ಕೂಳು ಬದ್ರತೆ ಹೊರೆಯಾದೀತೇ?

ಚೇತನ್ ಜೀರಾಳ್.

BL15RATION1-OP_1428002f

ಕಳೆದ ಕೆಲವು ವಾರಗಳಿಂದ ಹೆಚ್ಚಿನ ಮಟ್ಟಿಗೆ ಸುದ್ದಿ ಮಾಡುತ್ತಿರುವ ವಿಶಯವೆಂದರೆ ಕಾಂಗ್ರೆಸ್ ಮುಂದಾಳ್ತನದಲ್ಲಿರುವ ಯು.ಪಿ.ಎ ಸರ್‍ಕಾರ ಜಾರಿಗೆ ತರಲು ಹೊರಟಿರುವ “ಕೂಳು ಬದ್ರತಾ ಕಾಯ್ದೆ”. ಈ ಕಾಯ್ದೆ ಎರಡು ಪ್ರಮುಕ ಕಾರಣಗಳಿಗೆ ಸುದ್ದಿ ಮಾಡುತ್ತಿದೆ. ಮೊದಲನೆಯದು ಇದರಿಂದ ದೇಶದ ಹಣಕಾಸಿನ ಏರ್‍ಪಾಟಿನ ಮೇಲಾಗುವ ಪರಿಣಾಮ ಹಾಗೂ ಇದನ್ನು ಜಾರಿಗೆ ತರಲು ಹೊರಟಿರುವ ಸರ್‍ಕಾರದ ರೀತಿ. ನಾನು ಈ ಬರಹದಲ್ಲಿ ಮೇಲಿನ ಹಣಕಾಸಿನ ವಿಶಯದ ಬಗ್ಗೆ ಗಮನ ಹರಿಸುತ್ತಿದ್ದೇನೆ. ಈ ಕಾಯ್ದೆಯ ಬಗ್ಗೆ ಹಲವಾರು ಅನಿಸಿಕೆಗಳು ಇವೆ, ಹಲವರು ಈ ಕಾಯ್ದೆಯ ಪರವಾಗಿ ಮಾತಾಡಿದರೆ, ಇನ್ನು ಕೆಲವರು ಇದರ ಬಗ್ಗೆ ವಿರೋದ ವ್ಯಕ್ತಪಡಿಸುತ್ತಾರೆ.

ಏನಿದು ಕೂಳು ಬದ್ರತಾ ಕಾಯ್ದೆ

ಚುಟುಕಾಗಿ ಹೇಳುವುದಾದರೆ ಬಾರತ ದೇಶದಲ್ಲಿರುವ ಶೇ 67 ಜನರಿಗೆ ಗೋದಿ, ಅಕ್ಕಿ ಮತ್ತು ಕಾಳುಗಳನ್ನು ಕೇವಲ 2, 3 ಮತ್ತು 1 ರೂಪಾಯಿಗೊಂದು ಕಿಲೋವಿನಂತೆ ನೀಡುವುದು. ಈ ಶೇ 67 ಜನರ ಪಯ್ಕಿ, ಶೇ 75 ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಉಳಿದವರು ಪಟ್ಟಣಗಳಲ್ಲಿ ಇರುತ್ತಾರೆ. ಸೂರಿಲ್ಲದವರು ಮತ್ತು ಕಡು ಬಡವರ ವಿಶೇಶ ಗುಂಪುಗಳನ್ನು ಮಾಡಿ ದಿನಕ್ಕೆ ಒಂದು ಹೊತ್ತಿನ ಊಟವನ್ನಾದರೂ ನೀಡಲು ಈ ಯೋಜನೆಯ ಮೂಲಕ ಯೋಚಿಸಲಾಗಿದೆ. ಈ ಕಾಯ್ದೆಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಶ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು.
ಈ ಕಾಯ್ದೆ ಸಾಮಾಜಿಕವಾಗಿ ಕಾಂಗ್ರೆಸ್ ಪಕ್ಶಕ್ಕೆ ಒಳ್ಳೆಯ ಹೆಸರನ್ನು ತಂದುಕೊಡಬಹುದು ಹಾಗೂ ಕೂಳಿಗಾಗಿ ಪರದಾಡುತ್ತಿರುವ ಜನರಿಗೆ ಊಟವನ್ನು ಒದಗಿಸಬಹುದು. ಆದರೆ ಇದರ ಪರಿಣಾಮ ದೇಶದ ಹಣಕಾಸಿನ ಏರ್‍ಪಾಡಿನ ಮೇಲೆ ದೊಡ್ಡ ಹೊಡೆತ ನೀಡುತ್ತದೆ ಅನ್ನೋದು ನಿಜ.

ದೇಶದ ಹಣಕಾಸಿನ ಏರ್‍ಪಾಟಿನ ಮೇಲಾಗುವ ಪರಿಣಾಮ

ಹಲವಾರು ಹಣಕಾಸರಿಗರು ಹೇಳುವಂತೆ ಈ ಕಾಯ್ದೆ ಜಾರಿಗೆ ಬಂದರೂ ಸಹ ಇದು ಈ ವರ್‍ಶದ ಹಣಕಾಸಿನ ಸ್ತಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕಾರಣ, ಈ ಯೋಜನೆಯನ್ನು ಹಲವು ಹಂತದಲ್ಲಿ ಜಾರಿಗೊಳಿಸಲಾಗುವುದು ಮತ್ತು ಈಗಾಗಲೇ ಹಣಕಾಸಿನ ವರ್‍ಶದ ಮೂರು ತಿಂಗಳುಗಳು ಕಳೆದು ಹೋಗಿವೆ. ಇದರ ಪರಿಣಾಮವೇನಿದ್ದರೂ ಬರುವ ವರ್‍ಶಗಳಲ್ಲಿ ಕಾಣಿಸುತ್ತದೆ.
ಈ ಯೋಜನೆಯ ಮೂಲಕ ಪ್ರತಿ ವರ್‍ಶ 62 ಮಿಲಿಯನ್ ಟನ್ ಅಕ್ಕಿ, ಗೋದಿ ಮತ್ತು ಕಾಳುಗಳನ್ನು ಕೊಳ್ಳಲು ಸರ್‍ಕಾರ 1,25,000 ಕೋಟಿ ರುಪಾಯಿಗಳನ್ನು ಕರ್‍ಚು ಮಾಡಬೇಕಾಗುತ್ತದೆ. ಇವತ್ತು ಸರ್‍ಕಾರ ನೀಡುತ್ತಿರುವ ಕೂಳಿನ ಮೇಲಿನ ಸಬ್ಸಿಡಿಯ ಹೊರೆ ಜಿಡಿಪಿಯ ಶೇ 0.8 ರಶ್ಟಿದೆ. ಈ ಯೋಜನೆಯನ್ನು ಜಾರಿಗೆ ತಂದರೆ ಇದು ಶೇ 1.0 -1.2  ರಶ್ಟು ಏರುತ್ತದೆ ಎಂದು ಅಂದಾಜು ಮಾಡಲಾಗಿದೆ.

ಈ ಯೋಜನೆಗೆ ಬೇಕಾಗಿರುವ ಆಹಾರದ ವಸ್ತುಗಳನ್ನು ಕೊಳ್ಳಲು ಕೇಂದ್ರವು ಹೆಚ್ಚಿನ ಪ್ರಮಾಣದಲ್ಲಿ ದೇಶದಲ್ಲಿ ಬೆಳೆಯಲಾಗುವ ಬೆಳೆಯ ಮೇಲೆ ಅವಲಂಬಿತವಾಗಿದೆ, ಆಗ ಸದ್ಯ ಮಾರುಕಟ್ಟೆಯಲ್ಲಿ ಈ ವಸ್ತುಗಳ ಪೂರಯ್ಕೆ ಈಗಿನ ಮಟ್ಟಕಿಂತ ತುಂಬಾ ಕಡಿಮೆಯಾಗುತ್ತದೆ, ಆಗ ಈ ಕಾಳುಗಳನ್ನು ಕೊಳ್ಳಲು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದರ ಹೆಚ್ಚಿನ ಪರಿಣಾಮ ಈ ಯೋಜನೆಯಿಂದ ಹೊರಗಿರುವವರ ಮೇಲೆ ಬೀಳುತ್ತದೆ. ಒಂದು ವೇಳೆ ದೇಶದಲ್ಲಿ ಮಳೆ ಕಯ್ ಕೊಟ್ಟರೆ, ಇವುಗಳನ್ನು ಹೊರದೇಶದಿಂದ ತರಿಸಿಕೊಳ್ಳಬೇಕಾಗುತ್ತದೆ. ಆಗ ಸರ್‍ಕಾರ ಅದಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದು ದೇಶದ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಈ ಯೋಜನೆಯ ಯಶಸ್ಸು ಮತ್ತು ಅದಕ್ಕೆ ತಗಲುವ ಕರ್‍ಚು ಪ್ರತಿ ವರ್‍ಶ ದೇಶದಲ್ಲಿ ಬೀಳುವ ಮಳೆಯ ಮೇಲೆ ನಿಂತಿದೆ.

ಜನರು ಕಾಳುಗಳನ್ನು ಕೊಳ್ಳಲು ಮಾಡುತ್ತಿದ್ದ ಕರ್‍ಚನ್ನು ಬೇರೆ ವಸ್ತುಗಳನ್ನು ಕೊಳ್ಳಲು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬಂದರೆ ಅದರ ಬೆಲೆ ಹೆಚ್ಚಾಗುತ್ತದೆ, ಇದು ಸಹ ಹಲವಾರು ಬೇರೆ ಬೇರೆ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗುತ್ತದೆ.

ಮತ್ತು ಈ ಯೋಜನೆಗೆ ಬೇಕಾಗಿರುವ ಕಾಳುಗಳನ್ನು ಕೂಡಿಡುವ ಸಲುವಾಗಿ ಹೊಸ ಕಟ್ಟಡಗಳನ್ನು ಕಟ್ಟಲು 27,000 ಕೋಟಿ ರೂಪಾಯಿಗಳನ್ನು ಕರ್‍ಚು ಮಾಡಬೇಕಾಗಿದೆ ಎನ್ನುತ್ತಾರೆ ಅರಿಗರು. ಈಗಿರುವ ಪಡಿತರ ಹಂಚಿಕೆ ಏರ್‍ಪಾಡಿನಲ್ಲಿ ಹಲವಾರು ತೊಂದರೆಗಳಿವೆ, ಸರಿಯಾಗಿ ಕಾಳುಗಳು ಇಂದು ಬಡವರಿಗೆ ತಲುಪುತ್ತಿಲ್ಲ, ಬ್ರಶ್ಟಾಚಾರ ಪ್ರತಿ ಹಂತದಲ್ಲೂ ಇದೆ, ಬಹುಪಾಲು ಕಾಳುಗಳು ಹಿಂಬಾಗಿಲ ಮೂಲಕವೇ ಮಾರಾಟವಾಗುತ್ತಿವೆ. ನಿಜವಾಗಿ ಈ ಯೋಜನೆ ತಲುಪಬೇಕಾಗಿರುವ ಜನರ ಆರಿಸುವಿಕೆಯೇ ಸರಿಯಾಗಿ ಆಗಿಲ್ಲ ಅನ್ನುವ ದೊಡ್ಡ ವಾದವೊಂದಿದೆ. ಇದೇ ಏರ್‍ಪಾಡಿನ ಮೂಲಕ ಈ ಯೋಜನೆಯನ್ನು ಜಾರಿಗೆ ತಂದರೆ ನಿಜವಾದ ಬಡವರಿಗೆ ಇದರ ಲಾಬ ಸಿಗುತ್ತದೆಯೇ? ಇದಕ್ಕಾಗಿ ಸರ್‍ಕಾರ ಹೊಸ ಏರ್‍ಪಾಡನ್ನು ಮಾಡಬೇಕಾಗಬಹುದು. ಹಿಂದಿನ ಕೊರತೆಗಳನ್ನು ನೀಗಿಸುವ ಹೊಸ ಏರ್‍ಪಾಡನ್ನು ದೇಶದ ಎಲ್ಲಾ ಕಡೆಗಳಲ್ಲಿ ಮಾಡಲು ಕೋಟ್ಯಾಂತರ ರುಪಾಯಿ ಕರ್‍ಚು ಮಾಡಬೇಕಾಗುತ್ತದೆ, ಇದು ಕೂಡ ಬೊಕ್ಕಸದ ಮೇಲೆ ಬೀಳುವ ಹೊರೆಯಾಗಿದೆ.
ಇದರ ಜೊತೆಗೆ ಈ ಯೋಜನೆಯನ್ನು ಜಾರಿಗೆ ತರಲು ಆಯಾ ರಾಜ್ಯದ ಸರ್‍ಕಾರಗಳು ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ಬೇಕಾಗುವ ಸವ್ಕರ್‍ಯಗಳನ್ನು ಮತ್ತು ಸಿಬ್ಬಂದಿಗಳನ್ನು ಹೊಂದಿಸಿಕೊಳ್ಳಲು ರಾಜ್ಯಗಳು ಇದಕ್ಕೆ ತಮ್ಮ ಕಡೆಯಿಂದ ಕೋಟ್ಯಾಂತರ ರುಪಾಯಿಗಳನ್ನು ಕರ್‍ಚು ಮಾಡಬೇಕಾಗುತ್ತದೆ. ಮತ್ತು ಈಗಾಗಲೇ ರಾಜ್ಯಗಳಲ್ಲಿರುವ ಪಡಿತರ ವ್ಯವಸ್ತೆಯ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಕಾಳು ಒದಗಿಸುವ ಯೋಜನೆಗಳು ಇವೆ, ಮುಂದೆ ಇವುಗಳ ಗತಿಯೇನು ಅನ್ನುವುದರ ಬಗ್ಗೆ ಸರಿಯಾದ ನಿರ್‍ದಾರವಾಗಿಲ್ಲ. ಈಗಾಗಲೇ ಸಿಬ್ಬಂದಿ ಮತ್ತು ದುಡ್ಡಿನ ಕೊರತೆಯನ್ನು ಹೊಂದಿರುವ ರಾಜ್ಯಗಳ ಮೇಲೆ ಕೇಂದ್ರ ಮತ್ತೊಂದು ಹೊರೆಯನ್ನು ಹೊರಿಸಿದಂತಾಗುತ್ತದೆ.

ಇಂತಹ ಕಾಯ್ದೆಯನ್ನು ಮಾಡುವ ಕಸುವು ಬಾರತಕ್ಕೆ ಇದೆಯೇ?

ಜನರಿಗೆ ಉಚಿತವಾಗಿ ಸವ್ಲಬ್ಯಗಳನ್ನು ನೀಡುತ್ತಿರುವುದು ಕೇವಲ ಬಾರತದಲ್ಲಿ ಮಾತ್ರವಲ್ಲ ಬದಲಾಗಿ ಹಲವಾರು ದೇಶಗಳಲ್ಲಿ ಇಂತಹವುಗಳನ್ನು ಕಾಣಬಹುದು. ಆದರೆ ಇಂತಹ ಸವಲತ್ತುಗಳನ್ನು ನೀಡಲು ಬಾರತ ದೇಶದ ಹಣಕಾಸು ಏರ್‍ಪಾಟು ಗಟ್ಟಿಯಾಗಿದೆಯೇ ಅನ್ನುವುದು ಕೇಳ್ವಿ? ಹೆರನಾಡುಗಳಲ್ಲಿ ಉಚಿತ ಆರೋಗ್ಯ ಸೇವೆ, ಪಿಂಚಣಿ, ಕೆಲಸವಿಲ್ಲದವರಿಗೆ ದುಡ್ಡು ಮುಂತಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಗಮನಿಸಬೇಕಾಗಿರುವ ಮುಕ್ಯ ಅಂಶವೆಂದರೆ ಆ ದೇಶಗಳಲ್ಲಿರುವ ಹಣಕಾಸಿನ ಸ್ತಿತಿಗತಿಗೂ ನಮ್ಮ ದೇಶದಲ್ಲಿರುವ ಹಣಕಾಸಿನ ಸ್ತಿತಿಗತಿಗೂ ದೊಡ್ಡ ವ್ಯತ್ಯಾಸವಿದೆ. ವಿಶ್ವ ಬ್ಯಾಂಕ್ ಪ್ರಕಟಿಸಿರುವ ಜಿಡಿಪಿ ಪಟ್ಟಿಯಲ್ಲಿ ಬಾರತ 126 ನೇ ಜಾಗದಲ್ಲಿದ್ದು ಅದರ ತಲಾದಾಯ 3876 ಡಾಲರ್‍ ಇದೆ. ಮುಂದುವರಿದ ದೇಶಗಳಾಗಿರುವ ಅಮೇರಿಕ 7 ನೇ ಜಾಗದಲ್ಲಿದ್ದು ಅದರ ತಲಾದಾಯ 49,965 ಡಾಲರ್‍ ಇದೆ, ಜರ್‍ಮನಿಯು 40,394 ಡಾಲರ್‍ ತಲಾದಾಯ ಹೊಂದಿದ್ದು 17ನೇ ಜಾಗದಲ್ಲಿದೆ, ಪ್ರಾನ್ಸ್ 35,845 ಡಾಲರ್‍ ತಲಾದಾಯ ಹೊಂದಿದ್ದು 21ನೇ ಜಾಗದಲ್ಲಿದೆ, ಜಪಾನ್ 35,204 ಡಾಲರ್‍ ತಲಾದಾಯ ಹೊಂದಿದ್ದು 23ನೇ ಜಾಗದಲ್ಲಿದೆ.

ಬಾರತದ ಜಿಡಿಪಿಗೂ ಹಾಗೂ ಈ ಹೆರನಾಡುಗಳ ಜಿಡಿಪಿಗೂ ಇರುವ ಅಂತರ ಗಮನಿಸಿ. ಮುಂದುವರಿದ ನಾಡುಗಳೇ ಇಂತಹ ಒಂದಶ್ಟು ಯೋಜನೆಗಳನ್ನು ಜನರಿಗೆ ಕೊಡುವಾಗ ನೂರು ಬಾರಿ ಯೋಚಿಸುತ್ತವೆ, ಇದಕ್ಕೆ ತಕ್ಕ ಜನರನ್ನು ಆರಿಸುತ್ತವೆ. ಆದರೆ ಬಾರತದಲ್ಲಿ ಇಂದಿರುವ ಹಣಕಾಸಿನ ಪರಿಸ್ತಿತಿಯಲ್ಲಿ ಇಂತಹ ಒಂದು ಯೋಜನೆಯನ್ನು ನಡೆಸಿಕೊಂಡು ಹೋಗಲು ಸಾದ್ಯವೇ? ಕೂಳು ಬದ್ರತಾ ಕಾಯ್ದೆಯಂತಹ ಯೋಜನೆಗಳನ್ನು ಜಾರಿಗೊಳಿಸಲು ಇಂದು ಬಾರತಕ್ಕಿರುವ ತಲಾದಾಯ ಮಟ್ಟದಲ್ಲಿ ಇದೊಂದು ದೊಡ್ಡ ಸವಾಲೇ ಹವ್ದು. ಒಂದು ನೆಮ್ಮದಿಯ ಸಮಾಜ ಕಟ್ಟಬೇಕು ಎಂದಾದಲ್ಲಿ ಬಾರತದ ಇಂದಿನ ತಲಾದಾಯ ಮೂರು ಅತವಾ ನಾಲ್ಕು ಪಟ್ಟು ಹೆಚ್ಚಿರಬೇಕು. ಆಗ ಸರ್‍ಕಾರದ ಹತ್ತಿರ ಹೆಚ್ಚಿನ ದುಡ್ಡು ಸಂಗ್ರಹವಾಗುತ್ತದೆ, ಇದರಲ್ಲಿ ಬರುವ ದುಡ್ಡಿನಿಂದ ಜನರಿಗೆ ಬೇಕಾಗಿರುವ ಇಂತಹ ಏರ್‍ಪಾಟುಗಳನ್ನು ಮಾಡಲು ಸಾದ್ಯವಾಗುತ್ತದೆ.

ಒಂದು ದೇಶ ತನ್ನ ಹಣಕಾಸಿನ ಏರ್‍ಪಾಟನ್ನು ಗಟ್ಟಿಗೊಳಿಸಲು ತಲಾದಾಯ ಹೆಚ್ಚುವಂತೆ ಮಾಡಬೇಕು. ಅದಕ್ಕಾಗಿ ಜನರಿಗೆ ಒಳ್ಳೆಯ ಕಲಿಕೆ ಸಿಗುವಂತಾಗಬೇಕು, ಒಳ್ಳೆಯ ಆರೋಗ್ಯ ಸೇವೆ ಸಿಗುವಂತಾಗಬೇಕು, ಉದ್ಯೋಗಾವಕಾಶಗಳು ಸಿಗುವಂತಾಗಬೇಕು, ಇಂದು ಇರುವ ಉದ್ದಿಮಗಳ ಕಟ್ಟಲೆಗಳನ್ನು, ಏರ್‍ಪಾಟನ್ನು ಬದಲಿಸುವ ಕೆಲಸ ಮಾಡಬೇಕು, ಹೊಸ ಉದ್ದಿಮೆಗಳನ್ನು ತೆರೆಯಬೇಕು, ಹಲವು ಸೇವೆಗಳನ್ನು ಒದಗಿಸುವ, ಹೊಸ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಗಳನ್ನು ತೆರೆಯುವ ಕಡೆ ಗಮನ ಹರಿಸಬೇಕು. ತಾನು ಇಂತಹ ಯೋಜನೆಗಳಿಗೆ ಮಾಡುವ ಕರ್‍ಚನ್ನು ಸರಿದೂಗಿಸುವ ಜಿಡಿಪಿಯನ್ನು ತಂದುಕೊಂಡಾಗ ಇಂತಹ ಯೋಜನೆಗಳನ್ನು ಜಾರಿಗೆ ತಂದರೆ ಅದು ನಿಜವಾದ ಜನರಿಗೆ ತಲುಪುತ್ತದೆ ಮತ್ತು ತೆರಿಗೆ ಕಟ್ಟುವ ಜನರಿಗೂ ಸಹ ಇದು ಹೊರೆಯಾಗಿ ಕಾಣುವುದಿಲ್ಲ.

ಈಗಾಗಲೇ ಬೆಲೆಯೇರಿಕೆ, ರುಪಾಯಿ ಬೆಲೆ ಕುಸಿತ, ಉತ್ಪಾದನೆ ಪ್ರಮಾಣ ಕುಸಿತ, ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಬಾರತದ ಹಣಕಾಸಿನ ಏರ್‍ಪಾಡಿನ ಮೇಲೆ ಇಂತಹ ಒಂದು ಕಾಯ್ದೆಯನ್ನು ಜಾರಿಗೆ ತರುವುದು ಬಿಳಿಯಾನೆಯನ್ನು ಸಾಕಿದಂತೆಯೇ ಸರಿ. ಈಗ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್ ಪಕ್ಶ ಜನರಿಗೆ ಊಟವನ್ನು ನೀಡುವ ಕಾರಣಕ್ಕಿಂತ ಹೆಚ್ಚಾಗಿ ಇದನ್ನು ಮುಂಬರುವ ಚುನಾವಣೆಯಲ್ಲಿ ಓಟು ಕಬಳಿಸುವ ಬಾಣವನ್ನಾಗಿ ಬಳಸಿಕೊಳ್ಳಲಿದೆ ಅನ್ನುವುದು ತಿಳಿಯಾಗಿ ಕಾಣಿಸುತ್ತಿದೆ.

ಮಾಹಿತಿ ಸೆಲೆ: rediff.com, deccanherald

(ಚಿತ್ರ: www.thehindubusinessline.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: