ಬಿಸಿಲ ಬರದಿಂದ ನಾರ‍್ವೆ ಆಯಿತು ’ಕನ್ನಡಿ’ನಾಡು!

– ಪುಟ್ಟ ಹೊನ್ನೇಗವ್ಡ.

narve_nesara_kannadi

ನಮ್ಮಲ್ಲಿ ನೀರಿನ ಬರವಿದ್ದರೆ ನಾರ‍್ವೆಯಂತಹ ನಾಡುಗಳಲ್ಲಿ ಬಿಸಿಲಿನ, ಬೆಳಕಿನ ಬರವಿದೆ! ವರ್‍ಶದ 5 ತಿಂಗಳು (ಸೆಪ್ಟೆಂಬರ್‍-ಮಾರ್‍ಚ್) ಕತ್ತಲೆಯಲ್ಲಿ ಮುಳುಗುವ, ಚುಯ್-ಗುಟ್ಟುವ ಚಳಿಯಲ್ಲೇ ದಿನಗಳನ್ನು ಕಳೆಯುವ ನಾರ್‍ವೆ ದೇಶದ ಜುಕನ್ ಪಟ್ಟಣಕ್ಕೆ ಬೆಳಕು-ಬಿಸಿಲಿನದೇ ಕೊರತೆ. ಬೆಟ್ಟಗಳ ನಡುವೆ ಈ ಊರು ಇರುವುದರಿಂದ ಚಳಿಗಾಲದಲ್ಲಿ ನೇಸರನ (ಸೂರ‍್ಯನ) ಕದಿರುಗಳು ಊರಿನೊಳಗೆ ಇಣುಕುವುದೇ ಇಲ್ಲ!

ಬಿಸಿಲಿನ ಈ ಕೊರತೆ ನೀಗಿಸಲು ಅವರು ಕಂಡುಕೊಂಡ ಹೊಸ ಹೊಳಹು ಮಜವಾಗಿದೆ. ಹೆಲಿಕಾಪ್ಟರ್‍ ನೆರವಿನಿಂದ ಬೆಟ್ಟದಲ್ಲಿ ಸುಮಾರು 538 ಚದರಡಿ ಅಳತೆಯ 3 ದೊಡ್ಡ ಕನ್ನಡಿಗಳನ್ನು ಅಳವಡಿಸಿ ಊರಿನ ಒಂದೆಡೆಯಲ್ಲಿ ಬೆಳಕನ್ನು ಹರಿಸುವ ಏರ‍್ಪಾಡನ್ನು ಅಣಿಗೊಳಿಸಲಾಗುತ್ತಿದೆ. ನೇಸರನ ಬೆಳಕು ಕನ್ನಡಿಗಳಿಗೆ ತಾಗಿ-ಬಾಗಿ 2150 ಚದರಡಿಯ ಒಂದು ಜಾಗಕ್ಕೆ ಬೀಳುವಂತೆ ಮಾಡಲಾಗುತ್ತಿದೆ. ಸುಮಾರು 3500 ಮಂದಿ ಇರುವ ಈ ಚಿಕ್ಕ ಊರಿಗೆ ಬೆಳಕು, ಬಿಸಿಲು ತಾಗುವ ಈ ತಾಣ ಮುಂದೆ ವರ‍್ಶದ ಹಲವು ತಿಂಗಳು ನಲಿವಿನ ನಲ್ದಾಣವಾಗಲಿದೆ.

ಸೂರ್‍ಯನ ಬೆಳಕನ್ನು ಮರುಚಿಮ್ಮಿಸುವ ಏರ‍್ಪಾಡು ಇಟಲಿಯ ವಿಗನೆಲ್ಲ ಹಳ್ಳಿಯಲ್ಲಿ 2006 ರಿಂದ ಬಳಕೆಯಾಗುತ್ತಿತ್ತು. ಬೆಳಕನ್ನು ಒಂದೆಡೆಗೆ ಸಾಗಿಸಲು ಅಲ್ಲಿ ಚೆನ್ನಾಗಿ ಉಜ್ಜಿರುವ ಉಕ್ಕನ್ನು ಅಳವಡಿಸಲಾಗಿತ್ತು. ವಿಗನೆಲ್ಲ ಊರಿನ ಆ ಏರ‍್ಪಾಡನ್ನು ಕಂಡ ಜುಕನ್ನಿಗರಿಗೆ ಬೆರಗು, ನಲಿವು ಉಂಟಾದರೂ ಅದಕ್ಕಿಂತ ಸುಳುವಾದ ತಮ್ಮದೇ ಏರ‍್ಪಾಡನ್ನು ಕಟ್ಟಿಕೊಳ್ಳಲು ತೀರ‍್ಮಾನಿಸಿದರಂತೆ. ಆಗ ಹೊಮ್ಮಿದ್ದೇ ಮೇಲೆ ತಿಳಿಸಿದ ಕನ್ನಡಿಗಳ ಹೊಳಹು.

ಮರಗಳನ್ನು ಕಡಿದು ಈಗಾಗಲೇ ಬೆಳಕಿನ ಈ ’ನಲ್ದಾಣದಲ್ಲಿ’ ಕಾಂಕ್ರೀಟ್ ಹಾಕಲಾಗಿದ್ದು, ಬೆಟ್ಟದಲ್ಲಿ ಕನ್ನಡಿಗಳನ್ನೂ ಅಳವಡಿಸಲಾಗಿದೆ. ಈ ಸಪ್ಟೆಂಬರ್‍ನನ ಚಳಿಗೆ ಮಯ್ ಕಾಯಿಸಿಕೊಳ್ಳಲು ಜುಕನ್ ಜನ ಕಾತುರದಿಂದ ಕಾಯುತ್ತಿದ್ದಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: