ರಾಜ್ಯಗಳ ಮೇಲೆ ಕೇಂದ್ರದ ಸವಾರಿ ನಿಲ್ಲಲಿ

ಚೇತನ್ ಜೀರಾಳ್.

1280px-Official_Hindustan_Ambassador_cars_parked_outside_North_Block,_Secretariat_Building,_New_Delhi

ಹಿಂದಿನ ಎರಡು ಬರಹಗಳಲ್ಲಿ (1, 2) ಮುಕ್ಯವಾಗಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೊಳಿಸಲು ಇರುವ ಹಣಕಾಸಿನ ಪರಿಸ್ತಿತಿ, ಅದರಿಂದಾಗುವ ಪರಿಣಾಮ ಮತ್ತು ಮಂದಿಯಾಳ್ವಿಕೆಯ ಈ ದೇಶದಲ್ಲಿ ಹಿಂಬಾಗಿಲ ಮೂಲಕ ಕಟ್ಟಲೆಯನ್ನು ಮಾಡಿ, ಜಾರಿಗೆ ತರಲು ಹೊರಟಿರುವ ಕೇಂದ್ರದ ನಡೆಯ ಬಗ್ಗೆ ನೋಡಿದ್ದೇವೆ. ಇವತ್ತಿನ ಬರಹದಲ್ಲಿ ಬಾರತದಲ್ಲಿರುವ ರಾಜ್ಯ ಮತ್ತು ಕೇಂದ್ರದ ನಡುವೆ ಇರುವ ಅದಿಕಾರ ಹಂಚಿಕೆಯ ಸ್ವರೂಪ ಮತ್ತು ಕೇಂದ್ರದ ನಡೆ ಹೇಗೆ ಒಪ್ಪುಕೂಟ ವ್ಯವಸ್ತೆಯ ಆಶಯಕ್ಕೆ ಎದುರಾಗಿದೆ ಅನ್ನುವುದನ್ನ ನೋಡೋಣ.

ಬಾರತ ಮಂದಿಯಾಳ್ವಿಕೆಯನ್ನು ಹೊಂದಿರುವ ಅತಿ ದೊಡ್ಡ ದೇಶವಾಗಿರುವುದು ದಿಟವೇ ಹವ್ದು. ಬಾರತ ಒಕ್ಕೂಟ ಏರ್‍ಪಾಟನ್ನು ಹೊಂದಿದೆ ಎಂಬುದು ಸರಿಯಾದರೂ, ಅದು ಇನ್ನೂ ನಿಜವಾದ ಅರ್‍ತದಲ್ಲಿ ಜಾರಿಗೆ ಬಂದಿಲ್ಲ ಅನ್ನುವುದು ದಿಟ. ಒಕ್ಕೂಟ ವ್ಯವಸ್ತೆಯ ತಳಹದಿಯ ಮೇಲೆ ಬಾಶಾವಾರು ಪ್ರಾಂತ್ಯಗಳನ್ನು ರಾಜ್ಯಗಳನ್ನಾಗಿ ಮಾಡಲಾಗಿದೆ. ಸಂವಿದಾನ ಬರೆದವರು ಸಹ, ಬಾರತ ಹಲನುಡಿ ಹಾಗೂ ನಡೆ ಹೊಂದಿರುವ ಪ್ರದೇಶವಾಗಿದ್ದು, ಆಯಾ ನುಡಿಯಾಡುವ ರಾಜ್ಯಗಳನ್ನು ಮಾಡಿ, ಅದರ ಮೂಲಕ ಅದರ ಆಳ್ವಿಕೆಯನ್ನು ಅಲ್ಲಿಯ ಜನರ ಕಯ್ಗೆ ಕೊಟ್ಟಿದ್ದರು. ಆದರೂ ಸಹ ಬಾರತದ ಸಂವಿದಾನದಲ್ಲಿ ಹಲವು ಕಾಯ್ದೆಗಳ ಮೂಲಕ ರಾಜ್ಯಗಳಿಗೆ ಸಿಗಬೇಕಾಗಿದ್ದ ಹೆಚ್ಚಿನ ಸ್ವಾಯತ್ತತೆಗೆ ತಡೆ ಹಾಕಿರುವುದು ಕಾಣಿಸುತ್ತದೆ. ಸಂವಿದಾನವನ್ನು ಗಮನಿಸಿದರೆ ಎದ್ದು ಕಾಣುವ ಒಂದು ಸಂಗತಿಯೆಂದರೆ ಕೇಂದ್ರ ಹೆಚ್ಚು ಬಲವುಳ್ಳದ್ದಾಗಿಯೂ, ರಾಜ್ಯಗಳನ್ನು ಕಡಿಮೆ ಬಲ ಹೊಂದಿರುವಂತೆ ಮಾಡಲಾಗಿದೆ.

ಬಾರತದಲ್ಲಿ ಕಾರ್‍ಯಾಂಗ (executive), ನ್ಯಾಯಾಂಗ (judiciary) ಹಾಗೂ ಶಾಸಕಾಂಗ (legislative) ಎನ್ನುವ ಮೂರು ಕವಲುಗಳ ಮೂಲಕ ಅದಿಕಾರವನ್ನು ಹಂಚಲಾಗಿದೆ. ಇವುಗಳಲ್ಲಿ ಶಾಸಕಾಂಗವನ್ನು ಜನರಿಂದ ಆರಿಸಲ್ಪಡುವ ಜನಪ್ರತಿನಿದಿಗಳು ನೋಡಿಕೊಳ್ಳುತ್ತಾರೆ, ಅಂದರೆ ಜನರ ಬೇಕು ಬೇಡಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗಳನ್ನು ರೂಪಿಸುವುದು, ಬದಲಾಯಿಸುವುದು ಅತವಾ ಕಯ್ಬಿಡುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಈ ಶಾಸಕಾಂಗ ರಾಜ್ಯದ ಮಟ್ಟದಲ್ಲಿ ವಿದಾನಸಬೆ ಮತ್ತು ವಿದಾನಪರಿಶತ್ತಿನಲ್ಲಿ ಕೆಲಸ ಮಾಡಿದರೆ, ಕೇಂದ್ರದ ಮಟ್ಟದಲ್ಲಿ ಲೋಕಸಬೆ ಹಾಗೂ ರಾಜ್ಯಸಬೆಯಲ್ಲಿ ಕೆಲಸ ಮಾಡುತ್ತಾರೆ. ಈ ಶಾಸಕಾಂಗದ ಅದಿಕಾರವನ್ನು ಬಾರತದ ಸಂವಿದಾನದಲ್ಲಿ ರಾಜ್ಯ ಮತ್ತು ಕೇಂದ್ರಗಳ ನಡುವೆ 3 ಗುಂಪುಗಳಲ್ಲಿ ಹಂಚಲಾಗಿದೆ. ಮೊದಲನೆಯದು ಕೇಂದ್ರದ ಪಟ್ಟಿ (central list), ಎರಡನೆಯದು ರಾಜ್ಯಗಳ ಪಟ್ಟಿ (state list) ಮತ್ತು ಮೂರನೆಯದು ಜಂಟಿ ಪಟ್ಟಿ (concurrent List).

ಕೇಂದ್ರದ ಪಟ್ಟಿ

ಈ ಪಟ್ಟಿಯಲ್ಲಿ ಒಟ್ಟು 99 ವಿಶಯಗಳಿವೆ (ಮುಂಚೆ ಇದು 97 ಇತ್ತು). ಇದರಲ್ಲಿ ಮುಕ್ಯವಾಗಿ ರಕ್ಶಣೆ, ಪರಮಾಣು ಶಕ್ತಿ, ಹೊರದೇಶದ ವಿಚಾರ, ನಾಗರೀಕತೆ, ರಯ್ಲ್ವೆ, ಹಡಗು, ಬಾನೋಡ, ಹಣಕಾಸು ಏರ್‍ಪಾಟು, ಬ್ಯಾಂಕಿಂಗ್, ಗಣಿಗಾರಿಕೆ, ಕನಿಜ ಮತ್ತು ಎಣ್ಣೆ ಸಂಪತ್ತು, ಸುಪ್ರೀಂ ಕೋರ್‍ಟ್, ಹಯ್ ಕೋರ್‍ಟ್ ಮತ್ತು ಯು.ಪಿ.ಎಸ್.ಸಿ ಗಳ ರಚನೆ ಮತ್ತು ಸಂಬಾಳಿಸುವಿಕೆ ಮುಂತಾದವುಗಳ ಬಗ್ಗೆ ಕಾಯ್ದೆಗಳನ್ನು ರೂಪಿಸಲು ಹಕ್ಕು ಹೊಂದಿದೆ. ಇವುಗಳ ಬಗ್ಗೆ ಕಾಯ್ದೆಗಳನ್ನು ಲೋಕಸಬೆ ಹಾಗೂ ರಾಜ್ಯಸಬೆಯ ಆಳುಗಳು ಮಾಡುತ್ತಾರೆ.

ರಾಜ್ಯಗಳ ಪಟ್ಟಿ

ರಾಜ್ಯಗಳ ಪಟ್ಟಿಯಲ್ಲಿ ಇವತ್ತು 61 ವಿಶಯಗಳಿವೆ (ಮುಂಚೆ ಇದು 66 ಇತ್ತು) . ಇದರಲ್ಲಿ ಮುಕ್ಯವಾಗಿ ಕಾನೂನು ವ್ಯವಸ್ತೆ, ಪೋಲಿಸ್, ಆರೋಗ್ಯ, ಸಾರಿಗೆ, ಮಿಂಚು (ವಿದ್ಯುತ್), ಗ್ರಾಮೀಣ ಆಡಳಿತ ಮುಂತಾದವುಗಳಿವೆ. ಇವುಗಳ ಬಗ್ಗೆ ರಾಜ್ಯಕ್ಕೆ ಇಡಿಯಾದ ಹಕ್ಕಿದ್ದು, ಬೇಕಾದ ಹಾಗೆ ಕಾಯ್ದೆಗಳನ್ನು ಕಟ್ಟಬಹುದು. ಕೆಲವು ಸಂದರ್‍ಬದಲ್ಲಿ ದೇಶದ ಒಳಿತನ್ನು ಗಮನದಲ್ಲಿಟ್ಟುಕೊಂಡು ಪಾರ್‍ಲಿಮೆಂಟ್ ರಾಜ್ಯದ ಪಟ್ಟಿಯಲ್ಲಿರುವ ವಿಶಯಗಳ ಬಗ್ಗೆ ಕಾಯ್ದೆ ರೂಪಿಸಬಹುದು, ಇದಕ್ಕೆ ಪಾರ್‍ಲಿಮೆಂಟಿನ 2/3 ರ ಒಪ್ಪಿಗೆ ಪಡೆಯಬೇಕು. ರಾಜ್ಯದ ಪಟ್ಟಿಯಲ್ಲಿರುವ ವಿಶಯಗಳ ಬಗ್ಗೆ ವಿದಾನಸಬೆ ಹಾಗೂ ವಿದಾನಪರಿಶತ್ತಿನ ಆಳುಗಳು ಕಾಯ್ದೆಗಳನ್ನು ರೂಪಿಸುತ್ತಾರೆ.

ಜಂಟಿ ಪಟ್ಟಿ

ಇದರಲ್ಲಿ ಒಟ್ಟು 52 ವಿಶಯಗಳಿವೆ (ಮುಂಚೆ ಇದು 47 ಇತ್ತು). ಇದರಲ್ಲಿ ರಾಜ್ಯ ಹಾಗೂ ಕೇಂದ್ರಕ್ಕೆ ಹಕ್ಕಿದ್ದು, ರಾಜ್ಯಗಳು ಮಾಡುವ ಕಾಯ್ದೆಗಳನ್ನು ಕೇಂದ್ರ ಸರ್‍ಕಾರ ಬೇಕಿದ್ದಲ್ಲಿ ಬದಲಾಯಿಸಬಹುದು. ಇದರಲ್ಲಿ ಮುಕ್ಯವಾಗಿ ಕಲಿಕೆ, ಮದುವೆ ಮತ್ತು ಬೇರ್‍ಪಡಿಕೆ, ಆಸ್ತಿ ಮಾರೆಡೆ, ಕಲಿಕೆ, ಮಿಂಚು, ಮದ್ದು (drugs) ಮುಂತಾದ ವಿಶಯಗಳಿವೆ. ಇದರಲ್ಲಿ ರಾಜ್ಯ ಸರ್‍ಕಾರ ಕಾಯ್ದೆ ಮಾಡಬಹುದು. ಆದರೆ ಕೇಂದ್ರ ಸರ್‍ಕಾರ ಈ ಕಾಯ್ದೆಯನ್ನು ರದ್ದು ಮಾಡಿ ತಾನೇ ಇದನ್ನು ಬದಲಾಯಿಸುವ ಹಕ್ಕನ್ನು ಹೊಂದಿದೆ.

ರಾಜ್ಯಗಳ ಮೇಲೆ ಕೇಂದ್ರದ ಸವಾರಿ

ಈ ಮೇಲಿನ ಪಟ್ಟಿಗಳನ್ನು ನೋಡಿದರೆ, ಹೆಸರಿಗೆ ಮಾತ್ರ ಮೂರು ಪಟ್ಟಿಗಳಿವೆ! ಆದರೆ ಕೇಂದ್ರಕ್ಕೆ ರಾಜ್ಯ ಹಾಗೂ ಜಂಟಿ ಪಟ್ಟಿಗಳಲ್ಲಿರುವ ವಿಶಯಗಳನ್ನು ಹೊಡೆದು ಹಾಕಿ ತನಗೆ ಬೇಕಾದ ಹಾಗೆ ಕಾಯ್ದೆಗಳನ್ನು ಮಾಡಿಕೊಳ್ಳುವ ಅದಿಕಾರವಿದೆ. ಮೆಲ್ಲಗೆ ರಾಜ್ಯದ ಪಟ್ಟಿಯಲ್ಲಿರುವ ವಿಶಯಗಳನ್ನು ಕೇಂದ್ರವು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದೆ. ಇದರ ಜೊತೆಗೆ ಸಂವಿದಾನದ ಆರ್‍ಟಿಕಲ್ 356ರ ಪ್ರಕಾರ ರಾಜ್ಯಗಳು ಕೇಂದ್ರ ಮಾಡುವ ಕಾಯ್ದೆಯ ಅಡಿಯಲ್ಲೇ ರಾಜ್ಯದ ಎಲ್ಲಾ ಕಾಯ್ದೆಗಳನ್ನು ಮಾಡಬೇಕು. ಇದನ್ನು ಸರಿಯಾಗಿ ಪಾಲಿಸಲು ರಾಜ್ಯಗಳಲ್ಲಿ ಕೇಂದ್ರ ಸರ್‍ಕಾರ ರಾಜ್ಯಪಾಲರನ್ನು ನೇಮಿಸುತ್ತದೆ. ಮತ್ತು ರಾಶ್ಟ್ರಪತಿಗಳು ಆಪತ್ಕಾಲದ ಪರಿಸ್ತಿತಿಯಲ್ಲಿ ಕೇಂದ್ರದ ಸರ್‍ಕಾರದ ಸಂಪುಟದ ಒಪ್ಪಿಗೆಯ ಮೇರೆಗೆ ರಾಜ್ಯ ಸರ್‍ಕಾರವನ್ನು ಉರುಳಿಸಬಹುದು.

ಈ ಎಲ್ಲಾ ಕಟ್ಟಲೆಗಳನ್ನು ನೋಡಿದರೆ ಹೆಸರಿಗೆ ಮಾತ್ರ ಒಕ್ಕೂಟ ವ್ಯವಸ್ತೆ ನಮ್ಮ ದೇಶದಲ್ಲಿದೆ ಎಂದೆನಿಸದೆ ಇರದು. ನಿಜವಾದ ಒಕ್ಕೂಟ ವ್ಯವಸ್ತೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಮತ್ತು ಇಡಿಯಾದ ಅದಿಕಾರ ಇರಬೇಕು, ತನಗೆ ಬೇಕಿರುವ ಅತವಾ ಬೇಡದ ಕಾಯ್ದೆಗಳನ್ನು ಮಾಡಿಕೊಳ್ಳಲು ಅತವಾ ಬದಲಾಯಿಸಲು ಅದಿಕಾರ ಇರಬೇಕು. ಅದಿಕಾರ ತಳಮಟ್ಟದವರೆಗೂ ಹಂಚಿಕೆಯಾಗಬೇಕು. ಆದರೆ ಇಂದು ಕೇಂದ್ರ ಸರ್‍ಕಾರ ಎಲ್ಲವನ್ನು ತನ್ನ ಕಯ್ಯಲ್ಲಿ ಹಿಡಿದಿಟ್ಟುಕೊಂಡಿದೆ. ಕೇಂದ್ರ ಸರ್‍ಕಾರ ಕೇವಲ ರಾಜ್ಯಕ್ಕೆ ಯೋಜನೆಗಳನ್ನು ಮಾಡಲು ಬೇಕಿರುವ ಸಹಾಯಕನಂತೆ ಕೆಲಸ ಮಾಡಬೇಕು. ಅದು ಹೊರದೇಶದ ಒಡನಾಟ, ಸೇನೆ ಮುಂತಾದ ಕೆಲವೇ ವಿಶಯಗಳಲ್ಲಿ ಕೆಲಸ ಮಾಡಬೇಕು. ಹೆಚ್ಚಿನ ಅದಿಕಾರವನ್ನು ರಾಜ್ಯಗಳಿಗೆ ಬಿಟ್ಟುಕೊಡಬೇಕು. ಆದರೆ ಅದು ಇಂದು ಇರುವ ಏರ್‍ಪಾಟಿನ ಮೂಲಕ ಮಾಡಲು ಸಾದ್ಯವೇ?

ಕೂಳು ಬದ್ರತಾ ಕಾಯ್ದೆ ರಾಜ್ಯದ ಮೇಲೆ ಹೇರಿಕೆ

ಇವತ್ತು ನಿಜಕ್ಕೂ ನಮ್ಮ ರಾಜ್ಯದಲ್ಲಿ ಕೂಳು ಬದ್ರತಾ ಕಾಯ್ದೆ ಬೇಕಾಗಿದೆಯೇ ಅನ್ನುವುದು ನನ್ನ ಕೇಳ್ವಿ? ಇದೇ ರೀತಿ ಹಲವಾರು ರಾಜ್ಯಗಳಲ್ಲೂ ಇದೇ ಕೇಳ್ವಿಯನ್ನು ಜನರು ಕೇಳುತ್ತಿರಬಹುದು. ಈಗಾಗಲೇ ಹಲವು ರಾಜ್ಯಗಳಲ್ಲಿ ಚೆನ್ನಾಗಿ ಪಡಿತರ ಏರ್‍ಪಾಟಿನ ಮೂಲಕ ಬಡಜನರಿಗೆ ಸವಲತ್ತುಗಳನ್ನು ಒದಗಿಸುತ್ತಿದೆ. ಕರ್‍ನಾಟಕದಲ್ಲಿ ಈ ರೀತಿಯ ಹಲವು ಯೋಜನೆಗಳು ಈಗಾಗಲೇ ಇವೆ.  ಇದರ ಜೊತೆಗೆ ಮತ್ತೆ ಕೇಂದ್ರದ ಇನ್ನೊಂದು ಯೋಜನೆ ಯಾಕೆ ಬೇಕು? ಅತವಾ ಈ ಯೋಜನೆ ನಮಗೆ ಬೇಡ ಎಂದು ಹೇಳುವ ಹಕ್ಕು ಇಂದು ರಾಜ್ಯಕ್ಕೆ ಇದೆಯೇ? ಈ ಹೊಸ ಯೋಜನೆಗಳನ್ನು ಜಾರಿಗೆ ತರುವುದು ಸಹ ರಾಜ್ಯಗಳ ಮೇಲೆ ಆಗುತ್ತಿರುವ ಹೇರಿಕೆಯೇ!  ಈ ಕಾಯ್ದೆ ಒಂದು ಎತ್ತುಗೆ ಅಶ್ಟೇ. ಇಂತಹ ಹಲವು ಯೋಜನೆಗಳು ರಾಜ್ಯಗಳ ಮೇಲೆ ಹೇರಿಕೆಯಂತೆಯೇ ಕಾಣುತ್ತವೆ.

ಇನ್ನೊಂದು ಕಡೆ ಎಲ್ಲಾ ಅದಿಕಾರವನ್ನು ತನ್ನ ಕಯ್ಯಲ್ಲೆ ಹಿಡಿದುಕೊಂಡು ಕೂತಿರುವ ಕೇಂದ್ರದ ನಿಲುವಿನಿಂದ ಆಗುವ ತೊಂದರೆಯ ಬಗ್ಗೆ ಇತ್ತೀಚಿನ ಎತ್ತುಗೆಯೊಂದನ್ನು ನೋಡೋಣ.

ಬಾರತದಲ್ಲಿರುವ ಎಲ್ಲಾ ಟಿ.ಬಿ. (tuberculosis) ರೋಗವನ್ನು ಹೊಂದಿರುವ ರೋಗಿಗಳಿಗೆ ಕೇಂದ್ರ ಸರ್‍ಕಾರದ ಮೂಲಕವೇ ಅವ್ಶದಿ ನೀಡಲಾಗುತ್ತಿದೆ. ಅಂದರೆ ಕೇಂದ್ರ ಸರ್‍ಕಾರ ಈ ರೋಗಕ್ಕೆ ಬೇಕಿರುವ ಅವ್ಶದಿಯನ್ನು ಹೊರದೇಶದಿಂದ ತರಿಸಿಕೊಂಡು ಎಲ್ಲಾ ರಾಜ್ಯಗಳಿಗೆ ಹಂಚುವ ಕೆಲಸ ಮಾಡುತ್ತಿದೆ. ಆರೋಗ್ಯ ಸೇವೆ ರಾಜ್ಯದ ಪಟ್ಟಿಯಲ್ಲಿದೆ, ಆದರೆ ಈ ರೋಗಕ್ಕೆ ಮದ್ದನ್ನು ಕೇಂದ್ರ ತರಿಸಿಕೊಂಡು ಹಂಚುವ ಕೆಲಸ ಮಾಡುತ್ತಿದೆ! ನ್ಯಾಯವಾಗಿ ಈ ರೋಗಕ್ಕೆ ಬೇಕಿರುವ ಅವ್ಶದಿಯನ್ನು ಆಯಾ ರಾಜ್ಯಗಳೇ ತರಿಸಿಕೊಂಡು ಇರುವ ರೋಗಿಗಳಿಗೆ ಹಂಚುವ ಕೆಲಸ ಮಾಡಬೇಕು, ಆಗ ಅದಕ್ಕೆ ತನ್ನ ರಾಜ್ಯದಲ್ಲಿರುವ ರೋಗಿಗಳು ಮತ್ತು ಅದಕ್ಕೆ ಬೇಕಾಗುವ ಅವ್ಶದಿಯ ಪ್ರಮಾಣದ ಬಗ್ಗೆ ಅರಿವಿರುತ್ತದೆ.

ಈಗ ಕೇಂದ್ರ ಸರ್‍ಕಾರ ತಾನು ಮಾಡುತ್ತಿರುವ ಈ ಕೆಲಸದಲ್ಲಿ ಎಡವಿರುವುದರಿಂದ ಬಾರತದ ಹಲವಾರು ರಾಜ್ಯಗಳಲ್ಲಿರುವ ಟಿ.ಬಿ. ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ತೊಂದರೆಯಾಗುತ್ತಿಲ್ಲವೇ? ಈ ರೋಗಕ್ಕೆ ಬೇಕಿರುವ ಅವ್ಶದಿಯನ್ನು ರಾಜ್ಯಗಳೇ ಕೊಂಡಿದ್ದರೆ ಆಗುತ್ತಿದ್ದ ಸಮಸ್ಯೆ ಏನು? ಒಂದು ವೇಳೆ ರಾಜ್ಯಗಳೇ ತಮಗೆ ಬೇಕಾಗಿದ್ದ ಅವ್ಶದಿಯನ್ನು ತರಿಸಿಕೊಳ್ಳುತ್ತಿದ್ದರೆ, ಕರ್‍ನಾಟಕದಲ್ಲಿ ಈ ಅವ್ಶದಿಗೆ ಹೆಚ್ಚಿನ ಬೇಡಿಕೆ ಬಂದಾಗ ನೆರೆಯ ರಾಜ್ಯಗಳಲ್ಲಿ ಬೇಕಿರುವ ಅವ್ಶದಿಯನ್ನು ಪಡೆದುಕೊಳ್ಳುವುದು ಸುಲಬವಾಗಿರುತ್ತಿತ್ತು. ಈಗ ಇದು ಕೇಂದ್ರದ ಕಯ್ಯಲ್ಲಿ ಇರುವುದರಿಂದ ಎಲ್ಲಾ ರಾಜ್ಯಗಳಲ್ಲೂ ಈ ಅವ್ಶದಿಯ ಕೊರತೆ ಇರುತ್ತದೆ ಆಗ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅವ್ಶದಿ ಪಡೆಯುವುದಾದರೂ ಹೇಗೆ? ಅದಿಕಾರ ಹಂಚಿಕೆ ಮಾಡದಿರುವುದು ಯಾವ ಮಟ್ಟದ ತೊಂದರೆ ತಂದೊಡ್ಡುತ್ತವೆ ಅನ್ನುವುದಕ್ಕೆ ಇದೊಂದು ಎತ್ತುಗೆಯಶ್ಟೇ.

ಒಂದು ರಾಜ್ಯದಲ್ಲಿರುವ ಮಂದಿ ಆರಿಸಿರುವ ಸರ್‍ಕಾರ ತನ್ನ ಜನರಿಗೆ ಬೇಕಿರುವುದೇನು, ಕಲಿಕೆಯ ಬಗೆ ಹೇಗಿರಬೇಕು, ಉದ್ಯಮಗಳಿಗೆ ಎಶ್ಟರ ಮಟ್ಟಿಗೆ ಸ್ವಾಯತ್ತತೆ ನೀಡಬೇಕು, ಅಲ್ಲಿ ಕೆಲಸ ಮಾಡುವ ಜನರಿಗೆ ಸಿಗಬೇಕಿರುವ ಸವ್ಲಬ್ಯ, ಕ್ರುಶಿಯಲ್ಲಿ ಆಗಬೇಕಿರುವ ಬದಲಾವಣೆಗಳು, ಬೆಳೆಯಬೇಕಿರುವ ಬೆಳೆಗಳು, ಹಳ್ಳಿ ಜನರಿಗೆ ನೀಡಬೇಕಿರುವ ಸವಲತ್ತುಗಳು, ಚಳಕವನ್ನು ತಿಳಿದಿರುವ ಜನರನ್ನು (skilled labor) ತಯಾರು ಮಾಡಲು ಬೇಕಿರುವ ಕಲಿಕೆ, ರಾಜ್ಯಕ್ಕೆ ಬೇಕಿರುವ ನೀರಾವರಿ ಯೋಜನೆಗಳು, ಜನರನ್ನು ಏಳಿಗೆಯತ್ತ ಕೊಂಡ್ಯೊಯ್ಯುವ ಯೋಜನೆಗಳು ಹೀಗೆ ತನ್ನ ಜನರಿಗೆ ಬೇಕಿರುವ, ತನ್ನ ಮಣ್ಣಿಗೆ ಹತ್ತಿರುವಾಗಿರುವ ಯೋಜನೆಗಳನ್ನು ಮಾಡುವ ಹಕ್ಕು ಹೊಂದಿರಬೇಕು. ಆದರೆ ಇಂದು ರಾಜ್ಯಗಳು ಯಾವುದೇ ಕೆಲಸಕ್ಕೂ ಕೇಂದ್ರದ ಮುಂದೆ ಕಯ್ಕಟ್ಟಿ ನಿಲ್ಲುವ ಪರಿಸ್ತಿತಿ ಇದೆ. ದೆಹಲಿಯಲ್ಲಿ ಕುಳಿತು ಮಾಡುವ ಯೋಜನೆ, ಬೇಕೋ ಬೇಡವೋ ಇಂದು ಬಾರತದ ಎಲ್ಲಾ ರಾಜ್ಯಗಳೂ ಒಪ್ಪಲೇಬೇಕಾಗಿರುವ ಪರಿಸ್ತಿತಿ ಇದೆ. ಹಲ ನುಡಿ, ನಡೆ, ಹೊಂದಿರುವ ರಾಜ್ಯಗಳಿಗೆ ಕೇಂದ್ರ ಮಾಡುವ ಯೋಜನೆಗಳು ಎಲ್ಲಾ ಕಾಲಕ್ಕೂ ಸರಿ ಹೊಂದದೆ ಇರಬಹುದು.

ಹೀಗೆ ಎಲ್ಲವನ್ನೂ ಒಂದೆಡೆ ಕೂಡಿಟ್ಟು ಕೆಲಸ ಮಾಡುವ ಪರಿ ಒಕ್ಕೂಟ ವ್ಯವಸ್ತೆಯ ಆಶಯಕ್ಕೆ ಮಾರಕವಾಗಿದೆ, ಇದನ್ನು ನಾವು ಬದಲಿಸಬೇಕಾಗಿದೆ. ಹೆಚ್ಚಿನ ಹಕ್ಕು ರಾಜ್ಯಕ್ಕೆ ದೊರಕುವಂತೆ ಮಾಡಬೇಕಾಗಿದೆ.  ಹೀಗೆ ಒಕ್ಕೂಟವನ್ನು ಒಪ್ಪಿಕೊಂಡಿರುವ ಹಲವಾರು ದೇಶಗಳು ಮುಂದುವರೆದಿರುವುದು ನಮ್ಮ ಕಣ್ಣ ಮುಂದೆಯೇ ಇದೆ, ಹಾಗಿರುವಾಗ ನಮ್ಮಲ್ಲೇಕೆ ಸಾದ್ಯವಿಲ್ಲ? ಅಲ್ಲವೇ?

(ಚಿತ್ರ: www.commons.wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 31/07/2013

    […] ನಡುವೆ ಆಗಿರುವ ಶಾಸಕಾಂಗ ಅದಿಕಾರದ ಹಂಚಿಕೆ ಹೇಗೆ ಒಕ್ಕೂಟ ಏರ‍್ಪಾಡಿಗೆ ಮಾರಕವಾಗಿದೆ ಅನ್ನುವುದರ ಬಗ್ಗೆ ಹೇಳಿದ್ದೇನೆ. ಇಲ್ಲಿ […]

ಅನಿಸಿಕೆ ಬರೆಯಿರಿ: