ಪುಸ್ತಕ ವಿಮರ್ಶೆ – ಒಟ್ರಾಸಿ ಪ್ರಸಂಗಗಳು
– ಸುದಾಕರ್ ಪಿ. ಆಲೂರು.

ಮುಂಬಯಿಯ ಸಾಹಿತ್ಯ, ರಂಗಬೂಮಿ ಹಾಗೂ ಸಾಂಸ್ಕ್ರುತಿಕ ಲೋಕದಲ್ಲಿ ಚಿರಪರಿಚಿತರಾಗಿರುವ ಸಾಹಿತಿ, ರಂಗಕರ್ಮಿ, ವಿಮರ್ಶಕ ಹಾಗೂ ನಿರೂಪಕರಾದ ಗೋಪಾಲ್ ತ್ರಾಸಿಯವರ “ಒಟ್ರಾಸಿ ಪ್ರಸಂಗಗಳು” ಎನ್ನುವ ಕ್ರುತಿ ಓದುವ ಅವಕಾಶ ದೊರೆಯಿತು. ಹಾಸ್ಯರಸದ ಹೊದಿಕೆಯಲ್ಲಿ ಸಾಮಾಜಿಕ ವಾಸ್ತವತೆಯನ್ನು ಅನಾವರಣಗೊಳಿಸುವ ಈ ಲೇಕನ ಸಂಕಲನ ಓದುಗರನ್ನು ನಗಿಸುತ್ತಾ ಚಿಂತನೆಗೆ ಹಚ್ಚುತ್ತದೆ.
ಈ ಕ್ರುತಿಯ ವಿಶೇಶತೆ ಎಂದರೆ ಲೇಕಕರು ತಮ್ಮ ಬದುಕಿನ ಅನುಬವಗಳು, ಸಮಾಜದ ನೈಜ ಗಟನೆಗಳು, ಜನಜೀವನದ ಸಣ್ಣ-ಪುಟ್ಟ ಪ್ರಸಂಗಗಳು ಹಾಗೂ ಸುತ್ತಮುತ್ತಲಿನ ವಾಸ್ತವತೆಯನ್ನು ಹಾಸ್ಯದ ಬಣ್ಣದಲ್ಲಿ ಕಟ್ಟಿಕೊಟ್ಟಿರುವುದು. ಕುಂದಾಪುರ ಕನ್ನಡದ ಸೊಗಡು, ಕರಾವಳಿಯ ಬಾಶೆಯ ಸಹಜತೆ ಮತ್ತು ಸ್ತಳೀಯ ನುಡಿಗಟ್ಟುಗಳ ಬಳಕೆ ಕ್ರುತಿಗೆ ವಿಶಿಶ್ಟ ಮೆರುಗು ನೀಡಿವೆ. “ಒಳ್ಳೆ ರೇಟ್ ಕಾಂತ್ ಕೂತ್ರೆ ಒಳ್ಗೆ ಒಲಿ ಉರಿಕ್ ಅಲ್ದೆ…” ಎಂಬ ನಾಗಜ್ಜಿಯ ಮಾತುಗಳಂತಹ ಹಲವಾರು ಸಂಬಾಶಣೆಗಳು ಓದುಗರನ್ನು ಕರಾವಳಿಯತ್ತ ಕರೆದೊಯ್ಯುತ್ತವೆ.
ಮುಂಬಯಿ ಜೀವನ ಮತ್ತು ಹಾಸ್ಯ ಪ್ರಸಂಗಗಳು
“ಮೇನಕೆಯಲ್ಲಾ… ಉದರ ಪೋಶಣೆಗೋಸ್ಕರ…” ಲೇಕನದಲ್ಲಿ ಪುರುಶರು ಹೆಣ್ಣಿನ ವೇಶದಾರಿಗಳಾಗಿ ಹೆದ್ದಾರಿಯಲ್ಲಿ ವಾಹನ ಚಾಲಕರನ್ನು ವಂಚಿಸುವ ಪ್ರಸಂಗವನ್ನು ಕುತೂಹಲಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ. “ಜಿಡುಕು ಜೀವನ” ಮುಂಬಯಿಯ ಗಿಜಿಗುಡುವ ಬದುಕು, ಸಮಯದ ಬೆನ್ನಟ್ಟುವ ಜನರ ಜೀವನಶೈಲಿ ಹಾಗೂ ಅವರ ರೆಡಿಮೇಡ್ ಸಂಬಾಶಣೆಗಳ ಚಿತ್ರಣ ನೀಡುತ್ತದೆ. “ಲೈಟ್ ಕಾಪಿ ಮತ್ತು ಅಬಾಕಾಸಂ” ಲೇಕನ ಸ್ನೇಹ, ಕಾಪಿ ಚರ್ಚೆ ಹಾಗೂ ಸಬಾ ಸಮಾರಂಬಗಳ ಒಳನೋಟವನ್ನು ಹಾಸ್ಯಮಯವಾಗಿ ಕಟ್ಟಿಕೊಡುತ್ತದೆ.
ಲೇಕಕರ ಬದುಕು ಮತ್ತು ಸಮಾಜದ ಮುಕಗಳು
“ಇದೊಂದು ಕೆಟ್ಟ ಚಟಾರಿ…” ಲೇಕನದಲ್ಲಿ ಗಾಡ್ಪಾದರ್ ಇಲ್ಲದ ಲೇಕಕನ ತಳಮಳ, ಸಂಪಾದಕರ ಮನೋಬಾವ ಮತ್ತು ಬರಹಗಾರನ ನೋವು ಪರಿಣಾಮಕಾರಿಯಾಗಿ ಮೂಡಿಬಂದಿದೆ. “ಅರ್ದ ತೋಳಿನ ಚೌಕುಳಿ ಅಂಗಿ” ಲೇಕನ ಬೂಕಂಪ ಸಂತ್ರಸ್ತರಿಗೆ ನೀಡಿದ ನೆರವು ಹಾಗೂ ನಂತರ ಅದೇ ಅಂಗಿಯನ್ನು ಕರೀದಿಸಬೇಕಾದ ಸಂದರ್ಬವನ್ನು ಹಾಸ್ಯಮಯವಾಗಿ ನಿರೂಪಿಸುತ್ತದೆ. “ಬಜೆಟ್ ಪುರಾಣವೂ, ನಾಗಜ್ಜಿಯ ಮಾವಿನ ಮಿಡಿಯೋ” ಸಾಮಾನ್ಯ ಜನರ ಬದುಕಿನ ಮೇಲೆ ಬಜೆಟ್ ಪರಿಣಾಮ, ಕೊಂಕಣ ರೈಲಿನ ಅನುಬವಗಳು ಹಾಗೂ ನಾಗಜ್ಜಿಯ ಬದುಕಿನ ಜಾಣ್ಮೆಯ ಮಾತುಗಳನ್ನು ಒಳಗೊಂಡಿದೆ.
ಪ್ರಕ್ರುತಿ, ಸಂಸ್ಕ್ರುತಿ ಮತ್ತು ಕ್ರೀಡೆ
“ಜೋಗದ ಗುಂಡಿ” ಲೇಕನ ಜೋಗ ಜಲಪಾತದ ವೈಬವ, ಶರಾವತಿ ನದಿಯ ಸೊಬಗು ಹಾಗೂ ಹೊನ್ನಾವರದಲ್ಲಿ ಸಾಗರ ಸೇರುವ ರೋಮಾಂಚಕಾರಿ ದ್ರುಶ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. “ಗಾದೆಗಳೊ… ತಗಾದೆಗಳೋ…” ಲೇಕನ ಕುಂದಾಪುರ ಕನ್ನಡದ ಗಾದೆಗಳ ಮೂಲಕ ಸಮಾಜದ ಬಾವೈಕ್ಯತೆಯ ಸಂದೇಶ ಸಾರುತ್ತದೆ. “ಒಂದು ಬ್ಯಾಟು ಒಂದು ಚೆಂಡು ಆರು ಗೂಟಗಳ ಆಟ” ಕ್ರಿಕೆಟ್ ಕ್ರೀಡೆಯ ಹುಟ್ಟು, ಬೆಳವಣಿಗೆ ಮತ್ತು ಅದರ ಸಾಮಾಜಿಕ ಪರಿಣಾಮಗಳನ್ನು ವಿಶ್ಲೇಶಿಸುತ್ತದೆ.
ಅನುಬವಗಳು ಮತ್ತು ಮಾದ್ಯಮ ಲೋಕ
“ಮಂಗ ಆಗುವುದಾ? ಮಾಡುವುದಾ?” ಲೇಕನ ಸ್ನೇಹಿತರೊಂದಿಗಿನ ಹಾಸ್ಯಮಯ ಪ್ರಸಂಗಗಳನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡುತ್ತದೆ. “ಸುಮ ಸಂದರ್ಶನ” ಸಂದರ್ಶನದ ವೇಳೆ ಎದುರಾದ ಮುಜುಗರದ ಅನುಬವವನ್ನು ಹಂಚಿಕೊಳ್ಳುತ್ತ. “ಶಿಬಿರದ ಸುತ್ತಮುತ್ತ” ಮುದ್ರಣ ಮಾದ್ಯಮದ ಸುವರ್ಣಯುಗ, ಸಾಮಾಜಿಕ ಜಾಲತಾಣಗಳ ಪ್ರಬಾವ ಮತ್ತು ಪತ್ರಿಕೋದ್ಯಮ ತರಬೇತಿ ಶಿಬಿರದ ನೆನಪುಗಳನ್ನು ಅದ್ಬುತವಾಗಿ ದಾಕಲಿಸಿದ್ದಾರೆ.
ಮುಕ್ತಾಯ:ಕ್ರುತಿಯ ಕೊನೆಯಲ್ಲಿ ಬರುವ “ಅದಿಕ ಪ್ರಸಂಗ” ಎಂಬ ಕಿರು ಪ್ರಹಸನ ಇಡೀ ಕ್ರುತಿಗೆ ಸುಂದರ ಮತ್ತು ಅರ್ತಪೂರ್ಣ ಮುಕ್ತಾಯ ನೀಡುತ್ತದೆ. ಒಟ್ಟಾರೆಯಾಗಿ, ಲೇಕಕರು ತಮ್ಮ ಜೀವನಾನುಬವಗಳು, ಸಮಾಜದ ನೋಟಗಳು ಮತ್ತು ಹಾಸ್ಯಪ್ರಜ್ನೆಯನ್ನು ಒಂದೇ ಹಂದರದಲ್ಲಿ ಹೆಣೆದು ಓದುಗರಿಗೆ ಮನರಂಜನೆಯ ಜೊತೆಗೆ ಚಿಂತನೆಯ ಚಿತ್ರಾನ್ನವನ್ನು ಉಣಬಡಿಸಿದ್ದಾರೆ.
“ಒಟ್ರಾಸಿ ಪ್ರಸಂಗಗಳು” ಕೇವಲ ಹಾಸ್ಯ ಲೇಕನಗಳ ಸಂಕಲನವಲ್ಲ; ಅದು ಕರಾವಳಿಯ ಬಾಶಾ ಸೊಗಡು, ಮುಂಬಯಿಯ ಬದುಕಿನ ಅನುಬವಗಳು ಹಾಗೂ ಸಮಾಜದ ವಾಸ್ತವತೆಯ ನಗುವಿನ ಕನ್ನಡಿ.” ನೀವೂ ಓದಿ…
( ಚಿತ್ರ ಸೆಲೆ : ಬರಹಗಾರರ ಆಯ್ಕೆ )

ಇತ್ತೀಚಿನ ಅನಿಸಿಕೆಗಳು