ಪಂಪ ಬಾರತ ಓದು – 12ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪ ಬಾರತದ ದ್ವಿತೀಯ ಆಶ್ವಾಸ – 77 ನೆಯ ಗದ್ಯದಿಂದ 85 ನೆಯ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.)

ಪಾತ್ರಗಳು:

ದುರ್ಯೋಧನ – ಗಾಂದಾರಿ ಮತ್ತು ದ್ರುತರಾಶ್ಟ್ರನ ಹಿರಿಯ ಮಗ
ದ್ರೋಣ – ಹಸ್ತಿನಾವತಿಯಲ್ಲಿ ಕುರುವಂಶದ ರಾಜಕುಮಾರರಿಗೆ ಶಸ್ತ್ರ ವಿದ್ಯೆ ಮತ್ತು ಶಾಸ್ತ್ರ ವಿದ್ಯೆಯನ್ನು ಹೇಳಿಕೊಡುತ್ತಿದ್ದ ಗುರು.
ಭೀಷ್ಮ – ಶಂತನು ಮತ್ತು ಗಂಗಾದೇವಿಯ ಮಗ.
ಕೃಪ – ಹಸ್ತಿನಾವತಿಯಲ್ಲಿ ಕುರುವಂಶದ ರಾಜಕುಮಾರರಿಗೆ ಚಿಕ್ಕಂದಿನಲ್ಲಿ ಶಸ್ತ್ರ ವಿದ್ಯೆ ಮತ್ತು ಶಾಸ್ತ್ರ ವಿದ್ಯೆಯನ್ನು ಹೇಳಿಕೊಡುತ್ತಿದ್ದ ಗುರು.
ವಿದುರ – ಅಂಬಿಕೆಯ ದಾಸಿ ಮತ್ತು ವ್ಯಾಸನ ಮಗ
ಕರ್ಣ – ಕುಂತಿ ಮತ್ತು ಸೂರ್ಯದೇವನ ಮಗ
ಅರ್ಜುನ – ಅಯ್ದು ಮಂದಿ ಪಾಂಡವರಲ್ಲಿ ಒಬ್ಬ. ಪಾಂಡು ಮತ್ತು ಕುಂತಿಯ ಮಗ
ಧೃತರಾಷ್ಟ್ರ – ಅಂಬಿಕೆ ಮತ್ತು ವ್ಯಾಸನ ಮಗ
ಗಾಂಧಾರಿ – ದ್ರುತರಾಶ್ಟ್ರನ ಹೆಂಡತಿ

============================

ಕರ್ಣನಿಗೆ ಅಂಗರಾಜ್ಯದ ಪಟ್ಟ

ಆಗಳ್ ಆ ಪರಾಕ್ರಮಧವಳನ ಶರಪರಿಣತಿಯನ್ ಕಂಡು, ದುರ್ಯೋಧನನ ಮೊಗಮ್ ತಲೆನವಿರ ಗಂಟಿಮ್ ಕಿರಿದಾಗೆ, ದ್ರೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮ್ ಅರಲ್ದ ತಾವರೆಯಿಮ್ ಪಿರಿದಾಗೆ, ತೊಳಗುವ ತೇಜಮ್ ತೊಳತೊಳ ತೊಳಗುವ ದಿವ್ಯಾಸ್ತ್ರಮ್ ಅಮರ್ದ ಕೋದಂಡಮ್ ಸಭಾಸದರನ್ ಅಸುಂಗೊಳಿಸೆ ಮನಂಗೊಳಿಸೆ ಭಯಂಗೊಳಿಸೆ ಉರದೆ ಕರ್ಣನ್ ಬಂದನ್.

ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿನ್ ದಿವ್ಯಾಸ್ತ್ರಂಗಳನ್ ಉರ್ಚಿಕೊಂಡು, ಅರಿಗನ ಬಿಲ್ಬಲ್ಮೆಯೊಳಮ್ ಅಂದು ಎರಡಿಲ್ಲದೆ ಬಗೆದ ಮುಳಿಸುಮ್ ಏವಮುಮ್ ಎರ್ದೆಯೊಳ್ ಬರೆದಿರೆ, ಆಯತಕರ ಪರಿಘನ್ ಕರ್ಣನ್ ಆತ್ಮ ಶರಪರಿಣತಿಯನ್ ತೋರಿದನ್. ಅಂತು ತೋರಿಯುಮ್ ಎರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾರದೆ ವಿದ್ವಿಷ್ಟ ವಿದ್ರಾವಣನನ್ ಇಂತು ಎಂದನ್…

ಕರ್ಣ: ಸಂಗತದಿನ್ ಈ ರಂಗಮೆ ರಣರಂಗಮಾಗೆ ಈಗಳ್ ಇಂತು ಕಾದುವಮ್. ಅಳವಮ್ ಪೊಂಗದಿರ್ ಇದಿರ್ಚು. ಅದೇನ್ ಗಳ ಗಂಡರ್ ರಂಗಂಬೊಕ್ಕಾಡುವಂತೆ ಪೆಂಡಿರೆ.

(ಎಂಬುದುಮ್ ಅತಿರಥಮಥನನ್ ಇಂತು ಎಂದನ್)

ಅರ್ಜುನ: ಕರ್ಣ, ಈ ನೆರೆದ ಗುರುಜನಂಗಳ ಮಾನಿನಿಯರ ಮುಂದೆ ಪೊಲ್ಲದು ನುಡಿದೈ. ಎನ್ನ ಈ ನಿಡುದೋಳ್ಗಳ ತೀನಮ್ ನೀನ್ ಮಳ್ಗಿಸುವೆಯಪ್ಪೊಡೆ ಆನ್ ಒಲ್ಲದನೇ.

(ಎಂಬುದುಮ್ ದ್ರೋಣನುಮ್ ಕೃಪನುಮ್ ಎಡೆಗೆ ವಂದು ಕರ್ಣನನ್ ಇಂತು ಎಂದರ್.)

ದ್ರೋಣ ಮತ್ತು ಕೃಪ: ಏವದ ಮುಳಿಸಿನ ಕಾರಣಮ್ ಆವುದೊ. ಕರ್ಣ, ನೀನ್ ನಿನ್ನ ತಾಯ ತಂದೆಯ ದೆಸೆಯನ್ ಭಾವಿಸದೆ ನುಡಿವಂತು, ನಿನಗಮ್ ಅರಿಕೇಸರಿಗಮ್ ಸಮಕಟ್ಟು ಆವುದು.

(ಎಂಬುದುಮ್ ಆ ಮಾತಿಂಗೆ ಮರುವಾತು ಕುಡಲ್ ಅರಿಯದೆ ಪಂದೆಯನ್ ಪಾವ್ ಅಡರ್ದಂತು ಉಮ್ಮನೆ ಬೆಮರುತ್ತುಮ್ ಇರ್ದ ಕರ್ಣನನ್ ದುರ್ಯೋಧನನ್ ಕಂಡು, ದ್ರೋಣನುಮನ್ ಕೃಪನುಮನ್ ಇಂತು ಎಂದನ್.)

ದುರ್ಯೋಧನ: ಬೀರಮೆ ಕುಲಮಲ್ಲದೆ ಕುಲಮ್ ಎಂಬುದುಂಟೆ… ಕುಲಮನ್ ಇಂತು ಪಿಕ್ಕದಿರಿಮ್. ನೀಮ್ ಒಲಿದು ಎಲ್ಲಿ ಪುಟ್ಟಿ ಬಳೆದಿರೊ… ಕೊಡದೊಳಮ್ ಶರಸ್ತಂಬದೊಳಮ್ ಕುಲಮ್ ಇರ್ದುದೆ.

(ಎಂದು ನುಡಿದು)

ದುರ್ಯೋಧನ: ಕರ್ಣನನ್ ಈಗಳೆ ಕುಲಜನನ್ ಮಾಡಿ ತೋರ್ಪೆನ್.

(ಎಂದು ಕೆಯ್ಯನ್ ಪಿಡಿದು ಒಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದಲ್ ತೀವಿದ ಅಗಣ್ಯಪುಣ್ಯ ತೀರ್ಥೋದಕಂಗಳಮ್ ಚತುರ್ವೇದಪಾರಗರಿಂದ ಅಭಿಷೇಕಂಗೆಯ್ಸಿ, ಮಂಗಳ ಪರೆಗಳ್ ಶುಭ ವಚನಂಗಳ್ ಚಮರೀರುಹಂಗಳ್ ಆ ಶ್ವೇತಚ್ಛತ್ರಂಗಳ್ ಅಮರ್ದು ಎಸೆಯೆ, ಅಂಗಮಹೀತಳ ವಿಭೂತಿಯನ್ ಕರ್ಣಂಗೆ ನೆರೆಯಿತ್ತನ್. ಅಂತು ಇತ್ತು ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನ್ ಇತ್ತು…)

ದುರ್ಯೋಧನ: ನೀನ್ ಎನಗೆ ಒಂದನ್ ಈಯಲ್ವೇಳ್ಪುದು. ಪೊಡಮಡುವರ್… ಜೀಯ ಎಂಬರ್… ಕುಡು ದಯೆಗೆಯ್… ಏನ್ ಪ್ರಸಾದಮ್… ಎಂಬ ಇವು, ಪೆರರೊಳ್ ನಡೆಗೆ. ಎಮ್ಮ ನಿನ್ನ ಎಡೆಯೊಳ್ ನಡೆಯಲ್ವೇಡ…. ರಾಧೇಯಾ, ಎನಗೆ ಕೆಳೆಯನೈ.

(ಎಂದು ಬೇಡಿಕೊಂಡು ಕರ್ಣನನ್ ಮುಂದಿಟ್ಟು ಒಡಗೊಂಡು ಪೋಗಿ ಧೃತರಾಷ್ಟ್ರಂಗಮ್ ಗಾಂಧಾರಿಗಮ್ ಪೊಡಮಡಿಸಿದಾಗಳ್-)

============================

ಪದ ವಿಂಗಡಣೆ ಮತ್ತು ತಿರುಳು

ಪರಾಕ್ರಮ+ಧವಳನ; ಪರಾಕ್ರಮ=ಕಲಿತನ; ಧವಳ=ಬಿಳುಪು; ಪರಾಕ್ರಮಧವಳ= ಮಹಾಕಲಿ/ದೊಡ್ಡವೀರ. ವ್ಯಕ್ತಿಯ ಕಲಿತನವನ್ನು ಹೇಳುವ ನುಡಿಗಟ್ಟು. ಅರ್‍ಜುನನಿಗೆ ಇದ್ದ ಬಿರುದು; ಶರ+ಪರಿಣತಿ+ಅನ್; ಶರ=ಬಾಣ;

ಪರಿಣತಿ=ನಿಪುಣತೆ/ಕುಶಲತೆ/ಕಯ್ ಚಳಕ; ಅನ್=ಅನ್ನು;

ಆಗಳ್ ಆ ಪರಾಕ್ರಮಧವಳನ ಶರಪರಿಣತಿಯನ್ ಕಂಡು=ಗುರುಗಳಾದ ದ್ರೋಣರು ಕುರುವಂಶದ ರಾಜಕುಮಾರರನ್ನು ಒಳಗೊಂಡಂತೆ ತಮ್ಮ ಗುಡ್ಡರೆಲ್ಲರ ಅಸ್ತ್ರವಿದ್ಯಾ ಕುಶಲತೆಯನ್ನು ಗುರುಹಿರಿಯರು ಮತ್ತು ಹಸ್ತಿನಾವತಿಯ ಪ್ರಜೆಗಳ ಮುಂದೆ ತೋರಿಸಲೆಂದು ಏರ್‍ಪಡಿಸಿದ್ದ ಕ್ರೀಡಾಂಗಣದಲ್ಲಿ ಅರ್‍ಜುನನ ಬಾಣ ಪ್ರಯೋಗದ ನಿಪುಣತೆಯನ್ನು ನೋಡಿ;

ಮೊಗ=ಮುಖ; ನವಿರು=ಕೂದಲು; ತಲೆನವಿರ ಗಂಟು=ತಲೆಗೂದಲು ಒಂದಕ್ಕೊಂದು ಅಂಟಿಕೊಂಡು ಸಿಕ್ಕುಸಿಕ್ಕಾಗಿರುವುದು; ಕಿರಿದು+ಆಗೆ; ಕಿರಿದು=ಚಿಕ್ಕದು; ಆಗೆ=ಆಗಲು;

ತಲೆನವಿರ ಗಂಟಿಮ್ ಕಿರಿದಾಗು=ಇದೊಂದು ರೂಪಕ. ಮನದಲ್ಲಿ ಉಂಟಾದ ದುಗುಡವನ್ನು ಸೂಚಿಸುವುದಕ್ಕಾಗಿ ಬಳಕೆಯಾಗಿದೆ;

ದುರ್ಯೋಧನನ ಮೊಗಮ್ ತಲೆನವಿರ ಗಂಟಿಮ್ ಕಿರಿದಾಗೆ=ಅರ್‍ಜುನನ ಬಾಣಗಳ ಪ್ರಯೋಗದ ಕಯ್ ಚಳಕವನ್ನು ನೋಡನೋಡುತ್ತಿದ್ದಂತೆಯೇ ದುರ್‍ಯೋದನನ ಮಯ್ ಮನದಲ್ಲಿ ಆತಂಕ, ಹೊಟ್ಟೆಕಿಚ್ಚು, ಅಂಜಿಕೆಯ ಒಳಮಿಡಿತಗಳು ಮೂಡಿದವು. ಈ ಎಲ್ಲ ಒಳಮಿಡಿತಗಳ ಒತ್ತಡದಿಂದಾಗಿ ದುರ್‍ಯೋದನನ ಮೊಗ ತಲೆಗೂದಲ ಗಂಟಿಗಿಂತಲೂ ಕಿರಿದಾಗಿ ಸುಕ್ಕುಗಟ್ಟಿತು;

ಪ್ರಭೃತಿ=ಉತ್ತಮ ವ್ಯಕ್ತಿ; ಅರಲ್=ಅಗಲವಾಗು/ಬಿರಿ;; ತಾವರೆ+ಇಮ್; ಪಿರಿದು+ಆಗೆ; ಪಿರಿದು=ದೊಡ್ಡದು;

ಅರಲ್ದ ತಾವರೆಯಿಮ್ ಪಿರಿದಾಗು=ಇದೊಂದು ರೂಪಕ. ಮನದಲ್ಲಿ ಉಂಟಾದ ಆನಂದವನ್ನು ಸೂಚಿಸಲು ಬಳಕೆಯಾಗಿದೆ;

ದ್ರೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮ್ ಅರಲ್ದ ತಾವರೆಯಿಮ್ ಪಿರಿದಾಗೆ=ಅರ್‍ಜುನನ ಬಾಣ ಪ್ರಯೋಗದ ಕುಶಲತೆಯನ್ನು ನೋಡನೋಡುತ್ತಿದ್ದಂತೆಯೇ ಗುರುಹಿರಿಯರಾದ ದ್ರೋಣ, ಬೀಶ್ಮ, ಕ್ರುಪ, ವಿದುರರ ಮನದಲ್ಲಿ ಆನಂದ, ಮೆಚ್ಚುಗೆಯ ಒಳಮಿಡಿತಗಳು ಮೂಡಿ, ಅವರ ಮೊಗವು ಅರಳಿದ ತಾವರೆಗಿಂತಲೂ ದೊಡ್ಡದಾಯಿತು;

ತೊಳಗು=ಪ್ರಕಾಶಿಸು/ಹೊಳೆ; ತೇಜ=ಶೂರತನ/ಕಲಿತನ; ದಿವ್ಯ+ಅಸ್ತ್ರಮ್; ದಿವ್ಯ=ಉತ್ತಮವಾದುದು; ಅಸ್ತ್ರ=ಬಾಣ; ಅಮರ್=ಸೇರು/ಕೂಡು; ಅಮರ್ದ=ಜತೆಗೂಡಿದ; ಕೋದಂಡ=ಬಿಲ್ಲು;

ತೊಳಗುವ ತೇಜಮ್… ತೊಳತೊಳ ತೊಳಗುವ ದಿವ್ಯಾಸ್ತ್ರಮ್ ಅಮರ್ದ ಕೋದಂಡಮ್=ಕಲಿತನದ ತೇಜಸ್ಸಿನಿಂದ ಕಂಗೊಳಿಸುತ್ತ, ಹೊಳೆಹೊಳೆಯುವ ಉತ್ತಮ ಬಾಣಗಳಿಂದ ಕೂಡಿದ ಬಿಲ್ಲನ್ನು ಹಿಡಿದುಕೊಂಡು;

ಸಭಾಸದರ್+ಅನ್; ಸಭಾಸದರು=ಕ್ರೀಡಾಂಗಣದಲ್ಲಿ ನೆರೆದಿರುವ ಜನರು; ಅಸುಮ್+ಕೊಳಿಸೆ; ಅಸು=ಜೀವ/ಪ್ರಾಣ; ಕೊಳ್=ಅಪಹರಿಸು/ವಶಪಡಿಸಿಕೊ; ಅಸುಂಗೊಳಿಸೆ=ಜೀವವೇ ತಲ್ಲಣಗೊಳ್ಳುವಂತೆ; ಮನಮ್+ಕೊಳಿಸೆ; ಮನಂಗೊಳಿಸೆ=ಮನ ಸೆಳೆಯುವಂತೆ; ಭಯಮ್+ಕೊಳಿಸೆ=ಅಂಜಿಕೆಯಿಂದ ತತ್ತರಿಸುವಂತೆ;

ಸಭಾಸದರನ್ ಅಸುಂಗೊಳಿಸೆ ಮನಂಗೊಳಿಸೆ ಭಯಂಗೊಳಿಸೆ=ಕುರುವಂಶದ ರಾಜಕುವರರ ಅಸ್ತ್ರವಿದ್ಯಾ ನಿಪುಣತೆಯ ಪ್ರದರ್‍ಶನವನ್ನು ನೋಡಲೆಂದು ಬಂದಿದ್ದ ಹಸ್ತಿನಾವತಿಯ ಜನರ ಜೀವವೇ ತಲ್ಲಣಗೊಳ್ಳುವಂತೆ, ಮನ ಸೆಳೆಯುವಂತೆ ಮತ್ತು ಅಂಜಿಕೆಯಿಂದ ನಡುಗುವಂತೆ;

ಉರದೆ=ಲೆಕ್ಕಿಸದೆ/ಗಣಿಸದೆ;

ಉರದೆ ಕರ್ಣನ್ ಬಂದನ್=ಅರ್‍ಜುನನ ಶರಪರಿಣತಿಯನ್ನು ಲೆಕ್ಕಿಸದೆ ಕರ್‍ಣನು ಪ್ರದರ್‍ಶನದ ರಂಗಕ್ಕೆ ಬಂದನು;

ಪೊಡಮಡು=ನಮಸ್ಕರಿಸು;

ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು=ಬಂದ ಕೂಡಲೇ ಗುರುಗಳಾದ ದ್ರೋಣಾಚಾರ್‍ಯರಿಗೆ ನಮಸ್ಕಾರವನ್ನು ಮಾಡಿ;

ಶರಧಿ+ಇನ್; ಶರಧಿ=ಬತ್ತಳಿಕೆ/ಬಾಣಗಳನ್ನು ಇಡುವ ಉಪಕರಣ; ಉರ್ಚು=ಹೊರಕ್ಕೆ ತೆಗೆ/ಸೆಳೆ;

ಶರಧಿಯಿನ್ ದಿವ್ಯಾಸ್ತ್ರಂಗಳನ್ ಉರ್ಚಿಕೊಂಡು=ಬೆನ್ನಿಗೆ ಕಟ್ಟಿಕೊಂಡಿದ್ದ ಬತ್ತಳಿಕೆಯಿಂದ ಒಳ್ಳೆಯ ಬಾಣಗಳನ್ನು ಹೊರಸೆಳೆದು;

ಅರಿಗ=ಅರ್‍ಜುನ; ಬಿಲ್+ಬಲ್ಮೆ+ಒಳಮ್; ಬಲ್ಮೆ=ಬಲ/ಶಕ್ತಿ;

ಅಂದು=ಆಗ; ಎರಡು+ಇಲ್ಲದೆ; ಎರಡಿಲ್ಲದೆ=ಇದೊಂದು ನುಡಿಗಟ್ಟು. ಸರಿಸಮನಾಗಿ; ಬಗೆ=ತಿಳಿ;

ಅರಿಗನ ಬಿಲ್ಬಲ್ಮೆಯೊಳಮ್ ಅಂದು ಎರಡಿಲ್ಲದೆ ಬಗೆದ=“ಅರ್‍ಜುನನ ಬಿಲ್ಲಿನ ಕುಶಲತೆಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲದಂತೆ ಸರಿಸಮನಾದ ಕುಶಲತೆಯನ್ನು ನಾನು ಹೊಂದಿದ್ದೇನೆ” ಎಂಬ ವಿಶ್ವಾಸದಿಂದ ಕೂಡಿರುವ ಕರ್‍ಣನು;

ಮುಳಿಸು=ಕೋಪ; ಏವ=ತಿರಸ್ಕಾರ/ಹಗೆತನ; ಎರ್ದೆ+ಒಳ್; ಎರ್ದೆ=ಎದೆ/ಮನಸ್ಸು; ಬರೆದು+ಇರೆ;

ಮುಳಿಸುಮ್ ಏವಮುಮ್ ಎರ್ದೆಯೊಳ್ ಬರೆದಿರೆ=ಕರ್‍ಣನ ಮನದಲ್ಲಿ ಅರ್‍ಜುನನ ಬಗ್ಗೆ ಕೋಪ ಮತ್ತು ತಿರಸ್ಕಾರದ ಒಳಮಿಡಿತಗಳು ತುಂಬಿರಲು;

ಆಯತ+ಕರ; ಆಯತ=ನೀಳವಾದ/ಉದ್ದನೆಯ; ಕರ=ಕಯ್; ಪರಿಘ=ಕಬ್ಬಿಣದಿಂದ ಮಾಡಿರುವ ಒಂದು ಬಗೆಯ ಶಸ್ತ್ರ; ಆತ್ಮ=ತನ್ನ;

ಆಯತಕರ ಪರಿಘನ್ ಆತ್ಮ ಶರಪರಿಣತಿಯನ್ ತೋರಿದನ್=ಪರಿಗವೆಂಬ ನೀಳವಾದ ಶಸ್ತ್ರದಂತೆ ಉದ್ದನೆಯ ತೋಳುಗಳುಳ್ಳ ಕರ್‍ಣನು ತನ್ನ ಬಿಲ್ ವಿದ್ಯೆಯ ಕುಶಲತೆಯನ್ನು ರಂಗದಲ್ಲಿ ತೋರಿಸಿದನು;

ಅಂತು=ಆ ರೀತಿ; ಅಂತು ತೋರಿಯುಮ್=ಆ ರೀತಿ ತನ್ನ ಕುಶಲತೆಯನ್ನು ತೋರಿಯೂ;

ವರೆ=ಬರಲು; ನಾಲಗೆಗೆ ವರೆ=ಬಾಯಿಗೆ ಬರಲು; ಸೈರಿಸಲ್+ಆರದೆ; ಸೈರಿಸು=ತಾಳು/ಸಹಿಸು; ಸೈರಿಸಲಾರದೆ=ಸಹಿಸಿಕೊಳ್ಳಲಾಗದೆ/ತಡೆದುಕೊಳ್ಳಲಾಗದೆ;

ಎರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾರದೆ=ಅರ್‍ಜುನನ ಬಗ್ಗೆ ತನ್ನ ಮನದಲ್ಲಿದ್ದ ಕೋಪವನ್ನು ಕರ್‍ಣನು ಹತ್ತಿಕ್ಕಿಕೊಳ್ಳಲಾಗದೆ, ಮಾತಿನಲ್ಲಿ ಆಕ್ರೋಶವನ್ನು ಕಾರತೊಡಗಿದನು;

ವಿದ್ವಿಷ್ಟ=ಹಗೆ/ಶತ್ರು; ವಿದ್ರಾವಣ=ನಾಶಗೊಳಿಸುವವನು; ವಿದ್ವಿಷ್ಟ ವಿದ್ರಾವಣ=ಹಗೆಗಳನ್ನು ನಾಶಮಾಡುವವನು; ಅರ್‍ಜುನನಿಗೆ ಇದ್ದ ಮತ್ತೊಂದು ಬಿರುದು;

ವಿದ್ವಿಷ್ಟ ವಿದ್ರಾವಣನನ್ ಇಂತು ಎಂದನ್=ಅರ್‍ಜುನನ್ನು ಉದ್ದೇಶಿಸಿ ಈ ರೀತಿ ನುಡಿದನು;

ಸಂಗತದ+ಇನ್; ಸಂಗತ=ಕೂಡುವಿಕೆ/ಸೇರುವಿಕೆ; ರಂಗ=ಪ್ರದರ್‍ಶದ ವೇದಿಕೆ/ಕ್ರೀಡಾಂಗಣ; ರಣರಂಗಮ್+ಆಗೆ; ರಣರಂಗ=ಕಾಳೆಗದ ನೆಲ; ಆಗೆ=ಆಗಲು;

ಸಂಗತದಿನ್ ಈ ರಂಗಮೆ ರಣರಂಗಮಾಗೆ=ಅಸ್ತ್ರವಿದ್ಯೆಯ ಪ್ರದರ್‍ಶನಕ್ಕೆಂದು ನಾವೆಲ್ಲರೂ ಕೂಡಿರುವ ಈ ಕ್ರೀಡಾಂಗಣವನ್ನೇ ಕಾಳೆಗದ ರಂಗವನ್ನಾಗಿ ಮಾಡಿಕೊಂಡು;

ಈಗಳ್ ಇಂತು ಕಾದುವಮ್=ಈಗ ನಾವು ಕಾದಾಡೋಣ;

ಅಳವು+ಅಮ್; ಅಳವು=ಶಕ್ತಿ; ಪೊಂಗು=ಗರ್ವ/ಸೊಕ್ಕು; ಇದಿರ್ಚು=ಎದುರಿಸು;

ಅಳವಮ್ ಪೊಂಗದಿರ್…ಇದಿರ್ಚು=ನಿನ್ನ ಶಕ್ತಿಯೇ ದೊಡ್ಡದೆಂದು ಸೊಕ್ಕಿನಿಂದ ಮೆರೆಯದೆ ನನ್ನೊಡನೆ ಹೋರಾಡು;

ಗಳ=ಆನಂದ/ಆಚ್ಚರಿ/ಅಣಕದ ಒಳಮಿಡಿತಗಳನ್ನು ಹೊರಹಾಕುವಾಗ ಬಳಸುವ ಪದ; ಗಳ=ಕಂಡೆಯಾ/ಗೊತ್ತಿದೆಯೇ;

ಅದೇನ್ ಗಳ=ಎಲ್ಲಾದರೂ ಕಂಡಿರುವೆಯಾ;

ಗಂಡ=ಶೂರ/ವೀರ; ರಂಗಮ್+ಪೊಕ್ಕು+ಆಡುವಂತೆ; ಪೊಕ್ಕು=ಪ್ರವೇಶಿಸಿ; ಆಡು=ಕುಣಿ/ನರ್ತಿಸು; ಪೆಂಡಿರ್=ಹೆಂಗಸರು; ಪೆಂಡಿರೆ=ಹೆಂಗಸರೆ;

ಗಂಡರ್ ರಂಗಂಬೊಕ್ಕಾಡುವಂತೆ ಪೆಂಡಿರೆ ಎಂಬುದುಮ್=ನಾಟ್ಯರಂಗದಲ್ಲಿ ಕುಣಿಯುವ ಹೆಂಗಸರಂತೆ ಶೂರರಾದವರು ಕಾಳೆಗರಂಗದಲ್ಲಿ ಕುಣಿಯುತ್ತಾರೆಯೇ;ಅಂದರೆ ವೀರರಾದವರು ಕಾಳೆಗರಂಗದಲ್ಲಿ ತೋರಿಕೆಯ ಬೆಡಗಿನಿಂದ ಕೂಡಿರದೆ, ನಿಜಕ್ಕೂ ಹೋರಾಡಬೇಕು ಎಂದು ಕರ್‍ಣನು ಅರ್‍ಜುನನ್ನು ಹಂಗಿಸಲು;

ಅತಿರಥ+ಮಥನ+ಅನ್; ಅತಿರಥ=ಅತಿರಥ-ಮಹಾರಥ-ಸಮರಥ-ಅರ್ಧರಥ ಎಂಬ ನಾಲ್ಕು ಬಗೆಯ ರಥಿಕರಲ್ಲಿ ಮೊದಲ ಮನ್ನಣೆಯನ್ನು ಪಡೆದವನೇ ಅತಿರಥ; ಹೆಚ್ಚಿನ ಸಂಕೆಯ ಹಗೆಗಳನ್ನು ಸದೆಬಡಿಯವ ರಥಿಕನೇ ಅತಿರಥ; ರಥಿಕ ಎಂದರೆ ರಥದಲ್ಲಿ ಕುಳಿತು ಕಾಳೆಗವನ್ನು ಮಾಡುವವನು; ಮಥನ=ಕಡೆಯುವಿಕೆ/ಕೊಲೆ; ಅನ್=ಅನ್ನು;

ಅತಿರಥಮಥನ=ರತದಲ್ಲಿ ಕುಳಿತು ಕಾಳೆಗ ಮಾಡುತ್ತ ಹಗೆಗಳ ಸೇನೆಯನ್ನು ಕೊಲ್ಲುವವನು; ಅರ್‍ಜುನನಿಗೆ ಇದ್ದ ಮತ್ತೊಂದು ಬಿರುದು;

ಅತಿರಥಮಥನನ್ ಇಂತು ಎಂದನ್=ಮಹಾವೀರನಾದ ಅರ್‍ಜುನನು ಈ ರೀತಿ ನುಡಿದನು;

ನೆರೆ=ಒಟ್ಟುಗೂಡು/ಗುಂಪು ಸೇರು; ಗುರುಜನ=ಗುರುಹಿರಿಯರು; ಮಾನಿನಿ=ಹೆಂಗಸು; ಪೊಲ್ಲದು=ಕೆಟ್ಟದ್ದು/ಕೀಳಾದುದ್ದು/ಹೀನವಾದುದ್ದು;

ಕರ್ಣ, ಈ ನೆರೆದ ಗುರುಜನಂಗಳ ಮಾನಿನಿಯರ ಮುಂದೆ ಪೊಲ್ಲದು ನುಡಿದೈ=ಕರ್‍ಣನೇ, ನೀನು ಇಲ್ಲಿ ಸೇರಿರುವ ಗುರುಹಿರಿಯರ ಮತ್ತು ಹೆಂಗಸರ ಮುಂದೆ ನನ್ನನ್ನು ಕುರಿತು ಕೀಳಾದ ರೀತಿಯಲ್ಲಿ ಮಾತನಾಡಿದೆ;

ಎನ್ನ=ನನ್ನ; ನಿಡು+ತೋಳ್ಗಳ; ನಿಡು=ಉದ್ದನೆಯ; ನಿಡುದೋಳ್=ಉದ್ದನೆಯ ತೋಳು; ತೀನ್=ನವೆ/ತುರಿಕೆ; ತೋಳ್ಗಳ ತೀನ್=ತೋಳುಗಳ ತೀಟೆ/ತುರಿಕೆ/ನವೆ. ಇದೊಂದು ನುಡಿಗಟ್ಟು. ಅಪಾರವಾದ ಶಕ್ತಿಯನ್ನು ಹೊಂದಿರುವ ಶೂರನ ತೋಳುಗಳು ಹಗೆಯ ಎದುರು ಹೋರಾಡಲು ಇಲ್ಲವೇ ಹಗೆಯನ್ನು ಸದೆಬಡಿಯಲು ಸದಾಕಾಲ ತುಡಿಯುತ್ತಿರುತ್ತವೆ ಎಂಬ ತಿರುಳನ್ನು ಹೊಂದಿದೆ; ಮಳ್ಗಿಸುವೆ+ಅಪ್ಪೊಡೆ; ಮಳ್ಗು=ಕಡಿಮೆಯಾಗು/ಶಮನವಾಗು; ಅಪ್ಪೊಡೆ=ಆಗುವುದಾದರೆ; ಮಳ್ಗಿಸುವೆಯಪ್ಪೊಡೆ=ಕಡಿಮೆ ಮಾಡುತ್ತೇನೆ ಎನ್ನುವೆಯಾದರೆ; ಆನ್=ನಾನು; ಒಲ್ಲದನೇ=ಬೇಡ ಎನ್ನುತ್ತೇನೆಯೇ.

ಎನ್ನ ಈ ನಿಡುದೋಳ್ಗಳ ತೀನಮ್ ನೀನ್ ಮಳ್ಗಿಸುವೆಯಪ್ಪೊಡೆ ಆನ್ ಒಲ್ಲದನೇ ಎಂಬುದುಮ್=ನನ್ನ ಈ ಉದ್ದನೆಯ ತೋಳುಗಳ ತೀಟೆಯನ್ನು ನೀನು ತೀರಿಸುತ್ತೇನೆ ಎಂದರೆ ಬೇಡವೆನ್ನುತ್ತೇನೆಯೇ. ನಿನ್ನೊಡನೆ ಹೋರಾಟಕ್ಕೆ ಅಣಿಯಾಗಿದ್ದೇನೆ. ನಿನ್ನ ಸವಾಲನ್ನು ಒಪ್ಪಿಕೊಳ್ಳುತ್ತೇನೆ ಎಂದು ಅರ್‍ಜುನನು ನುಡಿಯಲು;

ಎಡೆ=ನಡುವೆ/ಜಾಗ; ವಂದು=ಬಂದು;

ದ್ರೋಣನುಮ್ ಕೃಪನುಮ್ ಎಡೆಗೆ ವಂದು ಕರ್ಣನನ್ ಇಂತು ಎಂದರ್=ವಿದ್ಯಾಗುರುಗಳಾದ ದ್ರೋಣ ಮತ್ತು ಕ್ರುಪರು ವಾಗ್ವಾದದಲ್ಲಿ ತೊಡಗಿದ್ದ ಅವರಿಬ್ಬರ ನಡುವೆ ಬಂದು, ಕರ್‍ಣನನ್ನು ಕುರಿತು ಈ ರೀತಿ ನುಡಿದರು;

ಏವ=ತಿರಸ್ಕಾರ; ಮುಳಿಸು=ಕೋಪ/ಸಿಟ್ಟು; ಆವುದು=ಯಾವುದು;

ಏವದ ಮುಳಿಸಿನ ಕಾರಣಮ್ ಆವುದೊ=ದ್ರೋಣ ಮತ್ತು ಕ್ರುಪರು ಕರ್‍ಣನನ್ನು ಕುರಿತು “ಅರ್‍ಜುನನ ಬಗ್ಗೆ ಈ ರೀತಿ ತಿರಸ್ಕಾರದಿಂದ ಮತ್ತು ಕೋಪದಿಂದ ನೀನು ಮಾತನಾಡುವುದಕ್ಕೆ ಕಾರಣವೇನು” ಎಂದು ಪ್ರಶ್ನಿಸಿದರು;

ದೆಸೆ+ಅನ್; ದೆಸೆ=ವಿಚಾರ/ಸಂಗತಿ/ತಾಯಿ ತಂದೆಯ ತಂದೆಯ ಸಾಮಾಜಿಕ ಅಂತಸ್ತು; ಭಾವಿಸು=ಗಮನಿಸು/ನೆನಪು ಮಾಡಿಕೊಳ್ಳು; ನುಡಿವ+ಅಂತು; ಅಂತು=ಹಾಗೆ; ನಿನಗಮ್=ನಿನಗೂ; ಅರಿಕೇಸರಿಗಮ್=ಅರ್‍ಜುನನಿಗೂ; ಸಮಕಟ್ಟು=ಸಮಾನವಾದ ಸಂಗತಿ;

ಕರ್ಣ, ನೀನ್ ನಿನ್ನ ತಾಯ ತಂದೆಯ ದೆಸೆಯನ್ ಭಾವಿಸದೆ ನುಡಿವಂತು ನಿನಗಮ್ ಅರಿಕೇಸರಿಗಮ್ ಸಮಕಟ್ಟು ಆವುದು ಎಂಬುದುಮ್=ಕರ್‍ಣನೇ “ನೀನು ನಿನ್ನ ತಾಯಿತಂದೆಯರಿಗೆ ಈ ಸಮಾಜದಲ್ಲಿರುವ ಅಂತಸ್ತು ಏನೆಂಬುದನ್ನು ಗಮನಿಸಿದೆ, ಅರ್‍ಜುನನ್ನು ನಿನ್ನೊಡನೆ ಹೋರಾಡಲು ಕರೆಯುತ್ತಿರುವೆ . ಈ ರೀತಿ ಸವಾಲನ್ನು ಹಾಕಲು ನಿನಗೂ ಅರ್‍ಜುನನಿಗೂ ಇರುವ ಸಮಾನವಾದ ಸಾಮಾಜಿಕ ಅಂತಸ್ತು ಯಾವುದು” ಎಂದು ಹೀಗಳೆದು ನುಡಿದಾಗ;

ಮರುಮಾತು=ಪ್ರತಿಯಾಗಿ ಮಾತನಾಡುವುದು/ಎದುರಾಗಿ ಮಾತನಾಡುವುದು/ಉತ್ತರವನ್ನು ನೀಡುವುದು; ಕುಡಲ್=ಕೊಡಲು; ಅರಿಯದೆ=ತಿಳಿಯದೆ;

ಆ ಮಾತಿಂಗೆ ಮರುವಾತು ಕುಡಲ್ ಅರಿಯದೆ=ದ್ರೋಣ ಮತ್ತು ಕ್ರುಪರ ಕಟುನುಡಿಗಳಿಗೆ ಪ್ರತಿಯಾಗಿ ನುಡಿಯಲು ತಿಳಿಯದೆ;

ಪಂದೆ+ಅನ್; ಪಂದೆ=ಹೇಡಿ/ಅಂಜುಬುರುಕ; ಪಾವ್=ಹಾವು; ಅಡರ್ದ+ಅಂತು; ಅಡರ್=ಮೇಲಕ್ಕೆ ಹತ್ತು/ಮುಟ್ಟು; ಅಂತು=ಆ ರೀತಿ; ಉಮ್ಮನೆ=ಅತಿ ಸಂಕಟದಿಂದ ಕೂಡಿ; ಬೆಮರುತ್ತುಮ್=ಬೆವರುತ್ತ; ಇರ್ದ=ಇರುವ;

ಪಂದೆಯನ್ ಪಾವ್ ಅಡರ್ದಂತು ಉಮ್ಮನೆ ಬೆಮರುತ್ತುಮ್ ಇರ್ದ ಕರ್ಣನನ್ ದುರ್ಯೋಧನನ್ ಕಂಡು=ತನ್ನ ಮಯ್ ಮೇಲೆ ಹಾವು ಬಿದ್ದಾಗ ಹೇಡಿಯು ಗಾಬರಿ, ಅಂಜಿಕೆ ಮತ್ತು ಸಂಕಟದಿಂದ ತತ್ತರಿಸುವಂತೆ ಎದೆಗುಂದಿದ ಕರ್‍ಣನನ್ನು ದುರ್‍ಯೋದನನು ನೋಡಿ;

ದ್ರೋಣನುಮನ್ ಕೃಪನುಮನ್ ಇಂತು ಎಂದನ್=ಕರ್‍ಣನನ್ನು ಕಟುವಾದ ನುಡಿಗಳಿಂದ ಹಂಗಿಸಿದ್ದ ದ್ರೋಣ ಮತ್ತು ಕೃಪರನ್ನು ಕುರಿತು ದುರ್‍ಯೋದನನು ಈ ರೀತಿ ನುಡಿದನು;

ಬೀರ=ಕಲಿತನ/ಶೂರತನ; ಕುಲಮ್+ಅಲ್ಲದೆ; ಕುಲ=ವ್ಯಕ್ತಿಯ ಸಾಮಾಜಿಕ ಅಂತಸ್ತನ್ನು ನಿರ್‍ಣಯಿಸುವ ಸಂಗತಿಯಾದ ವಂಶ/ಜಾತಿ/ಮನೆತನ;; ಎಂಬುದು+ಉಂಟೆ; ಎಂಬುದು=ಎನ್ನುವುದು; ಉಂಟೆ=ಇದೆಯೆ;

ಬೀರಮೆ ಕುಲಮಲ್ಲದೆ ಕುಲಮ್ ಎಂಬುದುಂಟೆ=ಜೀವನದಲ್ಲಿ ಎಡರುತೊಡರುಗಳು ಬಂದಾಗ ದಿಟ್ಟತನದಿಂದ ಹೋರಾಡಬಲ್ಲ ವೀರತನವೇ ವ್ಯಕ್ತಿಗೆ ಕುಲ. ಪರಾಕ್ರಮದ ಕಸುವನ್ನು ಹೊರತುಪಡಿಸಿ ಕುಲ ಎಂಬುದು ಬೇರೆ ಯಾವುದೂ ಇಲ್ಲ; ಅಂದರೆ ವ್ಯಕ್ತಿಯ ಸಾಮಾಜಿಕ ಅಂತಸ್ತು ಎಂಬುದು ಅವನ ವೀರತನದಿಂದ ದೊರೆಯುತ್ತದೆಯೇ ಹೊರತು ಅವನು ಹುಟ್ಟುವ ವಂಶ/ಜಾತಿ/ಮನೆತನದಿಂದಲ್ಲ;

ಇಂತು=ಈ ರೀತಿ; ಪಿಕ್ಕು=ಕೆದಕು/ಬಗೆದು ನೋಡು; ಪಿಕ್ಕದಿರಿಮ್=ಕೆದಕಿ ನೋಡಬೇಡಿ;

ಕುಲಮನ್ ಇಂತು ಪಿಕ್ಕದಿರಿಮ್=ಕರ್‍ಣನು ಯಾವ ಜಾತಿ/ವಂಶ/ಮನೆತನದಲ್ಲಿ ಹುಟ್ಟಿದ್ದಾನೆ ಎಂಬುದನ್ನು ಕೆದಕಿ ನೋಡಬೇಡಿ;

ನೀಮ್=ನೀವಿಬ್ಬರೂ; ಒಲಿ=ಬಯಸು/ಮೆಚ್ಚು; ಪುಟ್ಟು=ಹುಟ್ಟು; ಬಳೆ=ಬೆಳೆ;

ನೀಮ್ ಒಲಿದು ಎಲ್ಲಿ ಪುಟ್ಟಿ ಬಳೆದಿರೊ=ನೀವಾಗಿಯೇ ಬಯಸಿ ಯಾವ ಎಡೆಯಲ್ಲಿ/ಯಾವ ಕುಲದಲ್ಲಿ ಹುಟ್ಟಿ ಬೆಳೆದಿರುವಿರಿ;

ಕೊಡದ+ಒಳಮ್; ಕೊಡ=ಗಡಿಗೆ/ಮಣ್ಣಿನ ಪಾತ್ರೆ; ಒಳಮ್=ಒಳಗಡೆ; ಶರಸ್ತಂಬದ+ಒಳಮ್; ಶರಸ್ತಂಬ=ಜೊಂಡು ಹುಲ್ಲಿನ ಪೊದೆ; ಇರ್ದುದೆ=ಇದ್ದಿತ್ತೆ;

ಕೊಡದೊಳಮ್ ಶರಸ್ತಂಬದೊಳಮ್ ಕುಲಮ್ ಇರ್ದುದೆ ಎಂದು ನುಡಿದು=ಯಾವ ಕುಲದ ಹೆಸರನ್ನು ಎತ್ತಿ ಗುರುಗಳಿಬ್ಬರೂ ಕರ್‍ಣನನ್ನು ಹಂಗಿಸಿದ್ದರೋ , ಅವರಿಬ್ಬರ ಎದೆಗೆ ನಾಟುವಂತೆ ಅವರ ಹುಟ್ಟಿನ ಹಿನ್ನೆಲೆಯನ್ನು ಕುರಿತು ದುರ್‍ಯೋದನನು ಕಟುನುಡಿಗಳನ್ನು ಆಡತೊಡಗುತ್ತಾನೆ. ದ್ರೋಣಾಚಾರ್‍ಯರೇ, ನೀವು ಹುಟ್ಟಿದ್ದು ಕೊಡದಲ್ಲಿ. ಕ್ರುಪಾಚಾರ್‍ಯರೇ ನೀವು ಹುಟ್ಟಿದ್ದು ಜೊಂಡು ಹುಲ್ಲಿನ ಪೊದೆಯಲ್ಲಿ. ಆ ಕೊಡದಲ್ಲಿಯೂ…ಆ ಜೊಂಡುಹುಲ್ಲಿನ ಪೊದೆಯಲ್ಲಿಯೂ ನೀವು ಹೇಳುತ್ತಿರುವ ಉನ್ನತವಾದ ಕುಲವು ಇದ್ದಿತ್ತೇ?” ಎಂದು ಹಂಗಿಸಿ ನುಡಿದು;

ದ್ರೋಣರ ತಂದೆಯಾದ ಬರದ್ವಾಜನು ಒಮ್ಮೆ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದಾಗ, ಅಲ್ಲಿ ಒಬ್ಬ ಅಪ್ಸರೆಯ ಬೆತ್ತಲೆ ಮಯ್ಯನ್ನು ಕಂಡು, ವೀರ್‍ಯ ಚಿಮ್ಮೆತೆಂದು, ಆ ವೀರ್‍ಯವನ್ನು ಒಂದು ಕೊಡದಲ್ಲಿ ಹಾಕಿದಾಗ, ಕಾಲಾನಂತರದಲ್ಲಿ ಆ ಕೊಡದಲ್ಲಿ ಮಗು ಹುಟ್ಟಿತೆಂದು, “ಆ ಮಗುವೇ ದ್ರೋಣ” ಎಂಬ ಕಲ್ಪನೆಯ ಕತೆಯೊಂದು ವ್ಯಾಸರ ಮಹಾಭಾರತದಲ್ಲಿದೆ. ದ್ರೋಣ ಎಂಬ ಪದಕ್ಕೆ “ನೀರನ್ನು ತುಂಬಿಡುವ ದೋಣಿಯಾಕಾರದ ಮರದ ಪಾತ್ರೆ” ಎಂಬ ತಿರುಳಿದೆ;

ಕ್ರುಪಾಚಾರ್‍ಯನ ತಂದೆಯಾದ ಶರದ್ವಂತನು ಅಪ್ಸರೆಯೊಬ್ಬಳನ್ನು ಕಂಡು ಕಾಮುಕನಾದಾಗ ವೀರ್‍ಯ ಚಿಮ್ಮಿತೆಂದು, ಅದನ್ನು ಜೊಂಡು ಹುಲ್ಲಿನ ಪೊದೆಯೊಂದರಲ್ಲಿ ಅಡಗಿಸಿಟ್ಟಾಗ, ಕಾಲಕ್ರಮೇಣ ಆ ಪೊದೆಯಲ್ಲಿ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಹುಟ್ಟಿದವು ಎಂದು, ಆ ಗಂಡು ಮಗುವಿಗೆ ಕ್ರುಪನೆಂಬ ಮತ್ತು ಹೆಣ್ಣು ಮಗುವಿಗೆ ಕ್ರುಪೆ ಎಂಬ ಹೆಸರು ಬಂದಿತೆಂಬ ಕತೆಯೊಂದು ವ್ಯಾಸರ ಮಹಾಬಾರತದಲ್ಲಿದೆ;

ಇಂಡಿಯಾ ದೇಶದ ಮಹಾಕಾವ್ಯಗಳಾದ ‘ರಾಮಾಯಣ’ ಮತ್ತು ‘ಮಹಾಬಾರತ’ ಗಳಲ್ಲಿ ಕೆಲವು ವ್ಯಕ್ತಿಗಳ ಹುಟ್ಟನ್ನು ಈ ರೀತಿ ಕೆಲವು ರೂಪಕಗಳ ಮೂಲಕ ವಿವರಿಸಿದ್ದಾರೆ. ಆದರೆ ಮಗುವಿನ ಜನನಕ್ಕೆ ಒಬ್ಬ ಹೆಂಗಸು ಮತ್ತು ಒಬ್ಬ ಗಂಡಸಿನ ಕಾಮದ ನಂಟು ಅಗತ್ಯವೆಂಬುದು ನಿಸರ್‍ಗಸಹಜವಾದ ಸಂಗತಿ;

ಈಗಳೆ=ಈ ಗಳಿಗೆಯಲ್ಲಿಯೇ; ಕುಲಜನ್+ಅನ್; ಕುಲಜ=ಸಾಮಾಜಿಕವಾಗಿ ಉನ್ನತವಾದ ಅಂತಸ್ತುಳ್ಳವನು; ತೋರ್ಪೆನ್=ತೋರುತ್ತೇನೆ;

ಕರ್ಣನನ್ ಈಗಳೆ ಕುಲಜನನ್ ಮಾಡಿ ತೋರ್ಪೆನ್ ಎಂದು=ಕರ್‍ಣನನ್ನು ಈ ಗಳಿಗೆಯಲ್ಲಿಯೇ ಸಮಾಜದಲ್ಲಿ ಉನ್ನತವಾದ ಅಂತಸ್ತು ಉಳ್ಳವನನನ್ನಾಗಿ ಮಾಡಿ ತೋರುತ್ತೇನೆ ಎಂದು ನುಡಿದು;

ಕೆಯ್ಯನ್ ಪಿಡಿದು ಒಡಗೊಂಡು ಪೋಗಿ=ಕರ್‍ಣನ ಕಯ್ಯನ್ನು ಹಿಡಿದುಕೊಂಡು ತನ್ನ ಜತೆಯಲ್ಲಿ ಕರೆದುಕೊಂಡು ಹೋಗಿ;

ಕನಕ=ಚಿನ್ನ/ಹೊನ್ನು/ಬಂಗಾರ; ಪೀಠ=ಕುಳಿತುಕೊಳ್ಳುವ ಉಪಕರಣ/ಗದ್ದುಗೆ/ಆಸನ;

ಕನಕಪೀಠದ ಮೇಲೆ ಕುಳ್ಳಿರಿಸಿ=ಚಿನ್ನದ ಗದ್ದುಗೆಯ ಮೇಲಿ ಕುಳ್ಳಿರಿಸಿ;

ಕಳಶ=ಮಂಗಳ ಕಾರ್ಯಗಳ ಆಚರಣೆಯಲ್ಲಿ ನೀರನ್ನು ತುಂಬಿ ಇಡುವುದಕ್ಕೆ ಬಳಸುವ ಚೆಂಬು; ತೀವು=ತುಂಬು; ಅಗಣ್ಯ=ಲೆಕ್ಕವಿಲ್ಲದಶ್ಟು/ಅತಿ ಹೆಚ್ಚಿನ; ಪುಣ್ಯ=ಮಂಗಳಕರವಾದ; ತೀರ್ಥ+ಉದಕಮ್+ಗಳಮ್; ತೀರ್ಥ=ಪವಿತ್ರವೆಂದು ತಿಳಿದಿರುವ ನೀರು; ಉದಕ=ನೀರು/ಜಲ; ಚತುರ್ವೇದ+ಪಾರಗರ್+ಇಂದ; ಚತುರ್‍ವೇದ-ಋಗ್ವೇದ-ಯಜುರ್‍ವೇದ-ಸಾಮವೇದ-ಅಥರ್‍ವಣ ವೇದ ಎಂಬ ನಾಲ್ಕು ವೇದಗಳು; ಪಾರಗ=ಪಂಡಿತ; ಅಭಿಷೇಕಮ್+ಗೆಯ್ಸಿ; ಅಭಿಷೇಕ=ರಾಜನಿಗೆ ಪಟ್ಟ ಕಟ್ಟುವಾಗ ಮಾಡಿಸುವ ಮಂಗಳ ಸ್ನಾನ; ಗೆಯ್ಸಿ=ಮಾಡಿಸಿ;

ಕನಕಕಳಶದಲ್ ತೀವಿದ ಅಗಣ್ಯಪುಣ್ಯ ತೀರ್ಥೋದಕಂಗಳಮ್ ಚತುರ್ವೇದಪಾರಗರಿಂದ ಅಭಿಷೇಕಂಗೆಯ್ಸಿ=ಪುಣ್ಯದ ನೆಲೆಗಳೆಂದು ಹೆಸರುಪಡೆದಿರುವ ನೂರಾರು ನದಿಗಳಿಂದ ತಂದು ಚಿನ್ನದ ಕಳಶಗಳಲ್ಲಿ ತುಂಬಿಟ್ಟಿರುವ ನೀರನ್ನು ತರಿಸಿ, ನಾಲ್ಕು ವೇದಗಳಲ್ಲಿ ಪಾರಂಗತರಾದ ವ್ಯಕ್ತಿಗಳಿಂದ ಕರ್‍ಣನಿಗೆ ಮಂಗಳಸ್ನಾನವನ್ನು ಮಾಡಿಸಿ;

ಪರೆ=ಪ್ರಾಣಿಗಳ ತೊಗಲಿನಿಂದ ಮಾಡಿದ ಒಂದು ಬಗೆಯ ವಾದ್ಯ; ಮಂಗಳ ಪರೆಗಳು=ಒಳ್ಳೆಯ ಕಾರ್‍ಯಗಳನ್ನು ಮಾಡುವಾಗ ಬಾರಿಸುವ ದೊಡ್ಡ ಗಾತ್ರದ ವಾದ್ಯಗಳು; ಶುಭ ವಚನ=ಒಳ್ಳೆಯದನ್ನು ಹಾರಯಿಸುವ ನುಡಿ;

ಚಮರ=ಒಂದು ಬಗೆಯ ಗಂಡು ಪ್ರಾಣಿ; ಚಮರೀ=ಹೆಣ್ಣು ಪ್ರಾಣಿ; ಚಮರೀರುಹ=ಹೆಣ್ಣು ಚಮರಿಯ ಬಾಲದಲ್ಲಿನ ಉದ್ದನೆಯ ಕೂದಲನ್ನು ಜೋಡಿಸಿ ಮಾಡಿರುವ ಚಾಮರ/ಬೀಸಣಿಗೆ; ಶ್ವೇತಚ್ಛತ್ರ=ಬೆಳ್ಗೊಡೆ; ಇದು ರಾಜತ್ವದ ಸಂಕೇತವಾಗಿರುವ ಕೊಡೆ; ಅಮರ್=ಕೂಡಿಸು/ಜೋಡಿಸು; ಎಸೆ=ಕಂಗೊಳಿಸು/ಒಪ್ಪು;

ಮಂಗಳ ಪರೆಗಳ್ ಶುಭ ವಚನಂಗಳ್ ಚಮರೀರುಹಂಗಳ್ ಆ ಶ್ವೇತಚ್ಛತ್ರಂಗಳ್ ಅಮರ್ದು ಎಸೆಯೆ=ಕರ್‍ಣನಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಮಂಗಳವಾದ್ಯಗಳು ಮೊಳಗುತ್ತಿವೆ; ಮಂಗಲಕರ ನುಡಿಗಳು ಎಲ್ಲೆಡೆಯಲ್ಲಿಯೂ ಕೇಳಿಬರುತ್ತಿವೆ; ಕುಳಿತಿರುವ ಗದ್ದುಗೆಯ ಮೇಲೆ ಬೆಳ್ಗೊಡೆಯು ಅಲಂಕರಿಸಿದೆ; ಚಾಮರಗಳಿಂದ ಕರ್‍ಣನಿಗೆ ಗಾಳಿಯನ್ನು ಬೀಸಲಾಗುತ್ತಿದೆ. ಇವೆಲ್ಲದರಿಂದ ಕರ್‍ಣನಿಗೆ ಪಟ್ಟ ಕಟ್ಟುತ್ತಿರುವ ಆಚರಣೆಯು ಕಂಗೊಳಿಸುತ್ತಿರಲು;

ಮಹೀತಳ=ಬೂಮಂಡಲ; ಅಂಗಮಹೀತಳ=ಅಂಗವೆಂಬ ಹೆಸರಿನ ರಾಜ್ಯ; ವಿಭೂತಿ+ಅನ್; ವಿಭೂತಿ=ಸಿರಿ/ಸಂಪತ್ತು; ನೆರೆ+ಇತ್ತನ್; ನೆರೆ=ಪೂರ್‍ಣವಾಗಿ; ಇತ್ತನ್=ಕೊಟ್ಟನು;

ಅಂಗಮಹೀತಳ ವಿಭೂತಿಯನ್ ಕರ್ಣಂಗೆ ನೆರೆಯಿತ್ತನ್=ಅಂಗರಾಜ್ಯದ ಒಡೆತನವನ್ನು ಕರ್‍ಣನಿಗೆ ಸಂಪೂರ್‍ಣವಾಗಿ ನೀಡಿದನು;

ಅಂತು ಇತ್ತು=ಆ ರೀತಿಯಲ್ಲಿ ಅಂಗರಾಜ್ಯವನ್ನು ಕರ್‍ಣನಿಗೆ ನೀಡುವುದರ ಜತೆಗೆ;

ದೇವ ಸಬಳ=ದೇವರ ಚಿತ್ರದ ಮುದ್ರೆಯಿರುವ ನಾಣ್ಯದ ಹೆಸರು;

ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನ್ ಇತ್ತು=ಪ್ರತಿನಿತ್ಯವೂ ದಾನ ಮಾಡುವುದಕ್ಕೆಂದು ದೇವರ ಮುದ್ರೆಯಿರುವ ಹದಿನೆಂಟು ಕೋಟಿ ಚಿನ್ನದ ನಾಣ್ಯಗಳನ್ನು ಕರ್‍ಣನಿಗೆ ನೀಡಿ;

ಈಯಲ್+ವೇಳ್ಪುದು; ಈ=ಕೊಡು/ನೀಡು; ಈಯಲ್=ಕೊಡಲು; ವೇಳ್ಪುದು=ಬೇಕಾಗಿರುವುದು;

ನೀನ್ ಎನಗೆ ಒಂದನ್ ಈಯಲ್ವೇಳ್ಪುದು=ನಿನಗೆ ನಾನು ಅಂಗರಾಜ್ಯವನ್ನು ಕೊಟ್ಟಿದ್ದೇನೆ. ಅದಕ್ಕೆ ಪ್ರತಿಯಾಗಿ ನೀನು ನನಗೆ ಒಂದನ್ನು ಕೊಡಬೇಕು. ಅದೇನೆಂದರೆ;

ಪೊಡಮಡು=ನಮಸ್ಕರಿಸು; ಜೀಯ=ಸ್ವಾಮಿ/ಒಡೆಯ; ಎಂಬರ್=ಎನ್ನುವರು; ಕುಡು=ಕೊಡು; ದಯೆಗೆಯ್=ಕರುಣಿಸು; ಪ್ರಸಾದ=ಅನುಗ್ರಹ; ಪೆರರ್=ಇತರರು; ನಡೆ=ಆಚರಿಸು/ಮಾಡು;

ಪೊಡಮಡುವರ್… ಜೀಯ ಎಂಬರ್… ಕುಡು ದಯೆಗೆಯ್… ಏನ್ ಪ್ರಸಾದಮ್… ಎಂಬ ಇವು ಪೆರರೊಳ್ ನಡೆಗೆ=ರಾಜನಾದ ನನಗೆ ಕೆಲವರು ನಮಸ್ಕರಿಸುತ್ತಾರೆ; ಇನ್ನು ಕೆಲವರು “ಒಡೆಯ” ಎಂದು ತಲೆಬಾಗುತ್ತಾರೆ; “ಕೊಡು..ದಯಪಾಲಿಸು” ಎಂದು ಬೇಡುತ್ತಾರೆ; “ನಿನ್ನ ಆದೇಶವೇನು ತಿಳಿಸು. ಅದನ್ನು ಪಾಲಿಸುತ್ತೇವೆ” ಎನ್ನುತ್ತಾರೆ. ಈ ಎಲ್ಲ ಬಗೆಯ ಕ್ರಿಯೆಗಳನ್ನು ಇತರರು ಮಾಡಲಿ;

ಎಮ್ಮ=ನಮ್ಮ; ಎಡೆ+ಒಳ್; ಎಡೆ=ನೆಲೆ; ಎಮ್ಮ ನಿನ್ನ ಎಡೆಯೊಳ್=ನಮ್ಮಿಬ್ಬರ ನಡುವೆ; ಕೆಳೆಯ=ಗೆಳೆಯ; ಬೇಡು=ಯಾಚಿಸು/ಕೇಳು;

ಎಮ್ಮ ನಿನ್ನ ಎಡೆಯೊಳ್ ನಡೆಯಲ್ವೇಡ… ರಾಧೇಯಾ ಎನಗೆ ಕೆಳೆಯನೈ ಎಂದು ಬೇಡಿಕೊಂಡು=ನನ್ನ ನಿನ್ನ ನಡುವೆ ಇಂತಹ ಯಾವುದೇ ಸಂಪ್ರದಾಯದ ಆಚರಣೆಗಳು ಬೇಡ. ಏಕೆಂದರೆ ಕರ್‍ಣ, ಈ ಗಳಿಗೆಯಿಂದ ನೀನು ನನ್ನ ಗೆಳೆಯನಾಗಿರುವೆ ಎಂದು ಕೇಳಿಕೊಂಡು;

ಪೊಡಮಡಿಸಿದ+ಆಗಳ್;

ಕರ್ಣನನ್ ಮುಂದಿಟ್ಟು ಒಡಗೊಂಡು ಪೋಗಿ ಧೃತರಾಷ್ಟ್ರಂಗಮ್ ಗಾಂಧಾರಿಗಮ್ ಪೊಡಮಡಿಸಿದಾಗಳ್=ಅಂಗರಾಜನೂ ಮತ್ತು ತನ್ನ ಗೆಳೆಯನೂ ಆದ ಕರ್‍ಣನನ್ನು ಮುಂದಿಟ್ಟುಕೊಂಡು ಜತೆಗೂಡಿ ಹೋಗಿ ತಂದೆಯಾದ ದ್ರುತರಾಶ್ಟ್ರ ಮತ್ತು ತಾಯಿಯಾದ ಗಾಂದಾರಿಗೆ ಕರ್‍ಣನಿಂದ ನಮಸ್ಕಾರವನ್ನು ಮಾಡಿಸಿ, ಹಿರಿಯರ ಆಶೀರ್‍ವಾದ ಕರ್‍ಣನಿಗೆ ದೊರೆಯುವಂತೆ ಮಾಡಿದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks