ಇಂಗ್ಲಿಶ್ ಮಾದ್ಯಮದ ಮಕ್ಕಳು ಮತ್ತು ಕನ್ನಡ

ಸರಿತಾ ಸಂಗಮೇಶ್ವರನ್

thehindudotcom

ನನ್ನ ಮಗ ಮೂರನೇ ತರಗತಿಯಲ್ಲಿ ಓದುತ್ತಾನೆ. ಅವನು ಆಂಗ್ಲ ಬಾಶೆ ಮಾದ್ಯಮದಲ್ಲಿ ಕಲಿಯುತ್ತಾನೆ. ಮೊನ್ನೆ ಅವನಿಗೆ ಕನ್ನಡ ಕಿರುಪರೀಕ್ಶೆಇತ್ತು. ಅವನು ಕನ್ನಡ ಬರಿಯಲು ಪಟ್ಟ ಕಶ್ಟ ನನಗೆ ಈ ಬರಹ ಬರೆಯಲು ಹುರಿದುಂಬಿಸಿತು.

ನಮ್ಮದು ಕನ್ನಡ ಮಾತನಾಡುವ ಮನೆ. ಸಾದ್ಯವಾದಶ್ಟು ಕನ್ನಡದಲ್ಲೇ ಮಾತನಾಡಿ ಕನ್ನಡ ಗಾದೆ, ಒಗಟು, ಪದಗಳ ಪರಿಚಯ ಸಾಕಶ್ಟು ಮಾಡಿದ್ದೀವಿ. ಆದರೂ ನನ್ನ ಮಗನಿಗೆ ಕನ್ನಡ ಓದಲು ಮತ್ತು ಬರೆಯಲು ಕಶ್ಟ. ಅದು ಅಶ್ಟಾಗಿ ಇಶ್ಟಪಡದ ಕೆಲಸ. ಇದು ಕನ್ನಡಿಗರಾದ ನಾವು ಎದುರಿಸುತ್ತಿರುವ ಇಂದಿನ ಪರಿಸ್ತಿತಿ.
ನಮ್ಮ ನೆರೆಹೊರೆಯ ಪರಿಚಿತರು ಕನ್ನಡಿಗರೇ ಆಗಿದ್ದರೂ ಕನ್ನಡ ಅವರ ಮಗುವಿಗೆ ಕಶ್ಟವಾಗುತ್ತಿದೆ ಎಂಬ ಕಾರಣಕ್ಕೆ ಸಂಸ್ಕ್ರುತ ಬಾಶೆಗೆ ಬದಲಾಯಿಸಿದರು. ಹೀಗೆ ಕನ್ನಡಿಗರೇ ಆಲೋಚಿಸಿದರೆ ಇನ್ನು ಬೇರೆ ಬಾಶೆಯವರಿಗೆ ಏಕೆ ಬೇಕು ಕನ್ನಡಾಬಿಮಾನ?

ನಾನು ಕಲಿತದ್ದು ಕಾನ್ವೆಂಟಿನಲ್ಲಿ, ಅಂಗ್ಲ ಮಾದ್ಯಮದಲ್ಲಿ. ಆದರೂ ನನಗೆ ಕನ್ನಡ ಎಂದರೆ ತುಂಬಾ ಪ್ರೀತಿ, ಅಬಿಮಾನ. ಕನ್ನಡ ಪುಸ್ತಕಗಳ ಬಗ್ಗೆ ಅಪಾರವಾದ ಗವ್ರವ. ನನಗೆ ತಿಳಿದ ಮಟ್ಟಿಗೆ, ಕನ್ನಡ ಮಾತನಾಡಲು, ಇಲ್ಲವೇ ಕನ್ನಡ ಪುಸ್ತಕಗಳನ್ನು ಓದಲು ನನ್ನ ತಂದೆ ತಾಯಿ ನನಗೆ ಒತ್ತಾಯಿಸಲಿಲ್ಲ. ಆದರೂ ನನಗೆ ಬಾಶೆಯ ಬಗ್ಗೆ ಪ್ರೀತಿ ಬೆಳೆಯಿತು. ಆದರೆ ಇಂದಿನ ಪೀಳಿಗೆ ಹೀಗಾಗಲು ಕಾರಣವೇನು?

ಕನ್ನಡ ನಮ್ಮ ಮಕ್ಕಳಿಗೆ ಕಬ್ಬಿಣದ ಕಡಲೆ ಆಗಿದೆ. ಇಂದಿನ ಕನ್ನಡ ಪಾಟಗಳು ಆಂಗ್ಲ ಬಾಶೆಯಲ್ಲಿ ಹೇಳುತ್ತಾರೆ. ಕಟಿಣ ಪದಗಳ ಅರ್‍ತಗಳು ಆಂಗ್ಲ ಬಾಶೆಯಲ್ಲಿ ಇರುತ್ತದೆ. ಇದು ನನಗೆ ಬೇಸರವೆನಿಸಿತು. ನಮ್ಮ ತಾಯ್ನುಡಿ ಕಲಿಯಲು ನಾವು ಯಾವುದೋ ಬೇರೆ ಬಾಶೆಯ ಮೊರೆ ಹೋಗುತ್ತಾ ಇದ್ದೀವಿ. ದಿನನಿತ್ಯ ಉಪಯೋಗಿಸುವ ಪದಗಳು ಎಶ್ಟು ಕಲಬೆರಕೆಯಾಗಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಂತಿದೆ.

ಮಕ್ಕಳಿಗೆ ಅಂದಕಾರ ಎಂಬ ಪದದ ಅರ್‍ತ ತಿಳಿಸಲು “darkness” ಎಂಬುದನ್ನು ಬಳಸಲಾಗುತ್ತಿದೆ ಹೊರತು ಕತ್ತಲು ಎಂಬ ಪದ ನಿಜವಾಗಿಯೂ ಕತ್ತಲು ಸೇರಿದೆ. ಮಾತು ಕಲಿಯುವ ಮಗುವಿಗೆ ಚಿಟ್ಟೆಎಂದು ಹೇಳಿಕೊಡುವ ಬದಲು “butterfly” ಎಂದು, ನಾಯಿ ಎಂದು ಹೇಳಿಕೊಡುವಬದಲಾಗಿ “doggy” ಎಂದು ಹೇಳುತ್ತೇವೆ. ಹೀಗಾದರೆ ಬಾಶಾ ಪ್ರೀತಿ ಬರುವುದಾದರೂ ಹೇಗೆ? ಕನ್ನಡ ಓದುವವರ ಸಂಕ್ಯೆಯೂ ಕಡಿಮೆ ಆಗಿದೆ. ಅಂದ ಹಾಗೆ ಕನ್ನಡ ಓದುವುದೇ ಕಶ್ಟ ಎಂದು ತಿಳಿದ ಮಕ್ಕಳು ಕನ್ನಡ ಓದುವುದಾದರೂ ಹೇಗೆ?

ಇದು ಬೆಂಗಳೂರಿನ ಮಾತು ಮಾತ್ರ ಅಲ್ಲ. ರಾಜದಾನಿ ಮಾತ್ರ ಆಗಿದ್ದರೆ, ಹೇಗೋ ಅಲ್ಲಿ ಬೇರೆ ಬಾಶೆಯ ಜನರು ಹೆಚ್ಚಿನ ಸಂಕ್ಯೆಯಲ್ಲಿ ಇರುವುದು ತಕ್ಕ ಮಟ್ಟಿಗೆ ಕಾರಣ ಎಂದು ಅಂದುಕೊಳ್ಳಬಹುದು. ಆದರೆ ಇದು ಹೆಚ್ಚುಕಡಿಮೆ ಎಲ್ಲಾ ಊರಿನಲ್ಲಿನ ಪರಿಸ್ತಿತಿ. ಇಂತ ಪರಿಸ್ತಿತಿ ನಮ್ಮ ಕನ್ನಡಬಾಶೆಗೆ ಬರಬೇಕಾದರೆ ಕಾರಣತಿಳಿಯುವುದು ತುಂಬಾ ಮುಕ್ಯವಾಗಿದೆ. ಆಗ ಮಾತ್ರ ಅದಕ್ಕೆ ತಕ್ಕ ಮದ್ದು ಕೊಟ್ಟು ನಮ್ಮ ಬಾಶೆಯನ್ನೂ ಉಳಿಸಿಕೊಳ್ಳಲು ಸಾದ್ಯ.

ಮೊದಲನೆಯದಾಗಿ ನಮ್ಮ ಬಾಶೆ ಅದರ ಪರಿಶುದ್ದತೆಯನ್ನು ಕಳೆದುಕೊಳ್ಳುತ್ತಾ ಇದೆ. ನಾವು ಮಾತನಾಡುವ ಒಂದು ವಾಕ್ಯದಲ್ಲಿ ಅರ್‍ದದಿಂದ ಮುಕ್ಕಾಲು ಬಾಗ ಆಂಗ್ಲಬಾಶೆ ಇರುತ್ತದೆ. ಕನ್ನಡ ದಾರವಾಹಿ, ಸಿನೆಮಗಳಲ್ಲೂ ಇದೇ ರೀತಿ ಬಾಶಾ ಪ್ರಯೋಗ ಇರುವುದರಿಂದ ಈಗಿನ ಪೀಳಿಗೆಗೆ ಬಹುತೇಕ ಕನ್ನಡ ಪದಗಳ ಪರಿಚಯವೇ ಇಲ್ಲ. ಹೊಸ ಬರಹಗಾರರ ಶಯ್ಲಿ ಬದಲಾಗಿರುವುದು ಕೂಡ ಒಂದು ಕಾರಣವಿರಬಹುದು.

ಸಮೂಹ ಮಾದ್ಯಮಗಳಲ್ಲೂ ಬೆರಕೆ ಬಾಶೆ ಪ್ರಯೋಗ ಕಾಣಿಸುತ್ತಾ ಇದೆ. ಅಲ್ಲಿಯೂ ಕೂಡ ಸಾದ್ಯವಾದಶ್ಟು ಕನ್ನಡ ಬಳಕೆ ಆದರೆ ಸ್ವಲ್ಪವಾದರೂ ಇಂದಿನ ಪರಿಸ್ತಿತಿ ಸುದಾರಿಸಬಹುದು.

ಈ ಸಮಸ್ಯೆಗೆ ಪರಿಹಾರ ಎಂದರೆ ಕನ್ನಡ ಮಾತನಾಡಲು ಪ್ರೋತ್ಸಾಹಿಸಬೇಕು. ಕನ್ನಡ ಓದಲು, ಬರೆಯಲು ಕಲಿಸುವ ರೀತಿ ಸುದಾರಿಸಬೇಕು. ಇದು ಕನ್ನಡಿಗರಾದ ನಮ್ಮ ಹೊಣೆ. ಅಂದು ಸಂಸ್ಕ್ರುತ ಬಾಶೆ ಹೋದ ಕಡೆಗೆ ನಮ್ಮ ಕನ್ನಡ ಬಾಶೆ ಹೋಗಬಾರದೆಂದರೆ ಕನ್ನಡ ಉಳಿಸಲು ಬೆಳೆಸಲು ನಾವು ಪ್ರಯತ್ನಿಸಬೇಕಾಗಿದೆ. ಅದು ನಮ್ಮ ಮುಂದಿನ ಪೀಳಿಗೆಯಿಂದ ಮಾತ್ರ ಸಾದ್ಯ. ಒತ್ತಾಯದಿಂದ ಬಾಶೆ ಹೇರುವುದಕ್ಕಾಗುವುದಿಲ್ಲ, ನಮ್ಮ ಬಾಶೆಯ ಮೇಲೆ ನಮಗೆ ಪ್ರೀತಿ ಇರಬೇಕು. ಅದು ಸ್ವಾಬಾವಿಕವಾಗಿ ಬರಬೇಕು. ನಮಗೆ ಪ್ರೀತಿ ಇದ್ದಲ್ಲಿ ನಮ್ಮ ಮಕ್ಕಳಿಗೆ ಕಳಿಸುವುದು ಸುಲಬ ಆಗುತ್ತದೆ.

ಅಂಗ್ಲ ಬಾಶೆ ಕಲಿಯಬೇಕು ನಿಜ, ಆದರೆ ಅದಕ್ಕಾಗಿ ಇನ್ನೊಂದು ಬಾಶೆಯ ಬಲಿಬೇಡ ಎಂದಶ್ಟೇ ನನ್ನ ಅಬಿಪ್ರಾಯ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

(ಚಿತ್ರ: www.thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: