ನೆನಪಿನ ನೆನಪಿನ ಹಿಂದಿನ ಅರಿಮೆ!

-ಬಾಬು ಅಜಯ್

Memory

ನಾನು ಆಪೀಸಿಗೆ ಹೊರಡುವಾಗ ನನ್ನ ಅಲೆಯುಲಿ (mobile) ಮರೆಯಬಾರದೆಂದು ಹೇಳು, ನನ್ನ ಲ್ಯಾಪ್ಟಾಪ್ ಚಾರ್‍ಜರ್‍ ತೆಗೆದುಕೊಂಡು ಹೋಗಬೇಕೆಂದು ನೆನಪಿಸು, ಹೀಗೆ ಹಲವಾರು ಸನ್ನಿವೇಶಗಳನ್ನು ನಮ್ಮ ದಿನದ ಬದುಕಿನಲ್ಲಿ ನಾವು ಗೆಳೆಯರಿಗೆ, ಒಡತಿಗೆ, ಅಪ್ಪ ಇಲ್ಲವೇ ಅಮ್ಮನಿಗೆ ಹೇಳುತ್ತಿರುತ್ತೇವೆ.

ನಮ್ಮ ಮಿದುಳು ಈ ತರಹದ ನೆನಪುಗಳನ್ನು ನೆನಪಿನಲ್ಲಿಡುವಾಗ ಹೇಗೆ ಸ್ಪಂದಿಸುತ್ತದೆ ಎಂಬುದು ಜಗತ್ತಿನ ವಿಗ್ನಾನಿಗಳಿಗೆ ರಹಸ್ಯವಾಗಿಯೇ ಉಳಿದಿದೆ. ಇಂತಹ ನೆನಪುಗಳನ್ನು ’ಎದುರು ನೋಡುವಿಕೆಯ ನೆನಪುಗಳು’ (prospective memory) ಎಂದು ಕರೆಯುತ್ತಾರೆ. ಕೆಲವು ನಿರ್‍ದಿಶ್ಟ ಸಮಯದಲ್ಲಿ ನಮ್ಮ ಮಿದುಳು ನಡೆದುಕೊಳ್ಳುವ ಬಗ್ಗೆ ಹೊಸ ಸಂಶೋದನೆಗಳು ನಡೆಯುತ್ತಿವೆ. ಎತ್ತುಗೆಗೆ ಮನೆಯಿಂದ ಹೊರಡುವಾಗ ಮನೆಯ ಬೀಗ ತೆಗೆದುಕೊಂಡು ಹೋಗುವುದು, ಊಟಕ್ಕೆ ಮುಂಚೆ ಮಾತ್ರೆ ತೆಗೆದುಕೊಳ್ಳುವುದು ಇತ್ಯಾದಿ .

ಈ ಕುರಿತು ಸಂತ ಲೂಯಿಸ್ನಲ್ಲಿರುವ ವಾಶಿಂಗ್ಟನ್ ಯೂನಿವರ್‍ಸಿಟಿಯಲ್ಲಿ ಕೆಲವು ಸಂಶೋದಕರು ಸಂಶೋದನೆಯನ್ನು ಕಯ್ಗೊಂಡಿದ್ದಾರೆ. ಈ ಸಂಶೋದಕರು ಕೆಲವು ಮಂದಿಯನ್ನು ಪಂಕ್ಶನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (fMRI) ನಲ್ಲಿ ಕೂರಿಸಿ ಸುಳ್ಳು ಹೇಳುವಂತೆ ಹೇಳಿದರು. ಪರದೆಯ ಮೇಲೆ ಹೊಮ್ಮುವ ಪದಗಳನ್ನು ಎರಡು ಬಗೆಯ ಬಟನಗಳನ್ನು ಒತ್ತುವ ಮೂಲಕ ವಿಂಗಡಿಸಬೇಕು ಎಂದು ಹೇಳಿದರು. ಆದರೆ ಕೆಲವು ನಿರ್‍ದಿಶ್ಟ ಪದಗಳು ಇಲ್ಲವೇ ಉಚ್ಚಾರಗಳು (syllable) ಬಂದಲ್ಲಿ ಮೂರನೆಯ ಬಟನ್ ಒತ್ತಬೇಕೆಂದು ನೆನಪಿಡಬೇಕಿತ್ತು .

ಇದರಲ್ಲಿ ಪಾಲ್ಗೊಂಡಿದ್ದವರು ಏನನ್ನು ನೆನಪಿಡಲು ಪ್ರಯತ್ನಿಸುತ್ತಿದ್ದರೋ ಅದರ ಮೇಲೆ ಅವರ ಮಿದುಳು ಬೇರೆ ರೀತಿಯಲ್ಲಿ ಸ್ಪಂದಿಸುತ್ತಿದ್ದವು. ಇವರುಗಳು ಗುರುತಿಸಬೇಕಾದ ಪದಗಳು ಮಿದುಳಿನ ಒಂದು ನಡೆಯಾದರೆ, ನೆನಪಿಡಬೇಕಿದ್ದ ಪದಗಳು ಮಿದುಳಿನ ಇನ್ನೊಂದು ನಡೆಯಾಗಿತ್ತು .ಇಲ್ಲಿ ಪರದೆಯ ಮೇಲೆ ಹೊಮ್ಮುತ್ತಿದ್ದ ಪದಗಳು ಉಚ್ಚಾರಣೆಯ ಪದಗಳಾಗಿದ್ದಲ್ಲಿ, ಪಾಲ್ಗೊಂಡವರು ಮೂರನೆಯ ಬಟನ್ ಒತ್ತಬೇಕೆಂದು ನೆನಪಿಡಬೇಕಿತ್ತು . ಇದನ್ನು ಮಿದುಳಿನ “ಮೇಲಿನಿಂದ ಕೆಳಗಿನ” (Top-Down) ನಡೆ ಎಂದು ಹೇಳುತ್ತಾರೆ .

ಇದರ ಎದುರಾಗಿ ಇಡಿ ಪದ, ಎತ್ತುಗೆಗೆ “ಟೇಬಲ್, ಬಾಟಲಿ” ಬಂದಾಗ ಅದರ ಬಗ್ಗೆ ಅಶ್ಟೊಂದು ಗಮನ ಕೊಡಬೇಕಿರಲಿಲ್ಲ. ಇಂತ ಸಮಯದಲ್ಲಿ ಮಿದುಳಿನ ಬೇರೆ ಬಾಗಗಳು ಸ್ಪಂದಿಸತೊಡಗಿದವು. ಬಾಗವಹಿಸಿದ್ದವರು ಈಗಾಗಲೇ ಬೇರೆ ಉಚ್ಚಾರಣೆಯ ಪದಗಳಿಗೆ ಹೆಚ್ಚು ಗಮನ ಕೊಟ್ಟಿದ್ದರಿಂದ, “ಟೇಬಲ್” ಎಂಬ ಇಡಿ ಪದ ನೋಡಿದಾಗ ಅವರಿಗೆ ನೆನಪಗಳು ಶುರುವಾಗತೊಡಗಿದವು. ಎತ್ತುಗೆಗೆ ಮನೆ ಬಾಗಿಲ ಬಳಿ ಏನಾದರೂ ವಸ್ತುಗಳನ್ನು ಇಟ್ಟಾಗ , ನಾವು ಮನೆಯಿಂದ ಹೊರ ನಡೆದಾಗ ಇಲ್ಲವೇ ಒಳ ನಡೆದಾಗ ಆ ವಸ್ತುಗಳು ನಮ್ಮ ಗಮನಕ್ಕೆ ಬಂದೆ ಬರುತ್ತವೆ .

ಇದು ನಮ್ಮ ಮಿದುಳು ನೆನಪುಗಳನ್ನ ನೆನಪಿಡುವಾಗ ಹೇಗೆ ಎರಡು ಬಗೆಯ ನರ ಹಾದಿಗಳನ್ನು (neural routes) ಪಾಲಿಸುತ್ತದೆಂದು ತೋರಿಸುತ್ತೆ. ಸಂಶೋದಕರು ಇದನ್ನು ಮಿದುಳಿಗೆ ಸಾಕಶ್ಟು ಹೊರೆಯಾಗದಂತೆ ನೋಡಿಕೊಳ್ಳುವ ಮಿದುಳಿನ ಚಳಕ ಎಂದು ಹೇಳುತ್ತಾರೆ.

ಚಿಕ್ಕದಾಗಿ ಹೇಳಬೇಕೆಂದರೆ ನೀವು ಮನೆಯಿಂದ ಹೊರ ನಡೆಯುವಾಗ ಯಾವುದಾದರು ವಸ್ತುವನ್ನು ಮರೆಯಬಾರದು ಎಂದು ಕೊಂಡಿದ್ದಲ್ಲಿ ಅದನ್ನು ಬಾಗಿಲ ಬಳಿ ಇಡಿ ಎಂದು ವಿಗ್ನಾನ ಹೇಳುತ್ತದೆ.

(ಮಾಹಿತಿ ಸೆಲೆ : popsciಚಿತ್ರ : superscholar)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: