ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ

– ಜಯತೀರ‍್ತ ನಾಡಗವ್ಡ.

car-1

ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಶ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಸಾರತಿ. ನಮ್ಮ ಬಂಡಿಗಳು ಕೆಲವೊಮ್ಮೆ ದಿಡೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸಬಹುದು, ಆದರೆ ಪ್ರತಿಸಲವೂ ಚಿಕ್ಕ ಪುಟ್ಟ ರಿಪೇರಿಗಳಿಗೆ ನೆರವುದಾಣಕ್ಕೆ ಬಂಡಿಯನ್ನು ಕರೆದೊಯ್ಯಲು ಸಾಕಶ್ಟು ಹೊತ್ತು ಮತ್ತು ದುಡ್ಡು ನೀಡಬೇಕಾಗಿ ಬರಬಹುದು. ಪ್ರತಿ ಬಾರಿ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸುವ ಬದಲು ಮನೆಯಲ್ಲೇ ಸರಿಪಡಿಸಿದರೆ ಒಳ್ಳೆಯದಲ್ಲವೇ? ನಾಲ್ಗಾಲಿ ಬಂಡಿಗಳ ಹತ್ತಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲೇ ಸರಿಪಡಿಸಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

ಮಂಜುಗಟ್ಟಿದ ಗಾಳಿ ತಡೆ (Wind shield):

ಚಳಿಗಾಲ ಹೆಚ್ಚುತ್ತಿದ್ದಂತೆ ಎಲ್ಲೆಡೆ ಇಬ್ಬನಿ, ಮಂಜುಗಟ್ಟುವುದು ಸಾಮಾನ್ಯ. ರಾತ್ರಿ ಹೊತ್ತಿನಲಿ,ಬಂಡಿಗಳನ್ನು ಚಳಿ, ಗಾಳಿಗೆ ಮಯ್ಯೊಡ್ಡಿ ನಿಲ್ಲಿಸಿರುತ್ತೇವೆ. ಬೆಳಿಗ್ಗೆ ಎದ್ದು ನೋಡಿದರೆ ಗಾಳಿತಡೆಯ ಗಾಜು ಮಂಜಿನಿಂದ ಹೆಪ್ಪುಗಟ್ಟಿರುತ್ತದೆ. ಕೆಲವೊಂದು ಬಂಡಿಗಳಲ್ಲಿ ಮಂಜಿಳಕ (Defogger) ಎಂಬ ಮಂಜನ್ನು ಕರಗಿಸುವ ಏರ‍್ಪಾಟು ಅಳವಡಿಸಿರುತ್ತಾರೆ. ಅದು ಕಾರಿನ ಒಡೆಯರ ಕೆಲಸವನ್ನು ಹಗುರ ಮಾಡುತ್ತದೆ. ಆದರೆ ಎಲ್ಲ ಬಂಡಿಗಳಲ್ಲಿ ಈ ಏರ‍್ಪಾಟು ಕಂಡುಬರುವುದಿಲ್ಲ. ಆದ್ದರಿಂದ ಮಂಜಿಳಕ ಹೊಂದಿಲ್ಲದ ಕಾರು ಹೊಂದಿರುವವರು ಈ ರೀತಿ ಮಾಡಿ: ಗಾಳಿತಡೆಯ ಮೇಲಿನ ದೂಳು, ಕಸ ಕಡ್ಡಿಗಳಿದ್ದರೆ ಒರೆಸಿ ತೆಗೆಯಿರಿ. ಟೂತ್ ಪೇಸ್ಟ್ ತೆಗೆದುಕೊಂಡು ಒಂಚೂರು ಗಾಳಿತಡೆಯ (Windshield) ಗಾಜಿಗೆ ಹಚ್ಚಿ. ಮೆತ್ತನೆಯ ಬಟ್ಟೆಯೊಂದನ್ನು ತೆಗೆದುಕೊಂಡು, ಗಾಜನ್ನು ಪೂರ‍್ತಿಯಾಗಿ ಒರೆಸಿಬಿಡಿ. ನೀರಾವಿ, ನೀರಿನ ಹನಿಗಳು ಇಂಗಿ ಮಂಜುಗಟ್ಟುವುದನ್ನು ಟೂತ್ ಪೇಸ್ಟ್ ತಡೆಯುತ್ತದೆ.

ಬಂಡಿ ಗಮಗಮಿಸುವಂತೆ ಹೀಗೆ ಮಾಡಿ:

ದೂರದ ಊರುಗಳಿಗೆ ಪಯಣಿಸುವಾಗ ಬಂಡಿಯಲ್ಲೇ ಕುಳಿತು ತಿಂಡಿ ತಿನಿಸುಗಳನ್ನು ತಿನ್ನಬೇಕಾಗಿ ಬರುತ್ತದೆ. ಕೆಲವೊಮ್ಮೆ ತಿನಿಸಿನ ಸಾಮಾನುಗಳನ್ನು ಬಂಡಿಯಲ್ಲಿಟ್ಟು ಹಬ್ಬ ಹರಿದಿನಗಳಂದು ಸಾಗಿಸುವುದು ಉಂಟು. ಇಂತ ಸಂದರ‍್ಬಗಳಲ್ಲಿ ತಿಂಡಿ ತಿನಿಸಿನ ವಾಸನೆ ಒಂದೆರಡು ದಿನಗಳವರೆಗೆ ಬಂಡಿಗಳಲ್ಲಿಯೇ ಉಳಿದು ಬಿಡುತ್ತದೆ. ಇದರಿಂದ ಬಂಡಿ ಒಳಹೊಕ್ಕಾಗ ಸಹಿಸಲಾಗದ ಕೆಟ್ಟ ವಾಸನೆ ಬರುವುದು ಗ್ಯಾರಂಟಿ. ಕಳೆಯೇರಿಸುಕಗಳಿದ್ದರೆ (Air Freshener) ಅವುಗಳನ್ನು ಬಳಸಿ ಈ ಕೆಟ್ಟ ವಾಸನೆಗೆ ತಡೆ ಹಾಕಬಹುದು. ಬಂಡಿಯೊಳಗಿನ ಕಳೆಯೇರಿಸುಕಗಳು ಕಾಲಿಯಾಗಿದ್ದರೆ, ಚಿಂತೆಬೇಡ. ಇದಕ್ಕೊಂದು ಮನೆ ಮದ್ದು ಉಂಟು. ಕಲ್ಲಿದ್ದಿಲು ತೆಗೆದುಕೊಂಡು ಕಲ್ಲಿದ್ದಲನ್ನು ಪುಡಿಯಾಗಿಸಿ, ಅದರೊಂದಿಗೆ ಅಡುಗೆ ಸೋಡಾ ಬೆರೆಸಬೇಕು. ಈ ಬೆರಕೆಯನ್ನು ಬಂಡಿಯ ಒಳಬಾಗದಲ್ಲೆಲ್ಲ ಚಿಮುಕಿಸಿ ಸ್ವಲ್ಪ ಹೊತ್ತು ಬಿಡಬೇಕು. ಸುಮಾರು ಒಂದು ಗಂಟೆಯ ನಂತರ ಈ ಪುಡಿಯನ್ನು ಗುಡಿಸಿ , ಬಂಡಿಯನ್ನು ಹಸನಾಗಿಸಿ. ಬಂಡಿಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಮಂಗ ಮಾಯವಾಗಿರುತ್ತದೆ.

ಕೊಳೆಯಾದ ಕೂರುಮಣೆ:

ಮೇಲೆ ಹೇಳಿದಂತೆ ಬಂಡಿಯಲ್ಲಿ ಕುಳಿತು ತಿಂಡಿ ತಿಂದಾಗ ಕೆಲವೊಮ್ಮೆ ಚಹಾ, ಕಾಪಿ ಬಿದ್ದು ಕೂರುಮಣೆಯ (Seat) ಮೇಲೆ ಜಿಡ್ಡಿನ ಕಲೆಗಳಾಗಿ ಬಿಡಬಹುದು. ಈ ಕಲೆಗಳನ್ನು ತೆಗೆಯಲು ನೆರವುದಾಣಗಳಿಗೆ ಹೋದರೆ ಅಲ್ಲಿ ದುಬಾರಿ ಹಣನೀಡಬೇಕಾಗುವುದು. ಇದರ ಬದಲಾಗಿ ಮನೆಯಲ್ಲಿ ಇದನ್ನು ಸುಳುವಾಗಿ ಹಸನಾಗಿಸಬಹುದು. ಮನೆಯಲ್ಲಿ ಗಾಜು ಒರೆಸಲು ಬಳಸುವ ಎಣ್ಣೆಯನ್ನು ತೆಗೆದುಕೊಂಡು, ಮೆತ್ತನೆಯ ಹಾಳೆ ಇಲ್ಲವೇ ಬಟ್ಟೆಗೆ ಸಿಂಪಡಿಸಬೇಕು. ಹೀಗೆ ಒದ್ದೆಯಾದ ಬಟ್ಟೆ/ಹಾಳೆಯನ್ನು ಕಲೆಯಾದ ಜಾಗದಲ್ಲಿ 5 ನಿಮಿಶಗಳವರೆಗೆ ಇಡಬೇಕು. ನೋಡು ನೋಡುತ್ತಿದ್ದಂತೆ ಕಲೆ ಹೊರಟು ಹೋಗಿರುತ್ತದೆ. ಬಟ್ಟೆ/ಹಾಳೆಯನ್ನು ಕಲೆಯಿರುವ ಜಾಗದಲ್ಲಿ ತಿಕ್ಕಿದರೆ, ಕಲೆ ಎಲ್ಲೆಡೆ ಹರಡುವ ಸಾದ್ಯತೆ ಇರುವುದರಿಂದ ಎಚ್ಚರವಹಿಸಬೇಕು. ಕೀಲೆಣ್ಣೆ (Grease) ಮುಂತಾದ ಜಿಡ್ಡಿನ ಕಲೆಗಳಿದ್ದರೆ ಹೀಗೆ ಮಾಡಿ. ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಡಿಟರ‍್ಜಂಟ್ ಅನ್ನು ನೀರಿನೊಂದಿಗೆ ಬೆರೆಸಿ, ಜಿಡ್ಡು ಇರುವ ಜಾಗದ ಮೇಲೆ ಚೆನ್ನಾಗಿ ತಿಕ್ಕಬೇಕು. ಬಂಡಿಯಲ್ಲಿ ಹೆಚ್ಚು ಹೊತ್ತು ಪಯಣಿಸುವಾಗ ಕೆಲವರಿಗೆ ವಾಂತಿಯಾಗುವುದು. ಇಂತಹ ವಾಂತಿ ಕಲೆಗಳೇನಾದರೂ ಇದ್ದರೆ, ಆ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ನಂತರ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಕಲೆಯಿರುವ ಜಾಗಕ್ಕೆ ಒರೆಸಿದರೆ, ಅಡುಗೆ ಸೋಡಾ ಕೆಟ್ಟ ವಾಸನೆ ಬರುವುದನ್ನು ತಡೆಯುತ್ತದೆ. ನೀರು ಬಳಸಿ ತೊಳೆಯುವುದರಿಂದ, ಜಾಗ ಹಸಿಯಾಗಿರುತ್ತದೆ. ಇದನ್ನು ಬೇಗನೆ ಒಣಗಿಸಲು ಕೂದಲು ಒಣಗಿಸುವ ಚೂಟಿಯನ್ನು(Hair Dryer) ಬಳಸಬಹುದು.

ಡಿಕ್ಕಿಕಾಪನ್ನು(Bumper) ಹೀಗೆ ಸರಿಪಡಿಸಿ:

ಇಂದಿನ ದಿನಗಳಲ್ಲಿ ಒಯ್ಯಾಟದ ದಟ್ಟಣೆಗೆ (Traffic Jam) ಹಲವು ಊರುಗಳು ನಲಗುತ್ತಿವೆ. ಎಶ್ಟೋ ಸಾರಿ, ಎರಡು ಬಂಡಿಗಳ ಮದ್ಯೆ ಎಳ್ಳಶ್ಟೂ ಜಾಗವಿರದಶ್ಟು ಒಯ್ಯಾಟ. ಒಯ್ಯಾಟದಲ್ಲಿ ಆಮೆ ವೇಗದಲ್ಲಿ ಸಾಗುವ ಬಂಡಿಗಳು ಒಮ್ಮೊಮ್ಮೆ ಗುದ್ದಿಕೊಳ್ಳುವ ಸಾದ್ಯತೆ ಇರುತ್ತದೆ. ಮೆಲ್ಲಗೆ ಸಾಗುತ್ತಿರುವ ಬಂಡಿಗಳ ಗುದ್ದುವಿಕೆಯಿಂದ ಬಾರಿ ಅನಾಹುತ ಆಗದೇ ಹೋದರು, ಬಂಡಿಗಳ ಡಿಕ್ಕಿಕಾಪು (Bumper) ಸುಲಬವಾಗಿ ನೆಗ್ಗಿ ಬಿಡುತ್ತವೆ. ನೆಗ್ಗಿದ ಬಂಡಿಯ ಡಿಕ್ಕಿಕಾಪಿನ ಬಾಗವನ್ನು ಸುಳುವಾಗಿ ಮನೆಯಲ್ಲೇ ಸರಿಪಡಿಸಬಹುದು. ಅದಕ್ಕಾಗಿ ಒಂದರ‍್ದ ಬಕೆಟ್‌ನಶ್ಟು ಬಿಸಿ ನೀರು ತೆಗೆದುಕೊಳ್ಳಬೇಕು. ಈ ಬಿಸಿ ನೀರನ್ನು ನೆಗ್ಗಿದ ಬಾಗದಲ್ಲಿ ಸುರಿಯಬೇಕು. ಬಿಸಿ ನೀರು ಬೀಳುವುದರಿಂದ ಡಿಕ್ಕಿ ಕಾಪು ಹಿಗ್ಗಿ ತನ್ನ ಮೊದಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಮೊದಲಿನ ಆಕಾರಕ್ಕೆ ಹೊಂದಿಕೊಳ್ಳದೇ ಹೋದರೆ, ಒಳಗಡೆಯಿಂದ ಮೆಲ್ಲನೆ ದೂಡಿದರೆ ಸಾಕು, ಅದು ಮೊದಲಿನಂತಾಗಿರುತ್ತದೆ.

ಮಿಂಕಟ್ಟು(Battery) ಕೆಲಸ ಮಾಡದೇ ಹೋದಾಗ?:

ಎಶ್ಟೋ ಸಾರಿ ಬಂಡಿ ಶುರು ಮಾಡಲು ಹೋದಾಗ, ಬಿಣಿಗೆ(Engine) ಶುರು ಆಗುವುದೇ ಇಲ್ಲ. ಬಂಡಿಯ ಮಿಂಕಟ್ಟು ಸರಿಯಾಗಿ ಮಿಂಚಿನ ಪೂರೈಕೆ ಮಾಡದೇ ಇರುವುದರಿಂದ ಹೀಗಾಗುತ್ತದೆ. ಮಿಂಚು ಕಳೆದುಕೊಂಡು ಮಿಂಕಟ್ಟಿನ ಬಾಳಿಕೆ ಕಡಿಮೆಯಾಗುತ್ತಿದೆ ಎಂದೇ ಇದರರ‍್ತ. ಆದರೂ ಚಿಂತಿಸಬೇಕಿಲ್ಲ, ಈ ಬಂಡಿಯನ್ನು ಇನ್ನೊಂದು ಬಂಡಿಯ ಮಿಂಕಟ್ಟಿನ ಮೂಲಕ ಶುರು ಮಾಡಬಹುದು. ಇದಕ್ಕೆ ಜಂಪರ್ ಎಳೆಗಳ(Jumper Cable) ಅಗತ್ಯವಿದೆ. ಹೀಗೆ ಜಂಪರ್ ಎಳೆ ಬಳಸಿ ಬಂಡಿಯನ್ನು ಶುರು ಮಾಡುವುದನ್ನು ಜಂಪ್ ಸ್ಟಾರ‍್ಟ್(Jump Start) ಎಂದೇ ಕರೆಯುತ್ತಾರೆ. ಇದನ್ನು ಸುಳುವಾಗಿ ಅರಿಯಲು, ಶುರುವಾಗದೇ ಇರುವ ಬಂಡಿಯನ್ನು ಬಂಡಿ-1 ಮತ್ತು ಅದಕ್ಕೆ ಮಿಂಚು ಒದಗಿಸಲಿರುವ ಬಂಡಿಯನ್ನು ಬಂಡಿ-2 ಎಂದುಕೊಳ್ಳಿ. ಎರಡು ಬಂಡಿಗಳ ಬಿಣಿಗವಸು(Bonnet/Hood) ಮೇಲೆತ್ತಿ ಮಿಂಕಟ್ಟಿನ ಕೂಡು ತುದಿ(Positive Terminal) ಪತ್ತೆ ಹಚ್ಚಿಕೊಳ್ಳಿ. ಹೆಚ್ಚಿನ ಮಿಂಕಟ್ಟುಗಳಲ್ಲಿ ಕೂಡು ತುದಿಯನ್ನು ಕೆಂಪನೆ ಬಣ್ಣದ ಮುಚ್ಚಳದಿಂದ ಮುಚ್ಚಿರುತ್ತಾರೆ ಮತ್ತು ಅದು ಕಳೆ ತುದಿಗಿಂತ(Negative Terminal) ಕೊಂಚ ದೊಡ್ಡದಾಗಿರುತ್ತದೆ. ಕೆಂಪು ಬಣ್ಣದ ಜಂಪರ್ ಎಳೆ ಮೂಲಕ ಎರಡು ಬಂಡಿಗಳ ಮಿಂಕಟ್ಟಿನ ಕೂಡು ತುದಿಗಳನ್ನು ಸೇರಿಸಿ. ಬಂಡಿ-2 ರ ಕಳೆ ತುದಿಗೆ ಕಪ್ಪು ಬಣ್ಣದ ಜಂಪರ್ ಸಿಕ್ಕಿಸಿ ಅದನ್ನು ಬಂಡಿ-1 ರ ಜಲ್ಲಿಯ ಬಾಗಕ್ಕೆ(Metal Surface) ಮುಟ್ಟಿಸಿ. ಬಂಡಿಗಳ ಮಿಂಕಟ್ಟಿನ ಎರಡು ತುದಿಗಳು ಒಂದಕ್ಕೊಂದು ತಾಗದಂತೆ ಎಚ್ಚರವಹಿಸಿ. ಈಗ ಬಂಡಿ-2 ನ್ನು ಶುರು ಮಾಡಿ 10 ನಿಮಿಶಗಳವರೆಗೆ ಹಾಗೇ ಬಿಡಿ. 10 ನಿಮಿಶಗಳಲ್ಲಿ ಬಂಡಿ-2 ರ ಮಿಂಕಟ್ಟಿನಿಂದ ಸಾಕಶ್ಟು ಮಿಂಚು ಬಂಡಿ-1 ರ ಮಿಂಕಟ್ಟಿಗೆ ಪೂರೈಕೆಯಾಗಿ, ಅದರಲ್ಲಿ ಮಿಂಚಿನ ಹುರುಪು (Electric Charge) ತುಂಬಿಕೊಂಡಿರುತ್ತದೆ. ಈಗ ಬಂಡಿ-1 ನ್ನು ಶುರು ಮಾಡಿ, ಯಾವುದೇ ತೊಂದರೆಯಿಲ್ಲದೇ ಬಂಡಿ ಶುರುವಾಗುತ್ತದೆ.

ಕಚ್ಚು, ಗೀರುಗಳಾದಾಗ:

ಬಂಡಿಗಳಿಗೆ ಕಚ್ಚು ಗೀರುಗಳಾಗುವುದು ಸಾಮಾನ್ಯ. ನಾವು ಕೊಂಡುಕೊಂಡ ಬಂಡಿಗಳು ನಮ್ಮ ಬದುಕಿನ ಬಾಗವಾಗಿರುವುದರಿಂದ ಅವುಗಳ ಮೇಲೆ ಒಂದು ಗೀರು ಮೂಡಿದರೂ ನಮಗೆ ಬೇಜಾರು. ಸಣ್ಣ ಪುಟ್ಟ ಗೀರು, ಪರಚಿದ ಕಚ್ಚುಗಳು ಉಂಟಾದಾಗ ಅವುಗಳನ್ನು ಮನೆಯಲ್ಲೇ ನಾವೇ ಸ್ವತಹ ಸರಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಮರಳುಹಾಳೆ(Sand Paper), ತೊಳೆಯಲೊಂದು ಡಿಟರ‍್ಜಂಟ್ ಸಾಬೂನು ಮತ್ತು ಮೆರುಗಿನ ಬಟ್ಟೆ. ಸಣ್ಣ ಪುಟ್ಟ ಗೀರುಗಳಿದ್ದರೆ ,ಗೀರು ಮೂಡಿರುವ ಜಾಗವನ್ನು ಡಿಟರ‍್ಜಂಟ್ ಸಾಬೂನಿನಿಂದ ತೊಳೆಯಿರಿ. ದೊಡ್ಡ ಗೀರುಗಳಿದ್ದರೆ ಸುಮಾರು 3000 ಚೂರುಗಳಶ್ಟು(3000 grit) ತೆಳುವಾದ ಮರಳುಹಾಳೆಯನ್ನು ತೆಗೆದುಕೊಂಡು ಗೀರುಗಳಿರುವ ಜಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಉಂಟಾಗುವ ತಿಕ್ಕಾಟದಿಂದ ಬಂಡಿಯ ಬಣ್ಣ ಕಳಚಿ ಬರದಿರಲೆಂದು ಇದರ ಮೇಲೆ ನೀರು ಸುರಿಯುತ್ತಿರಬೇಕು. ಇನ್ನೇನು ಗೀರು ಕಾಣದಂತಾಯಿತು ಎನ್ನುವಾಗ 5000 ಚೂರುಗಳಶ್ಟು(5000 grit) ತೆಳುವಾದ ಮರಳುಹಾಳೆಯನ್ನು ಬಳಸಿ ಉಜ್ಜಬೇಕು. ಮೆರಗಿನ ಬಟ್ಟೆಯಿಂದ ಈ ಜಾಗವನ್ನು ಒರೆಸಿ ಬಿಟ್ಟರೆ, ಗೀರು ಹೊರಟುಹೋಗಿ ಬಂಡಿ ಮೊದಲಿನ ಹೊಳಪು ಪಡೆದಿರುತ್ತದೆ.

ಕರಗುತಂತಿಗಳನ್ನು(Fuse) ನೀವೇ ಬದಲಿಸಿ:

ಇಂದಿನ ಬಂಡಿಗಳಲ್ಲಿ ಹಲವಾರು ಮಿಂಚಿನ ಚೂಟಿಗಳನ್ನು ಒದಗಿಸಲಾಗಿರುತ್ತದೆ. ವೋಲ್ಟೇಜ್ ಏರಿಳಿತದಿಂದ ಈ ಚೂಟಿಗಳನ್ನು ಕಾಪಾಡಲು ಕರಗುತಂತಿಗಳನ್ನು(Fuse) ಬಳಸಿರುತ್ತಾರೆ. ಈ ಕರಗುತಂತಿಗಳು ಕೆಲವೊಮ್ಮೆ ಸುಟ್ಟುಹೋಗುವುದುಂಟು. ಆಗ ಬಂಡಿಯೂ ಶುರುವಾಗದು. ಸುಟ್ಟುಹೋದ ಕರಗುತಂತಿಗಳನ್ನು ನಾವೇ ಬದಲಾಯಿಸಬಹುದಾಗಿರುತ್ತದೆ. ಎಲ್ಲ ಬಂಡಿಗಳಿಗೆ ಕರಗುತಂತಿ ಪೆಟ್ಟಿಗೆಯನ್ನು(Fuse Box) ನೀಡಿರುತ್ತಾರೆ. ಇದು ಬಂಡಿಯ ತೋರುಮಣೆಯ (Dashboard) ಕೆಳಗೆ ಇಲ್ಲವೇ ಅಕ್ಕಪಕ್ಕದಲ್ಲಿ ಕಾಣಸಿಗುತ್ತದೆ. ಪೆಟ್ಟಿಗೆಯನ್ನು ತೆರೆದಾಗ ಅದರ ಮುಚ್ಚಳದಲ್ಲಿ ಯಾವ ಕರಗುತಂತಿ ಹೇಗೆ ಜೋಡಿಸಬೇಕು ಮತ್ತು ಅವುಗಳ ಬಣ್ಣ ಹೀಗೆ ಎಲ್ಲ ವಿವರ ಮೂಡಿಸಿರುತ್ತಾರೆ. ಪೆಟ್ಟಿಗೆಯ ಒಂದು ಬದಿ, ಸಾಲಾಗಿ ಒಂದು ಜೊತೆ ಹೆಚ್ಚಿನ ಕರಗುತಂತಿಗಳನ್ನು ನೀಡಲಾಗಿರುತ್ತದೆ. ಸುಟ್ಟು ಹೋಗಿರುವ ಕರಗುತಂತಿಗಳನ್ನು ಒಂದೊಂದಾಗಿ ಹೊರತೆಗೆದು, ಅದರ ಜಾಗದಲ್ಲಿ ಹೊಸ ಕರಗುತಂತಿಗಳನ್ನು ಅವುಗಳ ಬಣ್ಣಕ್ಕೆ ಸರಿಯಾಗಿ ಪೆಟ್ಟಿಗೆಯ ಮುಚ್ಚಳದ ಮೇಲಿರುವ ವಿವರದಂತೆ ಜೋಡಿಸಬೇಕು. ಪೆಟ್ಟಿಗೆ ಹೊರ ತೆಗೆದಾಗ ಅಲೆಯುಲಿ(Mobile Phone) ಬಳಸಿ ಒಂದು ತಿಟ್ಟ ತೆಗೆದಿಟ್ಟುಕೊಂಡರೂ ಸಾಕು, ಹೊಸ ಕರಗುತಂತಿಗಳನ್ನು ಜೋಡಿಸಲು ಇದು ನೆರವಿಗೆ ಬರುವುದು.

ಹೊರಸೂಸುಕ(Radiator) ಕೈ ಕೊಟ್ಟಾಗ:

ಬಂಡಿಯಲ್ಲಿ ಹೊರಸೂಸುಕ, ಬಿಣಿಗೆಯ ಬಿಸುಪನ್ನು ಹಿಡಿತದಲ್ಲಿಡುತ್ತದೆ. ಬಿಣಿಗೆ ಹೆಚ್ಚು ಕಾದು ಬಿಸಿಯಾಗದಂತೆ ನೋಡಿಕೊಳ್ಳುವುದೇ ಇದರ ಕೆಲಸ. ಕೆಲವೊಮ್ಮೆ ಹೊರಸೂಸುಕ ಕೆಟ್ಟು ನಿಂತಾಗ, ಬಿಣಿಗೆ ಹೆಚ್ಚಿಗೆ ಕಾದು ತೊಂದರೆಯಾಗಬಹುದು. ಹೀಗಾಗಿ ಬಿಣಿಗೆಯ ಬಿಸುಪು ತೋರುವ ಅಳಕದ (Engine Temperature Gauge) ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು. ಒಂದೊಮ್ಮೆ ದಿಡೀರನೆ ಬಿಸುಪು ಹೆಚ್ಚಾದದ್ದು ಕಂಡುಬಂದರೆ ಒಬ್ಬ ಮೆಕ್ಯಾನಿಕ್ ಬಳಿ ಬಂಡಿಯನ್ನೊಯ್ದು ಹೊರಸೂಸುಕವನ್ನು ಸರಿಪಡಿಸಿಕೊಳ್ಳಬೇಕು.ಹೆದ್ದಾರಿಯಲ್ಲಿ ಹೋಗುವಾಗ ಹೊರಸೂಸುಕ ಕೈ ಕೊಟ್ಟರೆ ಹೇಗೆ? ಹೆದರದೇ, ಮೊದಲು ಹೆದ್ದಾರಿಯ ದಡದಲ್ಲಿ ಬಂಡಿಯನ್ನು ತಂದು ನಿಲ್ಲಿಸಬೇಕು. ಆಗ ಬಂಡಿಯ ಎಲ್ಲ ಕಿಟಕಿಗಳನ್ನು ತೆರೆದಿಟ್ಟು, ಬಂಡಿಯ ಬಿಸಿಕವನ್ನು (Heater) ಶುರು ಮಾಡಿ Fresh Air Mode ನಲ್ಲಿಡಿ. ಬಿಣಿಗೆಯ ಹೆಚ್ಚಿನ ಬಿಸುಪನ್ನು ಬಿಸಿಕ ಹೀರಿಕೊಳ್ಳುತ್ತ, ಬಿಸಿಗಾಳಿಯನ್ನು ಪಯಣಿಗರು ಕೂಡುವೆಡೆಯಲ್ಲಿ ಬಿಡುತ್ತ ಹೋಗುತ್ತದೆ. ಇದರಿಂದ ಬಿಣಿಗೆಯ ಬಿಸುಪು ಕಡಿಮೆಯಾಗಿ, ಕೆಲವು ಕಿಲೋಮೀಟರ್ ಬಂಡಿಯನ್ನು ಸಾಗಿಸಿ ಮೆಕ್ಯಾನಿಕ್ ಬಳಿ ಕೊಂಡೊಯ್ಯಬಹುದು.

ಇದ್ದಕ್ಕಿದಂತೆ ಟೈರ್ ನಲ್ಲಿ ಗಾಳಿ ಒತ್ತಡ ಕಡಿಮೆಯಾಗುತ್ತಿದೆಯೇ?

ಕೆಲವೊಮ್ಮೆ ಪಂಕ್ಚರ್ ಆಗದೇ ಇದ್ದರೂ ಟೈರಿನ ಗಾಳಿ ಒತ್ತಡ ಕಡಿಮೆಯಾಗುತ್ತಿರುತ್ತದೆ. ಟೈರುಗಳು ಸವೆದು ಹಳೆಯದಾಗಿದ್ದರೆ ಅದರಲ್ಲಿ ತೂತುಗಳಾಗಿ ಗಾಳಿ ಮೆಲ್ಲಗೆ ಸೋರಿಕೆಯಾಗುವುದು. ಇಂತ ಟೈರುಗಳನ್ನು ಬದಲಾಯಿಸುವುದು ಒಳ್ಳೆಯದು. ಕೂಡಲೇ ಟೈರುಗಳನ್ನು ಬದಲಾಯಿಸಲು ಆಗದಿದ್ದರೆ, ಟೈರುಗಳ ಟ್ಯೂಬ್ ಬದಲಾಯಿಸಿ ಕೆಲವು ದಿನಗಳವರೆಗೆ ನೆಮ್ಮದಿಯಿಂದ ಇರಬಹುದು.

ಮಳೆಯಲ್ಲಿ ಬಂಡಿಯ ಒಳಮೈ ನೆನೆದಾಗ:

ಮಳೆಗಾಲದಲ್ಲಿ ಕೆಲವು ಸಾರಿ ಮೈ ಮರೆತು ಬಂಡಿಯ ಕಿಟಕಿ ಗಾಜು ತೆರೆದಿಟ್ಟು ಹೋಗಿರುತ್ತೇವೆ. ಆಗ ಜೋರು ಮಳೆಬಂದರೆ, ಬಂಡಿಯ ಒಳಮೈಯಲ್ಲಿ ನೀರು ತುಂಬಿ ತೊಯ್ದು ತೊಪ್ಪೆಯಾಗಿರುತ್ತದೆ. ಬಂಡಿಯನ್ನು ಪೂರ‍್ತಿಯಾಗಿ ಒಣಗಿಸಲು 2-3 ದಿನಗಳೇ ಬೇಕಾಗುತ್ತದೆ. ಬೇಗನೆ ಒಣಗಿಸಲು ಹೀಗೆ ಮಾಡಬೇಕು. ಬಂಡಿಯನ್ನು ಮೊದಲು ಬಟ್ಟೆ/ಹಾಳೆಯಿಂದ ಚೆನ್ನಾಗಿ ಒರೆಸಬೇಕು. ಸಾದ್ಯವಾದಶ್ಟು ತೇವವನ್ನು ಇದರಿಂದ ಹೊರತೆಗೆಯಬಹುದು. ಈಗ,ಬಂಡಿಯ ಬಿಸಿಕವನ್ನು (Heater) ಕೂಡ ಶುರು ಮಾಡಿ, ಬಂಡಿ ಒಣಗಿಸಬಹುದು. ಆದರೆ ಬಿಸಿಕದ ಬಳಕೆಯಿಂದ ಹೆಚ್ಚಿನ ಉರುವಲು ಪೋಲಾಗುತ್ತದೆ. ಇದರ ಬದಲಾಗಿ, ತೇವಕಳೆಕದ (Dehumidifier) ನೆರವಿನಿಂದ ಬಂಡಿಯನ್ನು ಸುಲಬ ಹಾಗೂ ಬಲು ಬೇಗನೆ ಒಣಗಿಸಿಬಹುದು. ಬಂಡಿಯ ಒಳಮೈ ನೀರಿನಲ್ಲಿ ನೆನೆದು ಕೆಟ್ಟ ವಾಸನೆ ಬರುವುದು ಕಚಿತ, ಇದನ್ನು ದೂರವಾಗಿಸಲು ಮೇಲಿನ ಸಾಲುಗಳಲ್ಲಿ ತಿಳಿಸಿದಂತೆ ಅಡುಗೆ ಸೋಡಾ ಮತ್ತು ಕಲಿದ್ದಲು ಪುಡಿಯನ್ನು ಚಿಮುಕಿಸಿದರಾಯಿತು.

 

(ಮಾಹಿತಿ ಮತ್ತು ತಿಟ್ಟ ಸೆಲೆ: cartoq.com , ericpetersautos.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: