ಕವಿತೆ: ನಾನು ಬದಲಾಗಲಾರೆ

– ವೆಂಕಟೇಶ ಚಾಗಿ

ಸುಳ್ಳಿನ ಪರದೆಯನು
ನನ್ನ ಮೇಲೆ ಹೊದಿಸಿದರೆ
ನೀವು ಅಂದುಕೊಂಡಂತೆ
ನಾನು ಬದಲಾಗಲಾರೆ

ನನ್ನ ನಾಲಗೆಯ ಮೇಲೆ
ಸುಳ್ಳಿನ ಬರೆಗಳನ್ನು ಹಾಕಿದರೇನು
ನನ್ನ ನಾಲಗೆಯಿಂದ
ನೀವು ಅಂದಂತೆ ನುಡಿಸಿದರೂ
ನಾನು ಬದಲಾಗಲಾರೆ

ಶತ ಶತಮಾನಗಳ
ಶೋಶಣೆಯ ಗೂಡಿನಲ್ಲಿ
ಶೋಶಣೆಗೆ ಒಳಗಾದ ನಾನು
ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ
ನಾನು ಬದಲಾಗಲಾರೆ

ನನ್ನ ಕೋಟ್ಯಾನು ಕೋಟಿ ಕನಸುಗಳು
ನನಸುಗಳಾಗಿಯೇ ಉಳಿದಿವೆ
ಕನಸುಗಳಿಗೆ ಇಲ್ಲಿ ಬೆಲೆ ಇಲ್ಲದೆ
ಬೆಳೆದು ಗಿಡಮರಗಳಾಗದೆ
ಬೂಮಿಯಲ್ಲಿಯೇ ನಾಶವಾಗಿವೆ
ನಿಮ್ಮ ಅನುಕಂಪದ ಅಲೆಯಿಂದ
ನಾನು ಬದಲಾಗಲಾರೆ

ನನ್ನ ಮೇಲೆ ಕಲ್ಲುಗಳನ್ನು ಹಾಕಿ
ರಕ್ತ ಬಸಿಯುವಂತೆ ಮಾಡಿ
ಮನಸ್ಸನ್ನು ಗಟ್ಟಿಗೊಳಿಸಿರುವಿರಿ
ಮನುಶ್ಯತ್ವದ ಮುಕವಾಡ
ಪ್ರತಿ ಹಗಲೂ ಇರುಳು ದರಿಸುವಿರಿ
ನಿಮ್ಮ ತಾಯ್ತನದ ವಾತ್ಸಲ್ಯಕೆ
ನಾನು ಬದಲಾಗಲಾರೆ

( ಚಿತ್ರಸೆಲೆ: chatgpt.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *