ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಅಂಬೆ ಪ್ರಸಂಗ – ನೋಟ – 2

– ಸಿ. ಪಿ. ನಾಗರಾಜ.

ಅಂಬೆ ಪ್ರಸಂಗ

(ಆದಿ ಪರ್ವ. ಎರಡನೆಯ ಸಂಧಿ: ಪದ್ಯ: 30 ರಿಂದ 38)

ಪಾತ್ರಗಳು

ಅಂಬೆ: ಕಾಶಿರಾಜನ ಹಿರಿಯ ಮಗಳು. ಕಾಶಿರಾಜನಿಗೆ ಅಂಬೆ-ಅಂಬಿಕೆ-ಅಂಬಾಲೆ ಎಂಬ ಹೆಸರಿನ
ಮೂವರು ಹೆಣ್ಣು ಮಕ್ಕಳಿದ್ದರು.
ಶಂತನು: ಹಸ್ತಿನಾವತಿಯ ರಾಜ
ಯೋಜನಗಂದಿ: ರಾಣಿ. ಶಂತನು ರಾಜನ ಹೆಂಡತಿ.
ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ: ಶಂತನು ಮತ್ತು ಯೋಜನಗಂದಿ ದಂಪತಿಯ ಇಬ್ಬರು ಗಂಡು
ಮಕ್ಕಳು.
ಬೀಶ್ಮ: ಶಂತನು ಮತ್ತು ಗಂಗಾದೇವಿಯ ಮಗ.
ಪರಶುರಾಮ: ಬೀಶ್ಮನ ವಿದ್ಯಾ ಗುರು.

ಅಂಬೆ ಪ್ರಸಂಗ

ಬಳಿಕ ಯೋಜನಗಂಧಿಯಲಿ ದೀಪ್ತಜ್ವಲನತೇಜರು… ಹಿಮಕರ ಅನ್ವಯಕೆ ಕಲ್ಪಭೂಜರು… ಮಕ್ಕಳುಗಳು ಅವತರಿಸಿದರು. ಆ ನೃಪ ತಿಲಕ ಚಿತ್ರಾಂಗದನನ ವಿಚಿತ್ರವೀರ್ಯನ ನಾಮಕರಣದಲಿ ಲಲಿತ ಮಂಗಳ ಜಾತಕರ್ಮಾವಳಿಯ ನೆಗಳೆ… ಇರಲಿರಲು ಶಂತನು ಮಹೀಪತಿ ಸುರರೊಳಗೆ ಸೇರಿದನು.

  ಬಳಿಕ ಚಿತ್ರಾಂಗದ ಕುಮಾರಂಗೆ ಈ ಧರಣಿ ಒಡೆತನವಾಯ್ತು. ಅರಸ ಕೇಳೈ, ಕೆಲವು ಕಾಲಾಂತರದಲಿ… ಆತನು ಗಂಧರ್ವರಲಿ ಕಾದಿ ಮಡಿದನು. ವಿಚಿತ್ರವೀರ್ಯಂಗೆ  ಪಟ್ಟವಾಯ್ತು. ರಾಯ ಕೇಳೈ, ಭೀಷ್ಮನು ಸಕಲ ರಾಜ್ಯಶ್ರೀಯನು ಆತಂಗೆ ಇತ್ತು, ತಾಯ ಚಿತ್ತವ ಪಡೆದು ಜಗತ್ರಯವ  ಮೆಚ್ಚಿಸಿದನು.

 ರಾಯ ಕುವರನ ಮದುವೆಗೆ ಅಬ್ಜದಳಾಯತಾಕ್ಷಿಯರನು ವಿಚಾರಿಸಿ ಒಂದು ವಿವಾಹ ಮಂಟಪಕೆ  ದಳದುಳದೊಳು ಹಾಯಿದನು. ಘಲ್ಲಣೆಯ ಖಂಡೆಯದ ಚೌಪಟಮಲ್ಲ ಭೀಷ್ಮನು ಅಲ್ಲಿ ನೆರೆದ ಆ ಕ್ಷತ್ರವರ್ಗವ  ಚೆಲ್ಲಬಡಿದು… ವಿವಾಹಶಾಲೆಯ ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು… ಅವರೆಲ್ಲರನು ಪುರಕೆ ತಂದು… ತಮ್ಮಂಗೆ ಮದುವೆ ಮಾಡಲು ಅನುವಾದ… ಆ ಕಮಲಲೋಚನೆಯರೊಳು ಮೊದಲಾಕೆ ಛಲದ ಬಿಗುಹಿನಲಿ… ಭೀಷ್ಮನ ಗಂಡನೆಂದೇ ನೂಕಿ ಭಾಷೆಯ ಮಾಡಿ ನಿಂದಳು.

ಭೀಷ್ಮ: ಆಕೆ ಮಾಣಲಿ. ಈ  ಕುಮಾರಂಗೆ ಮಿಕ್ಕವರು ಬರಲಿ.

              (ಎಂದು ಭೀಷ್ಮ ವೈದಿಕ ಲೌಕಿಕೋತ್ಸವದಿಂದ ಮದುವೆಯ ಮಾಡಿದನು. ಅರಸ

               ಚಿತ್ತೈಸು, ಅಂಬೆ ಎಂಬಳು ದುರುಳೆ…)

ಅಂಬೆ: ಭೀಷ್ಮನ ಕೂಟವಲ್ಲದೆ… ಮರಣದ ಎಡೆಯಲಿ ಬೆರಸಿದಲ್ಲದೆ…ಪಂಥವಿಲ್ಲ.

                 (ಎಂದು ಪರಶುರಾಮನ ಭಜಿಸಿ ಹಸ್ತಿನಾಪುರಕೆ ತಂದಳು…ಹೇಳಿಸಿದಳು…ಈ

               ಸುರನದೀನಂದನನು  ಮಾಡಿದ  ಪರಿಯ ಕೇಳೆಂದ.)

ಭೀಷ್ಮ: ಸತಿಯನು ಒಲ್ಲೆನು. ಬ್ರಹ್ಮಚರ್ಯಸ್ಥಿತಿಗೆ ತಪ್ಪುವನಲ್ಲ.

ನೀವು ಅನುಚಿತವ ನೆನೆದರೆ… ನಡೆಯಿ… ನಿಮಗೆ ಕಾಳಗವ ಕೊಟ್ಟೆನು.

                    (ವ್ರತದ ನಿಧಿ ಭೀಷ್ಮ ಕುರುಭೂಮಿಯಲಿ ಶರತತಿಯಲಿ ಇಪ್ಪತ್ತೊಂದು ದಿನ

                      ಭೃಗುಸುತನೊಡನೆ ಕಾದಿದನು… ವಿರಥನ ಮಾಡಿದನು… ನುಡಿಯ ಭಂಗಿಸಲೆಂದು

                      ಗುರುವು ಅವಗಡಿಸಿ ಹೊಕ್ಕರೆ… ಸರಳ ಮೊನೆಯಲಿ ಕೊಡಹಿ

                      ಬಿಸುಟನು… ಮಹಾವ್ರತ ಸ್ಥಿತಿಯ ಬಿಟ್ಟುದಿಲ್ಲ.)

ಪರಶುರಾಮ:  ನುಡಿಯ  ಮೀರದ  ನಮ್ಮ ಶಿಷ್ಯನನು ಒಡಬಡಿಸಿಕೊಳ್ಳು.

                  (ಎಂದು ನಾರಿಗೆ ನುಡಿದು…ಪರಶುರಾಮಮುನಿ ತನ್ನಾಶ್ರಮಕೆ ಸರಿದನು. ಅಂಬೆ

                   ಭೀಷ್ಮನ ಬೈದು… ಕಂಬನಿದುಂಬಿ ತಪಕೆ ಹೋದಳು. ಬಳಿಕ ಈ ಅಂಬಿಕೆಯನು

                   ಅಂಬಾಲೆಯನು ನೃಪಸೂನು ರಮಿಸಿದನು. ಬೆಂಬಲಕೆ ಕಲಿ ಭೀಷ್ಮನಿರೆ…

ಚತುರಂಬುಧಿಯ ಮಧ್ಯದ ನೃಪಾಲ ಕದಂಬವು ಈತಂಗೆ ಇದಿರೆ…

ಅಖಿಳ ಭೂತಳವ ಸಲಹಿದನು.)

ಪದ ವಿಂಗಡಣೆ ಮತ್ತು ತಿರುಳು

ಬಳಿಕ=ಯೋಜನಗಂದಿ ಮತ್ತು ಶಂತನು ರಾಜ ದಂಪತಿಗಳು ಜತೆಗೂಡಿ ಬಾಳುತ್ತಿರಲು; ದೀಪ್ತ=ಹೊಳೆಯುವ; ಜ್ವಲನ=ಸೂರ್‍ಯ; ಹಿಮಕರ=ಚಂದ್ರ; ಅನ್ವಯ=ವಂಶ/ಕುಲ; ಕಲ್ಪಭೂಜ=ಬಯಸಿದ್ದೆಲ್ಲವನ್ನೂ ನೀಡುವ ಮರ. ಇದು ದೇವಲೋಕದ ದೇವೇಂದ್ರನ ಉಪವನದಲ್ಲಿದೆ ಎಂಬ ಕಲ್ಪನೆಯು ಜನಮನದಲ್ಲಿದೆ;

ಬಳಿಕ ಯೋಜನಗಂಧಿಯಲಿ ದೀಪ್ತಜ್ವಲನತೇಜರು ಹಿಮಕರ ಅನ್ವಯಕೆ ಕಲ್ಪಭೂಜರು ಮಕ್ಕಳುಗಳು ಅವತರಿಸಿದರು=ಯೋಜನಗಂದಿ ಮತ್ತು ರಾಜ ಶಂತನು ದಂಪತಿಗಳು ಜತೆಗೂಡಿ ಬಾಳುತ್ತಿರಲು, ಯೋಜನಗಂದಿಯ ಹೊಟ್ಟೆಯಲ್ಲಿ ಸೂರ್‍ಯನಂತೆ ಪ್ರಕಾಶಮಾನವಾದ ತೇಜಸ್ಸುಳ್ಳವರು ಮತ್ತು ಚಂದ್ರವಂಶಕ್ಕೆ ಕಲ್ಪವ್ರುಕ್ಶದಂತಿರುವ ಮಕ್ಕಳು ಹುಟ್ಟಿದರು; ನೃಪ ತಿಲಕ=ರಾಜರುಗಳಲ್ಲಿಯೇ ಉತ್ತಮನಾದವನು/ಶಂತನು; ಲಲಿತ=ಸುಂದರವಾದ/ ಚೆಲುವಾದ; ಜಾತಕರ್ಮ+ಆವಳಿ; ಜಾತಕರ್ಮ=ಮಗು ಹುಟ್ಟಿದಾಗ ಮಾಡುವ ಆಚರಣೆ; ಆವಳಿ=ಗುಂಪು/ರಾಶಿ; ನೆಗಳು=ಮಾಡು/ಆಚರಿಸು;

ಆ ನೃಪ ತಿಲಕ ಚಿತ್ರಾಂಗದನನ ವಿಚಿತ್ರವೀರ್ಯನ ನಾಮಕರಣದಲಿ ಲಲಿತ ಮಂಗಳ ಜಾತಕರ್ಮಾವಳಿಯ ನೆಗಳೆ=ರಾಜ ಶಂತನು ಆ ಮಕ್ಕಳಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ ಎಂಬ ಹೆಸರನ್ನಿಟ್ಟು ಮಂಗಳಕರವಾದ ರೀತಿಯಲ್ಲಿ ನಾಮಕರಣದ ಉತ್ಸವದ ಆಚರಣೆಗಳನ್ನು ಮಾಡಿದನು; ಸುರರೊಳಗೆ ಸೇರಿದನು=ಇದೊಂದು ನುಡಿಗಟ್ಟು. ದೇವತೆಗಳಲ್ಲಿ ಸೇರಿದನು ಎಂದರೆ ಸಾವನ್ನಪ್ಪಿದನು ಎಂಬ ತಿರುಳಿದೆ;

ಇರಲಿರಲು ಶಂತನು ಮಹೀಪತಿ ಸುರರೊಳಗೆ ಸೇರಿದನು=ಹಲವು ವರುಶಗಳ ನಂತರ ಶಂತನು ರಾಜನು ಸಾವನ್ನಪ್ಪಿದನು; ಧರಣಿ=ರಾಜ್ಯ/ಬೂಮಿ;  

ಬಳಿಕ ಚಿತ್ರಾಂಗದ ಕುಮಾರಂಗೆ ಈ ಧರಣಿ ಒಡೆತನವಾಯ್ತು=ಶಂತನು ರಾಜನ ಮರಣದ ನಂತರ ಹಿರಿಯ ಮಗನಾದ ಚಿತ್ರಾಂಗದನಿಗೆ ರಾಜ್ಯದ ಒಡೆತನ ಬಂದಿತು;

ಅರಸ ಕೇಳೈ= ಜನಮೇಜಯ ರಾಜನೇ ಕೇಳು. ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ವ್ಯಾಸ ರಚಿತ ಮಹಾಬಾರತ ಕತೆಯನ್ನು ಮತ್ತೊಮ್ಮೆ ಹೇಳುತ್ತಿದ್ದಾನೆ;

ಕೆಲವು ಕಾಲಾಂತರದಲಿ ಆತನು ಗಂಧರ್ವರಲಿ ಕಾದಿ ಮಡಿದನು= ಹೀಗೆ ಚಿತ್ರಾಂಗದನು ರಾಜ್ಯವನ್ನು ಆಳುತ್ತಿರುವಾಗ ಕೆಲವು ವರುಶಗಳ ನಂತರ  ಗಂದರ‍್ವರೊಡನೆ ನಡೆದ ಕಾಳೆಗದಲ್ಲಿ ಚಿತ್ರಾಂಗದನು ಸಾವನ್ನಪ್ಪಿದನು;

ವಿಚಿತ್ರ ವೀರ್ಯಂಗೆ ಪಟ್ಟವಾಯ್ತು= ವಿಚಿತ್ರವೀರ‍್ಯನಿಗೆ ಪಟ್ಟ ದೊರೆಯಿತು;

ರಾಯ ಕೇಳೈ, ಭೀಷ್ಮನು ಸಕಲ ರಾಜ್ಯಶ್ರೀಯನು ಆತಂಗೆ ಇತ್ತು… ತಾಯ ಚಿತ್ತವ ಪಡೆದು ಜಗತ್ರಯವ  ಮೆಚ್ಚಿಸಿದನು=ಜನಮೇಜಯ ರಾಜನೇ ಕೇಳು, ಬೀಶ್ಮನು ರಾಜ್ಯದ ಒಡೆತನವನ್ನು ವಿಚಿತ್ರವೀರ‍್ಯನಿಗೆ ಕೊಟ್ಟು, ತಾಯಿ ಯೋಜನಗಂದಿಯ ಮನಸ್ಸನ್ನು ಗೆಲ್ಲುವುದರ ಜತೆಗೆ ಮೂರು ಲೋಕದ ಮೆಚ್ಚುಗೆಗೂ ಪಾತ್ರನಾದನು. ಏಕೆಂದರೆ ಈ ಮೊದಲು ಬೀಶ್ಮನು ತನ್ನ ತಂದೆ ಶಂತನು ರಾಜ ಮತ್ತು ಯೋಜನಗಂದಿಯ ಮದುವೆಯನ್ನು ಮಾಡಿಸುವಾಗ, ತಾನು ಮಾಡಿದ್ದ ಪ್ರತಿಜ್ನೆಗೆ ಅನುಸಾರವಾಗಿ, ರಾಜ್ಯದ ಪಟ್ಟಕ್ಕಾಗಿ ತಾನು ಹಂಬಲಿಸದೆ, ಯೋಜನಗಂದಿಯ ಮಗನಿಗೆ ದೊರೆಯುವಂತೆ ಮಾಡಿದ್ದಾನೆ; ಅಬ್ಜ+ದಳ+ಆಯತ+ಅಕ್ಷಿಯರು; ಅಬ್ಜ=ತಾವರೆ; ಆಯತ=ವಿಶಾಲವಾದ; ಅಕ್ಷಿ=ಕಣ್ಣು;

ರಾಯ ಕುವರನ ಮದುವೆಗೆ ಅಬ್ಜದಳಾಯತಾಕ್ಷಿಯರನು ವಿಚಾರಿಸಿ=ರಾಜ ಕುಮಾರನಾದ ವಿಚಿತ್ರವೀರ‍್ಯನಿಗೆ ಮದುವೆಯನ್ನು ಮಾಡಲೆಂದು ತಾವರೆಹೂವಿನ ದಳದಂತೆ ವಿಶಾಲವಾದ ಕಣ್ಣುಳ್ಳ ಸುಂದರ ಹೆಣ್ಣುಗಳನ್ನು ಅರಸುತ್ತ; ದಳದುಳ=ದಾಳಿ/ಆಕ್ರಮಣ;

ಒಂದು ವಿವಾಹ ಮಂಟಪಕೆ ದಳದುಳದೊಳು ಹಾಯಿದನು=ಒಂದು ವಿವಾಹ ಮಂಟಪಕ್ಕೆ ಆಕ್ರಮಣಮಾಡುತ್ತ ಒಳ ನುಗ್ಗಿದನು; ಘಲ್ಲಣೆ=ಬಯಂಕರ ಶಬ್ದ/ಅಬ್ಬರದ ದನಿ; ಖಂಡೆಯ=ಕತ್ತಿ; ಚೌಪಟಮಲ್ಲ=ಮಹಾವೀರ/ಉತ್ತಮ ಯೋದ; ಕ್ಷತ್ರ=ಕ್ರತ್ರಿಯ; ವರ್ಗ=ಗುಂಪು; ಚೆಲ್ಲಬಡಿದು=ದಿಕ್ಕಾಪಾಲಾಗಿ ಚದುರುವಂತೆ ದಾಳಿ ಮಾಡಿ;

ಘಲ್ಲಣೆಯ ಖಂಡೆಯದ  ಚೌಪಟಮಲ್ಲ ಭೀಷ್ಮನು… ಅಲ್ಲಿ ನೆರೆದ ಆ ಕ್ಷತ್ರವರ್ಗವ ಚೆಲ್ಲಬಡಿದು=ದೊಡ್ಡ ದನಿಯಲ್ಲಿ ಅಬ್ಬರಿಸುತ್ತ ಮುನ್ನುಗ್ಗಿ,  ಕತ್ತಿ ಹಿಡಿದಿರುವ ಮಹಾವೀರನಾದ ಬೀಶ್ಮನು ಆ ಸ್ವಯಂವರ ಮಂಟಪದಲ್ಲಿ ಮದುವೆಯಾಗಲೆಂದು ಬಂದಿದ್ದ ಕ್ಶತ್ರಿಯರ ಗುಂಪಿನ ರಾಜರೆಲ್ಲರನ್ನು  ದಿಕ್ಕಾಪಾಲಾಗಿ ಓಡಿಹೋಗುವಂತೆ ಹೊಡೆದು; ಚೆಲ್ಲೆ+ಕಣ್+ಗಳು; ಚೆಲ್ಲೆಗಣ್ಣು=ಅಗಲವಾದ ಕಣ್ಣು; ಅನುವಾದ=ಸಿದ್ದನಾದನು;

ವಿವಾಹಶಾಲೆಯ ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು, ಅವರೆಲ್ಲರನು ಪುರಕೆ ತಂದು, ತಮ್ಮಂಗೆ ಮದುವೆ ಮಾಡಲು ಅನುವಾದ=ಮದುವೆಯ ಮಂಟಪದಲ್ಲಿ ಅಗಲವಾದ ಕಣ್ಣುಗಳನ್ನುಳ್ಳ ತಾವರೆಮೊಗದ ಮೂವರು ಮದುವಣಗಿತ್ತಿಯನ್ನು ವಶಕ್ಕೆ ತೆಗೆದುಕೊಂಡು, ಅವರೆಲ್ಲರನ್ನು ಹಸ್ತಿನಾವತಿಗೆ ಕರೆದುಕೊಂಡು ಬಂದು, ತಮ್ಮನಾದ ವಿಚಿತ್ರವೀರ‍್ಯನಿಗೆ ಮದುವೆ ಮಾಡಿಸಲು ಸಿದ್ದನಾದನು; ಛಲ=ಹಟ; ಬಿಗುಹು=ಅಚಲವಾದ ಸಂಕಲ್ಪ; ನೂಕು=ಕಡೆಗಣಿಸು/ ತ್ಯಜಿಸು/ ನಿರಾಕರಿಸು; ಭಾಷೆಯ ಮಾಡು=ಇದೊಂದು ನುಡಿಗಟ್ಟು. ತನ್ನ ನಿಲುವೇ ಸರಿಯೆಂದು ಪ್ರತಿಪಾದಿಸುವುದು/ತನ್ನ ನಿಲುವಿನಂತೆಯೇ ನಡೆದುಕೊಳ್ಳುವೆನೆಂದು ಹೇಳುವುದು;

ಆ ಕಮಲಲೋಚನೆಯರೊಳು ಮೊದಲಾಕೆ ಛಲದ ಬಿಗುಹಿನಲಿ ನೂಕಿ… ಭೀಷ್ಮನ ಗಂಡನೆಂದೇ ಭಾಷೆಯ ಮಾಡಿ ನಿಂದಳು=ಆ ಮೂರು ಮಂದಿ ಮದುವಣಗಿತ್ತಿಯರಲ್ಲಿ ಹಿರಿಯವಳಾದ ಅಂಬೆ ಎನ್ನುವವಳು ತನ್ನ ಹಟವನ್ನೇ ಸಾದಿಸುತ್ತ, ವಿಚಿತ್ರವೀರ‍್ಯನೊಡನೆ ಮದುವೆಯಾಗಲು ಒಲ್ಲದೆ, ಮದುಮಂಟಪದಿಂದ ತನ್ನನ್ನು ಅಪಹರಿಸಿಕೊಂಡು ಬಂದಿರುವ ಬೀಶ್ಮನೇ ತನ್ನ ಗಂಡನೆಂದು ನಿಶ್ಚಯಿಸಿಕೊಂಡು, ಅವನನ್ನೇ ಮದುವೆಯಾಗುವುದಾಗಿ ಪಣ ತೊಟ್ಟು ನಿಂದಳು; ಮಾಣ್= ಸುಮ್ಮನಿರು/ಬಿಡು;

ಆಕೆ ಮಾಣಲಿ… ಈ ಕುಮಾರಂಗೆ ಮಿಕ್ಕವರು ಬರಲಿ ಎಂದು ಭೀಷ್ಮ ವೈದಿಕ ಲೌಕಿಕೋತ್ಸವದಿಂದ ಮದುವೆಯ ಮಾಡಿದನು= “ಆಕೆಯು ವಿಚಿತ್ರವೀರ‍್ಯನೊಡನೆ ಮದುವೆಯಾಗುವುದಿಲ್ಲವೆಂದರೆ ಹಾಗೇಯೇ ಇರಲಿ. ಉಳಿದ ಇಬ್ಬರು ಬರಲಿ ” ಎಂದು ಹೇಳಿದ ಬೀಶ್ಮನು ವೇದಗಳಲ್ಲಿ ಹೇಳಿರುವ ಶಾಸ್ತ್ರಗಳ ಆಚರಣೆಯಂತೆ ಸಡಗರದಿಂದ ವಿಚಿತ್ರವೀರ‍್ಯನೊಡನೆ ಮದುವೆಯನ್ನು ಮಾಡಿದನು;

ಅರಸ ಚಿತ್ತೈಸು, ಅಂಬೆ ಎಂಬಳು ದುರುಳೆ=ಜನಮೇಜಯ ರಾಜನೇ ಕೇಳು, ಅಂಬೆ ಎನ್ನುವವಳು ಬಹಳ ಕೆಟ್ಟಹೆಂಗಸು; ಕೂಟ=ಕೂಡುವಿಕೆ/ಸಂಗ/ಮದುವೆ; ಎಡೆ=ಜಾಗ/ನೆಲೆ; ಬೆರಸು=ಕೂಡು/ ಸೇರು; ಪಂಥ=ಸರಿಯಾದ ದಾರಿ/ಉಚಿತವಾದ ಕ್ರಮ;

ಭೀಷ್ಮನ ಕೂಟವಲ್ಲದೆ… ಮರಣದ ಎಡೆಯಲಿ ಬೆರಸಿದಲ್ಲದೆ… ಪಂಥವಿಲ್ಲ ಎಂದು=ಬೀಶ್ಮನೊಡನೆ ನನ್ನ ಮದುವೆಯಾಗಬೇಕು… ಇಲ್ಲದಿದ್ದರೆ ನನಗೆ ಮರಣವೇ ಗತಿ. ಇದನ್ನು ಬಿಟ್ಟು ನನ್ನ ಪಾಲಿಗೆ ಬೇರೆ ದಾರಿಯೇ ಇಲ್ಲವೆಂದು ಪಣತೊಟ್ಟು;

ಪರಶುರಾಮನ ಭಜಿಸಿ ಹಸ್ತಿನಾಪುರಕೆ ತಂದಳು=ಬೀಶ್ಮನ ವಿದ್ಯಾಗುರುಗಳಾಗಿದ್ದ ಪರಶುರಾಮನ ಮುಂದೆ ತನ್ನ ಸಂಕಟವನ್ನು ತೋಡಿಕೊಂಡು, ತಮ್ಮ ಶಿಶ್ಯನಾದ ಬೀಶ್ಮನ ಮನವೊಲಿಸಿ ತನ್ನೊಡನೆ ಮದುವೆಯನ್ನು ಮಾಡಿಸಬೇಕೆಂದು ಕೋರಿಕೊಂಡು, ಅವರನ್ನು ಒಪ್ಪಿಸಿ ಹಸ್ತಿನಾಪುರಕ್ಕೆ ಕರೆತಂದಳು; ಹೇಳಿಸಿದಳು=ಪರಶುರಾಮನಿಂದ ಬೀಶ್ಮನಿಗೆ ತನ್ನನ್ನು ಮದುವೆಯಾಗುವಂತೆ ಹೇಳಿಸಿದಳು; ಸುರನದೀ=ಗಂಗಾ ನದಿ; ಸುರನದೀನಂದನ=ಗಂಗಾದೇವಿಯ ಮಗನಾದ ಬೀಶ್ಮ; ಪರಿ=ರೀತಿ;

ಈ ಸುರನದೀನಂದನನು ಮಾಡಿದ ಪರಿಯ ಕೇಳೆಂದ=ಗುರುವಾದ ಪರಶುರಾಮನು ಶಿಶ್ಯನಾದ ಬೀಶ್ಮನಿಗೆ “ ಅಂಬೆಯನ್ನು ಮದುವೆಯಾಗು ” ಎಂದು ಉಪದೇಶ ಮಾಡಿದಾಗ, ಬೀಶ್ಮನು ನಡೆದುಕೊಂಡ ರೀತಿಯನ್ನು ಹೇಳುತ್ತೇನೆ…ಕೇಳು ಜನಮೇಜಯ ಎಂದು ವೈಶಂಪಾಯನು ನುಡಿಯತೊಡಗುತ್ತಾನೆ;

ಸತಿಯನು ಒಲ್ಲೆನು… ಬ್ರಹ್ಮಚರ್ಯಸ್ಥಿತಿಗೆ ತಪ್ಪುವನಲ್ಲ… ನೀವು ಅನುಚಿತವ ನೆನೆದರೆ… ನಡೆಯಿ… ನಿಮಗೆ ಕಾಳಗವ ಕೊಟ್ಟೆನು=ಹೆಣ್ಣನ್ನು ಒಲ್ಲೆನು. ಮದುವೆಯಾಗದೇ ಬ್ರಹ್ಮಚರ‍್ಯೆಯಿಂದ ಜೀವನದ ಉದ್ದಕ್ಕೂ ಬಾಳುತ್ತೇನೆ ಎಂದು ಆಡಿರುವ ಮಾತಿಗೆ ತಪ್ಪಿ ನಡೆಯುವವನಲ್ಲ. ನೀವು ಈ ಸಂಗತಿಯಲ್ಲಿ ತಲೆಹಾಕಿ ನನ್ನನ್ನು ಮದುವೆಯಾಗುವಂತೆ ಒತ್ತಾಯಮಾಡುವಿರಾದರೆ, ನನ್ನ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ನಿಮ್ಮೊಡನೆ ಕಾದಾಡಲು ಸಿದ್ದನಾಗಿದ್ದೇನೆ ಎಂದು ಬೀಶ್ಮನು ಗುರುವಿನ ಕೋರಿಕೆಯನ್ನು ತಿರಸ್ಕರಿಸುತ್ತಾನೆ; ವ್ರತ=ನಡತೆ/ಶೀಲ; ನಿಧಿ=ಕಡಲು/ಸಂಪತ್ತು; ವ್ರತದ ನಿಧಿ=ಗುಣಸಾಗರ; ಶರ=ಬಾಣ; ತತಿ=ಸಮೂಹ/ಗುಂಪು ಭೃಗುಸುತ=ಪರಶುರಾಮ;

ವ್ರತದ ನಿಧಿ ಭೀಷ್ಮ ಕುರುಭೂಮಿಯಲಿ ಶರತತಿಯಲಿ ಇಪ್ಪತ್ತೊಂದು ದಿನ ಭೃಗುಸುತನೊಡನೆ ಕಾದಿದನು=ಗುಣಸಾಗರನಾದ ಬೀಶ್ಮನು ಕುರುಕ್ಶೇತ್ರದಲ್ಲಿ ಬಾಣಗಳನ್ನು ಪ್ರಯೋಗಿಸುತ್ತ ಇಪ್ಪತ್ತೊಂದು ದಿನ ಪರಶುರಾಮನೊಡನೆ ಹೋರಾಡಿದನು;

ವಿರಥನ ಮಾಡಿದನು=ತೇರನ್ನು ನಾಶಮಾಡಿ, ಗುರುವಾದ ಪರಶುರಾಮನನ್ನು ಸೋಲಿಸಿದನು; ಭಂಗಿಸಲು+ಎಂದು; ಭಂಗಿಸು=ಮುರಿ/ನಿಗ್ರಹಿಸು; ನುಡಿಯ ಭಂಗಿಸು=ಪ್ರತಿಜ್ನೆಯನ್ನು ಮುರಿಯುವುದು; ಅವಗಡಿಸು=ಎದುರಿಸು;

ನುಡಿಯ ಭಂಗಿಸಲೆಂದು ಗುರುವು ಅವಗಡಿಸಿ ಹೊಕ್ಕರೆ=ತನ್ನ ಪ್ರತಿಜ್ನೆಯನ್ನು ಮುರಿಯಲೆಂದು ಗುರು ಪರಶುರಾಮನು ತನ್ನ ಎದುರಾಗಿ ಹೋರಾಡಲು ಬಂದರೆ; ಸರಳು=ಬಾಣ; ಕೊಡಹು= ಜಾಡಿಸು/ಒದರು;

ಸರಳ ಮೊನೆಯಲಿ ಕೊಡಹಿ ಬಿಸುಟನು=ಬಾಣಗಳ ಮೊನೆಯಿಂದಲೇ ಗುರುವಿನ ಉದ್ದೇಶವನ್ನು ಜಾಡಿಸಿ ಬಿಸಾಡಿದನು;

ಮಹಾವ್ರತ ಸ್ಥಿತಿಯ ಬಿಟ್ಟುದಿಲ್ಲ=ಬೀಶ್ಮನು ತಾನು ಕಯ್ಗೊಂಡಿರುವ ದೊಡ್ಡಗುಣವನ್ನು ಬಿಡಲಿಲ್ಲ. ರಾಜ ಶಂತನು ಮತ್ತು ಯೋಜನಗಂದಿಯ ಮದುವೆಯ ಸನ್ನಿವೇಶದಲ್ಲಿ ತಾನು ಆಡಿದ್ದ ನುಡಿಗಳಿಗೆ ಕಟ್ಟುಬಿದ್ದು, ಅಂಬೆಯನ್ನು ನಿರಾಕರಿಸಿದ; ಒಡಬಡಿಸು=ಒಪ್ಪಿಸು/ಹೊಂದಿಕೆಯಾಗು;

ನುಡಿಯ ಮೀರದ ನಮ್ಮ ಶಿಷ್ಯನನು ಒಡಬಡಿಸಿಕೊಳ್ಳು ಎಂದು ನಾರಿಗೆ ನುಡಿದು ಪರಶುರಾಮಮುನಿ ತನ್ನಾಶ್ರಮಕೆ ಸರಿದನು=ತಾನು ಆಡಿದ ಮಾತುಗಳನ್ನು ಮೀರದ ನಮ್ಮ ಶಿಶ್ಯನನ್ನು ಹೇಗಾದರೂ ನೀನೇ ಅವನ ಮನವೊಪ್ಪಿಸಿ ಮದುವೆಯಾಗುವುದು ಎಂದು ಅಂಬೆಯ ಮೇಲೆ ಜವಾಬ್ದಾರಿಯನ್ನು ವಹಿಸಿ, ಗುರು ಪರಶುರಾಮನು ತನ್ನ ಆಶ್ರಮಕ್ಕೆ ಹಿಂತಿರುಗಿದನು;

ಅಂಬೆ ಭೀಷ್ಮನ ಬೈದು, ಕಂಬನಿದುಂಬಿ ತಪಕೆ ಹೋದಳು=ಅಂಬೆಯು ಬೀಶ್ಮನನ್ನು ಬಯ್ದು, ಕಣ್ಣೀರನ್ನು ಹಾಕುತ್ತ ತಪಸ್ಸನ್ನು ಮಾಡಲೆಂದು ಕಾಡಿನತ್ತ ನಡೆದಳು; ಸೂನು=ಮಗ; ನೃಪಸೂನು=ರಾಜಪುತ್ರನಾದ ವಿಚಿತ್ರವೀರ‍್ಯ;

ಬಳಿಕ ಈ ಅಂಬಿಕೆಯನು ಅಂಬಾಲೆಯನು ನೃಪಸೂನು ರಮಿಸಿದನು=ಅನಂತರ ಇನ್ನುಳಿದ ಇಬ್ಬರು ಸೋದರಿಯರಾದ ಅಂಬಿಕೆ ಮತ್ತು ಅಂಬಾಲೆಯರೊಡನೆ ವಿಚಿತ್ರವೀರ‍್ಯನು ಆನಂದದಿಂದ ಸಂಸಾರ ಮಾಡಿದನು; ಚತುರ್+ಅಂಬುಧಿ; ಚತುರ್=ನಾಲ್ಕು; ಅಂಬುಧಿ=ಕಡಲು; ಕದಂಬ=ಗುಂಪು/ಸಮೂಹ;

ಬೆಂಬಲಕೆ ಕಲಿ ಭೀಷ್ಮನಿರೆ ಚತುರಂಬುಧಿಯ ಮಧ್ಯದ ನೃಪಾಲ ಕದಂಬವು ಈತಂಗೆ ಇದಿರೆ=ಬೆಂಬಲಕ್ಕೆ ಕಲಿ ಬೀಶ್ಮನು ಇರುವಾಗ, ನಾಲ್ಕು ಕಡಲುಗಳಿಂದ ಸುತ್ತುವರಿದಿರುವ ಪ್ರಾಂತ್ಯದಲ್ಲಿರುವ ರಾಜರ ಗುಂಪು ಈ ವಿಚಿತ್ರವೀರ‍್ಯನಿಗೆ ಎದುರಾಗಿ ಹೋರಾಡುವುದಕ್ಕೆ ಆಗುತ್ತದೆಯೇ. ಅಂದರೆ ಆ ರಾಜರೆಲ್ಲರೂ ವಿಚಿತ್ರವೀರ‍್ಯನಿಗೆ ತಲೆಬಾಗಿ ನಡೆಯುತ್ತಿದ್ದರು;

ಅಖಿಳ ಭೂತಳವ ಸಲಹಿದನು=ಸಮಸ್ತ ಬೂಮಂಡಲವನ್ನು ವಿಚಿತ್ರವೀರ‍್ಯನು ಬೀಶ್ಮನ ನೆರವಿನೊಂದಿಗೆ ಕಾಪಾಡುತ್ತ ಆಳುತ್ತಿದ್ದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *