ಇಂಗ್ಲಿಶಿನ ಬೆನ್ನು ಹತ್ತಿದವರು ಎಂದೆಂದಿಗೂ ಹಿಂಬಾಲಕರೇ!

– ರಗುನಂದನ್

english_change

ಇಂಗ್ಲಿಶಿನ ಹರವನ್ನು ಹಬ್ಬಿಸಿರುವ ಎರಡು ಮುಕ್ಯ ದೇಶಗಳಲ್ಲಿ(ಇಂಗ್ಲೆಂಡ್ ಮತ್ತು ಅಮೇರಿಕಾ) ಮಾತನಾಡುವ ಇಂಗ್ಲಿಶ್ ಬಗೆಗಳನ್ನು ತಿಳಿದುಕೊಳ್ಳೋಣ. ಇಂದು ಇಂಗ್ಲಿಶಿನ ಒಳನುಡಿಗಳೆಂದು ಮುಕ್ಯವಾಗಿ ಕರೆಯಲ್ಪಡುವುದು ಅಮೇರಿಕಾದ ಇಂಗ್ಲಿಶ್ ಮತ್ತು ಇಂಗ್ಲೆಂಡಿನ ಇಂಗ್ಲೀಶ್. ಈ ಎರಡೂ ನಾಡುಗಳಲ್ಲಿ ಬೇಕಾದಶ್ಟು ಒಳನುಡಿಗಳಿವೆ. ಇಂಗ್ಲೆಂಡಿನಲ್ಲಿ ಸ್ಟಾಂಡರ‍್ಡ್ ಇಂಗ್ಲಿಶ್ ಎಂಬ ಒಂದು ಬಗೆಯಿದೆ. ಇದನ್ನು ಬಿಬಿಸಿ ಇಂಗ್ಲಿಶ್ ಎಂದೂ ಕೂಡ ಕರೆಯುತ್ತಾರೆ.

ಅಮೇರಿಕಾ ವಿಶಯ ತೆಗೆದುಕೊಂಡರೆ ಅಲ್ಲಿ ಮೊದಲಿನಿಂದಲೂ ಏನು ಇಂಗ್ಲಿಶ್ ಮಾತಾನಾಡುತ್ತಿರಲಿಲ್ಲ. ಅಲ್ಲಿ ಬೇರೆ ಯೂರೋಪಿನವರೊಡನೆ ಇಂಗ್ಲಿಶರೂ ಲಗ್ಗೆಯಿಟ್ಟಾಗ (17ನೇ ನೂರೇಡಿನಲ್ಲಿ) ಇಂಗ್ಲಿಶ್ ಬಾಶೆ ಅಲ್ಲಿ ಬೆಳೆಯಲು ಮೊದಲಾಯಿತು. ಅಮೇರಿಕಾದಲ್ಲಿ ಇನ್ನೂ ಅಲ್ಲಿನ ತವರು ನುಡಿಗಳನ್ನು ಮಾತನಾಡುವ ಬುಡಕಟ್ಟು ಮಂದಿ ಇದ್ದಾರೆ.

ಇಂಗ್ಲಿಶ್, ಒಂದು ಮಾತಾಡುವ ನುಡಿಯಾದ ಕಾರಣ ಕಳೆದ 300 ವರುಶಗಳಲ್ಲಿ ಅಮೇರಿಕಾದ ಮತ್ತು ಇಂಗ್ಲೆಂಡಿನ ಇಂಗ್ಲಿಶಿನಲ್ಲಿ ಸಾಕಶ್ಟು ಬದಲಾವಣೆಗಳು ಆಗಿರುವ ಸಾದ್ಯತೆ ಇದೆ ಮತ್ತೆ ಅದು ಅಗಿಯೂ ಇದೆ. ಬ್ರಿಟನ್ ಇಂಗ್ಲಿಶ್ ಮತ್ತು ಅಮೇರಿಕನ್ ಇಂಗ್ಲಿಶ್ ನಡುವಿನ ಮುಕ್ಯವಾದ ವ್ಯತ್ಯಾಸವೆಂದರೆ ’ಆರ್‍’(r) ಬರಿಗೆಯ ಉಲಿಯುವಿಕೆ. hard ಎಂಬ ಪದವನ್ನು ತೆಗೆದುಕೊಂಡರೆ ಅಮೇರಿಕಾದವರು ’r’ ಗೆ ಒತ್ತು ಕೊಟ್ಟು ಹಾರ‍್ಡ್ ಎಂಬುದಾಗಿ ಉಲಿದರೆ ಬ್ರಿಟೀಶರು ’r’ ಬಿಟ್ಟು ಹಾಹ್ಡ್ ಎಂಬುದಾಗಿ ಉಲಿಯುತ್ತಾರೆ. ಇದೇ ತೆರನಾದ ಬೇರೆ ಬೇರೆ ವ್ಯತ್ಯಾಸಗಳೂ ಇವೆ.

ಇವರೆಡರ ನಡುವೆ ಎಶ್ಟೇ ಎಡೆಯಿದ್ದರೂ ಜಗತ್ತಿನಲ್ಲಿ ಇಂಗ್ಲಿಶ್ ನುಡಿ ಕಲಿಯುವವರಿಗೆ ಈ ಒಳನುಡಿಗಳೇ ಸ್ಟಾಂಡರ‍್ಡ್ ಎಂದು ನಂಬುತ್ತಾರೆ ಮತ್ತು ಅದನ್ನೇ ಹಿಂಬಾಲಿಸಲು ಬಯಸುತ್ತಾರೆ. ಅಂದರೆ ಬಾರತದಲ್ಲಾಗಲೀ ನಯ್ಜೀರಿಯಾದಲ್ಲಾಗಲೀ ಮಾತಾಡುವ ಇಂಗ್ಲಿಶ್ ಬದಲಾವಣೆ ಆದರೂ ಕೂಡ ಅದು ಸ್ಟಾಂಡರ‍್ಡ್ ಇಂಗ್ಲಿಶಿನಲ್ಲಿ ಆಗುವ ಬದಲಾವಣೆ ಎಂದು ಅನಿಸಿಕೊಳ್ಳುವುದಿಲ್ಲ.

ಇಂಗ್ಲಿಶಿನ ಹೆಸರುವಾಸಿ ನಲ್ಬರಹಗಾರನಾದ ಶೇಕ್ಸ್‌ಪಿಯರ್‍ ಬಳಸಿರುವ ಕೆಲವು ಸೊಲ್ಲುಗಳನ್ನು ತೆಗೆದುಕೊಳ್ಳೋಣ:

1. “Anon, good nurse! Speak!”

2. We must leave ere daybreak.

3. I fain would bake Mr. Love cookies if I could get an A.

4. Hark to the owl.

5. Hie thee hence, or lose your life!

6. Come hither, young lad.

7. Return to whence you came.

8. Wherefore dost thou leave?

ಮೇಲಗಡೆ ದಪ್ಪದಾಗಿ ಬರೆಯಲಾಗಿರುವ ಪದಗಳು ಈಗಿನ ಇಂಗ್ಲಿಶಿನಲ್ಲಿ ಬಳಕೆಯಲ್ಲಿಲ್ಲ. ಅವುಗಳ ಹುರುಳು ಈಗ ಹೀಗೆ ಬದಲಾಗಿವೆ – right now, before, gladly, listen, away, here, from where, why.

ಬಾಶೆಗಳ ಕಾಲಾನುಕಾಲದ ಬದಲಾವಣೆಗೆ ಮುಕ್ಯವಾದ ಕಾರಣ ಉಲಿ ಮಾರ‍್ಪುಗಳು(sound changes) ಎಂದು ನುಡಿಯರಿಗರು ಹೇಳುತ್ತಾರೆ. ಅಂದರೆ ಒಂದು ಶಬ್ದ/ಉಲಿ ಮಾರ‍್ಪಾಟಿನ ಪಲವಾಗಿ ಉಲಿಕಂತೆಗಳು(syllable) ಮಾರ‍್ಪಾಟಾಗುತ್ತವೆ. ಉಲಿಕಂತೆಗಳ ಬಳಿಕ ಪದಗಳು(words) ಬದಲಾಗುತ್ತವೆ. ಹೀಗೆ ನುಡಿ(language) ಮಾರ‍್ಪಾಟುಗುತ್ತದೆ (sound->syllable->word->language)

ಒಂದೇ ಬೇರಿನಿಂದ ಕವಲಾದ ಎರಡು ಬೇರೆ ಬೇರೆ ನುಡಿಗಳಲ್ಲಿಯೂ ಉಲಿ ಮಾರ‍್ಪು ಮತ್ತು ಸೊಲ್ಲರಿಮೆಯ ಕಾರಣದಿಂದ ಎಡೆಗಳು ಕಾಣಸಿಗುತ್ತವೆ. ಶೇಕ್ಸ್‌ಪಿಯರ್‍ ಹೊತ್ತಿನಲ್ಲಿ ಮಾತನಾಡುತ್ತಿದ್ದ ಇಂಗ್ಲಿಶನ್ನು ಈಗ ಕೇಳಿದರೆ ಅದು ಅಯ್ರಿಶ್, ಯಾರ‍್ಕ್‌ಶಯರ್‍ ಮತ್ತು ಪಡುನಾಡು ಇಂಗ್ಲಿಶಿನ ಬೆರಕೆಯ ಹಾಗೆ ಅನಿಸುತ್ತದೆ ಎಂದು ಹೇಳುತ್ತಾರೆ ಅರಕೆಗಾರರು. ಇದರ ತಿರುಳೇನೆಂದರೆ ಮಾತನಾಡುವ ನುಡಿಗಳು ಯಾವಾಗಲೂ ಬದಲಾವಣೆಯಾಗುತ್ತದೆ. ಆದರೆ ಅದು ಎಲ್ಲಿ ತವರು ನುಡಿಯಾಗಿರುತ್ತದೋ ಅಲ್ಲಿ ನಡೆಯುವ ಮಾರ‍್ಪಾಟುಗಳೇ ಮೇಲ್ಮೆಯನ್ನು ಕಂಡುಕೊಳ್ಳುತ್ತವೆ.

ಹಾಗಾಗಿ ಇಂಗ್ಲಿಶನ್ನು ಒಂದು ಮುಕ್ಯವಾದ ನುಡಿಯಾಗಿ ಬಳಸುತ್ತಿರುವ ದೇಶಗಳು ಇಂಗ್ಲೆಂಡಿನಲ್ಲಿ ಅತವಾ ಅಮೇರಿಕಾದಲ್ಲಿ ಆದ ಬದಲಾವಣೆಗಳನ್ನು ತಮ್ಮಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಅಂಕಿ-ಅಂಶಗಳ ಪ್ರಕಾರ ಬಾರತದಲ್ಲಿ ಇಂಗ್ಲಿಶ್ ಬಲ್ಲವರ ಸಂಕ್ಯೆ ಸರಿಸುಮಾರು ನೂರಕ್ಕೆ 8 ಮಂದಿ. ಕನ್ನಡಿಗರಲ್ಲಿಯೂ ಹೆಚ್ಚು ಕಡಿಮೆ ಅದೇ ಅಂಕಿ ಅಂಶಗಳನ್ನು ಕಾಣಬಹುದು. ಅಂದರೆ ಕರ‍್ನಾಟಕದ ಎಲ್ಲಾ ಮಂದಿ ಇಂಗ್ಲಿಶ್ ಕಲಿಯಬೇಕಾದರೆ ಇನ್ನೂ ಸಾಕಶ್ಟು ವರುಶಗಳು ಬೇಕಾಗುತ್ತದೆ. ಅಶ್ಟು ವರುಶಗಳ ಬಳಿಕ ಇಂಗ್ಲಿಶ್ ಕಲಿತರೂ ತೊಡಕಿದೆ.

ನೂರು ವರುಶಗಳ ಬಳಿಕ ಕನ್ನಡಿಗರು ಇಂಗ್ಲಿಶ್ ಕಲಿತು ಅದನ್ನು ಚೆನ್ನಾಗಿ ಬಳಸುವ ತಿಳಿವಳಿಕೆ ಹೊಂದಿರುವರು ಎಂದು ಇಟ್ಟುಕೊಳ್ಳೋಣ. ಇದೇ ಗಡುವಿನಲ್ಲಿ ಮುಂಚೆ ಹೇಳಿದಂತೆ ಇಂಗ್ಲೆಂಡ್/ಅಮೇರಿಕಾದ ಇಂಗ್ಲಿಶಿನಲ್ಲಿ ಹೆಚ್ಚು ಹೆಚ್ಚು ಬದಲಾವಣೆಗಳಾಗಿರುತ್ತದೆ. ಆಗ ಮತ್ತೆ ಕೋಟಿ ಕೋಟಿ ಮಂದಿ ಹೊಸದಾದ ಇಂಗ್ಲಿಶನ್ನು ಕಲಿಯಬೇಕಾಗಬಹುದು. ಹೀಗಾದಾಗ ನಾವು ಎಂದಿಗೂ ಅವರ ಹಿಂಬಾಲಕರಾಗಿಯೇ ಉಳಿದುಬಿಡುತ್ತೇವೆ.

ಇದಕ್ಕೆ ಬಗೆಹರಿಕೆ ಇದೆ. ಜಪಾನ್, ಕೊರಿಯಾ, ಜರ‍್ಮನಿ, ಪಿನ್ಲಾಂಡ್ ಮುಂತಾದ ಮುಂದುವರಿದ ನಾಡುಗಳಲ್ಲಿ ಕಲಿಕೆ ಏರ‍್ಪಾಟುಗಳು ತಾಯ್ನುಡಿಯಲ್ಲಿಯೇ ಕಟ್ಟಲಾಗಿವೆ. ಕಲಿಕೆ ತಾಯ್ನುಡಿಯಲ್ಲಿ ಗಟ್ಟಿಯಾಗಿರುವ ಕಾರಣ ಅಲ್ಲಿನ ಹಣಕಾಸು ವ್ಯವಸ್ತೆ, ಉದ್ದಿಮೆ ವ್ಯವಸ್ತೆ, ಆಡಳಿತ ವ್ಯವಸ್ತೆ, ಆಳ್ವಿಕೆ ವ್ಯವಸ್ತೆ, ನ್ಯಾಯಾಂಗ ವ್ಯವಸ್ತೆ ಮುಂತಾದವು ಅಲ್ಲಿನ ತವರು ನುಡಿಯಲ್ಲಿಯೇ ಕಟ್ಟಲಾಗುತ್ತದೆ. ಇದು ಬಾಶೆ ಗಟ್ಟಿಪಡಿಸುವುದೊಂದೇ ಅಲ್ಲದೆ ನೂರಕ್ಕೆ ನೂರು ಮಂದಿ ಅದರ ಅನುಕೂಲ ಪಡೆದು ಮಂದಿಯಾಳ್ವಿಕೆಯ ನಿಜವಾದ ಸ್ವರೂಪವನ್ನು ನೆಲೆಗೊಳಿಸಿದಂತಾಗುತ್ತದೆ.

ಈ ವ್ಯವಸ್ತೆಯ ಚವ್ಕಟ್ಟಿನಲ್ಲಿ ಬೆಳೆದ ನಾಡಿಗರು ತಮ್ಮ ತಮ್ಮ ರಂಗಗಳಲ್ಲಿ ನುಡಿಬಳಕೆಯನ್ನು ಹೆಚ್ಚಿಸಿ ನಾಡಿನ ನೆಲ, ನೀರು, ಅದಿರು ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳುತ್ತಾರೆ. ಈ ರೀತಿ ನಮ್ಮ ಕರ‍್ನಾಟಕದಲ್ಲಿ ಮತ್ತು ಬಾರತದ ಇತರೆ ರಾಜ್ಯಗಳಲ್ಲಿಯೂ ಆಗಬೇಕಿದೆ. ಆಗಲೇ ನಮ್ಮದು ಏಳಿಗೆ ಹೊಂದಿರುವ ನಾಡು ಎನಿಸಿಕೊಳ್ಳುವುದು.

(ತಿಟ್ಟಸೆಲೆ: linguistics research)

ನಿಮಗೆ ಹಿಡಿಸಬಹುದಾದ ಬರಹಗಳು

7 Responses

  1. Shashi Kumar says:

    ಪ್ರಿಯ ರಗು, ನಾವು ಇಂಗ್ಲಿಶ್ ಬೇಡ, ನಮ್ಮ ನುಡಿಯೇ ಮೇಲು ಎಂದು ಎಶ್ಟೇ ಹೇಳಿದರೂ, ಯಾವುದೇ ದೇಶದ ಉದಾಹರಣೆ ಕೊಟ್ಟರೂ, ಇಂಗ್ಲಿಶ್ ಇಂದು ನಮ್ಮ ನುಡಿಯೇ ಆಗಿಹೋಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈಗ ಇಂಗ್ಲಿಶ್ ಬಗ್ಗೆ ಮಾತಾಡದೆ ಕನ್ನಡದ ಬಗ್ಗೆ ಮಾತಾಡಲಿಕ್ಕಾಗುವುದಿಲ್ಲ. ನಮ್ಮ ನುಡಿಯನ್ನ ಚೆನ್ನಾಗಿ ಕಲಿಯಬೇಕು ಎನ್ನುವ ಮಾತನ್ನು ಯಾವ ನುಡಿಯರಿಗರೂ ತಳ್ಳಿಹಾಕಲಾರರು. ಆದರೆ, ನಾವು ಮರೆಯುವುದೆಂದರೆ ಜಪಾನ್, ಕೊರಿಯಾ, ಜರ‍್ಮನಿ, ಪಿನ್ಲಾಂಡ್ ನಂತಹ ನಾಡುಗಳು ವಸಾಹತುಶಾಹಿ ಆಡಳಿತಕ್ಕೊಳಪಟ್ಟಿರಲಿಲ್ಲ ಎನ್ನುವುದು. ಹಾಗಾಗಿ, ಭಾರತದ ಹಾಗೂ ಜಪಾನ್, ಕೊರಿಯಾ, ಜರ‍್ಮನಿ, ಪಿನ್ಲಾಂಡ್ ದಂತಹ ನಾಡುಗಳ ಹೋಲಿಕೆ ಸರಿಹೋಗಲಾರದು. ತಾವು ಕಾಮನ್ ವೆಲ್ತ್ ನಾಡುಗಳ ಹೋಲಿಕೆ ಕೊಟ್ಟರೆ ಅದು ತಕ್ಕನಾದುದು. ಹಾಗೆಯೇ, ಅಮೆರಿಕ ಮತ್ತು ಇಂಗ್ಲೆಂಡಿನ ಇಂಗ್ಲಿಶ್ ಬಗ್ಗೆ ಮಾತಾಡುವಾಗ ನಾವು ವೆಬ್ ಸ್ಟರ್ ಮಹಾಶಯನ ಬಗ್ಗೆ ಮಾತನಾಡದೇ ಇರಲಾಗುವುದಿಲ್ಲ. ಯಾಕೆಂದರೆ, ಇಂದು ಅಮೆರಿಕ ಇಂಗ್ಲಿಶ್ ತನ್ನದೇ ಆದ ಐಡೆಂಡಿಟಿ ಹೊಂದಿದೆಯೆಂದರೆ ಅದಕ್ಕೆ ಆತನೇ ಕಾರಣ. ಆತ ರೂಪಿಸಿದ ನಿಗಂಟುವೇ ಕಾರಣ. ಇನ್ನು, ಇಂಗ್ಲಿಶ್ ನಲ್ಲಿ ನೂರಾರು ಜಾತಿಗಳಿವೆ. ಇಂಗ್ಲೆಂಡ್ ಪಕ್ಕದ ನಾಡಾದ ಐರ್ಲೆಂಡ್ ನಲ್ಲಿ ಇಂಗ್ಲಿಶ್ ಬೇರೆಯದೇ ಆಗಿದೆ. ಐರ್ಲೆಂಡ್ ಯೇಟ್ಸ್, ಸಿಂಗ್ ನಂತಹ ನಲ್ಬರಹಗಾರರನ್ನು ನೀಡಿದೆ. ಇಂಗ್ಲಿಶ್ ನ ಇತರೆ ಮುಕ್ಯ ಜಾತಿಗಳು – ಸೌತ್ ಆಫ್ರಿಕನ್, ಆಸ್ಟ್ರೇಲಿಯನ್, ಆಫ್ರಿಕನ್, ಏಶ್ಯನ್ ಮುಂತಾದವು. ಈಗ ನಮ್ಮ ಮುಂದಿರುವ ಪ್ರಶ್ನೆ ಇಂಗ್ಲಿಶನ್ನು ತೊಡೆದುಹಾಕಿ ಕನ್ನಡ ಕಟ್ಟುವುದಲ್ಲ. ಕನ್ನಡ ಕಟ್ಟಲು ಇಂಗ್ಲಿಶನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು. ಅದಕ್ಕಿಂತ ಮುಕ್ಯವಾಗಿ ಎಶ್ಟು ಜನ ಕನ್ನಡಿಗರಿಗೆ ಕನ್ನಡ ಓದಲು, ಬರೆಯಲು ಬರೆಯುತ್ತದೆ ಹಾಗೂ ತಮ್ಮ ದಿನ ಬದುಕಿನಲ್ಲಿ ಹೇಗೆ ಮತ್ತು ಎಲ್ಲಿ ಕನ್ನಡವನ್ನು ಬಳಸಿಕೊಳ್ಳಬೇಕು ಎನ್ನುವುದು. ಕನ್ನಡದಲ್ಲೇ ಎಲ್ಲವನ್ನು ಮಾಡಬೇಕೆನ್ನುವವರಿಗೆ ಹೇಗೆ ವಿಶ್ವಕೋಶವನ್ನು ಒದಗಿಸಬೇಕೆನ್ನುವುದು. ಹೌದು, ತಂತ್ರಗ್ನಾನದ ಅಳವಡಿಕೆಯ ಜರೂರು ಕೂಡ ಇದ್ದೇ ಇದೆ. ಕನ್ನಡವನ್ನು ಹೀಗೆ ಗಟ್ಟಿಗೊಳಿಸಿದಲ್ಲಿ, ಯಾರೂ ಇಂಗ್ಲಿಶ್ ಬೆನ್ನುಹತ್ತಿ ಹೋಗುವುದಿಲ್ಲ.

  2. ಶಶಿಕುಮಾರ್ ಅವರೇ,
    ತಾಯ್ನುಡಿಯ ಏಳಿಗೆಯ ಜೊತೆ ನಾಡಿನ ಏಳಿಗೆಯ ನಂಟಿಗೆ ರಗುನಂದನ್ ಅವರು ಕೊಟ್ಟಿರುವ ಎತ್ತುಗೆಗಳು ಸರಿಯಾಗಿಯೇ ಇವೆ. ನೀವು ಹೇಳುತ್ತಿರುವ ಕಾಮನ್ ವೆಲ್ತ್ ಗಳ ಎತ್ತುಗೆಯನ್ನು ತೆಗೆದುಕೊಂಡರೂ ಕತೆ ಬೇರೆಯೇನೂ ಆಗುವುದಿಲ್ಲ. ಯಾವ ಯಾವ ಕಾಮನ್ ವೆಲ್ತ್ ನಾಡುಗಳಲ್ಲಿ ಇಂಗ್ಲಿಶ್ ಮೂಲದ ಬಿಳಿಯರು ಹೆಚ್ಚಿರುವರೋ ಅವುಗಳಲ್ಲಿ ಇಂಗ್ಲಿಶ್ ತಾಯ್ನುಡಿಯಂತೆಯೇ ಕೆಲ್ಸ ಮಾಡಿದೆ. ಆ ನಾಡುಗಳ ಏಳಿಗೆಯಾಗಿದೆ. ಎತ್ತುಗೆಗೆ, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಕೆನಡಾ, ಅಮೇರಿಕಾ. ಯಾವ ಯಾವ ಕಾಮನ್ ವೆಲ್ತ್ ದೇಶಗಳಲ್ಲಿ ಇಂಗ್ಲಿಶ್ ಮೂಲದ ಬಿಳಿಯರು ಇಲ್ಲವೋ ಅತವಾ ಬಹಳ ಕಮ್ಮಿ ಇರುವರೋ ಆ ದೇಶಗಳಲ್ಲಿ ಇಂಗ್ಲಿಶ್ ಅರಿವಿನ ಒಯ್ಯುಗೆಯಾಗಿ ಉಳಿದುಕೊಂಡು ತಾಯ್ನುಡಿಗಳ ಏಳಿಗೆಯಾಗದೆ ನಾಡುಗಳೂ ಹಿಂದುಳಿದಿವೆ. ಎತ್ತುಗೆಗೆ, ಇಂಗ್ಲಿಶರ ತೆಕ್ಕೆಯಲ್ಲಿದ್ದ ಬಾರತದ ಮತ್ತು ಆಪ್ರಿಕಾದ ನಾಡುಗಳು. ಕಾಮನ್ ವೆಲ್ತ್ಗಳ ಹೊರಗೆ ಹೋಗಿ ಕೊರಿಯಾ ಮತ್ತು ಪಿಲಿಪಯ್ನ್ಸ್ ನಡುವೆ ಹೋಲಿಕೆ ನೋಡಿ. ಅಮೇರಿಕಾದ ಜೊತೆ ಇವೆರಡೂ ಒಂದೇ ತೆರನಾದ ಹಿನ್ನಡವಳಿ ಹೊಂದಿವೆ. ವೆತ್ಯಾಸ ತಾಯ್ನುಡಿಯ ಬಳಕೆಯಲ್ಲಿ ಇದೆ. ತಾಯ್ನುಡಿ ಬಳಸುವ ಕೊರಿಯಾ ಏಳಿಗೆಯಾಗಿದೆ. ಇಂಗ್ಲಿಶ್ ಬಳಸುವ ಪಿಲಿಪಯ್ನ್ಸ್ ಏಳಿಗೆಯ ಕನಸೂ ಕಾಣಲಾರದು.

  3. Shashi Kumar says:

    ಸಿದ್ದರಾಜುರವರೇ, ತಾಯ್ನುಡಿಯನ್ನು ಬಳಸುವುದರಿಂದ ಮಾತ್ರ ಏಳಿಗೆ ಸಾದ್ಯ ಎನ್ನುವುದು ಒಪ್ಪಲಾಗದ ಮಾತು. ನಾನು ಇಂಗ್ಲಿಶನ್ನೂ ಬಳಸಿಕೊಂಡು ಕನ್ನಡವನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಿದ್ದೇನೆ. ತಾಯ್ನುಡಿಯನ್ನು ಬಳಸಬಾರದು ಎಂದು ಎಲ್ಲೂ ಹೇಳಿಲ್ಲ. ನಮ್ಮ ದಿನದ ಬದುಕಿನಲ್ಲಿ ನಾವೆಲ್ಲ (ಎಂದರೆ ನೀವು, ನಾನು ಮಾತ್ರವಲ್ಲ) ಅಂದರೆ ಕನ್ನಡಿಗರೆಲ್ಲ ಎಶ್ಟರ ಮಟ್ಟಿಗೆ ಕನ್ನಡ ಬಳಸುತ್ತಿದ್ದೇವೆ ಎಂಬುದು ತುಂಬ ಮುಕ್ಯ. ತಾಯ್ನುಡಿಗಳನ್ನು ಬಳಸಿಕೊಂಡು ಏಳಿಗೆ ಹೊಂದಲು ಮೊದಲನೆಯದಾಗಿ ತಾಯ್ನುಡಿಯಲ್ಲಿ ಜಗತ್ತಿನ ಎಲ್ಲ ಗ್ನಾನವೂ ದೊರೆಯುವಂತಾಗಬೇಕು. ಆ ಕೆಲಸವನ್ನು ನಾವೆಲ್ಲ ಇಂಗ್ಲಿಶ್ ಮೂಲಕವೇ ಮಾಡಬೇಕಾಗಿ ಬರುತ್ತದೆ ಎಂದರೆ ತಪ್ಪೇನಲ್ಲ. ಈ ಕನ್ನಡ ನುಡಿಯ ಬಳಕೆ ನಮ್ಮ ರುಜುವಿನಿಂದ ಶುರುವಾಗಬೇಕು. ನೀವು ಬೇಕಾದರೆ ಸರ್ವೇ ಮಾಡಿ. ನಮ್ಮ ನಾಡಿನಲ್ಲಿ ಎಶ್ಟು ಜನ ಓದಿರುವವರು(ಅಂದರೆ Educated, literates ಅಲ್ಲ) ಕನ್ನಡದಲ್ಲಿ ರುಜುಮಾಡುತ್ತಾರೆಂದು. ಆಗ ನಿಮಗೇ ತಿಳಿದೀತು ನಮ್ಮ ತಾಯ್ನುಡಿಯ ಒಲವು ಎಶ್ಟು ಬೂಟಾಟಿಕೆಯದೆಂದು. ತಾಯ್ನುಡಿಯನ್ನು ಬಳಸಿಕೊಂಡು ಏಳಿಗೆಯಾಗಬೇಕಾದರೆ ನಾಡಿನ ಜನರು ತಮ್ಮ ತಾಯ್ನುಡಿಯನ್ನು ಪ್ರೀತಿಸುವುದರಿಂದ ಮೊದಲುಗೊಂಡು, ನಾಡನಾಳುವ ಸರಕಾಗಳು ಆ ಪ್ರೀತಿಯ ಸಸಿಯನ್ನು ಬೆಳೆಸುವ, ಎಂದರೆ ನೀರು, ಗೊಬ್ಬರು ಮುಂತಾದವನ್ನು ಒದಗಿಸುವ ಕೆಲಸ ಮಾಡಬೇಕಾಗುತ್ತದೆ. ಜರ್ಮನಿಯ ಜನ ಹೇಗೆ ತಮ್ಮ ನುಡಿಯನ್ನು ಪ್ರೀತಿಸುವರೋ, ಹೇಗೆ ತಮ್ಮ ದೇಶಕ್ಕೆ ಓದಲು, ಕೆಲಸ ಮಾಡಲು ಬರುವವರು ಜರ್ಮನ್ ಕಲಿಯಲೇಬೇಕು ಎಂಬ ಶರತ್ತನ್ನು ಹಾಕುವರೋ, ಹೇಗೆ ಇಡೀ ಯುರೋಪು ಕಂಡದಲ್ಲಿ ಇಂಗ್ಲಿಶ್ ಗೆ ಸವಾಲು ಹಾಕಿ ತಾನು ಇಂಗ್ಲಿಶಿಗಿಂತ ಏನೂ ಕಮ್ಮಿಯಿಲ್ಲ ಎದು ತೋರಿಸಿಕೊಡಬೇಕು. ಹಾಗಾಗದ ಹೊರತು, ನಾವೇನೇ ಹೇಳಿದರೂ ಇದು ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗಾಗುತ್ತದಶ್ಟೆ.ನೀವು ದಯಮಾಡಿ ನಾನು ಏನು ಹೇಳಬಯಸುತ್ತಿದ್ದೇನೆಂದು ತಿಳಿಯಲು ನೋಡಿ, ಆಗ ನಿಮಗೇ ತಿಳಿಯುತ್ತದೆ ದಿಟ ಏನೆಂದು. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ಯಾವುದು ಸರಿ, ಯಾವುದ ತಪ್ಪು ಎನ್ನುವುದಶ್ಟೆ ಮುಕ್ಯ. “ನೂರು ವರುಶಗಳ ಬಳಿಕ ಕನ್ನಡಿಗರು ಇಂಗ್ಲಿಶ್ ಕಲಿತು ಅದನ್ನು ಚೆನ್ನಾಗಿ ಬಳಸುವ ತಿಳಿವಳಿಕೆ ಹೊಂದಿರುವರು ಎಂದು ಇಟ್ಟುಕೊಳ್ಳೋಣ. ಇದೇ ಗಡುವಿನಲ್ಲಿ ಮುಂಚೆ ಹೇಳಿದಂತೆ ಇಂಗ್ಲೆಂಡ್/ಅಮೇರಿಕಾದ ಇಂಗ್ಲಿಶಿನಲ್ಲಿ ಹೆಚ್ಚು ಹೆಚ್ಚು ಬದಲಾವಣೆಗಳಾಗಿರುತ್ತದೆ. ಆಗ ಮತ್ತೆ ಕೋಟಿ ಕೋಟಿ ಮಂದಿ ಹೊಸದಾದ ಇಂಗ್ಲಿಶನ್ನು ಕಲಿಯಬೇಕಾಗಬಹುದು. ಹೀಗಾದಾಗ ನಾವು ಎಂದಿಗೂ ಅವರ ಹಿಂಬಾಲಕರಾಗಿಯೇ ಉಳಿದುಬಿಡುತ್ತೇವೆ.” ಹಾಗಾಗಲಿಕ್ಕೆ ಯಾವ ಕುರುಹುಗಳೂ ಇಲ್ಲ. ಮೊದಲು ನಮ್ಮ ನಾಡಿನಲ್ಲಿಯೇ ಎಶ್ಟು ಜನಕ್ಕೆ ಕನ್ನಡ ಅಚ್ಚುಕಟ್ಟಾಗಿ ಬರುತ್ತೆ ಎಂದು ಸರ್ವೇ ಮಾಡಿ ನೋಡಿ. ಎಲ್ಲರ ಮಾತಿರಲಿ, ಕನ್ನಡ ಎಂಎ ಮಾಡಿರುವ ಜನರನ್ನೇ ಒರೆಹಚ್ಚಿ ನೋಡಿ. ತಮಗೆ ತಿಳಿದಿರಲಿ, ಕನ್ನಡದ ಎಂಟು ಗ್ನಾನಪೀಟಗಳೂ ಇಂಗ್ಲಿಶ್ ನಲ್ಲಿ ಸಾಕಶ್ಟು ಪರಿಣತಿ ಹೊಂದಿದವರೇ. ಲಂಕೇಶ್, ಅಡಿಗರೂ ಕೂಡ ಇಂಗ್ಲಿಶ್ ಮೇಸ್ಟ್ರುಗಳೇ. ಅಂತ ಎತ್ತುಗೆಗಳು ಎಶ್ಟೋ ಸಿಗುತ್ತವೆ. ಆ ಕಾರಣಕ್ಕೆ ಹೇಳಿದ್ದು, ಇಂಗ್ಲಿಶ್ ಬಳಸಿಕೊಂಡು ಕನ್ನಡ ಕಟ್ಟುವ, ಯಾವ ಮಟ್ಟಿಗೆ ಎಂದರೆ ಇಂಗ್ಲಿಶ್ ಇಲ್ಲದೆಯೇ ನಾವು ಏಳಿಗೆ ಸಾದಿಸಬಲ್ಲೆವು ಎನ್ನುವ ಮಟ್ಟಿಗೆ ನಾವು ಕನ್ನಡವನ್ನು ಬಲಪಡಿಸಬೇಕಿದೆ. ಅದು ನಾವೆಲ್ಲ ಸೇರಿಮಾಡಬೇಕಾದ ಕೆಲಸ. ಇದು ಇಡೀ ಕನ್ನಡ ಜನತೆಯ ಕೆಲಸ. ಮೊದಲು ಆ ಕೆಲಸವಾಗಬೇಕು.

  4. Shashi Kumar says:

    ನಮ್ಮ ನಡುವಿನ ದೊಡ್ಡ ನುಡಿಯರಿಗರಲ್ಲೊಬ್ಬರಾದ ಶ್ರೀಧರ್ ರವರು ಹೇಳುವುದನ್ನು ಕೇಳಿ: “Japan, Korea, Finland, etc are not massively multilingual nations like India. A third major difference is the scale. Often India is compared with Singapore, Korea, and Taiwan (re. Growth rate, etc)!” ಅರಕೆಯ ವಿಶಯಕ್ಕೆ ಬಂದಾಗಲಂತೂ ಈ ಬರೆಹದಲ್ಲಿ ಎದ್ದುಕಾಣುವ ತಪ್ಪುಗಳಿವೆ. “ಇಂಗ್ಲಿಶನ್ನು ಒಂದು ಮುಕ್ಯವಾದ ನುಡಿಯಾಗಿ ಬಳಸುತ್ತಿರುವ ದೇಶಗಳು ಇಂಗ್ಲೆಂಡಿನಲ್ಲಿ ಅತವಾ ಅಮೇರಿಕಾದಲ್ಲಿ ಆದ ಬದಲಾವಣೆಗಳನ್ನು ತಮ್ಮಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಅಂಕಿ-ಅಂಶಗಳ ಪ್ರಕಾರ ಬಾರತದಲ್ಲಿ ಇಂಗ್ಲಿಶ್ ಬಲ್ಲವರ ಸಂಕ್ಯೆ ಸರಿಸುಮಾರು ನೂರಕ್ಕೆ 8 ಮಂದಿ. ಕನ್ನಡಿಗರಲ್ಲಿಯೂ ಹೆಚ್ಚು ಕಡಿಮೆ ಅದೇ ಅಂಕಿ ಅಂಶಗಳನ್ನು ಕಾಣಬಹುದು. ಅಂದರೆ ಕರ‍್ನಾಟಕದ ಎಲ್ಲಾ ಮಂದಿ ಇಂಗ್ಲಿಶ್ ಕಲಿಯಬೇಕಾದರೆ ಇನ್ನೂ ಸಾಕಶ್ಟು ವರುಶಗಳು ಬೇಕಾಗುತ್ತದೆ. ಅಶ್ಟು ವರುಶಗಳ ಬಳಿಕ ಇಂಗ್ಲಿಶ್ ಕಲಿತರೂ ತೊಡಕಿದೆ.” ನುಡಿಯ ಕಲಿಕೆಯ ವಿಶಯಕ್ಕೆ ಬಂದಾಗ 2013 ರಲ್ಲಿ ನೂರಕ್ಕೆ 8 ಜನರಶ್ಟೆ ಇಂಗ್ಲಿಶ್ ಬಲ್ಲರು ಹಾಗಾಗಿ ಉಳಿದ 92 ಮಂದಿ ಇಂಗ್ಲಿಶ್ ಕಲಿಯಲು ಇಶ್ಟು ವರುಶ ಬೇಕಾಗುತ್ತದೆ ಎಂದು ಹೇಳಲು ಸಾದ್ಯವೇ? ಕೇರಳದಲ್ಲಿ ನೂರಕ್ಕೆ ನೂರರಶ್ಟು ಅಕ್ಶರ ಬಲ್ಲವರಿದ್ದಾರೆ ಎನ್ನುವುದು ಅಂಕಿಅಂಶಗಳ ವಿಶಯಕ್ಕೆ ಬಂದಾಗ ಮುಕ್ಯವೇ ಹೊರತು, ಗುಣಮಟ್ಟದ ವಿಶಯಕ್ಕೆ ಬಂದಾಗಲಲ್ಲ. ನಾವೇನಾದರೂ 120 ಕೋಟಿ ಜನ ಅಕ್ಶರ ಬಲ್ಲವರು ಎಂದು ಹಾಗೇನಾದರೂ ಆಗಿದ್ದಲ್ಲಿ ಜಗತ್ತಿಗೆ ಸಾರಿಕೊಂಡಿದ್ದಲ್ಲಿ ಅದಕ್ಕಿಂದ ದಡ್ಡತನ ಇನ್ನೊಂದಿಲ್ಲ. ತಮಗೆ ತಿಳಿದಿರಲಿ, ನಮ್ಮ ದೇಶದ ದೊಡ್ಡ ದುರಂತವೆಂದರೆ, ಸಾಕ್ಶರ ಎಂದಾಗ ಕೇವಲ ತಮ್ಮ ಹೆಸರನ್ನು ಮಾತ್ರ ಬರೆಯಲು ಬರುವ ವ್ಯಕ್ತಿ ಕೂಡ ಸೇರಿಕೊಳ್ಳುತ್ತಾನೆ/ಳೆ. ಅಂತಹ ಸಾಕ್ಶರತೆಗಿಂತ ಕೇವಲ 10 ಕೋಟಿ ಜನರೇ ಆಗಿರಲಿ, ತಮ್ಮ ನುಡಿಯಲ್ಲಿ ಓದಲು, ಬರೆಯಲು, ಯೋಚಿಸಲು ಬರುವವರಿದ್ದರೆ ಸಾಕು. ಆಗ ಅದಕ್ಕಿಂತ ದೊಡ್ಡ ಏಳಿಗೆ ಮತ್ತೊಂದಿಲ್ಲ. ಅಂತಹ ಕೆಲಸ ನಮ್ಮ ನಾಡಿನಲ್ಲಿ ಆಗಬೇಕಿದೆ. ನಾವು ನಮ್ಮ ಜನರನ್ನು literate ಮಾಡುವುದಲ್ಲ, educate ಮಾಡುವುದು ಮುಕ್ಯ.ಅಲ್ಲಿಗೆ ಸುದಾರಿಸಬೇಕಿರುವುದು ಕಲಿಕೆಯ ಗುಣಮಟ್ಟವೇ ಹೊರತು ಕೇವಲ ಇಂಗ್ಲಿಶ್ ಯಾ ಕನ್ನಡ ನುಡಿಯಲ್ಲ.

  5. ಶಶಿಕುಮಾರ್ ಅವರೇ,

    ಇಲ್ಲಿ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಇಂಗ್ಲಿಶನ್ನು ಬಳಸಲೇ ಬಾರದು ಎಂದಾಗಲಿ ಇಂಗ್ಲಿಶಿನಲ್ಲಿರುವ ಅರಿವನ್ನು ಕನ್ನಡಕ್ಕೆ ತರಲೇ ಬಾರದು ಎಂದಾಗಲಿ ಇಂಗ್ಲಿಶಿನ ಹಂಗಿಲ್ಲದೆಯೇ ಕನ್ನಡ ಇಂದು ಬೆಳೆಯಬಲ್ಲುದು ಎಂದಾಗಲಿ ಯಾರೂ ಹೇಳುತ್ತಿಲ್ಲ – ಇದೆಲ್ಲಕ್ಕೂ ’ಹೊನಲು’ ಮಿಂಬಾಗಿಲೇ ಅಪವಾದ. ಹಾಗೆಯೇ, ಜರ‍್ಮನಿ ಮುಂತಾದ ದೇಶಗಳನ್ನು ಬಾರತಕ್ಕೆ ಹೋಲಿಸುವ ಮೂರ‍್ಕತನ ಇಲ್ಲಿ ಯಾರಿಗೂ ಇಲ್ಲ – ಅವುಗಳನ್ನು ಕರ‍್ನಾಟಕಕ್ಕೆ ಹೋಲಿಸುವುದೇ ಸರಿ; ಅದನ್ನೇ ರಗು ಅವರು ಮಾಡುವುದು ಎಂದು ನನಗೆ ನಂಬಿಕೆಯಿದೆ. ’ಇಂಗ್ಲಿಶ್ ನಮ್ಮ ನುಡಿಯೇ ಆಗಿಹೋಗಿದೆ’ ಎಂದು ಬಾರತದ ಎಲೀಟ್ ಜನರು ಹೇಳಿಕೊಳ್ಳುವ ಮಾತೇ ಹೊರತು ನೂರಿಪ್ಪತ್ತಯ್ದು ಕೋಟಿ ಬಾರತೀಯರು ಹೇಳುವ ಮಾತಲ್ಲ – ಹಾಗೆಯೇ ಕರ‍್ನಾಟಕಕ್ಕೂ ಅಂದುಕೊಳ್ಳಿ. ವಸಾಹತುಶಾಹಿಯ ಇತಿಹಾಸವನ್ನು ಮರೆಯುವಶ್ಟು ಪೆದ್ದರೂ ಇಲ್ಲಿ ಯಾರೂ ಇಲ್ಲ. ಆದರೆ ಅದನ್ನೇ ನೆನಪಿಸಿಕೊಳ್ಳುತ್ತ ಮಾಡಬೇಕಾದುದನ್ನು ಮರೆತಿಲ್ಲ, ಅಶ್ಟೇ.

  6. Shashi Kumar says:

    ಕಿರಣ್, ಚರ್ಚೆ ಖಂಡಿತ ಹಾದಿ ತಪ್ಪಿಲ್ಲ. ಇನ್ನು ಹೊನಲಿನ ಬಗ್ಗೆ ನನಗೆ ಸಾಕಶ್ಟು ಮೆಚ್ಚುಗೆ, ಒಲವು ಇದೆ. ಆ ಕಾರಣಕ್ಕೆ ನಾನು ಕೂಡ ಹೊನಲಿಗೆ ಒಂದೆರಡು ಬರೆಹಗಳನ್ನ ಬರೆದಿದ್ದೇನೆ. ಮುಂದೆಯೂ ಬರೆಯೋ ಇರಾದೆ ಇದೆ. ನಾನು ಇಲ್ಲಿ ಬರೆಹದಲ್ಲಿನ ತೊಡಕುಗಳ ಬಗ್ಗೆ ಅಲ್ಲಿಂದಲೇ ಸಾಲುಗಳನ್ನು ತೆಗೆದು ತೋರಿಸಿ ಅದು ಯಾಕೆ, ಹೇಗೆ ತೊಡಕಿನದು ಎಂದು ತೋರಿಸಿಕೊಡುವ ಕೆಲಸ ಮಾಡಿದ್ದೇನೆ. ನೀವು ದಯಮಾಡಿ ಬರೆಹದಲ್ಲಿನ ಹಾಗೂ ನನ್ನ ಅನಿಸಿಕೆಗಳನ್ನು ಅಳೆದು ತೂಗಿ ನೋಡಬಹುದು. ನಾನು ಎತ್ತಿರುವ ಕೇಳ್ವಿಗಳು, ಕೊಟ್ಟಿರುವ ಎತ್ತುಗೆಗಳು ಇಲ್ಲಿ ಮೂಡಿಬಂದಿರುವ ಬರೆಹಕ್ಕೆ ಯಾವ ರೀತಿಯಲ್ಲೂ ಹೊರತಾಗಿಲ್ಲ. ನೀವು ಬೇಕಿದ್ದರೆ ಯಾವುದೇ ನುಡಿಯರಿಗರನ್ನೂ ಕೇಳಬಹುದು. “ಇಂಗ್ಲಿಶ್ ನಮ್ಮ ನುಡಿಯೇ ಆಗಿಹೋಗಿದೆ’ ಎಂದು ಬಾರತದ ಎಲೀಟ್ ಜನರು ಹೇಳಿಕೊಳ್ಳುವ ಮಾತೇ ಹೊರತು ನೂರಿಪ್ಪತ್ತಯ್ದು ಕೋಟಿ ಬಾರತೀಯರು ಹೇಳುವ ಮಾತಲ್ಲ – ಹಾಗೆಯೇ ಕರ‍್ನಾಟಕಕ್ಕೂ ಅಂದುಕೊಳ್ಳಿ.” ತಮಾಶೆಗೆ ಹೇಳುವುದಾದರೆ, ಆ ನೂರಿಪ್ಪತ್ತೈದು ಕೋಟಿ ಬಾರತೀಯರಲ್ಲಿ ಎಲೀಟರನ್ನು ಎಲ್ಲಿಗೆ ಕಳಿಸಿದಿರಿ ಎಂದು ಕೇಳಬಹುದು. ಇರಲಿ, “ಇಂಗ್ಲಿಶ್ ನಮ್ಮ ನುಡಿಯೇ ಆಗಿಹೋಗಿದೆ” ಎಂದು ನಾನು ರಾಜಕಾರಣಿಗಳ ಹಾಗೆ ಹೇಳಿಕೆ ಕೊಟ್ಟಿಲ್ಲ. ನಾನು ಮೂರು ವರುಶಗಳ ಕಾಲ ಮಹಾರಾಜ ಕಾಲೇಜಿನಲ್ಲಿ ನುಡಿಯರಿಮೆ ಓದಿದವನು. ಓದಿದಕ್ಕಿಂತ ಹೆಚ್ಚಾಗಿ ನುಡಿಗಳ ಬಗ್ಗೆ ತಲೆಕೆಡಿಸಿಕೊಂಡವನು. ಬರೆದವನು. ಈಗಲೂ ಬರೆಯುತ್ತಲೇ ಇರುವವನು. ಸಾದ್ಯವಾದಶ್ಟು ಮಟ್ಟಿಗೆ ನನ್ನೆಲ್ಲ ಕೊಡುಕೊಳುವಿಕೆಯನ್ನು ಕನ್ನಡದಲ್ಲೇ ಮಾಡುವುದರಿಂದಾಗಿ ಹುಚ್ಚು ಕನ್ನಡಿಗ ಎಂದು ಕರೆಸಿಕೊಂಡನು. ಮೊದಲಿನಿಂದ ಎಂಟನೇ ಇಯತ್ತೆಯವರೆಗೆ ಕನ್ನಡದಲ್ಲೇ ಕಲಿತವನು. ಇಲ್ಲಿಯವರೆಗಿನ ನನ್ನ ಬಹುಪಾಲು ಬರೆಹಗಳು ಕನ್ನಡದಲ್ಲೇ ಇವೆ. ಮುಂದೆಯೂ ಹಾಗೆಯೇ ಇರುತ್ತವೆ. ಇರಲಿ, ನನ್ನ ಬಯೋಡೇಟಾದ ಜರೂರು ಇಲ್ಲಿಲ್ಲ. ಇಲ್ಲಿ ಚರ್ಚೆಯಾಗಬೇಕಿರುವುದು ವಿಶಯ. ವಸಾಹತುಶಾಹಿಯ ಇತಿಹಾಸವನ್ನು ನೀವು ಮರೆತಿದ್ದೀರಿ ಎಂದು ನಾನೆಲ್ಲೂ ಹೇಳಿಲ್ಲ. ಹಾಗೆಯೇ, ಯಾರೊಬ್ಬರನ್ನು ಪೆದ್ದು ಎಂದು ಕರೆಯುವ ಉದ್ದಟತನವನ್ನೂ ತೋರಿಲ್ಲ. ಕಡೆಯದಾಗಿ, “’ಇಂಗ್ಲಿಶ್ ನಮ್ಮ ನುಡಿಯೇ ಆಗಿಹೋಗಿದೆ’ ಎಂದು ಬಾರತದ ಎಲೀಟ್ ಜನರು ಹೇಳಿಕೊಳ್ಳುವ ಮಾತೇ ಹೊರತು ನೂರಿಪ್ಪತ್ತಯ್ದು ಕೋಟಿ ಬಾರತೀಯರು ಹೇಳುವ ಮಾತಲ್ಲ” ಎಂದು ಹೇಳಿದಿರಿ. ಅಂತಹ ಜನರಲೈಸೇಶನ್ನಿಗೆ ನಾನು ಹೋಗುವುದಿಲ್ಲ. ಇಲ್ಲಿ ಕೊಟ್ಟಿರುವ ಕೊಂಡಿಗೆ ಹೋಗಿ ನೋಡಿ. ಯಾರು ಏನು ಹೇಳುತ್ತಾರೆಂದು ನಿಮಗೇ ತಿಳಿಯುತ್ತದೆ.

    http://www.theguardian.com/education/2011/jan/11/learning-english-india-dalits-rahman

    ನಾನು ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಒಂದು ಶಕ್ತಿಯಾಗಿ ಬೆಳೆದಾಗ ಮಾತ್ರ ಅದರ ಏಳಿಗೆ ಸಾದ್ಯ. ಈ ಏಳಿಗೆಗೆ ಇಂದಿನ ಜಗದ ಶಕ್ತಿಯಾದ ಇಂಗ್ಲಿಶನ್ನು ಬೆಳೆಸಿಕೊಂಡು, ಅದನ್ನೂ ಮೀರಿ ಕನ್ನಡ ನಿಲ್ಲುವಂತೆ ಮಾಡುವ ಕೆಲಸ ಮಾಡೋಣ. ಶರಣು.

  7. // ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಒಂದು ಶಕ್ತಿಯಾಗಿ ಬೆಳೆದಾಗ ಮಾತ್ರ ಅದರ ಏಳಿಗೆ ಸಾದ್ಯ. ಈ ಏಳಿಗೆಗೆ ಇಂದಿನ ಜಗದ ಶಕ್ತಿಯಾದ ಇಂಗ್ಲಿಶನ್ನು ಬೆಳೆಸಿಕೊಂಡು, ಅದನ್ನೂ ಮೀರಿ ಕನ್ನಡ ನಿಲ್ಲುವಂತೆ ಮಾಡುವ ಕೆಲಸ ಮಾಡೋಣ. //

    ನಾನೂ ಇದನ್ನೇ ಹೇಳುತ್ತಿರುವುದು 🙂

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *