ಇಂಗ್ಲಿಶ್ ಕಲಿಕೆಗೆ ಏಕೆ ಅವಸರ?

ರತೀಶ ರತ್ನಾಕರ

zambian learning

ರಾಜ್ಯದ ಮಕ್ಕಳಿಗೆ ಸರಕಾರಿ ಕಲಿಕೆಮನೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಶನ್ನು ಕಲಿಸುವ ಏರ್‍ಪಾಡು ಮಾಡಲಾಗುವುದು ಎಂದು ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರರವರು ಹೇಳಿರುವುದು ವರದಿಯಾಗಿದೆ (ಆಂದೋಲನ, ಮಯ್ಸೂರು 03-ಆಗಸ್ಟ್-2013). ಕನ್ನಡ ನಾಡಿನ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಶ್ ಹೇಳಿಕೊಡುವ ಅವಶ್ಯಕತೆ ನಿಜವಾಗಿಯೂ ಇದೆಯೇ? ಮಕ್ಕಳಿಗೆ ಇಂಗ್ಲಿಶ್ ಇಲ್ಲವೇ ಬೇರಾವುದೇ ಹೊರನುಡಿಯನ್ನು ಕಲಿಸಲು ಸರಿಯಾದ ವಯಸ್ಸು ಯಾವುದು? ಮಕ್ಕಳಿಗೆ ತಾಯ್ನುಡಿಯಲ್ಲಿಯೇ ಕಲಿಕೆಯನ್ನು ಏಕೆ ಆರಂಬಿಸಬೇಕು? ಹೀಗೆ ಹಲವು ಕೇಳ್ವಿಗಳು ನಮ್ಮಲ್ಲಿ ಏಳುತ್ತವೆ. ಈ ಕೇಳ್ವಿಗಳಿಗೆ ಉತ್ತರವನ್ನು ಹಲವಾರು ಅರಕೆಗಳು (research) ನೀಡಿವೆ. ಹೀಗೆ ನಡೆದ ಒಂದು ಅರಕೆಯ ಕುರಿತು ಈ ಕೊಂಡಿಯಲ್ಲಿ ನೀಡಲಾಗಿದೆ. ಅದರ ತಿರುಳನ್ನು ಈ ಕೆಳಗೆ ನೀಡಲಾಗಿದೆ.

ಜಗತ್ತಿನ ಎಲ್ಲಾ ಅರಕೆಗಳು ಹೇಳುವಂತೆ ಮಕ್ಕಳ ಮೊದಲ ಹಂತದ ಕಲಿಕೆ ಅವರ ತಾಯ್ನುಡಿಯಲ್ಲಿಯೇ ಆಗಬೇಕಿದೆ. ಮಗುವು ಒಂದು ನಿಮಿಶಕ್ಕೆ 45-60 ಪದಗಳನ್ನು ಸುಲಬವಾಗಿ ಓದುವ ಹಂತಕ್ಕೆ ಬಂದಾಗ ಮಾತ್ರ ತಾನು ಓದಿದ ವಾಕ್ಯವನ್ನು ಅರಿತುಕೊಳ್ಳುತ್ತದೆ. ಹೀಗೆ ನಿಮಿಶಕ್ಕೆ 45-60 ಪದಗಳನ್ನು ಓದಲು ಸುಲಬವಾಗುವುದು ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆಯನ್ನು ಆರಂಬಿಸಿದಾಗ ಮಾತ್ರ. ಬಳಿಕ ಆ ಮಗುವಿಗೆ ಬೇರೊಂದು ನುಡಿಯನ್ನು ಕಲಿಸುವುದು ಬಹಳ ಸುಲಬವಾಗುವುದು. ಆದರೆ ಮೊದಲ ಹಂತದಲ್ಲೇ ಬೇರೆನುಡಿಯನ್ನು ಕಲಿಸಹೊರಟರೆ ಮಗುವಿಗೆ 45-60 ಪದಗಳನ್ನು ಓದುವುದು ಕಶ್ಟವಾಗುತ್ತದೆ, ತಾಯ್ನುಡಿಯಲ್ಲಿ ಓದಲು ಈ ಕಶ್ಟ ಬರುವುದಿಲ್ಲ, ಅಲ್ಲವೇ? ಒಂದು ವೇಳೆ ಮಗುವಿನ ವಯಸ್ಸು ಎಂಟಾಗುವ ಹೊತ್ತಿಗೆ ಸುಲಬವಾಗಿ ಓದುವುದನ್ನು ಕಲಿಯದಿದ್ದಲ್ಲಿ ಮುಂದಿನ ಕಲಿಕೆಯಲ್ಲಿ ಅದು ಹಿಂದೆ ಬೀಳುವ ಸಾದ್ಯತೆಗಳು ಹೆಚ್ಚಿವೆ.

ಕಲಿಕೆಯರಿಗರಾದ ಹೆಲೆನ್ ಅಬಾಜಿ ಮಾಡಿದ ಅರಕೆಯಲ್ಲಿ ಹೀಗೆ ಹೇಳಲಾಗಿದೆ, ಮಾನವನ ನೆನಪು ಶಕ್ತಿಯು ಕೇವಲ 12 ಸೆಕೆಂಡುಗಳ ಕಾಲ ಚೆನ್ನಾಗಿ ಕೆಲಸ ಮಾಡುತ್ತದೆ. ಈ 12 ಸೆಕೆಂಡಿನಲ್ಲಿ ಒಬ್ಬ ಒಂದು ವಾಕ್ಯವನ್ನು ಓದಿ, ಅದರ ಹುರುಳನ್ನು ತಿಳಿದುಕೊಂಡು, ಅದನ್ನು ವಿಂಗಡಿಸಿ ತನ್ನ ಮೆದುಳಿನಲ್ಲಿ ಉಳಿಸಿಕೊಳ್ಳುವ ಕಸುವು ಇರಬೇಕು. ಹಾಗೆಯೇ ಓದುವುದನ್ನು ಅರ‍್ತಮಾಡಿಕೊಳ್ಳಬೇಕಾದರೆ ಒಂದು ಪದವನ್ನು 1 ಇಲ್ಲವೇ 1.5 ಸೆಕೆಂಡಿನಲ್ಲಿ ಓದಬಲ್ಲವರಾಗಿರಬೇಕು, ಇದಕ್ಕಿಂತ ತಡವಾಗಿ ಓದಿದಲ್ಲಿ ವಾಕ್ಯದ ಕೊನೆಯ ಬಾಗವನ್ನು ಓದುವ ಹೊತ್ತಿಗೆ ಮೊದಲು ಓದಿದ್ದನ್ನು ಮರೆತುಬಿಡುತ್ತಾರೆ.

ಮಕ್ಕಳು ಬೇರೊಂದು ನುಡಿಯ ವಾಕ್ಯವನ್ನು ಓದುವಾಗ ಅದರಲ್ಲಿರುವ ಪದಗಳ ಅರ್‍ತ ಕಂಡುಹಿಡಿಯಲು ಕಶ್ಟಪಡುತ್ತಾರೆ. ಒಂದು ವಾಕ್ಯವನ್ನು ಓದುವಾಗ ಹೆಚ್ಚಿನ ಪ್ರಯತ್ನವನ್ನು ಪದಗಳ ಅರ್‍ತ ಕಂಡುಹಿಡಿಯುವುದರಲ್ಲಿಯೇ ಬಳಸುತ್ತಾರೆ ಹಾಗಾಗಿ 12 ಸೆಕೆಂಡಿನಲ್ಲಿ ಒಂದು ವಾಕ್ಯವನ್ನು ಮುಗಿಸಲು ಆಗುವುದಿಲ್ಲ, ಇದರಿಂದ ವಾಕ್ಯದ ಹುರುಳನ್ನು ತಿಳಿಯುವಲ್ಲಿ ಸೋಲುತ್ತಾರೆ. ಮಗುವು ಚುರುಕಾಗಿ ಓದುವುದನ್ನು ಕಲಿಯದಿದ್ದರೆ ಪಾಟದಲ್ಲಿರುವುದನ್ನು ಮತ್ತು ಕಲಿಸುಗರು ಹೇಳುವುದನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಹೀಗೆ ನಡೆದ ಮೊದಲ ಹಂತದ ಕಲಿಕೆ ಯಾವ ಬಳಕೆಗೂ ಬಾರದು. ಎಂಟು ವರುಶಗಳ ಕಾಲ ಕಲಿಕೆಮನೆಯಲ್ಲಿ ಕಳೆದರೂ ಕೂಡ ಓದುವುದು, ಬರೆಯುವುದರಲ್ಲಿ ಮಕ್ಕಳು ಪಳಗಿರುವುದಿಲ್ಲ.

ಒಂದು ನುಡಿಯನ್ನು ಚೆನ್ನಾಗಿ ಕಲಿತರೆ ಬೇರೊಂದು ನುಡಿಯನ್ನು ಮತ್ತಶ್ಟು ಚೆನ್ನಾಗಿ ಕಲಿಯಲು ಸುಲಬವಾಗುತ್ತದೆ. ತಾಯ್ನುಡಿಯಲ್ಲಿನ ಮೊದಲ ಹಂತದ ಕಲಿಕೆಯು ಮಗುವಿನ ಮೆದುಳಿನ ಕಾಗ್ನಿಟಿವ್ ನೆಟ್‍ವರ್‍ಕನ್ನು ಬೆಳೆಸಿ ಬೇರೊಂದು ನುಡಿಯ ಹುರುಳನ್ನು ಬೇಗನೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದಕ್ಕಾಗಿ ಹೆಲೆನ್‍ರವರು ಒಂದು ಪ್ರಯೋಗವನ್ನು ಜಾಂಬಿಯಾದಲ್ಲಿ ನಡೆಸಿದರು, ಜಾಂಬಿಯಾದಲ್ಲಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಶ್ ಹಾಗು ಜಾಂಬಿಯನ್ ನುಡಿಯನ್ನು ಕಲಿಸಲಾಗುತ್ತಿತ್ತು. ಮಕ್ಕಳ ಇಂಗ್ಲಿಶ್ ಓದುವ ಮಟ್ಟ ಜಾಂಬಿಯನ್ ನುಡಿ ಓದುವ ಮಟ್ಟ ಎರಡೂ ಕಡಿಮೆ ಇತ್ತು. ಹೆಲೆನ್ ಅವರ ಪ್ರಯೋಗದಲ್ಲಿ ಮಕ್ಕಳನ್ನು ಎರಡು ಗುಂಪುಗಳಾಗಿ ಮಾಡಿ ಅದರಲ್ಲಿ ಒಂದು ಗುಂಪಿಗೆ ಹಳೆಯ ಪದ್ದತಿಯಂತೆ ಒಂದನೇ ತರಗತಿಯಿಂದಲೇ ಇಂಗ್ಲಿಶನ್ನು ಕಲಿಸಲಾಯಿತು.

ಮತ್ತೊಂದು ಗುಂಪಿನ ಮಕ್ಕಳಿಗೆ ಇಂಗ್ಲೀಶನ್ನು ತಡವಾಗಿ ಅಂದರೆ ತಾಯ್ನುಡಿಯಲ್ಲಿ ಓದುವುದು ಗಟ್ಟಿಗೊಂಡ ಬಳಿಕ (ಮಗುವಿಗೆ 8 ವರುಶ ವಯಸ್ಸು ಆದ ಬಳಿಕ) ಹೇಳಿಕೊಡಲಾಯಿತು. ಇದು ಬೆರಗುಗೊಳಿಸುವಂತಹ ಪಲಿತಾಂಶವನ್ನು ನೀಡಿತು, ಮೊದಲು ತಾಯ್ನುಡಿಯ ಓದನ್ನು ಗಟ್ಟಿಗೊಳಿಸಿ ಇಂಗ್ಲಿಶನ್ನು ತಡವಾಗಿ ಕಲಿಸಿದ್ದರಿಂದ ಇಂಗ್ಲಿಶಿನ ಓದು ಮತ್ತು ಬರಹದ ಮಟ್ಟ ಮೊದಲ ಗುಂಪಿನ ಮಕ್ಕಳಿಗಿಂತ ಬಹಳ ಮೇಲ್ಮಟ್ಟದ್ಡಲ್ಲಿತ್ತು. ಜೊತೆಗೆ ಜಾಂಬಿಯನ್ ನುಡಿಯ ಕಲಿಕೆಯ ಮಟ್ಟವು ಕೂಡ ಇದೇ ರೀತಿ ಬೆಳವಣಿಗೆಯನ್ನು ಕಂಡಿತು. ಹಾಗಾಗಿ, ಇಂಗ್ಲಿಶನ್ನು ಒಂದನೇ ತರಗತಿಯಿಂದಲೇ ಕಲಿಸುವುದರ ಬದಲಿಗೆ, ಎರಡನೇ ಅತವಾ ಮೂರನೇ ತರಗತಿಯಿಂದಲೇ ಕಲಿಸತೊಡಗುವುದು ಮಕ್ಕಳಿಗೆ ಒಳಿತು. ಹೀಗೆ ಮಾಡುವುದರಿಂದ, ಮಕ್ಕಳ ಕನ್ನಡ ಮತ್ತು ಇಂಗ್ಲಿಶ್ ಅರಿವು ಎರಡನ್ನೂ ಹೆಚ್ಚಿಸಬಹುದು.

ಸದ್ಯದ ಪರಿಸ್ತಿತಿಯಲ್ಲಿ ಇಂಗ್ಲಿಶ್ ಕಲಿಕೆ ಬೇಕಾಗಿದೆ ಆದರೆ ಮೊದಲ ಹಂತದ ಕಲಿಕೆಯೇ ಇಂಗ್ಲಿಶಿನಲ್ಲಿ ಇದ್ದರೆ ಮಕ್ಕಳು ಕಾಗ್ನಿಟೀವ್ ಚಳಕಗಳನ್ನು ಬೆಳೆಸಿಕೊಳ್ಳುವಲ್ಲಿ ಸೋಲುತ್ತಾರೆ. ಹಾಗಾಗಿ. ಮೊದಲು ತಾಯ್ನುಡಿಯಲ್ಲಿ ಓದು ಬರಹವನ್ನು ಗಟ್ಟಿಗೊಳಿಸಿ ಬಳಿಕ ಬೇಕಾದ ನುಡಿಯನ್ನು ಕಲಿಸಿದರೆ ಒಳಿತು.

(ಚಿತ್ರ: ಇ ಆಯ್ ಎಪ್ ಎಲ್)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಕನ್ನಡದ ವಿಕಿಪಿಡಿಯಾದಲ್ಲಿ ಒಮ್ಮೆ ಕುಮುದೇಂದು ಮುನಿ ಬರೆದ ‘ಸಿರಿ ಬೂವಲಯ’ ಎಂಬ ಹೊತ್ತಗೆಯಲ್ಲಿ ಕನ್ನಡಕ್ಕೆ ಜಗತ್ತಿನ ಎಲ್ಲಾ ಭಾಶೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಎಂದು ಓದಿದ ನೆನಪು. ಆ ಹೊತ್ತಗೆಯ ಇನ್ನುಳಿದ ಸಾರವನ್ನು ಓದುವ ಬಯಕೆ. ಆದರೆ ಆ ಹೊತ್ತಗೆ ಎಲ್ಲಿ ದೊರೆಯುತ್ತದೆ ಎಂದು ತಿಳಿದಿಲ್ಲ. ತಾವು ಬಲ್ಲವರಿಂದ ಈ ಹೊತ್ತಗೆಯ ಸಾರವನ್ನು ತಿಳಿಯಪಡುವಂತೆ ಮಾಡಬೇಕೆಂದು ಮನವಿ

  2. neelanjana says:

    ಹಾಸನದ ಸುಧಾರ್ಥಿ ಎನ್ನುವವರು ಸಿರಿಭೂವಲಯವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ ಅಂತ ಓದಿದ್ದ ನೆನಪು.

ಅನಿಸಿಕೆ ಬರೆಯಿರಿ: