ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ – 2

– ಕಾರ‍್ತಿಕ್ ಪ್ರಬಾಕರ್

ಹಿಂದಿನ ಬರಹದಲ್ಲಿ ತಿಳಿಸಿದಂತೆ, ಎರಡನೇ ಮಹಾ ಯುದ್ದದ ನಂತರದ ಬೆಳವಣಿಗೆಯಲ್ಲಿ ಕಾಣಬಹುದಾದ ಬಹು ಮುಕ್ಯವಾದ ವಿಶಯವೆಂದರೆ ವಿಮಾನದ ವೇಗವನ್ನು ಮುಂಚಿಗಿಂತ ದುಪ್ಪಟ್ಟು ಹೆಚ್ಚಿಸಿದ್ದು ಮತ್ತು ಇದಕ್ಕೆ ನೆರವಾದದ್ದು ಚಿತ್ರ 3 ರಲ್ಲಿ ತೋರಿಸಿರುವ ಚಿಮ್ಮು ಬಿಣಿಗೆ (jet engine). ಆಡುಬೆಣೆ ಬಿಣಿಗೆ (ಚಿತ್ರ -1) ಮತ್ತು ಗಾಳಿದೂಡುಕ ಬಿಣಿಗೆ (ಚಿತ್ರ-2) ತೆಗೆದುಹಾಕಿ ಚಿಮ್ಮು ಬಿಣಿಗೆಯನ್ನು ಅಳವಡಿಸಿದುರ ಜೊತೆಗೆ ಹೊಸ ಹೊಸ ಏರ್‍ಪಾಡಿನ ರೆಕ್ಕೆಗಳನ್ನು ಕಂಡುಹಿಡಿಯಲಾಯಿತು.

Picture1

ವಿಮಾನದ ಸ್ತಿರತೆ ಕಾಪಾಡಲು ರೆಕ್ಕೆಗಳನ್ನು ಬಿಣಿಗೆಯ (engine) ಸಮನಾಗಿ ಹೊಂದಿಸಲಾಯಿತು. ಮೊದಲನೆ ತಲೆಮಾರಿನ ಚಿಮ್ಮು ಬಿಣಿಗೆಯಿಂದಾಗಿ ವಿಮಾನದ ವೇಗವು ಮೊದಲ ಬಾರಿಗೆ ಶಬ್ದದ ವೇಗ (sonic speed) ಮುಟ್ಟಿತು. ವೇಗ ಹೆಚ್ಚಾದುದರಿಂದ ಕೆಲವು ತೊಡಕುಗಳೂ ಎದುರಾದವು, ಕತ್ತಲೆಯಲ್ಲಿ ವಿಮಾನ ಓಡಿಸುವುದು, ವಿಮಾನವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ತೊಂದರೆಗಳಾದವು. ಈ ತೊಡಕುಗಳನ್ನು ಹೋಗಲಾಡಿಸಲು ಹೊಸ ಹೊಸ ಉಪಕರಣಗಳೂ ಹುಟ್ಟಿದವು.

Picture2

ವಿಮಾನದ ನೆಲೆ ತಿಳಿಯಲು ಅಲೆಗಾವಲುಗಳನ್ನು (radar) ಅಳವಡಿಸಲಾಯಿತು. ಗುರಿ ಇಟ್ಟು ಹೊಡೆಯುವುದಕ್ಕೆ ವಿಮಾನದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ವೇಗ ಹೆಚ್ಚಾದಂತೆ ತಮ್ಮ ಗುರಿ ಕಳಿದುಕೊಳ್ಳಲಾರಂಬಿಸಿದವು. ಇದರ ಬದಲಿಗೆ ಹೆಚ್ಚು ಕಸುವುಳ್ಳ ತೋಪುಗಳನ್ನು ವಿಮಾನದಲ್ಲಿ ಏರ್‍ಪಡಿಸಲಾಯಿತು. ವಿಮಾನ ಓಡಿಸುವಾತ ಈ ವೇಗದಲ್ಲಿ ತುಂಬಾ ಜೋರಾದ ಎದುರು ಸೆಳೆತಕ್ಕೆ (G-force) ತುತ್ತಾಗುವುದನ್ನು ತಡೆಯಲಿಕ್ಕೆ ಜಿ – ಸೂಟ್ (G-suit) ಎಂಬ ವಿಶೇಶವಾದ ಉಡುಗೆಯನ್ನೂ ಕಂಡುಹಿಡಿಯಲಾಯಿತು.  (ಬಳಕೆ: ಮಿಗ್ 15 ಯುಟಿಅಯ್).

ಇಶ್ಟೆಲ್ಲಾ ಮುಂದುವರಿದರೂ ಮೊದಲನೇ ತಲೆಮಾರಿನ ವಿಮಾನಗಳು ಶಬ್ದದ ವೇಗವನ್ನು ಮುಟ್ಟಿದೊಡನೆ ಸ್ತಿರತೆಯನ್ನು ಕಳೆದುಕೊಳ್ಳುತ್ತಿದ್ದವು. ಈ ನಿಟ್ಟಿನಲ್ಲಿ ನಡೆಸಿದ ಅರಸುವಿಕೆಯಿಂದಾಗಿ ವಿಮಾನವನ್ನು ಸುತ್ತುವರೆದ ಗಾಳಿಯ ನಡುವಳಿಕೆ ಮತ್ತು ಅದು ವಿಮಾನದ ಮೇಲೆ ಉಂಟುಮಾಡುವ ಪರಿಣಾಮವನ್ನು ಅರಿತುಕೊಳ್ಳಲಾಯಿತು.

Picture3

ಈ ವಿಶಯವಾಗಿ “ಗಾಳಿಕಸುವರಿಮೆ” (aerodynamics) ಎಂಬ ಅರಿಮೆಯ ಕವಲಿನಲ್ಲಿ ಹೊಸ ಹೊಸ ಅರಿವುಗಳು ಹೊಮ್ಮತೊಡಗಿದವು.ಎರಡನೇ ತಲೆಮಾರಿನ ಯುದ್ದ ವಿಮಾನ ತಯಾರಿಕೆಯಲ್ಲಿ ಒತ್ತುಕೊಟ್ಟ ವಿಶಯವೆಂದರೆ ವಿಮಾನ ರೆಕ್ಕೆಯ ಆಕಾರ ಮತ್ತು ರೆಕ್ಕೆಯ ತಯಾರಿಕೆಗೆ ಬಳಸಿದ ಅಲ್ಯುಮೀನಿಯಂ ಬೆರೆತಗಳು (alloys).

ರೆಕ್ಕೆಗಳಲ್ಲಿ ಹಿಂದೂಡಿದ ರೆಕ್ಕೆಗಳು (swept wings), ಮೂಕ್ಕೋನದ ರೆಕ್ಕೆಗಳು (delta wings) ಮತ್ತು ಹರಡುವಿಕೆ ಒಪ್ಪವಾಗಿಸಿದ ಹರವು ಕಟ್ಟಲೆಯ (area-ruled wings) ಆಕಾರಗಳು ಮುಕ್ಯವಾದವು. ನಮ್ಮ ಎಚ್.ಎ.ಎಲ್. ಕೂಡ ತೇಜಸ್ ಯುದ್ದ ವಿಮಾನದಲ್ಲಿ ಮುಕ್ಕೋನದ ರೆಕ್ಕೆಗಳನ್ನು ಅಳವಡಿಸಿದ್ದನ್ನು ಇಲ್ಲಿ ಗಮನಿಸಬಹುದು. ಶಬ್ದದ ವೇಗಕ್ಕೆ ಸಮಾನವಾಗಿ ಓಡಿಸುವಾಗ ಗಾಳಿಯಲ್ಲಿನ ಬದಲಾವಣೆಗಳನ್ನು ತಡೆದುಕೊಳ್ಳುವ ಕಸುವು ಮತ್ತು ಶಬ್ದ ವೇಗದ ಆಚೀಚೆಯಲ್ಲಿ (transition zone) ಸ್ತಿರತೆಯನ್ನು ನೀಡಬಲ್ಲ ಈ ಆಕಾರಗಳು ಇಂದಿಗೂ ಕೂಡ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿವೆ. (ಬಳಕೆ: ಇಂಗ್ಲಿಶ್ ಎಲೆಕ್ಟ್ರಿಕ್ ಲಯಟ್ನಿಂಗ್).

Picture4

ಹೆಚ್ಚಿನ ವೇಗ, ಹೆಚ್ಚಿನ ಕಸುವು ಪಡೆದುಕೊಂಡಾದ ಮೇಲೆ ಈ ಹಕ್ಕಿಗಳಿಗೆ “ಬಿಟ್ಟೇರುಗಳು” (missiles)  ಸೇರ್‍ಪಡೆಯಾಗಿ ಎದುರಾಳಿಯ ಕೆಚ್ಚೆದೆಯಲ್ಲಿ ದಿಗಿಲು ಹುಟ್ಟಿಸಿದವು. ಹೆಚ್ಚು ವೇಗ, ಕಡಿಮೆ ತೂಕ, ಅಲೆಗಾವಲು, ಬಿಟ್ಟೇರಿನ ಏರ್‍ಪಾಡುಗಳಿಂದಾಗಿ ಹಿಂದೆಂದಿಗೂ ಮಾಡಿರದ ಕಾಳಗದ ಚಳಕಕ್ಕೆ ಉಕ್ಕಿನ ಹಕ್ಕಿಗಳು ಅಣಿಗೊಂಡವು. ಆದರೆ ಕಣ್ಣು ಮುಚ್ಚಿ ಕಣ್ಣು ಬಿಡುವುದೊರಳಗೆ ಕಾಣಿಯಾಗುವ ಉಕ್ಕಿನ ಹಕ್ಕಿಗಳ ಹಾರಾಟವನ್ನು ಹಿಡಿತದಲ್ಲಿಡಲು ಮನುಶ್ಯರ ಕಯ್ ಚಳಕಕ್ಕೆ ಎಟುಕದಾಯಿತು ಹಾಗಾಗಿ ವಿಮಾನಗಳ ಹಾರಾಟಕ್ಕೆ ನೆರವಾಗುವಂತಹ ಮಿನ್ನರಿಮೆ (electronics) ಉಪಕರಣಗಳನ್ನು ಅಳವಡಿಸಲಾಯಿತು. ಅಂದಿಗೆ ಶುರುವಾದ “ಹಾರು-ಮಿನ್ನರಿಮೆ” (avionics) ಇಂದಿಗೂ ಕೂಡ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೊರಟಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

7 Responses

 1. vivekshankar153 says:

  ಬರಹ ತುಂಬಾ ಚೆನ್ನಾಗಿದೆ. ನಲವರಿಕೆಗಳು

 2. Giridhar P.P says:

  arime-horagedahike ellarakannada sajjaaguttiruvudannu noodidare
  muda pulaka hemme ommele bandikkuttave. bhale!

  P.P.Giridhar PhD
  1132, first cross
  lalitadri road
  kuvempunagara
  MYSORE-5700023
  INDIA
  Visit my website at giridharpp.weebly.com

 3. Maaysa says:

  ನಾನು ಬರಹದ ಜತೆ ಚಿತ್ರಗಳಿದ್ದರೆ ತುಂಬಾ ಖುಷಿ ..

  ಚಿತ್ರಗಳು ಮತ್ತು ಅವಕ್ಕೆ labelಗಳು ತುಂಬಾ ಚೆನ್ನಾಗಿವೆ .

 4. ಕನ್ನಡ “ಅರಿಮೆ ಬರೆಹ”ದಲ್ಲಿ ಒಂದು ಹೊಸ ಹೆಜ್ಜೆ, ಹೊಸ ಮಜಲು ಉಂಟುಮಾಡುವ ಗಳಿಗೆ. ಎಶ್ಟು ನಲಿವಿನ ಸುದ್ದಿ ಗೆಳೆಯರೇ. ಹೀಗೆಯೇ ಮುಂದುವರಿಯಲಿ ಈ ಪಯಣ ಎಂದೂ ನಿಲ್ಲದಂತೆ. ಮಾಯ್ಸ ಹೇಳಿದಂತೆ ಚಿತ್ರಗಳು ಮತ್ತು ಹಣೆಪಟ್ಟಿ
  (ಲೇಬಲ್) ನಿಜಕ್ಕೂ ಚೆನ್ನಾಗಿದೆ. ಹೊಸ ನುಡಿಯ ಈ ಪರಿ ಹೊಸ ಅರಿಮೆಗೂ ನಾಂದಿ ಹಾಡುವುದು.

 5. ಒಳ್ಳೆಯ ಬರಹ. ಓದುಗರಿಗಾಗಿ ಬೋ ಗೇಯ್ದಿದ್ದೀರಿ. ನಾವ್ ನಿಮಗೆ ರುಣಿ!

 6. ಬರೆಯಲು ಮತ್ತು ಬರೆದದ್ದನ್ನು ಹರಡಿಸಲು ಜಾಗ ಕೊಟ್ಟಿದ್ದಕ್ಕೆ “ಹೊನಲು”ಗೆ ನಾನು ರುಣಿ.. 🙂

 1. 07/05/2013

  […] ಕಳೆದ ಬರಹದಲ್ಲಿ ತಿಳಿಸಿದಂತೆ ಹಾರು-ಮಿನ್ನರಿಮೆಯ (avionics) ಏರ‍್ಪಾಡುಗಳೊಂದಿಗೆ ಶುರುವಾದದ್ದು ಮೂರನೆ ತಲೆಮಾರಿನ ಯುದ್ದ ವಿಮಾನಗಳು. ಮೊದ ಮೊದಲಿಗೆ ಮಿನ್ನರಿಮೆಯ (electronics) ಸಣ್ಣ ಪುಟ್ಟ ಸಲಕರಣೆಗಳನ್ನು ಅಳವಡಿಸಲಾಯಿತು ಆಮೇಲೆ ಗಾಳಿ-ಇಂದ-ಗಾಳಿಗೆ ಹಾರಿಸುವ ಬಿಟ್ಟೇರುಗಳನ್ನು (air to air missiles) ಹಿಡಿತದಲ್ಲಿಡಲು, ವಿಮಾನದ ರೆಕ್ಕೆಗಳ ಆಕಾರವನ್ನು ವೇಗಕ್ಕೆ ಹೊಂದುವಂತೆ ’ಮಾರ‍್ಪಡಿಸಬಹುದಾದ ಹಿಂದೂಡಿದ ರೆಕ್ಕೆ’ (variable swept wings) ಅಳವಡಿಸಲು ಮಿನ್ನರಿಮೆಯ ಚಳಕಗಳನ್ನು ಬಳಸಲಾಯಿತು. ಚಿತ್ರ 1 ರಲ್ಲಿ ತೋರಿಸಿರುವ ನಿಂತಲ್ಲಿಂದಲೇ ಹಾರಾಡಿ ಇಳಿಯುವ ’ನೆಟ್ಟಗೆ ಏರಿಳಿಯುವ’ (vertical take-off and landing-VTOL) ಚಳಕವು ಕಾಳಗದ ಹಕ್ಕಿಗೆ ಹಾರಲು ಬೇಕಾಗಿದ್ದ ನೆಲದ ಹಂಗನ್ನು ಕಡಿಮೆ ಮಾಡಿತು. ಒಂದರ ಮೇಲೊಂದು ಚಳಕಗಳು ಹುಟ್ಟಿಕೊಳ್ಳುವುದರೊಂದಿಗೆ, ಯುದ್ದ ವಿಮಾನಗಳ ಬಳಕೆಯ ರೀತಿಯೂ ಕೂಡ ಬದಲಾಗಲಾರಂಬಿಸಿತು. ಕರಾರುವಕ್ಕಾದ ಅಲೆಗಾವಲು, ಚುರುಕುತನದ ಮಿನ್ನರಿಮೆಯು ’ಗಾಳಿ-ಇಂದ-ನೆಲಕ್ಕೆ’ ಹಾರಿಸುವ ಬಿಟ್ಟೇರುಗಳನ್ನು (air to surface missiles)  ಯುದ್ದ ವಿಮಾನಗಳಲ್ಲಿ ಏರ‍್ಪಡಿಸಲು ಅಣಿಮಾಡಿಕೊಟ್ಟವು. ಮೂರನೇ ತಲೆಮಾರಿನ ಹಂತ ಮುಗಿಯುವ ಹೊತ್ತಿಗೆ ಯುದ್ದ ವಿಮಾನಗಳ ಬಳಕೆಯ ರೀತಿ ಬಹಳಶ್ಟು ಬದಲಾಗಿದ್ದಿತು. ಗಾಳಿಯಲ್ಲಿ ಕಾದಾಡುವ ಕೆಲಸದಿಂದ ಹಿಡಿದು ವಯ್ರಿಗಳು ಹಾರಿಸುವ ಬಿಟ್ಟೇರುಗಳನ್ನು ನಡುವಲ್ಲಿಯೇ ಹೊಡೆದು ಹಾಕುವವರೆಗೂ ಬಾನ ಕಾಳಗ ನಡೆಯುವಂತಾದರೆ, ಗುರುತೇ ಸಿಗದಂತೆ ಬಾನಿನ ಎಲ್ಲೆ ಮೀರಿ ಹಾರಾಡುತ್ತ ಕರಾರುವಕ್ಕಾಗಿ ವಯ್ರಿಯ ನೆಲೆಯಮೇಲೆ ಸಿಡಿಗುಂಡುಗಳನ್ನು ಎಸೆಯುವವರೆಗೂ ಹರಡಿತ್ತು. […]

ಅನಿಸಿಕೆ ಬರೆಯಿರಿ: