ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 25ನೆಯ ಕಂತು
– ಸಿ.ಪಿ.ನಾಗರಾಜ.
*** ದ್ರೌಪದಿಯ ಮುಡಿ ಕಟ್ಟಿದ ಬೀಮಸೇನ ***
ತೀ.ನಂ.ಶ್ರೀಕಂಠಯ್ಯ(ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಗದಾಯುದ್ಧಂ’ ಎಂಬ ಹೆಸರಿನ 8ನೆಯ ಅದ್ಯಾಯದ 30ನೆಯ ಪದ್ಯದಿಂದ 40ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದ್ರೌಪದಿ: ಪಾಂಚಾಲ ದೇಶದ ದ್ರುಪದ ರಾಜನ ಮಗಳು. ಅಯ್ದು ಮಂದಿ ಪಾಂಡವರ ಹೆಂಡತಿ.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.
*** ದ್ರೌಪದಿಯ ಮುಡಿ ಕಟ್ಟಿದ ಭೀಮಸೇನ ***
ಅನ್ನೆಗಮ್ ಇತ್ತಲ್… ಮರುತ್ ಪುತ್ರನ್ ಧಾತ್ರೀಪತಿಗೆ ಅರಿಪಿ… ಏಕಚ್ಛತ್ರೀಕೃತ ಜಗತ್ ಅಹಿತ ಕ್ಷತ್ರಿಯಕುಳ ಕಾಳರಾತ್ರಿಯಮ್ ದ್ರೌಪದಿಯನ್… ಬಳಿಯಟ್ಟಿ ಕರೆಸಿ ತೋರಲ್ಕೆ…
ಭೀಮ: ಪಂಕೇಜವಕ್ತ್ರೇ… .ಇದಮ್ ನೋಡು… ಮುಳಿಸಿಮ್ ನಂಜಿಕ್ಕಿ ಕೊಲ್ವಂದಿನ ಆ ನೀಚನ… ಜತುಗೃಹದೊಳ್ ಸುಟ್ಟು ಕೊಲ್ವಂದಿನ ಆ ದ್ರೋಹನ… ಉರ್ವೀತಳಮಮ್ ಜೂದಾಡಿ ಗೆಲ್ವಂದಿನ ಆ ಸಂಚಳನ… ತನ್ನ ಸತ್ತ್ವೋಜ್ಜ್ವಳದಿಂದಮ್ ತಮ್ಮನಿಂದಮ್ ನಿಜಕಬರೀಬಂಧಮನ್ ತೆಗೆಯಿಸಿ ನಡೆದ ಆ ಚಂಡಾಲನ ಪಾತಕನ ಇರವನ್… ಅಗ್ನಿಜೇ… ಸಂಗರಾಧ್ವರದೊಳ್ ಅರಸನ್ ದೀಕ್ಷಿತನ್; ಇಲ್ಲಿ ಎಮ್ಮ ಈ ನಾಲ್ವರುಮ್ ಋತ್ವಿಜರುಮ್; ಮುರಹರನ್ ತಾನ್ ಉಪದೇಶಕನ್; ನೀನುಮ್ ಗೃಹೀತ ವ್ರತಾಚರಣ ವ್ಯಾಪಿಕೆಯುಮ್; ಭವತ್ ಪರಿಭವಮ್ ಸಂಚಾರಕಮ್; ಕೌರವೇಶ್ವರನ್ ಈತನ್ ಪಶುವಾಗೆ… ಇವನನ್ ಕೋಪಾಗ್ನಿಯಿಂದೆ ಬೇಳ್ದೆನ್ ಕೌರವ್ಯ ಕ್ರವ್ಯ ಹವ್ಯದಿಂದೆ ಎನ್ನ ಕೋಪ ಹವ್ಯವಹಮ್ ಸುಹುತಮ್… ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು.
(ಎಂದು ಭೀಮಸೇನನ್ ಯಾಜ್ಞಸೇನಿಗೆ ಆದಿತ್ಯನ ಸಾರಥಿ ಇರ್ಪಂತೆ ನಿಜೋರುಯುಗಳ ವಿಕಳನಾಗಿರ್ದ ದುರ್ಯೋಧನನನ್ ತೋರಿ.)
ಭೀಮ: ಪಗೆ ಮಡಿದುದು ಮುಡಿ.
(ಎನೆ ನಗೆಮೊಗದಿಮ್ ಪಾಂಚಾಲೆ… )
ದ್ರೌಪದಿ: ಸತ್ತಿಗ, ಪಲಕಾಲಮ್ ವಿಗತ ಅಭ್ಯಾಸದೆ ಆನ್ ಮರೆದೆನ್. ಪಗೆಯಮ್ ಮಡಿಯಿಸಿದ ನೀನೆ ಮುಡಿಯಲ್ವೇಳ್ಕುಮ್.
(ಎಂದು ತನ್ನ ಕಯ್ಯಮ್ ಪಿಡಿದು ತೆಗೆವುದುಮ್…)
ಭೀಮ: ಅಂತೆ ಗೆಯ್ವೆನ್.
(ಎಂದುಮ್ ಆಕೆಯ ವೇಣೀಸಂಹಾರಮಮ್ ತಾನೆ ಮಾಡಿ)
ಭೀಮ: ಕೃಷ್ಣೆ, ಇದರೊಳ್ ಮುನ್ನಮ್ ಮೂರ್ಧಾಭಿಷಕ್ತರ್… ಮಣಿಮಕುಟಧರರ್ … ಬಾಹಾಬಳಾಗ್ರ್ಯರ್ … ಕದನ ಪ್ರೋಚ್ಚಂಡ ದಂಡಕ್ರಮ ವಿಜಿತರಿಪು ಕ್ಷತ್ರಿಯರ್… ವೀರಲಕ್ಷ್ಮೀ ಸದನರ್… ಸೋಮಾಮೃತಾಸ್ವಾದನ ರುಚಿವದನರ್ ಅಳ್ಕಾಡಿದರ್. ನೋಡ, ಇದು ನಿನ್ನ ಈ ಕೇಶಪಾಶಮ್ ಕುರುಕುಲಪತಿಗೆ ಕೀನಾಶಪಾಶಮ್ ಆಯ್ತಲ್ತೆ.
(ಎಂದು ಪೊಗಳ್ದು ಮಾಂಗಲ್ಯ ಮಾಲಾಲಂಕೃತಮ್ ಮಾಡೆ… ಸ್ಮರಸಂಜೀವನೆ ಕೃಷ್ಣೆ ಪೂಮುಡಿದಳ್. ನೆಗಳ್ದ ಆ ಶೃಂಗಾರಮ್… ಆ ಭಾವಮ್… ಆ ಪರಿಜ… ಆ ವಿಭ್ರಮಮ್… ಆ ಬೆಡಂಗು… ಆ ಸೌಂದರ್ಯಮ್… ಆ ಬಿಂಕಮ್… ಆ ತರಳಾಪಾಂಗವಿಲಾಸಮ್… ಆ ಲಟಹಮ್… ಆ ಲಾವಣ್ಯಮ್… ಆ ಪುಣ್ಯಮ್… ಆ ದರಹಾಸ ಅಮೃತಮ್ ಚಾಳುಕ್ಯಕಂದರ್ಪನನ್… ಏನ್ ಮನಂಗೊಳಿಸಿತೋ… ಪನ್ನೆರಡು ಬರಿಸಮ್ ಅಲಸದೆ ಬನ್ನದ ಕೂಳುಂಡು ಬರ್ದ ಅಳಲ್ ಪಿಂಗಲೊಡಮ್, ತನ್ನಿಮ್ ಕಾಳಿಕೆ ಪಿಂಗಿದ ಪೊನ್ನಂತೆ ಆ ಕಾಂತೆ ಕಣ್ಗೆ ಕರಮ್ ಎಸೆದಿರ್ದಳ್… ಅಂತಿರ್ದ ಜಾತವೇದೋಜಾತೆಯ ಕೋಮಲ ಕರತಳ ಸ್ಪರ್ಶನದೊಳಮ್ ಕಟಾಕ್ಷಚ್ಛಟಾ ಆಚ್ಛೋಟನದೊಳಮ್ ಅಪಗತ ಸಮರ ಪರಿಶ್ರಮನಾಗಿ ಇರಿವ ಬೆಡಂಗನ್ ಗುರುಪಾದಾಂಬುರುಹಕ್ಕೆ ಪೊಡೆವಟ್ಟು… ).
ಭೀಮ: ಹರಿ ಕೇಳ್… ಧರ್ಮಜ ಕೇಳ್… ಸುರೇಂದ್ರಸುತ ಕೇಳ್… ಮಾದ್ರೀಸುತರ್ ಇರ್ಬರುಮ್ ಕೇಳಿಮ್… ಕೌರವಹತಿ ವ್ಯಾಪಾರದೊಳ್ ದ್ರೋಹದುರ್ಧರ ದುಶ್ಶಾಸನ ರಕ್ತಪಾನ ವಿಧಿ… ಪಾಂಚಾಲೀ ಕಚೋತ್ತಂಸನಮ್… ಕುರುರಾಜ ಊರು ಕಿರೀಟಭಂಗಮ್… ಇನಿತುಮ್ ಭೀಮಪ್ರತಿಜ್ಞಾಕ್ಷರಮ್ ಇಂತು ಎಯ್ದುದುದಲ್ತೆ.
(ಎಂದು ಭೇರಿಯಮ್ ತಾಟಿಸಿದಂತೆ ಗಂಭೀರಧ್ವನಿಯಿಮ್ ಗರ್ಜಿಸೆ… ಹರಿಯುಮ್ ಧರ್ಮಜನುಮ್ ಸುರೇಂದ್ರಸುತನುಮ್ ಮಾದ್ರೀಜರುಮ್ ಕೃಷ್ಣೆಯುಮ್ ಪರಮಾನಂದದೆ ಭೀಮನಾ ಆ ದೋರ್ದಂಡಮಮ್ ತೀರ್ಥಜಲದಿಮ್ ಕರ್ಚಿ, ಕಸ್ತೂರಿಕಾ ಚಂದನಾ ಅಗರು ಕಾಶ್ಮೀರಜ ಪಂಕದಿಮ್ ತೊಡೆದು, ಕೇಯೂರಾದಿಯಮ್ ಭೂಷಣೋತ್ಕರಮಮ್ ನೇರ್ಪಡೆ ಕಟ್ಟಿ ಪೂಜಿಸಿದರ್ … ಆ ಪ್ರಸ್ತಾವದೊಳ್ ಸಾಹಸಭೀಮನ್ ಗದಾದಂಡಮಮ್ ಉತ್ಸಾಹದಿಮ್ ತಾನೆ ಪೂಜಿಸಿದನ್. ಅಂತು ಭುಜಾದಂಡಮುಮನ್ ಗದಾದಂಡಮುಮನ್ ಪೂಜಿಸಿ… ವಿವಿಧ ಆತೋದ್ಯರವಮ್ ಪೊದಳ್ದು, ಅಖಿಳ ದಿಕ್ ಚಕ್ರಂಬರಮ್ ಕೂಡೆ ಪೊಣ್ಮುವಿನಮ್, ಕರ್ಣಾಮೃತಸ್ಯಂದಿ ಮಂಗಳಗೀತ ಮಂಗಳರವಮ್ ಉಣ್ಮುವಿನಮ್, ದೇವನಿನಾದಮ್ ಉಣ್ಮುವಿನಮ್ ಉತ್ಸವಬದ್ಧ ಸ್ವನ ರಮ್ಯ ತತ್ ಶಿಬಿರಮಮ್ ಚಾಳುಕ್ಯಕಂಠೀರವನ್ ಅತ್ಯುತ್ಸಾಹದಿಮ್ ಪೊಕ್ಕನ್.)
ಪದ ವಿಂಗಡಣೆ ಮತ್ತು ತಿರುಳು: ದ್ರೌಪದಿಯ ಮುಡಿ ಕಟ್ಟಿದ ಬೀಮಸೇನ
ಬಲರಾಮನು ದುರ್ಯೋದನನಿಗೆ ಉಂಟಾದ ದುರಂತವನ್ನು ಕಂಡು ಕುಪಿತನಾಗಿ, ಮನನೊಂದು ದ್ವಾರಾವತಿಯತ್ತ ನಡೆಯಲು
ಅನ್ನೆಗಮ್ ಇತ್ತಲ್=ಅದೇ ಸಮಯದಲ್ಲಿ ಇತ್ತ ವೈಶಂಪಾಯನ ಸರೋವರದ ತೀರದಲ್ಲಿ ದುರ್ಯೋದನನು ತೊಡೆಮುರಿದು ಬಿದ್ದು ನರಳುತ್ತಿರಲು;
ಮರುತ್= ವಾಯುದೇವ; ಮರುತ್ ಪುತ್ರ=ಬೀಮಸೇನ; ಧಾತ್ರೀಪತಿ=ಬೂಮಂಡಲದ ಒಡೆಯ/ದರ್ಮರಾಯ; ಅರಿಪಿ=ಹೇಳಿ;
ಮರುತ್ ಪುತ್ರನ್ ಧಾತ್ರೀಪತಿಗೆ ಅರಿಪಿ=ವಾಯುಪುತ್ರನಾದ ಬೀಮಸೇನನು ದರ್ಮರಾಯನಿಗೆ ದ್ರೌಪದಿಯನ್ನು ಇಲ್ಲಿಗೆ ಕರೆತರೆಸುವುದಾಗಿ ತಿಳಿಸಿ, ಅವನ ಅನುಮತಿಯನ್ನು ಪಡೆದುಕೊಂಡು;
ಏಕತ್+ ಛತ್ರೀಕೃತ+ ಜಗತ್+ಅಹಿತ; ಏಕಚ್ಛತ್ರೀಕೃತ=ಒಂದೇ ಬೆಳ್ಗೊಡೆಯ ಆಡಳಿತಕ್ಕೆ ಒಳಪಟ್ಟ ರಾಜ್ಯವನ್ನು ಆಳುತ್ತಿದ್ದ; ಅಹಿತ=ಹಗೆ/ಶತ್ರು; ಕ್ಷತ್ರಿಯ ಕುಳ=ಕ್ಷತ್ರಿಯ ವಂಶ; ಕಾಳರಾತ್ರಿ=ಪ್ರಳಯ ಕಾಲದ ರಾತ್ರಿ; ಬಳಿಯಟ್ಟಿ ಕರೆಸಿ=ಅವಳ ಬಳಿಗೆ ಒಬ್ಬ ದೂತನನ್ನು ಕಳುಹಿಸಿ ಕರೆಸಿಕೊಂಡು;
ಏಕಚ್ಛತ್ರೀಕೃತಜಗತ್ ಅಹಿತ ಕ್ಷತ್ರಿಯ ಕುಳ ಕಾಳರಾತ್ರಿಯಮ್ ದ್ರೌಪದಿಯನ್ ಬಳಿಯಟ್ಟಿ ಕರೆಸಿ ತೋರಲ್ಕೆ=ಒಂದೇ ಬೆಳ್ಗೊಡೆಯ ಆಡಳಿತಕ್ಕೆ ಒಳಪಟ್ಟ ಹಸ್ತಿನಾವತಿಯನ್ನು ಆಳುತ್ತಿದ್ದ ಹಗೆಯ ವಂಶವಾದ ಕುರುಕುಲಕ್ಕೆ ಪ್ರಳಯ ಕಾಲದ ರಾತ್ರಿಯಂತಿರುವ ದ್ರೌಪದಿಯನ್ನು ದೂತನೊಬ್ಬನನ್ನು ಕಳುಹಿಸಿ ಕರೆಯಿಸಿಕೊಂಡು, ಆಕೆಗೆ ತೊಡೆಮುರಿದು ಬಿದ್ದಿರುವ ದುರ್ಯೋದನನ್ನು ತೋರಿಸಿ, ನುಡಿಯತೊಡಗುತ್ತಾನೆ;
ಪಂಕೇಜ=ತಾವರೆ; ವಕ್ತ್ರ=ಮೊಗ; ಪಂಕೇಜವಕ್ತ್ರೆ=ತಾವರೆ ಮೊಗದವಳು; ಮುಳಿಸು=ಹೊಟ್ಟೆಕಿಚ್ಚು; ನಂಜು+ಇಕ್ಕಿ; ನಂಜು=ವಿಷ; ಕೊಲ್ವಂದಿನ=ಕೊಲ್ಲಲು ಸಂಚನ್ನು ಹೂಡಿದ;
ಪಂಕೇಜವಕ್ತ್ರೇ… ಇದಮ್ ನೋಡು… ಮುಳಿಸಿಮ್ ನಂಜಿಕ್ಕಿ ಕೊಲ್ವಂದಿನ ಆ ನೀಚನ=ತಾವರೆಮೊಗದ ದ್ರೌಪದಿಯೇ… ಇದನ್ನು ನೋಡು… ಚಿಕ್ಕಂದಿನಲ್ಲಿ ಹೊಟ್ಟೆಕಿಚ್ಚಿನಿಂದ ನನಗೆ ವಿಷದ ಲಡ್ಡುಗೆಯನ್ನು ತಿನ್ನಿಸಿ ಕೊಲ್ಲಲು ಸಂಚುಹೂಡಿದ್ದ ಆ ನೀಚನನ್ನು ನೋಡು;
ಜತುಗೃಹದ+ಒಳ್; ಜತುಗೃಹ=ಅರಗಿನ ಮನೆ;
ಜತುಗೃಹದೊಳ್ ಸುಟ್ಟು ಕೊಲ್ವಂದಿನ ಆ ದ್ರೋಹನ=ಅರಗಿನ ಮನೆಯಲ್ಲಿ ತಾಯಿ ಕುಂತಿಯೊಡನೆ ಅಯ್ದು ಮಂದಿ ಅಣ್ಣತಮ್ಮಂದಿರಾದ ನಮ್ಮೆಲ್ಲರನ್ನೂ ಸುಡಲು ಹೊಂಚುಹಾಕಿದ್ದ ಆ ದ್ರೋಹಿಯನ್ನು ನೋಡು;
ಉರ್ವೀತಳಮ್+ಅಮ್; ಉರ್ವೀತಳ=ಬೂಮಂಡಲ; ಜೂದಾಡು=ಜೂಜನ್ನು ಆಡು/ದ್ಯೂತವನ್ನಾಡು; ಸಂಚಳನ್=ದುಡುಕುತನವುಳ್ಳವನು/ಮುಂದೆ ಏನಾಗುವುದು ಎಂಬುದನ್ನು ಗಮನಿಸದೆ ಕೆಲಸಕ್ಕೆ ತೊಡಗುವವನು/ತಿಳಿಗೇಡಿ;
ಉರ್ವೀತಳಮಮ್ ಜೂದಾಡಿ ಗೆಲ್ವಂದಿನ ಆ ಸಂಚಳನ=ಮುಂದೆ ಎಂತಹ ದುರಂತ ಉಂಟಾಗುವುದೆಂಬುದನ್ನು ಗಮನಿಸದೆ, ನಮ್ಮ ಇಡೀ ರಾಜ್ಯಸಂಪತ್ತನ್ನು ಜೂಜಾಟದ ಮೂಲಕ ಗೆದ್ದ ಆ ತಿಳಿಗೇಡಿಯನ್ನು ನೋಡು;
ಸತ್ತ್ವ+ ಉಜ್ಜ್ವಳ+ ಇಂದಮ್; ಸತ್ತ್ವ=ಶಕ್ತಿ/ಬಲ; ಉಜ್ಜ್ವಳ=ಚೆನ್ನಾಗಿ ಉರಿಯುತ್ತಿರುವ; ನಿಜ=ನಿನ್ನ; ಕಬರೀಬಂಧಮ್+ಅನ್; ಕಬರೀ=ಹೆಣೆದು ಜಡೆಹಾಕಿದ ತಲೆಗೂದಲು; ಕಬರೀಬಂಧ=ಕಟ್ಟಿದ ಮುಡಿ; ಚಂಡಾಲ=ಕ್ರೂರಿ; ಪಾತಕ=ಕೆಟ್ಟ ಕೆಲಸವನ್ನು ಮಾಡಿದವನು/ಪಾಪಿ;
ತನ್ನ ಸತ್ತ್ವೋಜ್ಜ್ವಳದಿಂದಮ್ ತಮ್ಮನಿಂದಮ್ ನಿಜಕಬರೀಬಂಧಮನ್ ತೆಗೆಯಿಸಿ ನಡೆದ ಆ ಚಂಡಾಲನ ಪಾತಕನ ಇರವನ್=ತನ್ನಲ್ಲಿದ್ದ ರಾಜಬಲ ಮತ್ತು ತೋಳ್ಬಲದ ಅಹಂಕಾರದಿಂದ ಮೆರೆಯುತ್ತ… ತಮ್ಮನಾದ ದುಶ್ಶಾಸನನಿಂದ ನಿನ್ನನ್ನು ರಾಜಸಬೆಗೆ ಎಳೆದು ತರಿಸುವಾಗ… ನಿನ್ನ ಕಟ್ಟಿದ ಮುಡಿಯನ್ನು ತೆಗೆಯಿಸಿ ಅಪಮಾನ ಮಾಡಿದ ಕ್ರೂರಿಯಾದ ಆ ಪಾಪಿಗೆ ಬಂದಿರುವ ಹೀನಸ್ಥಿತಿಯನ್ನು ನೋಡು;
ಅಗ್ನಿಜೆ=ಯಾಗದ ಬೆಂಕಿಯ ಕುಂಡದಲ್ಲಿ ಹುಟ್ಟಿದವಳು/ದ್ರೌಪದಿ; ಸಂಗರ+ಅಧ್ವರದ+ಒಳ್; ಸಂಗರ=ಯುದ್ದ/ಕಾಳೆಗ; ಅಧ್ವರ=ಯಾಗ; ಅರಸ=ದರ್ಮರಾಯ; ದೀಕ್ಷಿತ=ಯಾಗವನ್ನು ಮಾಡುವವನು;
ಅಗ್ನಿಜೇ… ಸಂಗರಾಧ್ವರದೊಳ್ ಅರಸನ್ ದೀಕ್ಷಿತನ್=ದ್ರೌಪದಿಯೇ ಕೇಳು… ಈ ಕುರುಕ್ಶೇತ್ರ ಯುದ್ದವೆಂಬ ಯಾಗವನ್ನು ದರ್ಮರಾಯನು ಕಯ್ಗೊಂಡಿದ್ದಾನೆ;
ಋತ್ವಿಜ=ಯಾಗದ ಪುರೋಹಿತ;
ಇಲ್ಲಿ ಎಮ್ಮ ಈ ನಾಲ್ವರುಮ್ ಋತ್ವಿಜರುಮ್=ಈ ಯಾಗದ ಆಚರಣೆಗಳನ್ನು ಮಾಡುವುದಕ್ಕಾಗಿ ದರ್ಮರಾಯನ ತಮ್ಮಂದಿರಾದ ನಾವು ನಾಲ್ಕು ಮಂದಿ ಪುರೋಹಿತರಾಗಿದ್ದೇವೆ;
ಮುರಹರ=ಮುರನೆಂಬ ರಕ್ಕಸನನ್ನು ಕೊಂದವನು/ಕ್ರಿಶ್ಣ; ಉಪದೇಶಕ=ಮಂತ್ರವನ್ನು ಹೇಳಿಕೊಡುವವನು/ತಿಳುವಳಿಕೆಯನ್ನು ನೀಡುವವನು;
ಮುರಹರನ್ ತಾನ್ ಉಪದೇಶಕನ್=ಕೃಷ್ಣನು ಮಂತ್ರಗಳನ್ನು ಹೇಳಿಕೊಡುತ್ತಿದ್ದಾನೆ;
ಗೃಹೀತ+ವ್ರತ+ಆಚರಣ; ಗೃಹೀತ=ಸ್ವೀಕರಿಸಿದ/ಕಯ್ಗೊಂಡ; ವ್ಯಾಪಿಕೆ+ಉಮ್; ವ್ಯಾಪಿಕೆ=ಆಚರಿಸುವವಳು;
ನೀನುಮ್ ಗೃಹೀತ ವ್ರತಾಚರಣ ವ್ಯಾಪಿಕೆಯುಮ್= ನೀನೂ ಕೂಡ ಈ ಕುರುಕ್ಶೇತ್ರ ಯುದ್ದದ ಯಾಗದ ವ್ರತಾಚರಣೆಯನ್ನು ಕಯ್ಗೊಂಡು ಆಚರಿಸುತ್ತಿದ್ದೀಯೆ;
ಭವತ್=ನಿನ್ನ; ಪರಿಭವ=ಅಪಮಾನ; ಸಂಚಾರಕ=ಮುಂದಾಳು/ಮೂಲ ಪ್ರೇರಣೆ;
ಭವತ್ ಪರಿಭವಮ್ ಸಂಚಾರಕಮ್=ಅಂದು ದುರ್ಯೋದನನ ಆದೇಶದಂತೆ ದುಶ್ಶಾಸನನು ನಿನ್ನನ್ನು ರಾಜಸಬೆಗೆ ಮುಡಿಬಿಚ್ಚಿಹೋಗುವಂತೆ ಎಳೆತಂದು, ಸೀರೆಯನ್ನು ಸುಲಿದು ಮಾಡಿದ ಅಪಮಾನವೇ ಕುರುಕ್ಶೇತ್ರ ಯುದ್ದವೆಂಬ ಯಾಗಕ್ಕೆ ಮೂಲಪ್ರೇರಣೆಯಾಗಿದೆ; ಪಶು=ಯಾಗದಲ್ಲಿ ಬಲಿಕೊಡುವ ಪ್ರಾಣಿ;
ಕೌರವೇಶ್ವರನ್ ಈತನ್ ಪಶುವಾಗೆ=ದುರ್ಯೋದನನು ಈ ಯುದ್ದವೆಂಬ ಯಾಗದಲ್ಲಿ ಬಲಿಪಶುವಾಗಿದ್ದಾನೆ; ಬೇಳ್=ಹವಿಸ್ಸನ್ನು ಅರ್ಪಿಸು/ಯಾಗದ ಬೆಂಕಿಕುಂಡಕ್ಕೆ ವಸ್ತುಗಳನ್ನು ಮತ್ತು ಬಲಿ ಕೊಡುವ ಪ್ರಾಣಿಯನ್ನು ಹಾಕುವುದು;
ಇವನನ್ ಕೋಪಾಗ್ನಿಯಿಂದೆ ಬೇಳ್ದೆನ್=ಈ ದುರ್ಯೋದನನ್ನು ನನ್ನ ಕೋಪವೆಂಬ ಬೆಂಕಿಗೆ ಆಹುತಿ ಕೊಡುತ್ತಿದ್ದೇನೆ;
ಕ್ರವ್ಯ=ಮಾಂಸ/ಹಸಿಯಾದ ಮಾಂಸ; ಹವ್ಯ=ಹವಿಸ್ಸು/ಯಾಗದ ಬೆಂಕಿಯ ಕುಂಡಕ್ಕೆ ಹಾಕುವ ವಸ್ತುಗಳು/ಯಾಗದ ಮೂಲಕ ದೇವತೆಗಳಿಗೆ ಕೊಡುವ ಆಹುತಿ; ಹವ್ಯವಹ=ಅಗ್ನಿದೇವ/ಹವಿಸ್ಸನ್ನು ದೇವತೆಗಳಿಗೆ ತಲುಪಿಸುವವನು; ಸುಹುತ=ಚೆನ್ನಾಗಿ ಬೆಂಕಿಯಲ್ಲಿ ಅರ್ಪಿತವಾಗುವುದು/ಪೂರ್ಣಾಹುತಿಯಾಗುವುದು ;
ಕೌರವ್ಯ ಕ್ರವ್ಯ ಹವ್ಯದಿಂದೆ ಎನ್ನ ಕೋಪ ಹವ್ಯವಹಮ್ ಸುಹುತಮ್=ದುರ್ಯೋದನನ ಹಸಿಯಾದ ಮಾಂಸವನ್ನು ಕುರುಕ್ಶೇತ್ರ ಯುದ್ದವೆಂಬ ಯಾಗದ ಬೆಂಕಿಯಲ್ಲಿ ಬಲಿಕೊಟ್ಟಿದ್ದರಿಂದ ನನ್ನ ಕೋಪಾಗ್ನಿಯು ತಣಿಯಿತು;
ದುರ್ವಹ=ತಡೆಯಲಾಗದ; ಪ್ರಹರಣ=ಹೊಡೆತ/ಹೋರಾಟ; ಲೋಹಿತ=ರಕ್ತ; ಅವಭೃಥಸವನ= ಯಾಗದ ಆಚರಣೆಯು ಪಶುಬಲಿಯಿಂದ ಮುಕ್ತಾಯಗೊಂಡಾಗ ಮಾಡುವ ಸ್ನಾನ;
ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು ಎಂದು=ಯಾರಿಂದಲೂ ಸೋಲನ್ನಪ್ಪದ ಕಾದಾಳುವಾಗಿದ್ದ ದುರ್ಯೋದನನ ದೇಹಕ್ಕೆ ಹೊಡೆದ ಗದಾ ಪೆಟ್ಟಿನಿಂದ ಚಿಮ್ಮಿದ ನೆತ್ತರಿನಿಂದ ನನ್ನ ದೇಹಕ್ಕೆ ಯಾಗದ ಕೊನೆಯಲ್ಲಿ ಮಾಡಬೇಕಾಗಿದ್ದ ಸ್ನಾನವಾಯಿತು ಎಂದು ನುಡಿದು;
ಯಾಜ್ಞಸೇನಿ=ದ್ರೌಪದಿ; ಆದಿತ್ಯ=ಸೂರ್ಯ; ಆದಿತ್ಯನ ಸಾರಥಿ=ಸೂರ್ಯನ ತೇರನ್ನು ಮುನ್ನಡೆಸುವ ಅರುಣದೇವ. ಈತನು ನಡೆಯಲಾಗದ ಹೆಳವನಾಗಿದ್ದನು ಎಂಬ ಪುರಾಣ ಕಲ್ಪನೆಯಿದೆ; ನಿಜ+ಊರು+ಯುಗಳ; ನಿಜ=ತನ್ನ; ಊರು=ತೊಡೆ; ಯುಗಳ=ಜೋಡಿ; ವಿಕಲ=ಊನವಾದ/ಅಂಗಹೀನವಾದ;
ಭೀಮಸೇನನ್ ಯಾಜ್ಞಸೇನಿಗೆ ಆದಿತ್ಯನ ಸಾರಥಿ ಇರ್ಪಂತೆ ನಿಜೋರುಯುಗಳ ವಿಕಳನಾಗಿರ್ದ ದುರ್ಯೋಧನನನ್ ತೋರಿ=ಬೀಮಸೇನನು ದ್ರೌಪದಿಗೆ ಸೂರ್ಯನ ಸಾರಥಿಯಾದ ಅರುಣದೇವನಂತೆ ನಡೆಯಲಾಗದೆ ತನ್ನೆರಡು ತೊಡೆಗಳನ್ನು ಮುರಿಸಿಕೊಂಡು ಅಂಗಹೀನನಾಗಿ ನೆಲದ ಮೇಲೆ ಉರುಳಿಬಿದ್ದಿರುವ ದುರ್ಯೋದನನ್ನು ತೋರಿಸಿ;
ಮಡಿ=ಕೊನೆಯಾಗು/ಮುಗಿ;
ಪಗೆ ಮಡಿದುದು ಮುಡಿ ಎನೆ=ಹಗೆತನ ಕೊನೆಗೊಂಡಿತು. ಈಗ ಮುಡಿಯನ್ನು ಕಟ್ಟಿಕೊ ಎಂದು ದ್ರೌಪದಿಗೆ ಬೀಮಸೇನನು ಹೇಳಲು;
ಪಾಂಚಾಲೆ=ಪಾಂಚಾಲ ದೇಶದ ರಾಜ ದ್ರುಪದನ ಮಗಳು/ದ್ರೌಪದಿ;
ನಗೆಮೊಗದಿಮ್ ಪಾಂಚಾಲೆ=ನಗೆಮೊಗದಿಂದ ದ್ರೌಪದಿಯು;
ಸತ್ತಿಗ=ಸತ್ಯಾಶ್ರಯ ರಾಜ/ಭೀಮಸೇನ; ಪಲಕಾಲಮ್=ಹಲವು ವರುಶಗಳಿಂದ; ವಿಗತ=ತಪ್ಪಿಹೋದ; ಆನ್=ನಾನು;
ಸತ್ತಿಗ, ಪಲಕಾಲಮ್ ವಿಗತ ಅಭ್ಯಾಸದೆ ಆನ್ ಮರೆದೆನ್=ಸತ್ತಿಗನೇ… ಹಲವು ವರುಶಗಳ ಅರಣ್ಯವಾಸ ಮತ್ತು ಅಜ್ನಾತವಾಸದ ಸಮಯದಲ್ಲಿ ಮುಡಿಯನ್ನು ಕಟ್ಟಿಕೊಳ್ಳದೆ ಇದ್ದುದರಿಂದ, ಮುಡಿಯನ್ನು ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನೇ ಮರೆತಿದ್ದೇನೆ;
ಪಗೆಯಮ್ ಮಡಿಯಿಸಿದ ನೀನೆ ಮುಡಿಯಲ್ವೇಳ್ಕುಮ್ ಎಂದು ತನ್ನ ಕಯ್ಯಮ್ ಪಿಡಿದು ತೆಗೆವುದುಮ್=ಹಗೆಯನ್ನು ಕೊಂದ ನೀನೇ ನನಗೆ ಮುಡಿಯನ್ನು ಕಟ್ಟಬೇಕು ಎಂದು ನುಡಿದು ಬೀಮಸೇನನ ಕಯ್ಯನ್ನು ಹಿಡಿದು ತನ್ನ ತುರುಬಿನತ್ತ ಎಳೆದುಕೊಳ್ಳಲು;
ವೇಣಿ= ಜಡೆ/ ತುರುಬು/ ಕೂದಲಿನ ಗಂಟು; ಸಂಹಾರ=ಕೂಡಿಸಿ ಕಟ್ಟುವುದು; ವೇಣೀಸಂಹಾರ=ತಲೆಗೂದಲನ್ನು ಹೆಣೆದು ಕಟ್ಟುವುದು;
ಅಂತೆ ಗೆಯ್ವೆನ್ ಎಂದುಮ್ ಆಕೆಯ ವೇಣೀಸಂಹಾರಮಮ್ ತಾನೆ ಮಾಡಿ=ನೀನು ಹೇಳಿದಂತೆಯೇ ಮಾಡುತ್ತೇನೆ ಎಂದು ನುಡಿದ ಬೀಮಸೇನನು ದ್ರೌಪದಿಯ ಹರಡಿಕೊಂಡಿದ್ದ ತಲೆಗೂದಲನ್ನು ಒಟ್ಟುಗೂಡಿಸಿ ಹೆಣೆದು ಮುಡಿಯನ್ನು ತಾನೆ ಕಟ್ಟಿಬಿಗಿಯುತ್ತ, ಈ ರೀತಿ ನುಡಿಯುತ್ತಾನೆ;
ಕೃಷ್ಣೆ=ದ್ರೌಪದಿ; ಮುನ್ನಮ್=ಮೊದಲು; ಇದರಲ್ಲಿ=ಈ ನಿನ್ನ ಮುಡಿಯಲ್ಲಿ; ಮೂರ್ಧ+ಅಭಿಷಕ್ತರ್; ಮೂರ್ಧ=ತಲೆ; ಅಭಿಷಕ್ತರ್=ರಾಜಪಟ್ಟಕ್ಕೆ ಏರುವಾಗ ಮಂಗಳಸ್ನಾನವನ್ನು ಮಾಡಿದವರು; ಮೂರ್ಧಾಭಿಷೇಕ=ರಾಜನಾಗುವ ವ್ಯಕ್ತಿಗೆ ರಾಜ್ಯಬಾರದ ಅದಿಕಾರವನ್ನು ವಹಿಸಿಕೊಳ್ಳುವಾಗ ಮಂಗಳ ಸ್ನಾನವನ್ನು ಮಾಡಿಸಿ, ತಲೆಗೆ ಕಿರೀಟವನ್ನು ತೊಡಿಸಿ ಪಟ್ಟವನ್ನು ಕಟ್ಟುವುದು; ಮೂರ್ಧಾಭಿಷಕ್ತರ್=ರಾಜರು; ಮಣಿ=ಮುತ್ತು, ರತ್ನ, ವಜ್ರ ಮುಂತಾದ ಬೆಲೆಬಾಳುವ ಹರಳುಗಳು; ಮಕುಟ=ಕಿರೀಟ; ಮಣಿಮಕುಟಧರರ್=ಮುತ್ತು/ರತ್ನ/ವಜ್ರದ ಹರಳುಗಳಿಂದ ಕೂಡಿದ ಕಿರೀಟವನ್ನು ತೊಟ್ಟಿರುವ ರಾಜರು; ಬಾಹಾಬಳ+ಅಗ್ರ್ಯರ್; ಬಾಹಾಬಳ=ತೋಳ್ಬಲ/ಬಾಹುಬಲ; ಅಗ್ರ=ಅತಿಶಯವಾದ/ಹೆಚ್ಚಾದ/ಅತ್ಯುತ್ತಮವಾದ; ಬಾಹಾಬಳಾಗ್ರ್ಯರ್=ಅತಿಶಯವಾದ ತೋಳ್ಬಲವುಳ್ಳವರು; ಕದನ=ಯುದ್ದ/ಕಾಳೆಗ; ಪ್ರೋಚ್ಚಂಡ=ಅತಿ ಬಯಾನಕವಾದ/ಹೆಚ್ಚಾದ; ದಂಡಕ್ರಮ=ಆಯುದಗಳನ್ನು ಪ್ರಯೋಗಿಸುವುದು; ವಿಜಿತ=ಗೆಲ್ಲಲ್ಪಟ್ಟ/ಜಯಿಸಲ್ಪಟ್ಟ; ರಿಪು=ಹಗೆ/ಶತ್ರು; ವಿಜಿತರಿಪು=ಹಗೆಗಳ ಮೇಲೆ ಜಯವನ್ನು ಪಡೆದವರು; ಸದನ=ಮನೆ/ನಿವಾಸ; ಸೋಮ+ಅಮೃತ+ ಆಸ್ವಾದನ; ಸೋಮ=ಒಂದು ಬಗೆಯ ಸಸ್ಯ; ಅಮೃತ=ಒಂದು ಬಗೆಯ ಪಾನೀಯ; ಸೋಮಾಮೃತ=ಸೋಮವೆಂಬ ಬಳ್ಳಿಯಿಂದ ತಯಾರಿಸಿದ ರಸ; ಇದು ದೇವಲೋಕದಲ್ಲಿ ದೇವತೆಗಳ ಪಾನೀಯವೆಂದು ಹೆಸರನ್ನು ಪಡೆದಿದೆ; ಆಸ್ವಾದನ=ಸವಿಯುವುದು; ವದನ=ಬಾಯಿ; ರುಚಿವದನರ್=ಬಾಯ್ ರುಚಿಯುಳ್ಳವರು; ಅಳ್ಕಾಡು=ಪೂರ್ತಿ ನಾಶವಾಗು/ಲಯಗೊಳಿಸು;
ಕೃಷ್ಣೆ, ಇದರೊಳ್ ಮುನ್ನಮ್ ಮೂರ್ಧಾಭಿಷಕ್ತರ್ … ಮಣಿಮಕುಟಧರರ್… ಬಾಹಾಬಳಾಗ್ರ್ಯರ್… ಕದನ ಪ್ರೋಚ್ಚಂಡ ದಂಡಕ್ರಮ ವಿಜಿತರಿಪು ಕ್ಷತ್ರಿಯರ್… ವೀರಲಕ್ಷ್ಮೀ ಸದನರ್… ಸೋಮಾಮೃತಾಸ್ವಾದನ ರುಚಿವದನರ್ ಅಳ್ಕಾಡಿದರ್=ದ್ರೌಪದಿಯೇ… ಈ ನಿನ್ನ ಕೆದರಿದ ಮುಡಿಯ ಅಪಮಾನದಿಂದಾಗಿ ನಡೆದ ಕುರುಕ್ಶೇತ್ರ ಯುದ್ದದಲ್ಲಿ ಈ ಮೊದಲು ತಲೆಗೆ ಮಂಗಳಸ್ನಾನವನ್ನು ಮಾಡಿಕೊಂಡು ರಾಜಪಟ್ಟಕ್ಕೇರಿದವರು… ರತ್ನ ಮುತ್ತು ವಜ್ರಗಳಿಂದ ಕಂಗೊಳಿಸುತ್ತಿದ್ದ ಕಿರೀಟದಾರಿಗಳು… ಅತಿಶಯವಾದ ತೋಳ್ಬಲವುಳ್ಳ ಗಂಡುಗಲಿಗಳು… ರಣರಂಗದಲ್ಲಿ ಬಯಾನಕವಾದ ಆಯುದಗಳನ್ನು ಪ್ರಯೋಗಿಸಿ ಶತ್ರುಗಳನ್ನು ಸದೆಬಡಿದ ಕ್ಶತ್ರಿಯರು… ವೀರಲಕ್ಶ್ಮಿಗೆ ನೆಲೆಯಾಗಿದ್ದವರು… ದೇವತೆಗಳ ಪಾನೀಯವಾದ ಸೋಮರಸದ ಸವಿದ ಬಾಯ್ ರುಚಿಯುಳ್ಳವರು… ಇವರೆಲ್ಲರೂ ಕುರುಕ್ಶೇತ್ರ ಕಾಳೆಗದಲ್ಲಿ ಲಯವಾಗಿ ಹೋದರು; ಕೇಶ=ತಲೆಗೂದಲು; ಪಾಶ=ಕೊರಳಿಗೆ ಹಾಕುವ ನೇಣಿನ ಕುಣಿಕೆ; ಕೀನಾಶ=ಯಮ;
ನೋಡ ಇದು ನಿನ್ನ ಈ ಕೇಶಪಾಶಮ್ ಕುರುಕುಲಪತಿಗೆ ಕೀನಾಶಪಾಶಮ್ ಆಯ್ತಲ್ತೆ ಎಂದು ಪೊಗಳ್ದು=ನೋಡುವಂತಹಳಾಗು ದ್ರೌಪದಿ… ಈ ನಿನ್ನ ಬಿಚ್ಚಿದ ತಲೆಗೂದಲೆಂಬ ನೇಣಿನ ಕುಣಿಕೆಯು ಕುರುವಂಶದ ರಾಜನಾದ ದುರ್ಯೋದನನ ಕೊರಳಿಗೆ ಯಮಪಾಶವಾಯಿತಲ್ಲವೇ ಎಂದು ಆಕೆಯನ್ನು ಹೊಗಳಿ ಕೊಂಡಾಡುತ್ತ;
ಮಾಂಗಲ್ಯ=ಮಂಗಳಕರವಾದ/ಒಳಿತನ್ನುಂಟುಮಾಡುವ;
ಮಾಂಗಲ್ಯ ಮಾಲಾಲಂಕೃತಮ್ ಮಾಡೆ=ದ್ರೌಪದಿಯ ಮುಡಿಯನ್ನು ಹೆಣೆದು ಕಟ್ಟಿ, ಆಕೆಯ ಮುಡಿಯನ್ನು ಮಂಗಳಕರವಾದ ಹೂಮಾಲೆಯಿಂದ ಸಿಂಗರಿಸಲು;
ಸ್ಮರ=ಕಾಮದೇವ/ಮದನ; ಸಂಜೀವನೆ=ಚೈತನ್ಯವನ್ನುಂಟುಮಾಡುವವಳು/ಉದ್ದೀಪನಗೊಳಿಸುವವಳು;
ಸ್ಮರಸಂಜೀವನೆ ಕೃಷ್ಣೆ ಪೂಮುಡಿದಳ್=ಕಾಮದ ಒಳಮಿಡಿತಗಳನ್ನು ಉದ್ದೀಪನಗೊಳಿಸುವಂತಿರುವ ದ್ರೌಪದಿಯು ಹೂವಿನಿಂದ ಸಿಂಗಾರಗೊಂಡಳು;
ನೆಗಳ್=ಮೂಡು/ಉಂಟಾಗು/ಮಯ್ ತಳೆ; ಪರಿಜ=ರೂಪ; ವಿಭ್ರಮ=ಅಂದ/ಲಾವಣ್ಯ; ಬೆಡಂಗು=ಒಯ್ಯಾರ; ಬಿಂಕ=ಗತ್ತು; ತರಳ+ಅಪಾಂಗ+ವಿಲಾಸಮ್; ತರಳ=ಹೊಳೆಯುವ/ಚಂಚಲವಾದ; ಅಪಾಂಗ=ಕಡೆಗಣ್ಣು; ವಿಲಾಸ=ಉಲ್ಲಾಸ; ಲಟಹ=ಸೊಗಸು; ದರಹಾಸ=ನಸು ನಗೆ/ಮಂದಹಾಸ; ಕಂದರ್ಪ=ಕಾಮದೇವ/ಮದನ; ಚಾಳುಕ್ಯಕಂದರ್ಪ=ಸತ್ಯಾಶ್ರಯ ರಾಜನಿಗಿದ್ದ ಬಿರುದು. ಭೀಮಸೇನನನ್ನು ಗದಾಯುದ್ಧ ಕಾವ್ಯದಲ್ಲಿ ರನ್ನ ಕವಿಯು ಸತ್ಯಾಶ್ರಯ ಚಕ್ರವರ್ತಿಯ ಹೆಸರಿನೊಡನೆ ಸಮೀಕರಿಸಿದ್ದಾನೆ; ಏನ್=ಯಾವ ಬಗೆಯಲ್ಲಿ; ಮನಂಗೊಳಿಸು=ಮನಸ್ಸನ್ನು ಸೆಳೆದುಕೊಳ್ಳುವುದು;
ನೆಗಳ್ದ ಆ ಶೃಂಗಾರಮ್… ಆ ಭಾವಮ್… ಆ ಪರಿಜ… ಆ ವಿಭ್ರಮಮ್… ಆ ಬೆಡಂಗು… ಆ ಸೌಂದರ್ಯಮ್… ಆ ಬಿಂಕಮ್… ಆ ತರಳಾಪಾಂಗ ವಿಲಾಸಮ್… ಆ ಲಟಹಮ್… ಆ ಲಾವಣ್ಯಮ್… ಆ ಪುಣ್ಯಮ್… ಆ ದರಹಾಸ ಅಮೃತಮ್ ಚಾಳುಕ್ಯಕಂದರ್ಪನನ್… ಏನ್ ಮನಂಗೊಳಿಸಿತೋ=ಕಟ್ಟಿದ ಮುಡಿಯೊಡನೆ ಹೂ ಮಾಲೆಯಿಂದ ಅಲಂಕಾರಗೊಂಡ ದ್ರೌಪದಿಯ ಆ ಸಿಂಗಾರ… ಆ ಬಾವ… ಆ ರೂಪ… ಆ ಬೆಡಗು… ಆ ಸೌಂದರ್ಯ… ಆ ಬಿಂಕ… ಆ ಚಂಚಲವಾದ ಕಣ್ಣಂಚಿನ ನೋಟದ ಸೊಬಗು… ಆ ಸೊಗಸು… ಆ ಲಾವಣ್ಯ… ಆ ಪುಣ್ಯ… ಆ ನಸುನಗೆಯ ಮನೋಹರತೆಯು ಬೀಮಸೇನನನ್ನು ಯಾವ ಯಾವ ರೀತಿಗಳಲ್ಲಿ ಮನಸೆಳೆಯಿತೋ ಎಂಬುದು ಕಲ್ಪನಾತೀತವಾದುದು;
ಬರಿಸ=ವರುಶ; ಅಲಸು=ದಣಿ/ಆಯಾಸಗೊಳ್ಳು/ ಜುಗುಪ್ಸೆ ಹೊಂದು; ಬನ್ನ=ಅಪಮಾನ/ಸಂಕಟ/ಸೋಲು; ಕೂಳ್+ಉಂಡು; ಕೂಳ್= ಅನ್ನ/ಆಹಾರ; ಬರ್ದು=ಬಾಡು/ನವೆ/ಕೊರಗು; ಅಳಲ್=ಶೋಕ/ ಕಳವಳ/ವೇದನೆ; ಪಿಂಗು=ಕಡಿಮೆಯಾಗು/ತಗ್ಗು;
ಪನ್ನೆರಡು ಬರಿಸಮ್ ಅಲಸದೆ ಬನ್ನದ ಕೂಳುಂಡು ಬರ್ದ ಅಳಲ್ ಪಿಂಗಲೊಡಮ್=ಹನ್ನೆರಡು ವರುಶಗಳ ಕಾಲ ದಣಿದು ಕುಸಿಯದೆ… ಅಪಮಾನದ ಕೂಳನ್ನು ಉಂಡು ನವೆದ ಸಂಕಟವು ತೀರುತ್ತಿದ್ದಂತೆಯೇ;
ಕಾಳಿಕೆ=ಕಿಲುಬು; ಎಸೆ=ಕಂಗೊಳಿಸು/ಒಪ್ಪು;
ತನ್ನಿಮ್ ಕಾಳಿಕೆ ಪಿಂಗಿದ ಪೊನ್ನಂತೆ ಆ ಕಾಂತೆ ಕಣ್ಗೆ ಕರಮ್ ಎಸೆದಿರ್ದಳ್=ತನ್ನಲ್ಲಿ ಸೇರಿಕೊಂಡಿದ್ದ ಕಿಲುಬನ್ನು ಕಳೆದುಕೊಂಡು ಶುದ್ಧವಾದ ಅಪ್ಪಟ ಚಿನ್ನದಂತೆ ಆ ದ್ರೌಪದಿಯು ಬೀಮಸೇನನ ಕಣ್ಣಿಗೆ ಸೊಗಸಾಗಿ ಕಂಗೊಳಿಸಿದಳು;
ಅಂತು+ಇರ್ದ; ಜಾತವೇದ=ಬೆಂಕಿ; ಜಾತವೇದೋಜಾತೆ=ಯಾಗದ ಬೆಂಕಿಯ ಕುಂಡದಿಂದ ಹುಟ್ಟಿಬಂದವಳು/ದ್ರೌಪದಿ; ಈಕೆಯ ತಂದೆಯಾದ ದ್ರುಪದ ರಾಜನು ಮಾಡಿದ ಯಾಗ ಕುಂಡದಿಂದ ಈಕೆಯು ಹುಟ್ಟಿ ಬಂದಳು ಎಂಬ ದಂತ ಕತೆಯಿದೆ; ಕರತಳ=ಅಂಗಯ್; ಕಟಾಕ್ಷತ್+ಛಟ; ಕಟಾಕ್ಷ=ಕುಡಿನೋಟ/ಕಡೆಗಣ್ಣಿನ ನೋಟ; ಛಟ=ಕಾಂತಿ; ಕಟಾಕ್ಷಚ್ಛಟ=ಕಡೆಗಣ್ಣಿನ ಕಾಂತಿ/ಕಣ್ಣಂಚಿನ ನೋಟದ ಕಾಂತಿ; ಆಚ್ಛೋಟನ=ಹುಡುಕಾಟ/ಅರಸುವಿಕೆ; ಅಪಗತ=ಬಿಟ್ಟುಹೋದ/ತೊಲಗಿದ; ಸಮರ=ಯುದ್ದ/ಕಾಳೆಗ; ಗುರುಪಾದ+ಅಂಬುರುಹಕ್ಕೆ; ಗುರು= ಮಾರ್ಗದರ್ಶಕನಾದ ಕೃಷ್ಣ; ಅಂಬುರುಹ= ತಾವರೆ;
ಅಂತಿರ್ದ ಜಾತವೇದೋಜಾತೆಯ ಕೋಮಲ ಕರತಳ ಸ್ಪರ್ಶನದೊಳಮ್ … ಕಟಾಕ್ಷಚ್ಛಟಾ ಆಚ್ಛೋಟನದೊಳಮ್… ಅಪಗತ ಸಮರ ಪರಿಶ್ರಮನಾಗಿ ಇರಿವ ಬೆಡಂಗನ್ ಗುರುಪಾದಾಂಬುರುಹಕ್ಕೆ ಪೊಡೆವಟ್ಟು=ಅಂತು ಮನೋಹರವಾದ ಅಂದಚೆಂದದಿಂದ ಕಂಗೊಳಿಸುತ್ತಿದ್ದ ದ್ರೌಪದಿಯ ಕೋಮಲವಾದ ಅಂಗಯ್ ಸೋಂಕುವಿಕೆಯಿಂದ… ಕಣ್ಣಂಚಿನ ಕಾಂತಿಯುತವಾದ ಮೋಹಕ ನೋಟಕ್ಕೆ ಪಾತ್ರನಾಗಿ… ಯುದ್ದದಿಂದ ಉಂಟಾಗಿದ್ದ ಆಯಾಸವೆಲ್ಲವೂ ಪರಿಹಾರಗೊಂಡವನಾದ ಇರಿವ ಬೆಡಂಗ ಭೀಮಸೇನನು ಗುರುವಾದ ಕ್ರಿಶ್ಣನ ಪಾದಕಮಲಗಳಿಗೆ ಅಡ್ಡಬಿದ್ದು ನಮಸ್ಕರಿಸಿ;
ಸುರೇಂದ್ರಸುತ=ದೇವೇಂದ್ರನ ಮಗ/ಅರ್ಜುನ;
ಹರಿ ಕೇಳ್… ಧರ್ಮಜ ಕೇಳ್… ಸುರೇಂದ್ರಸುತ ಕೇಳ್… ಮಾದ್ರೀಸುತರ್ ಇರ್ಬರುಮ್ ಕೇಳಿಮ್=ಕ್ರಶ್ಣನೇ ಕೇಳು… ದರ್ಮರಾಯ ಕೇಳು… ಅರ್ಜುನ ಕೇಳು… ಮಾದ್ರಿಯ ಮಕ್ಕಳಾದ ನಕುಲ ಸಹದೇವರೇ ನೀವಿಬ್ಬರೂ ಕೇಳಿರಿ;
ಹತಿ=ಸಂಹಾರ/ಕೊಲ್ಲು; ವ್ಯಾಪಾರ=ಉದ್ಯೋಗ; ದುರ್ಧರ=ಉಗ್ರವಾದ/ಅಪಾಯಕಾರಿಯಾದ; ದ್ರೋಹದುರ್ಧರ= ಮಹಾದ್ರೋಹಿಯಾದ; ವಿಧಿ=ಕೆಲಸ/ನೇಮ; ಪಾಂಚಾಲಿ=ದ್ರೌಪದಿ/ಪಾಂಚಾಲ ರಾಜನ ಮಗಳು; ಕಚ+ಉತ್ತಂಸನ್+ಅಮ್; ಕಚ=ತಲೆಗೂದಲು/ಮುಡಿ; ಕಚೋತ್ತಂಸನಮ್=ಬಿಚ್ಚಿದ್ದ ಮುಡಿಯನ್ನು ಮತ್ತೆ ಕಟ್ಟುವ ಕೆಲಸ; ಊರು=ತೊಡೆ; ತಾಟಿಸು=ಹೊಡೆ/ಬಡಿ;
ಕೌರವಹತಿ ವ್ಯಾಪಾರದೊಳ್ ದ್ರೋಹದುರ್ಧರ ದುಶ್ಶಾಸನ ರಕ್ತಪಾನ ವಿಧಿ… ಪಾಂಚಾಲೀ ಕಚೋತ್ತಂಸನಮ್… ಕುರುರಾಜ ಊರು ಕಿರೀಟಭಂಗಮ್… ಇನಿತುಮ್ ಭೀಮಪ್ರತಿಜ್ಞಾಕ್ಷರಮ್ ಇಂತು ಎಯ್ದುದುದಲ್ತೆ ಎಂದು ಭೇರಿಯಮ್ ತಾಟಿಸಿದಂತೆ ಗಂಭೀರಧ್ವನಿಯಿಮ್ ಗರ್ಜಿಸೆ=ದುರ್ಯೋದನನ್ನು ಹೊಡೆದು ಉರುಳಿಸಿದ ಕುರುಕ್ಶೇತ್ರದ ಕಾಳೆಗದ ಕಣದಲ್ಲಿ ಮಹಾದ್ರೋಹಿಯಾದ ದುಶ್ಶಾಸನನ ನೆತ್ತರನ್ನು ಹೀರಿದ ಕೆಲಸ… ಪಾಂಚಾಲಿಯ ಬಿಚ್ಚಿದ ಮುಡಿಯನ್ನು ಮತ್ತೆ ಕಟ್ಟಿದ ಕೆಲಸ… ದುರ್ಯೋದನನ ತೊಡೆಗಳನ್ನು ಮುರಿದು ಕಿರೀಟವನ್ನು ಒದ್ದು, ನೆಲದ ದೂಳಿನಲ್ಲಿ ಹೊರಳಾಡುವಂತೆ ಮಾಡಿದ ಕೆಲಸ… ಇವೆಲ್ಲವೂ ಕಲಿ ಬೀಮನಾಡಿದ್ದ ಪ್ರತಿಜ್ನೆಯ ಮಾತುಗಳು ಈ ರೀತಿ ಈಡೇರಿದವಲ್ಲವೇ ಎಂದು ನಗಾರಿಯನ್ನು ಬಡಿದಾಗ ಹೊರಹೊಮ್ಮುವ ಮಹಾನಾದದಂತೆ ಗಂಬೀರವಾದ ದನಿಯಿಂದ ಗರ್ಜಿಸಿ ನುಡಿಯಲು;
ದೋರ್ದಂಡ=ದಂಡದಂತೆ ಉದ್ದವಾದ ತೋಳು; ತೀರ್ಥಜಲ= ದೇಗುಲಗಳ ಬಳಿ ಹರಿಯುವ ನದಿಗಳಿಂದ ಮತ್ತು ಸರೋವರಗಳಿಂದ ತಂದಿರುವ ನೀರು. ಈ ನೀರನ್ನು ಪವಿತ್ರವಾದುದೆಂದು ಜನಸಮುದಾಯ ನಂಬಿದೆ; ಕರ್ಚಿ=ತೊಳೆದು;
ಹರಿಯುಮ್ ಧರ್ಮಜನುಮ್ ಸುರೇಂದ್ರಸುತನುಮ್ ಮಾದ್ರೀಜರುಮ್ ಕೃಷ್ಣೆಯುಮ್ ಪರಮಾನಂದದೆ ಭೀಮನಾ ಆ ದೋರ್ದಂಡಮಮ್ ತೀರ್ಥಜಲದಿಮ್ ಕರ್ಚಿ=ಕ್ರಿಶ್ಣ, ದರ್ಮರಾಯ, ಅರ್ಜುನ, ನಕುಲ, ಸಹದೇವ ಮತ್ತು ದ್ರೌಪದಿ ಜತೆಗೂಡಿ ಅತಿಹೆಚ್ಚಿನ ಆನಂದದಿಂದ ಬೀಮಸೇನನ ಉದ್ದನೆಯ ಎರಡು ತೋಳುಗಳನ್ನು ತೀರ್ತಜಲದಿಂದ ತೊಳೆದು;
ಕಸ್ತೂರಿ=ಒಂದು ಬಗೆಯ ಪರಿಮಳ ದ್ರವ್ಯ; ಕಸ್ತೂರಿ ಎಂಬ ಪ್ರಾಣಿಯ ಹೊಕ್ಕುಳಿನಲ್ಲಿ ದೊರೆಯುವ ವಸ್ತು; ಚಂದನ=ಶ್ರೀಗಂದದ ಕೊರಡನ್ನು ನೀರಿನಲ್ಲಿ ತೇದು ಸಿದ್ದಪಡಿಸಿದ ದ್ರವ್ಯ; ಅಗರು=ಒಂದು ಬಗೆಯ ಪರಿಮಳ ದ್ರವ್ಯ; ಕಾಶ್ಮೀರಜ=ಕುಂಕುಮ ಕೇಸರಿ; ಪಂಕ=ದೇಹಕ್ಕೆ ಬಳಿದುಕೊಳ್ಳಲೆಂದು ಕಸ್ತೂರಿ-ಸಿರಿಗಂಧ-ಅಗರು-ಕುಂಕುಮ ಕೇಸರಿ ಮುಂತಾದುವೆಲ್ಲವನ್ನೂ ಜತೆಗೂಡಿಸಿ ಅರೆದು ತಯಾರಿಸಿದ ದ್ರವ್ಯ; ತೊಡೆ=ಸವರು/ಲೇಪಿಸು/ಹಚ್ಚು/ಬಳಿ;
ಕಸ್ತೂರಿಕಾ ಚಂದನಾ ಅಗರು ಕಾಶ್ಮೀರಜ ಪಂಕದಿಮ್ ತೊಡೆದು=ಕಸ್ತೂರಿ-ಚಂದನ-ಅಗರು-ಕುಂಕುಮ ಕೇಸರಿಗಳೆಲ್ಲವನ್ನೂ ಜತೆಗೂಡಿಸಿ ಅರೆದು ಸಿದ್ದಪಡಿಸಿದ ಪರಿಮಳ ದ್ರವ್ಯವನ್ನು ಬೀಮಸೇನನ ನಿಡಿದಾದ ಎರಡು ತೋಳುಗಳಿಗೂ ಬಳಿದು;
ಕೇಯೂರ+ಆದಿಯಮ್; ಕೇಯೂರ=ತೋಳಬಂದಿ/ಕಡಗ; ಭೂಷಣ+ಉತ್ಕರಮ್+ ಅಮ್; ಭೂಷಣ=ಒಡವೆ/ಆಬರಣ; ಉತ್ಕರ=ಸಮೂಹ/ರಾಶಿ; ನೇರ್ಪು=ಅಂದ/ಸೊಗಸು;
ಕೇಯೂರಾದಿಯಮ್ ಭೂಷಣೋತ್ಕರಮಮ್ ನೇರ್ಪಡೆ ಕಟ್ಟಿ ಪೂಜಿಸಿದರ್=ಬೀಮಸೇನನ ಎರಡು ತೋಳುಗಳಿಗೆ ತೋಳಬಂದಿ, ಕಡಗ ಮುಂತಾದ ಒಡವೆಗಳನ್ನು ಸೊಗಸಾಗಿ ಕಾಣುವಂತೆ ತೊಡಿಸಿ, ತೋಳುಗಳಿಗೆ ಪೂಜೆಯನ್ನು ಮಾಡಿದರು;
ಪ್ರಸ್ತಾವ=ಸಮಯ/ಸನ್ನಿವೇಶ/ವೇಳೆ;
ಆ ಪ್ರಸ್ತಾವದೊಳ್ ಸಾಹಸಭೀಮನ್ ಗದಾದಂಡಮಮ್ ಉತ್ಸಾಹದಿಮ್ ತಾನೆ ಪೂಜಿಸಿದನ್=ಅದೇ ಸನ್ನಿವೇಶದಲ್ಲಿ ಸಾಹಸ ಬೀಮನು ತನ್ನ ಗದಾದಂಡವನ್ನು ಉತ್ಸಾಹದಿಂದ ತಾನೇ ಪೂಜಿಸಿದನು;
ಅಂತು ಭುಜಾದಂಡಮುಮನ್ ಗದಾದಂಡಮುಮನ್ ಪೂಜಿಸಿ=ಆ ರೀತಿ ಬೀಮಸೇನನ ತೋಳುಗಳೆಂಬ ದಂಡಕ್ಕೆ ಮತ್ತು ಗದಾದಂಡಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ;
ಆತೋದ್ಯ+ರವ+ಅಮ್; ಆತೋದ್ಯ=ವಾದ್ಯ; ರವ=ಶಬ್ದ/ದನಿ; ಪೊದಳ್= ಹೊರಹೊಮ್ಮು;
ವಿವಿಧ ಆತೋದ್ಯರವಮ್ ಪೊದಳ್ದು=ನಗಾರಿ, ತಮಟೆ, ಡಮರುಗ ಮುಂತಾದ ಬಗೆಬಗೆಯ ವಾದ್ಯಗಳಿಂದ ಮಂಗಳಕರವಾದ ದನಿಯು ಹೊರಹೊಮ್ಮುತ್ತ;
ದಿಕ್ಚಕ್ರ=ಬೂಮಂಡಲದ ದಿಕ್ಕುಗಳು; ಪೊಣ್ಮು=ಹಬ್ಬು/ವ್ಯಾಪಿಸು;
ಅಖಿಳ ದಿಕ್ ಚಕ್ರಂಬರಮ್ ಕೂಡೆ ಪೊಣ್ಮುವಿನಮ್=ಬೂಮಂಡಲದ ಎಲ್ಲಾ ದಿಕ್ಕುಗಳವರೆಗೂ ವಾದ್ಯಗಳ ದನಿಯು ಹಬ್ಬುತ್ತಿರಲು;
ಕರ್ಣ+ಅಮೃತ+ಸ್ಯಂದಿ; ಕರ್ಣ=ಕಿವಿ; ಕರ್ಣಾಮೃತ=ಕೇಳುವುದಕ್ಕೆ ಇಂಪಾದುದು/ಮನೋಹರವಾದುದು; ಸ್ಯಂದಿ= ಒಸರುವ/ಕರಗಿ ಹರಿಯುವ; ಉಣ್ಮು=ಹೊರಸೂಸು;
ಕರ್ಣಾಮೃತಸ್ಯಂದಿ ಮಂಗಳಗೀತ ಮಂಗಳರವಮ್ ಉಣ್ಮುವಿನಮ್=ವಾದ್ಯಗಳಿಂದ ಹೊರಹೊಮ್ಮುತ್ತಿರುವ ಇಂಪಾದ ನಾದವು ಕಿವಿಗಳಿಗೆ ಮನೋಹರವಾಗಿ ಕೇಳಿಬರುತ್ತಿರಲು;
ನಿನಾದ=ಶಬ್ದ/ದನಿ; ದೇವನಿನಾದ=ಗಗನದಲ್ಲಿ ದೇವತೆಗಳು ದನಿ ಮಾಡುತ್ತಿರಲು;
ದೇವನಿನಾದಮ್ ಉಣ್ಮುವಿನಮ್=ಗಗನದಿಂದ ದೇವತೆಗಳ ಜಯಕಾರವು ಹೊರಹೊಮ್ಮುತ್ತಿರಲು;
ಉತ್ಸವ=ಮೆರವಣಿಗೆ/ಸಡಗರ/ಸಂಬ್ರಮ; ಸ್ವನ=ದನಿ/ಶಬ್ದ; ರಮ್ಯ=ಚೆಲುವು/ಸುಂದರ; ಚಾಳುಕ್ಯಕಂಠೀರವನ್=ಸತ್ಯಾಶ್ರಯ ಚಕ್ರವರ್ತಿಗೆ ಇದ್ದ ಬಿರುದು/ಬೀಮಸೇನ; ತತ್=ಆ; ಶಿಬಿರ=ಸೇನೆಯು ತಾತ್ಕಾಲಿಕವಾಗಿ ನೆಲೆಸಿರುವ ತಂಗುದಾಣ; ಕುರುಕ್ಶೇತ್ರ ಯುದ್ದ ನಡೆಯುವಾಗ ಪಾಂಡವರು ಹಾಕಿದ್ದ ಸೇನಾಶಿಬಿರ;
ಉತ್ಸವಬದ್ಧ ಸ್ವನರಮ್ಯ ಚಾಳುಕ್ಯ ಕಂಠೀರವನ್ ಅತ್ಯುತ್ಸಾಹದಿಮ್ ತತ್ ಶಿಬಿರಮಮ್ ಪೊಕ್ಕನ್=ಸಡಗರದಿಂದ ಕೂಡಿ ವಾದ್ಯಗಳ ನಾದ ಮತ್ತು ಜಯಕಾರದ ದನಿಗಳಿಂದ ರಮಣೀಯನಾಗಿ ಮೆರೆಯುತ್ತಿರುವ ಬೀಮಸೇನನು ಅತಿಯಾದ ಉತ್ಸಾಹದಿಂದ ತನ್ನ ಸೇನಾಶಿಬಿರವನ್ನು ಹೊಕ್ಕನು.
(ಚಿತ್ರ ಸೆಲೆ: jainheritagecentres.com)


ಇತ್ತೀಚಿನ ಅನಿಸಿಕೆಗಳು