ಬೆನ್ನುಹುರಿಯ ಮರುಬೆಳವಣಿಗೆಗೆ ಇಲಿ ಮಾದರಿ?

ವಿವೇಕ್ ಶಂಕರ್

PTspine.192173450_std

ಎಲ್ಲ ನರಗಳಿಗೆ ಬೇರಿನಂತಿರುವ ಬೆನ್ನುಹುರಿ ಕುರಿತು ಹೊಸದೊಂದು ಸಿಹಿಸುದ್ದಿ ಬಂದಿದೆ. ಕಡಿದು ಹೋಗಿರುವ ಬೆನ್ನುಹುರಿಗಳನ್ನು (spine) ಮರುಬೆಳವಣಿಗೆ ಮಾಡಬಹುದೆಂದು ಇತ್ತೀಚಿಗೆ ಇಲಿಗಳ ಮೇಲೆ ನಡೆಸಿದ ಅರಕೆಯಿಂದ ತಿಳಿದುಬಂದಿದೆ.  ಮಿದುಳಿನ ಒಡಗೂಡಿ ನರಗಳ ಏರ‍್ಪಾಟನ್ನು ಹಿಡಿತದಲ್ಲಿಡುವ ಬೆನ್ನುಹುರಿಯ ಕುರಿತ ಈ ಹೊಸ ಬೆಳವಣಿಗೆ ತುಂಬಾ ಮಹತ್ವದ್ದಾಗಿದೆ. ಇದರಿಂದಾಗಿ ಮನುಶ್ಯರಲ್ಲೂ ಬೆನ್ನುಹುರಿಗೆ ಪೆಟ್ಟಾದಾಗ ಅದನ್ನು ಸರಿಪಡಿಸಬಹುದು ಎನ್ನುವ ಆಸೆ ಚಿಗುರಿದೆ.

ಈ ಅರಕೆಯಲ್ಲಿ, ಹದಿನಯ್ದು ಇಲಿಗಳ ಬೆನ್ನುಹುರಿ ಕಡಿದು ಹಾಕಿ ಅವುಗಳ ಉಚ್ಚೆಕೋಶಗಳ (urinary bladder) ಮೇಲಿನ ಹಿಡಿತವನ್ನು ನಿಲ್ಲಿಸಲಾಯಿತು. ಇಲಿಗಳು ಹೆಚ್ಚು ಉಚ್ಚೆ ಮಾಡುವುದರಿಂದ ನರಗಳ ಏರ‍್ಪಾಟಿನ ಮೇಲಾಗುವ ಪರಿಣಾಮ ತಿಳಿದುಕೊಳ್ಳಲು ಹೀಗೆ ಮಾಡಲಾಯಿತು. ಆಮೇಲೆ ಕೋಡ್ರಯ್ಟಿನೆಸ್ (chondroitinase) ಮತ್ತು ಪಯ್ಬ್ರೋಬ್ಲಾಸ್ಟ್ ಗ್ರೋತ್ ಪ್ಯಾಕ್ಟರ್ (fibroblast growth factor) ಎಂಬ ಎರಡು ರಾಸಾಯನಿಕಗಳನ್ನು ಇಲಿಗಳಿಗೆ ನೀಡಲಾಯಿತು. ಇದರ ಜೊತೆಗೆ ಬೆನ್ನುಹುರಿಯ ನಡುವಿನ ಬಾಗವನ್ನು ಉಕ್ಕಿನ ತಂತಿ ಹಾಗೂ ಕೊಯ್ಮದ್ದು ನೂಲಿನ (surgical thread) ಬಳಕೆಯಿಂದ ಗಟ್ಟಿ ಮಾಡಲಾಯಿತು. ಇದಾದ ಆರು ತಿಂಗಳಿನಲ್ಲಿ ಅಚ್ಚರಿ ಎನ್ನುವಂತೆ ಇಲಿಗಳ ಬೆನ್ನುಹುರಿಯಲ್ಲಿ ಮರುಬೆಳವಣಿಗೆ ಕಂಡುಬಂದು, ಅವುಗಳ ಉಚ್ಚೆಕೋಶಗಳು ಮೊದಲಿನಂತೆ ಕೆಲಸ ಮಾಡತೊಡಗಿದವು.

ಮುಂದಿನ ವರುಶಗಳಲ್ಲಿ ಮನುಶ್ಯರ ಮೇಲೆ ಈ ಕುರಿತು ಪ್ರಯೋಗಗಳನ್ನು ನಡೆಸಲು ಅರಿಗರು ಯೋಚಿಸುತ್ತಿದ್ದಾರೆ.

ಒಸಗೆಯ ಸೆಲೆ:

http://www.popsci.com/science/article/2013-06/regrowing-rats-severed-spinal-cords

(ತಿಟ್ಟ: http://www.dunnptky.com/)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: