ನೀಲ ನೇರಳೆ ಚಿತ್ತಾರ

– ಶ್ರೀಕಿಶನ್ ಬಿ. ಎಂ.

sini_gal_birdbug_11

ನೀಲನೇರಳೆ ಚಿತ್ತಾರ
ಅದಾವ ಸೊಗಡನು ನಲವಿನಿಂದರಸುತ ಹೊರಟೆ
ಎಲೆ ಹಾರುಕವೇ ?
ಅದಾವ ಬಳ್ಳಿಯುಸಿರಿನ ಪಾಲು ಪಡೆಯ ಹೊರಟೆ? |1|

ಮುಂಚಾಚಿಹವು ನಸುಗಾಳಿಯಲಿ
ಕಡುನೇರಳೆಯ ಎಳೆಕಯ್ಗಳು
ಮಾಗಿದಲರುಗಳ ಮದುವೆಯ ಮುಂದಾಳುತನಕೆ ಅನುವಾಗುವೆಯೋ?
ನಿನ್ನಾ ಹಸುಗೆಯ ಹೀರಹೊರಟೆಯೋ? |2|

ಕಣ್ಣೆವೆಯ ಸೆರೆಹಿಡಿದಿಹುದೀ
ಬಿರಿದ ಮಲೆಮಲರ ತಳಿರ ಮೆರುಗು
ಆ ತೋರಣದ ಹರವಿನನ್ತೇ ಕಾಣ್ವದೇನಿದು
ಕುಳಿರೆಲರ ನೇಲಲ್ಲಿ ನಿನ್ನೊಡಲ ತೇಲೋ? |3|

ಹೇಳೆಯಾ ಎಲೆ ಹಕ್ಕಿ ಒಳವು ನಿನ್ನುಲಿಯ ಸೆಲೆಗೆ
ಹೂವಂತೆ ಬಾರದೇಕೆನಗೆ ನಿನ್ನೊಲವ ಸಲಿಗೆ
ನಿನ್ನ ಸೆಳೆಗೊಳಲು ಅದಕಿಹುದದರ ಸವಿಗಂಪು
ಅದಕೆ ನಿನ್ನ ರೆಕ್ಕೆಯ ಕೊಡವೂ ಕಿವಿಗಿಂಪು |4|

ಅದಾವುದಕಿಹುದು ನಿನ್ನ
ಹುರುಪ ಹರಿಯುವ ಮೊನಚು?
ಬರಸಿಡಿಲೋ ಬಿರುಬಿಸಿಲೋ
ಏನೆಸಗಬಲ್ಲದಾ ಬಾನ್ ತುದಿಯ ಸಂಚು?
ತಡೆಯಿರದ ಸಡಗರವ ಸೂಸುತಲೇ
ಮೆಲ್ಲುತಿಹುದು ನಿನ್ನಾ ಚುಂಚದಂಚು! |5|

ಏನಿದೇನು
ಹಗಲ ಬೆಳಕ ಕಾವ ಮೇಲೊಸರಿಹುದೆ
ಇರುಳ ನೇರಳೆಯ ತಂಪು?
ಅಹುದೇನಿದು ದಿಟದಿ
ಪೊಡವಿಯಾಚೆಯ ಮಾಳ್ಪು? |6|

(ಚಿತ್ರ: http://universini.com/)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ನನ್ನಿಗಳು ಅನಂತ್ ಅವರೆ.

ಅನಿಸಿಕೆ ಬರೆಯಿರಿ: