ಎಲ್ಲರಕನ್ನಡದಲ್ಲಿ ಮದುವೆಯ ಕರೆಯೋಲೆ!

– ರತೀಶ ರತ್ನಾಕರ

Wedding-Invitation

“ಸರ್, ನೀವು ಬರೆದಿರುವುದರಲ್ಲಿ ತುಂಬಾ ತಪ್ಪಿದೆ. ಅದು ಚಿಕ್ಕ ‘ಟ’ ಅಲ್ಲಾ ದೊಡ್ಡ ‘ಟ’ ಆಗ್ಬೇಕು, ಇಲ್ಲಾ ಅಂದ್ರೆ ತಪ್ಪಾಗುತ್ತೆ.” ಡಿಟಿಪಿಯ ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕುಳಿತು ನನ್ನ ಮದುವೆ ಕರೆಯೋಲೆಯ ಪದಗಳನ್ನು ಒತ್ತುತ್ತಿದ್ದ ಹುಡುಗಿಯಿಂದ ಬಂದ ಮಾತುಗಳಿವು. ಅದಕ್ಕೆ ನಾನೆಂದೆ “ಚಿಕ್ಕ ‘ಟ’ ಮತ್ತು ದೊಡ್ಡ ‘ಟ’ ಎಂದು ಎರಡು ಬಾರಿಯೂ ನೀವು ‘ಟ’ಎಂದೇ ಹೇಳುತ್ತಿದ್ದೀರಿ, ದೊಡ್ಡ ‘ಟ’ ಎಂದು ಹೇಳುವಾಗ ಎಲ್ಲಿಯೂ ನೀವು “ಠ” ಎಂದು ಮಹಾಪ್ರಾಣವನ್ನು ಉಲಿಯಲೇ ಇಲ್ಲ!.”

ಅದು ನನ್ನ ಮದುವೆಯ ಹೊತ್ತು, ‘ಸ್ವಸ್ತಿ ಶ್ರೀ ನಂದನ ನಾಮ ಸಂವತ್ಸರದ….” ಎಂದು ಮೊದಲಾಗುವ, ಓದಿದರೆ ಎಲ್ಲವೂ ತಿಳಿಯಲಾಗದ ಮದುವೆಯ ಕರೆಯೋಲೆಯನ್ನು ಮನೆಯಲ್ಲಿ ಮಾಡಿಸಿದ್ದರು. ಗೆಳೆಯರು ಹಾಗು ಒಡಕೆಲಸಗಾರರನ್ನು ಕರೆಯಲು ಬೇರೆಯದೇ ಕರೆಯೋಲೆಯನ್ನು ಮಾಡಿಸಲು ನಾನು ತೀ‍‍ರ‍್ಮಾನಿಸಿದೆ. ಅದು ಎಲ್ಲರಿಗು ತಿಳಿಯುವಂತೆ ಸುಲಬವಾಗಿರುವ ಕನ್ನಡದಲ್ಲಿ ಇರಬೇಕೆಂದು ಬಯಸಿದೆ. ಬರೆಯುವ ಗೀಳಿದ್ದರಿಂದ ಒಂದು ಸಣ್ಣ ಪದ್ಯವನ್ನು ಕನ್ನಡದ್ದೇ ಪದಗಳನ್ನು ಬಳಸಿ ಕಟ್ಟಿದೆ. ಕನ್ನಡದ್ದೇ ಬೇರಿನ ಪದಗಳನ್ನು ಮಾತ್ರ ಬಳಸಿದ್ದರಿಂದ ಅಲ್ಲಿ ಎಲ್ಲಿಯೂ ಮಹಾಪ್ರಾಣಗಳು ಬೇಕಾಗಿರಲಿಲ್ಲ. ಆದರೆ ತೊಡಕು ಬಂದಿದ್ದೇ ಮದುವೆ ನಡೆಯುವ ಜಾಗದ ಹೆಸರನ್ನು ಬರೆಯುವಾಗ.

ಶ್ರೀ ರುದ್ರಮುನೇಶ್ವರ ಸಮುದಾಯ ಬವನ, ರಂಬಾಪುರಿ ಮಟ, ಬಾಳೆಹೊನ್ನೂರು‘ ಎಂದು ಮದುವೆಯ ಜಾಗದ ಹೆಸರನ್ನು ಬರೆದುಕೊಟ್ಟಿದ್ದೆ. ಆದರೆ ಅದರಲ್ಲಿ ತಪ್ಪುಗಳಿವೆ, ಚಿಕ್ಕ ‘ಬ’ಹಾಗು ‘ಟ’ ದ ಬದಲಾಗಿ ದೊಡ್ಡ ‘ಟ’ ಹಾಗು ದೊಡ್ಡ ‘ಬ’ ಬರೆಯಬೇಕು ಎಂದು ಪತ್ರಿಕೆಯನ್ನು ವಿನ್ಯಾಸಗೊಳಿಸುತ್ತಿದ್ದ ಹುಡುಗಿಯು ಹೇಳುತ್ತಿದ್ದರು. ಅದು ಅವರ ತಪ್ಪಲ್ಲ ಬಿಡಿ, ನಾವೆಲ್ಲ ಕಲಿಕೆಮನೆಗಳಲ್ಲಿ ಕಲಿತುಕೊಂಡು ಬಂದಿರುವುದೇ ಹೀಗೆ. ಆ ಹುಡುಗಿಯು ದೊಡ್ಡ ‘ಬ’ ಹಾಗು ದೊಡ್ಡ ‘ಟ’ ಬರೆಯದಿದ್ದರೆ ತಪ್ಪಾಗುತ್ತದೆ ಎಂದು ಹೇಳುವಾಗ ‘ಭ’ ಹಾಗು ‘ಠ’ ಎಂದು ಮಹಾಪ್ರಾಣಗಳನ್ನು ಉಲಿಯುತ್ತಿರಲಿಲ್ಲ, ಅದನ್ನು ನಾನು ಗುರುತಿಸಿ ತಿಳಿಸಿದೆ, ಆದರೂ ಮಹಾಪ್ರಾಣವನ್ನು ಬಿಟ್ಟು ಬರೆಯಲು ಆಕೆಯ ಮನಸ್ಸು ಕೇಳುತ್ತಿರಲಿಲ್ಲ. ಕೊನೆಗೂ ಗ್ರಾಹಕನಾದ ಕಾರಣದಿಂದ ನನ್ನ ಬಯಕೆಯಂತೆ ’ಹೊಸ ಬರಹ’ದಲ್ಲಿ ಕರೆಯೋಲೆ ಸಿದ್ದವಾಯಿತು.

ಸುಮಾರು ನೂರಯ್ವತ್ತು ಕರೆಯೋಲೆ ಮಾಡಿಸಿದೆ. ಕರೆಯೋಲೆಯಲ್ಲಿ ತಪ್ಪಾಗಿ ಅಚ್ಚಾಗಿದೆ ಎಂದು ಇನ್ನೂ ಎಶ್ಟು ಮಂದಿ ನನ್ನ ಬಳಿ ಮಾತಿಗೆ ಇಳಿಯುವವರೋ ಎಂಬ ಚಿಂತೆ ಒಮ್ಮೆ ನನ್ನಲ್ಲಿ ಮೂಡಿ ಮಾಯವಾಗಿತ್ತು. ಆದರೆ ಕರೆಯೋಲೆ ಹಂಚುತ್ತಾ ಹೊರಟ ನನಗೆ ಬೆರಗು ಕಾದಿತ್ತು, ಯಾರೊಬ್ಬರೂ ಕೂಡ ತಪ್ಪಾಗಿ ಅಚ್ಚಾಗಿದೆ ಎಂದು ಹೇಳಲಿಲ್ಲ! ನನ್ನ ಎದುರಿಗೇ ಹಲವರು ಸಲೀಸಾಗಿ ಓದಿಕೊಂಡು ಹೋದರು. ಒಂದಿಬ್ಬರು ಮಾತ್ರ ‘ಏನ್ ಸಾರ್, ಮಹಾಪ್ರಾಣಗಳನ್ನು ಬಿಟ್ಟು ‘ಆಡು ನುಡಿ’ಯಲ್ಲಿ ಕರೆಯೋಲೆ ಅಚ್ಚು ಹಾಕಿಸಿದ್ದೀರ’ ಎಂದರು. ಅವರೂ ಕೂಡ ಮಹಾಪ್ರಾಣಗಳನ್ನು ಏಕೆ ಬಿಟ್ಟಿದ್ದೀರಿ? ಎಂದು ಕೇಳಲಿಲ್ಲ. ಬದಲಿಗೆ ”ಆಡುನುಡಿ’ಯಲ್ಲಿ ಅಚ್ಚು ಹಾಕಿಸಿದ್ದೀರಾ?’ ಎಂದು ಕೇಳಿದರು. ‘ಹವ್ದು, ನುಡಿದಂತೆ ನಡೆ ಅನ್ನುವ ಹಾಗೆ ಉಲಿದಂತೆ ಬರೆದಿದ್ದೇನೆ.’ ಎಂದು ಅವರಿಗೆ ಮರುನುಡಿಯನ್ನಿತ್ತೆ.

ಪದಗಳಲ್ಲಿ ಮಹಾಪ್ರಾಣಗಳಿದ್ದರೂ, ಇಲ್ಲದಿದ್ದರೂ ನಮ್ಮ ಉಲಿಕೆಯಲ್ಲಿ ಯಾವುದೇ ಬೇರ‍್ಮೆ ಕಂಡುಬರಲಿಲ್ಲ.  ಮಹಾಪ್ರಾಣಗಳನ್ನು ಕಲಿತಿರುವ ಮಾತ್ರಕ್ಕೆ ಬರೆಯುವಾಗ ಅದನ್ನು ‘ಇಲ್ಲಿ ಬಳಸಬೇಕು, ಅಲ್ಲಿ ಬಳಸಬೇಕು’ ಎಂದು ನೆನಪಿನಲ್ಲಿ ಇಟ್ಟುಕೊಂಡು ಬರೆಯಬೇಕು. ಅದರ ಹೊರೆಯೇ ಇಲ್ಲದಿದ್ದರೆ ಬರೆಯಲೂ ಸುಲಬ ಓದಲೂ ಸುಲಬ ಎನಿಸುತ್ತದೆ. ನನ್ನ ಮದುವೆಯ ಕರೆಯೋಲೆಯಲ್ಲಿ ಮಹಾಪ್ರಾಣಗಳಿಲ್ಲದ ’ಹೊಸ ಬರಹ’ವನ್ನು ಬಳಸಿ ಈ ದಿಟವನ್ನು ಕಂಡುಕೊಂಡೆ.

(ಚಿತ್ರ: ಮಯ್ ಇನ್ಸ್ಪಾಯರ್‍ಡ್ ವೆಡ್ಡಿಂಗ್)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. *ರಮ್ಬಾಪುರಿ 🙂

ಅನಿಸಿಕೆ ಬರೆಯಿರಿ: