು ಹೊರಹೊಮ್ಮಿಸಿದರೂ;
ಪೂರೈಸು=ಬಾಯಿಂದ ಊದಿಸು;
ಶಂಖಂಗಳಮ್ ಪೂರೈಸಿಯುಮ್= ಶಂಕಗಳನ್ನು ಊದಿ ನಾದವನ್ನು ಮಾಡಿದರೂ;
ಭೇರಿ=ನಗಾರಿ; ತಾಟಿಸು=ಬಡಿ;
ಭೇರಿಗಳಮ್ ತಾಟಿಸಿಯುಮ್=ನಗಾರಿಗಳನ್ನು ಬಡಿದು ದೊಡ್ಡ ಗದ್ದಲವನ್ನು ಮಾಡಿದರೂ;
ಒತ್ತಿಸು=ಬಾಯಿಂದ ಊದಿಸು; ಕಹಳೆಗಳನ್ ಒತ್ತಿಸಿಯುಮ್=ಕಹಳೆಗಳನ್ನು ಊದಿ ಮಹಾನಾದವನ್ನು ಹೊರಡಿಸಿದರೂ;
ಪಂಚ ಮಹಾಶಬ್ದಗಳು=ಪ್ರಾಣಿಗಳ ಕೊಂಬು/ತಮಟೆ/ಶಂಕ/ನಗಾರಿ/ಜಾಗಟೆ ಎಂಬ ಅಯ್ದು ವಾದ್ಯಗಳನ್ನು ನುಡಿಸಿದಾಗ ಹೊರಹೊಮ್ಮುವ ದನಿ;
ಬಾಜಿಸು=ವಾದ್ಯವನ್ನು ನುಡಿಸು;
ಪಂಚ ಮಹಾಶಬ್ದಗಳಮ್ ಬಾಜಿಸಿಯುಮ್=ಅಯ್ದು ಬಗೆಯ ವಾದ್ಯಗಳನ್ನು ಒಮ್ಮೆಲೆ ನುಡಿಸುತ್ತ ಬಹು ದೊಡ್ಡ ದನಿಯನ್ನು ಹೊರಹೊಮ್ಮಿಸಿದರೂ;
ಎಂತುಮ್ ಪೊರಮಡಿಸಲಾರದೆ=ಯಾವ ರೀತಿಯಿಂದಲೂ ದುರ್ಯೋದನನನ್ನು ಸರೋವರದಿಂದ ಹೊರಕ್ಕೆ ಬರುವಂತೆ ಮಾಡಲಾಗದೆ; ಪಾಂಡವರ ಸೇನಾ ಬಲದ ಅಬ್ಬರಕ್ಕಾಗಲಿ ಇಲ್ಲವೇ ವಾದ್ಯಗಳ ಮೊಳಗುವಿಕೆಗಾಗಲಿ ದುರ್ಯೋದನನು ಯಾವುದೇ ಬಗೆಯಲ್ಲಿಯೂ ಪ್ರತಿಕ್ರಿಯಿಸದೇ ಸರೋವರದೊಳಗೆ ಅಡಗಿದ್ದನು;
ನಕುಲನ್ ಆಸ್ಫೋಟಿಸಿ ಸುಯೋಧನನನ್ ಪೆಸರ್ಗೊಂಡು=ದುರ್ಯೋದನನು ಸರೋವರದಿಂದ ಹೊರಕ್ಕೆ ಬಾರದಿರುವುದನ್ನು ಕಂಡು ನಕುಲನು ಆಕ್ರೋಶದಿಂದ ಕೆರಳಿದವನಾಗಿ ದುರ್ಯೋದನನ ಹೆಸರನ್ನು ಹಿಡಿದು ಕರೆಯುತ್ತ;
ಅಂಕ=ಬಿರುದು/ಹೆಸರು/ಪ್ರಸಿದ್ದಿ; ಶಶಾಂಕ=ಚಂದ್ರ; ನೆಗಳ್= ಕೀರ್ತಿ/ ಪ್ರಸಿದ್ದಿ; ಅಯಶಃ=ಅಪಕೀರ್ತಿ/ಕೆಟ್ಟ ಹೆಸರು; ಪಂಕ=ಕೆಸರು;
ಅಂಕದ ಕಲಿ… ಕುರುವಂಶ ಶಶಾಂಕನೆ… ದುರ್ಯೋಧನಾಂಕನ್ ಎನೆ ನೆಗಳ್ದು… ಅಯಶಃ ಪಂಕದೊಳಮ್ … ಈ ಸರೋವರ ಪಂಕದೊಳಮ್… ನೀನೆ ನಿನ್ನನ್ ಇಂತು ಅರ್ದುವುದೇ=ಬಿರುದನ್ನು ಪಡೆದ ಕಲಿಯಾದ ಕುರುವಂಶದ ಚಂದ್ರನೇ… ಯಾರಿಂದಲೂ ಜಯಿಸಲು ಅಸಾದ್ಯನಾದವನೇ ದುರ್ಯೋದನ ಎನ್ನುವ ಹೆಸರನ್ನು ಪಡೆದು… ಈಗ ಅಪಕೀರ್ತಿಯ ಕೆಸರಿನಲ್ಲಿಯೂ… ಈ ಸರೋವರದ ಕೆಸರಿನಲ್ಲಿಯೂ ನೀನೆ ನಿನ್ನನ್ನು ಈ ರೀತಿ ಅದ್ದುಕೊಳ್ಳುತ್ತಾರೆಯೇ;
ಇರಿವಬೆಡಂಗ=ಚಾಳುಕ್ಯ ಚಕ್ರವರ್ತಿಯಾದ ಸತ್ಯಾಶಯನಿಗೆ ಇದ್ದ ಬಿರುದು. ಈ ಬಿರುದಿನಿಂದ ಬೀಮಸೇನನನ್ನು ಕವಿಯು ಹೆಸರಿಸಿದ್ದಾನೆ/ಬೀಮ; ನೆರೆ=ಶಕ್ತನಾಗು;
ಇರಿವಬೆಡಂಗನೊಳ್ ಇರಿಯಲ್ ನೆರೆಯಯ್=ಇರಿವಬೆಡಂಗನೊಡನೆ ಹೋರಾಡಲು ನಿನ್ನಿಂದಾಗದು;
ನಿನಗೆ ಆನೆ ಸಾಲ್ವೆನ್=ನಿನ್ನನ್ನು ಕೊಲ್ಲಲು ನಾನೇ ಸಾಕು; ಎಕ್ಕತುಳ=ದ್ವಂದ್ವ ಯುದ್ದ/ಇಬ್ಬರ ನಡುವೆ ನಡೆಯುವ ಹೋರಾಟ;
ಎಕ್ಕತುಳಕ್ಕಮ್ ನೆರೆದಿರ್ದೆನ್… ಇರದೆ ಕೊಳನಮ್ ಪೊರಮಡು=ನಿನ್ನೊಡನೆ ದ್ವಂದ್ವಯುದ್ದಕ್ಕೆ ನಾನು ಸಿದ್ದನಾಗಿದ್ದೇನೆ. ಕೊಳದಲ್ಲಿ ಅಡಗಿಕೊಂಡಿರದೆ ಹೊರಕ್ಕೆ ಬಾ; ಕೊಂತ=ಈಟಿ/ಬರ್ಜಿ;
ಎನ್ನ ಕೊಂತದ ಸವಿಯಮ್ ತೋರಿದಪೆನ್ ಎನೆ=ನನ್ನ ಈಟಿಯ ರುಚಿಯನ್ನು ತೋರಿಸುತ್ತೇನೆ ಎಂದು ನಕುಲನು ದುರ್ಯೋದನನಿಗೆ ಸವಾಲನ್ನು ಹಾಕಿ ಹೋರಾಟಕ್ಕೆ ಕರೆಯಲು; ಉತ್ಕಟ=ಉಗ್ರತೆ/ಬಯಂಕರ;
ಸಹದೇವನ್ ಉತ್ಕಟಿಸಿ=ಈಗ ಸಹದೇವನು ಉಗ್ರವಾದ ಕೋಪದಿಂದ ಉದ್ರೇಕಗೊಂಡವನಾಗಿ ದುರ್ಯೋದನನನ್ನು ಜರೆದು ತನ್ನೊಡನೆ ದ್ವಂದ್ವಯುದ್ದಕ್ಕೆ ಕರೆಯುತ್ತಾನೆ;
ಜವನ ಮಗ=ದರ್ಮರಾಯ; ಇರ್ಕೆ=ಇರಲಿ; ಸುಭಟರ ಜವ=ವೀರರ ಪಾಲಿನ ಯಮ/ಬೀಮ; ಸಿತಾಶ್ವನ್=ಅರ್ಜುನ; ಅಣ್ಮು=ಪರಾಕ್ರಮವನ್ನು ತೋರಿಸು; ಬಾಳ್=ಕತ್ತಿ;
ಜವನ ಮಗನ್ ಇರ್ಕೆ… ಸುಭಟರ ಜವನ್ ಇರ್ಕೆ… ಸಿತಾಶ್ವನ್ ಇರ್ಕೆ… ನಕುಲನುಮ್ ಇರ್ಕೆ… ಅಣ್ಮುವೊಡೆ… ಎನ್ನ ಬಾಳ ಸವಿಯಮ್ ಸವಿನೋಡಿ, ಬಳಿಕ್ಕೆ ನೀರ ಸವಿಯಮ್ ನೋಡಾ ಎಂಬುದುಮ್=ದರ್ಮರಾಯನು ಇರಲಿ… ಬೀಮನು ಇರಲಿ… ಅರ್ಜುನ ಇರಲಿ… ನಕುಲನೂ ಇರಲಿ… ಅವರಾರು ನಿನ್ನೊಡನೆ ಹೋರಾಡಬೇಕಾದ ಅಗತ್ಯವಿಲ್ಲ. ನಿನ್ನ ಪರಾಕ್ರಮವನ್ನು ತೋರಿಸುವುದಾದರೆ… ನನ್ನ ಕತ್ತಿಯ ರುಚಿಯನ್ನೊಮ್ಮೆ ಸವಿದು ನೋಡಿ, ಅನಂತರ ಸರೋವರದ ನೀರ ರುಚಿಯನ್ನು ನೋಡುವಂತಹವನಾಗು ಎಂದು ಹಂಗಿಸಲು;
ಅರ್ಜುನನ್ ವಿಜೃಂಭಿಸಿ=ಅರ್ಜುನನು ಅತಿಶಯವಾಗಿ ಅಬ್ಬರಿಸುತ್ತ; ನಕುಲ ಮತ್ತು ಸಹದೇವನ ಸವಾಲುಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ಕೊಡದ ದುರ್ಯೋದನನನ್ನು ಈಗ ಅರ್ಜುನನು ಕೆಣಕುತ್ತಾನೆ;
ಸುಯೋಧನ, ನೀನ್ ಮಾನಧನನ್ ಎನಿಸಿ… ನಿನ್ನ ಅಭಿಮಾನ ಕ್ಷತಿ ಮಾಡಿದಯ್= ಸುಯೋದನ, ನೀನು ಯಾರಿಗೂ ತಲೆಬಾಗದೆ ಬಾಳುವವನು ಎಂಬ ಹೆಸರನ್ನು ಪಡೆದಿದ್ದವನು, ಈಗ ನಿನ್ನ ವ್ಯಕ್ತಿತ್ವವನ್ನು ನಾಶಮಾಡಿಕೊಂಡೆ;
ಎಸಡಿ=ಏಡಿ;
ಮತ್ತೆ ಈ ನೀರೊಳಗೆ ಎಸಡಿ ಇರ್ಕುಮ್… ಮೀನ್ ಇರ್ಕುಮ್… ಕಪ್ಪೆ ಇರ್ಕುಮ್… ಗಂಡರ್ ಇರ್ಪರೆ=ಹಾಗೆ ನೋಡಿದರೆ ಈ ಸರೋವರದ ನೀರಿನಲ್ಲಿ ಏಡಿ ಇರುತ್ತವೆ… ಮೀನು ಇರುತ್ತವೆ… ಕಪ್ಪೆ ಇರುತ್ತವೆ… ಪರಾಕ್ರಮಿಗಳು ಇರುತ್ತಾರೆಯೇ;
ಕುಮರಂಕರಾಮ=ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯನಿಗೆ ಇದ್ದ ಬಿರುದು/ಬೀಮ;
ಕುಮರಂಕರಾಮ ನೃಪನೊಳ್ ಸಮರಮ್ ನಿನಗೆ ಅರಿದು=ಕುಮರಂಕರಾಮನೆಂಬ ಬಿರುದನ್ನು ಹೊತ್ತಿರುವ ರಾಜನಾದ ಬೀಮಸೇನನೊಡನೆ ಹೋರಾಡಲು ನಿನ್ನಿಂದಾಗದು;
ಎನಗಮ್ ನಿನಗಮ್ ಸಮರಮ್ ತಕ್ಕುದು=ನನಗೂ ನಿನಗೂ ಯುದ್ದ ತಕ್ಕುದಾಗಿದೆ;
ಅಮೋಘ=ಗುರಿಯನ್ನು ಸರಿಯಾಗಿ ಮುಟ್ಟುವ; ಶರ=ಬಾಣ;
ನಿನ್ನನ್ ನುಂಗಲ್ಕೆ ಅಮೋಘಶರಮ್ ಇರ್ದುವು=ನಿನ್ನನ್ನು ಬಲಿತೆಗೆದುಕೊಳ್ಳುವುದಕ್ಕೆ ನನ್ನ ಬಳಿ ಗುರಿಯನ್ನು ಸರಿಯಾಗಿ ಮುಟ್ಟುವ ಬಾಣಗಳಿವೆ;
ಇವರ ಸವಿಯಮ್ ನೋಡಾ ಎಂಬುದುಮ್ =ಇಂತಹ ಹರಿತವಾದ ಬಾಣಗಳ ರುಚಿಯನ್ನು ನೋಡುವಂತಹವನಾಗು ಎಂದು ಹೀಯಾಳಿಸಲು;
ಧರ್ಮನಂದನನ್ ಧೃತರಾಷ್ಟ್ರನಂದನನ್ ಮುನ್ನ ಗೆಯ್ದ ಅಧರ್ಮಮನ್ ನೆನೆಯದೆ=ದರ್ಮರಾಯನು ದುರ್ಯೋದನನು ಪಾಂಡವರಾದ ತಮಗೆ ಈ ಮೊದಲು ಮಾಡಿದ್ದ ಕಪಟತನದ ಮತ್ತು ಕ್ರೂರತನದ ಕೆಟ್ಟ ಪ್ರಸಂಗಗಳನ್ನು ನೆನೆದುಕೊಂಡು ಹಂಗಿಸದೆ ಇಲ್ಲವೇ ಆಕ್ರೋಶವನ್ನು ಕಾರದೆ;
ಕುಲಕ್ರಮಯುಕ್ತಮಪ್ಪ ನಿರ್ಮಲ ಕ್ಷತ್ರಧರ್ಮಮನೆ ಬಗೆದು… ಇಂತು ಎಂದನ್=ಕುಲದ ಪರಂಪರೆಗೆ ಉಚಿತವೆನಿಸಿದ ಪವಿತ್ರವಾದ ಕ್ಶತ್ರಿಯ ದರ್ಮವನ್ನೇ ಅವಲಂಬಿಸಿ, ದುರ್ಯೋದನನಿಗೆ ಈ ರೀತಿ ಹೇಳಿದನು;
ಭರತ+ಅನ್ವಾಯದ+ಒಳ್; ಅನ್ವಾಯ/ಅನ್ವಯ=ವಂಶ; ಸಾಪತ್ನ್ಯ=ಅಣ್ಣ ತಮ್ಮಂದಿರ ಮಕ್ಕಳು/ದಾಯಾದಿಗಳು; ಬದ್ಧಮತ್ಸರ=ಕಡುಹಗೆತನ/ಎಂದೆಂದಿಗೂ ಕೊನೆಗೊಳ್ಳದ ಹಗೆತನ;
ಭರತಾನ್ವಾಯದೊಳ್ ಅಂದಿನಿಂದುವರೆಗಮ್ ಸಾಪತ್ನ್ಯದೊಳ್ ಬದ್ಧಮತ್ಸರವಿಲ್ಲ=ಬರತವಂಶದ ರಾಜಕುಮಾರರಲ್ಲಿ ಅಂದಿನಿಂದ ಇಂದಿನವರೆಗೂ ಕಡುಹಗೆತನವಿಲ್ಲ;
ಎಮ್ಮನ್ ಅಕಾರಣಮ್ ಕದಡಿದಯ್=ನಮ್ಮನ್ನು ವಿನಾಕಾರಣವಾಗಿ ಬಗೆಬಗೆಯ ಕಶ್ಟಕೋಟಲೆಗಳಿಗೆ ಗುರಿಮಾಡಿ ನೋಯಿಸಿದೆ;
ಸಾವ್ ಎಯ್ದಿದಯ್=ಸಾವಿಗೆ ಹತ್ತಿರವಾದೆ;
ನಷ್ಟಸೋದರಮ್ ಆದತ್ತು= ತಮ್ಮಂದಿರೆಲ್ಲರನ್ನೂ ಕಳೆದುಕೊಂಡೆ;
ಎನಗಮ್ ಸ್ವಗೋತ್ರವಧೆಯಪ್ಪ ಆ ಪಾತಕಮ್= ನಮಗೂ ಕೂಡ ಒಂದೇ ಮನೆತನಕ್ಕೆ ಸೇರಿದ ಅಣ್ಣ ತಮ್ಮಂದಿರನ್ನು ಮತ್ತು ನೆಂಟರನ್ನು ಕೊಂದ ಪಾಪ ಬಂದಿತು;
ಕೌರವೇಶ್ವರ, ನೀನ್ ಸಂಧಿಗೆ ಒಡಂಬಡು=ಕುರುಪತಿಯಾದ ದುರ್ಯೋದನನೇ, ನೀನು ಈಗಲಾದರೂ ಸಂದಿಗೆ ಒಪ್ಪಿಗೆಯನ್ನು ನೀಡು;
ಇಂತು ಕೊಳನಮ್ ಪೊಕ್ಕಿರ್ಪುದೇನ್ ತಕ್ಕುದೇ ಎಂಬುದುಮ್=ಈ ರೀತಿ ಹೇಡಿತನದಿಂದ ಜೀವಗಳ್ಳನಾಗಿ ಕೊಳವನ್ನು ಹೊಕ್ಕಿರುವುದೇನು ಯೋಗ್ಯವಾದುದೇ ಎಂದು ದರ್ಮರಾಯನು ದುರ್ಯೋದನನನ್ನು ಕುರಿತು ಶಾಂತರೀತಿಯಲ್ಲಿಯೇ ಹೇಳುತ್ತಿರಲು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು