ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ ‘ಅಲ್ಲಗಳೆ’ಯ…!

– ಜಯತೀರ‍್ತ ನಾಡಗವ್ಡ

Lucia

ಇದೇನ್ ಸ್ವಾಮಿ ಏನಿದು ಅಂತೀರಾ? ಹವ್ದು ಅದೇ ನಮ್ಮ ಲಾಯಿಪು ಇಶ್ಟೇನೆ ಚಿತ್ರದ ಮುಕ್ಯ ನಡೆಸಾಳು ಪವನ್ ಕುಮಾರ ಗೊತ್ತಲ್ಲ ಅವ್ರ್ದೆ ಸುದ್ದಿ ಕಣ್ರಿ ಇದು. ಮೊನ್ನೆ ಮೊನ್ನೆ ತಾನೆ ಓಡುತಿಟ್ಟಗಳ ದುಡಿತಕ್ಕೆ ಕಾಲಿಟ್ಟ ಪವನ್ ಕುಮಾರ ತಮ್ಮ ಕನ್ನಡ ಸಿನೆಮಾ “ಲೂಸಿಯಾ” ಗೆ ದೂರದ ಲಂಡನ್ ನಲ್ಲಿ ಮಾರುಕಟ್ಟೆ ತೋರಿದ್ದಾರೆ.

ಲೂಸಿಯ ಅನ್ನುವ ಸಿನೆಮಾ ಮೂಲಕ ಹೆಜ್ಜೆಗೊಂದು ಹೊಸ ಮಯ್ಲಿಗಲ್ಲನ್ನ ಇಟ್ಟು ಇತಿಹಾಸ ಬರೆಯುತ್ತಿದ್ದಾರೆ ಈ ಪವನ್ ಕುಮಾರ ಮತ್ತು ಇವರ ಬಳಗ. ಸಿನೆಮಾ ಮಾಡುತ್ತೇನೆ ಅಂತ ಮುಂದೆ ಬಂದಾಗ ಯಾವುದೇ ಒಬ್ಬ ಹಣವಂತರು ದುಡ್ಡು ಹಾಕೋದಕ್ಕೆ ಮುಂದೆ ಬರದೆ ಇದ್ದಾಗ ತೊಚೀದ ದಾರಿ ಇದೀಗ ಹಲವರಿಗೆ ಮಾದರಿ. ಹವ್ದು, ಮಂದಿ ದೇಣಿಗೆಯಿಂದ ಸಿನೆಮಾ ಮಾಡ್ಲಿಕ್ಕೆ ಮುಂದಾದಾಗ ಉದ್ಯಮದ ಮಂದಿ ನಕ್ಕಿದ್ದೆ ಹೆಚ್ಚು. ಇದನ್ನ ಮಾಡಿಯೇ ತೀರುವ ಹಟ ಲೂಸಿಯ ತಂಡದ್ದು. ಇದು ಈಗ ಇಡೀ ಬಾರತದ ಸಿನೆಮಾ ಇತಿಹಾಸದಲ್ಲೆ ಮೊದಲ ಯತ್ನ ಎಂದು ಕರೆಸಿಕೊಂಡಿದೆ.

ಮಂದಿ ದೇಣಿಗೆ ಸೇರಿಸಿ ಸಿನೆಮಾ ಮಾಡೊದಕ್ಕೆ ಮಾಡಿದ ಪ್ರತಿಯೊಂದು ಯತ್ನವನ್ನು ಪವನ್ ಕುಮಾರ ಹಾಗೂ ತಂಡ ಪೆಸ್ಬುಕ್, ಟ್ವೀಟರ್ ನಲ್ಲಿ ಹಂಚಿಕೊಂಡು ಎಲ್ಲರೊಂದಿಗೆ ಅಳೆದು ತೂಗಿದ್ದುಂಟು. ಇದೀಗ ಈ ಲೂಸಿಯಾ ಕಳೆದ ವಾರ ನಡೆದ ಲಂಡನ್ ಬಾರತೀಯ ಪಿಲ್ಮ್ ಪೆಸ್ಟಿವಲ್ ನಲ್ಲಿ ಮೊದಲ ಬಿಡುಗಡೆಗೊಂಡಿದೆ. ಬಾರತದಿಂದ ಆಯ್ಕೆಯಾದ ಕೆಲವೇ ಸಿನೆಮಾಗಳಲ್ಲಿ ಲೂಸಿಯಾ ಕೂಡ ಒಂದು. ಅದರಲ್ಲೂ ತೆಂಕಣ ಬಾರತದ ಒಂದೇ ಸಿನೆಮಾ ಲೂಸಿಯಾ. ಲಂಡನ್ ನಲ್ಲಿ ಈ ಓಡುತಿಟ್ಟಕ್ಕೆ ಬಾರಿ ಮನ್ನಣೆ ಸಿಕ್ಕಿದ್ದು ಲಂಡನ್ ಕನ್ನಡಿಗರಲ್ಲದೆ ಇತರ ಬಾಶಿಕರೂ ನೋಡಿ ಮೆಚ್ಚಿದ್ದು ಈಗ ಜಗತ್ತಿಗೆ ತಿಳಿದ ವಿಚಾರ.

ನಮ್ಮ ಕನ್ನಡ ಸಿನೆಮಾಗಳ ಕತೇನೆ ಇಶ್ಟು ನಮ್ಮ ಪಾಡೇ ಇಶ್ಟು ಸ್ವಾಮಿ ಎಂದು ಪದೇ ಪದೇ ಮಂದಿ ಮುಂದೆ ನೆಪ ಕೊಟ್ಟು ಕನ್ನಡ ಸಿನೆಮಾಗಳ ಮಾರುಕಟ್ಟೆಗೆ ಗಡಿ ಹಾಕಿದ್ದ ಮಡಿವಂತರಿಗೆ ಲೂಸಿಯಾದ ಲಂಡನ್ ಪಯಣ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಒಳ್ಳೆಯ ಸಿನೆಮಾ ಇದ್ರೆ ಕನ್ನಡಿಗರು ಎಂದಿಗೂ ಕಯ್ ಬಿಡಲ್ಲ ಅನ್ನೋದನ್ನ ಲಂಡನ್ ಕನ್ನಡಿಗರು ಸಾರಿ ತೋರಿದ್ದಾರೆ. ಬಿಡುಗಡೆಯಾದ ದಿನಗಳಲ್ಲಿ ಕಿಕ್ಕಿರಿದು ತುಂಬಿದ್ದ ಕಲೆಮನೆಗಳು ಅಲ್ಲಿ ನೆರೆದಿದ್ದ ಮಂದಿ ನೋಡಿ ಬೆರಗಾಗುವ ಸರದಿ ಕನ್ನಡ ಸಿನೆಮಾಕ್ಕೆ ಮಾರುಕಟ್ಟೆ ಇಲ್ಲ ಎನ್ನುವವರದು. ಲೂಸಿಯಾ ಲಂಡನ್ ಪಟ್ಟಣದ ತುಂಬೆಲ್ಲ ಆವರಿಸಿದ ಬಗೆ ಬಗೆಯ ತಿಟ್ಟವನ್ನ ಆಂಗ್ಲ ನಾಡಿನ ಕನ್ನಡಿಗರು, ಕನ್ನಡೇತರು ಪೆಸ್ಬುಕ್ ನಲ್ಲಿ ಹಂಚಿಕೊಂಡಿದ್ದು ಎಲ್ಲ ಸುದ್ದಿ ಹಾಳೆಗಳ ಬಿಸಿ ಸುದ್ದಿಯ ಹೂರಣ. ಇದಕ್ಕಿಂತ ಪುರಾವೆ ಬೇಕೆ ನಮ್ಮ ಮಾರುಕಟ್ಟೆಯ ಮಿತಿ ಬಗ್ಗೆ? ನಮ್ಮ ಓಡುತಿಟ್ಟಗಳ ದುಡಿತದಲ್ಲಿರುವ ಕೆಲವು ಪಟ್ಟ ಬದ್ರ ಮಂದಿ ಕನ್ನಡ ಚಿತ್ರಗಳಿಗೆ ಬೇಲಿ ಹಾಕಿದ್ದೆಶ್ಟು ಸರಿ ಎಂಬುವ ಕೇಳ್ವಿ ಎಲ್ಲರಲ್ಲೂ ಮೂಡಿಸಿದೆ ಈ ಬೆಳವಣಿಗೆ.

ಲಕ್ಕಸಂದ್ರದ ಪಕ್ಕದಲ್ಲಿರೋ ಪಿವಿ‌ಆರ್ ಚಿತ್ರಮನೆಯಲ್ಲಿ ತಮ್ಮ ಸಿನೆಮಾ ಬಿಡುಗಡೆ ಮಾಡಿಸಲು ಹೆಣಗಾಡುವ ಕೆಲವು ಸ್ಯಾಂಡಲ್ವೂಡ್ ಮಂದಿ ಈ ಲೂಸಿಯಾದ ಲಂಡನ್ ಪಯಣ ಕಂಡು ಮೂಗಿನ ಮೇಲೆ ಕಯ್ ಇಟ್ಟುಕೊಂಡಿದ್ದಂತೂ ದಿಟ. ಕನ್ನಡಿಗರಶ್ಟೆ ಅಲ್ಲ ಹಲವಾರು ಬಾಶಿಕರು, ಹೊರಬಾಶಿಕರ ಚಿತ್ತ ಸೆಳೆಯುವಲ್ಲಿ ಲೂಸಿಯಾ ಗೆಲುವು ಕಂಡಿದೆ. ಇದನ್ನು ಟ್ವೀಟ್ ಮಾಡುವದರೊಂದಿಗೆ ಹಲವರು ತೆರೆದ ಮನದಿ ಒಪ್ಪಿಕೊಂಡಿದ್ದಾರೆ. ಯಾವ ಕ್ಯಾತ ನಟ, ನಟಿಯರು ಇಲ್ಲದೆ ಜನರ ದುಡ್ಡನ್ನೇ ಬಂಡವಾಳವಾಗಿಸಿ ಜನರನ್ನೇ ಹಂಚಿಕೆದಾರರನ್ನಾಗಿಸಿದ ಈ ಹೊಸ ಹೊಳಹಿಗೆ ಮಂದಿ ಸಯ್ ಎಂದಿದ್ದಾರೆ. ಈಜು ಬರಲ್ಲ, ಕೊಳಕ್ಕೆ ದುಮುಕಿದ್ರೆ ಆಳ ಮಾರಾಯ ಎಂದು ಕಯ್ ಹಿಸುಕಿಕೊಳ್ಳೋರಿಗೆ, ದುಮುಕಿ ಈಜಿ ತೋರಿದ ಲೂಸಿಯಾ ತಕ್ಕ ಪಾಟ ಕಲಿಸಿದೆ ಎನ್ನಬಹುದು. ಕನ್ನಡ ಚಿತ್ರೋದ್ಯಮ ಯಾರ ಆಸ್ತಿಯೂ ಅಲ್ಲ, ಇದಕ್ಕೆ ಮಡಿವಂತಿಕೆ, ಕಡಿವಾಣ ಹಾಕಿ ಬಾಗಿಲು ಮುಚ್ಚಿದ್ರೆ ದುಡಿತಕ್ಕೆ ಹೆಚ್ಚು ನಶ್ಟವಾಗಲಿದೆ ಅನ್ನೋ ಮಾತನ್ನ ಇವರು ಆದಶ್ಟು ಬೇಗ ಅರಿಯಬೇಕಿದೆ. ಈ ಲಂಡನ್ ಓಡುತಿಟ್ಟಗಳ ಜಾತ್ರೆಯಲ್ಲಿ ಲೂಸಿಯಾ ಗೆ ಮಂದಿ ಮನ್ನಣೆ ಗಳಿಸಿದ ಒಳ್ಳೆಯ ಬರ‍್ಜರಿ ಹಿಟ್ ಸಿನೆಮಾದ ಬಿರುದು ದೊರೆತಿದ್ದು ಬಿಸಿ ಸುದ್ದಿ.

ಒಟ್ಟಿನಲ್ಲಿ ಕನ್ನಡದ ಸಿನೆಮಾಗಳ ಕಯ್ಯಲ್ಲಿ ಅದಾಗುವುದಿಲ್ಲ, ಇದಾಗುವುದಿಲ್ಲ ಎಂದು ಬರೀ ’ಅಲ್ಲಗಳೆ’ಯುವವರಿಗೆ ಪವನ್ ಕುಮಾರ್ ಹೇಳಿದಂತಾಯಿತು: ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ ’ಅಲ್ಲಗಳೆ’ಯ…!

(ಚಿತ್ರ: ಪೋಸ್ಟ್ ನೂನ್)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 13/09/2013

    […] ಹೆಚ್ಚಿನ ಓದಿಗೆ: ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ ’ಅ… […]

ಅನಿಸಿಕೆ ಬರೆಯಿರಿ: